ಕೆಆರ್‌ಎಸ್ ನಿಂದ ನದಿಗೆ ನೀರು ಬಿಡುಗಡೆ: ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಮಂಡ್ಯ : ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್)ದಿಂದ ಸುಮಾರು 30ರಿಂದ 50 ಸಾವಿರ ಕ್ಯೂಸೆಕ್ ಹರಿಸಲಾಗುತ್ತಿದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
124.80 ಅಡಿ ಅಣೆಕಟ್ಟೆಯಲ್ಲಿ ಪ್ರಸ್ತುತ 120.90 ಅಡಿ ವರೆಗೆ ನೀರನ್ನು ಇಟ್ಟುಕೊಳ್ಳಲಾಗಿದೆ. 20,315 ಕ್ಯೂಸೆಕ್ ಒಳಹರಿವಿದ್ದು, 18,300 ಕ್ಯೂಸೆಕ್ ನೀರನ್ನು ನದಿ ಮತ್ತು ನಾಲೆಗಳಿಗೆ ಹರಿಸಲಾಗುತ್ತಿದೆ. ಒಳಹರಿವು ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಕ್ಯೂಸೆಕ್‌ವರೆಗೆ ನದಿಗೆ ಹರಿಸಲು ತೀರ್ಮಾನಿಸಲಾಗಿದೆ.
ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕೃಷ್ಣರಾಜಸಾಗರ ಕಾರ್ಯಪಾಲಕ ಅಭಿಯಂತರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಷೇಧಾಜ್ಞೆ: ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿ ತೀರದ ಪ್ರದೇಶಗಳಾದ ಕಾರೇಕುರ, ರಂಗನತಿಟ್ಟು, ಶ್ರೀರಂಗಪಟ್ಟಣ ಟೌನಿನ ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಸ್ಥಾನ, ಸಂಗಮ್, ಘೋಸಾಯ್ ಘಾಟ್, ಪಶ್ಚಿಮವಾಹಿನಿ ಸ್ಥಳಗಳಲ್ಲಿ ಸಾರ್ವಜನಿಕರು ನದಿ ಬಳಿಗೆ ಹೋಗದಂತೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಪುರುಷೋತ್ತಮ ಸತ್ತೀಗೇರಿ ಆದೇಶ ಹೊರಡಿಸಿದ್ದಾರೆ.







