ಮಂಡ್ಯ | ಜಯಕುಮಾರ್ ಸಾವು ಪ್ರಕರಣ: ಪೊಲೀಸ್ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಧರಣಿ

ಮಂಡ್ಯ : ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮಹಾ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಧರಣಿ ಆರಂಭಿಸಿದ ಒಕ್ಕೂಟದ ಕಾರ್ಯಕರ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಡಿಎಸ್ಪಿ ಚಲುವರಾಜು, ಸಿಪಿಐ ಆನಂದೇಗೌಡ, ಪಿಎಸ್ಸೈ ಸುಬ್ಬಯ್ಯ, ದಫೇದಾರ ವೈರಮುಡಿಗೌಡ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಜಯಕುಮಾರ್ ಮೃತದೇಹ ಹುಲ್ಲಿನ ಬಣವೆಯಲ್ಲಿ ಬೆಂದ ರೀತಿಯಲ್ಲಿ ಪತ್ತೆಯಾಗಿದೆ. ತನ್ನ ಪತಿಯನ್ನು ಗ್ರಾಮದ ಅನಿಲ್‍ಕುಮಾರ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಆದರೆ, ಅದು ಆತ್ಮಹತ್ಯೆ ಎಂದು ಪೊಲೀಸರು ಹೊರಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು. ಮೈಸೂರು ವಲಯದ ಡಿಐಜಿ ಬೋರಲಿಂಗಯ್ಯ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.
ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಧರಣಿಗೆ ಬೆಂಬಲ ನೀಡಿದರು. ಕರ್ನಾಟಕ ಸಮಸಮಾಜ ಸಂಘಟನೆಯ ಅಧ್ಯಕ್ಷ ಎಚ್.ಎನ್. ನರಸಿಂಹಮೂರ್ತಿ, ದಸಂಸ ಮುಖಂಡರಾದ ಎಂ.ವಿ.ಕೃಷ್ಣ, ಕಣಿವೆ ಯೋಗೇಶ್, ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿ ಒಕ್ಕಲಿಗ, ವಿದ್ಯಾಸಾಗರ, ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.