Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಗಾಂಧಿ ಕೊಲೆ, ಸಾವು ಮತ್ತು ಸತ್ಯ!

ಗಾಂಧಿ ಕೊಲೆ, ಸಾವು ಮತ್ತು ಸತ್ಯ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ7 Dec 2025 3:52 PM IST
share
ಗಾಂಧಿ ಕೊಲೆ, ಸಾವು ಮತ್ತು ಸತ್ಯ!

ಗಾಂಧಿಯವರನ್ನು ಸಹಜವಾಗಿ ತೀರಿಹೋದವರಾಗಿ ತೋರಿಸುವ ಜಗತ್ತಿನಲ್ಲಿ - ಗಾಂಧಿಯನ್ನು ಕೊಂದರು ಎಂದು ಹೇಳುವುದು ದ್ವೇಷಕ್ಕೆ ಬೆಂಕಿ ಹಚ್ಚುವುದಲ್ಲ; ದ್ವೇಷವನ್ನು ಮತ್ತೆ ಹುಟ್ಟದಂತೆ ಮಾಡುವ ಎಚ್ಚರಿಕೆಯ ಸಾಲು. ಸುಳ್ಳು ಸುಲಭ, ಸತ್ಯ ಕಠಿಣ. ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಕಠಿಣ ಸತ್ಯದ ಮೇಲೆ ನಿಂತಿರಬೇಕು. ಗಾಂಧಿಯವರ ಕೊಲೆ ಎಂಬ ವಾಕ್ಯ ಜಾಡ್ಯವಾದರೆ ಸಹ, ಆ ಜಾಡ್ಯದಲ್ಲಿ ಪಾಠವಿದೆ. ತಲೆಮಾರುಗಳ ಸುರಕ್ಷತೆ ಇದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಶ್ವಾಸವಿದೆ.

ಮತ್ತೆ ಮತ್ತೆ ಗಾಂಧಿಯನ್ನು ಹೊಸ ಬಗೆಯಲ್ಲಿ ನಿರ್ವಚಿಸುವ, ದೂರಸರಿಯುವ ಮನಸ್ಥಿತಿಯನ್ನು ಮತ್ತೆ ಗಾಂಧಿಪ್ರಭೆಯ ಒಳಗಡೆ ಕೂರಿಸುವ ಶಕ್ತಿ ಅವರ ಮಾತಿಗಿತ್ತು. ಅವರಷ್ಟೇ ಅಲ್ಲ, ಅವರ ತಂದೆ ಕೂಡ ತಮ್ಮ ಮನೆಯ ದೇವರ ಕೋಣೆಯಲ್ಲಿ ಗಾಂಧಿ, ಪಟೇಲ್ ಮತ್ತು ಶಾಸ್ತ್ರಿಗಳ ಫೋಟೊವನ್ನು ಇಟ್ಟುಕೊಂಡಿದ್ದರಂತೆ. ಭಗವಂತನಿಗೆ ಮಂಗಳಾರತಿ ಎತ್ತಿದ ನಂತರ ಇವರೆಲ್ಲರಿಗೆ ಆರತಿ ಬೆಳಗಿದ ಮೇಲೆಯೇ ಅವರ ಪೂಜಾ ಶಾಸ್ತ್ರ ಮುಗಿಯುತ್ತಿತ್ತಂತೆ. ಇದನ್ನೆಲ್ಲ ನನಗೆ ಮಗನೇ ಹೇಳಿದ ನೆನಪು.

ಆರೇಳು ತಿಂಗಳ ಹಿಂದೆ ಮತ್ತೆ ಅವರ ಉಪನ್ಯಾಸ ಕೇಳಿದಾಗ ಪಕ್ಕನೆ ಯಾರ ಗಮನಕ್ಕೂ ಬಾರದಂತಹ ಒಂದು ಪುಟ್ಟ ಬದಲಾವಣೆಯನ್ನು ಕಂಡೆ. ಯಾಕೋ ಈ ಬಾರಿ ಅವರು, ‘‘ಗಾಂಧಿಯನ್ನು ಕೊಲೆ ಮಾಡಿದರು’’ ಅನ್ನುವ ಕಡೆಗಳಲ್ಲಿ ಒಂದೆರಡು ಬಾರಿ ‘‘ಗಾಂಧೀಜಿ ತೀರಿ ಹೋದರು’’, ‘‘ಗಾಂಧಿ ಅಗಲಿದರು’’, ‘‘ಗಾಂಧಿ ಇನ್ನಿಲ್ಲವಾದರು’’ ಎಂಬ ಶಬ್ದಗಳನ್ನೆಲ್ಲ ಬಳಸುತ್ತಿದ್ದರು. ಗಾಂಧಿಯನ್ನು ಕೊಂದರು, ಗಾಂಧಿಯನ್ನು ಕೊಲೆ ಮಾಡಿದರು ಎಂದು ಅವರು ಇಡೀ ಉಪನ್ಯಾಸದಲ್ಲಿ ಹೇಳುವುದನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದಂತಿತ್ತು. ಮೊದಮೊದಲ ಪಿಸ್ತೂಲ್‌ನಿಂದ ಹಾರುವ ಗುಂಡು, ಅದರ ಶಬ್ದ, ಆನಂತರ ಗಾಂಧಿಯಿಂದ ಬರುವ ಆರ್ತನಾದ ಎಲ್ಲವನ್ನೂ ವೇದಿಕೆ ಮೇಲೆ ಅಭಿನಯಪೂರಕವಾಗಿ ತೋರಿಸುತ್ತಿದ್ದ ಆ ಗಾಂಧಿವಾದಿ ಈಗ ಯಾಕೆ ಇಷ್ಟೊಂದು ಬದಲಾದರು ಎನ್ನುವುದು ಕಾಡುತ್ತಲೇ ಇತ್ತು. ಹಾಗೇ ಅವರ ತಲೆ ಮೇಲಿನ ಗಾಂಧಿ ಟೋಪಿಯೂ ಮಾಯವಾಗಿತ್ತು.

ಬರೀ ಗಾಂಧಿ ಒಬ್ಬರೇ ಅಲ್ಲ, ಈ ಪ್ರಪಂಚದ ಯಾರೇ ರಾಷ್ಟ್ರೀಯ ನಾಯಕರು, ಹೋರಾಟಗಾರರು, ಅಧ್ಯಕ್ಷ -ಪ್ರಧಾನಿ, ಮುಂಚೂಣಿ ನಾಯಕರು ಕೊಲೆಯಾಗುವುದಕ್ಕೂ ಸಹಜವಾಗಿ ಸಾಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಂತ್ಯ ಎಲ್ಲವೂ ಒಂದೇ ಆದರೂ ಕಾರಣಗಳು ಬೇರೆ ಬೇರೆ ಇರುತ್ತವೆ. ಇವುಗಳನ್ನು ಬದಲಾಯಿಸಿದಾಗ ಅಲ್ಲಿಂದ ಮುಂದೆ ಸಾಗುವ ಚರಿತ್ರೆ, ಅದನ್ನು ಕೇಳಿಸಿಕೊಳ್ಳುವ ತಲೆಮಾರು ಸಾಧಕರ ಜೀವನ -ಜೀವಾಂತ್ಯವನ್ನು ಬೇರೆಯೇ ಆಗಿ ಪರಿಗಣಿಸುವ ಸಾಧ್ಯತೆಗಳೇ ಹೆಚ್ಚು.

ಗಾಂಧಿ ಸಹಜ ಸಾವಿಗೊಳಗಾದರಾ?

ಗಾಂಧಿಯನ್ನು ಕೊಲ್ಲಲಾಯಿತಾ?

ಈ ಎರಡು ವಾಕ್ಯಗಳ ನಡುವಿನ ವ್ಯತ್ಯಾಸ ಒಂದು ಪದದ ಗಾತ್ರದಷ್ಟೇ ಆಗಿರಬಹುದು, ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಆ ಪದದಲ್ಲೇ ಅಡಗಿದೆ ಮತ್ತು ಆ ಎಚ್ಚರಿಕೆ ನಿರಂತರ ಆಡುವವರಲ್ಲೂ, ಕೇಳುವವರಲ್ಲೂ ಇರಬೇಕು. ಸಾವು ಪ್ರಾಕೃತಿಕ, ಅತ್ಯಂತ ಸರಳ, ಜೀವಲೋಕದ ಪರಮ ಸತ್ಯ. ಆದರೆ ಅದು ಕೊಲೆ ಎಂದಾಗ ಅದಕ್ಕೆ ಕಾರಣವೇನು, ಯಾರಿಂದ ಆಯಿತು, ಏಕೆ ಆಯಿತು - ಎನ್ನುವ ಮೂರು ಪ್ರಶ್ನೆಗಳು ಕಡ್ಡಾಯವಾಗಿ ಹುಟ್ಟುತ್ತವೆ.

ಎಷ್ಟೋ ಬಾರಿ ಇದು ಬರಿ ಬಾಯಿ ತಪ್ಪಲ್ಲ, ಉದ್ದೇಶಪೂರ್ವಕ ನಾಜೂಕು-ಕೌಶಲ್ಯ. ಆ ನಿವೃತ್ತ ಮೇಷ್ಟ್ರೇ ಆಗಬೇಕಾಗಿಲ್ಲ, ಅವರೀಗ ಜೀವಂತ ಇಲ್ಲದಿದ್ದರೂ ಆ ಜಾಗದಲ್ಲಿ ನಾನು ನೀವು ಯಾರೇ ಇರಬಹುದು, ಅತಿ ಸೂಕ್ಷ್ಮ, ಶಿಸ್ತುಬದ್ಧ, ಅತಿ ಸಂಚಯಯುತ ಸಾಂದರ್ಭಿಕ ಪ್ರಕ್ರಿಯೆಯಿದು. ಗಾಂಧೀಜಿಯವರನ್ನು ಕೊಲ್ಲಲಾಯಿತು.

ಇದನ್ನು ಕೇಳಿಸಿಕೊಳ್ಳುವ ಮಕ್ಕಳ ಮನಸ್ಸಿಗೆ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಅನಿರ್ಬಂಧಿತ ದ್ವೇಷ ಮತ್ತು ಹಿಂಸೆಯ ಪರಿಣಾಮದ ಬಗ್ಗೆ ಕನಿಷ್ಠ ಒಂದು ಎಚ್ಚರಿಕೆ ಸಿಗುತ್ತಿತ್ತು. ತಪ್ಪಾದ ರಾಜಕೀಯವೂ, ದ್ವೇಷ ಚಿಂತನೆಗಳೂ ದೇಶದ ಮಹಾನ್ ನಾಯಕನೊಬ್ಬನನ್ನು ಹೀಗೆ ಕೊಲ್ಲಲು ಬರುತ್ತದೆ ಎಂಬ ಅರಿವು ಎಚ್ಚರವನ್ನು ಕಟ್ಟಿಕೊಳ್ಳುತ್ತಿತ್ತು. ಇದು ಕೇವಲ ಒಂದು ಪಕ್ಷ, ಸಿದ್ಧಾಂತದ ನೆಲೆಯಲ್ಲೇ ಆಗಬೇಕಾಗಿಲ್ಲ. ಕೊಲೆ ಎಂಬ ಅತ್ಯಂತ ಕ್ರೂರ ಕಠಿಣ, ಕಡಿಯುವ, ಕಚ್ಚುವ ಪದದ ಬದಲು ಮೃದು ಹಾಗೂ ನಿಷ್ಕಳಂಕ ವಾಕ್ಯ ಗಾಂಧೀಜಿಯವರು ತೀರಿಹೋದರು ಎಂಬುದಕ್ಕೆ ಸೇರಿಕೊಳ್ಳುತ್ತದೆ. ಇಲ್ಲಿ ಕೊಂದರು ಎಂದ ತಕ್ಷಣ ಮೇಲೆ ಹೇಳಿದಂತೆ ಹುಟ್ಟಿಕೊಳ್ಳುವ ಹೇಗೆ? ಯಾಕೆ? ಎಲ್ಲಿ? ಏನು?.. ಎಂಬಿತ್ಯಾದಿಗಳು ಸಹಜವಾಗಿಯೇ ನಾಪತ್ತೆಯಾಗುತ್ತವೆ.

ಇಲ್ಲಿ ಒಂದು ಸತ್ಯಾಂಶವನ್ನು ಬದಲಾಯಿಸುವುದು ನಿಷ್ಕಪಟವಾಗಿ ಕಾಣಬಹುದು. ಆದರೆ ಇದರ ಅಂತರಾಳದಲ್ಲಿ ಸದುದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚಿರುತ್ತದೆ. ಕೊಲೆ ಮಾಡಿದವರು ಇಲ್ಲದಿದ್ದರೆ, ಕೊಲೆಗೂ ಕಾರಣವಿಲ್ಲ, ಕಾರಣವಿಲ್ಲದಿದ್ದರೆ ದ್ವೇಷವಿಲ್ಲ, ದ್ವೇಷವಿಲ್ಲದಿದ್ದರೆ ತಪ್ಪು ಸಿದ್ಧಾಂತವಿಲ್ಲ, ತಪ್ಪು ಸಿದ್ಧಾಂತವಿಲ್ಲದಿದ್ದರೆ ಮುಂದೆ ನಡೆಯುವ ಪಾಠ ಮಾತು ಸಂವಾದ ಚರ್ಚೆ ಏಕೆ? ಯಾರಿಗೆ?

ನಿಜಕ್ಕೂ, ನಮ್ಮಲ್ಲಿ ಅತ್ಯಂತ ಅಪಾಯಕಾರಿಯಾದ ಒಂಟಿ ಸುಳ್ಳು ಯಾವುದು ಗೊತ್ತಾ? ಜನರ ಕಣ್ಣು ಮುಂದೆಯೇ ಸುಳ್ಳನ್ನು ಸತ್ಯದ ವೇಷದಲ್ಲಿ ನಿಲ್ಲಿಸುವುದು. ಮನುಷ್ಯ ಯೋಚಿಸುತ್ತಾನೆ ಎನ್ನುವುದು ಜೈವಿಕ ಸತ್ಯ, ಆದರೆ ಹೇಗೆ ಯೋಚಿಸುತ್ತಾನೆ ಎನ್ನುವುದು ಸಾಮಾಜಿಕ ಸಾಂಸ್ಕೃತಿಕ ಸತ್ಯ ಎಂಬುವುದು ಅಂಬೇಡ್ಕರ್ ಅವರ ಮಾತು. ಕೊಲೆಯಾದ ಗಾಂಧಿಯನ್ನು ಸಹಜ ಸಾವಿನಲ್ಲಿ ಅಂತ್ಯಗೊಳಿಸಿದ ಮೇಲಿನ ವ್ಯಕ್ತಿ ಅಥವಾ ಮುಂದಿನ ನಾವು ನೀವು ಒಂದು ಕಾಲದಲ್ಲಿ ಸರಿಯಾದದ್ದನ್ನೇ ಯೋಚಿಸುತ್ತಿದ್ದೆವು. ಮತ್ತು ಅದು ಆ ಕಾಲದ ಸತ್ಯವಾಗಿತ್ತು. ಈಗ ಇಂಥ ಯೋಚನೆ ಬದಲಾಗುವುದಕ್ಕೆ, ಸರಳಗೊಳ್ಳುವುದಕ್ಕೆ ಕಾರಣ ನಮ್ಮ ಹೊರಗಡೆ ಇರುವ ಸತ್ಯಗಳು. ಯಾವುದೋ ಒಂದು ಕೇಂದ್ರದಲ್ಲಿ ಸತ್ಯದ ಪ್ರಮಾಣ ಬದ್ಧತೆಗಳು ಕೇಂದ್ರೀಕೃತಗೊಂಡು, ಅಲ್ಲಿಂದಲೇ ಹಂಚಿಕೆಯಾಗುವ, ನಿಯಂತ್ರಿಸಲ್ಪಡುವ ನಿರ್ದೇಶಿಸಲ್ಪಡುವ ಕಾಲಘಟ್ಟದಲ್ಲಿ ಆ ಪ್ರವಾಹದ ವಿರುದ್ಧ ಈಜುವುದು ಸರಿಯಲ್ಲ ಎಂಬ ಹೊಸ ಸತ್ಯ ಅವರ ಅರಿವಿಗೆ ಬಂದಿರಬಹುದು ಅಥವಾ ಸತ್ಯವನ್ನು ಹೀಗೆ ಬದಲಾಯಿಸಿಕೊಳ್ಳುವ ನಮ್ಮ ನಿಮ್ಮೊಳಗಡೆಯೇ ಅದು ಇರಬಹುದು.ಎಲ್ಲರೊಂದಿಗೆ ಸರಿದೂಗಿಸಿ ಒಟ್ಟಿಗೆ ಚಲಿಸುವಾಗ ರಾಜಿಯಾಗುವುದೇ ಬದುಕಿಗೆ ಹೆಚ್ಚು ಸುಗಮ ಸುರಕ್ಷಿತ ಅನ್ನುವುದು ವರ್ತಮಾನದ ಅಗತ್ಯವಾಗಿದೆ.

ಬರೀ ಗಾಂಧಿವಾದಿ ನಿವೃತ್ತ ಮೇಷ್ಟ್ರಲ್ಲ, ವರ್ತಮಾನದ ಬರಹಗಾರರು, ಚಿಂತಕರು, ಕವಿಗಳು, ಪ್ರಗತಿಪರರು, ಸಮಾಜ ಸುಧಾರಕರು, ಮುತ್ಸದ್ಧಿ ರಾಜಕಾರಣಿಗಳು ಕೂಡ ನಿಧಾನವಾಗಿ ಇಂತಹ ಸುಗಮ ಮತ್ತು ಸುಲಭ ಬದುಕಿಗೆ ಜಾರಿಕೊಳ್ಳುತ್ತಿದ್ದಾರೆ. ಕೆಲವರಿಗೆ ನಾನು ಅಂಕಣವನ್ನು ಹೇಗೆ ಬರೆಯುತ್ತಿದ್ದೇನೆ ಅನ್ನುವುದಕ್ಕಿಂತ ಯಾವ ಪತ್ರಿಕೆಯಲ್ಲಿ ಬರೆಯುತ್ತಿದ್ದೇನೆ ಅನ್ನುವುದು ಮುಖ್ಯವಾಗುತ್ತದೆ. ಹೇಗೆ ಪಾಠ ಮಾಡುತ್ತಿದ್ದೆ ಅನ್ನುವುದಕ್ಕಿಂತ ಯಾವ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದೆ ಎನ್ನುವುದು ಮುಖ್ಯವಾಗುತ್ತದೆ. ಒಂದು ಕಾಲದ ಬಲಾಢ್ಯರು ಈಗ ಬಲಹೀನರಾಗಿ ಒಂದು ಕಾಲದ ಬಲಹೀನರು ಬಲಾಢ್ಯರಾಗುತ್ತಿರುವಾಗ ಸತ್ಯಗಳು ಕೂಡ ಇಂತಹ ಪರಿವರ್ತನೆಗೆ ಒಳಗಾಗುವುದು ಕಾಲದ ನಿಯಮವೂ ಇರಬಹುದು.

ಗಾಂಧೀಜಿಯವರ ಜೀವ ತೆಗೆದ ಹೊಂಚು ಅದು ಒಂದು ವ್ಯಕ್ತಿಯ ಬೆರಳಿಂದಷ್ಟೇ ಅಲ್ಲ, ಒಂದು ಚಿಂತನೆ, ಒಂದು ರೋಷ, ಒಂದು ವಿಷಕಾರಿ ರಾಜಕೀಯದ ಹೊತ್ತಿನಲ್ಲಿ ಹೊರಟದ್ದು. ಅದು ಬರೀ ಒಂದೇ ಪಕ್ಷ, ಸಿದ್ಧಾಂತವನ್ನು ಪ್ರತಿನಿಧಿಸುವ ರಾಜಕಾರಣಿಗಳೇ ಆಗಬೇಕಾಗಿಲ್ಲ. ಯಾವುದೇ ಪಕ್ಷದ ಯಾವುದೇ ನಾಯಕರಿರಬಹುದು. ಸಾಯಿಸಲಾದ ಆ ಗುಂಡಿನ ಹಿಂದಿರುವ ‘ಯಾಕೆ’ ಅನ್ನೋ ಪ್ರಶ್ನೆಗೆ ಗಂಭೀರವಾದ ರೀತಿಯಲ್ಲಿ ಉತ್ತರ ಹುಡುಕಲು ಸಾಧ್ಯವಾಗಿದ್ದರೆ ಇದು ಬರಿ ಗಾಂಧಿವಾದಿಗಳಿಗಷ್ಟೇ ಅಲ್ಲ ಅವರನ್ನು ವಿರೋಧಿಸುವವರಿಗೂ ಅಷ್ಟೇ ಪ್ರಮಾಣಬದ್ಧ ಉತ್ತರವಾಗುತ್ತಿತ್ತು. ಅದನ್ನು ಹುಡುಕಿದರೆ ಮುಂದಿನ ಪೀಳಿಗೆಯು ತಪ್ಪುಗಳನ್ನು ಪುನರಾವರ್ತಿಸುವುದನ್ನು ತಡೆಯುತ್ತಿತ್ತು. ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜಾತ್ಯತೀತವಾಗಿ, ರಾಜಕೀಯೇತರವಾಗಿ ಆ ಹುಡುಕಾಟದಿಂದ ಸಿಗುವ ಉತ್ತರದಿಂದ ಅಖಂಡ ದೇಶಕ್ಕೆ ಲಾಭವಾಗುತ್ತಿತ್ತು.

ಗಾಂಧೀಜಿಯವರನ್ನು ‘ತೀರಿಹೋದರು’ ಎಂದು ಹೇಳಿದಾಗ ಬರುವ ಆರಾಮ, ಅದೆಷ್ಟೋ ಜನರಿಗೆ ಸುಲಭವಾದ ಶಾಂತಿಯ ನಂಬಿಕೆಯನ್ನು ನೀಡಬಹುದು. ಆದರೆ ಸುಳ್ಳಿನ ಶಾಂತಿ ಎಷ್ಟೊಂದು ಅಪಾಯಕಾರಿ ಎಂಬುದನ್ನು ಇತಿಹಾಸ ಅನೇಕ ಬಾರಿ ಕಲಿಸಿದೆ. ಗಾಂಧಿ ಹೋದರಂತೆ - ಅಷ್ಟು ಸರಳವಾದ ವಾಕ್ಯಕ್ಕೆ ಒಳಗಡೆ ಗೋಡೆಗಳಿರುವ ಅಂಧಕಾರವಿದೆ. ಏಕೆಂದರೆ ಹೋದರೆ ಪ್ರಶ್ನೆ ಇಲ್ಲ. ಪ್ರಶ್ನೆ ಇಲ್ಲದಿದ್ದರೆ ಉತ್ತರ ಬೇಡ. ಉತ್ತರ ಬೇಡವಾದರೆ ತಪ್ಪಿಗೆ ನ್ಯಾಯ ಬೇಕಾಗಿಲ್ಲ.

ಭಾರತದ ಭವಿಷ್ಯ ಗಾಂಧಿಯ ಸಾವಿನಿಂದ ಅಲ್ಲ, ಅವರ ಕೊಲೆಯಲ್ಲಿ ಅಡಗಿರುವ ಪಾಠವನ್ನು ಅರ್ಥಮಾಡಿಕೊಳ್ಳುವುದರಿಂದ ರೂಪುಗೊಳ್ಳಬೇಕು. ಸತ್ಯ ಯಾವಾಗಲೂ ಕಠಿಣವೇ. ಆದರೆ ಕಠಿಣ ಸತ್ಯವೇ ಯಾವಾಗಲೂ ಸಮಾಜವನ್ನು ತಿದ್ದುತ್ತದೆ. ಸುಳ್ಳಿನ ನಯವಾದ ಸತ್ಯದ ವೇಷವು ಕೆಲವರಿಗೆ ಜೀವನ ಸುಗಮ ಮಾಡಬಹುದು, ಆದರೆ ರಾಷ್ಟ್ರದ ಪಾಲಿಗೆ ಅದು ವಿಷವೇ. ನಿನ್ನೆ ಅವರು, ನಾಳೆ ಇನ್ನೊಬ್ಬರಿಗೂ ಅದೇ ಕಠಿಣ ಪರಿಸ್ಥಿತಿ ಬರಬಹುದು. ನಿಜವನ್ನು ಮರೆಯುವ ರೀತಿ ಸುಮ್ಮನೆ ಭಾಷೆಯ ಬದಲಾವಣೆ ಅಲ್ಲ; ಅದು ನೆನಪು, ನಂಬಿಕೆ ಮತ್ತು ನೈತಿಕತೆಯ ಬದಲಾವಣೆ.

‘‘ಗಾಂಧಿಯನ್ನು ಕೊಲ್ಲಲಾಯಿತೇ?’’ ಎಂಬ ಪ್ರಶ್ನೆಯೊಳಗೇ ಒಂದು ಎಚ್ಚರಿಕೆ ಇದೆ. ‘‘ಗಾಂಧಿ ತೀರಿಹೋದರು’’ ಎನ್ನುವ ವಾಕ್ಯದೊಳಗೇ ಒಂದು ಹೊಂದಾಣಿಕೆ -ಸಮನ್ವಯವಿದೆ.ತಲೆಮಾರುಗಳು ಸುಳ್ಳಿಗೆ ಬೆಲೆ ಕೊಡಲು ಶುರು ಮಾಡಿದರೆ, ಇತಿಹಾಸದ ಜೀವಾಳವೇ ಬತ್ತುತ್ತದೆ. ಗಾಂಧಿಯ ಸಾವನ್ನು ಸಹಜ ಸಾವಾಗಿ ಬಿಂಬಿಸುವುದು ಗಾಂಧಿಗೆ ಗೌರವ ತೋರಿಸುವ ಮಾರ್ಗವಲ್ಲ - ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ, ಸತ್ಯಕ್ಕೆ ಮತ್ತು ತಲೆಮಾರುಗಳ ನೈತಿಕ ಶಿಕ್ಷಣಕ್ಕೆ ಮಾಡುವ ದ್ರೋಹ. ಮಕ್ಕಳಿಗೆ ಗಾಂಧಿ ಹೋದರು ಎಂದರೆ, ಒಬ್ಬ ಮಹಾನ್ ನಾಯಕ ಹೋದರು. ಆದರೆ ಗಾಂಧಿಯನ್ನು ಕೊಂದರು ಎಂದರೆ - ಯಾವ ಚಿಂತನೆ, ಯಾವ ದ್ವೇಷ, ಯಾವ ಹಿಂಸೆ ಒಬ್ಬ ಮಾನವತೆಯ ವ್ಯಕ್ತಿತ್ವವನ್ನು ಕೊಲ್ಲುವ ಮಟ್ಟಿಗೆ ಬಂದುಬಿಟ್ಟಿತ್ತು ಎಂಬ ಪ್ರಶ್ನೆ ಮೂಡುತ್ತದೆ.

ಆ ಪ್ರಶ್ನೆ ಮೂಡುವುದೇ ಕೆಲವೊಮ್ಮೆ ಅಪಾಯ. ಏಕೆಂದರೆ ಸತ್ಯಕ್ಕೆ ಮುಖಕೊಡಿಸಿದಾಗ ದ್ವೇಷದ ಮೂಲ ಕಾಣುತ್ತದೆ, ಹಿಂಸೆಯ ಮೂಲ ಕಾಣುತ್ತದೆ, ತಪ್ಪಾದ ರಾಜಕೀಯದ ಮೂಲ ಕಾಣುತ್ತದೆ. ಆ ಮೂಲಗಳನ್ನು ಒಮ್ಮೆ ಕಂಡರೆ, ಸಮಾಜ ಮತ್ತೊಮ್ಮೆ ಅದೇ ತಪ್ಪನ್ನು ಮಾಡಲು ಬಿಡುವುದಿಲ್ಲ. ಅದಕ್ಕಾಗಿ ಸತ್ಯವನ್ನು ಮಸುಕಾಗಿಸಿ ಸುಳ್ಳನ್ನು ಮೃದುಗೊಳಿಸಿ ಕೊಡುವ ಈ ಕಾಲ ತನ್ನದೇ ಆದ ಯೋಜನೆ ಮಾಡಿಕೊಂಡಂತಿದೆ. ಗಾಂಧಿಯನ್ನು ಸಹಜವಾಗಿ ತೀರಿಹೋದವರಾಗಿ ತೋರಿಸುವ ಜಗತ್ತಿನಲ್ಲಿ - ಗಾಂಧಿಯವರನ್ನು ಕೊಂದರು ಎಂದು ಹೇಳುವುದು ದ್ವೇಷಕ್ಕೆ ಬೆಂಕಿ ಹಚ್ಚುವುದಲ್ಲ; ದ್ವೇಷವನ್ನು ಮತ್ತೆ ಹುಟ್ಟದಂತೆ ಮಾಡುವ ಎಚ್ಚರಿಕೆಯ ಸಾಲು. ಸುಳ್ಳು ಸುಲಭ, ಸತ್ಯ ಕಠಿಣ. ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಕಠಿಣ ಸತ್ಯದ ಮೇಲೆ ನಿಂತಿರಬೇಕು. ಗಾಂಧಿಯವರ ಕೊಲೆ ಎಂಬ ವಾಕ್ಯ ಜಾಡ್ಯವಾದರೆ ಸಹ, ಆ ಜಾಡ್ಯದಲ್ಲಿ ಪಾಠವಿದೆ. ತಲೆಮಾರುಗಳ ಸುರಕ್ಷತೆ ಇದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಶ್ವಾಸವಿದೆ. ದೇಶಕ್ಕಾಗಿ ಗಾಂಧಿ ಜೀವ ತ್ಯಾಗ ಮಾಡಿದರಲ್ಲ - ಆದರೆ ದೇಶಕ್ಕಾಗಿ ನಾವು ಅವರ ಸಾವಿನ ಸತ್ಯವನ್ನು ಕಾಪಾಡಬೇಕಾದ ಹೊಣೆ ಇನ್ನೂ ನಮ್ಮ ಮೇಲಿದೆ. ತಲೆಮಾರನ್ನು ತಿದ್ದುವ ಮೇಷ್ಟ್ರುಗಳಿಗೆ, ಬಹುದೂರ ತಲುಪುವ ಲೇಖಕರಿಗೆ, ಲೋಕ ಸಂಸ್ಕರಿಸುವ ಸಾಹಿತಿಗಳಿಗೆ, ಮಾತಿನಲ್ಲೇ ಮತಗಿಟ್ಟಿಸುವ ರಾಜಕಾರಣಿಗಳಿಗೆ ಆ ಹೊಣೆ ಇನ್ನೂ ದೊಡ್ಡದಿದೆ!

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X