ಮಾದೇಗೌಡ, ಅಂಬರೀಶ್, ಇತರೆ ನಾಯಕರ ವಿರುದ್ದ ಅವಾಚ್ಯ ಶಬ್ದ ಬಳಸಿಲ್ಲ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸ್ಪಷ್ಟನೆ

ಎಲ್.ಆರ್.ಶಿವರಾಮೇಗೌಡ
ಮಂಡ್ಯ: ಮಾಜಿ ಸಂಸದರಾದ ಜಿ.ಮಾದೇಗೌಡ, ಅಂಬರೀಶ್, ಇತರೆ ರಾಜಕೀಯ ನಾಯಕರ ವಿರುದ್ಧ ತಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.
ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಡಿಯೋದಲ್ಲಿ ಇರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಅದರಲ್ಲಿ ಬಹುತೇಕ ಮಾತುಗಳನ್ನು ನಾನು ಮಾತನಾಡಿಯೇ ಇಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
'ಜ.11ರಂದು ಕದಬಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತ ರಂಗ ಎಂಬಾತ ನನಗೆ ದೂರವಾಣಿ ಕರೆಮಾಡಿ ಪ್ರಶ್ನಿಸಿದ್ದ. ಆತನ ಜತೆ 2 ನಿಮಿಷ 42 ಸೆಕೆಂಡ್ ಅಷ್ಟೆ ಮಾತನಾಡಿದ್ದೆ' ಎಂದು ಬಗ್ಗೆ ವಿವರಿಸಿದ್ದಾರೆ.
'ಆದರೆ, ಘಟನೆ ನಡೆದ 18 ದಿನಗಳ ನಂತರ ನನ್ನ ಅಡಿಯೋದಲ್ಲಿ ಇಲ್ಲಸಲ್ಲದ್ದನ್ನು ಸೇರಿಸಿ 2 ನಿಮಿಷ 42 ಸೆಕೆಂಡ್ ಆಡಿಯೋವನ್ನು 20 ನಿಮಿಷದ ಅಡಿಯೋ ಆಗಿ ಪರಿವರ್ತಿಸಿ, ತಮಗೆ ಬೇಕಾದ ರೀತಿಯಲ್ಲಿ ಪದಗಳನ್ನು ಸೇರಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಅಂಬರೀಶ್ ಅವರ ಬಗ್ಗೆ ಆಗಲಿ, ಜಿ.ಮಾದೇಗೌಡರ ಬಗ್ಗೆ ಆಗಲಿ ಅಥವಾ ಯಾವುದೇ ನಾಯಕರ ಬಗ್ಗೆ ಅವಾಚ್ಯ ಶಬ್ದ ಅಥವಾ ಅಸಭ್ಯ ಪದಗಳನ್ನು ನಾನು ಬಳಸಿಲ್ಲ' ಎಂದು ಅವರು ತಿಳಿಸಿದ್ದಾರೆ.
'ಈ ಹಿಂದೆಯು ಕೂಡ ನನ್ನ ಬಗ್ಗೆ ಪಿತೂರಿ ಮಾಡಿದ್ದರು. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯಲ್ಲದಿದ್ದರೂ ಅಂಬರೀಶ್ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.







