ಜಾತಿ ಬುಗ್ಗೆ: ಹಕ್ಕಿನ ಹೋರಾಟವೋ, ಅಂಟಿನ ಬಲೆಯೋ?

ಪಂಪ ‘‘ಮನುಜರೆಲ್ಲಾ ಒಂದೇ’’ ಎಂದು ಘೋಷಿಸಿದ ಕನಸು ಇಂದು ‘‘ನಮ್ಮ ಜಾತಿಯ ಸಂಖ್ಯೆ ಎಷ್ಟು?’’ ಎಂಬ ತಾಕಲಾಟದಲ್ಲಿ ಬಿದ್ದುಹೋಗಿದೆಯೇ? ಬಹುಶಃ, ಎರಡೂ ಸತ್ಯವಾಗಿರಬಹುದು. ಜಾತಿ ನಿರ್ಮೂಲದ ಕನಸು ಒಂದು ಆದರ್ಶ; ಜಾತಿಗಣತಿಯ ಹೋರಾಟ ಒಂದು ವಾಸ್ತವ. ಕನಸುಗಳನ್ನು ಬಿಟ್ಟು ವಾಸ್ತವದ ಹಾದಿಯಲ್ಲಿ ನಡೆದರೂ, ಕನಸುಗಳನ್ನು ಮರೆಯಬಾರದು. ಇಲ್ಲವಾದರೆ, ನಾವು ಕೇವಲ ಸಂಖ್ಯೆಗಳ ಗುಂಪಾಗಿಬಿಡುತ್ತೇವೆ, ಮಾನವರಾಗಿ ಅಲ್ಲ.
ಚಿನ್ನದಂಗಡಿ, ಬಟ್ಟೆಯಂಗಡಿ, ಗೊಬ್ಬರದಂಗಡಿ, ಅಡಿಕೆಯಂಗಡಿ ಮುಂತಾದ ಕಡೆಯಿಂದ ನನ್ನ ಮೊಬೈಲ್ಗೆ ದಿನಕ್ಕೆ ಕನಿಷ್ಠ ಐದಾರು ಮೆಸೇಜ್ಗಳು ಬಂದೇ ಬರುತ್ತವೆ. ಈ ಸರಣಿಗೆ ಈ ವಾರ ಸೇರಿಕೊಂಡ ಹೊಸ ಸಂದೇಶ ನನ್ನ ಜಾತಿಯ ಮುಖ್ಯಸ್ಥರದು. ‘‘ನಿಮ್ಮ ಮನೆಗೆ ಜಾತಿ ಸಮೀಕ್ಷೆಗೆ ಬರುವ ಗಣತಿದಾರರಿಗೆ ನೀವು ಈ ಕ್ರಮದಲ್ಲೇ ಮಾಹಿತಿಯನ್ನು ಕೊಡಬೇಕು, ಕಡ್ಡಾಯವಾಗಿ ಹೀಗೆಯೇ ಜಾತಿಯನ್ನು ನಮೂದಿಸಬೇಕು’’ ಎನ್ನುವುದು.
ನಾನೊಬ್ಬ ಸರಕಾರಿ ಅಧಿಕಾರಿಯಾಗಿದ್ದವ. ಇಂತಹ ಜನಗಣತಿ, ಜಾತಿಗಣತಿ, ಚುನಾವಣೆಗಳ ಸಂದರ್ಭದಲ್ಲಿ ನಮಗೆಲ್ಲ ಸರಕಾರದ ವತಿಯಿಂದ ಒಂದೆರಡು ತರಬೇತಿಗಳು ನಡೆಯುತ್ತಿದ್ದವು. ಅಧಿಕಾರಿಗಳಿಗೆ ಅಧಿಕಾರಿಗಳೇ ನೀಡುವ ಮಾಹಿತಿ ನಿರ್ದೇಶನಗಳವು.
ವಿಶೇಷವೆಂದರೆ ಈ ಬಾರಿ ಮಾಹಿತಿ ಪಡೆಯುವವರಿಗಷ್ಟೇ ಅಲ್ಲ ಮಾಹಿತಿ ಕೊಡುವವರಿಗೂ ಆಯಾಯ ಸಮಾಜದ ಜಾತಿ ಮುಖಂಡರಿಂದ ತರಬೇತಿಗಳಾಗುತ್ತಿವೆ, ಪತ್ರಿಕೆಗಳಲ್ಲಿ ಇಡೀ ಪುಟದ ಜಾಹೀರಾತು ಪ್ರಕಟವಾಗುತ್ತಿದೆ. ಜನರನ್ನು ಒಟ್ಟು ಸೇರಿಸಿ ಕಟ್ಟುನಿಟ್ಟಾಗಿ ನಿರ್ದೇಶನ ಕೊಡುತ್ತಿದ್ದಾರೆ. ಇದರ ಪರಿಣಾಮವೇ ಈ ವಾರ ನಮ್ಮ ಮೊಬೈಲ್ಗೆ ಬರುವ ಜಾತಿ ಸಂಘದ ಇಂಥ ಪಾಲನಾ ಸೂಚನೆಗಳು.
ಜಾತಿಯ ಮುಖ್ಯಸ್ಥರೆಲ್ಲ ಸಮಾವೇಶಗಳನ್ನು ನಡೆಸಿ ‘ನೀವು ಹೀಗೆಯೇ ಮಾಹಿತಿಯನ್ನು ಕೊಡಬೇಕು’ ಎಂದು ನಿರ್ಬಂಧಿಸುವ ಹೊಸ ಕ್ರಮ ಮುಂದಿನ ಗಣತಿ ಸಂದರ್ಭದಲ್ಲಿ ಮತ್ತಷ್ಟು ಬಿಗಡಾಯಿಸುವುದು ನಿಶ್ಚಿತ.
ಅದರಲ್ಲೂ ಜಾತಿ, ಧರ್ಮ, ಮತಗಳ ಗೋಡೆಗಳನ್ನು ಮುರಿಯುವ ವಚನ, ಕೀರ್ತನೆ, ತತ್ವಪದಗಳನ್ನು ಬರೆದ ಶರಣ ಸಂತ ದಾಸಶ್ರೇಷ್ಠರ ಸಮುದಾಯದಲ್ಲೇ ಇಂತಹ ಜಾತಿವಾರು ಮಾಹಿತಿ ಶಿಬಿರಗಳು ನಡೆಯುತ್ತಿರುವುದು ಗಮನೀಯ. ಸಾಂಸ್ಕೃತಿಕ ಸಭೆ ಸಮಾರಂಭಗಳಲ್ಲಿ ಇಂಥ ವಚನಗಳನ್ನು ಜಾತ್ಯತೀತ ಪ್ರತಿಪಾದನೆಯ ಆಶಯವೆಂದು ಪ್ರತಿಪಾದಿಸುವ ಜಾತಿ ಪ್ರಮುಖರೇ, ಮಠ ಮುಖ್ಯಸ್ಥರೇ ಈಗ ಜಾತಿವಾರು ಸಂಘಟನೆಗಳ ನಾಯಕತ್ವ ವಹಿಸಿರುವುದು ನನಗಂತೂ ವಿಚಿತ್ರವಾಗಿ ಕಾಣಿಸುತ್ತಿದೆ. ಪದೇ ಪದೇ ‘‘ಇವನಾರವ ಇವನಾರವ..’’ ಎನ್ನುವವರೊಬ್ಬರು ಈಗ ‘‘ಇವ ನಮ್ಮವ ಇವ ನಮ್ಮವ..’’ ಎನ್ನುವ ಜಾತಿ ಅಂಟಿನಲ್ಲಿ ಸಮಾಜ ಜೋಡಣೆಗೆ ಬೆಸುಗೆ ಹಾಕುತ್ತಿದ್ದಾರೆ! ಮುಂದೆ ಚುನಾವಣೆಗೆ ನಿಲ್ಲುವವರು, ನಿಲ್ಲಿಸುವವರು, ಗೆಲ್ಲುವವರು, ಸೋಲುವವರು ಎಲ್ಲರೂ ಈಗ ಜಾತಿಗಣತಿಯ ಶಿಬಿರಗಳ ಸಂಚಾಲಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಿಯಾಶೀಲರಾಗಿದ್ದಾರೆ.
ನಮ್ಮ ಪ್ರಭುತ್ವವೂ ಹಾಗೆಯೇ. ಎಲ್ಲರ ಕೈಗೆ ಒಂದೊಂದು ಬುಗ್ಗೆ ಕೊಟ್ಟು ನಿಮ್ಮ ನಿಮ್ಮ ಶಕ್ತಿಗೆ ಅನುಸಾರ ಅದರ ಒಳಗಡೆ ಉಸಿರು ತುಂಬಿಸಿ ಹಿಗ್ಗಿಸಿ ಪ್ರದರ್ಶಿಸಿ ಎಂದು ಜಾತಿಗಳನ್ನು ಒಂದೇ ಸಾಲಲ್ಲಿ ನಿಲ್ಲಿಸಿದೆ. ಗಾಳಿ ತುಂಬಿಸುವ ಸ್ಪರ್ಧೆಯಲ್ಲಿ ತಮ್ಮದು ಎಲ್ಲರಿಗಿಂತ ದೊಡ್ಡದಾಗಿ ಕಾಣಿಸುವ ಹಾಗೆ ಕೆಲವರು ಊದಿ ಊದಿ ಉಸಿರು ಕಳೆದು ಸಾಯುವ ಹಾಗೆ ಬೇಲೂನನ್ನು ಹಿಗ್ಗಿಸುತ್ತಿದ್ದಾರೆ. ಪಕ್ಕದವ ತನ್ನ ಬೇಲೂನಿಗೆ ಗಾಳಿ ತುಂಬಿಸುತ್ತಾ ಇನ್ನೊಬ್ಬನ ಬುಗ್ಗೆ ಬೇಗ ಸಿಡಿಯಲೆಂದು ಪ್ರಾರ್ಥಿಸುತ್ತಿದ್ದಾನೆ! ಗಾಳಿಯು ನಿಲ್ಲಬೇಕು, ಸಿಡಿಯಲೂ ಬಾರದು, ದಾರಕಟ್ಟಿ ಎತ್ತರಕ್ಕೆ ಹಾರಿಬಿಟ್ಟಾಗ ಅದು ಎಲ್ಲರಿಗಿಂತ ಮೇಲೇರಬೇಕೆನ್ನುವ ಸ್ಪರ್ಧೆಯಲ್ಲಿ ಎಲ್ಲರೂ ಈಗ ಮೈದಾನಕ್ಕಿಳಿದಿದ್ದಾರೆ.
ಮೊನ್ನೆ ಮೊನ್ನೆ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿಂದ ಕೆಳಗಡೆಯ ಹಸಿರು ನೋಡಿ ನಮ್ಮ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮೇಡಂ ಹೇಳಿದಂತೆ ಈ ಆಕಾಶ, ಕಾಡು, ಇಲ್ಲಿ ಹಾರುವ ಬದುಕುವ ಹಕ್ಕಿಗಳೆಲ್ಲ ಒಂದೊಂದು ರೀತಿ ಹಾಡುವ ವೈವಿಧ್ಯಮಯ ರಾಗಗಳ ಸಂಮಿಳಿತ ಸೌಂದರ್ಯದಂತೆ ಈ ದೇಶಕ್ಕೆ ಇಷ್ಟೊಂದು ಜಾತಿ, ಧರ್ಮ, ಭಾಷೆ, ಬುಡಕಟ್ಟು, ಸಂಸ್ಕೃತಿ ಇವೆಲ್ಲವೂ ಭೂಷಣವೂ ಹೌದು. ವೈವಿಧ್ಯತೆಯ ಮೇಳ ಮೆರವಣಿಗೆಯೂ ಹೌದು. ಪ್ರತೀ ಜಾತಿಗೂ ತನ್ನದೇ ಸಂಪ್ರದಾಯ, ಉಡುಪು, ಆಹಾರ, ಹಬ್ಬ, ನಂಬಿಕೆ, ವೃತ್ತಿ, ಕಲೆ, ಸಾಹಿತ್ಯ... ಈ ವೈವಿಧ್ಯ ಖಂಡಿತ ಭರತಭೂಮಿಗೆ ಸೊಬಗು ತಂದಿದೆ. ಹಾಗಾಗಿಯೇ ನಮ್ಮ ದೇಶವನ್ನು ವಿವಿಧತೆಯಲ್ಲಿ ಏಕತೆ ಎಂದು ಹೆಮ್ಮೆಪಟ್ಟು ಹೇಳುತ್ತೇವೆ.
ಆದರೆ ಮತ್ತೊಂದು ಕಡೆಯಿಂದ ನೋಡಿದರೆ, ಇದೇ ವಿವಿಧತೆಯನ್ನು ಕೆಲವರು ಅಸಮಾನತೆ, ಹಕ್ಕು ಕಸಿದುಕೊಳ್ಳುವ ಸಾಧನವನ್ನಾಗಿ ಬಳಸಿಕೊಂಡಿದ್ದಾರೆ. ಜಾತಿ ಹೆಸರಿನಲ್ಲಿ ಕೆಲವರಿಗೆ ವಿಶೇಷ ಹಕ್ಕುಗಳು, ಕೆಲವರಿಗೆ ನಿರಾಕರಣೆ, ಕೆಲವರಿಗೆ ದೇವಾಲಯದ ಒಳಗೆ ಪ್ರವೇಶ, ಮತ್ತೊಬ್ಬರಿಗೆ ನಿರ್ಬಂಧ, ಕೆಲವರು ಶಿಕ್ಷಣ-ಆಸ್ತಿ-ಅವಕಾಶಗಳಲ್ಲಿ ಮೇಲಕ್ಕೆ ಏರಿದರೆ, ಇನ್ನೂ ಹಲವರು ಕುಸಿದು ಅಡಗಿಹೋದರು. ಅದರರ್ಥ, ಭಾರತದಲ್ಲಿ ಜಾತಿಗಳ ಅಸ್ತಿತ್ವ ತಪ್ಪಲ್ಲ; ಅದನ್ನು ನಾವು ಸೌಂದರ್ಯವಾಗಿ ನೋಡಬೇಕೋ ಅಥವಾ ಅಸಮಾನತೆ ಬೆಳೆಸುವ ಸಾಧನವನ್ನಾಗಿ ನೋಡಬೇಕೋ ಅನ್ನುವುದು ನಮ್ಮ ಸಾಮಾಜಿಕ ಬುದ್ಧಿಗೆ ಅವಲಂಬಿತವಾದುದು.
ಬಹಳ ವರ್ಷಗಳ ಹಿಂದೆ ಆಗ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಹಾವನೂರರು ಸಾರ್ವಜನಿಕ ಭಾಷಣ ಒಂದರಲ್ಲಿ ಜಾತಿಗಳು ಶಾಶ್ವತ ಹಾಗೂ ಸೂರ್ಯಚಂದ್ರ ಇರುವವರೆಗೂ ಇರುತ್ತವೆ ಎಂಬ ಹೇಳಿಕೆ ಕೊಟ್ಟಿದ್ದರು. ಅವರ ಮಾತು ಮತ್ತೆ ಮತ್ತೆ ನಿಜವಾಗುತ್ತಿದೆ. ಜಾತಿ ಬಿಡಬೇಕೆಂದು ಬಯಸಿದವರಿಗೂ ಜಾತಿ ಅಂಟಿಕೊಳ್ಳುವ ಹಾಗೆ ಇಲ್ಲಿಯ ರಾಜಕೀಯ ವ್ಯವಸ್ಥೆ ಪ್ರೇರೇಪಿಸುತ್ತಿದೆ. ಮತ್ತೆ ಮತ್ತೆ ಬರುವ ಚುನಾವಣೆಗಳಲ್ಲಿ ಎಷ್ಟೋ ರಾಜಕೀಯ ಪಕ್ಷಗಳಿಗೆ ಈ ದೇಶದ ಜಾತಿ ವ್ಯವಸ್ಥೆಯೇ ಬಂಡವಾಳವಾಗುತ್ತಿದೆ.
ಗಣತಿಯಿಂದ ಗಣತಿಗೆ ಅಥವಾ ಜಾತಿ ಮೀಸಲಾತಿಗೆ ಸಂಬಂಧಿಸಿದ ಆಯೋಗಗಳನ್ನು ರಚಿಸುವ ಸಂದರ್ಭಗಳಲ್ಲಿ ಎಲ್ಲ ಜಾತಿಯವರು ತಾವು ಬೇರೆಯವರಿಗಿಂತ ಹೆಚ್ಚು ಹಿಂದುಳಿದವರು, ಸೌಲಭ್ಯ ವಂಚಿತರು, ಅಸಹಾಯಕರು ಎಂದು ಜಗಳವಾಡುತ್ತಾ ಮಾಡುವ ಬೀದಿರಂಪವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಾವು ಕಂಡಿದ್ದೇವೆ. ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಡೆದ ಇಂತಹ ಸಮಾವೇಶ, ಕೂಡು ಮಾಹಿತಿ ಶಿಬಿರಗಳಿಗೆ ಲೆಕ್ಕವೇ ಇಲ್ಲ. ಇಂಥ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು, ಮಂತ್ರಿ ಮಾನ್ಯರು ತಮ್ಮ ಪಕ್ಷ ಸಿದ್ಧಾಂತಗಳನ್ನು ಮರೆತಿದ್ದಾರೆ. ಪೂರ್ವಗ್ರಹ, ಸಿಟ್ಟು ಸೆಡವುಗಳನ್ನು ಮರೆತು ಒಂದೇ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಧಿಕಾರಕ್ಕಿಂತ ತಮಗೆ ಜಾತಿಯೇ ಮೇಲೆನ್ನುವ ಸೋಗಲಾಡಿತನದ ಮಾತಿನೊಳಗಡೆ ಮತ್ತೆ ಅಧಿಕಾರವನ್ನೇ ಅವರು ಪ್ರೀತಿಸಿದ್ದಾರೆ.
ನಾವು ಯಾರನ್ನು ಹಿಂದುಳಿದ ಜಾತಿಗಳೆಂದು ಭಾವಿಸಿದ್ದೇವೆಯೋ ಅವರು ಅನೇಕ ಗುಂಪುಗಳಾಗಿ ಹೊಸ ಹೊಸ ಜಾತಿಗಳಲ್ಲಿ ಗುರುತಿಸಿಕೊಳ್ಳುತ್ತಾ ಮತ್ತೆ ಮತ್ತೆ ಹಿಂದುಳಿದವರಾಗಲು ಅಪೇಕ್ಷಿಸಿದಂತೆ ಕಾಣಿಸುತ್ತಿದೆ. ವಿದ್ಯಾವಂತರಾಗುತ್ತಾ ಬಂದ ನಮ್ಮ ಹೊಸ ತಲೆಮಾರಿನ ಯುವಕ-ಯುವತಿಯರು ಜಾತಿಯ ಕಟ್ಟುಕಟ್ಟುಪಾಡುಗಳನ್ನು ಮೀರಿ ಅಂತರ್ಜಾತಿಯ ವಿವಾಹ ಆಗುವುದನ್ನು ನಾವು ಕಂಡಿದ್ದೇವೆ. ಜಾತಿ, ಧರ್ಮ, ರಾಜ್ಯ, ದೇಶ, ಮೀರಿ ಹೀಗೆ ಮದುವೆಯಾದ ಎಷ್ಟೋ ದಂಪತಿಗಳು ನಮ್ಮೂರಲ್ಲೂ, ನಮ್ಮ ನಮ್ಮ ಮನೆಯಲ್ಲೂ ಈಗ ಇದ್ದೇ ಇದ್ದಾರೆ.
ಹಾಗಂತ ಹೀಗೆ ಮದುವೆ ಆದವರೆಲ್ಲ ಈ ದೇಶದಿಂದ ಜಾತೀಯತೆಯನ್ನು ಹಿಮ್ಮೆಟ್ಟಿಸಬೇಕೆಂದು ಆದವರೆಂದು ಹೇಳಲಾಗದು. ಹಾಗಂತ ಜಾತಿಯನ್ನು ಮೀರಿದ ಆ ಸಣ್ಣ ಗುಂಪಿಗೆ ನಮ್ಮ ಪ್ರಭುತ್ವವು ವಿಶೇಷ ಸವಲತ್ತನ್ನು ನೀಡಿ ಅವರನ್ನು ಆಧರಿಸಿದೆಯೋ ಎನ್ನುವುದು ಕೂಡ ಬಹಳ ಮುಖ್ಯ ಪ್ರಶ್ನೆ. ದುರಂತವೆಂದರೆ ಅದೇ ಮಕ್ಕಳ ಹೆತ್ತವರು ತಮ್ಮ ತಮ್ಮ ಜಾತಿ ಸಂಘಗಳಿಗೆ ಸಂಚಾಲಕರಾಗಿ ಸಮ್ಮೇಳನಗಳನ್ನು ಸಂಘಟಿಸುತ್ತಾ ಮೇಜು ಕುಟ್ಟುತ್ತಾ ತಾವು ಇನ್ನೊಂದು ಜಾತಿಗಿಂತ ಹೇಗೆ ಭಿನ್ನವಾಗಬೇಕು, ಅದಕ್ಕಾಗಿ ಏನನ್ನು ಪಾಲಿಸಬೇಕು ಎನ್ನುವುದನ್ನು ಹೇಳುತ್ತಾ ತಮ್ಮವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡಿದ ದೃಷ್ಟಾಂತವನ್ನು ನಾನು ಈ ವಾರವಿಡೀ ಕಂಡಿದ್ದೇನೆ.
ಎಷ್ಟೋ ಬಾರಿ ಜಾತಿಯನ್ನು ಆಧರಿಸಿ ಸರಕಾರ ಕೊಡುವ ಸವಲತ್ತುಗಳನ್ನು ಅದೇ ಅಧಿಕಾರಸ್ಥ ಪಕ್ಷ ಮತವಾಗಿ ಪರಿವರ್ತಿಸುವ ಹುನ್ನಾರದಂತೆ ಕಾಣಿಸುತ್ತದೆ. ಜಾತಿ ಮತವಾಗಿ, ಮತ ಅಧಿಕಾರವಾಗಿ, ಅಧಿಕಾರವೇ ಸರಕಾರವಾಗಿ ಪರಿವರ್ತನೆಗೊಳ್ಳುವ ಮೀಸಲಾತಿ ರಾಜಕಾರಣ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಈ ದೇಶದಲ್ಲಿ ಜಾತಿ ಒಂದು ಬಂಡವಾಳವಾಗಿಯೇ ಚಲಾವಣೆಯಲ್ಲಿ ಇದ್ದೇ ಇರುತ್ತದೆ.
ವಚನ, ಕೀರ್ತನೆ, ತತ್ವಪದಗಳ ತಾತ್ವಿಕತೆ ಹೇಳುವುದು ಮನುಷ್ಯನು ತನ್ನ ಅಂತರಂಗದಲ್ಲಿ ಜಾತಿಯನ್ನು ಕರಗಿಸಬೇಕು. ಆದರೆ ಸಮಾಜಶಾಸ್ತ್ರ ಹೇಳುವುದು-ಇಂದಿನ ವ್ಯವಸ್ಥೆಯಲ್ಲಿ ಜಾತಿ ಗುರುತು ತೊರೆಯುವುದೇ ಅಸಮಾನತೆಯನ್ನು ಹೆಚ್ಚಿಸಬಹುದು ಎಂದು. ಅಂಕಿಅಂಶಗಳ ‘ದಾಖಲೆ’ಯಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸದ ಸಮುದಾಯಗಳಿಗೆ ಭವಿಷ್ಯದ ನೀತಿಗಳಲ್ಲಿ ಪಾಲು ಸಿಗದೇ ಹೋಗುವ ಭೀತಿ ನಿಜವೂ ಹೌದು. ಹೀಗಾಗಿ, ಜಾತಿಗಣತಿಯಲ್ಲಿ ನಡೆಯುತ್ತಿರುವ ಈ ಸಂಘಟಿತ ಚಟುವಟಿಕೆಗಳು ವಚನತತ್ವದ ನೇರ ಸಾಕಾರವಲ್ಲ; ಅದು ತತ್ವ ತಲುಪುವ ಮುಂಚಿನ ಕಠಿಣ ಹಂತ. ಅಸಮಾನತೆಯನ್ನು ನಿವಾರಿಸಲು ಮೊದಲಿಗೆ ಅದರ ಅಳತೆಯೇ ಬೇಕು. ಈ ಅಳತೆಯು -ಗಣತಿಯ ರೂಪದಲ್ಲಿ-ರಾಜಕೀಯ ಹೋರಾಟಗಳಿಗೆ ಬಲ ಕೊಡುತ್ತದೆ, ಆದರೆ ಅದೇ ಸಮಯದಲ್ಲಿ ಜಾತಿ ಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಪಾಯವನ್ನೂ ತರುತ್ತದೆ.
ಹೌದು, ಅಧಿಕಾರ, ಅವಕಾಶ, ಸೌಲಭ್ಯ ಹಂಚಿಕೆಯ ಪ್ರಜಾ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಗಬೇಕಾದರೆ, ಅವರ ನಿಜವಾದ ಸಂಖ್ಯೆ ಗೊತ್ತಿರಬೇಕು. ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ನಿಖರ ಅಂಕಿಅಂಶಗಳು ಬಹಳ ಮುಖ್ಯ. ಅದಕ್ಕಾಗಿಯೇ ಪ್ರತೀ ಜಾತಿಯೂ ತಾವು ಕಮ್ಮಿ ಅಲ್ಲ, ಇವತ್ತಿಗೂ ತಮ್ಮದೇ ಗರಿಷ್ಠ ಶಕ್ತಿಯಿದೆ ನಾವೇ ಪ್ರಬಲ ಶಕ್ತಿ ನಿರ್ಣಾಯಕರು ಎಂದು ತೋರಿಸಲು ಸಂಘಟಿತವಾಗುತ್ತಿವೆ. ಇದು ಒಂದು ರೀತಿಯ ಹಕ್ಕುಪಡೆಯುವ ಹೋರಾಟವೇ ಆಗಿ ಬದಲಾಗುತ್ತಿದೆ.
ಆದರೆ, ಇಲ್ಲೇ ಒಂದು ಪ್ರಶ್ನೆ ಉಳಿಯುತ್ತದೆ. ಇದು ವಚನ ಶರಣ ದಾಸ ಪರಂಪರೆಯ ಕನಸಿಗೆ ಪ್ರತಿರೋಧವಲ್ಲವೇ? ಪಂಪ ‘‘ಮನುಜರೆಲ್ಲಾ ಒಂದೇ’’ ಎಂದು ಘೋಷಿಸಿದ ಕನಸು ಇಂದು ‘‘ನಮ್ಮ ಜಾತಿಯ ಸಂಖ್ಯೆ ಎಷ್ಟು?’’ ಎಂಬ ತಾಕಲಾಟದಲ್ಲಿ ಬಿದ್ದುಹೋಗಿದೆಯೇ? ಬಹುಶಃ, ಎರಡೂ ಸತ್ಯವಾಗಿರಬಹುದು. ಜಾತಿ ನಿರ್ಮೂಲದ ಕನಸು ಒಂದು ಆದರ್ಶ; ಜಾತಿಗಣತಿಯ ಹೋರಾಟ ಒಂದು ವಾಸ್ತವ. ಕನಸುಗಳನ್ನು ಬಿಟ್ಟು ವಾಸ್ತವದ ಹಾದಿಯಲ್ಲಿ ನಡೆದರೂ, ಕನಸುಗಳನ್ನು ಮರೆಯಬಾರದು. ಇಲ್ಲವಾದರೆ, ನಾವು ಕೇವಲ ಸಂಖ್ಯೆಗಳ ಗುಂಪಾಗಿಬಿಡುತ್ತೇವೆ, ಮಾನವರಾಗಿ ಅಲ್ಲ.
ಬಸವ, ಅಲ್ಲಮ, ಅಕ್ಕ, ದಾಸಶ್ರೇಷ್ಠರು-ಇವರ ಸಾಹಿತ್ಯವೇ ನಮ್ಮ ಸಮಾಜದ ಅಸ್ತಿತ್ವವನ್ನು ಆವರಿಸಿದ ಶಕ್ತಿಯಾಗಿದೆ. ಅವರು ಕೇವಲ ಕಾವ್ಯ ಬರೆಯಲಿಲ್ಲ, ಮಾನವನ ಒಳಗಿನ ಹಿರಿಮೆಯನ್ನು ಎಬ್ಬಿಸುವ ತತ್ವವನ್ನೇ ಬಿತ್ತಿದರು. ‘‘ಕುಲವಿಲ್ಲ, ಜಾತಿಯಿಲ್ಲ, ಲಿಂಗವಿಲ್ಲ’’ -ಈ ವಚನಗಳಲ್ಲಿ ಜಾತಿ ಎಂಬ ಕೃತಕ ಕಟ್ಟಡವನ್ನು ಧಿಕ್ಕರಿಸುವ ಧ್ವನಿ ಕೇಳುತ್ತದೆ. ದಾಸ ಪರಂಪರೆಯಲ್ಲೂ ಇದೇ ಹಾದಿಯಿದೆ- ‘‘ಹರಿಯ ಭಕ್ತಿ ಮಾಡಿದವನು ಶೂದ್ರನೇನು, ಬ್ರಾಹ್ಮಣನೇನು’’ ಎಂಬ ಸರಳವಾದ ಪ್ರಶ್ನೆಗಳನ್ನು ಸಮಾಜದ ಮುಂದೆ ಅವರು ಹಾಕಿದರು.
ಆದರೆ ಇಂದಿನ ಕಾಲಕ್ಕೆ ಬಂದಾಗ, ವಿಚಿತ್ರ ವ್ಯಂಗ್ಯ ದೃಶ್ಯ ಎದುರಾಗುತ್ತಿದೆ. ಜಾತಿಗಣತಿ ನಡೆಯುವ ಹೊತ್ತಿಗೆ, ಇದೇ ಶರಣ-ದಾಸ ಪರಂಪರೆಯನ್ನು ತಮ್ಮ ಏಕತೆ ಎಂದು ಕರೆಸಿಕೊಳ್ಳುವ ಸಮುದಾಯಗಳು, ‘‘ನಮ್ಮ ಜಾತಿಯ ಹೆಸರನ್ನು ಹೀಗೆ ನಮೂದಿಸಬೇಕು’’ ಎಂದು ಸಭೆಗಳನ್ನು ಮಾಡಿ ಸೂಚನೆ ಕೊಡುತ್ತಿವೆ. ‘‘ನಮ್ಮ ಸಂಖ್ಯೆ ಎದ್ದು ತೋರಬೇಕು, ಇಲ್ಲವಾದರೆ ನಮ್ಮ ಹಕ್ಕು ಕಳೆದುಹೋಗುತ್ತದೆ’’ ಎನ್ನುವ ಆತಂಕದಿಂದ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.







