ಸಾಹಿತಿ ಮತ್ತು ಸಾಹಿತ್ಯ ಪರಿಧಿಗೆ ಸರಿಯುತ್ತಿದೆಯೇ?

ಸಾಹಿತಿಯ ಮಾತನ್ನು ಕೇಳುವ, ಚರ್ಚಿಸುವ, ತರ್ಕದ ಮೂಲಕ ಎದುರಿಸುವ ಬೌದ್ಧಿಕ ಸಂಸ್ಕೃತಿ ಸಮಾಜದಲ್ಲಿ ಉಳಿಯಬೇಕು. ಸಾಹಿತಿಯನ್ನು ಸಂಪೂರ್ಣವಾಗಿ ಸಾರ್ವಜನಿಕ ಸಂವಾದದಿಂದ ಹೊರಗಿಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಹೊರಗುಳಿದ ಸಾಹಿತಿಗಳಿಗಿಂತ ಒಳ ಬಂದ ಸಾಹಿತಿಗಳ ಹೆಸರುಗಳನ್ನು ಗಮನಿಸಿದರೆ ಪ್ರಭುತ್ವವೇ ನಿಜವಾದ ಚಿಂತಕರನ್ನು ಪರಿಧಿಗೆ ಸೇರಿಸುತ್ತಿದೆ ಅನಿಸುತ್ತದೆ.
ಇವತ್ತು ಈ ರಾಜ್ಯದಲ್ಲಿ ಏನೇ ನಡೆದರೂ ಅದಕ್ಕೆ ಪ್ರತಿಕ್ರಿಯೆಯಾಗಿ ರಾಜಕಾರಣಿಗಳನ್ನು ಕೆಣಕಿ ಅವರ ಮಾತುಗಳನ್ನು ಮುತ್ತುಗಳ ಹಾಗೆ ಹೆಕ್ಕಿಕೊಂಡು, ಅದನ್ನು ಹಿಂದೆ ಮುಂದೆ ಕತ್ತರಿಸಿ, ಬೇಕಾದಷ್ಟನ್ನೇ ಪ್ರಕಟಿಸಿ ಬೆಂಕಿಗೆ ಎಣ್ಣೆ ಸುರಿಯುವ ಮಾಧ್ಯಮಗಳು ಮೊನ್ನೆ ಮೊನ್ನೆಯವರೆಗೆ ಅಷ್ಟೇ ಮುತುವರ್ಜಿಯಿಂದ ಆಗಾಗ ಸಾಹಿತಿಗಳ, ಸಂಸ್ಕೃತಿ ಚಿಂತಕರ ಮುಖದ ಮುಂದೆಯೂ ಅಭಿಪ್ರಾಯಕ್ಕಾಗಿ ಮೈಕ್ ಹಿಡಿಯುತ್ತಿದ್ದವು. ಅವರ ಮಾತುಗಳನ್ನು ಸಂಗ್ರಹಿಸಿ ಜನರ ಮುಂದಿಡುತ್ತಿದ್ದವು. ಆ ಅಭಿಪ್ರಾಯಗಳು ಒಂದು ಗುಣಾತ್ಮಕ ಸಾರ್ವಜನಿಕ ಚರ್ಚೆಯನ್ನು ರೂಪಿಸುತ್ತಿದ್ದವು.ಕೆಲವೊಮ್ಮೆ ಅವು ಪ್ರಭುತ್ವದ ನಿಲುವುಗಳ ಮೇಲೆ ಗಂಭೀರ ಪ್ರಭಾವ ಬೀರುತ್ತಿದ್ದವು. ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚರ್ಚೆಗಳಲ್ಲಿ ಸಾಹಿತಿಗಳ ಮಾತಿಗೆ ಒಂದು ವಿಶಿಷ್ಟವಾದ ಸ್ಥಾನವಿದ್ದ ಕಾಲವದು. ಶಿವರಾಮ ಕಾರಂತ, ಭೈರಪ್ಪ, ಅನಂತಮೂರ್ತಿ, ತೇಜಸ್ವಿ, ಸುಬ್ಬಣ್ಣ, ರಾಮದಾಸ್, ಲಂಕೇಶ್, ಕಾರ್ನಾಡ್ ಮೊದಲಾದವರು ಕೇವಲ ಕೃತಿಗಳನ್ನು ಬರೆಯುತ್ತಾ, ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡುತ್ತಿದ್ದ ಸಾಹಿತಿಗಳಾಗಿರಲಿಲ್ಲ. ಅವರು ತಮ್ಮ ಕಾಲದ ಸಮಾಜದೊಂದಿಗೆ ನಿರಂತರ ಸಂವಾದ ನಡೆಸಿದವರು. ಒಂದು ಸಾಮಾಜಿಕ ಅಥವಾ ರಾಜಕೀಯ ಪ್ರಶ್ನೆ ಎದುರಾದಾಗ ಮಾಧ್ಯಮಗಳು ಅವರ ಅಭಿಪ್ರಾಯವನ್ನು ಕೇಳುತ್ತಿದ್ದವು. ಅವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಓದುಗರಲ್ಲಿಯೂ ಒಂದು ಕುತೂಹಲವಿತ್ತು. ಒಂದು ಸಮಸ್ಯೆಯನ್ನು ಸಾಮಾನ್ಯರಿಗಿಂತ ಭಿನ್ನವಾಗಿ ನೋಡುವ, ಅದರ ಒಳಸುಳಿಗಳನ್ನು ಗುರುತಿಸುವ, ಪ್ರಭುತ್ವದ ನಿಲುವುಗಳನ್ನು ಪ್ರಶ್ನಿಸುವ ಮತ್ತು ಸಮಾಜಕ್ಕೆ ಹೊಸ ಆಲೋಚನೆಯ ಉತ್ತರದಾಯಿತ್ವದ ದಿಕ್ಕನ್ನು ತೋರಿಸಬಹುದಾದ ಸಾಮರ್ಥ್ಯ ಸಾಹಿತಿಗಳಿಗಿದೆ ಎಂಬ ಗೌರವ ಅದಕ್ಕೆ ಕಾರಣವಾಗಿತ್ತು.
ಕೈಗಾ ಅಣುಸ್ಥಾವರದ ವಿರುದ್ಧದ ಹೋರಾಟದಲ್ಲಿ ಡಾ. ಶಿವರಾಮ ಕಾರಂತರು ವಯಸ್ಸನ್ನೂ ಲೆಕ್ಕಿಸದೆ ಮುಂಚೂಣಿಯಲ್ಲಿ ನಿಂತಿದ್ದರು. ಕುದುರೆಮುಖ ಗಣಿಗಾರಿಕೆಯ ವಿರುದ್ಧ ಪೂರ್ಣಚಂದ್ರ ತೇಜಸ್ವಿ, ಯು.ಆರ್. ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳು ಧ್ವನಿ ಎತ್ತಿದ್ದರು. ಇವು ಕೇವಲ ಪರಿಸರ ಹೋರಾಟಗಳಾಗಿರಲಿಲ್ಲ; ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಮತ್ತು ಜನಜೀವನವನ್ನು ಬಲಿಕೊಡುವ ಪ್ರಭುತ್ವದ ನೀತಿಯನ್ನು ಪ್ರಶ್ನಿಸಿದ ಹೋರಾಟಗಳಾಗಿದ್ದವು. ಎಂಭತ್ತರ ದಶಕದ ಗೋಕಾಕ್ ಚಳವಳಿಯಲ್ಲಿ ಸಾಹಿತಿಗಳು ಬೀದಿಗಿಳಿದ ಕಥೆ ನಿಮಗೆ ಗೊತ್ತೇ ಇದೆ. ಚಂಪಾ, ಡಾ. ರಾಜಕುಮಾರ್, ಚಿದಾನಂದಮೂರ್ತಿ, ಗೋಕಾಕ್, ಶಂಭಾ ಜೋಶಿ ಹೀಗೆ ನೂರಾರು ಸಾಹಿತಿಗಳು ಕನ್ನಡದ ಭಾಷಾ ಹಕ್ಕಿಗಾಗಿ ಹೋರಾಟದ ಮುಂಚೂಣಿಯಲ್ಲಿದ್ದರು. ಕಾವೇರಿ ಸಂದರ್ಭದಲ್ಲಿ ಏನಾಯಿತು ಅನ್ನುವುದು ಗೊತ್ತೇ ಇದೆ. ಅದಕ್ಕಿಂತ ಹಿಂದೆಯೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೆಲವರು ಪ್ರಭುತ್ವದ ವಿರುದ್ಧ ನಿಂತು ಜೈಲಿಗೂ ಹೋಗಿದ್ದರು. ಇವೆಲ್ಲವೂ ಕನ್ನಡದ ಲೇಖಕರು ತಮ್ಮ ಕಾಲದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳಿಂದ ದೂರ ಉಳಿದವರಲ್ಲ ಎಂಬುದಕ್ಕೆ ಸಾಕ್ಷಿಗಳು.
ಸಾಹಿತಿಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು, ರಾಜಕೀಯ ನಿಲುವುಗಳಲ್ಲಿಯೂ ವ್ಯತ್ಯಾಸಗಳಿದ್ದವು. ಆದರೆ ಅನ್ಯಾಯದ ವಿರುದ್ಧ ಮಾತನಾಡಬೇಕಾದ ಸಂದರ್ಭದಲ್ಲಿ ಅವರು ತಮ್ಮ ಬರವಣಿಗೆಯ ಕೊಠಡಿಯಿಂದ ಹೊರಬಂದು ಜನರ ನಡುವೆ ನಿಲ್ಲುತ್ತಿದ್ದರು. ಸರಕಾರವನ್ನು ಪ್ರಶ್ನಿಸುತ್ತಿದ್ದರು, ಜನಾಭಿಪ್ರಾಯ ರೂಪಿಸುತ್ತಿದ್ದರು, ರಾಜಕಾರಣಿಗಳಿಗೆ ಬಿಸಿಮುಟ್ಟಿಸುತ್ತಿದ್ದರು. ಲೇಖಕನೊಬ್ಬನ ಸಾಮಾಜಿಕ ಜವಾಬ್ದಾರಿ ಎಂದರೆ ಇದೇ ಅಲ್ಲವೇ?
ಇಂದು ಪರಿಸ್ಥಿತಿ ಬದಲಾಗಿದೆ. ಸಾಹಿತ್ಯದ ಹೊಸ ತಲೆಮಾರಿನವರ ಚಿಂತನೆ ಹರಿತವಾಗಿದ್ದರೂ ಅವರನ್ನು ಎದುರುಬದುರು ಕೂರಿಸಿ ಮಾಧ್ಯಮಗಳು ಅಭಿಪ್ರಾಯ ಕೇಳಿದ್ದನ್ನು ನೀವು ನೋಡಿದ್ದೀರಾ? ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕಿನಲ್ಲಿ ಹಿಂದಿಗಿಂತಲೂ ಹೆಚ್ಚು ಮಹತ್ವದ ಸ್ಥಿತ್ಯಂತರಗಳು ಸಂಭವಿಸುತ್ತಿವೆ. ಮತದ ಹಕ್ಕು, ಸಾಮಾಜಿಕ ನ್ಯಾಯ, ಗಾಂಧಿ ಮತ್ತು ಗೋಡ್ಸೆ, ಎಡ ಬಲ, ಜಾತಿ ವ್ಯವಸ್ಥೆ, ಮೀಸಲಾತಿ, ಶಿಕ್ಷಣ, ಭಾಷೆ, ಧರ್ಮ, ಕೋಮು, ಪ್ರಜಾಪ್ರಭುತ್ವ, ಮತ ಮೌಲ್ಯ, ಪ್ರಭುತ್ವದ ಧೋರಣೆಗಳು ಹೀಗೆ ಅನೇಕ ಸಂಗತಿಗಳು ಸಾರ್ವಜನಿಕ ಚರ್ಚೆಯಲ್ಲಿವೆ. ಆದರೆ ಇಂತಹ ಸಂದರ್ಭಗಳಲ್ಲಿ ಸಾಹಿತಿಗಳ ಸಾಮೂಹಿಕ ಅಥವಾ ವೈಯಕ್ತಿಕ ಬೌದ್ಧಿಕ ಪ್ರತಿಕ್ರಿಯೆಗಳನ್ನು ಹಿಂದಿನಂತೆ ಮುಖ್ಯವಾಹಿನಿಯ ಮಾಧ್ಯಮಗಳು ಹುಡುಕಿಕೊಂಡು ಹೋಗುವ ಕ್ರಮ ಕಡಿಮೆಯಾಗಿದೆ. ಸಾಹಿತಿಗಳ ಮಾತುಗಳನ್ನು ಸಮಾಜದ ಮುಂದಿಡುವ ಜವಾಬ್ದಾರಿಯನ್ನು ಮಾಧ್ಯಮಗಳು ಹಿಂದೆ ನಿರ್ವಹಿಸುತ್ತಿದ್ದ ರೀತಿಯಲ್ಲಿ ಇಂದು ನಿರ್ವಹಿಸುತ್ತಿವೆಯೇ ಎಂಬ ಅನುಮಾನವಿದೆ.
ಇದಕ್ಕೆ ಸಂಪೂರ್ಣವಾಗಿ ಮಾಧ್ಯಮಗಳನ್ನೇ ದೂಷಿಸುವುದೂ ಸರಿಯಲ್ಲ.
ಸಾಹಿತ್ಯದ ಪುಟಗಳನ್ನೇ ಕಳಚಿಟ್ಟ ಮಾಧ್ಯಮಗಳು ತಮ್ಮ ಆದ್ಯತೆಗಳನ್ನು ಕೂಡ ಬದಲಾಯಿಸಿಕೊಂಡಿವೆ. ಅದಕ್ಕಿಂತಲೂ ಹೆಚ್ಚಾಗಿ ಮುದ್ರಣ, ವಾಹಿನಿಗಳನ್ನು ಮೀರುವಂಥ ನವ ಮಾಧ್ಯಮಗಳು ಇಂದು ಸಾಹಿತಿಗಳ ಕೈಯಲ್ಲೂ ಇವೆ. ಇನ್ನೊಂದು ಕಡೆ ಸುದ್ದಿಗೆ ಈಗ ಹಳೆಯ ರಾಗ, ವೇಗ, ದೃಶ್ಯಗಳು ಸಾಕಾಗುವುದಿಲ್ಲ. ಒಂದು ವಿಷಯದ ಬಗ್ಗೆ ಹತ್ತು ನಿಮಿಷ ಯೋಚಿಸಿ ಗಂಭೀರವಾಗಿ ಮಾತನಾಡುವ ಸಾಹಿತಿಗಿಂತ ಹತ್ತು ಸೆಕೆಂಡುಗಳಲ್ಲಿ ತೀವ್ರ ಪ್ರತಿಕ್ರಿಯೆ ನೀಡುವ ರಾಜಕಾರಣಿಯ ಮಾತಿಗೆ ಮಾಧ್ಯಮಗಳಲ್ಲಿ ಹೆಚ್ಚು ಅವಕಾಶ ಸಿಗುತ್ತಿವೆ. ಚಿಂತನೆಗಿಂತ ಪ್ರತಿಕ್ರಿಯೆಗೆ, ವಿಶ್ಲೇಷಣೆಗಿಂತ ಆಕ್ರೋಶಕ್ಕೆ, ಅಭಿಪ್ರಾಯಗಳಿಗಿಂತ ಬೈಗುಳಕ್ಕೆ ಮಾರುಕಟ್ಟೆ ಸೃಷ್ಟಿಯಾಗಿರುವ ಕಾಲದಲ್ಲಿ ಯೋಚಿಸಿ ಮಾತನಾಡುವ ಸಾಹಿತಿಯ ನಿಧಾನನಡೆಯ ತೂಕದ ಮಾತು ಮಾಧ್ಯಮಗಳ ವೇಗಕ್ಕೆ ಹೊಂದಿಕೆಯಾಗುತ್ತಿಲ್ಲವೇನೋ!
ಹಿಂದೆ ಸಂಪಾದಕರ, ವರದಿಗಾರರ ಮೂಲಕ ಓದುಗರನ್ನು ತಲುಪಬೇಕಾಗಿದ್ದ ಬರಹಗಾರ ಇಂದು ತನ್ನ ಅಭಿಪ್ರಾಯವನ್ನು ನೇರವಾಗಿ ಕ್ಷಣದಲ್ಲಿ ಸಾವಿರಾರು ಜನರಿಗೆ ತಲುಪಿಸಬಲ್ಲ. ಅದಕ್ಕೆ ನೂರಾರು ಪ್ರತಿಕ್ರಿಯೆಗಳೂ ಆ ಕ್ಷಣಕ್ಕೆ ಅಲ್ಲೇ ಹುಟ್ಟಿಕೊಳ್ಳುತ್ತವೆ. ಆ ಪ್ರತಿಕ್ರಿಯೆ-ಸಂವಾದ ಲೋಕಮುಖಿಯಾಗದೆಯೇ ಕೇವಲ ಒಂದು ಗುಂಪಿನಲ್ಲಿ, ತನಗೆ ಬೇಕಾದ ಬಳಗದಲ್ಲಿ, ತನ್ನ ಹಾಗೆ ಯೋಚಿಸುವ ವರ್ತುಲದಲ್ಲಿ ಮಾತ್ರ ಸರಿದು ಮುಗಿದು ಹೋಗಬಹುದು. ಆ ಪ್ರಶ್ನೆ, ಚರ್ಚೆ, ಅಭಿಪ್ರಾಯ ಸಮಾಜದ ಮಹತ್ವದ, ಎಲ್ಲರೂ ಒಳಗೊಳ್ಳುವ ಬೌದ್ಧಿಕ ಚರ್ಚೆಯ ಭಾಗವಾಗಿಸದೇ ಹೋಗಬಹುದು.
ಇನ್ನು ಬುದ್ಧಿಜೀವಿಗಳ ಜವಾಬ್ದಾರಿಯನ್ನೂ ನಾವು ಪರಿಶೀಲಿಸ ಬೇಕು. ಸಾಹಿತಿಗಳು ಕೇವಲ ತಮ್ಮ ಕೃತಿಗಳ ಪ್ರಕಟಣೆ, ಪ್ರಶಸ್ತಿ, ಸನ್ಮಾನ, ಸಾಹಿತ್ಯ ಸಮ್ಮೇಳನ ಮತ್ತು ವೈಯಕ್ತಿಕ ಪ್ರತಿಷ್ಠೆಗಳ ಸುತ್ತಲೇ ಸುತ್ತುತ್ತಾ ಅಥವಾ ಯಾವುದೋ ಅವಕಾಶಕ್ಕಾಗಿ ತಮ್ಮ ಪುಸ್ತಕಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಅವಸರದಲ್ಲೇ ತಮ್ಮ ಸಾರ್ವಜನಿಕ ಬದುಕನ್ನು ಸೀಮಿತಗೊಳಿಸಿಕೊಂಡರೆ ಸಮಾಜದೊಂದಿಗಿನ ಅವರ ಸಂಬಂಧ ಸಹಜವಾಗಿಯೇ ಸೀಮಿತವಾಗುತ್ತದೆ. ಎಲ್ಲ ಸಾಹಿತಿಗಳೂ ಈ ಲೋಕದ ಎಲ್ಲ ವಿಷಯಗಳ ಬಗ್ಗೆ ಮಾತನಾಡಬೇಕು ಎಂದಿಲ್ಲ. ಮಾತನಾಡುವ ಪ್ರತಿಯೊಂದು ಸಂಗತಿಯಲ್ಲೂ ಸಾಹಿತ್ಯಿಕ ಪರಿಣತಿ ಇರಬೇಕೆಂದೂ ಅಲ್ಲ. ಆದರೆ ತಮ್ಮ ಕಾಲದ ಅನ್ಯಾಯ, ಅಸಮಾನತೆ, ಸಾಂಸ್ಕೃತಿಕ ಬಿಕ್ಕಟ್ಟು ಮತ್ತು ಮನುಷ್ಯನ ಬದುಕಿನ ಪ್ರಶ್ನೆಗಳ ಬಗ್ಗೆ ಒಬ್ಬ ಸೃಜನಶೀಲ ಲೇಖಕನಿಗೆ ಒಂದು ಸ್ವತಂತ್ರ ನಿಲುವು ಇರಬೇಕಾಗುತ್ತದೆ. ಆ ನಿಲುವು ಜನಪ್ರಿಯವಾಗಿರಬೇಕೆಂದಿಲ್ಲ. ಕೆಲವೊಮ್ಮೆ ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾತನಾಡುವ ಧೈರ್ಯವೇ ಸಾಹಿತಿಯ ಸಾಮಾಜಿಕ ಮಹತ್ವವನ್ನು ಹೆಚ್ಚಿಸುತ್ತದೆ.
ಸಾಹಿತಿಯ ಮಾತನ್ನು ಕೇಳುವ, ಚರ್ಚಿಸುವ, ತರ್ಕದ ಮೂಲಕ ಎದುರಿಸುವ ಬೌದ್ಧಿಕ ಸಂಸ್ಕೃತಿ ಸಮಾಜದಲ್ಲಿ ಉಳಿಯಬೇಕು. ಸಾಹಿತಿಯನ್ನು ಸಂಪೂರ್ಣವಾಗಿ ಸಾರ್ವಜನಿಕ ಸಂವಾದದಿಂದ ಹೊರಗಿಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಹೊರಗುಳಿದ ಸಾಹಿತಿಗಳಿಗಿಂತ ಒಳ ಬಂದ ಸಾಹಿತಿಗಳ ಹೆಸರುಗಳನ್ನು ಗಮನಿಸಿದರೆ ಪ್ರಭುತ್ವವೇ ನಿಜವಾದ ಚಿಂತಕರನ್ನು ಪರಿಧಿಗೆ ಸೇರಿಸುತ್ತಿದೆ ಅನಿಸುತ್ತದೆ.
ಸಾಹಿತಿಗಳ ಪ್ರಭಾವ, ಮೌಲ್ಯ ಕಡಿಮೆಯಾಗಿದೆ, ಅವರು ನಿಧಾನವಾಗಿ ಪರಿಧಿಗೆ ತಳ್ಳಲ್ಪಡುತ್ತಾರೆ ಎಂದು ಹೇಳುವುದು ಕೂಡ ವಾಸ್ತವವನ್ನು ಸ್ವಲ್ಪ ಸರಳೀಕರಿಸಿದಂತಾಗುತ್ತದೆ. ಅನೇಕ ಲೇಖಕರು ತಮ್ಮ ಬರಹಗಳ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ, ಉಪನ್ಯಾಸಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ. ಹೊಸ ತಲೆಮಾರಿನ ಬರಹಗಾರರೂ ಅನೇಕ ಪ್ರಶ್ನೆಗಳನ್ನು ಕಾವ್ಯ ಕಥೆಗಳ ಸಾಹಿತ್ಯದಾರಿಯಲ್ಲಿ ಎತ್ತುತ್ತಿದ್ದಾರೆ. ಆದರೆ ಈ ಧ್ವನಿಗಳನ್ನು ಒಟ್ಟುಗೂಡಿಸಿ ಮಾಧ್ಯಮದ ಮುಖೇನ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತರುವ ವ್ಯವಸ್ಥೆ ದುರ್ಬಲವಾಗಿದೆಯೇ ಎಂಬುದನ್ನು ನಾವು ಗಮನಿಸಬೇಕು.
ಸಾಹಿತಿಗಳಲ್ಲೇ ಭಿನ್ನಾಭಿಪ್ರಾಯಗಳಿವೆ. ರಾಜಕೀಯ ನಿಷ್ಠೆಗಳಿವೆ. ಸಂಘಟನೆಗಳಿವೆ. ಕೆಲವೊಮ್ಮೆ ಮೌನವೂ ಇದೆ. ಸಾಹಿತಿಗಳ ಸ್ವಾತಂತ್ರ್ಯ ಮತ್ತು ಸ್ವತಂತ್ರ ಧ್ವನಿಯ ಬಗ್ಗೆ ಮತ್ತೆ ಚರ್ಚಿಸಬೇಕಾದ ಕಾಲವೂ ಇದಾಗಿದೆ. ಸಾಹಿತ್ಯವೆಂದರೆ ಕೇವಲ ಪುಸ್ತಕಗಳ ಉತ್ಪಾದನೆ ಮತ್ತು ಮಾರಾಟವಲ್ಲ. ಅದು ಸಮಾಜದ ವಿವೇಕವನ್ನು ಎಚ್ಚರಿಸುವ ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಒಬ್ಬ ಲೇಖಕ ತನ್ನ ಕೃತಿಯಲ್ಲಿ ಮನುಷ್ಯನ ಬದುಕಿನ ಸಂಕೀರ್ಣತೆಯನ್ನು ತೆರೆದಿಡುತ್ತಾನೆ. ಅದೇ ಲೇಖಕ ಸಮಾಜದ ಪ್ರಶ್ನೆಗಳ ಎದುರು ಮೌನವಾಗಬೇಕೆಂದಿಲ್ಲ. ಹಾಗೆಯೇ ಪ್ರತಿಯೊಬ್ಬ ಸಾಹಿತಿಯೂ ರಾಜಕೀಯ ವಿಶ್ಲೇಷಕನಾಗಬೇಕೆಂದೂ ಇಲ್ಲ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ಕೊಡಬೇಕೆಂದೇನೂ ಇಲ್ಲ. ಆದರೆ ಸಾಹಿತ್ಯದ ಲೋಕಕ್ಕೂ ಹೊರಗಿನ ಸಮಾಜಕ್ಕೂ ನಡುವೆ ಒಂದು ಜೀವಂತ ಸಂಪರ್ಕ ಇರಬೇಕು. ಆ ಸಂಪರ್ಕ ಕಡಿದುಕೊಂಡಾಗ ಸಾಹಿತ್ಯ ತನ್ನದೇ ಆದ ಪರಿಧಿಯಲ್ಲಿ ಸುತ್ತುವ ಅಪಾಯವಿದೆ.
ಹಾಗಾದರೆ ಇಂದು ಸಾಹಿತಿ- ಸಾಹಿತ್ಯ ಪರಿಧಿಗೆ ಸರಿಯುತ್ತಿದೆಯೇ? ಅಥವಾ ಸಮಾಜವೇ ಸಾಹಿತ್ಯದ ಮಾತುಗಳನ್ನು ಕೇಳುವ ತನ್ನ ವ್ಯವಧಾನವನ್ನು ಕಳೆದುಕೊಳ್ಳುತ್ತಿದೆಯೇ? ಎರಡೂ ಸಂಗತಿಗಳು ಒಂದಕ್ಕೊಂದು ಸಂಬಂಧ ಹೊಂದಿರಬಹುದು. ಸಾಹಿತಿಗಳು ಸಮಾಜದೊಂದಿಗೆ ಮಾತನಾಡುವ ಆಸಕ್ತಿ ಮತ್ತು ಧೈರ್ಯವನ್ನು ಉಳಿಸಿಕೊಳ್ಳಬೇಕು. ಮಾಧ್ಯಮಗಳು ಅವರ ಚಿಂತನೆಗಳಿಗೆ ಜಾಗ ಕಲ್ಪಿಸಬೇಕು. ಓದುಗರು ಸಾಹಿತಿಯ ಮಾತನ್ನು ಕೇವಲ ಒಪ್ಪಲು ಅಥವಾ ವಿರೋಧಿಸಲು ಅಲ್ಲ, ಯೋಚಿಸಲು ಓದಬೇಕು. ಈ ಮೂರರ ನಡುವೆ ಸಂವಾದ ಉಳಿದಾಗ ಮಾತ್ರ ಸಾಹಿತ್ಯ ಸಮಾಜದ ಜೀವಂತ ಭಾಗವಾಗಿ ಉಳಿಯುತ್ತದೆ.
ಇವತ್ತಿಗೂ ಸಾಹಿತಿಗಳು ಬರೆದ ಪುಸ್ತಕಗಳು ಮಾರಾಟವಾಗುತ್ತಿವೆ ಎನ್ನುವುದು ಸಂತೋಷದ ಸಂಗತಿ. ಓದುಗರು ಇದ್ದಾರೆ ಎನ್ನುವುದೂ ಸಮಾಧಾನದ ಸಂಗತಿ. ಆದರೆ ಒಂದು ಸಮಾಜ ತನ್ನ ಕಾಲದ ಸಾಹಿತಿಗಳನ್ನು ಯಾವಾಗ ನೆನಪಿಸಿಕೊಳ್ಳುತ್ತದೆ, ಯಾವಾಗ ಅವರ ಅಭಿಪ್ರಾಯ ಕೇಳುತ್ತದೆ, ಯಾವಾಗ ಅವರ ಚಿಂತನೆಗಳೊಂದಿಗೆ ಸಂಘರ್ಷಕ್ಕಿಳಿಯುತ್ತದೆ ಎನ್ನುವುದೂ ಆ ಸಮಾಜದ ಬೌದ್ಧಿಕ ಆರೋಗ್ಯವನ್ನು ಅಳೆಯುವ ಮಾನದಂಡ. ಪುಸ್ತಕದ ಓದು ಉಳಿದಿರುವುದಷ್ಟೇ ಸಾಕಾಗುವುದಿಲ್ಲ; ಪುಸ್ತಕ ಬರೆದವನ ಆಲೋಚನೆಯೂ ಸಮಾಜದೊಳಗೆ ಓದಲ್ಪಡಬೇಕು. ಸಾಹಿತಿಯ ಮಾತಿಗೆ ಮತ್ತೆ ಮಾನ್ಯತೆ ದೊರೆಯಬೇಕು ಎನ್ನುವುದಕ್ಕಿಂತಲೂ, ಸಮಾಜಕ್ಕೆ ಸ್ವತಂತ್ರವಾಗಿ ಯೋಚಿಸುವ ಧ್ವನಿಗಳ ಅಗತ್ಯವಿದೆ ಎನ್ನುವುದೇ ಈ ಚರ್ಚೆಯ ಮುಖ್ಯ ಆಶಯ.
(ಭಾಗ -2, ಮುಂದಿನ ಅಂಕಣದಲ್ಲಿ ಮುಂದುವರಿಯುವುದು).
(ಅಂಕಣಕಾರರು: ಉಪನ್ಯಾಸಕರು, ಚಿಂತಕರು)






