ಭೈರುಂಬೆ- ಸೊಸೈಟಿಯೊಂದು ಊರಾಗಿ ಬೆಳೆದ ಕಥೆ!

ಈ ಸಹಕಾರಿ ಸಂಸ್ಥೆಯ ನಿಜವಾದ ಶಕ್ತಿ ಸಾಲಾಗಿ ನಿಂತ ಗೋದಾಮಿನಲ್ಲಿರುವ ವಸ್ತುಗಳಲ್ಲಾಗಲಿ, ಆವರಣದಲ್ಲಿರುವ ವಾಹನಗಳಲ್ಲಾಗಲಿ ಕಚೇರಿ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೆಲ್ಲಾಗಲಿ ಮಾತ್ರ ಇರುವುದಿಲ್ಲ. ಸದಸ್ಯರನ್ನು ತನ್ನ ಕುಟುಂಬದ ಭಾಗವನ್ನಾಗಿಸಿ ಅವರ ಬದುಕಿನ ಸುಖ-ದುಃಖ ಗಳಲ್ಲಿ ಎಷ್ಟರಮಟ್ಟಿಗೆ ಭಾಗಿಯಾಗುತ್ತದೆ ಎನ್ನುವುದರಲ್ಲಿಯೂ ಇರುತ್ತದೆ. ಹುಳಗೋಳ ಸೊಸೈಟಿಯ ‘ಮಹಾಪ್ರಸ್ಥಾನ’ ಯೋಜನೆ ಇಂತಹ ಮಾನವೀಯ ಸಂಬಂಧಕ್ಕೆ ಒಂದು ಉದಾಹರಣೆ.
ಅಮೆರಿಕದ ಫಿಲಡೆಲ್ಪಿಯ ಎಂಬ ಊರಿನಲ್ಲೊಂದು ಗ್ರಂಥಾಲಯವಿದೆ. ಸಾಮಾನ್ಯವಾಗಿ ಗ್ರಂಥಾಲಯ ಎಂದರೆ ಪುಸ್ತಕಗಳು. ಆದರೆ ಈ ಗ್ರಂಥಾಲಯ ಪುಸ್ತಕಗಳ ಆಚೆಗೂ ಬೆಳೆದಿದೆ. ಊರೊಳಗಡೆಯ ಒಂದು ಮಗು ಒಂದು ಗಂಟೆ ಬೆಕ್ಕಿನ ಮರಿಯೊಡನೆ, ನಾಯಿಮರಿಯೊಡನೆ ಆಟವಾಡಬೇಕೆಂದರೆ ಅಲ್ಲಿ ಅಂಥ ಅವಕಾಶವಿದೆ. ಮನೆಯ ಗೋಡೆಗೆ ಒಂದು ಮೊಳೆ ಹೊಡೆಯಬೇಕಿದ್ದರೆ ಸುತ್ತಿಗೆ ಇಲ್ಲವೆಂದರೆ ಅದೂ ಅಲ್ಲಿಯೇ ಸಿಗುತ್ತದೆ, ಅಷ್ಟೇ ಅಲ್ಲ ಗರಗಸ, ಸ್ಕ್ರೂಡ್ರೈವರ್ ಎಲ್ಲವೂ ಆ ಲೈಬ್ರೆರಿಯಲ್ಲಿ ಲಭ್ಯ.
ನಮ್ಮ ಹಳ್ಳಿಗಳಲ್ಲೂ ಇಂಥ ಸಂಸ್ಥೆಗಳು ಹುಟ್ಟಿಕೊಂಡರೆ, ಬದುಕಿನ ಅನೇಕ ಸಣ್ಣಪುಟ್ಟ ಸಮಸ್ಯೆಗಳಿಗೆ ಊರಿನೊಳಗೇ ಪರಿಹಾರ ಸಿಗಬಹುದು. ದೂರದ ಅಮೆರಿಕದ ಈ ಕಲ್ಪನೆಯನ್ನು ನೆನಪಿಸಿಕೊಳ್ಳುವಾಗ ಉತ್ತರ ಕನ್ನಡದ ಶಿರಸಿಯ ಭೈರುಂಬೆಯಲ್ಲಿರುವ ಸಹಕಾರಿ ಸಂಸ್ಥೆಯೊಂದು ನೆನಪಾಗುತ್ತದೆ. ‘ಹುಳಗೋಳ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಭೈರುಂಬೆ’ಅದು ಕೇವಲ ರೈತರಿಗೆ ಸಾಲ ಕೊಡುವ, ಕೃಷಿ ಸಾಮಗ್ರಿಗಳನ್ನು ಒದಗಿಸುವ ಸೊಸೈಟಿಯಲ್ಲ; ರೈತರ ಬದುಕಿನ ಹಲವು ಅಗತ್ಯಗಳಿಗೆ ತನ್ನೊಳಗೆ ಜಾಗ ಮಾಡಿಕೊಂಡಿರುವ ಒಂದು ಊರಿನ ಸಂಸ್ಥೆ. ಅದರ ಕಥೆಯನ್ನು ಕೇಳುತ್ತಾ ಹೋದಂತೆ, ಸಹಕಾರ ಎನ್ನುವುದು ಬರೀ ಲೆಕ್ಕಪತ್ರಗಳಲ್ಲಿರುವ ಪದವಲ್ಲ, ಒಟ್ಟಾಗಿ ಬದುಕುವ ಜನರ ನಡುವೆ ರೂಪುಗೊಳ್ಳುವ ಜೀವನ ವಿಧಾನ ಎಂಬುದು ಅರ್ಥವಾಗುತ್ತದೆ. ಎರಡು ದಿನ ಆ ಸಂಸ್ಥೆಯ ಒಳಗಡೆ ಇದ್ದೇ ಇದನ್ನೆಲ್ಲ ಬರೆಯುತ್ತಿದ್ದೇನೆ.
ಭೈರುಂಬೆಯ ಸುತ್ತಮುತ್ತಲಿನ ಜನರಿಗೆ ಬದುಕಿನ ಯಾವುದೇ ಅಗತ್ಯಗಳಿಗೆ ದೂರದ ಪೇಟೆಯವರೆಗೆ ಹೋಗಬೇಕಾಗಿಲ್ಲ. ಮನೆಯಲ್ಲಿರುವ ಅಡಿಕೆಯನ್ನು ಮಾರಿ ಹಣ ಪಡೆಯಬೇಕಾದರೂ, ಕೃಷಿಗೆ ಗೊಬ್ಬರ ತರಬೇಕಾದರೂ, ಹಸುವಿಗೆ ಹಿಂಡಿ ಬೇಕಾದರೂ, ಮನೆಯ ಕಟ್ಟಡಕ್ಕೆ ಸಿಮೆಂಟ್ ಬೇಕಾದರೂ, ಮದುವೆಗೆ ಜಮಖಾನೆ ಮತ್ತು ಅಡುಗೆ ಪಾತ್ರೆ ಬೇಕಾದರೂ ಅವರ ನೆರವಿಗೆ ಈ ಸಂಸ್ಥೆ ನಿಂತಿದೆ. ವಿದ್ಯುತ್ ಬಿಲ್ ಪಾವತಿಸುವುದರಿಂದ ಹಿಡಿದು ವಾಹನದ ಹೊಗೆ ಪರೀಕ್ಷೆಯವರೆಗೆ, ಮೊಬೈಲ್ ರೀಚಾರ್ಜ್ನಿಂದ ಹಿಡಿದು ಭತ್ತವನ್ನು ಅಕ್ಕಿ ಮಾಡಿಸುವವರೆಗೆ, ದಿನಸಿ ಸಾಮಗ್ರಿಗಳಿಂದ ಹಿಡಿದು ಕೃಷಿ ಯಂತ್ರೋಪಕರಣಗಳವರೆಗೆ ಅನೇಕ ಅಗತ್ಯಗಳನ್ನು ಪೂರೈಸುವ ಈ ಸಂಸ್ಥೆ ಹುಟ್ಟಿದ್ದು 1919ರಲ್ಲಿ. ಹುಳಗೋಳದಲ್ಲಿ. ಮುಂದೆ ಅದು ಸ್ಥಾನಾಂತರಗೊಂಡದ್ದು ಬೈರುಂಭೆಗೆ.
ಒಂದು ಕಾಲದಲ್ಲಿ ಸಹಕಾರಿ ಸಂಸ್ಥೆ ಎಂದರೆ ರೈತರಿಗೆ ಸಾಲ ಕೊಡುವುದು, ಉಳಿತಾಯವಿದ್ದರೆ ಠೇವಣಿ ಸ್ವೀಕರಿಸುವುದು, ಕೃಷಿ ಉತ್ಪನ್ನಗಳನ್ನು ಖರೀದಿಸುವುದು, ಗೊಬ್ಬರ ಮತ್ತು ಬೀಜಗಳನ್ನು ಒದಗಿಸುವುದು ಎಂಬ ಸೀಮಿತ ಕಲ್ಪನೆ ಇತ್ತು. ಹುಳಗೋಳ ಸೊಸೈಟಿಯ ಕಾರ್ಯವ್ಯಾಪ್ತಿ ಅದನ್ನು ಮೀರಿದ್ದು. ತನ್ನ ವ್ಯಾಪ್ತಿಯ ಸುಮಾರು 900ರಷ್ಟು ಸದಸ್ಯರು ಮತ್ತು ಆರೇಳು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಸುತ್ತಮುತ್ತಲಿನ ಹತ್ತು ಗ್ರಾಮಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ತನ್ನ ಸೇವೆಗಳನ್ನು ವಿಸ್ತರಿಸಿಕೊಂಡಿದೆ. ಕಾಡಿನ ನಡುವೆ ಹತ್ತು ಹದಿನೈದು ಮೈಲು ದೂರದಲ್ಲಿರುವ ಮನೆಯೊಂದಕ್ಕೆ ಸಿಮೆಂಟ್ ಚೀಲವನ್ನೋ, ಹಸುವಿಗೆ ಹಿಂಡಿಯನ್ನೋ ತಲುಪಿಸುವುದು ಮೇಲ್ನೋಟಕ್ಕೆ ನಗರದಲ್ಲಿ ಸರಕು ಮಾರಾಟ ಮಾಡುವ ಅಂಗಡಿಯ ಕೆಲಸದಂತೆ ಕಾಣಬಹುದು. ಆದರೆ ಆ ಮನೆಯವರು ಅದಕ್ಕಾಗಿ ಎಷ್ಟು ದೂರ ಪ್ರಯಾಣಿಸಬೇಕು, ಎಷ್ಟು ಸಮಯ ಕಳೆಯಬೇಕು, ವಾಹನದ ಖರ್ಚು ಎಷ್ಟು ಮಾಡಬೇಕು ಎಂಬುದನ್ನು ಯೋಚಿಸಿದರೆ ಮನೆಬಾಗಿಲಿಗೆ ವಸ್ತು ತಲುಪಿಸುವುದರ ಮಹತ್ವ ತಿಳಿಯುತ್ತದೆ.
ಇಲ್ಲಿ ಮಾರಾಟವಾಗುವುದು ಬರೀ ಇಷ್ಟೇ ಅಲ್ಲ,
ಸಂಸ್ಥೆಯ ಆವರಣಕ್ಕೆ ಹೋದರೆ ಒಂದು ಸಣ್ಣ ಪೇಟೆಯೇ ಕಣ್ಣಿಗೆ ಬೀಳುತ್ತದೆ. ದಿನಸಿ, ಸ್ಟೇಶನರಿ, ಜವಳಿ, ಹೊಲಿಗೆ ವಿಭಾಗ, ಕೃಷಿ ಉಪಕರಣಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು, ಸುಧಾರಿತ ಬೀಜಗಳು, ಕೀಟನಾಶಕಗಳು, ಅಡಿಕೆ ಮತ್ತು ಹಣ್ಣಿನ ಗಿಡಗಳು, ಸಿದ್ಧಪಡಿಸಿದ ತರಕಾರಿ ಗಿಡಗಳು ಹೀಗೆ ಒಂದೊಂದಾಗಿ ಅಗತ್ಯಗಳು ಇಲ್ಲಿ ದೊರೆಯುತ್ತವೆ. ಎಣ್ಣೆ ಗಾಣ, ಅವಲಕ್ಕಿ ಗಿರಣಿ, ಅಕ್ಕಿ ಮಾಡುವ ವ್ಯವಸ್ಥೆ, ಅಡಿಕೆ ಸುಲಿಯುವ ಯಂತ್ರಗಳೂ ಇವೆ. ಮನೆಯ ನಿರ್ಮಾಣಕ್ಕೆ ಬೇಕಾದ ಕಬ್ಬಿಣ, ಸಿಮೆಂಟ್, ಮರಳು, ಜಂಬಿಟ್ಟಿಗೆ, ಪಿವಿಸಿ ಪೈಪ್, ಫಿಟ್ಟಿಂಗ್ಸ್, ತಗಡು, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು, ಊಟದ ಮೇಜುಗಳವರೆಗೆ ಇಲ್ಲಿ ಸಿಗುತ್ತವೆ. ಭತ್ತದ ಗದ್ದೆಗೆ ಕಾಡುಮಿಕಗಳು ಬಾರದ ಹಾಗೆ ಸುತ್ತ ಕಟ್ಟಲು ಹಳೆಯ ಸೀರೆ ಬೇಕೇ? ಇಲ್ಲಿ ಸಿಗುತ್ತದೆ. ಮನೆಯಲ್ಲಿರುವ ಹಳೆಯ ಸೀರೆಯನ್ನು ಇಲ್ಲೇ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದರೆ ನೀವೇ ಯೋಚಿಸಿ ಈ ಸಂಸ್ಥೆಯ ವ್ಯಾಪ್ತಿ ಎಷ್ಟು ದೊಡ್ಡದೆಂದು. ಕಾಡೂರಾದ ಉತ್ತರ ಕನ್ನಡದ ಜನರಿಗೆ ಇವೆಲ್ಲವನ್ನೂ ಒಂದೇ ಕಡೆ ಪಡೆಯುವ ಅನುಕೂಲವೇ ದೊಡ್ಡದು. ಅಗತ್ಯದ ವಸ್ತುವೊಂದನ್ನು ಕೊಳ್ಳಲು ಬೇರೆ ಬೇರೆ ಅಂಗಡಿಗಳನ್ನು ಹುಡುಕುತ್ತಾ ಪೇಟೆಯಲ್ಲಿ ಅಲೆಯಬೇಕಾದ ಪರಿಸ್ಥಿತಿಯನ್ನು ಈ ವ್ಯವಸ್ಥೆ ತಪ್ಪಿಸುತ್ತದೆ.
ಇಲ್ಲಿ ಅಡಿಕೆ ಬೆಳೆಗಾರನಿಗೆ ಮನೆಯಲ್ಲಿ ಸುಲಿದು ಇಟ್ಟುಕೊಂಡ ಅಡಿಕೆಯನ್ನು ನಗರದಲ್ಲಿರುವ ಮಂಡಿಗೆ ಸಾಗಿಸಿ ಮಾರಾಟ ಮಾಡುವ, ಅಲ್ಲಿಂದಲೇ ರೈತನ ಖಾತೆಗೆ ಹಣ ಜಮೆಯಾಗುವ ವ್ಯವಸ್ಥೆಯೂ ಇದೆ. ಬರೀ ಅಡಿಕೆಯಷ್ಟೇ ಅಲ್ಲ, ಮನೆ ಮಂದೆ ಬಂದು ನಿಲ್ಲುವ ಗಾಡಿಗೆ ತೆಂಗು, ಬಾಳೆ, ಕಾಫಿ ಲೋಡು ಮಾಡಿ ಮಾರಾಟ ಮಳಿಗೆಗೆ ಕಳಿಸಿ ಕೊಡುವ ವ್ಯವಸ್ಥೆ ಇದೆ. ಬೆಳೆಗಾರರ ಉತ್ಪನ್ನವನ್ನು ಮಾರಾಟ ಮಾಡುವ ವ್ಯವಸ್ಥೆ, ಉತ್ತಮ ಬೆಲೆಯಷ್ಟೇ ಅಲ್ಲ, ರೈತನೊಬ್ಬ ಅವುಗಳ ಮಾರಾಟಕ್ಕಾಗಿ ತನ್ನ ಕೃಷಿ ಕೆಲಸವನ್ನು ಬಿಟ್ಟು ದೂರದ ಪೇಟೆಯಲ್ಲಿ ದಿನವಿಡೀ ಕಳೆಯದಂತೆ, ದಲ್ಲಾಳಿಗಳಿಗೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳುವುದು ಕೂಡ ಇಲ್ಲಿ ಮುಖ್ಯ ಕೆಲಸ. ಹುಳಗೋಳ ಸೊಸೈಟಿಯ ಸೇವೆಗಳ ಮಹತ್ವ ಈ ಎರಡನೆಯ ಅಂಶದಲ್ಲಿಯೂ ಇದೆ.
ರೈತನಿಗೆ ಬೇಕಾದ ಸೇವೆಗಳನ್ನು ಒದಗಿಸುವುದಷ್ಟೇ ಅಲ್ಲ, ಕೃಷಿಯ ವಿಧಾನಗಳಲ್ಲಿಯೂ ಬದಲಾವಣೆ ತರಲು ಸಂಸ್ಥೆ ಪ್ರಯತ್ನಿಸಿದೆ. ಕೃಷಿ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಿಕೊಂಡು ಸದಸ್ಯರಿಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದೆ. ವೆನಿಲ್ಲಾ, ಜೇನುಕೃಷಿ, ಕಾಳುಮೆಣಸು, ಹೈನುಗಾರಿಕೆ ಮೊದಲಾದ ವಿಷಯಗಳಲ್ಲಿ ನಿರಂತರ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತದೆ. ಕೃಷಿ ಪ್ರವಾಸಗಳ ಮೂಲಕ ಅನುಭವಿ ರೈತರ ತೋಟಗಳಿಗೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸುತ್ತದೆ. ಹೊಸ ತಂತ್ರಜ್ಞಾನ, ಮೌಲ್ಯವರ್ಧನೆ, ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳ ಕುರಿತು ತಜ್ಞರಿಂದ ಮಾಹಿತಿ ಕೊಡಿಸುತ್ತದೆ. ತರಕಾರಿ ಕೃಷಿಯ ಕುರಿತು ಕೈಪಿಡಿಯನ್ನು ಪ್ರಕಟಿಸಿದೆ. ಕೃಷಿಗೆ ಸಂಬಂಧಿಸಿದ ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆಯಲ್ಲಿಯೂ ತೊಡಗಿಸಿಕೊಂಡಿದೆ. ಹೀಗೆ ನೋಡಿದರೆ ಈ ಸಂಸ್ಥೆ ರೈತನಿಗೆ ವಸ್ತುಗಳನ್ನು ಮಾರುವ ವ್ಯಾಪಾರ ಕೇಂದ್ರವಷ್ಟೇ ಅಲ್ಲ; ಕೃಷಿಯ ಕುರಿತು ಕಲಿಯಲು, ಹೊಸ ವಿಧಾನಗಳನ್ನು ತಿಳಿಯಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ನೆರವಾಗುವ ಒಂದು ಸ್ಥಳವೂ ಹೌದು.
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ರೈತರಿಗೆ ಎಲ್ಲ ಯಂತ್ರಗಳನ್ನೂ ಸ್ವಂತ ಹಣದಲ್ಲಿ ಖರೀದಿಸುವುದು ಸುಲಭವಲ್ಲ. ಅಡಿಕೆ ಕೊಯ್ಲಿಗೆ ಕಾರ್ಬನ್ ಫೈಬರ್ ದೋಟಿ, ಔಷಧ ಸಿಂಪಡಣೆಗೆ ಬೇಕಾದ ಉಪಕರಣ, ಭತ್ತ ಒಕ್ಕುವ ಯಂತ್ರ, ಹುಲ್ಲು ಕೊಚ್ಚುವ ಯಂತ್ರ, ಸೊಪ್ಪು ಕೊಚ್ಚುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ತೋಟದಲ್ಲಿ ಗುಂಡಿ ತೆಗೆಯಲು ಮತ್ತು ಇತರ ಕೆಲಸಗಳಿಗೆ ಬಳಸಬಹುದಾದ ಮಿನಿ ಹಿಟಾಚಿ ಮೊದಲಾದ ಯಂತ್ರಗಳನ್ನು ಬಾಡಿಗೆಗೆ ಪಡೆಯುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಇಂತಹ ವ್ಯವಸ್ಥೆಯ ನಿಜವಾದ ಪ್ರಯೋಜನವನ್ನು ಕೃಷಿ ಮಾಡುವವರಲ್ಲಿ ಕೇಳಬೇಕು. ‘‘ಒಂದು ಯಂತ್ರವನ್ನು ವರ್ಷದಲ್ಲಿ ಕೆಲವೇ ದಿನ ಬಳಸಬೇಕಾದ ನನ್ನಂಥ ರೈತ ಅದನ್ನು ಖರೀದಿಸಿ ಸಾಲದ ಹೊರೆ ಹೊರುವ ಬದಲು, ಅಗತ್ಯವಿದ್ದಾಗ ಬಾಡಿಗೆಗೆ ಪಡೆದು ಕೆಲಸ ಮುಗಿಸಬಹುದು. ಯಂತ್ರದ ಖರೀದಿ ವೆಚ್ಚ, ದುರಸ್ತಿ ಮತ್ತು ನಿರ್ವಹಣೆಯ ಹೊರೆ ಕಡಿಮೆಯಾಗುತ್ತದೆ. ಸಣ್ಣ ರೈತನಿಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಲು ಸಾಧ್ಯವಾಗುತ್ತದೆ. ಕೃಷಿಯ ಯಾಂತ್ರೀಕರಣವೆಂದರೆ ದೊಡ್ಡ ರೈತರಿಗೆ ಮಾತ್ರ ಸಿಗುವ ಸವಲತ್ತಾಗಬಾರದು; ಅದನ್ನು ಸಾಮಾನ್ಯ ರೈತನಿಗೂ ಕೈಗೆಟಕುವಂತೆ ಮಾಡಬೇಕು. ಸಹಕಾರಿ ಸಂಸ್ಥೆಯ ಇಂತಹ ಪ್ರಯತ್ನಗಳಲ್ಲಿ ಗ್ರಾಮೀಣ ಅಭಿವೃದ್ಧಿಯ ಒಂದು ಮುಖ್ಯ ದಾರಿಯಿದೆ’’ ಎನ್ನುತ್ತಾರೆ ಸ್ಥಳೀಯ ಕೃಷಿಕ ಬಳಕೆದಾರ ಭೈರುಂಬೆಯ ಕೆ.ಎಂ. ಹೆಗಡೆ.
ಕೃಷಿಯಲ್ಲಿ ಬೆಳೆ ಬೆಳೆಸುವುದಷ್ಟೇ ಆದಾಯವಲ್ಲ; ಅದರ ಸಂಸ್ಕರಣೆ, ಮೌಲ್ಯವರ್ಧನೆ, ಸಂಗ್ರಹ ಮತ್ತು ಮಾರಾಟಗಳೂ ಕೃಷಿಯ ಭಾಗವೇ ಆಗಿವೆ ಎಂಬ ತಿಳಿವಳಿಕೆಯನ್ನು ಈ ಸಂಸ್ಥೆ ನಿರಂತರ ಬೆಳೆಸಿದೆ. ಸಂಸ್ಥೆಯ ಒಳಗಡೆ ರೈತ ಮಹಿಳೆಯರು ತಮ್ಮ ಮನೆಯಲ್ಲಿ ಉತ್ಪಾದಿಸುವ ಚಿಪ್ಸು, ಹಪ್ಪಳ, ತರಕಾರಿ, ತುಪ್ಪ, ಜೇನು ಮುಂತಾದವುಗಳನ್ನು ತಂದು ಮಾರಾಟ ಮಾಡಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ‘‘ನಾವೇ ಅವುಗಳನ್ನು ಮಾರಿ ಸದಸ್ಯರ ಖಾತೆಗೆ ಹಣ ಜಮೆ ಮಾಡುತ್ತೇವೆ’’ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಹೆಗಡೆ. ಇವರು ಸಂಸ್ಥೆಯ ನಿಷ್ಠಾವಂತ ಬುನಾದಿ. ನಯಾಪೈಸೆ ಗೌರವ ಸಂಭಾವನೆ ಪಡೆಯದೇ 25 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಷ್ಠೆಯಿಂದ ಅಧ್ಯಕ್ಷರಾಗಿ ದುಡಿದ ಸಜ್ಜನರು. ಇವರ ಪ್ರಾಮಾಣಿಕತೆ ಪಾಯದ ಮೇಲೆಯೇ ಇಡೀ ಸಂಸ್ಥೆ ಪಾರದರ್ಶಕವಾಗಿ ಬೆಳೆಯುತ್ತಲೇ ಇದೆ. ಎರಡನೆಯ ಮನೆಯಂತೆ ಪ್ರತಿದಿನ ಸಂಜೆ ಸೊಸೈಟಿಯ ಕಚೇರಿಗೆ ಹಾಜರಾಗಿ ರಾತ್ರಿ ಎಂಟು ಗಂಟೆಯವರೆಗೆ ಉಳಿದು ಆಡಳಿತ ಮಂಡಳಿಯ ಸದಸ್ಯರು, ರೈತಾಪಿಗಳಲ್ಲಿ ಸದಾ ಚರ್ಚಿಸುತ್ತಾ ಗ್ರಾಮವಾಸಿಗಳು ಬಯಸಿ ಬರುವ ಹೊಸ ಅಗತ್ಯಗಳನ್ನು ಈಡೇರಿಸುವ ಉದ್ದೇಶ ಅವರಿಂದ ನಿರಂತರ ಚಾಲ್ತಿಯಲ್ಲಿದೆ.
ಈ ಸಹಕಾರಿ ಸಂಸ್ಥೆಯ ನಿಜವಾದ ಶಕ್ತಿ ಸಾಲಾಗಿ ನಿಂತ ಗೋದಾಮಿನಲ್ಲಿರುವ ವಸ್ತುಗಳಲ್ಲಾಗಲಿ, ಆವರಣದಲ್ಲಿರುವ ವಾಹನಗಳಲ್ಲಾಗಲಿ ಕಚೇರಿ ಸಿಬಂದಿಯ ಪ್ರಾಮಾಣಿಕ ಸೇವೆಯೆಲ್ಲಾಗಲಿ ಮಾತ್ರ ಇರುವುದಿಲ್ಲ. ಸದಸ್ಯರನ್ನು ತನ್ನ ಕುಟುಂಬದ ಭಾಗವನ್ನಾಗಿಸಿ ಅವರ ಬದುಕಿನ ಸುಖದುಃಖಗಳಲ್ಲಿ ಎಷ್ಟರಮಟ್ಟಿಗೆ ಭಾಗಿಯಾಗುತ್ತದೆ ಎನ್ನುವುದರಲ್ಲಿಯೂ ಇರುತ್ತದೆ. ಹುಳಗೋಳ ಸೊಸೈಟಿಯ ‘ಮಹಾಪ್ರಸ್ಥಾನ’ ಯೋಜನೆ ಇಂತಹ ಮಾನವೀಯ ಸಂಬಂಧಕ್ಕೆ ಒಂದು ಉದಾಹರಣೆ. ಸಂಸ್ಥೆಯ ಸದಸ್ಯರಲ್ಲಿ ಯಾರಾದರೂ ಮೃತಪಟ್ಟರೆ, ಅವರು ಯಾವುದೇ ಜಾತಿ, ಧರ್ಮ ಅಥವಾ ಮತಕ್ಕೆ ಸೇರಿದವರಾಗಿದ್ದರೂ ಅಧ್ಯಕ್ಷರಾದಿಯಾಗಿ ಸಂಘದ ಪ್ರತಿನಿಧಿಗಳು ಅವರ ಮನೆಗೆ ತೆರಳಿ ಕುಟುಂಬಕ್ಕೆ ಹತ್ತು ಸಾವಿರ ರೂ.ಗಳ ನೆರವು ನೀಡಿ ಸಾಂತ್ವನ ಹೇಳುತ್ತಾರೆ. ಸಾವಿನ ಸಂದರ್ಭದಲ್ಲಿ ಹಣದ ನೆರವು ದೊಡ್ಡ ಮೊತ್ತವಾಗಿರಬೇಕೆಂದೇನಿಲ್ಲ; ಆ ಹೊತ್ತಿನಲ್ಲಿ ನಮ್ಮ ಜೊತೆಯಲ್ಲಿ ನಿಲ್ಲುವವರು ಇದ್ದಾರೆ ಎಂಬ ಭರವಸೆಯೇ ಕುಟುಂಬಕ್ಕೆ ಮುಖ್ಯವಾಗುತ್ತದೆ. ಸದಸ್ಯರ ಮತ್ತು ಅವರ ಕುಟುಂಬದ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಆಸ್ಪತ್ರೆಯ ವೆಚ್ಚದಲ್ಲಿ ಭಾಗಶಃ ನೆರವು ನೀಡುವ ‘ಸುರಕ್ಷಾ ನಿಧಿ’ಯೂ ಇದೆ. ದಿನಸಿ ಮತ್ತು ಜವಳಿ ಮಾರಾಟದ ಮೇಲೆ ಸದಸ್ಯರಿಗೆ ವಾರ್ಷಿಕ ರಿಯಾಯಿತಿ ನೀಡುವ, ವರ್ಷವಿಡೀ ಸಣ್ಣಪುಟ್ಟ ಖರೀದಿಗಳ ಮೇಲೆ ದೊರೆಯುವ ಇಂತಹ ರಿಯಾಯಿತಿಗಳು ಕುಟುಂಬದ ಖರ್ಚಿನಲ್ಲಿ ಉಳಿತಾಯಕ್ಕೆ ದಾರಿಯಾಗುತ್ತವೆ.
ಗ್ರಾಮೀಣ ಬದುಕಿನಲ್ಲಿ ಸಮಯ ಮತ್ತು ಹಣ ಎರಡೂ ಮುಖ್ಯ. ಅದರಲ್ಲೂ ದಿನಗೂಲಿ ಕೆಲಸ ಮಾಡುವವರು, ಕೃಷಿ ಕೆಲಸದಲ್ಲಿ ತೊಡಗಿರುವವರು, ವಯಸ್ಸಾದವರು ಮತ್ತು ವಾಹನ ಸೌಲಭ್ಯ ಕಡಿಮೆ ಇರುವ ಕುಟುಂಬಗಳಿಗೆ ಒಂದು ಸಣ್ಣ ಕೆಲಸಕ್ಕಾಗಿ ಪೇಟೆಗೆ ಹೋಗಿ ಬರುವುದು ಕೂಡ ದೊಡ್ಡ ತೊಂದರೆಯಾಗಬಹುದು. ಈ ಸಂಗತಿಯನ್ನು ಅರ್ಥಮಾಡಿಕೊಂಡಿರುವ ಸಂಸ್ಥೆ ವಿದ್ಯುತ್ ಬಿಲ್, ದೂರವಾಣಿ ಬಿಲ್, ಪಂಚಾಯತ್ ತೆರಿಗೆ, ಡಿಶ್ ಟಿ.ವಿ. ಶುಲ್ಕ, ವಾಹನ ವಿಮೆ ಸೇರಿದಂತೆ ವಿವಿಧ ಪಾವತಿಗಳಿಗೆ ನೆರವಾಗುತ್ತದೆ. ಸಾರ್ವಜನಿಕರ ವಾಹನಗಳ ವಿಮೆ ಮಾಡಿಸುವ ವ್ಯವಸ್ಥೆಯೂ ಇದೆ. ಪಹಣಿ ಪತ್ರಿಕೆಗೆ ಸಂಬಂಧಿಸಿದ ಕೆಲವು ಕೆಲಸಗಳಿಗೆ ನೆರವು ದೊರೆಯುತ್ತದೆ. ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಅವಕಾಶವಿದೆ. ಬ್ಯಾಂಕ್ ಖಾತೆ ಹೊಂದಿರುವ ಸದಸ್ಯರಿಗೆ ಪ್ರಧಾನಮಂತ್ರಿ ವಿಮಾ ಯೋಜನೆ ಮತ್ತು ಅಪಘಾತ ವಿಮಾ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತುಂಬಲು ಸಹಾಯ ಮಾಡಲಾಗುತ್ತದೆ. ಕಾಡಿನ ನಡುವಿನ ಊರುಗಳಲ್ಲಿ ಮದುವೆ, ಮುಂಜಿ ಮತ್ತು ಇತರ ಕೌಟುಂಬಿಕ ಧಾರ್ಮಿಕ ಸಾಮಾಜಿಕ ಸಮಾರಂಭಗಳೂ ನಡೆಯುವಾಗ ಅವುಗಳಿಗೆ ಬೇಕಾದ ಜಮಖಾನೆ, ಪೆಂಡಾಲ್, ಕುರ್ಚಿ ಮತ್ತು ಅಡುಗೆ ಪಾತ್ರೆಗಳನ್ನು ಮಿತವಾದ ಬಾಡಿಗೆಗೆ ಒದಗಿಸುವ ವ್ಯವಸ್ಥೆಯೂ ಇಲ್ಲಿದೆ. ಜಾನುವಾರುಗಳ ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ಸೇವೆಗಳೂ ದೊರೆಯುತ್ತವೆ. ಸದಸ್ಯರು ತಮ್ಮ ಚಿನ್ನ, ಬೆಳ್ಳಿ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸೇಫ್ ಲಾಕರ್ಗಳ ವ್ಯವಸ್ಥೆ ಮಾಡಲಾಗಿದೆ. ಹೀಗೆ ಒಂದು ಕುಟುಂಬದ ಕೃಷಿಯಿಂದ ಹಿಡಿದು ಮನೆಯ ಸಮಾರಂಭದವರೆಗೆ, ಹಣಕಾಸಿನ ವ್ಯವಹಾರದಿಂದ ಹಿಡಿದು ದಾಖಲೆಗಳ ಸುರಕ್ಷತೆಯವರೆಗೆ ಅನೇಕ ಅಗತ್ಯಗಳೊಂದಿಗೆ ಸಂಸ್ಥೆ ಬೆಸೆದುಕೊಂಡಿದೆ. ‘‘ಕೃಷಿ ಕಳಚಿಕೊಂಡ ಯುವಕರ ನಗರ ವಲಸೆ, ಹಳ್ಳಿ ಮನೆ ವೃದ್ಧಾಶ್ರಮವಾಗುತ್ತಿರುವುದನ್ನು ತಪ್ಪಿಸಲು ಮುಂದೊಂದು ದಿನ ವೃದ್ಧಾಶ್ರಮವನ್ನು ಸಾಂಘಿಕವಾಗಿ ಸಂಸ್ಥೆಯೇ ನಡೆಸಬೇಕೆನ್ನುವ ಸಲಹೆಯನ್ನು ಮಾನ್ಯ ಮಾಡುವ ದಿನವೂ ಬರಬಹುದು’’ ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಹೆಗಡೆ. ಒಬ್ಬ ಸದಸ್ಯನಿಗೆ ಏನು ಬೇಕಾಗಬಹುದು ಎಂಬುದನ್ನು ಅರಿತುಕೊಂಡು, ಆ ಅಗತ್ಯವನ್ನು ಪೂರೈಸಲು ಒಂದೊಂದೇ ಸೇವೆಯನ್ನು ರೂಪಿಸಿಕೊಂಡಿರುವುದು ಈ ಸಂಸ್ಥೆಯ ಕಾರ್ಯವೈಖರಿಯ ವಿಶೇಷತೆ.
ಸಂಸ್ಥೆ ಕೇವಲ ವಸ್ತುಗಳನ್ನು ಪೂರೈಸುವುದು ಮತ್ತು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು ಮಾತ್ರವಲ್ಲ, ಗ್ರಾಮದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಸಂಬಂಧಗಳೂ ಬೆಳೆಯಬೇಕು ಎಂಬ ಆಶಯವೂ ಅದರ ಕಾರ್ಯಗಳಲ್ಲಿ ಕಾಣಿಸುತ್ತದೆ. ತನ್ನ ವ್ಯಾಪ್ತಿಯ ಶಾಲೆಗಳ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಹಿರಿಯ ಸದಸ್ಯರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಂಸ್ಥೆ ನಿರಂತರ ಮಾಡುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸಾಲದ ನೆರವು ನೀಡುತ್ತದೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ಈ ಸಂಸ್ಥೆಯಿಂದ ಸಾಲದ ನೆರವು ಪಡೆದ ವಿದ್ಯಾರ್ಥಿಗಳೂ ಇದ್ದಾರೆ ಎಂಬುದು ಗಮನಾರ್ಹ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬನಿಗೆ ಉನ್ನತ ಶಿಕ್ಷಣದ ಕನಸು ಕಾಣಲು ಸಾಧ್ಯವಾಗುವುದು ಒಂದು ಸಂಗತಿ; ಆ ಕನಸನ್ನು ನನಸಾಗಿಸಲು ತನ್ನ ಊರಿನ ಸಂಸ್ಥೆಯೇ ಬೆಂಬಲವಾಗಿ ನಿಲ್ಲುವುದು ಮತ್ತೊಂದು ಸಂಗತಿ. ಊರು ಬಿಟ್ಟು ಹೊರಗೆ ಹೋಗಿ ಓದಿದ ಯುವಕನಿಗೂ ತನ್ನ ಊರಿನೊಂದಿಗೆ ಸಂಬಂಧ ಉಳಿಯುತ್ತದೆ. ಈ ಸಂಬಂಧವೇ ಗ್ರಾಮೀಣ ಸಂಸ್ಥೆಯ ಸಾಮಾಜಿಕ ಬಂಡವಾಳ.
ಸಂಸ್ಥೆಯ ಆವರಣದಲ್ಲಿ ಸುಂದರವಾದ ಸಭಾಭವನವಿದೆ. ಯಕ್ಷಗಾನ, ತಾಳಮದ್ದಳೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರೈತರಿಗಾಗಿ ಚಲನಚಿತ್ರ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತದೆ. ಈ ಚಟುವಟಿಕೆಗಳನ್ನು ಕೇವಲ ಸಂಸ್ಥೆಯ ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸಗಳೆಂದು ನೋಡಲು ಸಾಧ್ಯವಿಲ್ಲ. ಗ್ರಾಮದಲ್ಲಿ ಜನರು ಒಂದೆಡೆ ಸೇರುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪರಸ್ಪರರ ಬದುಕನ್ನು ಅರಿಯುವ ಅವಕಾಶಗಳಿವು. ಒಂದು ಸಹಕಾರಿ ಸಂಸ್ಥೆಯ ಸದಸ್ಯರು ವರ್ಷದಲ್ಲಿ ಒಂದೆರಡು ಬಾರಿ ಸಭೆಯಲ್ಲಿ ಭೇಟಿಯಾಗುವುದಕ್ಕಿಂತಲೂ, ಇಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಭೇಟಿಯಾಗುವುದು ಅವರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಬಹುದು. ಸಹಕಾರದ ಭಾವನೆ ಲೆಕ್ಕಪತ್ರಗಳಲ್ಲಿ ಮಾತ್ರ ಬೆಳೆಯುವುದಿಲ್ಲ; ಒಬ್ಬರನ್ನೊಬ್ಬರು ಅರಿತುಕೊಳ್ಳುವ ದೈನಂದಿನ ಬದುಕಿನಲ್ಲಿಯೂ ಬೆಳೆಯುತ್ತದೆ.
ಇಷ್ಟೊಂದು ಸೇವೆಗಳನ್ನು ನಡೆಸುವುದು ಕೇವಲ ಒಬ್ಬ ಅಧ್ಯಕ್ಷರ ಅಥವಾ ಕಾರ್ಯದರ್ಶಿಯ ಕೆಲಸದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ಪರಸ್ಪರ ನಂಬಿಕೆ ಬರಬೇಕು. ಸದಸ್ಯರಿಗೆ ಸಂಸ್ಥೆ ತಮ್ಮದೇ ಎಂಬ ಭಾವನೆ ಹುಟ್ಟಬೇಕು. ಸಂಸ್ಥೆಯ ಆಡಳಿತಕ್ಕೆ ಸದಸ್ಯರ ಬದುಕಿನ ಅಗತ್ಯಗಳ ಅರಿವಿರಬೇಕು. ಈ ಎರಡೂ ಒಂದಾದಾಗ ಮಾತ್ರ ಸಹಕಾರಿ ಸಂಸ್ಥೆ ತನ್ನ ಉದ್ದೇಶವನ್ನು ಮೀರಿ ಒಂದು ಊರಿನ ಬದುಕಿನ ಭಾಗವಾಗಲು ಸಾಧ್ಯ.
(ಅಂಕಣಕಾರರು: ಉಪನ್ಯಾಸಕರು, ಚಿಂತಕರು)






