ಡಿಜಿಟಲ್ ಉಪವಾಸ ಸಾಧ್ಯವೇ?

ಸಾಂದರ್ಭಿಕ ಚಿತ್ರ
ವಾರಕ್ಕೆ ಒಂದು ದಿನವಾದರೂ ದಿನವಿಡೀ ಮೊಬೈಲ್ ಕೈಗೆ ತಾಗದಂತೆ ಬದುಕುವುದು, ನವಮಾಧ್ಯಮಗಳ ಇಣುಕು ನೋಟವಿಲ್ಲದೆ ಒಂದು ದಿನ ಸಾಗಿಸುವುದು - ಇವೆಲ್ಲವು ಅಸಾಧ್ಯವೇನಲ್ಲ. ಉಪವಾಸವೆಂದರೆ ಕೇವಲ ಆಹಾರದಿಂದ ಮಾತ್ರ ದೂರವಿರುವುದಲ್ಲ, ಇದೂ ಒಂದು ರೀತಿ ಶುದ್ಧೀಕರಣ. ಮನಸ್ಸಿಗೆ, ದೇಹಕ್ಕೆ, ಬದುಕಿನ ಲಯಕ್ಕೆ ಶಾಂತಿಯು ಹರಿಯುವಂತೆ ಮಾಡುವ ಕಲೆ. ಡಿಜಿಟಲ್ ಉಪವಾಸವೂ ಹಾಗೆಯೇ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಗದ್ದಲದಿಂದ ದೂರವಿದ್ದು, ಸ್ವಂತ ನಿಶ್ಚಲತೆಯನ್ನು ಮತ್ತೆ ಅರಿಯುವ ಪ್ರಯತ್ನ.
ದಸರಾ ರಜೆಯಲ್ಲಿ ರಾಜಧಾನಿ ಬಿಟ್ಟು ಹಳ್ಳಿಗೆ ಬಂದ ಆ ತಂದೆ ತಾಯಿಯರಿಗೆ ಪೂರ್ತಿ ಹತ್ತು ದಿನ ಊರಲ್ಲಿದ್ದು ಸಂಬಂಧಿಕರ ಮನೆಗೆ, ದೈವದ ಚಾವಡಿಗೆ, ತರವಾಡು ಬೀಡಿಗೆ ಹೋಗಿ ಎಲ್ಲರೊಂದಿಗೂ ಒಮ್ಮೆ ಬೆರೆಯಬೇಕೆನ್ನುವ ಆಸೆ ಇತ್ತು. ಒಂದೆರಡು ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳೂ ಇದ್ದವು. ಆದರೆ ಸಂಕಷ್ಟ ನೋಡಿ. ನಾಗರಿಕ ಜಗತ್ತಿನಿಂದ ದೂರದ ಅವರು ತಂಗಿದ್ದ ಹಳ್ಳಿಯ ಅಕ್ಕನ ಮನೆಯಲ್ಲಿ ಮೊಬೈಲ್ ರೇಂಜ್ ಇಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅವರ ಮಗಳು ಕನ್ನಿಕಾ, ‘‘ಇಲ್ಲ ನನಗಿಲ್ಲಿ ಬದುಕಲು ಸಾಧ್ಯವೇ ಇಲ್ಲ, ವಾಪಸ್ ಹೋಗುವ’’ ಎಂದು ರಚ್ಚೆ ಹಿಡಿದು ಬ್ಯಾಗುಗಳನ್ನು ತೆರೆಯಲೂ ಅವಕಾಶ ಕೊಡದೆ ಮತ್ತೆ ಬೆಂಗಳೂರು ಕಡೆಗೆ ಮುಖ ಮಾಡಿದ ಕಥೆಯನ್ನು ನಿನ್ನೆ ಅವಳ ದೊಡ್ಡಪ್ಪ ಹತ್ತಾರು ವರ್ಷಗಳಿಂದ ಹಳ್ಳಿಯಲ್ಲಿ ಕೃಷಿ ಮಾಡುತ್ತಾ ಬಂದ ರಾಜಶೇಖರ್ ನನ್ನೊಂದಿಗೆ ಹಂಚಿಕೊಂಡಾಗ ಯುವ ಮನಸ್ಸಿನ ಭವಿಷ್ಯ ಊಹಿಸಿ ಭಯವಾಗಿತ್ತು.
ಹೆರಿಗೆಗೆ ಒಳ್ಳೆಯ ಆಸ್ಪತ್ರೆ ಇಲ್ಲ, ವೈದ್ಯರಿಲ್ಲ, ಓದಿಗೆ ಒಳ್ಳೆ ಶಾಲೆ ಇಲ್ಲ, ಓಡಾಡಲು ಅತ್ಯುತ್ತಮ ರಸ್ತೆ ಇಲ್ಲ, ಸಂಕ, ಸೇತುವೆಗಳಿಲ್ಲ ಎಂಬ ಕಾರಣಗಳಿಗೆ ಕೆಲವರು ಪಟ್ಟಣಕ್ಕೆ ವಲಸೆ ಹೋದದ್ದು, ಅಲ್ಲೇ ಉಳಿದದ್ದು ನಮಗೆ ಗೊತ್ತೇ ಇದೆ. ಆದರೆ ಮೊಬೈಲಿಗೆ ರೇಂಜ್ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭೂಮಿ ಮೇಲಿನ ಈ ಹಳ್ಳಿಗಳೆಲ್ಲ ಅಪ್ರಯೋಜಕ, ಇಲ್ಲಿ ಬದುಕುತ್ತಿರುವವರು ಮನುಷ್ಯರೇ ಅಲ್ಲ ಎಂದೆಲ್ಲ ಹೀಯಾಳಿಸಿ ಗ್ರಾಮಕ್ಕೆ ಮುಖ ಮಾಡಿದ ಈ ಹುಡುಗಿ ಕನ್ನಿಕಾ ನನಗೆ ವರ್ತಮಾನದ ಬಹುದೊಡ್ಡ ವಿಷಣ್ಣ ರೂಪಕವಾಗಿ ಕಾಣಿಸುತ್ತಾಳೆ.
ಪಕ್ಕದ ಮನೆಯವರು ತಂದ ನಿನ್ನೆಯ ಪೇಪರನ್ನು ಇವತ್ತು ನಮ್ಮನೆಗೆ ತಂದು ಸರಿಯಾಗಿ ಕನ್ನಡ ಓದಲು ಬಾರದ ನನ್ನ ಅಪ್ಪಯ್ಯ ಅವುಗಳ ಒಂದೊಂದೇ ಅಕ್ಷರಗಳನ್ನು ಬಿಡಿಬಿಡಿಯಾಗಿ ಜೋಡಿಸಿಕೊಂಡು ಅದರ ಮುಖಪುಟದ ಹೆಡ್ಡಿಂಗ್ನಿಂದ ತೊಡಗಿ ಕೊನೆಪುಟದ ಪ್ರಕಾಶಕರ ಹೆಸರಿನವರೆಗೆ ಅರ್ಧ ದಿನ ತಪಸ್ಸಿನ ಹಾಗೆ ಅದನ್ನು ಓದಿ ಮುಗಿಸುತ್ತಿದ್ದ ಕಾಲ ಒಂದಿತ್ತು. ರಾಷ್ಟ್ರ, ಅಂತರ್ರಾಷ್ಟ್ರೀಯ ಸುದ್ದಿಗಳನ್ನು ಓದುವಾಗ ಸಹಜವಾಗಿ ಅವರ ಧ್ವನಿ ಹಿಗ್ಗಿ ಅದು ಇಡೀ ಮನೆಗೆ ಕೇಳುವ ವಾರ್ತೆಯಾಗಿತ್ತು. ಆನಂತರ ನಮ್ಮ ಅಜ್ಜ ಲೈಸನ್ಸ್ ಮಾಡಿಸಿ ಮಂಗಳೂರಿನಿಂದ ದೊಡ್ಡ ಮರ್ಫಿ ರೇಡಿಯೋವನ್ನು ಖರೀದಿಸಿ ದೇರ್ಲಕ್ಕೆ ತಂದದ್ದು, ಹತ್ತಾರು ಹಳ್ಳಿಗರ ಮುಂದೆ ಅದು ಉದ್ಘಾಟನೆಗೊಂಡದ್ದು, ನಿಧಾನವಾಗಿ ನಮ್ಮೂರಿಗೆ ಟಿ.ವಿ. ಬಂದದ್ದು, ಟಿ.ವಿ.ಗಿಂತ ಜಾಸ್ತಿ ಖರ್ಚು ಮಾಡಿ ಮನೆ ಎದುರಿನ ಅಂಡಿಪುಣರ್ ಮರಕ್ಕೆ ಆಂಟೇನ ಏರಿಸಿ ನಾವು ರವಿವಾರ ಸಂಜೆ ಚಂದನದ ಒಳಗಡೆ ಡಾ. ರಾಜಕುಮಾರ್ ಅವರನ್ನು ನೋಡಿದ್ದು.... ಎಲ್ಲವೂ ಈಗ ಮಾಧ್ಯಮಲೋಕದ ಸರಳ ಹಂಚಿಕೆಯ ಸಂಭ್ರಮದ ಇತಿಹಾಸ.
ಆದರೆ ಇಂದು ಇದೇ ದೇರ್ಲದ ಮನೆಮನೆಯ ಜಗಲಿಯಲ್ಲೇ ರೇಂಜ್ ಸಿಗುವ ಮೊಬೈಲ್, ಅದರ ಒಳಗಡೆಯೇ ನೂರಾರು ಪತ್ರಿಕೆಗಳು, ನೂರಾರು ರೇಡಿಯೋಗಳು, ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಸಂಗೀತ, ಸಂದೇಶ, ರಾಜ್ಯ, ದೇಶ ದಾಟಿ ಪರಸ್ಪರ ಮಾತನಾಡುವ ಅವಕಾಶ, ಕೇಳುವ ನೋಡುವ ಓದುವ ಇನ್ನೂ ಏನೇನೋ... ಅಂಗೈ ತುಂಬುವ ಒಂದೇ ಯಂತ್ರದಲ್ಲಿ ಎಲ್ಲವೂ ಸಿಗುವಾಗ ಅದನ್ನು ನೋಡುವ ಕಿವಿ ಕಣ್ಣು ಮನಸ್ಸು ದೇಹ ಏನಾಗಬೇಕು ಎಂದು ನೀವೇ ಯೋಚಿಸಿ. ನಿನ್ನೆಯ ಪೇಪರ್ ತಂದು ಬಿಡಿಬಿಡಿ ಅಕ್ಷರಗಳನ್ನು ಒಂದೊಂದಾಗಿಯೇ ಜೋಡಿಸಿ ಕೂಡು ಓದಿನಲ್ಲಿ ಲೋಕಸುಖ ಪಡುತ್ತಿದ್ದ ಅಪ್ಪಯ್ಯ ಎಲ್ಲಿ? ಎಲ್ಲವನ್ನು ಅಂಗೈ ಒಳಗಡೆ ರಾಶಿ ಸುರಿಯುವ ಇವತ್ತಿನ ಡಿಜಿಟಲ್ ಲೋಕ ಎಲ್ಲಿ?
ಒಂದು ಕಾಲದ ಅಪ್ಪಯ್ಯನ ನಿಧಾನ ಪಯಣ-ಅಕ್ಷರಗಳನ್ನು ಜೋಡಿಸಿಯೇ ಬಾಳನ್ನು ಓದಿದ ಶ್ರದ್ಧೆ, ನೀತಿಯ ಪೀಳಿಗೆಯದು. ಈ ಕಾಲದ ಕನ್ನಿಕಾ-ನೆಟ್ವರ್ಕ್ ಇಲ್ಲದ ಹಳ್ಳಿಯಲ್ಲಿ ಬದುಕೇ ಇಲ್ಲವೆಂದು ಕೂಗುವ ಪೀಳಿಗೆ. ತಾನು ತನ್ನ ತಂದೆ ತಾಯಿಯ ಬೇರು ಮೂಲಕ್ಕೆ ಬಂದಿದ್ದೇನೆ, ನೆಟ್ವರ್ಕ್- ಮೊಬೈಲ್ ಇಲ್ಲದೆಯೂ ಒಂದು ವಾರ ಮೌನದ ಸುಖ ಅನುಭವಿಸುವ ಅನ್ನುವ ಸಹನೆ ತಾಳ್ಮೆ ಇಲ್ಲದ ಒತ್ತಡದ ಒತ್ತುವರಿಯದು.
ಒಂದರಲ್ಲಿದೆ ನಿಧಾನ ಗತಿಯ ಪರಿಶ್ರಮದ ಶಾಂತಿ, ಇನ್ನೊಂದರಲ್ಲಿ ಸುಲಭದ ಅವಸರದ ಅಶಾಂತಿ. ಮಧ್ಯೆ ಬಿದ್ದಿರುವ ಈ ವ್ಯತ್ಯಾಸವೇ ಇವತ್ತಿನ ನಮ್ಮ ದೊಡ್ಡ ಮಾನಸಿಕ ಕ್ಷೋಭೆ. ಒಂದು ಕಡೆ ನಿಧಾನ ಬದುಕಿನ ಸಂತೃಪ್ತಿ, ನೆನಪು, ಇನ್ನೊಂದು ಕಡೆ ಮಿಂಚಿನ ವೇಗದ ಮರೆವು. ಒಂದು ಕಡೆ ಮಾನವನನ್ನು ಮನುಷ್ಯರನ್ನಾಗಿಸಿದ ಮಾಧ್ಯಮ, ಇನ್ನೊಂದು ಕಡೆ ಮನುಷ್ಯನನ್ನೇ ಮಾಧ್ಯಮದ ದಾಸನನ್ನಾಗಿಸಿದ ಕಾಲ.
ಮತ್ತೆ ಈ ನವಮಾಧ್ಯಮಗಳ ಹಿಡಿತದಿಂದ ಸಡಿಲಗೊಂಡು, ಭಾಗಶಃ ಅವುಗಳ ಸಹವಾಸವಿಲ್ಲದೆ ಬದುಕುವುದು ಸಾಧ್ಯವೇ? ನಗರ ಮಹಾನಗರಗಳನ್ನು ಬಿಡಿ, ಹಳ್ಳಿಗಳ ಜೀವನವನ್ನೊಮ್ಮೆ ಹತ್ತಿರದಿಂದ ನೋಡಿದರೆ, ಕಳೆದ ಒಂದು ದಶಕದಲ್ಲಿ ಆದ ಬದಲಾವಣೆಯೆಷ್ಟೆಂದರೆ, ಮನುಷ್ಯನ ಆತ್ಮಸಂಬಂಧವನ್ನೇ ಈ ಡಿಜಿಟಲ್ ಮಾಧ್ಯಮ ಮುರಿದು ಹಾಕಿದಂತೆ ಕಾಣಿಸುತ್ತದೆ. ಎಷ್ಟೇ ತಾಂತ್ರಿಕ ಲಾಭವಿದ್ದರೂ ಮನುಷ್ಯ ಮುಖಾಮುಖಿಯಲ್ಲಿ ಕಾಣಿಸುವ ಸಹಜ ಮಾತುಕತೆ ಪ್ರೀತಿ ಭಾವುಕತೆ ಇವೆಲ್ಲ ಕಾಟಾಚಾರಕ್ಕಷ್ಟೇ ಅನಿಸುತ್ತದೆ.
ಪೇಟೆ ಬಿಡಿ ಬರೀ ಹಳ್ಳಿಯನ್ನೊಮ್ಮೆ ನೋಡಿ. ಮಧ್ಯರಾತ್ರಿ ಹೊತ್ತಿನವರೆಗೆ ಯುವಕರ ಕೈಯಲ್ಲಿ ಕಣ್ಮಿಂಚಿನಂತೆ ಹೊಳೆಯುವ ಮೊಬೈಲ್ ಪರದೆ, ಅದರೊಳಗೆ ಹರಿಯುವ ಐಪಿಎಲ್ ಪಂದ್ಯದ ಸಂಖ್ಯೆಗಳ ಹೊರೆ, ಅದಕ್ಕೆ ಜೋತುಬಿದ್ದ ದುಡ್ಡು - ಇವೆಲ್ಲ ಒಂದೊಂದು ಅಮಲಿನ ಹನಿಗಳಂತೆ ಅವರ ನರನಾಳಗಳಲ್ಲಿ ಹರಿಯುತ್ತಿವೆ. ಹಗಲು ಹೊತ್ತು ಕೆಲಸಕ್ಕೆ ಮನಸ್ಸು ಇಲ್ಲ, ಓದಿಗೆ ಆಸೆ ಇಲ್ಲ, ಕುಟುಂಬದ ಮಾತಿಗೆ ಶ್ರದ್ಧೆ ಇಲ್ಲ, ಹದ ಅಮಲಿಗೆ ಗುಟ್ಕಾ ಮೆಲ್ಲುವ ಬಾಯಿ, ಅವರೆಲ್ಲ ಏನೋ ಒಂದು ಅಜ್ಞಾತ ಮೋಜಿನ ಮೋಡದಲ್ಲೇ ಅಯೋಮಯ ಸ್ಥಿತಿಯಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ.
ಖಂಡಿತ ಈ ಅಸುಖದಲ್ಲೇ ಒಂದು ಮಾನಸಿಕ ಕ್ಷೋಭೆಯ ಬೇರು ಇದೆ. ಅದು ಮುಂದಿನ ಭಯಾನಕ ಭವಿಷ್ಯದ ಸೂಚಕವೂ ಹೌದು. ಗ್ರಾಮಗಳಲ್ಲಿನ ನಿಜವಾದ ಆನಂದವೆಂದರೆ, ಬೆಳಗಿನ ಹೊತ್ತಿಗೆ ಹಸಿರು ಹೊಲದೊಳಗೆ ಹೆಜ್ಜೆ ಹಾಕುವುದು, ಹೊಳೆ ತೀರದಲ್ಲಿ ಕಲ್ಲುಗಳ ಮೇಲೆ ಕುಳಿತು ಹಾಡುವುದು, ಬಿತ್ತನೆ ಕಟ್ಟೆಯಲ್ಲಿ ಒಟ್ಟಾಗಿ ಶ್ರಮಿಸುವುದು, ಮನೆ ಅಂಗಳದ ಜಗಲಿಯಲ್ಲಿ ಕೂತು ಸಣ್ಣದಾದರೂ ಆನಂದವನ್ನು ಹಂಚಿಕೊಳ್ಳುವುದು. ಸಾಲಾಗಿ ಊಟಕ್ಕೆ ಕೂತು ದಿನದ ಅನುಭವಗಳನ್ನು ಕಥೆಯಾಗಿಸುವುದು. ಇವೆಲ್ಲವೂ ಇಂದಿಗೆ ಅಸ್ತಿತ್ವ ಕಳೆದುಕೊಂಡಿವೆ.
ಮೊಬೈಲ್ ಪರದೆಯೊಳಗಿನ ಲೋಕವೇ ಸತ್ಯ, ಉಳಿದ ಪ್ರಪಂಚವೆಲ್ಲಾ ನೆರಳಷ್ಟೆ ಎಂಬ ಭಾವನೆ ಆಳವಾಗಿ ನೆಲೆಯೂರಿದೆ. ಸಂಗೀತವೆಂದರೆ ಇಂದಿಗೆ ಪ್ಲೇಲಿಸ್ಟ್, ಗಾನಸಂಜೆ ಎಂದರೆ ಬ್ಲೂಟೂತ್ ಇಯರ್ಫೋನ್. ಪುಸ್ತಕವಾಚನ, ಉಪನ್ಯಾಸ, ಸಂವಾದ ಎಲ್ಲವೂ ಮಸುಕಾಗುತ್ತಿದೆ. ಮನಸ್ಸನ್ನು ಧ್ಯಾನಕ್ಕೆ ತಳ್ಳುವ ಹಸಿರಿನ ಒಡನಾಟ-ಓಡಾಟವೂ ಇಲ್ಲ, ಪರಸ್ಪರ ಪ್ರೀತಿ ಆತ್ಮೀಯತೆಗೂ ದಾರಿ ಮುಚ್ಚಿದಂತಿದೆ. ಏನೋ ಒಟ್ಟುಗೂಡಿಸುವ ಶಕ್ತಿಯು ಸಂಪೂರ್ಣ ಕುಸಿದಿದೆ.
ಈ ಹಿನ್ನೆಲೆ ಇಟ್ಟುಕೊಂಡೇ ‘ಡಿಜಿಟಲ್ ಉಪವಾಸ’ ಎಂಬ ಸ್ವಯಂ ‘ಯಂತ್ರ ನಿಯಂತ್ರಣ’ ಈಗ ಸಾಧ್ಯವಾಗಬೇಕು. ವಾರಕ್ಕೆ ಒಂದು ದಿನವಾದರೂ ದಿನವಿಡೀ ಮೊಬೈಲ್ ಕೈಗೆ ತಾಗದಂತೆ ಬದುಕುವುದು, ನವಮಾಧ್ಯಮಗಳ ಇಣುಕು ನೋಟವಿಲ್ಲದೆ ಒಂದು ದಿನ ಸಾಗಿಸುವುದು - ಇವೆಲ್ಲವು ಅಸಾಧ್ಯವೇನಲ್ಲ. ಉಪವಾಸವೆಂದರೆ ಕೇವಲ ಆಹಾರದಿಂದ ಮಾತ್ರ ದೂರವಿರುವುದಲ್ಲ, ಇದೂ ಒಂದು ರೀತಿ ಶುದ್ಧೀಕರಣ. ಮನಸ್ಸಿಗೆ, ದೇಹಕ್ಕೆ, ಬದುಕಿನ ಲಯಕ್ಕೆ ಶಾಂತಿಯು ಹರಿಯುವಂತೆ ಮಾಡುವ ಕಲೆ. ಡಿಜಿಟಲ್ ಉಪವಾಸವೂ ಹಾಗೆಯೇ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಗದ್ದಲದಿಂದ ದೂರವಿದ್ದು, ಸ್ವಂತ ನಿಶ್ಚಲತೆಯನ್ನು ಮತ್ತೆ ಅರಿಯುವ ಪ್ರಯತ್ನ. ಆ ಬದುಕು ಮರಳಿ ಬರಬೇಕಾದರೆ, ಮೊಬೈಲ್ನ ಪರದೆಯು ಕಣ್ಣುಗಳ ಮುಂದೆ ತಗಲುವ ಕ್ಷಣವನ್ನು ನಾವು ಕಡಿಮೆ ಮಾಡಬೇಕು.
ಹಾಗಂತ ಇದು ಕೇವಲ ಯುವಕರಿಗೆ ಮಾತ್ರ ಹೇಳಬೇಕಾದ ಬೋಧನೆ ಅಲ್ಲ, ವಯಸ್ಸಾದವರಿಗೂ ಅನ್ವಯಿಸುವ ಮಾತು. ಇಂದಿನ ದಿನಗಳಲ್ಲಿ ಹಿರಿಯರೂ ಸಹ ಸುದ್ದಿಯ ಹೆಸರಿನಲ್ಲಿ, ರಾಜಕೀಯದ ಹೊಳಹಿನ ಹೆಸರಿನಲ್ಲಿ, ಅಲ್ಪಮಟ್ಟದ ಕುತೂಹಲದ ಹೆಸರಿನಲ್ಲಿ ಫೋನ್ನೊಳಗೇ ಗೂಟ ಹೊಡೆದು ಕೂತಿರುತ್ತಾರೆ. ಈ ‘ನೆಟ್ ನೋಟ’ವೇ ನಿಜವಾಗಿ ನಮ್ಮ ಮನಸ್ಸನ್ನು ಶೋಷಿಸುತ್ತದೆ. ಈ ಎಲ್ಲದರ ಮಧ್ಯೆ ಒಂದು ಪ್ರಶ್ನೆ ಇನ್ನೂ ಬಾಕಿಯಿದೆ - ನಮ್ಮ ಮನಸ್ಸೇನು ಬಯಸುತ್ತದೆ? ನಮಗೆ ನಿಜವಾಗಿಯೂ ಈ ನವಮಾಧ್ಯಮಗಳಿಲ್ಲದ ಬದುಕಿನ ಹಂಬಲ ಇದೆಯೆ? ಇಲ್ಲವೇ? ನಾವು ಅಷ್ಟರಲ್ಲಿ ಸಂಪೂರ್ಣವಾಗಿ ಸೆರೆಹೋಗಿದ್ದೇವೆಯೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ. ಏಕೆಂದರೆ ಮಾನವ ಸಂಬಂಧದ ನಾಳೆಗಳನ್ನು ಉಳಿಸಿಕೊಳ್ಳದಿದ್ದರೆ, ಉಳಿದ ಎಲ್ಲ ಸಾಧನ -ಸಾಧನೆಗಳೂ ಬಂಜರಾಗಿಬಿಡುತ್ತವೆ.
ಡಿಜಿಟಲ್ ಉಪವಾಸ ಎನ್ನುವುದು ಈ ಲೋಕದ ಬದುಕನ್ನು ಮತ್ತೆ ಮನುಷ್ಯತ್ವದತ್ತ ತರುವ ಒಂದು ಕಿರುಪ್ರಯತ್ನ. ಈ ಪ್ರಯತ್ನವೇ ದೊಡ್ಡ ಬದಲಾವಣೆಯ ಬೀಜವಾಗಬಲ್ಲದು. ನಕ್ಷತ್ರಗಳ ಬೆಳಕು, ಗಾಳಿಯ ತಂಪು, ಹಸಿರು ಹೊಲದ ನಗೆ - ಇವುಗಳ ಮಧ್ಯೆ ನಿಂತು ಮನುಷ್ಯನು ತನ್ನೊಳಗಿನ ಮೌನವನ್ನು ಮತ್ತೆ ಅನುಭವಿಸುವ ದಿನ ಬರಬೇಕಾಗಿದೆ. ಇಲ್ಲವಾದರೆ ಪರದೆಗೆ ಕಟ್ಟಿಹಾಕಿದ ನಮ್ಮ ಕಣ್ಣುಗಳು ಶಾಶ್ವತವಾಗಿ ಕತ್ತಲೆಯನ್ನೇ ನೋಡುವಂತೆ ಆಗಿಬಿಡುತ್ತವೆ.
ಯುವ ಪೀಳಿಗೆಗಳ ಮನಸ್ಸಿನೊಳಗೆ ಇಂದಿನ ನವಮಾಧ್ಯಮವೊಂದು ನಿಶ್ಚಲವಾಗಿ ಹುಲ್ಲುಗಾವಲಿನ ಬೆಂಕಿಯಂತೆ ಹೊತ್ತಿಕೊಂಡಿದೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಣ್ಣೆದುರು ಹೊಳೆಯುವ ಆ ಸಣ್ಣ ಪರದೆ, ಮನುಷ್ಯನ ಬದುಕನ್ನು ಕೊಂಡಾಡುವ ಸಾಧನವಲ್ಲ, ಮನುಷ್ಯನ ಮನಸ್ಸನ್ನು ನಿಧಾನವಾಗಿ ಶೋಷಿಸುವ ಚಕ್ರಸುಳಿಯಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಯುವಕರ ಹೃದಯ-ಕನಸುಗಳೆಲ್ಲ ಕಳೆಗಟ್ಟುವ, ಬದುಕಿನ ಉತ್ಸಾಹವನ್ನು ಹರಿದುಕೊಳ್ಳುವ ಹಂತದಲ್ಲಿರುವ ವಯಸ್ಸು - ಇದಕ್ಕೆ ಸಿಕ್ಕಿಬಿದ್ದಾಗ ಪರಿಣಾಮ ಇನ್ನೂ ತೀಕ್ಷ್ಣವಾಗುತ್ತದೆ.
ನಮ್ಮ ಮನಸ್ಸು ನಿರಂತರವಾಗಿ ‘ಬೀಪ್’ ಅಥವಾ ‘ನೋಟಿಫಿಕೇಶನ್’ ಧ್ವನಿಯ ಮೇಲೆಯೇ ನಿಂತಿರುವುದು ಒಂದು ಅಸಹಜ ಎಚ್ಚರ ಸ್ಥಿತಿ. ಇದರಿಂದ ಓದಿಗೆ ಕಣ್ಣು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ಸಂಬಂಧಗಳಿಗೆ ಹೃದಯ ಶಾಂತವಾಗುವುದಿಲ್ಲ. ಸಂಗೀತದಂತಹ ಸೂಕ್ಷ್ಮಕಲೆಯನ್ನು ಆಸ್ವಾದಿಸುವ ತಾಳ್ಮೆ, ಸಂವೇದನೆ, ಧೈರ್ಯವು, ಕಾದು ನೋಡುವ ಕಲೆಗಳು - ಇವೆಲ್ಲ ಒಣಗಿದ ಎಲೆಗಳಂತೆ ಗಾಳಿಯಲ್ಲಿ ಹಾರಿ ಹೋಗುತ್ತವೆ. ಯುವ ಮನಸ್ಸು ತಕ್ಷಣದ ಸಂತೃಪ್ತಿಯ ಚಕ್ರಕ್ಕೆ ಒಳಗಾಗುತ್ತದೆ; ಒಂದು ಸಂದೇಶ ತಡವಾದರೂ ಕೋಪ, ಒಂದು ಲೈಕ್ ಕಡಿಮೆಯಾದರೂ ಕುಗ್ಗುವಿಕೆ.
ಇದರಿಂದಾಗಿ ಬರುವ ಮತ್ತೊಂದು ಕಾಯಿಲೆ - ಒಂಟಿತನ. ನೂರಾರು ‘ಆನ್ಲೈನ್ ಸ್ನೇಹಿತರು’ ಇದ್ದರೂ, ಮನದಾಳಕ್ಕೆ ಕೈಹಾಕುವ ಒಬ್ಬ ನಿಜವಾದ ಸ್ನೇಹಿತನು ಸಿಗುವುದೇ ಕಷ್ಟ. ಪರದೆ ಬೆಳಕಿನಲ್ಲಿ ಮನುಷ್ಯ ಹೆಚ್ಚು ಸಂಪರ್ಕಿತನಾಗಿ ಕಾಣುತ್ತಿದ್ದರೂ, ಆತ್ಮದೊಳಗೆ ಗಾಢ ಏಕಾಂಗಿಯಾಗಿಯೇ ಬಿಡುತ್ತೇವೆ. ಈ ಏಕಾಂಗಿ ಕತ್ತಲೆಯೇ ನಿಧಾನವಾಗಿ ಖಿನ್ನತೆ, ಜೀವನದ ಅರ್ಥವಿಲ್ಲದ ಭಾವನೆಗಳನ್ನು ಬೆಳೆಸುತ್ತದೆ. ಆಯಾಸ, ಅಸ್ವಸ್ಥತೆ, ನಿದ್ರಾಹೀನತೆ-ಇವುಗಳ ಜೊತೆಗೂಡಿ ಜೀವನದ ಉತ್ಸಾಹವೇ ಬತ್ತಿಹೋಗುವ ಅಪಾಯ. ಭವಿಷ್ಯದಲ್ಲಿ ಈ ಪೀಳಿಗೆಯು ಹೊರಗೆ ಪ್ರಭಾವಶಾಲಿ ತಂತ್ರಜ್ಞಾನದ ಲೋಕ ಕಟ್ಟಬಹುದು, ಆದರೆ ಒಳಗೆ ಮನುಷ್ಯತ್ವದ ನಿಶ್ಚಲತೆಗೆ ಹಸಿವು ಹೆಚ್ಚಾಗಿರುತ್ತದೆ.
ಡಿಜಿಟಲ್ ಮಾಧ್ಯಮದ ಪ್ರಯೋಜನ ಅಗತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ; ಆದರೆ ಅದಕ್ಕೆ ಮಣಿದುಬಿಟ್ಟರೆ ಭವಿಷ್ಯವೆಂದರೆ ಒತ್ತಡ, ಖಿನ್ನತೆ, ಅಸಹನೆಗಳ ನಾಡಿಯಾಗ ಬಹುದು. ಹೀಗಾಗಿ ನಿಜವಾದ ಹೋರಾಟವು ತಂತ್ರಜ್ಞಾನಕ್ಕಾಗಿ ಅಲ್ಲ - ತಂತ್ರಜ್ಞಾನದ ನಡುವೆ ಮನಸ್ಸಿನ ಮೌನಕ್ಕಾಗಿ. ಅದನ್ನು ಮರಳಿ ಹಿಡಿಯದಿದ್ದರೆ, ಬರುವ ಪೀಳಿಗೆಗಳಲ್ಲಿ ನಗು ಕೇವಲ ಪರದೆ ಬೆಳಕಿನಲ್ಲಿ ಮಾತ್ರ ಹೊಳೆದು, ಮನಸ್ಸಿನೊಳಗೆ ಕತ್ತಲು ಮಾತ್ರ ಉಳಿಯುತ್ತದೆ.







