ಮಂಡ್ಯ | ಹನುಮ ಧ್ವಜ ತೆರವು ಖಂಡಿಸಿ ಪಾದಯಾತ್ರೆ: ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಹರಿದು ಆಕ್ರೋಶ
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ

ಮಂಡ್ಯ: ಹನುಮಧ್ವಜ ತೆರವು ಖಂಡಿಸಿ ಬಿಜೆಪಿ, ಜೆಡಿಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ಸುಮಾರು 10 ಕಿ.ಮೀ. ಉದ್ದದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಕೈಯಲ್ಲಿ ಹನುಮಧ್ವಜ, ಭಾಗವದ್ ಧ್ವಜ ಹಿಡಿದು ಉದ್ದಕ್ಕೂ ‘ಜೈ ಶ್ರೀರಾಂ, ಜೈ ಹನುಮಾನ್’ ಘೋಷಣೆ ಕೂಗಿದರು. ಶಾಸಕ ರವಿಕುಮಾರ್ ಗಾಣಿಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಾರಿಯುದ್ದಕ್ಕೂ ರಸ್ತೆಬದಿ ಹಾಕಲಾಗಿದ್ದ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹರಿದುಹಾಕಿ ಬೆಂಕಿ ಹಚ್ಚಿದರು. ತಕ್ಷಣ ಪೊಲೀಸರು ಫ್ಲೆಕ್ಸ್ ಗಳಿಗೆ ಹಾಕಿದ ಬೆಂಕಿಯನ್ನು ನೀರು ಹಾಕಿ ನಂದಿಸಿದರು.
ನಗರದ ಹೆದ್ದಾರಿಯಲ್ಲಿ ಅಳವಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಾಣಿಗ ಅವರಿದ್ದ ಫಲಪುಷ್ಪ ಪ್ರದರ್ಶನದ ಫ್ಲೆಕ್ಸ್ ಗಳನ್ನು ಕಿತ್ತುಹಾಕಿದರು.
ಮಹಡಿ ಮೇಲೆ ಅಳವಡಿಸಿದ್ದ ಶಾಸಕ ರವಿಕುಮಾರ್ ಗಾಣಿಗ ಅವರ ಪ್ಲೆಕ್ಸ್ ಗೆ ಹೊಡೆದ ಕಲ್ಲು ಪಾದಯಾತ್ರೆ ಮಾಡುತ್ತಿದ್ದ ವ್ಯಕ್ತಿಯ ತಲೆಗೆ ಬಿದ್ದು ತೀವ್ರ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಪರಿಣಾಮ ಸ್ವಲ್ಪಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಎಚ್ಚೆತ್ತುಕೊಂಡ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿದರು.
ಜೆಡಿಎಸ್ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಕೆ.ಸುರೇಶ್‌ಗೌಡ, ಪ್ರೀತಂಗೌಡ, ಬಿಜೆಪಿ ಮುಖಂಡರಾದ ಡಾ.ಇಂದಿರೇಶ್, ಚಂದಗಾಲು ಶಿವಣ್ಣ, ಮಳವಳ್ಳಿ ಅಶೋಕ್, ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ಸಾದೊಳಲು ಸ್ವಾಮಿ ಇತರ ಮುಖಂಡರು ಉಪಸ್ಥಿತರಿದ್ದರು.







