ಮಂಜನಾಡಿ: ಭಾರೀ ಮಳೆಗೆ ಭಾಗಶಃ ಕೊಚ್ಚಿಹೋದ ರಸ್ತೆಗಳು; ಗುಡ್ಡ ಕುಸಿದು ಮನೆಗಳಿಗೆ ಹಾನಿ
ಅಪಾಯದಂಚಿನಲ್ಲಿ ಹಲವು ಮನೆಗಳು

ಉಳ್ಳಾಲ : ತಾಲೂಕಿನ ನರಿಂಗಾನ ಗ್ರಾಮದ ಕೊಲ್ಲರಕೋಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ತೀವ್ರ ಮಳೆಯ ಪರಿಣಾಮ ಸೇತುವೆಯ ಮೇಲೆ ನೀರು ಹರಿದು ಗಂಟೆಗಳ ಕಾಲ ಮೂರು ಅಡಿ ನೀರು ನಿಂತು ದ್ವೀಪದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಮಳೆ ಸುರಿದ ಪರಿಣಾಮವಾಗಿ ಹಲವೆಡೆ ಜಲಾವೃತವಾಗಿತ್ತು. ನದಿಯ ಹರಿವಿನಂತೆ ನೀರು ನುಗ್ಗಿದ್ದರಿಂದ ಭಯಭೀತರಾದ ಜನರು, ನಿದ್ದೆಯಿಂದ ಒಮ್ಮೆಲೇ ಎದ್ದು ಪರಸ್ಪರ ರಕ್ಷಣೆಗೆ ಧಾವಿಸಿದರು ಎಂದು ತಿಳಿದು ಬಂದಿದೆ.
ಬೆಳಗ್ಗೆ ನಾಲ್ಕು ಗಂಟೆಯಿಂದ ಸುಮಾರು ಏಳು ಗಂಟೆಯವರೆಗೆ ಹಲವೆಡೆ ಜಲಾವೃತವಾಗಿತ್ತು. ರಸ್ತೆಯ ಮೇಲೆ ಹರಿಯುತ್ತಿದ್ದ ನೀರನ್ನು ದಾಟಲು ಹಗ್ಗ ಬಳಸಬೇಕಾಯಿತು. ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಹಲವೆಡೆ ರಸ್ತೆ ಕುಸಿದಿದೆ. ಕೊಲ್ಲರಕೋಡಿ ಯಿಂದ ಮಂಜನಾಡಿಗೆ ಕೇವಲ ದ್ವಿಚಕ್ರ ವಾಹನ ಸಂಚರಿಸಬಹುದಾದಷ್ಟು ಮಾತ್ರ ರಸ್ತೆ ಉಳಿದಿದ್ದು, ರಸ್ತೆಗಳು ಭಾಗಶಃ ಕೊಚ್ಚಿ ಹೋದ್ದರಿಂದ ಜನರು ಅತ್ತಿತ್ತ ಹೋಗಲು ಪರದಾಡಬೇಕಾದ ಪರಿಸ್ಥಿತಿಯುಂಟಾಗಿದೆ.
ಮನೆ ನಿರ್ಮಾಣಕ್ಕೆ ತಂದಿದ್ದ ಮರಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಮನೆಯೊಂದರ ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರಿಗೆ ಗುಡ್ಡಜರಿದು ಹಾನಿಯಾಗಿದ್ದು, ಗುಡ್ಡ ಜರಿದ ಪರಿಣಾಮ ಹಲವು ಮನೆಗಳು ಅಪಾಯದಂಚಿನಲ್ಲಿವೆ.







