ಕಾಂತಾವರ- ಒಂಟಿಯಾಯಿತೇ ಕನ್ನಡದ ಮೊಗಸಾಲೆ?

ಒಂದು ಕಾಲದಲ್ಲಿ ಕನ್ನಡಕ್ಕಾಗಿ ಬದುಕನ್ನೇ ಅರ್ಪಿಸಿದವರು ವಯಸ್ಸಿನ ಕಾರಣಕ್ಕಾಗಿ ಕನ್ನಡ ಸಂಘಗಳಿಂದ ನಿಧಾನವಾಗಿ ಹಿಂದೆ ಸರಿಯುತ್ತಿದ್ದಾರೆ. ಅವರ ನಂತರ ಆ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ತಲೆಮಾರು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಪರಿಣಾಮ ಒಂದು ಕಾಲದ ಸಾಹಿತ್ಯ ಶಕ್ತಿಯ ಗಟ್ಟಿ ಸ್ಥಾವರಗಳಾಗಿ ಒಪ್ಪಿಗೆಯಾದ ಸಂಸ್ಥೆಗಳು, ಕನ್ನಡದ ಬಾವುಟ ಹಾರಿಸಿದ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಹಾಕುವ ಪರಿಸ್ಥಿತಿಗೆ ತಲುಪುತ್ತಿವೆ ಎಂಬ ಆತಂಕ ನಿಜವಾಗುತ್ತಿದೆ.
ಕರ್ನಾಟಕದ ಭೌತಿಕ ನಕ್ಷೆಯನ್ನು ಒಂದು ಕ್ಷಣ ಕಣ್ಣಿಗೆ ಕಟ್ಟಿಕೊಂಡರೆ, ಅದರ ಅಂಚುಮಧ್ಯಗಳ ನಡುವೆ, ನಗರಗಳ ಗದ್ದಲದಿಂದ ದೂರವಾಗಿ ಮೌನವಾಗಿ ಬದುಕುತ್ತಿರುವ ಅನೇಕ ಹಳ್ಳಿಗಳು ನೆನಪಿಗೆ ಬರುತ್ತವೆ. ಅಂಥ ಹಳ್ಳಿಗಳಲ್ಲೊಂದು ಕಾರ್ಕಳದ ಕಾಂತಾವರ. ನಾಗರಿಕ ಜಗತ್ತಿನ ಬೆಳಕು ಅಷ್ಟಾಗಿ ಬೀಳದ, ಆದರೆ ಕನ್ನಡದ ಒಳಬೆಳಕು ದೀಪದಂತೆ ಹೊತ್ತಿದ್ದ ಹಳ್ಳಿಯದು. ಅಲ್ಲಿಗೆ 60 ವರ್ಷಗಳ ಹಿಂದೆ ರೋಗಿಗಳ ನಾಡಿಯ ಜೊತೆಗೆ ಭಾಷೆಯ ನಾಡಿಯನ್ನೂ ಹಿಡಿಯಲೇಬೇಕು ಎಂಬ ಕನಸಿನೊಂದಿಗೆ ಬಂದ ನಾರಾಯಣ ಮೊಗಸಾಲೆಯವರ ಆಸಕ್ತಿಯಿಂದ ಹುಟ್ಟಿದ ಸಂಸ್ಥೆಯೇ ‘ಕಾಂತಾವರ ಕನ್ನಡ ಸಂಘ’.
ಹಾಗಂತ ಅದು ಕೇವಲ ಒಂದು ಸಂಘವಲ್ಲ; ಒಂದು ಕಾಲಘಟ್ಟದಲ್ಲಿ ಕನ್ನಡದ ಹಳ್ಳಿಕೇಂದ್ರಿತ ಸಾಂಸ್ಕೃತಿಕ ಚಳವಳಿಯ ಪ್ರತೀಕ.
ಆ ವೈದ್ಯ ಊರೊಟ್ಟಿಗೆ ಕಟ್ಟಿದ ಕನ್ನಡ ಸಂಘ, ಕನ್ನಡ ಭವನ ಬರೀ ಇಟ್ಟಿಗೆ ಸಿಮೆಂಟ್‌ನ ಸ್ಥಾವರವಲ್ಲ. ಸ್ಥಳೀಯ ಸಾಹಿತ್ಯ ಶಕ್ತಿಯನ್ನು ಜೋಡಿಸಿಕೊಂಡು, ವಿಚಾರಗೋಷ್ಠಿ, ಉಪನ್ಯಾಸ-ಪ್ರವಚನ, ಪುಸ್ತಕ ಪ್ರಕಟಣೆ, ನಾಡಿಗೆ ನಮಸ್ಕಾರ ಮಾಲಿಕೆ, ಪ್ರಶಸ್ತಿ ಪ್ರದಾನಗಳ ಮೂಲಕ ಒಂದು ಊರಿನ ಮನಸ್ಸನ್ನು ಆಳವಾಗಿ ಕಟ್ಟಿದ ತಟ್ಟಿದ ಸಂಸ್ಕೃತಿಯ ಮನೆ.
ಕಾಂತಾವರ ಮಾತ್ರವಲ್ಲ; ಕುಪ್ಪಳಿ, ಹೆಗ್ಗೋಡು, ಸಾಣೆಹಳ್ಳಿ, ಶಿವಮೊಗ್ಗ, ಮಂಡ್ಯ...ಹೀಗೆ ಈ ರಾಜ್ಯದ ಅನೇಕ ಕನ್ನಡ ಸಂಘಗಳು ಇದೇ ಮಾದರಿಯ ಸಾಹಿತ್ಯ ಕೇಂದ್ರಗಳಾಗಿ ಮೆರೆದಿದ್ದವು. ಕೆಲವೊಂದು ಮಹಾನಗರದಿಂದ ಬಹಳ ದೂರವಿದ್ದರೂ, ಕನ್ನಡ ಮನಸ್ಸನ್ನು ಗಟ್ಟಿ ಮಾಡುವಲ್ಲಿ ಈ ವೇದಿಕೆಗಳ ಪ್ರಭಾವ ನಗರಗಳಿಗಿಂತ ಕಡಿಮೆಯಾಗಿರಲಿಲ್ಲ. ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಗಾಢವಾಗಿತ್ತು.
ಆ ದಿನಗಳಲ್ಲಿ ಸಾಹಿತ್ಯ ಎಂದರೆ ವೇದಿಕೆ, ಸಭಿಕರು, ಪ್ರಶ್ನೋತ್ತರ, ತಾಳ್ಮೆಯ ಶ್ರವಣ, ಪುಸ್ತಕದ ಓದು, ಲೇಖಕರ ಜೊತೆ ನೇರ ಮಾತುಕತೆ... ಎಲ್ಲವೂ ಇತ್ತು. ಯಾವುದೋ ಊರಿನ ಅಜ್ಞಾತ ಯುವ ಲೇಖಕನಿಗೆ ಮೊದಲ ಪ್ರಶಸ್ತಿ ಸಿಕ್ಕಿದ್ದು ಇಂತಹ ಸಂಘದ ವೇದಿಕೆಗಳಲ್ಲೇ. ಹಳ್ಳಿಯವರೇ ನಿರ್ದೇಶಿಸಿದ ನಾಟಕ ಪ್ರದರ್ಶನಗೊಂಡದ್ದು, ಅನಾಮಿಕ ಬರಹಗಾರನೊಬ್ಬ ಲೇಖಕನಾಗಿ ಬೆಳಗಿದ್ದು, ಬೀಡಿ ಕಟ್ಟುವ ಹುಡುಗಿಯೊಬ್ಬಳು ಬೇರೆಯವರ ಕವನ ಓದಿ ತಾನೂ ಕವಯಿತ್ರಿಯಾಗಬೇಕೆಂದು ಹಂಬಲಿಸಿದ್ದು, ನಾಟ್ಯ ಕಲಿತ ವಿದ್ಯಾರ್ಥಿಯ ಮೊದಲ ರಂಗ ಪ್ರವೇಶ, ಸ್ಥಳೀಯ ಕಾಲೇಜು ವಿದ್ಯಾರ್ಥಿಯೊಬ್ಬ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಭಾಗವಹಿಸುವಂತೆ ಆದದ್ದು, ಕವಿಯೊಬ್ಬ ತನ್ನ ಮೊದಲ ಕವನ ಓದಿದ್ದು, ಹಿರಿಯ ಸಾಹಿತಿಯೊಬ್ಬರಿಗೆ ತನ್ನ ಬರಹವನ್ನು ಕೇಳಿಸಿಕೊಳ್ಳುವ ಸಹೃದಯನೊಬ್ಬ ಸಿಕ್ಕಿದ್ದು.... ಇಂಥದ್ದೇ ಹಳ್ಳಿಯ ಸಭಾಂಗಣದಲ್ಲಿ. ಇಂಥ ದಾರಿಗಳಲ್ಲೇ ಈ ಸಾಹಿತ್ಯಸಂಘಗಳು ನಿರಂತರ ಬರಹಗಾರರನ್ನು ಬೆಳೆಸಿದವು, ಓದುಗರನ್ನು ರೂಪಿಸಿದವು, ಸಾಹಿತ್ಯ- ಸಾಹಿತಿಯನ್ನು ಪೋಷಿಸಿ ಕನ್ನಡದ ಬೌದ್ಧಿಕ ಬುನಾದಿಯನ್ನು ಗಟ್ಟಿಗೊಳಿಸಿದವು.
ಆದರೆ ಇಂದು ಅದೇ ಕನ್ನಡ ಸಂಘಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ಅನುದಾನಗಳ ಕಡಿತಕ್ಕಿಂತಲೂ ಹೆಚ್ಚು ಕಾಡುತ್ತಿರುವುದು ಸಮಸ್ಯೆ ಸಹೃದಯ ಸಭಿಕರ ಕೊರತೆ. ಆರ್ಥಿಕ ಸಮಸ್ಯೆ ಇಲ್ಲದೆ ಪ್ರಾಯೋಜಕರ ಮೂಲಕ ನಿಯತ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಕೆಲವು ಸಂಘಗಳಲ್ಲಿಯೂ ಸಭಾಂಗಣ ಬಣ ಗುಟ್ಟುತ್ತಿವೆ. ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಆಳವಾಗಿ ಅಭ್ಯಸಿಸಿ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳಾದರೂ ಸಿಗುತ್ತಾರೆ. ಕಲೆ, ಸಂಗೀತ, ನಾಟಕ, ಯಕ್ಷಗಾನ, ರಂಗಭೂಮಿ, ಪ್ರವಚನ, ಹರಿಕಥೆ ಎಲ್ಲದಕ್ಕೂ ಪ್ರದರ್ಶನಕಾರರು ಸಿಗುತ್ತಾರೆ. ಸಂಭಾವನೆ, ಕಾಫಿ-ತಿಂಡಿ ಎಲ್ಲದಕ್ಕೂ ಆಯೋಜಕರು-ಪ್ರಾಯೋಜಕರು ಒದಗುತ್ತಾರೆ. ಸಮಸ್ಯೆ ಒಂದೇ, ಅವರೆದುರು ಒಂದೆರಡು ಗಂಟೆ ನೆಟ್ಟಗೆ ಕೂತು ಮಾತು, ಹಾಡು, ಸಂಗೀತವನ್ನು ಕೇಳಿಸಿಕೊಳ್ಳುವ ಸುಸಂಸ್ಕೃತ ಶ್ರೋತೃಗಳು ಇಲ್ಲ ಎನ್ನುವ ನೋವು. ಇದು ಸಂಸ್ಕೃತಿ ಸಾಹಿತ್ಯ ಸಂಬಂಧಿ ಎಲ್ಲ ಸಂಘಗಳಿಗೂ ಸಾಮಾನ್ಯ ಸಮಸ್ಯೆ. ಎಲ್ಲೇ ಯಾವುದೇ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ, ಸಭೆಯಲ್ಲಿ ಕಾಣಿಸುವವರು ಹೆಚ್ಚಾಗಿ ಬರೀ 70-80 ವರ್ಷ ಹರೆಯದ ಬಿಳಿತಲೆಯವರು. ಆಸಕ್ತಿಯುಳ್ಳ ಯುವಕರನ್ನು, ವಿದ್ಯಾರ್ಥಿಗಳನ್ನು ಸಭೆಯಲ್ಲಿ ಕೂರಿಸುವಲ್ಲಿ ಸಂಘಟಕರು ಸತತವಾಗಿ ಸೋಲುತ್ತಿದ್ದಾರೆ.
ಇದು ಕೇವಲ ಕಾಂತಾವರದ ಸಮಸ್ಯೆಯಲ್ಲ; ಇಡೀ ರಾಜ್ಯದ ಸಾಹಿತ್ಯ ಸಂಘಗಳನ್ನು ಕಾಡುತ್ತಿರುವ ದೊಡ್ಡ ಸಂಕಟ. ಕೆಲವೊಂದು ಕನ್ನಡ ಸಂಘಗಳಿಗೆ ಇನ್ನೊಂದು ಭೀತಿಯೂ ಎದುರಾಗಿದೆ ಸಮರ್ಥ ಉತ್ತರಾಧಿಕಾರಿಗಳ ಕೊರತೆ. ಒಂದು ಕಾಲದಲ್ಲಿ ಕನ್ನಡಕ್ಕಾಗಿ ಬದುಕನ್ನೇ ಅರ್ಪಿಸಿದವರು ವಯಸ್ಸಿನ ಕಾರಣಕ್ಕಾಗಿ ನಿಧಾನವಾಗಿ ಹಿಂದೆ ಸರಿಯುತ್ತಿದ್ದಾರೆ. ಅವರ ನಂತರ ಆ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ತಲೆಮಾರು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಪರಿಣಾಮ ಒಂದು ಕಾಲದ ಸಾಹಿತ್ಯ ಶಕ್ತಿಯ ಗಟ್ಟಿ ಸ್ಥಾವರಗಳಾಗಿ ಒಪ್ಪಿಗೆಯಾದ ಸಂಸ್ಥೆಗಳು, ಕನ್ನಡದ ಬಾವುಟ ಹಾರಿಸಿದ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಹಾಕುವ ಪರಿಸ್ಥಿತಿಗೆ ತಲುಪುತ್ತಿವೆ ಎಂಬ ಆತಂಕ ನಿಜವಾಗುತ್ತಿದೆ.
ಬರೀ ಕರಾವಳಿಯಲ್ಲೇ ಪುತ್ತೂರಿನ ಕರ್ನಾಟಕ ಸಂಘ, ಮಂಗಳೂರು ಸಾಹಿತ್ಯ ಸಂಘ, ಮಣಿಪಾಲ ಸಾಹಿತ್ಯ ಸಂಘ ಇವು ಕೇವಲ ಹೆಸರುಗಳಲ್ಲ. ಇವುಗಳ ಹಿಂದೆ ದಶಕಗಳ ಶ್ರಮ, ಸಾವಿರಾರು ಕಾರ್ಯಕ್ರಮಗಳು, ಅನೇಕ ಬರಹಗಾರರ ಬದುಕು ಸೇರಿವೆ. ಇಂಥ ಸಂಸ್ಥೆಗಳು ಇಂದು ಆರ್ಥಿಕ ಶಕ್ತಿಗಿಂತ ಹೆಚ್ಚಾಗಿ ಪ್ರೇಕ್ಷಕ ಶಕ್ತಿ, ಮುಂದಾಳತ್ವ ಕೊರತೆಯಿಂದ ನಲುಗುತ್ತಿರುವುದು ಇಡೀ ಕನ್ನಡ ನಾಡಿಗೆ, ಕನ್ನಡಭಾಷೆಗೆ ಒಂದು ಸಾಂಸ್ಕೃತಿಕ ಎಚ್ಚರಿಕೆಯ ಗಂಟೆಯೇ.
ಒಳಗಡೆಯಷ್ಟೇ ಅಲ್ಲ, ಹೊರಗಡೆಯೂ ಕನ್ನಡವನ್ನು ಪೋಷಿಸುವಲ್ಲಿ ಸರಕಾರದ ಹಿಂದೇಟಿನ ಪ್ರಭಾವ ಗಂಭೀರವಾಗಿದೆ. ರಾಜ್ಯ ಸರಕಾರ ಇತ್ತೀಚೆಗೆ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕ ಖರೀದಿಯನ್ನು ನಿಲ್ಲಿಸಿದೆ. ಖರೀದಿಸಿದ ಪುಸ್ತಕಗಳಿಗೆ ಇನ್ನೂ ಹಣ ಸಂದಾಯವಾಗಿಲ್ಲ. ಭಾಷಿಕ-ಸಾಂಸ್ಕೃತಿಕ ಕೇಂದ್ರಗಳಿಗೆ ಅನುದಾನಗಳನ್ನು ಕಡಿಮೆ ಮಾಡಿದೆ. ಕನ್ನಡ ಶಾಲೆಗಳ ಗತಿ ದೇವರಿಗೇ ಗೊತ್ತು. ಶಿಕ್ಷಕರ ನೇಮಕಾತಿ ಇಲ್ಲ. ಈ ಎಲ್ಲವೂ ಒಟ್ಟಾಗಿ ಒಂದು ಸಾಂದರ್ಭಿಕ ಸಾಂಸ್ಕೃತಿಕ ಬರವನ್ನು ಸೃಷ್ಟಿಸುತ್ತಿವೆ. ಎಲ್ಲೆಲ್ಲೂ ಹಂಚಿಹೋದ ಸಾಹಿತ್ಯ ಸಂಘಗಳು ಒಂಟಿಯಾಗಿ ಇಂತಹ ಹೊರೆ ಹೊರುವ ಸ್ಥಿತಿಯಲ್ಲಿಲ್ಲ.
ಒಂದು ಕಾಲದಲ್ಲಿ ಹೆಗಲ ಚೀಲದೊಳಗಡೆ ಕನ್ನಡ ಪುಸ್ತಕಗಳನ್ನು ಇಟ್ಟುಕೊಂಡು, ನೆಲನಡಿಗೆಯಲ್ಲೇ ಊರೂರು ಮನೆಮನೆ ಅಲೆದು ಚಪ್ಪಲಿ ಸವೆಸಿ, ಚಂದ ಎತ್ತಿ ಇಂತಹ ಸಂಘಗಳನ್ನು ಕಟ್ಟಿದ ನಮ್ಮ ಹಿರಿಯರ ಆಶಯ ಇಂದು ಮಣ್ಣು ಪಾಲಾಗುತ್ತಿದೆ. ಬಹುತ್ವ, ಸಂವೇದನೆ, ಓದುರುಚಿ ಹತ್ತಿಸಿದ ಇಂತಹ ಸಾಹಿತ್ಯ ಸಂಘಗಳು ಈ ರೀತಿ ನಿಸ್ತೇಜಗೊಳ್ಳುತ್ತಾ ಹೋದರೆ ಮುಂದಿನ ಪರಿಣಾಮಗಳು ಭಯಾನಕವಾಗಬಹುದು.
ಐವತ್ತು ವರ್ಷಗಳ ಹಿಂದೆ ಕಾಂತಾವರದಲ್ಲಿ ಹುಟ್ಟಿದ ಕನ್ನಡ ಸಂಘ ಬರೀ ಒಂದು ಸಂಸ್ಥೆಯಲ್ಲ. ಒಂದು ಮನಸ್ಥಿತಿ. ಸಾಹಿತ್ಯ, ಸಂಸ್ಕೃತಿ, ವಿಚಾರ, ಪುಸ್ತಕ ಇವೆಲ್ಲವೂ ಮನುಷ್ಯಬದುಕಿನ ಮಧ್ಯೆ ಸಹಜವಾಗಿ ಇರಬೇಕು ಅನ್ನೋ ನಂಬಿಕೆಯಿಂದಲೇ ಅದು ಬೆಳೆಯಿತು.
1965ರಲ್ಲಿ ಕಾಸರಗೋಡಿನಿಂದ ಕಾಂತಾವರಕ್ಕೆ ಬಂದ ಮೊಗಸಾಲೆಯವರಿಗೆ ಈ ಹಳ್ಳಿಯ ಮಣ್ಣಿನಲ್ಲಿ ಏನಾದರೂ ಮಾಡಬಹುದು ಮತ್ತು ಮಾಡಲೇ ಬೇಕೆಂಬ ಆಸೆ ಹುಟ್ಟಿತ್ತು. ಆರಂಭದ ಹತ್ತು ವರ್ಷ ಒಂದಷ್ಟು ಪ್ರೌಢರನ್ನು ಜೋಡಿಸಿ ಯುವಕ ಸಂಘವನ್ನು ಕಟ್ಟಿದರು. ಮುಂದೆ ಬದುಕಿನ ಒತ್ತಡ, ಉದ್ಯೋಗ, ಕುಟುಂಬ ಎಲ್ಲದರ ನಡುವೆ ಆ ಸಂಘಟನೆ ನಿಧಾನವಾಗಿ ನಿಂತು ಹೋಯಿತು. ಅದೇ ಹೊತ್ತಿಗೆ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪೊಳಲಿ ಬಾಲಕೃಷ್ಣ ಶೆಟ್ರು ತಮ್ಮ ‘ಮಣಿಪಾಲ ಸಾಹಿತ್ಯ ಸಂಘ’ಕ್ಕೆ ಯುವಕವಿ ಮೊಗಸಾಲೆಯವರನ್ನು ಆಹ್ವಾನಿಸಿ ಕವನ ಓದುವ ಅವಕಾಶ ಕೊಟ್ಟರು. ವೇದಿಕೆ ದೊಡ್ಡದಲ್ಲ, ಎದುರಿನ ಸಭೆಯೂ ದೊಡ್ಡದಲ್ಲ. ಅಲ್ಲಿದ್ದದ್ದು ಹತ್ತುಹದಿನೈದು ಮಂದಿ ಸಾಹಿತ್ಯಪ್ರಿಯ ಸಹೃದಯ ಬ್ಯಾಂಕ್ ಅಧಿಕಾರಿಗಳು ಮಾತ್ರ.ಚಪ್ಪಾಳೆ ಮಾತ್ರ ಜೋರಿತ್ತು. ಮೊಗಸಾಲೆಯವರ ಮನಸ್ಸಿನಲ್ಲಿ ಆ ಕವಿಗೋಷ್ಠಿ ಪ್ರಶ್ನೆ ಒಂದನ್ನು ಹುಟ್ಟುಹಾಕಿತು. ಕಾಂಕ್ರಿಟ್ ಕಾಡಿನಲ್ಲಿ ಸಾಹಿತ್ಯ ಸಂಘ ಮಾಡಿ ಸಾಧಿಸುವುದಕ್ಕಿಂತ, ನಾಗರಿಕ ಪ್ರಪಂಚದಿಂದ ದೂರ ಇರುವ ಕಾಂತಾವರದಲ್ಲಿ ಯಾಕೆ ಒಂದು ಕನ್ನಡ ಸಂಘ ಕಟ್ಟಬಾರದು?
ಅಂದಿನಿಂದಲೇ ಅವರು ಸುತ್ತಲಿನ ಐದು ಗ್ರಾಮಗಳನ್ನು ಸುತ್ತಲಾರಂಭಿಸಿದರು. ಅಕ್ಕ ಪಕ್ಕದ ಶಾಲೆಗಳಿಗೆ ಹೋದರು. ಶಿಕ್ಷಕರ ಜೊತೆ ಮಾತಾಡಿದರು. ‘ಕನ್ನಡ ಸಂಘ ಬೇಕಾ?’ ಅನ್ನೋ ಪ್ರಶ್ನೆಯನ್ನು ಯಾರ ಮೇಲೂ ಹೇರುವುದಿಲ್ಲ.. ವಿಠಲ ಬೇಲಾಡಿ, ಮಾರಣ್ಣ ಮಾಡ ಅವರಂತಹ ಸ್ಥಳೀಯ ಶಿಕ್ಷಕರು ಮೊಗಸಾಲೆ ಮಾತಿಗೆ ಸ್ಪಂದಿಸುತ್ತಾರೆ. 1976ರ ಮೇ 26ರಂದು, ಆರು ರೂಪಾಯಿ ಸದಸ್ಯತ್ವದ ಇಪ್ಪತ್ತೊಂಭತ್ತು ಮಂದಿ ಸೇರಿ ಕಾಂತಾವರ ಕನ್ನಡ ಸಂಘವನ್ನು ಉದ್ಘಾಟಿಸುತ್ತಾರೆ.
ಮೊದಲ ಪ್ರಕಟಣೆ ‘ದಕ್ಷಿಣ ಕನ್ನಡ ಕಾವ್ಯ’. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಅದರ ಬಿಡುಗಡೆ. ಸಂಪಾದಕರು ಸುಬ್ರಾಯ ಚೊಕ್ಕಾಡಿ. ಅಂದಿನಿಂದ ಸಾಹಿತ್ಯ ಕೇಂದ್ರಿತ ಕಾರ್ಯಕ್ರಮಗಳು ಐದು ಗ್ರಾಮಗಳ ಬೇರೆ ಬೇರೆ ಶಾಲೆಗಳಲ್ಲಿ ನಡೆಯತೊಡಗುತ್ತವೆ. ಶಾಲೆಯ ಕೊಠಡಿಗಳಲ್ಲಿ, ಸಂಜೆ ಹೊತ್ತಿನಲ್ಲಿ ವರ್ತಮಾನದ ಸಾಹಿತ್ಯ ಸ್ಥಿತಿ ಗತಿಯ ಬಗ್ಗೆ ಮಾತುಕತೆ ನಡೆಯುತ್ತದೆ. ಸದಸ್ಯತ್ವದ ಮೊತ್ತ ಹೆಚ್ಚಾಗುತ್ತದೆ. ನಿಟ್ಟೆ ಶಿಕ್ಷಣ ಸಂಸ್ಥೆ ಆರಂಭವಾದ ಮೇಲೆ ಅಲ್ಲಿಗೂ ವಿಚಾರಗೋಷ್ಠಿಗಳು ಸರಿಯುತ್ತವೆ. ಮುದ್ದಣ ಕಾವ್ಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ ಇದೇ ಸಂಘದ ಆಶ್ರಯದಲ್ಲಿ ಆರಂಭವಾಗುತ್ತವೆ.
2001ರಲ್ಲಿ ಸಾಹಿತ್ಯಕ್ಕೆ ತಮ್ಮದೇ ಒಂದು ಸುಸ್ಥಿರ ಆಶ್ರಯ ಬೇಕು ಅನ್ನೋ ಯೋಚನೆ ಬಂತು. ಇದೆಲ್ಲ ಬರೀ ಕನಸಿನ ಮಾತಲ್ಲ. ಹೊಣೆಗಾರಿಕೆಯ ಮಾತು. ಸಮಿತಿ ರಚನೆಯಾಯಿತು. ರಿಜಿಸ್ಟ್ರೇಷನ್ ಆಯಿತು. ಸರಕಾರದಿಂದ 12 ಲಕ್ಷ ರೂಪಾಯಿ ಭರವಸೆ ಸಿಕ್ಕರೂ ಕೊನೆಗೆ ನಾವು ಕೊಡುವಷ್ಟೇ ಹಣವನ್ನು ಸಾರ್ವಜನಿಕವಾಗಿ ನೀವೂ ಜೋಡಿಸಬೇಕೆಂಬ ಒಪ್ಪಂದವಾಗಿ ಮತ್ತೆ ಮನೆಮನೆ ಸುತ್ತಾಟ, ದಾನಿಗಳ ಭೇಟಿ. 25 ಲಕ್ಷ ರೂ. ಒಟ್ಟಾಯಿತು!. ಕನ್ನಡ ಭವನ ನಿರ್ಮಾಣವಾಯಿತು. ಆ ಮಹಾಮನೆ ಉದ್ಘಾಟನೆಗೊಂಡ ದಿನ ಇಡೀ ಕಾಂತಾವರದಲ್ಲಿ ಒಂದು ನಿಶ್ಶಬ್ದ ಸಂತೋಷ ಮೂಡಿತು. ಮುಂದೆ ಅದೇ ಮನೆಯಲ್ಲಿ ಸಮಾವೇಶ, ನುಡಿನಮನ, ಹಳೆಗನ್ನಡ, ನಡುಗನ್ನಡ, ಪ್ರಮುಖ ಕವಿಗಳ ಕುರಿತ ನಿಯತ ಉಪನ್ಯಾಸ, ಈ ಸರಣಿಯಲ್ಲೇ 148 ಕಾರ್ಯಕ್ರಮಗಳು..... ಬರೀ ಸ್ಥಳೀಯರಲ್ಲ ಹತ್ತೂರುಗಳಿಂದ ರಾಜ್ಯದ ಮೂಲೆ ಮೂಲೆಗಳಿಂದ ಕಾಂತಾವರಕ್ಕೆ ನಡೆದು ಬಂದ ಸಾಹಿತಿಗಳು ಕಡಿಮೆಯಿಲ್ಲ. ಸಾಹಿತ್ಯ ಒಂದೇ ಅಲ್ಲ, ರಾಮಾಯಣ, ಮಹಾಭಾರತ, ಉಪನಿಷತ್ತುಗಳೂ ಇಲ್ಲಿ ಚರ್ಚೆಯಾಗುತ್ತವೆ. ಕರಾವಳಿ ಭೂಭಾಗದ ಸಾಧಕ ಶ್ರೇಷ್ಠರ 350ಕ್ಕಿಂತ ಹೆಚ್ಚು ಪರಿಚಯ ಪುಸ್ತಕಗಳು ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಪ್ರಕಟವಾಗುತ್ತವೆ. ಈ ಮಾಲಿಕೆ ಇಡೀ ಕರಾವಳಿ ಕರ್ನಾಟಕದ ಒಂದು ಸಾಂಸ್ಕೃತಿಕ ದಾಖಲೆಯೇ ಸರಿ. ಇವು ಯಾವುವು ಕೂಡ ವ್ಯಕ್ತಿ ಕೇಂದ್ರಿತ ಪಿಎಚ್.ಡಿ. ಮಹಾಪ್ರಬಂಧಗಳಲ್ಲ, ಸರಳವಾಗಿ ಮುಂದಿನ ತಲೆಮಾರಿಗೆ ಈ ಭೂಭಾಗದ ಸಾಂಸ್ಕೃತಿಕ, ಸಾಮಾಜಿಕ, ಔದ್ಯೋಗಿಕ, ಸಾಹಿತ್ಯಿಕ ಶೈಕ್ಷಣಿಕ ಸಾಧನೆ ಸಾಧ್ಯತೆಗಳನ್ನು ಪರಿಚಯಿಸುವ ಸರಳ ಕೃತಿಗಳಾಗಿವೆ. ಭಾಷೆ ಮತ್ತೆ ಬದುಕಿನ ಪಕ್ಕದಲ್ಲೇ ನಿಂತು ಮಾತಾಡುತ್ತವೆ.
ಕಾಂತಾವರ ಕನ್ನಡ ಸಂಘಕ್ಕೆ ಕೋದುಕೊಂಡ ಹನ್ನೊಂದು ದತ್ತಿ ಪ್ರಶಸ್ತಿಗಳು ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯವನ್ನು ಇಟ್ಟುಕೊಂಡು ಈವರೆಗೆ ಸುಮಾರು 200ಕ್ಕಿಂತ ಹೆಚ್ಚು ಮಂದಿಯನ್ನು ತಲುಪಿವೆ. ಪ್ರಶಸ್ತಿ ಕೆಲವರನ್ನು ಪ್ರಸಿದ್ಧಗೊಳಿಸಿದೆ, ಕೆಲವರ ಪ್ರಸಿದ್ಧಿಗೆ ಅರ್ಥ ಕೊಟ್ಟಿದೆ. ಇದೀಗ ಕನ್ನಡ ಭವನದ ನಿರ್ವಹಣೆಯನ್ನು ಸ್ಥಳೀಯ ಪಂಚಾಯತ್ ವಹಿಸಿಕೊಂಡಿದೆ. ಮೊದಲಿಂದಲೂ ಸಂಘದ ಚಟುವಟಿಕೆಗಳಿಗೆ ಕೈಯೆತ್ತಿ ಕೊಡುತ್ತಿದ್ದವರೆಲ್ಲ ಇವತ್ತಿಗೂ ಅದೇ ಆರ್ಥಿಕ ಪ್ರೀತಿಯಲ್ಲಿದ್ದಾರೆ. ಸಹಾಯ ಯಾಚನೆ, ವ್ಯವಹಾರ- ಪತ್ರೋತ್ತರ, ಕಾರ್ಯಕ್ರಮ ವಿನ್ಯಾಸ, ಪ್ರಶಸ್ತಿ ನಿರ್ವಹಣೆ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ಪುಸ್ತಕ ಪ್ರಕಟಣೆ ಎಲ್ಲವನ್ನೂ ಐವತ್ತು ವರ್ಷಗಳಿಂದ ಕೊರತೆ ಇಲ್ಲದಂತೆ ನಿಭಾಯಿಸುತ್ತಿದ್ದ ಮೊಗಸಾಲೆಯವರಿಗೀಗ 82!.
ಪರಂಪರೆಯ ಅಚ್ಚುಕಟ್ಟು ಚೂರೂ ಕೂಡ ಆಯ ತಪ್ಪಬಾರದೆಂದು ಅವರೇ ಇನ್ನೂ ಆ ಹೊಣೆ ಹೊತ್ತಿದ್ದಾರೆ. ಐವತ್ತು ವರ್ಷಗಳ ಕಾಲ ಕನ್ನಡದ ಕಾಂತಾವರವನ್ನು ಹೊತ್ತು ದಣಿದವರವರು. ಡಝನ್ ಗಟ್ಟಲೆ ಪ್ರಶಸ್ತಿಗಳು, ಪ್ರಕಾಶನಗಳು, ನಿಯತ ಉಪನ್ಯಾಸ ಕಾರ್ಯಕ್ರಮಗಳು, ಕೋಟಿಗೂ ಹೆಚ್ಚು ಮೌಲ್ಯದ ಕಟ್ಟಡವನ್ನು ಪ್ರತಿದಿನ ಬಾಗಿಲು ತೆಗೆಯುವ ಕೈಗಳು ಯಾವುದು?. ಅಲ್ಲಿರುವ ಪುಸ್ತಕ, ಪ್ರತಿಮೆ ಇವುಗಳ ರಕ್ಷಣೆ ಹೇಗೆ? ಅಲ್ಲಿ ಮತ್ತೆ ಕನ್ನಡದ ಮಾತು ಕೇಳಿಸಬೇಕು. ನಾಡಗೀತೆ ಮೊಳಗಬೇಕು, ಸಹಜವಾಗಿಯೇ ಇವೆಲ್ಲ ಒತ್ತರಿಸಿ ಬಂದು 50ರ ಕಾರ್ಯಕ್ರಮದಲ್ಲಿ ಸಂಭ್ರಮಿಸಬೇಕಾದ ಮೊಗಸಾಲೆ ಗದ್ಗತಿತರಾಗಿದ್ದಾರೆ!. ಆ ಕಣ್ಣೀರು ಕೇವಲ ಒಂದು ಕನ್ನಡ ಸಂಘದ ಹತಾಶೆದ್ದಲ್ಲ, ಈ ರಾಜ್ಯದ ಎಲ್ಲಾ ಸಾಹಿತ್ಯಪರ ಸಂಘಟನೆಗಳದ್ದು!







