ಪದವಿ ಕಾಲೇಜು -ಖಾಲಿ ಬೆಂಚುಗಳ ಎಚ್ಚರಿಕೆ!

ಇಂದು ಖಾಲಿಯಾಗುತ್ತಿರುವ ಪದವಿ ಕಾಲೇಜಿನ ಒಂದು ಬೆಂಚು ಕೇವಲ ಒಬ್ಬ ವಿದ್ಯಾರ್ಥಿಯ ಅನುಪಸ್ಥಿತಿಯನ್ನು ಸೂಚಿಸುವುದಿಲ್ಲ. ಅದು ನಿಧಾನವಾಗಿ ನಮ್ಮ ಬದುಕಿನಿಂದ ದೂರವಾಗುತ್ತಿರುವ ಸಾಹಿತ್ಯ, ಸಂಸ್ಕೃತಿ, ಚಿಂತನೆ, ಸಂವಾದ, ಬಹುತ್ವ ಮತ್ತು ಮಾನವೀಯತೆಯ ನೆರಳನ್ನೂ ಸೂಚಿಸುತ್ತಿರಬಹುದು.
ಆ ಖಾಲಿ ಬೆಂಚುಗಳನ್ನು ನೋಡಿದಾಗ ಪ್ರಶ್ನೆ ಒಂದು ಮಾತ್ರ ಉಳಿಯುತ್ತದೆ. ನಾವು ಉದ್ಯೋಗಗಳನ್ನು ಸೃಷ್ಟಿಸುವ ಸಮಾಜವಾಗುತ್ತಿದ್ದೇವೋ ಅಥವಾ ಮನುಷ್ಯರನ್ನು ರೂಪಿಸುವ ಸಮಾಜವಾಗಿದ್ದೇವೋ? ಈ ಎರಡರ ನಡುವೆ ಸಮತೋಲನ ಕಳೆದುಕೊಂಡರೆ, ಭವಿಷ್ಯದಲ್ಲಿ ಕಾಲೇಜುಗಳ ಕಟ್ಟಡಗಳು ಉಳಿಯಬಹುದು; ಆದರೆ ಅವುಗಳ ಆತ್ಮ ಮಾತ್ರ ಎಲ್ಲೋ ಕಣ್ಮರೆಯಾಗಬಹುದು.
ಒಂದು ಕಾಲದಲ್ಲಿ ಜೂನ್ ತಿಂಗಳು ಬಂದರೆ ಪದವಿ ಕಾಲೇಜುಗಳಿಗೆ ಹಬ್ಬದ ಸಂಭ್ರಮ. ಹೊಸ ವಿದ್ಯಾರ್ಥಿಗಳ ಮುಖಗಳು, ಪ್ರವೇಶಕ್ಕಾಗಿ ಸಾಲುಗಟ್ಟಿ ನಿಂತ ಪೋಷಕರು, ಅರ್ಜಿಗಳಿಗಾಗಿ ಗಿಜಿಗುಡುತ್ತಿದ್ದ ಕಚೇರಿಗಳು, ತರಗತಿಗಳಲ್ಲಿ ಹೆಚ್ಚುವರಿ ಬೆಂಚುಗಳನ್ನು ತಂದು ಇಡಬೇಕಾಗುತ್ತಿದ್ದ ಪರಿಸ್ಥಿತಿ ಇವೆಲ್ಲವೂ ಸಾಮಾನ್ಯ ದೃಶ್ಯಗಳಾಗಿದ್ದವು. ಕನ್ನಡ, ಇಂಗ್ಲಿಷ್, ಸಂಸ್ಕೃತ, ಇತಿಹಾಸ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಭೌತಶಾಸ್ತ್ರ, ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ ಮೊದಲಾದ ಸಾಂಪ್ರದಾಯಿಕ ಪದವಿ ಕೋರ್ಸುಗಳು ನೂರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದವು. ಒಂದು ಕಾಲೇಜಿನ ಹೆಸರು ಅಲ್ಲಿಯ ಫಲಿತಾಂಶಕ್ಕಿಂತಲೂ ಹೆಚ್ಚು ಅದರ ಬೌದ್ಧಿಕ ವಾತಾವರಣದಿಂದ, ಅಲ್ಲಿನ ಶಿಕ್ಷಕರಿಂದ ಮತ್ತು ಅಲ್ಲಿನ ಸಂಸ್ಕೃತಿಯಿಂದ ಪ್ರಸಿದ್ಧವಾಗುತ್ತಿತ್ತು.
ಇಂದು ಅದೇ ಕಾಲೇಜುಗಳಲ್ಲಿ ಅಡ್ಮಿಶನ್ ಆಮೆಗತಿಯಲ್ಲಿ ನಡೆಯುತ್ತಿದೆ. ವಿಸ್ತಾರವಾದ ಸುಸಜ್ಜಿತ ಕ್ಯಾಂಪಸ್ ಇದೆ, ತರಗತಿಗಳಿವೆ, ಕಟ್ಟಡಗಳಿವೆ, ಗ್ರಂಥಾಲಯಗಳಿವೆ, ಪ್ರಯೋಗಾಲಯಗಳಿವೆ, ಆದರೆ ವಿದ್ಯಾರ್ಥಿಗಳಿಲ್ಲ. ಒಂದೊಂದು ವಿಭಾಗಕ್ಕೆ ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೆ ಇಂದು ಹತ್ತು ಮಂದಿಯೂ ಇಲ್ಲ. ಕೆಲವು ಕಡೆ ಐದು ವಿದ್ಯಾರ್ಥಿಗಳಿಗಾಗಿ ವಿಭಾಗವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಕರಾವಳಿ ಭಾಗದಲ್ಲಿ ಪತ್ರಿಕೋದ್ಯಮದಂತಹ ಆ ಕಾಲದ ಪ್ರತಿಷ್ಠೆಯ ಕೋರ್ಸುಗಳೂ ಸಹ ವಿದ್ಯಾರ್ಥಿಗಳಿಲ್ಲದೆ ನಲುಗುತ್ತಿವೆ. ಉಪನ್ಯಾಸಕರು-ಮ್ಯಾನೇಜ್ಮೆಂಟ್ ತಾವೇ ಫೀಸು ಕಟ್ಟಿ ರಿಯಾಯಿತಿ ಕೊಟ್ಟು ಒತ್ತಾಯಕ್ಕೆ ತಂದು ಕೂರಿಸಿದ ವಿದ್ಯಾರ್ಥಿಗಳು ಪರಿಚಯ ಕಾರ್ಯಕ್ರಮದ ದಿನ ತರಗತಿ ತುಂಬಿದಂತೆ ಕಾಣುತ್ತಾರೆ.ಒಂದು ತಿಂಗಳ ನಂತರ ನಿಧಾನವಾಗಿ ಕರಗಿ ಬೆಂಚುಗಳೇ ಹೆಚ್ಚಾಗಿ ಕಾಣಿಸುತ್ತವೆ. ಉಪನ್ಯಾಸಕರಿಗಿಂತ ವಿದ್ಯಾರ್ಥಿಗಳೇ ಕಡಿಮೆ ಇರುವ ವಿಚಿತ್ರ ಸ್ಥಿತಿ ಹಲವಾರು ಪದವಿ ಕಾಲೇಜುಗಳಲ್ಲಿ ನಿರ್ಮಾಣವಾಗಿದೆ.!
ಈ ಕುಸಿತ ಕೇವಲ ಒಂದು ಶಿಕ್ಷಣ ವ್ಯವಸ್ಥೆಯ ಸಮಸ್ಯೆಯಲ್ಲ. ಇದು ಸಮಾಜದ ಮೌಲ್ಯಗಳ ಸಹಜ ಬದಲಾವಣೆಯ ಕಥೆಯೂ ಹೌದು. ಹಿಂದೆ ಇಂತಹ ಸಾಂಪ್ರದಾಯಿಕ ಪದವಿ ಕೋರ್ಸುಗಳು ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗದ ಕೌಶಲ್ಯಗಳನ್ನು ಮಾತ್ರ ಕಲಿಸುತ್ತಿರಲಿಲ್ಲ. ಅವು ಮನುಷ್ಯನಾಗುವುದನ್ನು ಕಲಿಸುತ್ತಿದ್ದವು. ಕನ್ನಡ ಸಾಹಿತ್ಯ ಓದುತ್ತಿದ್ದ ವಿದ್ಯಾರ್ಥಿ ಕುವೆಂಪು, ಬೇಂದ್ರೆ, ಕಾರಂತ, ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಶರೀಫ, ತೇಜಸ್ವಿ ಎಲ್ಲರನ್ನೂ ಪರಿಚಯಿಸಿಕೊಳ್ಳುತ್ತಿದ್ದ. ಇತಿಹಾಸ ಓದುತ್ತಿದ್ದ ವಿದ್ಯಾರ್ಥಿ ಬುದ್ಧ, ಅಶೋಕ, ಗಾಂಧಿ, ಅಂಬೇಡ್ಕರ್, ಲೋಹಿಯಾ, ನೆಹರೂ, ಟಾಗೋರ್ ಮೊದಲಾದವರ ಚಿಂತನೆಗಳನ್ನು ಅರಿಯುತ್ತಿದ್ದ. ಸಮಾಜಶಾಸ್ತ್ರ ಅವನಿಗೆ ಸಮಾಜದ ರಚನೆಯನ್ನು ಅರ್ಥಮಾಡಿಕೊಡುತ್ತಿತ್ತು. ರಾಜ್ಯಶಾಸ್ತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೇಳಿಕೊಡುತ್ತಿತ್ತು. ಪತ್ರಿಕೋದ್ಯಮ ಸಮಾಜದ ಬಗ್ಗೆ ಪ್ರಶ್ನೆ ಕೇಳುವ ಧೈರ್ಯವನ್ನು ಬೆಳೆಸುತ್ತಿತ್ತು.
ಒಟ್ಟಿನಲ್ಲಿ ಈ ಕೋರ್ಸುಗಳು ಉದ್ಯೋಗಿಗಳಿಗಿಂತ ಮೊದಲು ನಾಗರಿಕರನ್ನು ರೂಪಿಸುತ್ತಿದ್ದವು. ಒಂದು ಕಾಲದಲ್ಲಿ ವಿಜ್ಞಾನದ ವಿದ್ಯಾರ್ಥಿಯೊಬ್ಬ ಯಕ್ಷಗಾನ ಕಲಾವಿದನಾಗುತ್ತಿದ್ದ. ಕಾಮರ್ಸ್ ಓದಿದವನು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬನಾಗುತ್ತಿದ್ದ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸುಶ್ರಾವ್ಯ ಗಾಯಕನಾಗಿ ಗುರುತಿಸಿಕೊಳ್ಳುತ್ತಿದ್ದ. ಆಗ ಅದು ಅಚ್ಚರಿಯ ಸಂಗತಿಯಾಗಿರಲಿಲ್ಲ. ಯಾಕೆಂದರೆ ಆ ಕಾಲದ ಶಿಕ್ಷಣ ವಿದ್ಯಾರ್ಥಿಯನ್ನು ಮೊದಲು ಮನುಷ್ಯನನ್ನಾಗಿ ರೂಪಿಸುತ್ತಿತ್ತು; ನಂತರ ವೃತ್ತಿಪರನನ್ನಾಗಿಸುತ್ತಿತ್ತು.
ವಿಜ್ಞಾನ ಓದುವ ವಿದ್ಯಾರ್ಥಿಯೂ ಸಾಹಿತ್ಯವನ್ನು ಓದುತ್ತಿದ್ದ. ಗಣಿತದ ವಿದ್ಯಾರ್ಥಿಯೂ ನಾಟಕವನ್ನು ಆಸ್ವಾದಿಸುತ್ತಿದ್ದ. ವೈದ್ಯಕೀಯ ವಿದ್ಯಾರ್ಥಿಯೂ ಸಂಗೀತ ಮತ್ತು ಕಾವ್ಯದ ಸನಿಹದಲ್ಲಿರುತ್ತಿದ್ದ. ಅವರ ಪದವಿ ಒಂದೇ ಆಗಿದ್ದರೂ ಅವರ ಮನಸ್ಸು ಅನೇಕ ಕಿಟಕಿಗಳನ್ನು ಹೊಂದಿತ್ತು. ಆದರೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಯನ್ನು ರೂಪಿಸುವುದಕ್ಕಿಂತ ಮೊದಲು ಅವನನ್ನು ವಿಭಾಗಿಸುತ್ತದೆ. ವಿಜ್ಞಾನ, ವಾಣಿಜ್ಯ, ವೈದ್ಯಕೀಯ, ಇಂಜಿನಿಯರಿಂಗ್ ಎಂಬ ಕಿರಿದಾದ ಚೌಕಟ್ಟುಗಳೊಳಗೆ ಅವನನ್ನು ಬಂಧಿಸುತ್ತದೆ. ಪರಿಣಾಮವಾಗಿ ಉತ್ತಮ ವೃತ್ತಿಪರರು ಸಿಗುತ್ತಿದ್ದಾರೆ; ಆದರೆ ಸಮಾಜದಲ್ಲಿಬಹು ಆಯಾಮದ ವ್ಯಕ್ತಿತ್ವಗಳು ಕಡಿಮೆಯಾಗುತ್ತಿವೆ.
ಒಂದು ಸಮುದಾಯದ ಕ್ಷೇಮಕ್ಕೆ ಕೇವಲ ವೈದ್ಯರು, ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸಾಕಾಗುವುದಿಲ್ಲ. ಕವಿಗಳು, ಕಲಾವಿದರು, ಸಹೃದಯರು ಮತ್ತು ಚಿಂತಕರೂ ಬೇಕು. ಆ ಸಂವೇದನೆ ಹುಟ್ಟುವುದು ಭಾಷೆ, ಸಾಹಿತ್ಯ ಮತ್ತು ಮಾನವಿಕ ಅಧ್ಯಯನಗಳ ದಾರಿಯಲ್ಲೇ. ಒಂದು ಕಾಲದಲ್ಲಿ ವಿಜ್ಞಾನದ ವಿದ್ಯಾರ್ಥಿಯಿಂದ ಯಕ್ಷಗಾನ ಕಲಾವಿದ, ವೈದ್ಯರಿಂದ ಗಾಯಕ, ಕಾಮರ್ಸ್ ವಿದ್ಯಾರ್ಥಿಯಿಂದ ಕವಿ ಹುಟ್ಟುತ್ತಿದ್ದರೆ ಅದರ ಹಿಂದೆ ಇದ್ದದ್ದು ಶಿಕ್ಷಣದೊಳಗೆ ಜೀವಂತವಾಗಿದ್ದ ಬಹುತ್ವ ಮತ್ತು ಮಾನವಿಕತೆಯ ಉಸಿರು. ಕಾಸರಗೋಡಿನಿಂದ ಪುತ್ತೂರಿಗೆ ಬರುವ ಕೇರಳದ ಸರಕಾರೀ ಬಸ್ಸಿನ ಕಂಡಕ್ಟರ್, ಎಂ.ಕಾಂ. ಓದಿದ ಕಣ್ಣನ್ ಬಿಡುವಿನ ವೇಳೆಯಲ್ಲಿ ಬಸ್ಸಲ್ಲೇ ಕೂತು ಮಲಯಾಳಂ ಮನೋರಮದ ಸಾಹಿತ್ಯ ಪುಟವನ್ನ್ನು ಓದುತ್ತಿರುವ ಸನ್ನಿವೇಶ ನನಗೆ ಇದನ್ನೆಲ್ಲ ನೆನಪಿಸಿತು. ನಮ್ಮ ಇವತ್ತಿನ ಕಾಲೇಜುಗಳಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ಅದೇ ಉಸಿರು. ವಿದ್ಯಾರ್ಥಿಗಳಷ್ಟೇ ಅಲ್ಲ, ಅವರಿಗೆ ಪಾಠ ಮಾಡುವ ಮೇಷ್ಟ್ರುಗಳೂ ಕೂಡ ನಿಧಾನವಾಗಿ ಯಂತ್ರಗಳಾಗುತ್ತಿದ್ದಾರೆ. ನಾವು ಓದುವ ಕಾಲದಲ್ಲಿ ಕಾಲೇಜು ಗ್ರಂಥಾಲಯಗಳಲ್ಲಿ ಪುಸ್ತಕಗಳಿರಲಿಲ್ಲ ಆದರೆ ಈಗ ಸಾವಿರಾರು ಪುಸ್ತಕಗಳಿವೆ, ಅಲ್ಲಿ ಇನ್ನು ಬಿಡಿಸಿ ನೋಡದ ಪುಸ್ತಕಗಳೇ ಹೆಚ್ಚಿವೆ.!
ಇಂದು ಪರಿಸ್ಥಿತಿ ಬದಲಾಗಿದೆ. ಶಿಕ್ಷಣದ ಅರ್ಥವೇ ಉದ್ಯೋಗ ಎನ್ನುವ ಮಟ್ಟಕ್ಕೆ ಕುಗ್ಗಿದೆ. ಪದವಿ ಮುಗಿದ ತಕ್ಷಣ ಎಲ್ಲಿ ಉದ್ಯೋಗ? ಯಾವ ಉದ್ಯೋಗ? ಎಷ್ಟು ಸಂಬಳ ? ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಒಂದು ಕೋರ್ಸು ಎಷ್ಟು ಮಾನವೀಯತೆ ಕಲಿಸುತ್ತದೆ ಎನ್ನುವುದಕ್ಕಿಂತ ಎಷ್ಟು ವೇತನ ಕೊಡಿಸುತ್ತದೆ ಎನ್ನುವುದೇ ಮಕ್ಕಳ- ಪೋಷಕರ ಮೌಲ್ಯಮಾಪನದ ಮಾನದಂಡವಾಗಿದೆ. ಹೀಗಾಗಿ ಸಾಹಿತ್ಯ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರದಂತಹ ವಿಷಯಗಳು ನಿಧಾನವಾಗಿ ವಿದ್ಯಾರ್ಥಿಗಳ ಆಯ್ಕೆಯ ಪಟ್ಟಿಯಿಂದ ಹೊರಗುಳಿಯುತ್ತಿವೆ. ಇದಕ್ಕೆ ಕೇವಲ ಮಕ್ಕಳನ್ನು ಮಾತ್ರ ದೂರುವುದು ಸರಿಯಲ್ಲ. ಅವರ ಮುಂದಿರುವ ಬದುಕಿನ ಕಟು ವಾಸ್ತವತೆಗಳು ಭಿನ್ನವಾಗಿವೆ. ಮುಂದೆ ಅವರಿಗೆ ಮದುವೆ ಆಗಬೇಕು, ಸಂಸಾರ ಸರಿದೂಗಬೇಕು, ಮನೆ ಕಟ್ಟಬೇಕಿದೆ, ಸಾಲ ತೀರಿಸಬೇಕಿದೆ, ಕುಟುಂಬದ ಆರ್ಥಿಕ ಹೊಣೆ ಹೊತ್ತಿಕೊಳ್ಳಬೇಕಿದೆ. ಪದವಿ ಮುಗಿದ ತಕ್ಷಣ ಕೆಲಸ ಸಿಗುವ ಕೋರ್ಸಿನತ್ತ ಅವರು ಆಕರ್ಷಿತರಾಗುವುದು ಸಹಜ. ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ, ಆರೋಗ್ಯ ವಿಜ್ಞಾನ, ಪ್ಯಾರಾಮೆಡಿಕಲ್, ಡಿಪ್ಲೊಮಾ, ಕೌಶಲ್ಯಾಧಾರಿತ ತರಬೇತಿಗಳು, ಆನ್‌ಲೈನ್ ಪ್ರಮಾಣಪತ್ರ ಕೋರ್ಸುಗಳು ಇವೆಲ್ಲವೂ ಅವರಲ್ಲಿಂದು ಉದ್ಯೋಗದ ಭರವಸೆಯನ್ನು ಮುಂದಿಡುತ್ತಿವೆ. ಮೂರು ವರ್ಷದ ಪದವಿಗಿಂತ ಆರು ತಿಂಗಳ ಕೌಶಲ್ಯ ತರಬೇತಿಯೇ ಕೆಲವೊಮ್ಮೆ ಹೆಚ್ಚು ಆದಾಯವನ್ನು ತಂದುಕೊಡುತ್ತಿದೆ.
ಅಷ್ಟೇ ಅಲ್ಲ, ಜಗತ್ತಿನ ಕೆಲಸದ ಸ್ವರೂಪವೇ ಬದಲಾಗಿದೆ. ಇವತ್ತಿನ ವಿದ್ಯಾರ್ಥಿ ಕಾಲೇಜು ಮುಗಿಸುವುದಕ್ಕಿಂತ ಮುಂಚೆಯೇ ಮೊಬೈಲ್ ಫೋನಿನ ಮೂಲಕ ಕೆಲಸ ಹುಡುಕಬಲ್ಲ. ಯೂಟ್ಯೂಬ್‌ನಲ್ಲಿ ಕೌಶಲ್ಯ ಕಲಿಯಬಲ್ಲ. ಆನ್‌ಲೈನ್ ವೇದಿಕೆಗಳಲ್ಲಿ ಸ್ವತಂತ್ರ ಉದ್ಯೋಗಿಯಾಗಬಲ್ಲ. ಒಂದು ಕಾಲದಲ್ಲಿ ಜ್ಞಾನ ಪಡೆಯುವ ಏಕೈಕ ಕೇಂದ್ರವಾಗಿದ್ದ ಕಾಲೇಜು ಇಂದು ಅನೇಕ ಜ್ಞಾನ ಕೇಂದ್ರಗಳಲ್ಲಿ ಒಂದಾಗಿ ಮಾತ್ರ ಉಳಿದಿದೆ.
ಆದರೆ ಸಮಸ್ಯೆ ಕೇವಲ ಹೊರಗಿನ ಸ್ಪರ್ಧೆಯಲ್ಲ.
ಸರಕಾರಿ ಕಾಲೇಜುಗಳ ಒಳಗಿನ ವ್ಯವಸ್ಥೆಯೂ ಪ್ರಶ್ನೆಗೆ ಒಳಗಾಗಿದೆ. ಅನೇಕ ಕಡೆಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾದರೂ ಅತಿಥಿ ಉಪನ್ಯಾಸಕರ ನೇಮಕವಾಗುವುದಿಲ್ಲ. ದೊಡ್ಡ ದೊಡ್ಡ ಖಾಸಗಿ ಕಾಲೇಜುಗಳು ಸ್ವಾಯುತ್ತ ಕಾಲೇಜುಗಳಾಗಿ ಬದಲಾಗುತ್ತಿವೆ. ಪಠ್ಯ ರೂಪಿಸುವ, ಪರೀಕ್ಷೆ ನಡೆಸುವ, ಫಲಿತಾಂಶ ನೀಡುವ ಸ್ವಾತಂತ್ರ್ಯ ಅವರಿಗೆ ಬಂದಿದೆ. ಸರಕಾರಿ ಕಾಲೇಜುಗಳು ಬಾಗಿಲು ತೆಗೆಯುವ ಹೊತ್ತಿಗೆ ಸ್ವಾಯತ್ತ ಕಾಲೇಜುಗಳ ಅರ್ಧ ಸೆಮ್ ಮುಗಿದಿರುತ್ತದೆ, ಅಲ್ಲಿ ವಿಶ್ವಾಸ ಮೂಡಿಸುವಂತಹ ಹೊಸ ಕಾರ್ಯಕ್ರಮಗಳು ಕಡಿಮೆಯಾಗಿವೆ. ಹಳೆಯ ಪಠ್ಯಕ್ರಮಗಳನ್ನು ಹೊಸ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸುವ ವೇಗವೂ ಕಡಿಮೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇಲ್ಲದಿರುವ ಕಾರಣದಿಂದ ಚಟುವಟಿಕೆಗಳೇ ನಡೆಯುವುದಿಲ್ಲ; ಚಟುವಟಿಕೆಗಳಿಲ್ಲದ ಕಾರಣದಿಂದ ಮತ್ತಷ್ಟು ವಿದ್ಯಾರ್ಥಿಗಳು ಬರುತ್ತಿಲ್ಲ. ಇದು ದುಷ್ಟಚಕ್ರವಾಗಿ ಪರಿಣಮಿಸಿದೆ.
ಸರಕಾರಿ ಕಾಲೇಜುಗಳ ಕಥೆ ಬಿಡಿ, ಇವೆಲ್ಲವನ್ನೂ ಕೇಂದ್ರೀಕರಿಸಿ ಆಡಳಿತ ನಡೆಸುವ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳು ಬಣಗುಟ್ಟುತ್ತಿವೆ, ಎರಡು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಓದುತ್ತಾ ಘನತೆಯ ಶಿಕ್ಷಣ ನೆಲೆಯಾಗುತ್ತಿದ್ದ ವಿಶ್ವವಿದ್ಯಾನಿಲಯಗಳಿಂದು ವಿದ್ಯಾರ್ಥಿಗಳಿಲ್ಲದೆ ಸೊರಗುತಿವೆ.
ಇನ್ನೊಂದು ಕಾರಣ ಜನಸಂಖ್ಯೆಯ ಸ್ವರೂಪದಲ್ಲೂ ಅಡಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಐದು ಮಕ್ಕಳಿದ್ದ ಕುಟುಂಬಗಳಲ್ಲಿ ಇಂದು ಒಬ್ಬ ಅಥವಾ ಇಬ್ಬರು ಮಕ್ಕಳು ಮಾತ್ರ ಇದ್ದಾರೆ. ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯೇ ಕಡಿಮೆಯಾಗುತ್ತಿರುವುದು ಕೂಡ ಕಾಲೇಜುಗಳ ಮೇಲೆ ಪರಿಣಾಮ ಬೀರಿದೆ. ಆದರೆ ಇವೆಲ್ಲಕ್ಕಿಂತ ದೊಡ್ಡ ಬದಲಾವಣೆ ಸಮಾಜದ ಕನಸುಗಳಲ್ಲಿ ನಡೆದಿದೆ.
ಒಂದು ಕಾಲದಲ್ಲಿ ಪದವಿ ಎನ್ನುವುದು ವ್ಯಕ್ತಿತ್ವ ನಿರ್ಮಾಣದ ಸಾಧನವಾಗಿತ್ತು. ಇಂದು ಅದು ಉದ್ಯೋಗದ ರಹದಾರಿ ಆಗಿದೆ. ಈ ಬದಲಾವಣೆ ಸಹಜವಾದರೂ ಅಪಾಯಕಾರಿ ಕೂಡ ಹೌದು. ಯಾಕೆಂದರೆ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಪಡೆದ ಸಮಾಜ ಕೊನೆಗೆ ಕೌಶಲ್ಯವಂತ ಕಾರ್ಮಿಕರನ್ನು ಉತ್ಪಾದಿಸಬಹುದು; ಆದರೆ ಸಂವೇದನಾಶೀಲ ನಾಗರಿಕರನ್ನು ಉತ್ಪಾದಿಸಲು ಕಷ್ಟವಾಗಬಹುದು.
ಒಬ್ಬ ವೈದ್ಯನಿಗೆ ಕೌಶಲ್ಯದ ಜೊತೆಗೆ ಮಾನವೀಯತೆಯೂ ಬೇಕು. ಒಬ್ಬ ಇಂಜಿನಿಯರ್‌ಗೆ ತಾನು ಬದುಕುವ ಸುತ್ತಲಿನ ಸಮಾಜದ ಅರಿವು ಬೇಕು. ಒಬ್ಬ ವಿಜ್ಞಾನಿಗೆ ನೈತಿಕತೆ ಬೇಕು. ಒಬ್ಬ ಆಡಳಿತಾಧಿಕಾರಿಗೆ ಇತಿಹಾಸದ ತಿಳುವಳಿಕೆ ಬೇಕು. ಒಬ್ಬ ಉದ್ಯಮಿಗೆ ಸಾಹಿತ್ಯದಿಂದ ಬರುವ ಕಲ್ಪನಾಶಕ್ತಿ ಬೇಕು. ಈ ಎಲ್ಲವೂ ಸಾಂಪ್ರದಾಯಿಕ ಪದವಿ ಶಿಕ್ಷಣದ ಮೂಲಕ ಬೆಳೆದುಬರುವ ಗುಣಗಳು. ಭಾರತದಂತಹ ನೂರಕ್ಕಿಂತ ಹೆಚ್ಚು ಕೋಟಿ ಜನ ಇರುವ ಬಹುಜಾತಿ, ಬಹುಧರ್ಮ, ಮತ, ಭಾಷೆ, ಸಂಸ್ಕೃತಿಯ ಪ್ರಜೆಗಳು ಬದುಕುವ ದೇಶದಲ್ಲಿ ಈ ಮೇಲಿನ ಬಹುತ್ವವನ್ನು ಸುಸ್ಥಿರಗೊಳಿಸುವ ಮುಲಾಂಶದ ಶಿಕ್ಷಣ ಅವರ ಕಲಿಕೆಯ ದಾರಿಯಾಗಬೇಕು.
ಆದ್ದರಿಂದ ಈ ಕೋರ್ಸುಗಳ ಕುಸಿತವನ್ನು ಕೇವಲ ಪ್ರವೇಶ ಸಂಖ್ಯೆಯ ಕುಸಿತವೆಂದು ನೋಡುವುದು ತಪ್ಪು. ಇದು ಸಮಾಜದ ಸಂವೇದನಾ ಶಕ್ತಿಯ ಕುಸಿತವೂ ಆಗಿರಬಹುದು. ಇದಕ್ಕೆ ಪರಿಹಾರವೇನು?
ಸಾಹಿತ್ಯವನ್ನು ಉಳಿಸಲು ವಿದ್ಯಾರ್ಥಿಗಳನ್ನು ಬಲವಂತವಾಗಿ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ವಿಭಾಗಕ್ಕೆ ಸೇರಿಸುವುದರಿಂದ ಪ್ರಯೋಜನವಿಲ್ಲ. ಇತಿಹಾಸವನ್ನು ಉಳಿಸಲು ಕೇವಲ ಹೊಸ ಕಟ್ಟಡ ಕಟ್ಟಿದರೂ ಸಾಲದು. ಸಾಂಪ್ರದಾಯಿಕ ವಿಷಯಗಳನ್ನು ಹೊಸ ಬದುಕಿನ ಅಗತ್ಯಗಳಿಗೆ ಜೋಡಿಸಬೇಕು. ಭಾಷೆ, ಇತಿಹಾಸ, ಸಮಾಜಶಾಸ್ತ್ರ, ತತ್ವಶಾಸ್ತ್ರಗಳನ್ನು ಡಿಜಿಟಲ್ ಜಗತ್ತು, ಮಾಧ್ಯಮ, ಸಂಶೋಧನೆ, ಪ್ರವಾಸೋದ್ಯಮ, ಸಾರ್ವಜನಿಕ ನೀತಿ, ಸಾಂಸ್ಕೃತಿಕ ನಿರ್ವಹಣೆ, ಕೃತಕ ಬುದ್ಧಿಮತ್ತೆಯ ನೈತಿಕತೆ, ಸೃಜನಾತ್ಮಕ ಕೈಗಾರಿಕೆಗಳು ಇವುಗಳೊಂದಿಗೆ ಸಂಪರ್ಕಿಸುವ ಹೊಸ ಕಲ್ಪನೆಗಳು ಬೇಕಾಗಿವೆ. ವಿದ್ಯಾರ್ಥಿಗೆ ಈ ವಿಷಯಗಳು ಬದುಕಿನಲ್ಲೂ ಉಪಯುಕ್ತವೆಂಬ ವಿಶ್ವಾಸ ಮೂಡಬೇಕು. ಕೈಕಾಲಿಗೆ ಕೆಲಸ ಕೊಡದ ಯಾಂತ್ರಿಕತೆ, ತಲೆಗೆ ಕೆಲಸ ಕಡಿಮೆ ಮಾಡುವ ಕೃತಕ ಬುದ್ಧಿಮತ್ತೆ ಇವೆಲ್ಲವುಗಳಿಂದ ಮನುಷ್ಯ ಏನಾಗಬಲ್ಲ ಎಂಬುದನ್ನು ಸಂವೇದನಾಶೀಲ ಮಾನವಾಸಕ್ತಿಯ ನೈತಿಕ ನೆಲೆಯಲ್ಲಿ ಪಾಠ ಮಾಡಬೇಕು.
ಅದೇ ವೇಳೆ ಶಿಕ್ಷಣದ ಉದ್ದೇಶದ ಬಗ್ಗೆ ಸಮಾಜವೂ ಮರುಚಿಂತನೆ ಮಾಡಬೇಕಿದೆ. ಕಾಲೇಜು ಎಷ್ಟು ಉದ್ಯೋಗ ಸೃಷ್ಟಿಸಿತು ಎನ್ನುವುದು ಮುಖ್ಯ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಅದು ಎಷ್ಟು ಉತ್ತಮ ಮನುಷ್ಯರನ್ನು ರೂಪಿಸಿತು ಎಂಬ ಪ್ರಶ್ನೆ. ಒಂದು ಸಮಾಜದಲ್ಲಿ ಸಂಬಳ ಹೆಚ್ಚಾಗಬಹುದು; ಆದರೆ ಸಂವೇದನೆ ಕಡಿಮೆಯಾಗಬಾರದು. ತಂತ್ರಜ್ಞಾನ ಬೆಳೆಯಬಹುದು; ಆದರೆ ತಾಳ್ಮೆ, ಸಹಾನುಭೂತಿ, ಸಹಬಾಳ್ವೆ ಕುಗ್ಗಬಾರದು. ಆಗ ಅಭಿವೃದ್ಧಿಯ ಅರ್ಥವೇ ಬದಲಾಗುತ್ತದೆ.
ಇಂದು ಖಾಲಿಯಾಗುತ್ತಿರುವ ಪದವಿ ಕಾಲೇಜಿನ ಒಂದು ಬೆಂಚು ಕೇವಲ ಒಬ್ಬ ವಿದ್ಯಾರ್ಥಿಯ ಅನುಪಸ್ಥಿತಿಯನ್ನು ಸೂಚಿಸುವುದಿಲ್ಲ. ಅದು ನಿಧಾನವಾಗಿ ನಮ್ಮ ಬದುಕಿನಿಂದ ದೂರವಾಗುತ್ತಿರುವ ಸಾಹಿತ್ಯ, ಸಂಸ್ಕೃತಿ, ಚಿಂತನೆ, ಸಂವಾದ, ಬಹುತ್ವ ಮತ್ತು ಮಾನವೀಯತೆಯ ನೆರಳನ್ನೂ ಸೂಚಿಸುತ್ತಿರಬಹುದು.
ಆ ಖಾಲಿ ಬೆಂಚುಗಳನ್ನು ನೋಡಿದಾಗ ಪ್ರಶ್ನೆ ಒಂದು ಮಾತ್ರ ಉಳಿಯುತ್ತದೆ. ನಾವು ಉದ್ಯೋಗಗಳನ್ನು ಸೃಷ್ಟಿಸುವ ಸಮಾಜವಾಗುತ್ತಿದ್ದೇವೋ, ಅಥವಾ ಮನುಷ್ಯರನ್ನು ರೂಪಿಸುವ ಸಮಾಜವಾಗಿದ್ದೇವೋ? ಈ ಎರಡರ ನಡುವೆ ಸಮತೋಲನ ಕಳೆದುಕೊಂಡರೆ, ಭವಿಷ್ಯದಲ್ಲಿ ಕಾಲೇಜುಗಳ ಕಟ್ಟಡಗಳು ಉಳಿಯಬಹುದು; ಆದರೆ ಅವುಗಳ ಆತ್ಮ ಮಾತ್ರ ಎಲ್ಲೋ ಕಣ್ಮರೆಯಾಗಬಹುದು.






