ಗಣೇಶನ ಮೂರ್ತಿ ವಿಸರ್ಜನೆ ವೇಳೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಇಬ್ಬರು ಮೃತ್ಯು

ಮಂಡ್ಯ: ರಾಜ್ಯದಲ್ಲಿ ಚೌತಿ ಹಬ್ಬದ ಗಣೇಶನ ಮೂರ್ತಿ ವಿಸರ್ಜನೆಯ ಸಂಭ್ರಮಾಚರಣೆ ವೇಳೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕುಸಿದು ಬಿದ್ದು ಇಬ್ಬರು ಮೃತಪಟ್ಟ ಘಟನೆ ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.
ಮಂಡ್ಯ:
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಹಾಡಿಗೆ ಕುಣಿಯುತ್ತಿದ್ದ ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ರವಿವಾರ ನಡೆದಿದೆ.
ಮಂಜುನಾಥ್ ಮೃತಪಟ್ಟವರು.
ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೊತ್ತನಪುರ ಗ್ರಾಮದಲ್ಲಿ ರವಿವಾರ ಗಣೇಶ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರು ಡಿಜೆ ಹಾಡು ಹಾಕಿ ಕುಣಿಯುತ್ತಿದ್ದರು. ಇದರಲ್ಲಿ ಭಾಗಿಯಾಗಿದ್ದ ಮಂಜುನಾಥ್ ಭರ್ಜರಿಯಾಗಿ ಕುಣಿಯುತ್ತಿದ್ದರು. ಆದರೆ ಹಠಾತ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರ ಕೊನೆಯ ಕ್ಷಣದ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ.
ಚಿಕ್ಕಬಳ್ಳಾಪುರ
ಇದೇರೀತಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ವ್ಯಕ್ತಿಯೋರ್ವ ಹಠಾತ್ತಾಗಿ ಕುಸಿದುಬಿದ್ದ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಲಕ್ಷ್ಮಿಪತಿ (40) ಎಂದು ಗುರುತಿಸಲಾಗಿದೆ.
ಬೋದಗೂರು ಗ್ರಾಮದಲ್ಲಿ ರವಿವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಗ್ರಾಮಸ್ಥರು ನೃತ್ಯ ಮಾಡುತ್ತಿದ್ದರು. ಲಕ್ಷ್ಮಿಪತಿ (40) ಕೂಡಾ ಡ್ಯಾನ್ಸ್ ಮಾಡುತ್ತಿದ್ದರು. ಸಂತಸದಿಂದ ಕುಣಿಯುತ್ತಿದ್ದ ಹಠಾತ್ ಆಗಿ ಕುಸಿದುಬಿದ್ದ ಮೃತಪಟ್ಟರೆನ್ನಲಾಗಿದೆ. ಅವರ ಸಾವಿಗೆ ಹೃದಯಾಘಾತ ಎಂದು ತಿಳಿದುಬಂದಿದೆ. ಲಕ್ಷ್ಮಿಪತಿಯ ಅಂತಿಮ ಕ್ಷಣಗಳ ವೀಡಿಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೃಷಿಕರಾಗಿದ್ದ ಲಕ್ಷ್ಮಿಪತಿ ಪತ್ನಿ,ಇಬ್ಬರು ಮಕ್ಕಳನ್ನು ಅಗಲಿದ್ದಾರೆ.







