ಮಂಗಳೂರು ನಗರ ಪೊಲೀಸ್, ಮೇಕ್ ಎ ಚೇಂಜ್ ಫೌಂಡೇಶನ್‌ನ ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಚಾಲನೆ

ಮಂಗಳೂರು, ಡಿ.27: ನಶೆ ಮುಕ್ತ ಮಂಗಳೂರು ಅಭಿಯಾನದಲ್ಲಿ ಪೊಲೀಸರ ಜತೆಗೆ ಸಮಾಜದ ಸಹಭಾಗಿತ್ವದ ಅಗತ್ಯತೆಯ ಕುರಿತಂತೆ ವಿವಿಧ ಧರ್ಮಗುರುಗಳು ಸಮಾಜಕ್ಕೆ ಕರೆ ನೀಡುವ ಮೂಲಕ ಮಂಗಳೂರು ನಗರ ಪೊಲೀಸ್ ಮತ್ತು ಮೇಕ್ ಎ ಚೇಂಜ್ ಫೌಂಡೇಶನ್‌ನ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ನಶೆ ಮುಕ್ತ ಮಂಗಳೂರು’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ಮಠದ ಸ್ವಾಮೀಜಿ ಯುಗೇಶಾನಂದ ಸ್ವಾಮೀಜಿ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನ, ಎಸ್ಕೆಸ್ಸೆಸ್ಸೆಫ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮೊದಲಾದವರು ಭಾಗವಹಿಸಿ ಡ್ರಗ್ಸ್ ವಿರುದ್ಧದ ಅಭಿಯಾನದ ಮಹತ್ವವನ್ನು ಸಾರಿದರು.
ಯುಗೇಶಾನಂದ ಸ್ವಾಮೀಜಿ ಮಾತನಾಡಿ, ಅತಿಯಾದ ಸಂತೋಷಕ್ಕಾಗಿ ಕಿಕ್, ಸ್ವರ್ಗ ಸುಖದ ಬಯಕೆಯಲ್ಲಿ ಯುವ ಪೀಳಿಗೆ ಡ್ರಗ್ಸ್‌ನಂತಹ ಮಾದಕ ದ್ರವ್ಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಇಂತಹ ಕ್ಷಣಿಕ ಸುಖ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದರಿಂದ ಆರೋಗ್ಯಕ್ಕೆ ಹಿತಕರವಾದ ಜಿಮ್, ನೃತ್ಯ, ಸಂಗೀತದಂತಹ ಆರೋಗ್ಯಕಾರಿ ಸುಖ ಸಂತೋಷವನ್ನು ಯುವಕರು ಬೆಳೆಸಿಕೊಳ್ಳುವಲ್ಲಿ ಪ್ರೇರಣೆ ನೀಡಬೇಕಾಗಿದೆ ಎಂದರು.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಮಾತನಾಡಿ, ಮಂಗಳೂರು ಐಟಿ ನಗರವಾಗಿ ಅಭಿವೃದ್ಧಿ ಹೊಂದುವತ್ತ ದೊಡ್ಡ ದೊಡ್ಡ ಐಟಿ ಕಂಪನಿಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾದಕ ನಶೆಯ ಜತೆಗೆ ಇಲ್ಲಿನ ಧರ್ಮ, ಅಧಿಕಾರ, ಮೋಜು ಮಸ್ತಿಯ ನಶೆಗಳಿಂದಲೂ ಸಮಾಜವನ್ನು ಮುಕ್ತಗೊಳಿಸುವ ಜವಾಬ್ಧಾರಿ ನಮ್ಮ ಮೇಲಿದೆ. ಖಾಲಿಯಾಗಿರುವ ಹೃದಯಗಳಲ್ಲಿ ಆಧ್ಯಾತ್ಮಿಕತೆ, ದೇವರ ಬಗ್ಗೆ ಪ್ರೀತಿ ಹಾಗೂ ನಿಜ ಜೀವನದ ಅರ್ಥವನ್ನು ತುಂಬಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಬದಲಾವಣೆ ಎಂಬುದು ಇಂದಿನಿಂದಲೇ ಎಂಬ ದೃಢ ನಿರ್ಧಾರದೊಂದಿಗೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಮುಂದಾಗುವ ಮೂಲಕ ಕರಾವಳಿಯ ಹಿರಿಮೆಯನ್ನು ಮತ್ತೆ ಹಿಂಪಡೆಯಲು ನಾವು ಮುಂದಾಗಬೇಕು. ಎಲ್ಲಾ ಧರ್ಮಗಳು ಶಾಂತಿ, ಸಹಬಾಳ್ವೆ, ಸೌಹಾರ್ದತೆಯಿಂದ ಬದಕಲು ಕಲಿಸಿವೆ. ಮಾನವೀಯತೆ ನೆಲೆ ನಿಲ್ಲಬೇಕಾದರೆ ಅಸಹಿಷ್ಣುತೆ ಮೀರಿದ ಸಮಾಜ ನಮ್ಮದಾಗಬೇಕು ಎಂದು ಎಸ್ಕೆಸ್ಸೆಸ್ಸೆಫ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಕರೆ ನೀಡಿದರು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಮೇಕ್ ಎ ಚೇಂಜ್ ಫೌಂಡೇಶನ್‌ನ ಸಂಸ್ಥಾಪಕ ಸುಹೇಲ್ ಕಂದಕ್, ನಶೆ ಮುಕ್ತ ಮಂಗಳೂರು ಅಭಿಯಾನದ ಪ್ರಕಯುಕ್ತ 102 ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತದ ಜತೆಗೆ ವಿವಿಧ ಧಾರ್ಮಿಕ ಮುಖಂಡರು, ತುಳುನಾಡಿನ ಪ್ರಸಿದ್ಧ ನಟರು, ಶಿಕ್ಷಣ ಸಂಸ್ಥೆಗಳು ಈ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ ಎಂದರು.
‘ಮಂಗಳೂರಿನ ಬಗ್ಗೆ ನನಗೆ ಸಾಕಷ್ಟು ಹೆಮ್ಮೆ ಇದೆ. ಮಹಾರಾಷ್ಟ್ರದಲ್ಲಿ ಡಿಐಜಿ ಆಗಿರುವ ನನ್ನ ಸ್ನೇಹಿತ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸುತ್ತಿರುವ ಹಲವು ಐಪಿಎಸ್ ಅಧಿಕಾರಿಗಳು ಇಲ್ಲಿ ಶಿಕ್ಷಣ ಪಡೆದವರು. ಹಲವು ಸಾಫ್ಟ್‌ವೇರ್ ಕಂಪನಿಗಳ ದಿಗ್ಗಜರು ಇಲ್ಲಿನವರು. ಇವೆಲ್ಲವನ್ನೂ ನೋಡಿದಾಗ ಮಂಗಳೂರಿನ ಬಗ್ಗೆ ಖುಷಿಯಾಗುತ್ತದೆ. ಆದರೆ ಡ್ರಗ್ಸ್ ಸೇವನೆ ಅಥವಾ ಮಾರಾಟದ ಪ್ರಕರಣಗಳಲ್ಲಿ ವೈದ್ಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪಿಯು ಮಕ್ಕಳು ಸೇರಿ ಇತರ ವಿದ್ಯಾರ್ಥಿಗಳು ಸಿಕ್ಕಿ ಬೀಳುತ್ತಿರುವುದನ್ನು ಕಂಡಾಗ ನೋವಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಡ್ರಗ್ಸ್ ಸೇವನೆ- ಮಾರಾಟ ಕೃತ್ಯಗಳಲ್ಲಿ ತೊಡಗದಿರುವ ನಿರ್ಧಾರ ಕೈಗೊಳ್ಳುವ ಜತೆಗೆ ಯುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ವಲಯದಲ್ಲಿ ಅಥವಾ ತಮ್ಮ ಆಸುಪಾಸಿನಲ್ಲಿ ಡ್ರಗ್ಸ್ ಸೇವನೆ, ಮಾರಾಟ ಕಂಡುಬಂದಾಗ ಅದರ ಬಗ್ಗೆ ದೂರು ನೀಡಬೇಕು. ಈ ಸಂಬಂಧ ಎಲ್ಲಾ ಶಾಲಾ ಕಾಲೇಜುಗಳಲ್ಲೂ ‘ಕ್ಯೂಆರ್ ಕೋಡ್’ ಅಳವಡಿಸಲಾಗಿದ್ದು, ವರದಿ ಮಾಡುವವರ ಮಾಹಿತಿ ಗೌಪ್ಯವಾಗಿರುತ್ತದೆ. ಈ ಕ್ಯೂಆರ್ ಕೋಡ್‌ಗಳಲ್ಲಿ ಬಂದ ಮಾಹಿತಿ ಆಧಾರದಲ್ಲಿಯೇದ ಕಳೆದ ಒಂದು ವಾರದಲ್ಲಿ 25 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರು ಕೂಡಾ ಕ್ಯೂಆರ್ ಕೋಡ್ ಮೂಲಕ ಮಾಹಿತಿ ನೀಡಬಹುದು ಎಂದು ಕಮಿಷನರ್ ಸುಧೀರ್ ರೆಡ್ಡಿ ಹೇಳಿದರು.
ಡ್ರಗ್ಸ್ ವಿರುದ್ಧ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಕಾರ್ಯದ ನಡೆಯುತ್ತಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ 10000 ವಿದ್ಯಾರ್ಥಿಗಳು ಡ್ರಗ್ಸ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಅವರಲ್ಲಿ 50 ಜನರಲ್ಲಿ ಡ್ರಗ್ಸ್ ಸೇವನೆ ಕಂಡು ಬಂದಿದೆ. ಪ್ರತಿ ಕಾಲೇಜುಗಳ ಪ್ರವೇಶ ದಾಖಲಾತಿ ಸಂದರ್ಭ ಮಕ್ಕಳನ್ನು ಡ್ರಗ್ಸ್ ಟೆಸ್ಟ್‌ಗೆ ಒಳಪಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರಕ್ರಿಯೆ ಮುಂದುವರಿಸಬೇಕು. ಪಾಸಿಟಿವ್ ಕಂಡು ಬಂದಾಗ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಜಮಾಅತ್‌ಗಳಲ್ಲಿ, ಮನೆಗಳಲ್ಲಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಕರೆ ನೀಡಿದರು.
ವೇದಿಕೆಯಲ್ಲಿ ಚಲನಚಿತ್ರ ನಟ ರೂಪೇಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಧರ್ಮ, ವೆನ್‌ಲಾಕ್ ಆಸ್ಪತ್ರೆಯ ಮುಖ್ಯಸ್ಥ ಡಾ. ಶಿವಪ್ರಕಾಶ್, ಎಸ್ಸೆಸ್ಸೆಫ್ ರಾಜ್ಯ ಅಧ್ಯಕ್ಷ ಹಫೀಝ್ ಸುಫಿಯಾನ್, ಯುವ ಉದ್ಯಮಿ ಡಿಯೋನ್ ಮೊಂತೆರೋ, ಡಿಸಿಪಿಗಳಾದ ಮಿಥುನ್, ರವಿಶಂಕರ್, ಸೈಕೋಲಾಜಿಸ್ಟ್ ಡಾ. ರುಕ್ಸಾನ, ಮುಖಂಡರಾದ ನಾಸಿರ್ ಲಕ್ಕೀ ಸ್ಟಾರ್, ಅನಿಲ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು.
‘ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದಾಗ ಅಲ್ಲಿ ಐಐಟಿ ಚೆನ್ನೈಯ ವಿದ್ಯಾರ್ಥಿ ನೈಜೀರಿಯಾ ಡ್ರಗ್ಸ್ ಪೆಡ್ಲರ್ ಜತೆ ಬಂಧಿಸಲ್ಪಟ್ಟಿದ್ದಾನೆ. ಆತನಿಗೆ ತಾನು ಅದರಿಂದ ಹೊರಬಂದು ಉತ್ತಮ ವ್ಯಕ್ತಿಯಾಗಿ ಹೊಸ ಜೀವನ ಮಾಡಬೇಕೆಂಬ ಬಯಕೆ ಇದೆ. ಆದರೆ ಡ್ರಗ್ಸ್ ಪೆಡ್ಲರ್ ಆಗಿ ಜೈಲು ಸೇರಿದರೆ ಕನಿಷ್ಟ 10 ವರ್ಷಗಳ ಶಿಕ್ಷೆ ಗ್ಯಾರಂಟಿ. ಆರು ತಿಂಗಳು ಜಾಮೀನು ಕೂಡಾ ಸಿಗದು. ಡ್ರಗ್ಸ್ ಪೂರೈಕೆ ಮತ್ತು ಮಾರಾಟಕ್ಕೆ ಸಂಬಂಧಿಸಿ 120 ಮಂದಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನೂ 50ಕ್ಕೂ ಮಂದಿ ಹೊರಗಿದ್ದು, ಅವರು ಕೂಡಾ ಜೈಲು ಸೇರಲಿದ್ದಾರೆ. ಹಿಂದೆಲ್ಲಾ ಪೊಲೀಸರ ಕೆಲವು ತಪ್ಪುಗಳಿಂದಾಗಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರುವವರು ಬೇಗನೆ ಹೊರ ಬರುತ್ತಿದ್ದರು. ಈಗ ಅದು ಸಾಧ್ಯವಿಲ್ಲ, ನಮ್ಮವರು ಜಾಗೃತರಾಗಿದ್ದು, ಜಾಮೀನು ಸಿಗುವುದಿಲ್ಲ. ಮಂಗಳೂರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಲ್ಲಿ ಶೇ. 80ರಷ್ಟು ಮಂದಿ ಡ್ರಗ್ಸ್ ಜತೆ ಸಂಬಂಧ ಹೊಂದಿರುವವರು. ತಮ್ಮ ಯೋಚನಾ ಶಕ್ತಿಯನ್ನು ಡ್ರಗ್ಸ್ ಮೂಲಕ ಕಳೆದುಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲು ಸೇರಿದವರು.’
ಸುಧೀರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು.
ಬಾಕ್ಸ್..
ಡ್ರಗ್ಸ್ ಸೇವನೆ ಮಾರಾಟ ಮಾಡದಂತೆ ಯುವ ಪೀಳಿಗೆಯನ್ನು ತಡೆಯುವುದು ಒಂದು ಕಡೆಯಾದರೆ, ಈಗಾಗಲೇ ಈ ಚಟಕ್ಕೆ ಬಲಿಯಾಗಿ ಹಿಂಸೆ ಅನುಭವಿಸುತ್ತಿರುವರಿಗಾಗಿ ದ.ಕ. ಜಿಲ್ಲೆಗೆ ಡಿ ಎಡಿಕ್ಷನ್ ಸೆಂಟರ್ ಬೇಕಿದೆ. ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ.
*ಅನೀಸ್ ಕೌಸರಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಕೆಸ್ಸೆಸ್ಸೆಫ್.







