ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣ : ತಾಯಿ ಆತ್ಮಹತ್ಯೆ ಬೆನ್ನಲ್ಲೇ ಪುತ್ರನೂ ಆತ್ಮಹತ್ಯೆ

ಪ್ರೇಮಾ /ಕೆ.ಎ.ರಂಜಿತ್
ಮಂಡ್ಯ/ಮಳವಳ್ಳಿ: ಮೂರು ದಿನದ ಹಿಂದೆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಪ್ರೇಮಾ ಅವರ ಪುತ್ರನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕೊನ್ನಾಪುರ ಗ್ರಾಮದ ಅಂದಾನಯ್ಯ ಪ್ರೇಮಾ ದಂಪತಿ ಪುತ್ರ ಕೆ.ಎ.ರಂಜಿತ್(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಮೃತದೇಹ ಹಲಗೂರು ಕೆರೆಯಲ್ಲಿ ಶನಿವಾರ ಪತ್ತೆಯಾಗಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಕಂತುಗಳನ್ನು ಪಾವತಿಸಿಲ್ಲ ಎಂದು ಮೈಕ್ರೋ ಫೈನಾನ್ಸ್ ಕಂಪನಿಯಾದ ಉಜ್ಜೀವನ್ ಬ್ಯಾಂಕ್ನವರು ಕೋರ್ಟ್ ಆದೇಶದಂತೆ ಪ್ರೇಮಾ ಅವರ ಮನೆಯನ್ನು ಜಪ್ತಿ ಮಾಡಿದ್ದರು. ಇದರಿಂದ ಮನನೊಂದ ಪ್ರೇಮಾ ಜ.27ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದ ಪುತ್ರರ ರಂಜಿತ್ ಅಂದಿನಿಂದಲೂ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದರೂ ಸಿಗಲಿಲ್ಲವಾದ್ದರಿಂದ ತಾಯಿ ಪ್ರೇಮಾ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಶನಿವಾರ ಕೆರೆಯಲ್ಲಿ ರಂಜಿತ್ ಮೃತದೇಹ ಪತ್ತೆಯಾಗಿದ್ದು, ತಾಯಿಯ ಸಾವಿನ ನೋವಿನಿಂದಾಗಿ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.





