ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನಾ ಸಭೆ

ಮಂಡ್ಯ : ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಜನಾಂದೋಲನ ಮಾದರಿಯಲ್ಲೇ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟವೂ ಜನಾಂದೋಲನವಾಗಬೇಕು ಎಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಶನಿವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಕರೆ ನೀಡಲಾಯಿತು.
‘ಸಂವಿಧಾನ ರಕ್ಷಿಸಿ ವಕ್ಫ್ ಬೋರ್ಡ್ ಉಳಿಸಿ’ ಘೋಷವಾಕ್ಯದಡಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಜಿಲ್ಲಾ ಘಟಕವು ನಗರದ ಮೈಷುಗರ್ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ರಣಕಹಳೆ ಮೊಳಗಿತು.
ವಕ್ಫ್ ಆಸ್ತಿ ಮಾತ್ರವಲ್ಲ, ಇಡೀ ಮುಸ್ಲಿಂ ಸಮುದಾಯದ ಆಸ್ತಿಯನ್ನು ಕೇಂದ್ರ ಸರಕಾರ ವಶಕ್ಕೆ ತೆಗೆದುಕೊಂಡು ಆ ಸಮುದಾಯವನ್ನು ಬೀದಿಗೆ ದೂಡುವುದು ವಕ್ಫ್ ತಿದ್ದುಪಡಿ ಕಾಯ್ದೆಯ ಹಿಂದಿರುವ ಹುನ್ನಾರವಾಗಿದೆ. ಆದ್ದರಿಂದ ಇದರ ವಿರುದ್ಧ ಸಮರೋಪಾಯದ ಹೋರಾಟ ರೂಪಿಸಬೇಕು ಎಂಬುದಾಗಿ ಭಾಷಣ ಮಾಡಿದ ಅತಿಥಿಗಣ್ಯರು ನೆರೆದಿದ್ದ ಸಾವಿರಾರು ಜನತೆಗೆ ಕರೆಕೊಟ್ಟರು.
ಜಾಗೃತ ಕರ್ನಾಟಕ ಸಂಘಟನೆಯ ಮುಖಂಡರ ಡಾ.ವಾಸು ಮಾತನಾಡಿ, ಇದು ಕೇವಲ ವಕ್ಫ್ ಕಾಯ್ದೆಯ ತಿದ್ದುಪಡಿಯ ವಿರುದ್ಧದ ಹೋರಾಟವಲ್ಲ, ಸಂವಿಧಾನವನ್ನು ರಕ್ಷಿಸುವ ಹೋರಾಟವೂ ಆಗಿದೆ. ತಾರತಮ್ಯ ನೀತಿ ಈ ದೇಶದಲ್ಲಿ ನಡೆಯುವುದಿಲ್ಲ ಎಂಬುದನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಎಚ್ಚರಿಸಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಸಂವಿಧಾನದಡಿಯಲ್ಲಿ ಇತರರಂತೆ ಬದುಕುವ ಹಕ್ಕು ಈ ದೇಶದ 20 ಕೋಟಿ ಮುಸ್ಲಿಮರಿಗೂ ಇದೆ. ದೇಶವನ್ನು ಕಟ್ಟುವ ಕೆಲಸದಲ್ಲಿ ಮುಸಲ್ಮಾನರ ಪಾತ್ರವೂ ದೊಡ್ಡದಿದೆ. ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಇತರ ಬಹುಸಂಖ್ಯಾತರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತು ಹೋರಾಟಗಾರ್ತಿ ನಝ್ಮಾ ನಜೀರ್ ಮಾತನಾಡಿದರು. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಜಿಲ್ಲಾ ಸಂಚಾಲಕ ಹಾಮುದುಲ್ ಹಸನ್, ರಿಝ್ವಾನ್ ಅಹ್ಮದ್, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಝಬೀವುಲ್ಲಾ, ಮುಡಾ ಅಧ್ಯಕ್ಷ ನಯೀಂ ಖಾನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಕ್ತಾರ್ ಅಹ್ಮದ್, ಮುಹಮ್ಮದ್ ತಾಹೇರ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಜಿ.ಸಂತೋಷ್, ಪ್ರಕಾಶ್, ಮಹಿಳಾ ಮುನ್ನಡೆಯ ಪೂರ್ಣಿಮಾ ಸೇರಿದಂತೆ ಇತರ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.







