ಪ್ರಮೋದ್ ಮುತಾಲಿಕ್ ಮದ್ದೂರು ಪ್ರವೇಶಕ್ಕೆ ನಿರ್ಬಂಧ

ಪ್ರಮೋದ್ ಮುತಾಲಿಕ್
ಮಂಡ್ಯ, ಸೆ.19 : ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮದ್ದೂರು ಪಟ್ಟಣಕ್ಕೆ ಆಗಮಿಸುತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ಪೊಲೀಸರು ನಿರ್ಬಂಧ ವಿಧಿಸಿದರು.
ಬೆಂಗಳೂರಿನಿಂದ ಬೆಂಬಲಿಗರ ಜತೆ ಕಾರಿನಲ್ಲಿ ಬರುತ್ತಿದ್ದ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿಭಾಗ ನಿಡಘಟ್ಟ ಗ್ರಾಮದ ಬಳಿ ಪೊಲೀಸರು ತಡೆದು, ಜಿಲ್ಲಾಡಳಿತ ವಿಧಿಸಿರುವ ಪ್ರವೇಶ ನಿರ್ಬಂಧದ ಆದೇಶದ ಪ್ರತಿ ನೀಡಿ ವಾಪಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮುತಾಲಿಕ್ ಬೆಂಬಲಿಗರು, ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಅವರನ್ನು ಸಮಾಧಾನಿಸಿ ಆದೇಶವನ್ನು ಪಾಲಿಸುವಂತೆ ಸೂಚಿಸಿದರು.
ಕೋಮು ಪ್ರಚೋದನೆ ಭಾಷಣ ಮಾಡಿದ ಆರೋಪದ ಮೇಲೆ ಮುತಾಲಿಕ್ ವಿರುದ್ಧ ರಾಜ್ಯದ ವಿವಿಧೆಡೆ 30 ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ಧಕ್ಕೆಯಾಗುವುದನ್ನು ತಪ್ಪಿಸುವ ಕಾರಣಕ್ಕೆ ಬಿಎನ್ಎಸ್ ಕಲಂ 163 ಅಡಿ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ತಾನು ಪ್ರಚೋದನೆಗೆ ಬರುತ್ತಿರಲಿಲ್ಲ. ಘಟನೆಯಲ್ಲಿ ಆರೋಪಿಗಳಾಗಿರುವ ಹಿಂದೂ ವ್ಯಕ್ತಿಗಳಿಗೆ ಬೇಲ್ ಕೊಡಿಸಲು ವಕೀಲರ ಜತೆ ಬಂದಿದ್ದೆ. ಆದರೆ, ಜಿಲ್ಲಾಡಳಿತ ಮಂಡ್ಯ ಜಿಲ್ಲೆ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿದೆ ಎಂದು ಮುತಾಲಿಕ್ ಕಿಡಿಕಾರಿದರು.
ನನ್ನ ವಿರುದ್ಧ ಇರುವ ಪ್ರಕರಣಗಳೆಲ್ಲಾ ಖುಲಾಸೆ ಆಗಿವೆ. ಆದರೂ, 30 ಪ್ರಕರಣಗಳು ಇವೆ ಎಂಬುದು ಸುಳ್ಳು. ಜಿಲ್ಲಾಡಳಿತ ಮತ್ತು ಪೊಲೀಸರನ್ನು ಬಳಸಿಕೊಂಡು ಕಾಂಗ್ರೆಸ್ ಸರಕಾರ ನನ್ನ ಪ್ರವೇಶಕ್ಕೆ ನಿರ್ಬಂಧ ಹೇರಿದೆ ಎಂದು ಅವರು ಆರೋಪಿಸಿದರು.







