"ಉದ್ದೇಶ ಪೂರ್ವಕ ಅಲ್ಲ, ಆಡು ಭಾಷೆಯ ಮಾತು": ಮುಸ್ಲಿಂ ವಿರೋಧಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ

ಮಂಡ್ಯ: ಸರಕಾರಿ ಭೂಮಿಯನ್ನು ಸಾಬರ(ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹ ಅಧಿಕಾರಿಯನ್ನು ನೇಣಿಗೆ ಹಾಕುವುದು ಗ್ಯಾರೆಂಟಿ ಎಂಬ ಹೇಳಿಕೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಯಾವುದೇ ಸಮುದಾಯದ, ಜಾತಿ ವಿಚಾರವನ್ನು ಇಟ್ಟುಕೊಂಡು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ" ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ.
ಕಾಮಗಾರಿ ಚಾಲನೆ ವೇಳೆ ತರೀಪುರ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಾಗ ಆಡು ಭಾಷೆಯಲ್ಲಿ ಮಾತಾಡಿರುವೆ. ಅಧಿಕಾರಿಗೆ ಬೆದರಿಕೆಯನ್ನೂ ಹಾಕಿಲ್ಲ. ಇನ್ನೊಂದು ಧರ್ಮ ಮತ್ತು ಜಾತಿಯ ಬಗ್ಗೆ ಎಂದೂ ಮಾತಾಡಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಮೊದಲಿಂದಲೂ ಮುಸ್ಲಿಮರೊಂದಿಗೆ ಚೆನ್ನಾಗಿದ್ದೇವೆ. ಅವರ ಎಲ್ಲ ಅಭಿವೃದ್ಧಿ ಕೆಲಸಗಳಿಗೂ ಒತ್ತಾಸೆಯಾಗಿದ್ದೇನೆ. ನನ್ನ 40 ವರ್ಷದ ರಾಜಕಾರಣದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಒಂದೇ ಒಂದು ಕೋಮುಗಲಭೆ ಅಥವಾ ಜಾತಿ ಸಂಘರ್ಷ ಆಗಿಲ್ಲ. ಜನರ ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇವೆ. ಸಂವಿಧಾನ ಬದ್ಧವಾಗಿ ನಮ್ಮ ಕೆಲಸ ಮುಂದುವರಿಯಲಿದೆ. ಯಾರಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶ ಇಲ್ಲ ಎಂದು ಎಂದು ಅವರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ಕಸಬಾ ಭಾಗದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರೂ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದಾರೆ. ಫಾರಂ 53ರಡಿ ಅರ್ಜಿ ಹಾಕಿರುವ ಹಲವರಿಗೆ ಶಾಸಕರಾಗಿದ್ದ ನನ್ನ ತಾಯಿ ಜಾತಿಬೇಧವಿಲ್ಲದೆ ಜಮೀನು ಹಕ್ಕು ನೀಡಿರುವ ದಾಖಲೆಗಳಿವೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಹೊರಗಿನ ಕೆಲವು ಪ್ರಭಾವಿ ಮುಸ್ಲಿಮರು ಸದರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಗ್ರಾಮೀಣ ಭಾಗದ ರೈತರ ಈ ಭೂಮಿ ಪ್ರಭಾವಿಗಳ ವಶವಾಗಬಾರದು. ಯಾರಿಗೆ ಹಕ್ಕಿದೆ ಅವರದಾಗಬೇಕೆಂಬುದು ನನ್ನ ಆತ್ಮಸಾಕ್ಷಿಯ ತೀರ್ಮಾನ. ಸಹಜವಾಗಿ ಬಂದ ಮಾತಾಗಿದೆ. ದಯಮಾಡಿ ಎಲ್ಲ ಸಮುದಾಯದವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.