ಹರ್ಮಿ- ಕಸಕ್ಕೆ ಹೊಸ ಅರ್ಥ ಕೊಟ್ಟ ಸ್ವಾಮೀಜಿ!

ನಿಡಸೋಸಿಯ ಪುಟ್ಟ ಪ್ರಯೋಗವನ್ನು ನೋಡಿದಾಗ ನನಗೆ ಅನ್ನಿಸಿದ್ದು ಒಂದೇ. ಭಾರತಕ್ಕೆ ಇಂದು ಬೇಕಾಗಿರುವುದು ಸಾವಿರ ಭಾಷಣಗಳಲ್ಲ; ಕ್ಯಾಮರಾದ ಮುಂದೆ ಪೊರಕೆ ಹಿಡಿದು ಗುಡಿಸುವುದಲ್ಲ. ಸ್ವಚ್ಛತೆಯ ಘೋಷಣೆಗಳಲ್ಲ; ಬದಲಾಗಿ ನಿಜಗುಣೇಶ್ವರರಂತಹ ಸಾವಿರ ಸ್ವಾಮೀಜಿಗಳು, ಸಾವಿರ ಶಿಕ್ಷಕರು, ಸಾವಿರ ಪರಿಸರ ಪ್ರೇಮಿಗಳು ಮುಂದೆ ಬರಬೇಕು. ಚಿಕ್ಕ ಮಕ್ಕಳ ಪಠ್ಯದಲ್ಲಿ ಇಂಥ ಕಾಳಜಿ ಮೂಡುವಂಥ ಪಾಠಗಳಿರಬೇಕು.
ಭವಿಷ್ಯದ ಭಾರತವನ್ನು ಉಳಿಸುವುದು ಹೊಸ ತಂತ್ರಜ್ಞಾನಗಳು ಮಾತ್ರವಲ್ಲ. ನಾವು ಎಸೆದ ಕಸದೊಳಗೆ ಮತ್ತೆ ಹಸಿರುಜೀವವನ್ನು ಹುಡುಕುವ ಇಂತಹ ಮೌನ ಪ್ರಯೋಗಗಳು.
ಒಂದೇ ಒಂದು ಸಲ ನಿಮ್ಮೂರ ಕಸ ವಿಲೇವಾರಿ ಜಾಗಕ್ಕೆ ಹೋಗಿನೋಡಿ. ನಗರವನ್ನು ಪ್ರೀತಿಸುವ ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಕನಿಷ್ಠ ಒಂದು ಸಲ ಆ ಜಾಗಕ್ಕೆ ಭೇಟಿ ಕೊಡಬೇಕು. ಸುಂದರ ಉದ್ಯಾನವನಗಳನ್ನು, ಅಗಲವಾದ ರಸ್ತೆಗಳನ್ನು, ಗಾಜಿನ ಕಟ್ಟಡಗಳನ್ನು, ಮೆಟ್ರೋ ರೈಲುಗಳನ್ನು ಮಾತ್ರ ನೋಡಿ ನೀವು ಬದುಕುವ ನಗರದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಬಾರದು. ಒಂದು ಮಹಾನಗರದ ನಿಜವಾದ ಮುಖ ಅದರ ಡಂಪಿಂಗ್ ಯಾರ್ಡ್‌ನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿ ಅಭಿವೃದ್ಧಿಯ ಇನ್ನೊಂದು ಮುಖ ಕಾಣಿಸುತ್ತದೆ. ದೂರದಿಂದ ನೋಡಿದರೆ ಅದು ಕೇವಲ ಕಸದ ಗುಡ್ಡೆ. ಹತ್ತಿರ ಹೋದರೆ ಅದು ಸಾವಿರಾರು ಅಡುಗೆಮನೆಯ ಇತಿಹಾಸ. ಲಕ್ಷಾಂತರ ಜನರ ಬದುಕಿನ ಉಳಿಕೆ. ನವನಾಗರಿಕ ಉಪಭೋಗ ಸಂಸ್ಕೃತಿಯ ಅಸಲಿ ಮುಖ.
ಮಳೆಗಾಲದಲ್ಲಿ ಕಸದ ಗುಡ್ಡದ ಮೇಲೆ ಬೀಳುವ ಮಳೆನೀರು ಕಪ್ಪು ವಿಷರಸವಾಗಿ ಮಣ್ಣಿನ ಕೆಳಕ್ಕೆ ಜಾರುತ್ತದೆ. ಬೇಸಿಗೆಯಲ್ಲಿ ಹಸಿ ಕಸದೊಳಗಿಂದ ಹೊರಬರುವ ಅನಿಲಗಳು ಗಾಳಿಯನ್ನು ಭಾರವಾಗಿಸುತ್ತವೆ. ಪ್ಲಾಸ್ಟಿಕ್, ಬಟ್ಟೆ, ಗಾಜು, ಕೊಳೆತ ಆಹಾರ, ಆಸ್ಪತ್ರೆಗಳ ತ್ಯಾಜ್ಯ, ಇಲೆಕ್ಟ್ರಾನಿಕ್ ವಸ್ತುಗಳು ಎಲ್ಲವೂ ಒಂದರ ಮೇಲೊಂದು ಬಿದ್ದಿರುತ್ತವೆ. ಅಲ್ಲಿ ನೀವು ತಿಂದ ಮುಸುಂಬಿಯ ಸಿಪ್ಪೆ ಇರಬಹುದು. ತಲೆಗೆ ಹಾಕಿದ ಶಾಂಪೂ ಕವರ್ ಇರಬಹುದು, ಅಜ್ಜನ ಹಳೆಯ ಚಪ್ಪಲಿ, ಅಜ್ಜಿಯ ಮದ್ದಿನ ಸೀಸೆ..ಇವುಗಳ ನಡುವೆ ಆಹಾರ ಹುಡುಕುವ ದನಗಳು, ನಾಯಿಗಳು, ಹಂದಿಗಳು, ಹಕ್ಕಿಗಳು, ಹದ್ದುಗಳು, ಕಾಗೆಗಳು...ಮೂಗಿಗೆ ಬಡಿಯುವ ದುರ್ವಾಸನೆಗಿಂತ ಭಯಾನಕವಾದುದು ಅಲ್ಲಿ ಕಾಣುವ ನಿರ್ಲಕ್ಷ್ಯ. ನಗರ ತನ್ನ ಹೊಳಪನ್ನು ಉಳಿಸಿಕೊಳ್ಳಲು ತನ್ನೊಳಗಡೆಯ ಕತ್ತಲೆಯನ್ನು ಅಲ್ಲಿ ತಂದು ಸುರಿದಿದೆ ಎಂಬ ಭಾವನೆ ಕಾಡುತ್ತದೆ.
ಪ್ರತಿದಿನ ಭಾರತ ಸಾವಿರಾರು ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ನಗರಗಳು ಹೊಸ ವಿನ್ಯಾಸದಲ್ಲಿ ಎತ್ತರೆತ್ತರಕ್ಕೆ ಬೆಳೆಯುತ್ತವೆ. ನಗರ ಕಟ್ಟುವ ವಿಜ್ಞಾನಕ್ಕೆ ರಾಶಿ ರಾಶಿ ಬಂಡವಾಳ ಹರಿದು ಬರುತ್ತದೆ.ಅಲ್ಲಿ ಓದಿದ ಮಕ್ಕಳ, ಉದ್ಯೋಗಸ್ಥರ ಉಪಭೋಗ ಹೆಚ್ಚುತ್ತಿದೆ. ಆದರೆ ಕಸದ ಬಗ್ಗೆ ನಮ್ಮ ಚಿಂತನೆ ಮಾತ್ರ ಇನ್ನೂ ಬೆಳೆಯಲೇ ಇಲ್ಲ.
ನಾವು ಸುಖದ ವಸ್ತುಗಳನ್ನು ತಯಾರಿಸುವ ವಿಜ್ಞಾನವನ್ನು ಕಲಿತಿದ್ದೇವೆ. ಬಳಸುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದೇವೆ. ಆದರೆ ಬಳಸಿದ ನಂತರ ಅವುಗಳನ್ನು ಪ್ರಕೃತಿಗೆ ಹೇಗೆ ಮರಳಿಸಬೇಕು ಎಂಬ ಜ್ಞಾನವನ್ನು ಇನ್ನೂ ಸಂಪೂರ್ಣವಾಗಿ ಬೆಳೆಸಿಕೊಂಡಿಲ್ಲ. ಅದಕ್ಕಾಗಿಯೇ ಕೆಲವೊಮ್ಮೆ ಈ ದೇಶವೇ ನಿಧಾನವಾಗಿ ಒಂದು ದೊಡ್ಡ ಗೊಬ್ಬರದ ಗುಂಡಿಯಾಗಿ ಬದಲಾಗುತ್ತಿದೆಯೇ ಎಂಬ ಆತಂಕ ಕಾಡುತ್ತದೆ. ಈ ನಡುವೆಯೇ ನಾವು ಪ್ರಕೃತಿಯ ಒಂದು ದೊಡ್ಡ ಪಾಠವನ್ನು ಮರೆತಿದ್ದೇವೆ. ಪ್ರಕೃತಿ ಎಂದಿಗೂ ಕಸವನ್ನು ಸೃಷ್ಟಿಸುವುದಿಲ್ಲ. ಕಾಡಿನಲ್ಲಿ ಬೀಳುವ ಎಲೆ ಕಸವಲ್ಲ. ಸತ್ತ ಮರ ಕಸವಲ್ಲ. ಪ್ರಾಣಿಗಳ ಮಲ ಕಸವಲ್ಲ. ಸತ್ತ ನಮ್ಮ ಜೀವವೂ ಕಸವಲ್ಲ.ಇಲ್ಲಿ ಎಲ್ಲವೂ ಮತ್ತೊಂದು ಜೀವಕ್ಕೆ ಆಹಾರವಾಗುತ್ತದೆ. ಅಲ್ಲಿಂದಲೇ ಮತ್ತೊಂದು ಚಕ್ರದ ಆರಂಭವಾಗುತ್ತದೆ. ಕಸವನ್ನು ಸೃಷ್ಟಿಸಿದ್ದು ಪ್ರಕೃತಿಯಲ್ಲ; ನಮ್ಮ ನಾಗರಿಕತೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರವೂ ಮನುಷ್ಯನೇ ಹುಡುಕಬೇಕಲ್ಲವೇ.
ಈ ಹುಡುಕಾಟದಲ್ಲಿ ಭಾರತದಲ್ಲಿ ಸಾವಿರಾರು ಸಣ್ಣ ಪ್ರಯೋಗಗಳು ನಡೆಯುತ್ತಿವೆ. ಕೆಲವರು ಪ್ಲಾಸ್ಟಿಕನ್ನು ಮರುಬಳಕೆ ಮಾಡುತ್ತಿದ್ದಾರೆ. ಕೆಲವರು ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿಸುತ್ತಿದ್ದಾರೆ. ಕೆಲವರು ಅನಿಲ ಉತ್ಪಾದಿಸುತ್ತಿದ್ದಾರೆ. ಇವೆಲ್ಲ ಮಾಧ್ಯಮದ ಮೂಲೆಯಲ್ಲಿ ಅಪರೂಪಕ್ಕೆ ಪುಟ್ಟ ಸುದ್ದಿಯಾಗುತ್ತವೆ. ಆದರೆ ಇಂತಹ ಪುಟ್ಟ ಪ್ರಯೋಗಗಳೇ ನಾಳೆಯ ದೊಡ್ಡ ಪರಿಹಾರಗಳಾಗಬೇಕು.
ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಜಾಗಗಳಲ್ಲಿ ಅಡುಗೆಮನೆ ಪ್ರಮುಖವಾದುದು. ಹೋಟೆಲ್, ಹಾಸ್ಟೆಲ್, ಆಸ್ಪತ್ರೆ, ಶಾಲಾ-ಕಾಲೇಜಿನ ಮೆಸ್, ಮಠದ ದಾಸೋಹ, ದೇವಾಲಯದ ಅನ್ನಸಂತರ್ಪಣೆ ಎಲ್ಲವೂ ಪ್ರತಿದಿನ ಅಪಾರ ಪ್ರಮಾಣದ ಹಸಿ ತ್ಯಾಜ್ಯವನ್ನು ಸೃಷ್ಟಿಸುತ್ತವೆ. ತರಕಾರಿ ಸಿಪ್ಪೆ, ಹಣ್ಣುಗಳ ಸಿಪ್ಪೆ, ಗಂಜಿನೀರು, ಉಳಿದ ಆಹಾರ, ಊಟದ ಎಲೆ, ಬೇಳೆ-ತರಕಾರಿ ಉಳಿಕೆ... ಇವೆಲ್ಲವನ್ನೂ ನಾವು ಕಸ ಎಂದು ಕರೆಯುತ್ತೇವೆ. ಆದರೆ ಇವುಗಳಲ್ಲಿರುವ ಪೋಷಕಾಂಶವನ್ನು ಪ್ರಕೃತಿ ಇನ್ನೂ ಕಸ ಎಂದು ಒಪ್ಪಿಕೊಂಡಿಲ್ಲ.!
ಈ ಆಹಾರ ತ್ಯಾಜ್ಯವನ್ನು ನಾವು ನಿರ್ದಾಕ್ಷಿಣ್ಯವಾಗಿ ಗುಂಡಿಗೆ ಸುರಿಯುತ್ತೇವೆ. ಕೆಲವೊಮ್ಮೆ ಹಸುಗಳಿಗೆ ಕೊಡುತ್ತೇವೆ. ನಾಯಿಗಳಿಗೆ ಹಾಕುತ್ತೇವೆ. ಕೆಲವೊಮ್ಮೆ ಹೊಲದ ಅಂಚಿಗೆ ಎಸೆಯುತ್ತೇವೆ. ಪ್ಲಾಸ್ಟಿಕ್ ಕಸಗಳಿಗೆ ಬೆಂಕಿ ಇಡುತ್ತೇವೆ, ಎಷ್ಟೋ ಬಾರಿ ಸಾವಿರಾರು ಜನರಿಗೆ ಅಡುಗೆ ಮಾಡುವ ಸಂಸ್ಥೆಗಳ ಮುಂದೆ ಈ ಪ್ರಶ್ನೆ ಇನ್ನೂ ದೊಡ್ಡದಾಗಿ ನಿಂತಿದೆ.
ಪ್ರತಿದಿನ ನೂರಾರು ಕಿಲೋ ಹಸಿ ತ್ಯಾಜ್ಯವನ್ನು ಏನು ಮಾಡಬೇಕು? ಇದೇ ಪ್ರಶ್ನೆಗೆ ಬೆಳಗಾವಿ ಜಿಲ್ಲೆಯ ನಿಡಸೋಸಿಯ ಶ್ರೀ ದುರುದುಂಡೇಶ್ವರ ಮಠದಲ್ಲಿ ಒಂದು ವಿಭಿನ್ನ ಉತ್ತರ ಹುಟ್ಟಿದೆ. ಈ ಪ್ರಯೋಗದ ಹಿಂದಿರುವವರು ನಿಜಗುಣೇಶ್ವರ ಸ್ವಾಮೀಜಿ. ಕರಾವಳಿಯ ಜನರಿಗೆ ಅವರು ಇನ್ನೂ ಏಕಗಮ್ಯಾನಂದ ಸ್ವಾಮೀಜಿಯೇ. ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು ಕೇವಲ ಆಧ್ಯಾತ್ಮಿಕ ಗುರುಗಳಾಗಿರಲಿಲ್ಲ. ಪರಿಸರದ ಅಪಾರ ಕಾಳಜಿಯಿಂದ ಮಿಯಾವಾಕಿ ಮಾದರಿಯ ಕಾಡುಗಳನ್ನು ಬೆಳೆಸಿದರು. ಅಂದು ಮಂಗಳೂರಿನಲ್ಲಿ ಅವರು ನೆಟ್ಟ ಹಸಿರು ಇಂದಿಗೂ ಅವರ ನೆನಪಾಗಿ ಬೆಳೆಯುತ್ತಿದೆ.
ಮೂರು ವರ್ಷಗಳ ಹಿಂದೆ ಅವರು ನಿಡಸೋಸಿಗೆ ಬಂದಾಗ ಪರಿಸರವೂ ಅವರ ಜೊತೆಯೇ ಬಂದಿತು. ಇಂದು ಶ್ರೀ ದುರುದುಂಡೇಶ್ವರ ಮಠದ ವಿಶಾಲ ಶಿಕ್ಷಣ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಾವಿರಾರು ಭಕ್ತಾದಿಗಳಿಗೆ ಪ್ರತಿದಿನ ಅಡುಗೆ ಆಗುತ್ತದೆ. ಸಹಜವಾಗಿಯೇ ಅಪಾರ ಪ್ರಮಾಣದಲ್ಲಿ ಹಸಿಯೊಂದಿಗೆ ಒಣ ತ್ಯಾಜ್ಯವೂ ಹುಟ್ಟುತ್ತದೆ. ನಿಜಗುಣೇಶ್ವರ ಸ್ವಾಮೀಜಿ ಅಲ್ಲಿ ತಮ್ಮದೇ ಆದ ಸರಳ ಆದರೆ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಿದರು. ಇಲ್ಲಿ ಪ್ರತಿದಿನ ಅಡುಗೆಮನೆಯಿಂದ ಬರುವ ದ್ರವ ತ್ಯಾಜ್ಯ, ಗಂಜಿ, ಉಳಿದ ಆಹಾರ, ಹಣ್ಣುಗಳ ಅವಶೇಷ ಎಲ್ಲವೂ ಪ್ರತ್ಯೇಕ ಅಂಕಣಗಳಿರುವ ಸೋಸುವ್ಯವಸ್ಥೆಗೆ ಸೇರುತ್ತವೆ. ನಿಧಾನವಾಗಿ ಕೆಲವು ದಿನಗಳವರೆಗೆ ಅವುಗಳಲ್ಲಿರುವ ದ್ರವ ಪೋಷಕಾಂಶಗಳು ಕೆಳಭಾಗದಲ್ಲಿ ಸಂಗ್ರಹವಾಗುತ್ತವೆ. ಇದೇ ದ್ರವವನ್ನು ಅವರು ‘ಹರ್ಮಿ ದ್ರವ ಗೊಬ್ಬರ’ ಎಂದು ಹೆಸರಿಸಿದ್ದಾರೆ. ನಿಮಗೆ ವರ್ಮಿ ಕಾಂಪೋಸ್ಟ್ ಅಂದರೆ ಎರೆ ಗೊಬ್ಬರವೆಂದು ಗೊತ್ತು.ಆದರೆ ಇದು ಅದಕ್ಕಿಂತ ಭಿನ್ನ ಹರ್ಮಿ! .
ಇದು ಕೇವಲ ಗೊಬ್ಬರವಲ್ಲ. ಆಹಾರ ತ್ಯಾಜ್ಯ ಮತ್ತೆ ಮಣ್ಣಿನೊಂದಿಗೆ ಮಾತನಾಡುವ ಒಂದು ಸೇತುವೆ.
ಇಂದು ಈ ದ್ರವ ಗೊಬ್ಬರವನ್ನು ನೂರಾರು ರೈತರು ಬಳಸುತ್ತಿದ್ದಾರೆ. ಮತ್ತೆ ಮತ್ತೆ ಲೀಟರಿಗೆ ೨೦ ರೂ. ಕೊಟ್ಟು ಸರದಿಯಲ್ಲಿ ಬಂದು ಪಡೆಯುತ್ತಾರೆ. ಇದರ ಎರಡರಷ್ಟು ಪ್ರಮಾಣದಲ್ಲಿ ಹೆಚ್ಚುವರಿ ನೀರು ಸೇರಿಸಿ ಗಿಡಗಳಿಗೆ ಸಿಂಪಡಿಸಿದಾಗ ಉತ್ತಮ ಬೆಳವಣಿಗೆ, ಚೈತನ್ಯ ಮತ್ತು ಕೆಲವು ಕೀಟಗಳ ನಿಯಂತ್ರಣದಲ್ಲೂ ಉತ್ತಮ ಪರಿಣಾಮ ಕಂಡಿದ್ದೇವೆ ಎಂದು ಅನೇಕ ರೈತರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಆಮ್ಲಿಯ ಗುಣ ಇರುವ ಈ ದ್ರವ ಪ್ರಯೋಗಾಲಯದ ಪರೀಕ್ಷೆಗಳಲ್ಲೂ ಗುಣಮಟ್ಟದ ಬಗ್ಗೆ ಆಶಾದಾಯಕ ವರದಿಗಳನ್ನು ನೀಡಿದೆ.
ದ್ರವಾಂಶ ಬೇರ್ಪಟ್ಟ ನಂತರ ಉಳಿಯುವ ಘನ ತ್ಯಾಜ್ಯವನ್ನು ಒಣಗಿಸಿ ಯಂತ್ರದ ಮೂಲಕ ಪುಡಿಮಾಡಿ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಒಂದು ಕಾಲದಲ್ಲಿ ದುರ್ವಾಸನೆ ಬೀರುತ್ತಿದ್ದ ತ್ಯಾಜ್ಯವೇ ಈಗ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸಂಪತ್ತಾಗಿದೆ. ಈ ಮಠದ ಆವರಣದಲ್ಲಿ ಕಾಗದವೂ ಕಸವಲ್ಲ. ರಟ್ಟೂ ಕಸವಲ್ಲ. ಪ್ಲಾಸ್ಟಿಕ್ಕೂ ಕಸವಲ್ಲ. ಎಲ್ಲವನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿ ಒತ್ತಿ ಮರುಬಳಕೆಗೆ ಕಳುಹಿಸಲಾಗುತ್ತದೆ. ಒಂದು ಕ್ಯಾಂಪಸ್ ತನ್ನೊಳಗೆ ಉತ್ಪಾದಿಸುವ ತ್ಯಾಜ್ಯವನ್ನು ಸಾಧ್ಯವಾದಷ್ಟು ತನ್ನೊಳಗೇ ಮೌಲ್ಯವರ್ಧನೆ ಮಾಡಿ ಪ್ರಕೃತಿಗೆ ಮರಳಿಸುವ ಸಂಸ್ಕೃತಿಯನ್ನು ಇಲ್ಲಿ ಬೆಳೆಸಲಾಗಿದೆ. ಇದು ಕೇವಲ ಸ್ವಚ್ಛತಾ ಕಾರ್ಯಕ್ರಮವಲ್ಲ; ಬದುಕಿನ ತತ್ವ. ಈ ಕಾರಣಕ್ಕಾಗಿಯೇ ಇಡೀ ಕ್ಯಾಂಪಸ್ ‘ತ್ಯಾಜ್ಯ ಮುಕ್ತ ಹಸಿರು’ ಆವರಣವಾಗಿದೆ.
ನಮ್ಮ ದೇಶದ ಸಾವಿರಾರು ಮಠಗಳು, ಆಶ್ರಮಗಳು, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು ಪ್ರತಿದಿನ ಸಾವಿರಾರು ಟನ್ ಆಹಾರ ತ್ಯಾಜ್ಯವನ್ನು ಸೃಷ್ಟಿಸುತ್ತಿವೆ. ಅವುಗಳನ್ನು ಎತ್ತಿ ಸುತ್ತಿ ತರುವ ಎಷ್ಟೋ ಪ್ಯಾಸ್ಟಿಕ್ ಕಸಗಳು ರಸ್ತೆ ಬದಿಯಲ್ಲಿ ರಾಶಿ ಬೀಳುವುದನ್ನು ನಾವು ಕಂಡಿದ್ದೇವೆ. ಇಂಥವುಗಳಿಗೆಲ್ಲ ನಿಡಸೋಸಿಯ ಈ ಮಾದರಿ ಅಳವಡಿಕೆಯಾದರೆ ನಮ್ಮ ಎಷ್ಟೋ ಡಂಪಿಂಗ್ ಯಾರ್ಡ್‌ಗಳ ಮೇಲಿನ ಒತ್ತಡ ಕಡಿಮೆಯಾಗಬಹುದು, ರಾಸಾಯನಿಕ ಗೊಬ್ಬರದ ಬಳಕೆ ತಗ್ಗಬಹುದು, ಎಷ್ಟೋ ಮಣ್ಣು ಮತ್ತೆ ಜೀವಂತವಾಗಬಹುದು, ನದಿಗಳು ಕೊಳಚೆಯಿಂದ ಪಾರಾಗಬಹುದು.
ಇಂದು ನಾವು ಸ್ವಚ್ಛ ಭಾರತವನ್ನು ಕಸ ಗುಡಿಸುವ ಅಭಿಯಾನವೆಂದೇ ಭಾವಿಸಿದ್ದೇವೆ. ಆದರೆ ನಿಜವಾದ ಸ್ವಚ್ಛ ಭಾರತ ಕಸವನ್ನು ಎತ್ತಿ ಹೊರಗೆ ಸಾಗಿಸುವುದರಿಂದ ಬರುವುದಿಲ್ಲ; ಕಸವೇ ಹುಟ್ಟದ ಸಂಸ್ಕೃತಿಯಿಂದ ಬರುತ್ತದೆ. ಹುಟ್ಟಿದ ಕಸವನ್ನು ಮತ್ತೆ ಸಂಪತ್ತಾಗಿ ಪರಿವರ್ತಿಸುವ ಜ್ಞಾನದಿಂದ ಬರುತ್ತದೆ.
ನಿಡಸೋಸಿಯ ಈ ಪುಟ್ಟ ಪ್ರಯೋಗವನ್ನು ನೋಡಿದಾಗ ನನಗೆ ಅನ್ನಿಸಿದ್ದು ಒಂದೇ. ಭಾರತಕ್ಕೆ ಇಂದು ಬೇಕಾಗಿರುವುದು ಸಾವಿರ ಭಾಷಣಗಳಲ್ಲ; ಕ್ಯಾಮರಾದ ಮುಂದೆ ಪೊರಕೆ ಹಿಡಿದು ಗುಡಿಸುವುದಲ್ಲ. ಸ್ವಚ್ಛತೆಯ ಘೋಷಣೆಗಳಲ್ಲ; ಬದಲಾಗಿ ಇಂಥ ಸಾವಿರ ಸ್ವಾಮೀಜಿಗಳು, ಸಾವಿರ ಶಿಕ್ಷಕರು, ಸಾವಿರ ಪರಿಸರ ಪ್ರೇಮಿಗಳು ಮುಂದೆ ಬರಬೇಕು. ಚಿಕ್ಕ ಮಕ್ಕಳ ಪಠ್ಯದಲ್ಲಿ ಇಂಥ ಕಾಳಜಿ ಮೂಡುವಂಥ ಪಾಠಗಳಿರಬೇಕು.
ಭವಿಷ್ಯದ ಭಾರತವನ್ನು ಉಳಿಸುವುದು ಹೊಸ ತಂತ್ರಜ್ಞಾನಗಳು ಮಾತ್ರವಲ್ಲ. ನಾವು ಎಸೆದ ಕಸದೊಳಗೆ ಮತ್ತೆ ಹಸಿರುಜೀವವನ್ನು ಹುಡುಕುವ ಇಂತಹ ಮೌನ ಪ್ರಯೋಗಗಳು. ನಿಡಸೋಸಿಯಲ್ಲಿ ನಾನು ಕಂಡದ್ದು ಬರೀ ಒಂದು ಗೊಬ್ಬರ ಸ್ಥಾವರ-ಕಾರ್ಖಾನೆಯ ಮಾದರಿಯನ್ನಲ್ಲ; ಕಸದ ಅ ನಾಗರಿಕತೆಯಿಂದ ಪ್ರಕೃತಿಯ ನಾಗರಿಕತೆಯ ಕಡೆಗೆ ತೆರೆದುಕೊಳ್ಳುತ್ತಿರುವ ಒಂದು ಹೊಸ ಬಾಗಿಲು. ಅದನ್ನು ತೆರೆದವರು ಒಬ್ಬ ಸ್ವಾಮೀಜಿ ಮಾತ್ರವಲ್ಲ; ಕಸದ ರಾಶಿಯಲ್ಲಿಯೂ ಹಸಿರಿನ ಭವಿಷ್ಯವನ್ನು ಕಾಣಬಲ್ಲ ಒಂದು ದೂರದೃಷ್ಟಿ. ಆ ದೂರದೃಷ್ಟಿಯೇ ಇಂದು ಇಡೀ ದೇಶಕ್ಕೆ ಅತ್ಯಂತ ಅಗತ್ಯವಾದ ಸುಸ್ಥಿರ ಭೂಮಿಯ ಸಾವಯವ ಗೊಬ್ಬರ.
ನನಗೆ ಎಷ್ಟೋ ಬಾರಿ ಊಟ ಮುಗಿಸಿ ಎದ್ದೇಳುವಾಗ ಒಂದು ವಿಚಿತ್ರ ಅನುಭವವಾಗುತ್ತದೆ. ಕೆಲವೇ ಕ್ಷಣಗಳ ಹಿಂದೆ ಅದೇ ಎಲೆ ಮೇಲೆ ಬಡಿಸಿದ ಅನ್ನ, ಸಾರು, ಪಲ್ಯ, ಪಾಯಸ ಎಲ್ಲವೂ ನಮಗೆ ರುಚಿಯಾಗಿದ್ದವು. ಆದರೆ ಊಟ ಮುಗಿದ ತಕ್ಷಣ ಅದೇ ಎಲೆ ಮೇಲೆ ಉಳಿದ ಅನ್ನದ ಕಣಗಳು, ತರಕಾರಿಯ ಶೇಷ, ಸಾಂಬಾರದ ಉಳಿಕೆಗಳು ಏಕಾಏಕಿ ಕಸವಾಗಿ ಕಾಣಲು ಆರಂಭಿಸುತ್ತವೆ. ಅದನ್ನು ನೋಡಲೂ ಮನಸ್ಸಾಗುವುದಿಲ್ಲ, ಅದು ಕಣ್ಣಿಗೆ ಅಸಹ್ಯವಾಗಿರುತ್ತದೆ.ಅಲ್ಲೇ ಕೈ ತೊಳೆದು ಹೊರಟುಬಿಡುತ್ತೇವೆ.
ಇದು ಕೇವಲ ಊಟದ ಎಲೆಯ ಕಥೆಯಲ್ಲ. ಮನುಷ್ಯನ ಮನಸ್ಸಿನ ಕಥೆ. ಉಪಯೋಗ ಮುಗಿದ ತಕ್ಷಣ ವಸ್ತುವಿನ ಮೌಲ್ಯವನ್ನು ಕಳೆದುಕೊಳ್ಳುವ ಮನಸ್ಥಿತಿಯ ಕಥೆ. ಪ್ರಕೃತಿ ಮಾತ್ರ ಹೀಗೆ ಯೋಚಿಸುವುದಿಲ್ಲ. ಅದರ ಲೋಕದಲ್ಲಿ ಕಸ ಎಂಬ ಪದವೇ ಇಲ್ಲ. ಒಂದು ಜೀವಿಯ ಉಳಿಕೆ ಇನ್ನೊಂದು ಜೀವಿಯ ಆಹಾರ. ಒಂದು ಮರದ ಉದುರಿದ ಎಲೆ ಮತ್ತೊಂದು ಗಿಡಕ್ಕೆ ಗೊಬ್ಬರ. ಸತ್ತದ್ದು ಬದುಕಿಗೆ ಕಾರಣವಾಗುತ್ತದೆ. ಶೇಷವೇ ಸೃಷ್ಟಿಯ ಬೀಜವಾಗುತ್ತದೆ. ‘ಹರ್ಮಿ ಕಂಪೋಸ್ಟ್.’ ಇದು ಕೇವಲ ಹೊಸ ಗೊಬ್ಬರವಲ್ಲ; ಕಸವನ್ನು ನೋಡುವ ಹೊಸ ತತ್ವ.
ಅಡುಗೆ ಮನೆಯ ತ್ಯಾಜ್ಯ, ಹೊಲದ ಅವಶೇಷ, ಎಲೆ, ಕೊಂಬೆ, ಸಾವಯವ ಕಸ ಜನರು ಹೊರಗೆ ಎಸೆಯುವ ವಸ್ತುಗಳನ್ನೇ ಅವರು ಜೀವಂತ ಸಂಪತ್ತಾಗಿ ಪರಿವರ್ತಿಸುವ ದಾರಿಯನ್ನು ತೋರಿಸಿದರು.ಅವು ಕೇವಲ ಗೊಬ್ಬರವಲ್ಲ, ಬೆಳೆಗೆ ಚೈತನ್ಯ ಕೊಡುವ ಜೀವಸತ್ವ, ಮಣ್ಣಿನ ಆರೋಗ್ಯ ಹೆಚ್ಚಿಸುವ ಶಕ್ತಿ, ಕೀಟಗಳ ವಿರುದ್ಧ ನೈಸರ್ಗಿಕ ಪ್ರತಿರೋಧ ನೀಡುವ ವ್ಯವಸ್ಥೆಯಾಗಿ ಅದನ್ನು ಬೆಳೆಸಿದರು.
ಇಂದು ಜಗತ್ತು ‘ವೇಸ್ಟ್ ಮ್ಯಾನೇಜ್ಮೆಂಟ್’ ಎಂದು ದೊಡ್ಡ ದೊಡ್ಡ ಪದಗಳನ್ನು ಬಳಸುತ್ತಿದೆ. ಆದರೆ ಭಾರತೀಯ ಕೃಷಿ ಸಾವಿರಾರು ವರ್ಷಗಳಿಂದ ಒಂದು ಸರಳ ಸತ್ಯವನ್ನು ಹೇಳುತ್ತಲೇ ಬಂದಿದೆ. ಪ್ರಕೃತಿಯಲ್ಲಿ ಯಾವುದೂ ವ್ಯರ್ಥವಲ್ಲ. ವ್ಯರ್ಥವಾಗುವುದು ನಮ್ಮ ದೃಷ್ಟಿ ಮಾತ್ರ.!






