Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಕಣಿಯಾರು ಮಲೆ: ಕಾಡೇ ಕಟ್ಟಿದ ಗೋಶಾಲೆ!

ಕಣಿಯಾರು ಮಲೆ: ಕಾಡೇ ಕಟ್ಟಿದ ಗೋಶಾಲೆ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ19 July 2026 10:10 AM IST
share
ಕಣಿಯಾರು ಮಲೆ: ಕಾಡೇ ಕಟ್ಟಿದ ಗೋಶಾಲೆ!

ಇಷ್ಟೊಂದು ಹಸುಗಳು ಒಂದೇ ಪ್ರದೇಶದಲ್ಲಿ ಬದುಕುವುದರಿಂದ ಕಾಡಿನ ಸಸ್ಯವರ್ಗದ ಮೇಲೆ ಏನು ಪರಿಣಾಮ ಬೀರುತ್ತದೆ? ವನ್ಯಜೀವಿಗಳ ಆಹಾರದ ಮೇಲೆ ಇದರ ಪರಿಣಾಮವೇನು? ಚಿರತೆ, ಹುಲಿ, ಕಾಡುನಾಯಿ, ಕಾಡುಕೋಣ, ಕಾಡುಹಂದಿಗಳೊಂದಿಗೆ ಈ ಹಿಂಡು ಯಾವ ಸಂಬಂಧ ಬೆಳೆಸಿಕೊಂಡಿದೆ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರಗಳಿಲ್ಲ. ಹಾಗಂತ ಇದು ಕೇವಲ ವಲಸೆಯ ದಾರಿಯಲ್ಲಿ ದೂರ ಸರಿದ ಹಸುಗಳ ಕಥೆಯಲ್ಲ. ಬದಲಾಗುತ್ತಿರುವ ಭಾರತೀಯ ಕೃಷಿಯ ಕಥೆ. ಪ್ರಕೃತಿ ಮನುಷ್ಯನ ತಪ್ಪುಗಳನ್ನು ಹೇಗೆ ತನ್ನೊಳಗೆ ಸೇರಿಸಿಕೊಳ್ಳುತ್ತದೆ ಎಂಬ ಕಥೆ ಮತ್ತು ನಾಗರಿಕತೆ ಎಂದರೇನು ಎಂಬ ಪ್ರಶ್ನೆಯನ್ನು ಮತ್ತೆ ನಮ್ಮ ಮುಂದಿಡುವ ಕಥೆ.

ನಾವು ಹಸುಗಳನ್ನು ಮನೆಯ ಹಟ್ಟಿಯಲ್ಲಿ ಕಟ್ಟಿ ಸಾಕುವಪ್ರಾಣಿಗಳೆಂದು ಭಾವಿಸಿದ್ದೇವೆ. ಹಾಗಂತ ಅದು ಅವುಗಳ ಮೊದಲ ಬದುಕಲ್ಲ. ಸಾವಿರಾರು ವರ್ಷಗಳ ಹಿಂದೆ ಅವು ಕಾಡಿನ ಅಂಚಿನ ಹುಲ್ಲುಗಾವಲುಗಳಲ್ಲಿ ಸ್ವತಂತ್ರವಾಗಿ ಮೇಯುತ್ತಿದ್ದ ಹಿಂಡುಗಳು. ಮನುಷ್ಯ ನಿಧಾನವಾಗಿ ಅವುಗಳೊಂದಿಗೆ ಸ್ನೇಹ ಬೆಳೆಸಿದ. ತನ್ನ ಹೊಲದ ಅಂಚಿಗೆ ಕರೆತಂದ. ಹಟ್ಟಿ ಕಟ್ಟಿದ. ಸೆಗಣಿ ಹೊಲದ ಫಲವತ್ತತೆಯಾಯಿತು. ಹೆಗಲಿಗೆ ನೊಗ ಏರಿಸಿಕೊಂಡ ಎತ್ತು ನೇಗಿಲ ಮೂಲಕ ಭೂಮಿಗೆ ಗೆರೆ ಎಳೆಯಿತು. ಆ ಗೆರೆಯ ಮೇಲೆ ಬೀಜ-ಸಸಿ ಮೊಳೆಯಿತು. ಅದೇ ನೊಗ ಕಬ್ಬು, ಕೊಬ್ಬರಿ, ಶೇಂಗಾ ಅರೆಯಿತು. ಹಾಲು ಮನೆಯ ಆರೋಗ್ಯವಾಯಿತು. ಕೃಷಿ ನಾಗರಿಕತೆಯ ಅರ್ಧ ಇತಿಹಾಸವನ್ನು ಹಸುಗಳ ಬೆನ್ನಿನ ಮೇಲೆಯೇ ಬರೆಯಲಾಗಿತ್ತು ಎನ್ನುವುದು ಅತಿಶಯೋಕ್ತಿಯಲ್ಲ. ಮುಂದೆ ನೇಗಿಲಿನ ಜಾಗವನ್ನು ಟ್ರ್ಯಾಕ್ಟರ್ ಆಕ್ರಮಿಸಿತು. ಎತ್ತಿನ ಜಾಗವನ್ನು ಯಂತ್ರಗಳು ಪಡೆದುಕೊಂಡವು. ಹಾಲು ಕೊಡದ ಹಸು, ಗಂಡು ಕರು, ಮುದಿ ಎತ್ತು ರೈತನಿಗೆ ಹೊರೆಯಾಯಿತು. ವಯಸ್ಸಾದ ಜಾನುವಾರಿಗೆ ಮನೆಯ ಹಿತ್ತಲಿನಲ್ಲಿ ಜಾಗ ಕಡಿಮೆಯಾಯಿತು. ಬದುಕಿನ ಸೂಕ್ಷ್ಮ ಲೆಕ್ಕದಲ್ಲಿ ಸಾಕಿಕೊಂಡು ಹೋಗುವುದೂ ಕಷ್ಟವಾಗಿ ಈ ನಡುವಿನ ಅಸಹಾಯಕತೆಯಲ್ಲಿ ಎಷ್ಟೋ ಹಸುಗಳು ಹಳ್ಳಿಯ ಗಡಿಯನ್ನು ದಾಟಿ ಬೇರೆ ಬೇರೆ ಕಡೆ ರವಾನೆಯಾದವು.

ಈ ಬದಲಾವಣೆಯ ನಡುವೆ ಮೊನ್ನೆ ನಾನು ನನ್ನೂರಲ್ಲಿ ಕಂಡ ಒಂದು ದೃಶ್ಯ ಮಾತ್ರ ನನ್ನ ಮನಸ್ಸನ್ನು ಆಳವಾಗಿ ಕಲಕಿತು. ನನ್ನ ಮನೆಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಕಣಿಯಾರು ರಕ್ಷಿತಾರಣ್ಯದ ಅಂಚಿನಲ್ಲಿ ಒಂದು ವಿಶಾಲ ಸರಕಾರಿ ರಬ್ಬರ್ ತೋಟವಿದೆ. ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ. ಅರ್ಧ ಶತಮಾನದ ಹಿಂದೆ ಶ್ರೀಲಂಕಾದ ಸಿಂಹಳಿ ನಿರಾಶ್ರಿತರನ್ನು ಇಲ್ಲಿ ಕರೆತಂದು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ನೆಲೆಗೊಳಿಸಲಾಯಿತು. ಅವರಿಗಾಗಿ ಕ್ವಾರ್ಟರ್ಸ್ ನಿರ್ಮಿಸಲಾಯಿತು. ಅವರೇ ಈಗ ಅಲ್ಲೊಂದುಪುಟ್ಟ ದೇವಾಲಯ ಕಟ್ಟಿಕೊಂಡಿದ್ದಾರೆ. ಹಳೆಯ ರಬ್ಬರ್ ಮರಗಳನ್ನು ತೆಗೆದು ಹೊಸ ಗಿಡಗಳನ್ನು ನೆಡಲಾಗಿದೆ. ಮೊದಲ ತಲೆಮಾರಿನವರಿಗೆ ವಯಸ್ಸಾಯಿತು. ಈಗ ಅವರ ಮಕ್ಕಳೂ, ಮೊಮ್ಮಕ್ಕಳೂ ಅದೇ ವೃತ್ತಿಯನ್ನು ಹೊಸ ರಬ್ಬರ್ ಮರಗಳ ಅಡಿಯಲ್ಲಿ ಮುಂದುವರಿಸಿದ್ದಾರೆ.

ಆದರೆ ಈ ವಿಶಾಲ ಪ್ರದೇಶದ ಬಹುಭಾಗ ಇಂದಿಗೂ ಮೌನದ ಸಾಮ್ರಾಜ್ಯ. ರಬ್ಬರ್ ಮರಗಳ ನಡುವೆ ಹಗುರ ಪೊದೆಗಳು. ನಡುವೆ ಹರಿಯುವ ಪುಟ್ಟ ತೊರೆ. ಅದರ ಆಚೆ ದುರ್ಗಮ ಕಾಡು. ಆ ಕಡೆ ಬರೆಮೇಲು ಕುಟುಂಬದ ಬರೀ ಮೂರು ಮನೆಗಳು. ಉಳಿದದ್ದು ಪ್ರಕೃತಿಯ ನಿಶ್ಶಬ್ದ. ಆ ನಿಶ್ಶಬ್ದದ ಮಧ್ಯೆ ನಾನು ಕಂಡದ್ದು ಒಂದು ವಿಚಿತ್ರ ಗೋಶಾಲೆ.

ಇದು ಯಾರೂ ಕಟ್ಟಿದ್ದಲ್ಲ. ಯಾವ ಮಠವೂ ನಡೆಸುತ್ತಿಲ್ಲ. ಯಾವ ಟ್ರಸ್ಟ್‌ನ ಫಲಕವೂ ಇಲ್ಲಿಲ್ಲ. ದೇಣಿಗೆ ಪೆಟ್ಟಿಗೆಯೂ ಇಲ್ಲ. ಆದರೂ ಅದು ಗೋಶಾಲೆಯೇ. ಹಸುಗಳ ಗೋಶಾಲೆ.

ಕಾಡೇ ಕಟ್ಟಿದ ಗೋಶಾಲೆ. ದೂರದವರೆಗೆ ಹರಡಿಕೊಂಡಿದ್ದ ಹಸಿರು ಬಯಲಲ್ಲಿ ನೂರಾರು ಹಸುಗಳು ಇಲ್ಲಿ ನಿರಾಳವಾಗಿ ಮೇಯುತ್ತಿದ್ದವು. ಕೆಲವು ಕರುಗಳು ಓಡಾಡುತ್ತಿದ್ದವು. ಬಲಿಷ್ಠ ಹೋರಿಗಳು ಗುಂಪಿನ ಅಂಚಿನಲ್ಲಿ ನಿಂತಿದ್ದವು. ಮುದಿ ಎತ್ತುಗಳು ಮರದ ನೆರಳಿನಲ್ಲಿ ಜವ್ವಣಿಗೆ ಜಗಿಯುತ್ತ ಮಲಗಿದ್ದವು. ತೊರೆಯ ನೀರು ಕುಡಿದು ಮತ್ತೆ ಮೇಯಲು ಹೊರಡುವ ಅವುಗಳ ಬದುಕಿನಲ್ಲಿ ಯಾವುದೇ ಆತುರ ಕಾಣಿಸಲಿಲ್ಲ. ಹೌದು, ಮೊದಲ ಕ್ಷಣಕ್ಕೆ ನಾನು ಬೆರಗಾದೆ.

ಇಷ್ಟೊಂದು ಹಸುಗಳು! ಹೌದು ೧೫೦ಕ್ಕಿಂತಲೂ ಹೆಚ್ಚು ಗೋವುಗಳು ಒಂದೇ ಕಡೆ!

ಆ ಹಿಂಡಿನಿಂದ ದೂರ ನಿಂತು ಸ್ಥಳೀಯರು ಹೇಳಿದ ಕಥೆ ಇನ್ನೂ ಕುತೂಹಲಕಾರಿಯಾಗಿತ್ತು. ಆರೇಳು ವರ್ಷಗಳ ಹಿಂದೆ ಯಾರೋ ತಮ್ಮ ಮನೆಯಲ್ಲಿ ಬೇಡವಾದ ಒಂದು ಹಸುವನ್ನು ಇಲ್ಲಿ ಬಿಟ್ಟು ಹೋದರು. ಮತ್ತೊಬ್ಬರು ಒಂದು ಹೋರಿಯನ್ನು ಬಿಟ್ಟರು. ದೂರದ ಹಳ್ಳಿಯ ರೈತರ ಹಸು ಮೇಯುತ್ತಾ ಬಂದು ಈ ಗುಂಪಿಗೆ ಸೇರಿತು. ಮತ್ತೆ ಅದು ಹಿಂದಿರುಗಲಿಲ್ಲ. ಇಲ್ಲಿ ಕರು ಆಯಿತು. ಆ ಕರು ದೊಡ್ಡದಾಯಿತು. ಮತ್ತೊಂದು ತಲೆಮಾರು ಹುಟ್ಟಿತು. ಹೀಗೆ ಆರು-ಏಳು ವರ್ಷಗಳಲ್ಲಿ ಈ ಹಿಂಡು ನೂರನ್ನು ದಾಟಿ, ಇಂದು ಇಷ್ಟೊಂದು ಸಂಖ್ಯೆಗೆ ಬೆಳೆದಿದೆ.

ಈ ಹಸುಗಳಿಗೆ ಯಾರೂ ಮಾಲಕರಲ್ಲ. ಪ್ರಕೃತಿಯೇ ಪಾಲಕಿ. ಕಾಡೇ ಅವುಗಳ ಆಶ್ರಯ. ತೊರೆಯೇ ಅವುಗಳ ನೀರಿನ ತೊಟ್ಟಿ. ಕಾಡು ನಡುವಿನ ರಬ್ಬರ್ ಬಯಲೇ ಅವುಗಳ ಮೇವುಗದ್ದೆ.

ಮರಗಳ ನೆರಳೇ ಅವುಗಳ ಹಟ್ಟಿ. ನಾನೂ ಅನೇಕ ಗೋಶಾಲೆಗಳನ್ನೂ ನೋಡಿದವ. ಆದರೆ ಗೋಡೆಗಳಿಲ್ಲದ, ಹಗ್ಗಗಳಿಲ್ಲದ, ಮನುಷ್ಯನಿಲ್ಲದ ಗೋಶಾಲೆಯನ್ನು ನಾನು ಮೊದಲ ಬಾರಿಗೆ ಈ ಬಯಲಲ್ಲಿ ನಿಂತು ನೋಡುತ್ತಿದ್ದೆ. ಆ ಹಿಂಡಿನೊಳಗೆ ನಾನು ಇನ್ನೂ ಸ್ವಲ್ಪ ಮುಂದೆ ಹೆಜ್ಜೆ ಹಾಕಿದೆ. ದೂರದಿಂದ ನೋಡಿದರೆ ಎಲ್ಲ ಹಸುಗಳೂ ಒಂದೇ ರೀತಿ ಕಾಣುತ್ತವೆ. ಆದರೆ ಸ್ವಲ್ಪ ಹೊತ್ತು ಅವುಗಳನ್ನು ಗಮನಿಸಿದರೆ ಪ್ರತಿಯೊಂದು ಗುಂಪಿಗೂ ತನ್ನದೇ ಆದ ಬದುಕು ಇದೆ ಎಂಬುದು ಗೊತ್ತಾಗುತ್ತದೆ. ಕರುಗಳು ಯಾವಾಗಲೂ ತಾಯಿಯ ಸುತ್ತಲಿರುತ್ತವೆ. ಎರಡು ಮೂರು ಬಲಿಷ್ಠ ಹೋರಿಗಳು ಹಿಂಡಿನ ಹೊರವಲಯದಲ್ಲಿ ಅಡ್ಡಾಡುತ್ತಿರುತ್ತವೆ. ಯಾರೂ ಅವುಗಳಿಗೆ ನಿರ್ದೇಶನ ನೀಡುವುದಿಲ್ಲ. ಆದರೂ ಬದುಕು ಅಚ್ಚುಕಟ್ಟಾಗಿ ಸಾಗುತ್ತಿರುತ್ತದೆ.

ಅವೆಲ್ಲ ಎಷ್ಟು ದಪ್ಪಪುಷ್ಟವಾಗಿ ಮುದ್ದಾಗಿವೆ ಎಂದರೆ ನಾನು ಒಂದು ಹಸುವಿನ ಹತ್ತಿರ ಹೋಗಲು ಪ್ರಯತ್ನಿಸಿದೆ. ಅದು ಒಂದೆರಡು ಹೆಜ್ಜೆ ಹಿಂದೆ ಸರಿಯಿತು. ಅದರೊಂದಿಗೆ ಇನ್ನೂ ಕೆಲವು ಹಸುಗಳು ನನ್ನ ಮತ್ತು ಅದರ ಮಧ್ಯೆ ಬಂದು ನಿಂತವು. ದೂರದಲ್ಲಿದ್ದ ಹೋರಿಯೊಂದು ತಲೆ ಎತ್ತಿ ನನ್ನ ಕಡೆ ನೋಡಿತು. ಯಾವುದೂ ಓಡಲಿಲ್ಲ. ಯಾವುದೂ ಆಕ್ರಮಣ ಮಾಡಲಿಲ್ಲ. ಆದರೆ ಒಂದು ಮೌನದ ಸಂದೇಶ ಸ್ಪಷ್ಟವಾಗಿತ್ತು ‘‘ಇಲ್ಲಿ ನಾವು ಒಂಟಿಯಲ್ಲ!’’

ಆ ಸಂದೇಶ ಕ್ಷಣದಲ್ಲಿ ಅರ್ಥವಾಯಿತು. ಮನುಷ್ಯ ಸಮಾಜದಂತೆ ಹಸುಗಳ ಸಮಾಜಕ್ಕೂ ತನ್ನದೇ ಆದ ಶಿಸ್ತು ಇದೆ!

ಪಶು ವಿಜ್ಞಾನಿಗಳು ಹೇಳುವಂತೆ ದನಗಳು ಸಹಜವಾಗಿಯೇ ಹಿಂಡು ಜೀವಿಗಳು. ಕಾಡಿನಲ್ಲಿ ಬದುಕುವ ಮಂದೆಗಳಿಗೆ ಒಂದು ಸಾಮಾಜಿಕ ರಚನೆ ಇರುತ್ತದೆ. ಅನುಭವವಿರುವ ಹಸುಗಳು ದಾರಿಯನ್ನು ಗುರುತಿಸುತ್ತವೆ. ಕರುಗಳ ಸುರಕ್ಷತೆ ಇಡೀ ಹಿಂಡಿನ ಹೊಣೆ. ಅಪಾಯದ ಸೂಚನೆ ಸಿಕ್ಕರೆ ಎಲ್ಲವೂ ಒಟ್ಟಾಗಿ ಚಲಿಸುತ್ತವೆ. ಒತ್ತಿನ ಒಂದು ಜೀವಿಯ ರಕ್ಷಣೆ ಎಲ್ಲರ ಜವಾಬ್ದಾರಿಯಾಗುತ್ತದೆ.

ಕಣಿಯಾರಿನ ಈ ಹಿಂಡು ಆ ಪಾಠವನ್ನು ಮತ್ತೆ ನೆನಪಿಸಿತು. ಆ ಕಾರಣಕ್ಕೇ ಬಹುಶಃ ಈ ಹಸುಗಳು ಇಷ್ಟೊಂದು ವರ್ಷ ಅಲ್ಲಿ ಬದುಕಿಕೊಂಡಿವೆ. ಒಂಟಿ ಹಸುವನ್ನು ಕದಿಯುವುದು ಸುಲಭ. ಆದರೆ ಹಿಂಡನ್ನು ಸೋಲಿಸುವುದು ಕಷ್ಟ. ಸ್ಥಳೀಯರಾದ ಕಾರ್ತಿಕ್ ಹೇಳಿದ ಮಾತು ಇನ್ನೂ ಕಿವಿಯಲ್ಲಿ ಮೊಳಗುತ್ತಿದೆ.

‘‘ದೂರದಿಂದ ನೋಡಿದರೆ ಇವು ತುಂಬಾ ಸಾಧು ಅನ್ನಿಸುತ್ತದೆ. ಆದರೆ ಒಂದು ಹಸುವನ್ನು ಹಿಡಿಯಲು ಹೋದರೆ ಇಡೀ ಹಿಂಡೇ ಅದರ ಹಿಂದೆ ನಿಲ್ಲುತ್ತದೆ. ಅದಕ್ಕೇ ಯಾರಿಗೂ ಸುಲಭವಾಗಿ ಮುಟ್ಟಲು ಆಗಲ್ಲ.’’

ಆ ಮಾತಿನಲ್ಲಿ ಒಂದು ತತ್ವ ಅಡಗಿದೆ. ಮನುಷ್ಯನೊಳಗೆ ನಾಗರಿಕತೆ ಬೆಳೆದಂತೆ ‘ನಾನು’ ಎಂಬ ಪದವನ್ನು ದೊಡ್ಡದಾಗಿಸಿಕೊಂಡೆವು. ಪ್ರಕೃತಿಯ ನಾಗರಿಕತೆ ಮಾತ್ರ ಇನ್ನೂ ‘ನಾವು’ ಎಂಬ ಪದವನ್ನೇ ಉಳಿಸಿಕೊಂಡಿದೆ.

ಕಣಿಯಾರಿನ ಈ ಹಸುಗಳು ನನಗೆ ಕಲಿಸಿದ ಮೊದಲ ಪಾಠ ಅದು. ಕಾರ್ತಿಕ್ ಅಷ್ಟೇ ಅಲ್ಲ, ಈ ಪುಟ್ಟ ಊರಿನ ಒಂದಷ್ಟು ಜನ ಈ ಹಸುಗಳ ಹಿಂದೆ ಕಾವಲು ನಿಂತಿದ್ದಾರೆ. ಈ ಕಾಡಿಗೆ ಯಾರೇ ಪ್ರವೇಶಿಸಲಿ ಅವರನ್ನು ಅನುಮಾನದಿಂದಲೇ ನೋಡುತ್ತಾರೆ. ಅಷ್ಟರಮಟ್ಟಿಗೆ ಈ ಪುಟ್ಟ ಊರಿನ ಜನ ಪಶುಪ್ರಿಯರು.

ಇನ್ನೊಂದು ಕುತೂಹಲವೂ ನನ್ನನ್ನು ಕಾಡಿತು. ಇಷ್ಟು ದೊಡ್ಡ ಹಿಂಡು ರೂಪುಗೊಂಡರೂ ಅದು ಯಾವುದೇ ಕಾರಣಕ್ಕೂ ಚದುರಿಹೋಗಿಲ್ಲ. ಪ್ರತಿದಿನ ಬೆಳಗ್ಗೆ ಮೇಯಲು ಹೊರಡುತ್ತವೆ, ಗುಂಪು ಗುಂಪಾಗಿ ಸ್ಥಳೀಯರ ತೋಟಗಳಿಗೆ ನುಗ್ಗುವುದೂ ಇದೆ. ಸಂಜೆ ಮತ್ತೆ ಒಂದೇ ಪ್ರದೇಶಕ್ಕೆ ಮರಳುತ್ತವೆ. ದೇವಸ್ಥಾನದ ಎದುರಿನ ಬೆಳಕಿನ ಕಂಬದ ಕೆಳಗೆ ಗುಂಪಾಗಿ ಮಲಗುತ್ತವೆ. ಒಂದೆರಡು ತಿಂಗಳ ಕರುಗಳಿಂದ ಹಿಡಿದು ಮುದಿ ಎತ್ತುಗಳವರೆಗೆ ಎಲ್ಲವೂ ಒಂದೇ ಬದುಕಿನ ಭಾಗವಾಗಿವೆ. ಅಮೆರಿಕ ಮತ್ತು ಬ್ರೆಝಿಲ್‌ನ ಕೆಲವು ಪ್ರದೇಶಗಳಲ್ಲಿ ಮನುಷ್ಯನ ಸಾಕಣೆಯಿಂದ ಹೊರಬಂದು ಕಾಡಿನಲ್ಲಿ ಸ್ವತಂತ್ರವಾಗಿ ಬದುಕುತ್ತಿರುವ ಫೆರಲ್ ಕ್ಯಾಟಲ್ ಬಗ್ಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಮನೆ ಬಿಟ್ಟು ಹೋದ ಹಸುಗಳು ಹೇಗೆ ಹೊಸ ಹಿಂಡುಗಳನ್ನು ಕಟ್ಟಿಕೊಳ್ಳುತ್ತವೆ, ಆಹಾರ ಹುಡುಕುತ್ತವೆ, ಸಂತಾನೋತ್ಪತ್ತಿ ಮಾಡುತ್ತವೆ, ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತವೆ ಎಂಬುದನ್ನು ಅವರು ದಾಖಲಿಸಿದ್ದಾರೆ. ಆದರೆ ಕರ್ನಾಟಕದಲ್ಲಿ, ಅದರಲ್ಲೂ ಕರಾವಳಿ-ಮಲೆನಾಡಿನ ಕಾಡಂಚಿನಲ್ಲಿ ಇಂತಹ ಸ್ವಯಂ ರೂಪುಗೊಂಡ ಹಿಂಡಿನ ಬಗ್ಗೆ ಹೆಚ್ಚು ದಾಖಲೆಗಳು ನನಗೆ ಸಿಕ್ಕಿಲ್ಲ.ಅದಕ್ಕಾಗಿಯೇ ಕಣಿಯಾರಿನ ಈ ಹಸುಗಳು ಕೇವಲ ಒಂದು ಕುತೂಹಲವಲ್ಲ. ಅವು ಒಂದು ಅಧ್ಯಯನ.

ಎಷ್ಟೋ ಬಾರಿ ನಾವು ಉಪಯೋಗವಿಲ್ಲವೆಂದು ಕೈಬಿಟ್ಟ ನಾಯಿ, ಬೆಕ್ಕುಗಳನಂಥ ಜೀವಿಗಳು ಊರು-ಬೀದಿಗಳಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿರುವುದನ್ನು ನೋಡುತ್ತೇವೆ. ಹಾಗೆ ಮನುಷ್ಯ ಸಹವಾಸದ ಹಟ್ಟಿಗಳಿಂದ ಬಹುದೂರ ನಡೆದು ಬಂದವುಗಳನ್ನು ಕಾಡು ಹೊರಗೆ ತಳ್ಳಲಿಲ್ಲ. ಅವುಗಳಿಗಾಗಿ ಪ್ರತ್ಯೇಕ ಮೇವು ಬೆಳೆಸಲಿಲ್ಲ. ಗೋಡೆ ಕಟ್ಟಲಿಲ್ಲ. ದೇಣಿಗೆ ಕೇಳಲಿಲ್ಲ.

ಆದರೂ ಅವು ಬದುಕುತ್ತಿವೆ!

ಬಹುಶಃ ಪ್ರಕೃತಿಯ ದೊಡ್ಡ ಉದಾರತೆ ಇದೇ ಇರಬಹುದು. ಆದರೆ ಈ ಕಥೆಗೆ ಇನ್ನೊಂದು ಮುಖವೂ ಇದೆ. ಇಷ್ಟೊಂದು ಹಸುಗಳು ಒಂದೇ ಪ್ರದೇಶದಲ್ಲಿ ಬದುಕುವುದರಿಂದ ಕಾಡಿನ ಸಸ್ಯವರ್ಗದ ಮೇಲೆ ಏನು ಪರಿಣಾಮ ಬೀರುತ್ತದೆ? ವನ್ಯಜೀವಿಗಳ ಆಹಾರದ ಮೇಲೆ ಇದರ ಪರಿಣಾಮವೇನು? ಚಿರತೆ, ಹುಲಿ, ಕಾಡುನಾಯಿ, ಕಾಡುಕೋಣ, ಕಾಡುಹಂದಿಗಳೊಂದಿಗೆ ಈ ಹಿಂಡು ಯಾವ ಸಂಬಂಧ ಬೆಳೆಸಿಕೊಂಡಿದೆ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರಗಳಿಲ್ಲ. ಹಾಗಂತ ಇದು ಕೇವಲ ವಲಸೆಯ ದಾರಿಯಲ್ಲಿ ದೂರ ಸರಿದ ಹಸುಗಳ ಕಥೆಯಲ್ಲ. ಬದಲಾಗುತ್ತಿರುವ ಭಾರತೀಯ ಕೃಷಿಯ ಕಥೆ. ಪ್ರಕೃತಿ ಮನುಷ್ಯನ ತಪ್ಪುಗಳನ್ನು ಹೇಗೆ ತನ್ನೊಳಗೆ ಸೇರಿಸಿಕೊಳ್ಳುತ್ತದೆ ಎಂಬ ಕಥೆ ಮತ್ತು ನಾಗರಿಕತೆ ಎಂದರೇನು ಎಂಬ ಪ್ರಶ್ನೆಯನ್ನು ಮತ್ತೆ ನಮ್ಮ ಮುಂದಿಡುವ ಕಥೆ.

ಈ ಹಸುಗಳ ಹಿಂಡಿನ ಮುಂದೆ ನಿಂತಾಗ ನನಗೆ ಮತ್ತೆ ಮತ್ತೆ ನಮ್ಮ ಕಾಲದ ಗೋಶಾಲೆಗಳು ನೆನಪಾಗುತ್ತವೆ. ಕರ್ನಾಟಕದಲ್ಲಿ ನೂರಾರು ಗೋಶಾಲೆಗಳಿವೆ. ಮಠಗಳು ನಡೆಸುವ ಗೋಶಾಲೆಗಳಿವೆ. ಧಾರ್ಮಿಕ ಟ್ರಸ್ಟ್‌ಗಳು ನಡೆಸುವ ಗೋಶಾಲೆಗಳಿವೆ. ದಾನಿಗಳ ನೆರವಿನಿಂದ ಬದುಕುತ್ತಿರುವ ಗೋಶಾಲೆಗಳಿವೆ. ಸಾವಿರಾರು ಹಸುಗಳನ್ನು ಅವು ಉಳಿಸುತ್ತಿವೆ. ಅವರ ಸೇವೆಯನ್ನು ಗೌರವಿಸಲೇಬೇಕು. ಆದರೆ ಕಣಿಯಾರಿನ ಕಾಡು ನನ್ನ ಮುಂದೆ ಇನ್ನೊಂದು ಗೋಶಾಲೆಯನ್ನು ತೆರೆದಿಟ್ಟಿದೆ. ಅಲ್ಲಿ ದೇಣಿಗೆ ಪೆಟ್ಟಿಗೆಯಿಲ್ಲ. ಕಾವಿ ಧರಿಸಿದ ಸ್ವಾಮೀಜಿಗಳಿಲ್ಲ. ಆಡಳಿತ ಮಂಡಳಿಯಿಲ್ಲ.ಮ್ಯಾನೇಜರ್ ಇಲ್ಲ. ಲೆಕ್ಕಪತ್ರಗಳಿಲ್ಲ. ಪ್ರಕೃತಿಯ ಗೋಶಾಲೆ ಮತ್ತು ಮನುಷ್ಯನ ಗೋಶಾಲೆಯ ನಡುವಿನ ದೊಡ್ಡ ವ್ಯತ್ಯಾಸ ಇದೇ. ಪ್ರಕೃತಿ ಹಸುವನ್ನು ಸಾಕುವುದಿಲ್ಲ. ಅದಕ್ಕೆ ಬದುಕಲು ಬೇಕಾದ ಎಲ್ಲವನ್ನೂ ಒದಗಿಸುತ್ತದೆ.

ನೀರು ಕೊಡುತ್ತದೆ. ಹುಲ್ಲು ಕೊಡುತ್ತದೆ. ನೆರಳು ಕೊಡುತ್ತದೆ. ಸ್ವಾತಂತ್ರ್ಯ ಕೊಡುತ್ತದೆ. ಉಳಿದ ಬದುಕನ್ನು ಹಸುಗಳೇ ಕಟ್ಟಿಕೊಳ್ಳುತ್ತವೆ.ಅದಕ್ಕಾಗಿಯೇ ಈ ಹಿಂಡನ್ನು ನೋಡಿದಾಗ ನನಗೆ ಗೋಶಾಲೆ ಎನ್ನುವುದು ಕಟ್ಟಡವಲ್ಲ; ಅದು ಒಂದು ಸಾಮಾಜಿಕ ವ್ಯವಸ್ಥೆ ಎನ್ನುವ ಭಾವನೆ ಬಲವಾಯಿತು. ನಮ್ಮ ಗ್ರಾಮೀಣ ಬದುಕಿನ ದೊಡ್ಡ ದುರಂತವೂ ಇಲ್ಲಿಯೇ ಇದೆ.

ಒಂದು ಕಾಲದಲ್ಲಿ ರೈತನ ಮನೆಯಲ್ಲಿದ್ದ ಪ್ರತಿಯೊಂದು ಹಸು ಕುಟುಂಬದ ಸದಸ್ಯಳಾಗಿದ್ದಳು. ಹೊಲದ ಉಳುಮೆಯಲ್ಲಿ ಎತ್ತು ಪಾಲುದಾರನಾಗಿದ್ದ. ಸೆಗಣಿ ಗೊಬ್ಬರವಾಗುತ್ತಿತ್ತು. ಗೋಮೂತ್ರ ಔಷಧವಾಗುತ್ತಿತ್ತು. ಕರು ಮನೆಯ ಮಕ್ಕಳ ಜೊತೆ ಬೆಳೆದು ಬರುತ್ತಿತ್ತು.

ಇಂದು ಕೃಷಿಯ ಆರ್ಥಿಕತೆ ಬದಲಾಗಿದೆ.

ಹಾಲು ಲಾಭದ ಕೇಂದ್ರವಾಗಿದೆ. ಉಳಿದದ್ದು ಹೊರೆಯಾಗಿದೆ. ಆದರೆ ಅದನ್ನು ಬದುಕಿನ ವ್ಯವಸ್ಥೆಯಾಗಿ ಉಳಿಸಿಕೊಳ್ಳುವ ಶಕ್ತಿ ಕಡಿಮೆಯಾಗಿದೆ.

ಆ ಕಾರಣಕ್ಕಾಗಿಯೇ ವಯಸ್ಸಾದ ಹಸುಗಳು, ಗಂಡು ಕರುಗಳು, ನಿರುಪಯುಕ್ತ ಎತ್ತುಗಳು ಕಾಡಿನ ದಾರಿ ಹಿಡಿಯುತ್ತಿವೆ.

ಕಣಿಯಾರಿನ ಈ ಹಸುಗಳ ಹಿಂಡು ಕೇವಲ ಪ್ರಾಣಿಗಳ ಕಥೆಯಲ್ಲ; ಬದಲಾಗುತ್ತಿರುವ ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕು ಮತ್ತು ಪರಿಸರದ ಹೊಸ ವಾಸ್ತವದ ದಾಖಲೆಯಾಗಿದೆ. ಮನುಷ್ಯ ಕೈಬಿಟ್ಟ ಹಸುಗಳಿಗೆ ಕಾಡು ಆಶ್ರಯ ಕೊಟ್ಟಿದೆಯೇ ಅಥವಾ ಮನುಷ್ಯನಿಗಿಂತ ಉತ್ತಮ ಸಮಾಜವನ್ನು ಹಸುಗಳೇ ಕಟ್ಟಿಕೊಂಡಿವೆಯೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ನಾವು ಗೋವುಗಳನ್ನು ಪ್ರೀತಿಸುತ್ತೇವೆ, ಗೋಶಾಲೆಗಳನ್ನು ಕಟ್ಟುತ್ತೇವೆ. ಆದರೆ ಉಪಯೋಗ ಮುಗಿದ ಹಸುಗಳಿಗೆ ಕೊನೆಗೆ ಆಶ್ರಯ ನೀಡಿದ್ದು ಯಾರೂ ಕಟ್ಟದ ಈ ಕಾಡೇ. ಆಗ ಅರಿವಾಗುವುದು ಕೆಲವೊಮ್ಮೆ ಕಾಡು ಕೇವಲ ಮರಗಳ ಸಮೂಹವಲ್ಲ; ಮನುಷ್ಯ ಮರೆತುಬಿಟ್ಟ ಕರುಣೆಯ ಕೊನೆಯ ವಿಳಾಸವೂ ಆಗಿರುತ್ತದೆ.

Tags

Kaniyaru Maleforest
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X