ಕೃಷಿ ಎಂಬ ಓಪನ್ ಯುನಿವರ್ಸಿಟಿ!

ಈ ಪುಸ್ತಕದ ನಿಜವಾದ ಆಕರ್ಷಣೆ ವಸಂತ ಕಜೆ ಮಂಡಿಸುವ ತರ್ಕಗಳಲ್ಲಿ ಇದೆ. ಅವರು ಒಂದು ವಿಚಾರವನ್ನು ನೇರವಾಗಿ ಹೇಳಲು ಹೊರಡುವುದಿಲ್ಲ . ಪದರ ಪದರವಾಗಿ ತೆರೆದು ಅದರ ಒಳಗಿರುವ ಅರ್ಥವನ್ನು ಓದುಗರ ಮುಂದೆ ಇಡುತ್ತಾರೆ. ಅದು ಅವರೇ ಸಹಜವಾಗಿ ಬೆಳೆಯಲು ಬಿಟ್ಟ ಕಾಡಿನಡಿಯ ತರಗೆಲೆಯ ರಾಶಿಗೆ ಕೈ ಹಾಕಿ ಮಣ್ಣಿನೊಳಡೆಯ ನಿಗೂಢ ಸಾವಯವ ಬಂಧವನ್ನು ತೆರೆ ತೆರೆಯಾಗಿ ತೆರೆದು ತೋರಿಸಿದಷ್ಟು ನೈಜವಾಗಿದೆ. ಆ ಅನುಭವದ ಸರಳವಾದ ಕ್ರಮವೇ ಈ ಬರಹಕ್ಕೆ ವಿಶಿಷ್ಟತೆಯನ್ನು ಕೊಡುತ್ತದೆ.
ಏಳು ವರ್ಷಗಳ ಹಿಂದೆ ಅಪರೂಪದ ಕೃಷಿ ಪುಸ್ತಕವೊಂದು ಕನ್ನಡಿಗರಕೈಗೆ ಬಂದಿತ್ತು. ಹೆಸರು - ‘ಐಟಿಯಿಂದ ಮೇಟಿಗೆ’. ಬರಹಗಾರ - ವಸಂತ ಕಜೆ. ಬಾಳೆಲೆ ಮತ್ತು ಅಡಿಕೆ ಹಾಳೆಯಲ್ಲಿ ಕಟ್ಟಿದ್ದ ಪುಸ್ತಕವನ್ನು ಬಿಡುಗಡೆಯ ದಿನ ನಾನೇ ಬಿಚ್ಚಿದ್ದೆ . ನಗರದಲ್ಲಿ ಕೈತುಂಬ ಸಂಬಳ ನೀಡುವ ಉದ್ಯೋಗವನ್ನು ಕಳಚಿ, ಮಣ್ಣಿನ ಕಡೆಗೆ ವಾಪಸಾದ ಆ ಯುವಕನ ಅಸಾಧಾರಣ ಸಾಧ್ಯತೆ, ನೆಲಾನುಭವವನ್ನು ಆ ಕೃತಿಯೊಳಗೆ ಕಂಡು ಬೆರಗು ಗೊಂಡಿದ್ದೆ .
ಆ ಅನುಭವಕ್ಕೆ ಕನ್ನಡ ಓದುಗರು ತಕ್ಷಣ ಸ್ಪಂದಿಸಿದರು. ಪತ್ರಿಕೆಗಳಲ್ಲಿ ಚರ್ಚೆಗಳು ನಡೆದವು, ಅವರಿಂದ ವಿಶೇಷ ಲೇಖನವನ್ನು ಬಯಸಿ ಪುರವಣಿಗಳು ಪ್ರಕಟಿಸಿದವು. ವೇದಿಕೆಗಳಲ್ಲಿ ಸಂವಾದಗಳು ನಡೆದವು, ಕೆಲವೆಡೆ ಅವರೇ ಸಂಪನ್ಮೂಲ ವ್ಯಕ್ತಿಗಳಾದರು.ಎರಡೇ ವರ್ಷಗಳಲ್ಲಿ ಅದು ಮೂರನೇ ಮುದ್ರಣವನ್ನು ಕಂಡಿತು.ನಗರ ಉದ್ಯೋಗದಲ್ಲಿ ನೆಲೆ ಕಂಡುಕೊಳ್ಳಲು ಹೊರಟಿದ್ದ ಅನೇಕ ಯುವಕರಿಗೆ ಆ ಪುಸ್ತಕ ತಿರುಗಿ ಮಣ್ಣು ಮುಟ್ಟಲು ಮುನ್ನುಡಿಯಾಯಿತು.
ಇದೀಗ ಆ ಅನುಭವದ ಮುಂದಿನ ಭಾಗವಾಗಿ ಕಜೆಯವರಿಂದ ‘ಕೃಷಿಯೆಂಬ ಓಪನ್ ಯುನಿವರ್ಸಿಟಿ’ ಪ್ರಕಟವಾಗಿದೆ. ಏಳು ವರ್ಷಗಳ ಕಾಲದ ನೇರ ಕೃಷಿ ಅನುಭವ ಮತ್ತು ಅದಕ್ಕಿಂತ ಪೂರ್ವದ ಕೃಷಿ ಅನುಭವ ಈ ಕೃತಿಯೊಳಗೆ ಹರಡಿಕೊಂಡಿದೆ.
ಕೃಷಿಯ ಬಗ್ಗೆ ಬರೆಯುವುದು ನನಗೂ ಸೇರಿ ಅನೇಕರಿಗೆ ಹೊಸ ವಿಷಯವಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲ ಈ ಕೃಷಿಯುಸಿರುನನ್ನ ಬರಹಗಳಲ್ಲೂ ಬರುತ್ತಿದೆ. ಅಂಕಣಗಳಲ್ಲಿ, ಉಪನ್ಯಾಸಗಳಲ್ಲಿ, ತರಗತಿಗಳಲ್ಲೂ ಅವಕಾಶ ಸಿಕ್ಕಾಗಲೆಲ್ಲ ನಾನು ಓದುಗರನ್ನೂ ಮಕ್ಕಳನ್ನೂ ಮಣ್ಣಿನ ಅನುಭವದ ಕಡೆಗೆ ಕರೆದೊಯ್ಯಲು ಪ್ರಯತ್ನಿಸಿದವನು. ಆದರೆ ನಾನು ಕೃಷಿಯ ಹೊರಗೆ- ಒಳಗೆ ಎರಡೂ ದಾರಿಗಳನ್ನು ಜೋಡಿಸಿಕೊಂಡೇ ಬಂದವನು.ಎಂದೂ ಕೃಷಿಯೊಳಗೆ ಸಂಪೂರ್ಣವಾಗಿ ಇಳಿದು ಬದುಕುವ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ‘‘ಜಾಬಿಗೆ ರಿಸೈನ್ ಮಾಡಿ ಹಳ್ಳಿಯಲ್ಲಿ ಲಾಟರಿ ಹೊಡೆಯಬೇಡ’’ ಎಂದು ತೇಜಸ್ವಿ ಹೇಳಿದ್ದುನನ್ನ ಮನಸ್ಸಿನಲ್ಲಿ ಯಾವುದೋ ಅಜ್ಞಾತ ಬ್ರೇಕ್‌ನಂತೆ ಕೆಲಸ ಮಾಡಿತ್ತು. ಅದು ನನ್ನನ್ನು ಉದ್ಯೋಗ ಕಳಚುವ ನಿರ್ಧಾರದಿಂದ ತಡೆದಿತ್ತು.
ಅದಕ್ಕೇ ನನ್ನ ಬರಹಗಳಲ್ಲಿ ಒಂದು ನೈತಿಕ ಕೊರತೆ ಇದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಕೃಷಿ ಲೇಖಕ ಅಲ್ಲ, ಕೃಷಿಕ ಲೇಖಕ ಎಂದು ಹೇಳಿಕೊಂಡಿದ್ದರೂ ನನ್ನ ಬರಹಗಳಲ್ಲಿ ಹೆಚ್ಚು ಕಾಣಿಸಿಕೊಂಡದ್ದು ಗಮನಿಸಿದ ಅನುಭವ. ಇತರರು ಮಾಡುತ್ತಿರುವ ಕೃಷಿಯನ್ನು ನೋಡಿ, ಅವರ ಪ್ರಯತ್ನಗಳನ್ನು ಕೇಳಿ, ಅದರ ಜೊತೆ ನನ್ನ ಸ್ವಂತ ಕೃಷಿ ಅನುಭವದ ಚಿಂತನೆಗಳನ್ನು ಜೋಡಿಸಿ ಬರೆಯುತ್ತಿದ್ದೆ. ಕಜೆ ಅವರದ್ದು ಮಣ್ಣಿನ ವಾಸನೆಯನ್ನು ದೂರದಿಂದಲೇ ಅನುಭವಿಸುವ ಬರಹವಲ್ಲ .
ಅದು ಮಣ್ಣಿನೊಳಗೆ ಕಾಲಿಟ್ಟವನ ಧ್ಯಾನಸ್ಥ ಅನುಭವ. ಮಣ್ಣನ್ನು ಮುಟ್ಟಿದ ಕೈ ಬರಹವಾಗುವಾಗ ಅದರ ಸ್ವರವೇ ಬೇರೆಯಾಗಿರುತ್ತದೆ. ಆನಾದಗೇಯ ಭಾವದಲ್ಲಿ ಮಣ್ಣಿನಾಳದಿಂದ ಎದ್ದು ಬರುವ ಪರಿಮಳವಿರುತ್ತದೆ. ಹದಭರಿತ ನಿಯಮಬದ್ಧ ಸುಸ್ಥಿರತೆ ಇರುತ್ತದೆ.
ಅನುಭವವನ್ನು ಅಕ್ಷರವಾಗಿಸುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ಕೃಷಿಯಲ್ಲಿ ಅದು ಅತ್ಯಂತ ಸೂಕ್ಷ್ಮ ಜಾಣ್ಮೆ ಮತ್ತು ಜವಾಬ್ದಾರಿಯ ಕೆಲಸ. ಯಾವುದೇ ಗಿಡ, ಬಳ್ಳಿ ತನಗೆ ಬೇಕಾದ ಗೊಬ್ಬರ, ನೀರು, ಬಿಸಿಲು, ನೆರಳುಗಳ ಬಗ್ಗೆ ಮಾತಾಡಲಾರವು. ಅವುಗಳ ಬೇಡಿಕೆಯನ್ನು ಕೇಳಿಸಿಕೊಳ್ಳಬೇಕಾದರೆ ಕೃಷಿಕ ಮಣ್ಣಿನೊಳಗೆ ಕಿವಿ ಇಡಬೇಕು. ಒಂದು ದಶಕದಿಂದ ಕಜೆ ಮಣ್ಣಿನ ಜೊತೆ ನಡೆಸುತ್ತಿರುವ ಸಂವಾದವೇ ಅವರ ಈ ಎರಡನೆಯ ಪುಸ್ತಕ. ಅವರ ಬದುಕಿನ ಶೈಲಿ-ಉಡುಪು, ಮಾತು, ಕುಟುಂಬ ಸಂಬಂಧ, ಮಕ್ಕಳ ಓದು, ಆಹಾರ - ಎಲ್ಲದರಲ್ಲೂ ಒಂದು ದೇಸಿಸರಳತೆಯ ಅಚ್ಚು ಕಾಣುತ್ತದೆ.
ಈ ಪುಸ್ತಕ ಕೇವಲ ಕೃಷಿ ಮಾಡುವ ಒಬ್ಬ ವ್ಯಕ್ತಿಯ ಅನುಭವಗಳು ಸಂಕಲನವಾಗಿದ್ದಕ್ಕಾಗಿ ಮಾತ್ರ ಮುಖ್ಯವಾಗುವುದಿಲ್ಲ. ಕೃಷಿ ಜೀವನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅನುಭವಿಸುತ್ತಾ ಪರಿಣಾಮಗಳನ್ನು ಗಣಿಸುತ್ತಾ ದಾಖಲಿಸುತ್ತಾ ವಿವರಿಸುತ್ತಾ ಸಾಗುವ ಮತ್ತು ಅದರೊಳಗೆ ಒಂದಾಗಿ ಬದುಕುವುದು ಈ ಕಾಲದಲ್ಲಿ ಎಷ್ಟು ಕಠಿಣವೆಂಬುದನ್ನು ಕೂಡ ಈ ಕೃತಿ ನೆನಪಿಸುತ್ತದೆ.
ನಗರದಲ್ಲಿ ಕೈತುಂಬ ಸಂಬಳ ಕೊಡುವ ಉದ್ಯೋಗವನ್ನು ಬಿಟ್ಟು ಮಣ್ಣಿಗೆ ಬರುವುದು ಕೇವಲ ವೃತ್ತಿ ಬದಲಾವಣೆ ಅಲ್ಲ. ಅದು ಬದುಕಿನ ತತ್ವವನ್ನು ಬದಲಾಯಿಸುವ ನಿರ್ಧಾರವೂ ಹೌದು. ಸರಳ ಸಿದ್ಧಾಂತಕ್ಕಾಗಿ ಆರ್ಥಿಕ ಬಲ ನೀಡುವ ಅಡಿಕೆ ತೋಟವನ್ನು ಕಡಿದು ದುಬಾರಿ ಭತ್ತದ ಕೃಷಿಯನ್ನು ಮಾಡಲು ಹೊರಡುವುದು ಏಕಕಾಲದಲ್ಲಿ ದೇಹಕ್ಕೂ ಮನಸ್ಸಿಗೂ ಕಠಿಣವಾದ ಆಯ್ಕೆಯೇ. ಅನೇಕ ವರ್ಷಗಳಿಂದ ಒಂದು ಕ್ರಮಕ್ಕೆ ಹೊಂದಿಕೊಂಡ ಮನೆಯ ಹಿರಿಯರನ್ನು ಒಪ್ಪಿಸಬೇಕು, ಅದಕ್ಕಿಂತ ಹೆಚ್ಚು ಜೊತೆಗಿರುವ ಮಡದಿಯ ಮನಸ್ಸನ್ನು ಗೆಲ್ಲಬೇಕು, ಇನ್ನೂ ದೊಡ್ಡದಾದ ನಿರ್ಧಾರ -ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಓದಿಸುವ ಪ್ರಯತ್ನ. ಇವೆಲ್ಲವೂ ಸೇರಿದಾಗಲೇ ಸರಳ ಆದರ್ಶ ಬದುಕಿನ ದಾರಿ ರೂಪುಗೊಳ್ಳುತ್ತದೆ.
ಸರಳ ಬದುಕು ಎನ್ನುವುದು ಬಡತನವಲ್ಲ. ಬಡತನ ಬೇರೆ, ದಾರಿದ್ರ್ಯ ಬೇರೆ, ಸರಳತೆ ಬೇರೆ. ಇಂದಿನ ಕಾಲದಲ್ಲಿ ಎಲ್ಲ ಅವಕಾಶಗಳೂ ಕೈಗೆಟುಕುವಾಗಲೂ ಸ್ವಯಂಪ್ರೇರಿತವಾಗಿ ಮಿತವಾದ ಬದುಕನ್ನು ಆರಿಸಿಕೊಳ್ಳುವುದು ಸುಲಭದ ಮಾತಲ್ಲ.
ಕಳೆದ ಕೆಲವು ವರ್ಷಗಳಲ್ಲಿ ನಗರದಿಂದ ಹಳ್ಳಿಗೆ ಮರಳಿದ ಅನೇಕ ಯುವಕರನ್ನು ನಾನು ನೋಡಿದ್ದೇವೆ. ಕೆಲವರು ಕೊರೋನ ನಂತರ ಅನಿವಾರ್ಯವಾಗಿ ಬಂದವರು. ಕೆಲವರು ಆದರ್ಶದ ಉತ್ಸಾಹದಲ್ಲಿ ಬಂದವರು. ಕೆಲವರು ಭೂಮಿಯ ಉತ್ತರದಾಯಿತ್ವವನ್ನು ಅನಿವಾರ್ಯವಾಗಿ ಒಪ್ಪಿ ಸ್ವೀಕರಿಸಿ ಬಂದವರು. ಆದರೆ ಇವರೆಲ್ಲರಲ್ಲಿ ಸಾಮಾನ್ಯವಾಗಿ ಕಂಡ ಒಂದು ಸಂಗತಿ - ಮಾನಸಿಕ ಗೊಂದಲ. ಸಮಾಜದ ದೃಷ್ಟಿ, ಒಳಗಿನ ಕೀಳರಿಮೆ, ಆರ್ಥಿಕ ಒತ್ತಡ - ಈ ಎಲ್ಲ ಕಾರಣಗಳಿಂದ ಮತ್ತೆ ಬೇರು ಕಳಚಿ ಅಷ್ಟೇ ವೇಗದಲ್ಲಿ ನಗರಕ್ಕೆ ಹಿಂದಿರುಗಿದವರನ್ನೂ ನಾವು ನೋಡಿದ್ದೇವೆ. ಈ ಹಿನ್ನೆಲೆಯಲ್ಲೇ ವಸಂತ ಕಜೆ ಅವರ ಅನುಭವಗಳು ವಿಶೇಷವಾಗುತ್ತವೆ. ಹಳ್ಳಿಯಲ್ಲಿದ್ದುಕೊಂಡು ಒಂದೇ ಮನೆಯಲ್ಲಿ ನಾಲ್ಕು ತಲೆಮಾರುಗಳನ್ನು ಜೋಡಿಸಿಕೊಂಡು ಕೃಷಿಯನ್ನು ನಿಭಾಯಿಸುವುದು ಇವತ್ತಿನ ಮನಸ್ಥಿತಿಗೆ ಸುಲಭವಲ್ಲ .
ಈ ಪುಸ್ತಕದ ಹದಿನಾಲ್ಕು ಅಧ್ಯಾಯಗಳು ಕೃಷಿಯ ಜೀವನವನ್ನು ಬೇರೆ ಬೇರೆ ದಿಕ್ಕುಗಳಲ್ಲಿ ನೋಡುತ್ತವೆ. ಅನ್ನ ಬೆಳೆಯುವ ಸಿಹಿ-ಕಹಿಗಳು, ಗದ್ದೆ ಕೊಯ್ಲಿನ ಅನಿರ್ವಚನೀಯ ಅನುಭವ, ಕೃಷಿ ಮಾರುಕಟ್ಟೆಯ ಗದ್ದಲ, ಜಲಮೂಲ ರಕ್ಷಣೆಯ ದಾರಿಗಳು, ಕೃಷಿ ಮತ್ತು ಕಲೆ ನಡುವಿನ ಸಂಬಂಧ, ಮಕ್ಕಳ ಶಿಕ್ಷಣದ ಬಗ್ಗೆ ಪರ್ಯಾಯ ಚಿಂತನೆ - ಹೀಗೆ ಹಲವು ಪ್ರಶ್ನೆಗಳು ಇಲ್ಲಿ ಚರ್ಚೆಯಾಗುತ್ತವೆ.
ಈ ಪುಸ್ತಕದ ನಿಜವಾದ ಆಕರ್ಷಣೆ ವಸಂತ ಕಜೆ ಮಂಡಿಸುವ ತರ್ಕಗಳಲ್ಲಿ ಇದೆ. ಅವರು ಒಂದು ವಿಚಾರವನ್ನು ನೇರವಾಗಿ ಹೇಳಲು ಹೊರಡುವುದಿಲ್ಲ . ಪದರ ಪದರವಾಗಿ ತೆರೆದು ಅದರ ಒಳಗಿರುವ ಅರ್ಥವನ್ನು ಓದುಗರ ಮುಂದೆ ಇಡುತ್ತಾರೆ. ಅದು ಅವರೇ ಸಹಜವಾಗಿ ಬೆಳೆಯಲು ಬಿಟ್ಟ ಕಾಡಿನಡಿಯ ತರಗೆಲೆಯ ರಾಶಿಗೆ ಕೈ ಹಾಕಿ ಮಣ್ಣಿನೊಳಡೆಯ ನಿಗೂಢ ಸಾವಯವ ಬಂಧವನ್ನು ತೆರೆ ತೆರೆಯಾಗಿ ತೆರೆದು ತೋರಿಸಿದಷ್ಟು ನೈಜವಾಗಿದೆ. ಆ ಅನುಭವದ ಸರಳವಾದ ಕ್ರಮವೇ ಈ ಬರಹಕ್ಕೆ ವಿಶಿಷ್ಟತೆಯನ್ನು ಕೊಡುತ್ತದೆ.
ಈ ಕಾರಣಕ್ಕಾಗಿಯೇ ಕೃಷಿ ಯಾವತ್ತೂ ಒಂದು ತೆರೆದ ಪಾಠಶಾಲೆ ಎಂದು ಅವರು ಹೇಳುತ್ತಾರೆ. ಇಲ್ಲಿ ಯುನಿಫಾರ್ಮ್ ಎಂದರೆ ನಮ್ಮ ನಿತ್ಯದ ಬಟ್ಟೆ. ಫೀಸ್ ಎಂದರೆ ನಮ್ಮ ಶ್ರಮ. ಕಾಣದ ಗುರುಗಳು ಆಗಾಗ ಪಾಠ ಕಲಿಸುತ್ತಾರೆ. ಆಕಾಶದತ್ತ ಕಣ್ಣು ತೆರೆದಿರುವ ನೆಲವೇ ಉತ್ತರ ಪತ್ರಿಕೆ. ನಮ್ಮ ಕಾಳಜಿಯೇ ಪರೀಕ್ಷೆ. ಪ್ರಕೃತಿಯ ನೂರೊಂದು ಶಕ್ತಿಗಳು - ಕೀಟ, ಶಿಲೀಂಧ್ರ, ಪಕ್ಷಿ, ಹಂದಿ, ನವಿಲು - ಎಲ್ಲರೂ ಸೇರಿ ಮೌಲ್ಯಮಾಪನ ಮಾಡುವ ಯುನಿವರ್ಸಿಟಿ ಇದು. ಹೊಟ್ಟೆ ತುಂಬಿದರೆ ನಿದ್ದೆ, ಖರ್ಚು ಸಾಗುವಷ್ಟು ಹಣ ಬಂದರೆ ಪಾಸ್. ಅನುಭವವೇ ಡಿಗ್ರಿ.!
ಕಜೆ ಅವರ ಈ ಪುಸ್ತಕವನ್ನು ಓದುವಾಗ ಕೃಷಿ ಎಂಬುದು ಕೇವಲ ವೃತ್ತಿ ಅಲ್ಲ ಎಂಬುದು ಮತ್ತೆ ಮತ್ತೆ ಮನಸ್ಸಿಗೆ ಬರುತ್ತದೆ. ಅದು ಬದುಕಿನ ಒಂದು ವಿಧಾನ. ಪ್ರಕೃತಿಯೊಂದಿಗೆ ಮನುಷ್ಯ ನಡೆಸುವ ಸಂವಾದ. ಅದರ ಕಾರಣಕ್ಕೇ ‘ಕೃಷಿಯೆಂಬ ಓಪನ್ ಯುನಿವರ್ಸಿಟಿ’ ಎಂಬ ಈ ಕೃತಿ ಕೃಷಿಯ ಬಗ್ಗೆ ಬರೆಯಲ್ಪಟ್ಟ ಪುಸ್ತಕಕ್ಕಿಂತ ಹೆಚ್ಚು - ಮಣ್ಣಿನೊಂದಿಗೆ ಬದುಕಲು ಬಯಸುವವರಿಗಾಗಿ ಒಂದು ಮನಸ್ಸಿನ ಪಾಠಶಾಲೆಯಾಗಿದೆ. ಹಳ್ಳಿ ಮತ್ತು ಕೃಷಿ ಇಂದು ಕೇವಲ ಅನ್ನ ಕೊಡುವ ವ್ಯವಸ್ಥೆಯಷ್ಟೇ ಅಲ್ಲ; ಅದು ಅನುಭವಗಳ ಒಂದು ತೆರೆದ ವಿಶ್ವವಿದ್ಯಾನಿಲಯ. ಈ ಕೃತಿಯಲ್ಲಿ ಕೃಷಿ ಪ್ರವಾಸೋದ್ಯಮ ಎಂಬ ಹೊಸ ದಾರಿಯೊಂದರ ಅವಕಾಶಗಳ ಕುರಿತು ಯೋಚನೆ ಇದೆ. ಪ್ರಕೃತಿಯಿಂದ ದೂರವಾದ ಹೊಸ ತಲೆಮಾರಿಗೆ ಇಂದು ಹಳ್ಳಿ, ಹೊಲ, ಮಣ್ಣು, ದನಸಾಕಣೆ, ಬೆಟ್ಟಗುಡ್ಡ, ನಕ್ಷತ್ರಾಕಾಶ-ಇವೆಲ್ಲವೂ ಹೊಸ ಅನ್ವೇಷಣೆಯಂತೆ ಕಾಣುತ್ತಿವೆ. ಈ ಹಿನ್ನಲೆಯಲ್ಲಿ ಕೃಷಿ ಪ್ರವಾಸೋದ್ಯಮವು ರೈತನಿಗೆ ಆದಾಯದ ದಾರಿಯಷ್ಟೇ ಅಲ್ಲ, ಮನುಷ್ಯನನ್ನು ತನ್ನ ಮೂಲಗಳಿಗೆ ಮರಳಿ ಕರೆದೊಯ್ಯುವ ಸೇತುವೆಯೂ ಆಗಬಹುದು.
ಬಿತ್ತನೆ-ಕೊಯ್ಲು, ಗ್ರಾಮ್ಯ ಕೌಶಲಗಳು, ಜೀವವೈವಿಧ್ಯ ಅಧ್ಯಯನ, ಪ್ರಕೃತಿ ಶಿಬಿರಗಳು-ಇವೆಲ್ಲ ಸೇರಿ ಹಳ್ಳಿಯನ್ನು ಅನುಭವಗಳ ಪಾಠಶಾಲೆಯನ್ನಾಗಿ ರೂಪಿಸಬಹುದು. ಸರಿಯಾಗಿ ರೂಪಿಸಿದರೆ ಕೃಷಿ ಪ್ರವಾಸೋದ್ಯಮವು ಬದುಕಿನ ಮಣ್ಣಿನ ಜ್ಞಾನವನ್ನು ಮತ್ತೆ ಸಮಾಜಕ್ಕೆ ಪರಿಚಯಿಸುವ ಮಾರ್ಗವಾಗಬಹುದು. ನಗರದ ಕಾಂಕ್ರಿಟ್ ಬದುಕಿನಲ್ಲಿರುವ ಹಳ್ಳಿಯಿಂದಲೇ ಹೋದವರಲ್ಲೂ ಮಣ್ಣಿನ ವಾಸನೆ ನಿಧಾನವಾಗಿ ಮರೆತುಹೋಗುತ್ತಿದೆ. ಹೊಸ ತಲೆಮಾರಿಗಂತೂ ಕೃಷಿ ಕೇವಲ ಪಾಠಪುಸ್ತಕದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪ್ರವಾಸೋದ್ಯಮ ಒಂದು ಹೊಸ ಅವಕಾಶವಾಗಿ ಕಾಣುತ್ತಿದೆ.
ಸರಿಯಾಗಿ ರೂಪಿಸಿದರೆ ಕೃಷಿ ಭೂಮಿಯೇ ಒಂದು ‘ಓಪನ್ ಯುನಿವರ್ಸಿಟಿ’ಯಾಗಿ, ರೈತನಿಗೆ ಆದಾಯವನ್ನೂ ಸಮಾಜಕ್ಕೆ ಪ್ರಕೃತಿಯ ಜೊತೆಗಿನ ಹೊಸ ಸಂಬಂಧವನ್ನೂ ಕೊಡುವ ಸಾಧ್ಯತೆ ಇದರಲ್ಲಿ ಅಡಕವಾಗಿದೆ. ಹತ್ತಾರು ವರ್ಷಗಳ ಕಾಲ ಮಣ್ಣಿನ ಜೊತೆ ಮಾತಾಡಿದ ಅನುಭವದಿಂದ ವಸಂತ ಕಜೆ ಒಂಥರದ ಸೂತ್ರವನ್ನು ಕಂಡುಕೊಂಡಿದ್ದಾರೆ. ಇದೆಲ್ಲ ಕೇವಲ ಪುಸ್ತಕದ ಪುಟದಲ್ಲಿ ಹುಟ್ಟಿದ ತತ್ವವಲ್ಲ; ಹೊಲದ ನೆಲದಲ್ಲಿ, ಬೆವರಿನ ಹನಿಯಲ್ಲಿ ಬೆಳೆದ ಅರಿವು.
‘‘ರೈತನಾದವನು ಕನಿಷ್ಠ ಒಂದಾದರೂ ತಾನು ಬೆಳೆದ ಬೆಳೆಗೆ ತಾನೇ ಬೆಲೆ ಹೇಳಬೇಕು,’’ ಇಲ್ಲವಾದರೆ, ತನ್ನ ಕೈಯಲ್ಲಿ ಹುಟ್ಟಿದ ಬೆಳೆಗೆ ಮತ್ತೊಂದು ಜೀವ ಕೊಟ್ಟು - ಮೌಲ್ಯವರ್ಧಿತ ವಸ್ತುವಾಗಿ ರೂಪಿಸಬೇಕು.
ಕರಾವಳಿ-ಮಲೆನಾಡಿನ ಅಡಿಕೆ ಹೊಲಗಳಲ್ಲಿ ಹಣದ ಹರಿವು ಇದ್ದರೂ, ಇಲ್ಲಿಯ ರೈತ ಎಂದೂ‘‘ನಾನು ಬೆಳೆದ ಅಡಿಕೆಗೆ ಇಷ್ಟು’’ ಎಂದು ಹೇಳುವ ಹಕ್ಕು ಇನ್ನೂ ಪಡೆದಿಲ್ಲ. ಅಡಿಕೆ ಒಂದೇ ಅಲ್ಲ, ತಾನು ಬೆಳೆದ ಯಾವುದೇ ಬೆಳೆಗೆ ಬೆಲೆ ನಿರ್ಧರಿಸುವ ಆ ಹಕ್ಕು ಬಂದ ದಿನ - ರೈತ ಪರಾವಲಂಬನೆಯ ಅಂಚನ್ನು ದಾಟಿ ನಿಂತವನಾಗುತ್ತಾನೆ. ಉದಾಹರಣೆಯಾಗಿ, ತನ್ನ ತೋಟದ ಬಾಳೆ ಹಣ್ಣಿನಿಂದ ಹಲ್ವಾ ಮಾಡಿದ ರೈತನನ್ನು ಕಜೆ ನೆನಪಿಸುತ್ತಾರೆ. ಇಂದಿನ ಕಾಲದಲ್ಲಿ, ಕೈಯಲ್ಲಿ ಇರುವ ಮೊಬೈಲ್ ಕೂಡ ಒಂದು ಮಾರುಕಟ್ಟೆ. ಸಾಮಾಜಿಕ ನವಮಾಧ್ಯಮದ ದಾರಿಯಲ್ಲಿ, ಹಳ್ಳಿಯ ಮುಗ್ಧ ಅಜ್ಞಾತ ಒರಟು ಕೈಯಲ್ಲಿ ಹುಟ್ಟಿದ ವಸ್ತು ದೂರದ ನಗರದ ಮನೆಯಲ್ಲಿ ಜಾಗ ಪಡೆಯಬಹುದು. ಐಟಿ ಕೌಶಲ್ಯವೂ ಇಲ್ಲಿ ಕೃಷಿಯ ಸಂಗಾತಿಯೇ.ಮಣ್ಣಿನ ಒಳಗಡೆ ಹರಿಯುವ ನೀರನ್ನು ಹಿಡಿಯುವ ಜಾಣ್ಮೆಯನ್ನೂ ಕಜೆ ಮರೆತಿಲ್ಲ. ಮಳೆನೀರು ಕೊಯ್ಲು, ನೀರಿನ ಇಂಗುವಿಕೆ, ಮಣ್ಣಿನ ರಕ್ಷಣೆಯ ವಿಧಾನಗಳು, ಸಹಜ ಕಾಡು, ಕಸಿ ಕಟ್ಟುವಿಕೆ, ನರ್ಸರಿ -ಇವೆಲ್ಲವೂ ಅವರ ಅನುಭವದ ಮಿಡಿತಗಳು. ನೀರನ್ನು ಬಳಸುವಷ್ಟೇ, ಉಳಿಸುವ ಜವಾಬ್ದಾರಿಯೂ ರೈತನದ್ದೇ ಎಂಬ ಜೀವಪ್ರಜ್ಞೆ ಅವನ ಅಧ್ಯಾಯದ ಒಳಹರಿವು. ‘ಕೃಷಿ ಮತ್ತು ಕಲೆ’- ಎಂಬ ಚಿಂತನೆಗೆ ಬಂದಾಗ ಕಜೆಯವರಿಗೆ ಹೊಲವೇ ಒಂದು ಕ್ಯಾನ್ವಾಸ್ ಆಗಿ ಕಾಣುತ್ತದೆ. ವೆಂಡಲ್ ಬೆರ್ರಿಯ ಮಾತು- ‘‘ಸರಿಯಾಗಿ ತಿಳಿದದ್ದೆಲ್ಲ ವಿಜ್ಞಾನ, ಚೆನ್ನಾಗಿ ಮಾಡಿದ್ದೆಲ್ಲ ಕಲೆ’’ - ಇಲ್ಲಿ ಮಣ್ಣಿನ ಮೇಲೆ ರೂಪ ಪಡೆಯುತ್ತದೆ. ಗಿಡ, ಮರ, ಬಳ್ಳಿ, ಅಂಗಳದಲ್ಲಿ ಹಾಸಿದ ಅಡಿಕೆ -ಇವೆಲ್ಲವೂ ಕೇವಲ ಉತ್ಪನ್ನಗಳಲ್ಲ; ಕಲಾಸೃಷ್ಟಿಗಳು.
ಒಬ್ಬ ಕಲಾಸಕ್ತ ಕೃಷಿಕನಿಗೆ, ದೇಹದ ಶ್ರಮವೂ ಮನಸ್ಸಿನ ಆಯಾಸವೂ ಇಂತಹ ಕಲಾ ಸೃಷ್ಟಿಗಳ ನಡುವೆ ಕರಗಿ ಹೋಗುತ್ತವೆ. ಹೊಲದ ಪ್ರತಿಯೊಂದು ಹಸಿರು ಸ್ಪರ್ಶದಲ್ಲೂ, ಅವನು ತನ್ನದೇ ಒಂದು ಕಲಾ ಲೋಕವನ್ನು ಕಂಡುಕೊಳ್ಳುತ್ತಾನೆ. ಕಜೆಯವರ ಮೂರನೆಯ ಪುಸ್ತಕ ಖಂಡಿತ ಮತ್ತಷ್ಟು ಪರಿಪಕ್ವವಾಗಿ ಇರುತ್ತದೆ ಮತ್ತು ಅದಕ್ಕೆ ನಾನು ಸ್ವಲ್ಪ ಸಮಯ ಬಿಟ್ಟು ಕಾಯುತ್ತೇನೆ.






