Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಕಸ್ತೂರಿರಂಗನ್ ವರದಿ:...

ಕಸ್ತೂರಿರಂಗನ್ ವರದಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ20 Sept 2026 9:30 AM IST
share
ಕಸ್ತೂರಿರಂಗನ್ ವರದಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ!

ಕರ್ನಾಟಕ ಸರಕಾರ ಈಗ ಕರೆದಿರುವ ವಿಶೇಷ ಅಧಿವೇಶನ ಬಹಳ ಮಹತ್ವದ್ದಾಗಿದೆ. ಈ ಅಧಿವೇಶನ ಕೇವಲ ಕಸ್ತೂರಿರಂಗನ್ ವರದಿಯನ್ನು ಒಪ್ಪಬೇಕೋ, ತಿರಸ್ಕರಿಸಬೇಕೋ ಎಂಬ ರಾಜಕೀಯ ತೀರ್ಮಾನದ ವೇದಿಕೆಯಾಗಬಾರದು. ಪಶ್ಚಿಮ ಘಟ್ಟದ ಭವಿಷ್ಯವನ್ನು ಕುರಿತು ಕರ್ನಾಟಕ ತನ್ನೊಳಗೆ ನಡೆಸಿಕೊಳ್ಳುವ ಗಂಭೀರ ಸಾರ್ವಜನಿಕ ಸಂವಾದವಾಗಬೇಕು. ಸರಕಾರ ಪರಿಸರ ವಿಜ್ಞಾನಿಗಳ ಮಾತು ಕೇಳಬೇಕು, ಜೊತೆಗೆ ರೈತರ ಮಾತನ್ನೂ ಕೇಳಬೇಕು. ಅರಣ್ಯಾಧಿಕಾರಿಗಳ ವರದಿಯನ್ನು ಓದಬೇಕು, ಗ್ರಾಮಸಭೆಯ ಅನುಭವವನ್ನೂ ದಾಖಲಿಸಬೇಕು. ಜೀವವೈವಿಧ್ಯದ ಅಂಕಿಅಂಶಗಳನ್ನು ಪರಿಗಣಿಸಬೇಕು, ಆದರೆ ಅಲ್ಲಿನ ಜನರ ಬದುಕಿನ ಅಂಕಿಅಂಶವನ್ನೂ ಅಷ್ಟೇ ಗಂಭೀರವಾಗಿ ನೋಡಬೇಕು. ಆನೆಗಳ ಲೆಕ್ಕದ ಜೊತೆಗೆ, ಹುಲಿಗಳ ಲೆಕ್ಕದ ಜೊತೆಗೆ, ಸಿಂಗಳಿಕ, ಕಾಳಿಂಗ ಈ ಎಲ್ಲದರ ಜೊತೆಗೆ ಮನುಷ್ಯನ ಲೆಕ್ಕವನ್ನು ತಾಳೆ ಹಾಕಬೇಕು!

ರಾಜ್ಯದ ಮುಖ್ಯಮಂತ್ರಿಗಳಾದ ಗೌರವಾನ್ವಿತ

ಡಿ.ಕೆ. ಶಿವಕುಮಾರ್ ಅವರೇ...

ಕಸ್ತೂರಿರಂಗನ್ ವರದಿಯ ಸಾಧಕ ಬಾಧಕಗಳ ಕುರಿತು ಐದಾರು ವರ್ಷಗಳ ಹಿಂದೆ ಬರೆಯುವಾಗ, ‘ಇದು ತಕ್ಷಣ ಜಾರಿಗೆ ಬರದಿದ್ದರೂ ಯಾವುದೋ ಒಂದು ರೂಪದಲ್ಲಿ ಮುಂದೆ ಜಾರಿಗೆ ಬಂದೇ ಬರುತ್ತದೆ’ ಎಂದು ಬರೆದಿದ್ದ ನೆನಪು. ವರದಿಗಳು ಕೆಲವೊಮ್ಮೆ ಕಡತಗಳೊಳಗೆ ವರ್ಷಗಟ್ಟಲೆ ಮಲಗಿರುತ್ತವೆ; ಆದರೆ ಅವುಗಳ ನೆರಳು ಜನರ ಬದುಕಿನ ಮೇಲೆ ಮೊದಲೇ ಬೀಳುತ್ತದೆ. ಕಸ್ತೂರಿರಂಗನ್ ವರದಿಯ ಕರಿನೆರಳು ಈಗ ಮತ್ತೆ ಪಶ್ಚಿಮ ಘಟ್ಟದ ಹಳ್ಳಿಗಳ ಮೇಲೆ ಬಿದ್ದಿದೆ. ಜನ ಪ್ರತಿಭಟನೆಗೆ ಇಳಿದಿದ್ದಾರೆ. ಈ ವರದಿಯ ಅನುಷ್ಠಾನದ ಕುರಿತು ಚರ್ಚಿಸಲು ಕರ್ನಾಟಕ ಸರಕಾರ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಹಿನ್ನೆಲೆಯಲ್ಲಿ ಈ ವರದಿಯನ್ನು ಕೇವಲ ಪರ-ವಿರೋಧದ ರಾಜಕೀಯ ಘೋಷಣೆಯಾಗಿ ನೋಡದೆ, ಪಶ್ಚಿಮ ಘಟ್ಟವನ್ನು ನಾವು ಹೇಗೆ ಉಳಿಸಬೇಕು ಮತ್ತು ಅದನ್ನು ಅವಲಂಬಿಸಿಕೊಂಡು ಬದುಕುತ್ತಿರುವ ಜನರ ಭವಿಷ್ಯವನ್ನು ಏಕೆ ಮತ್ತು ಹೇಗೆ ಸುರಕ್ಷಿತಗೊಳಿಸಬೇಕು ಎಂಬ ಮೂಲಭೂತ ಪ್ರಶ್ನೆಯಾಗಿ ನೋಡುವ ಅಗತ್ಯವಿದೆ.

ಕಸ್ತೂರಿರಂಗನ್ ಸಮಿತಿಯ ವರದಿಯ ವ್ಯಾಪ್ತಿ ಸಣ್ಣದಲ್ಲ. ಆರು ರಾಜ್ಯಗಳ ಸುಮಾರು 1,64,280 ಚದರ ಕಿಲೋಮೀಟರ್ ಪ್ರದೇಶ ಇದರ ವ್ಯಾಪ್ತಿಗೆ ಬರುತ್ತದೆ. ಸುಮಾರು 188 ತಾಲೂಕುಗಳು ಮತ್ತು 4,156 ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಇದರ ದೊಡ್ಡ ಭಾಗವಿದೆ. ಬೆಳಗಾವಿಯಿಂದ ಕೊಡಗಿನವರೆಗೆ ಸುಮಾರು ಹದಿನಾರು ಜಿಲ್ಲೆಗಳ ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ. ಈ ಅಂಕಿ ಅಂಶಗಳನ್ನು ಕಾಗದದ ಮೇಲೆ ನೋಡಿದಾಗ ಅವು ಕೇವಲ ಚದರ ಕಿಲೋಮೀಟರ್‌ಗಳು. ಆದರೆ ನೆಲದ ಮೇಲೆ ಇವು ಪ್ರತಿಯೊಂದೂ ಒಂದು ಬದುಕಿನ ಜಾಗವೇ. ಒಂದು ಗ್ರಾಮದ ಹಿಂದೆ ನೂರಾರು ಕುಟುಂಬಗಳಿರುತ್ತವೆ, ಒಂದು ಕೃಷಿಭೂಮಿಯ ಹಿಂದೆ ಒಂದು ತಲೆಮಾರಿನ ನೆನಪು ಇರುತ್ತದೆ, ಒಂದು ಮನೆಯ ಹಿಂದೆ ಒಂದು ಕುಟುಂಬದ ಭವಿಷ್ಯವಿದೆ. ನಕ್ಷೆಯಲ್ಲಿ ಒಂದು ಹಸಿರು ಚುಕ್ಕೆಯಾಗಿ ಕಾಣುವ ಪ್ರದೇಶವೊಂದು ನೆಲದ ಮೇಲೆ ಬಂದಾಗ ಮನುಷ್ಯರ ಬದುಕಿನ ಸಂಪೂರ್ಣ ಲೋಕವಾಗಿರಬಹುದು.

ಕಸ್ತೂರಿರಂಗನ್ ವರದಿ ಪಶ್ಚಿಮ ಘಟ್ಟವನ್ನು ಮುಖ್ಯವಾಗಿ ಪ್ರಾಕೃತಿಕ ವಲಯ ಮತ್ತು ಸಾಂಸ್ಕೃತಿಕ ವಲಯ ಎಂಬ ಎರಡು ರೀತಿಯಲ್ಲಿ ಗುರುತಿಸುತ್ತದೆ. ಪಶ್ಚಿಮ ಘಟ್ಟದ ಸುಮಾರು 37 ಶೇಕಡಾ ಭಾಗವನ್ನು ಒಳಗೊಂಡ ಪ್ರಾಕೃತಿಕ ವಲಯವೇ ಅದರ ಜೀವವೈವಿಧ್ಯ, ಕಾಡು ಮತ್ತು ಜಲಸಂಪತ್ತಿನ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾದ ಪ್ರದೇಶ. ಈ ಭಾಗವನ್ನು ರಕ್ಷಿಸುವ ಅಗತ್ಯದ ಕುರಿತು ಪರಿಸರವಾದಿಗಳ ವಾದವನ್ನು ಅರ್ಥಮಾಡಿಕೊಳ್ಳಲು ದೊಡ್ಡ ತತ್ವಶಾಸ್ತ್ರದ ಅಗತ್ಯವಿಲ್ಲ.

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ಸುಮಾರು ಐವತ್ತು ನದಿಗಳು ಈ ಪ್ರದೇಶದ ಮಹತ್ವವನ್ನು ನಮಗೆ ಪ್ರತಿದಿನ ನೆನಪಿಸುತ್ತವೆ. ಈ ಪ್ರದೇಶದಲ್ಲಿ ಹುಟ್ಟಿ ಬೆಳೆಯದ, ಸಂಬಂಧವೇ ಪಡೆದ ದೂರದ ನಗರದ ಮನೆಯಲ್ಲಿ ನಿತ್ಯ ಕೊಳವೆ ತಿರುಗಿಸಿ ನೀರು ಕುಡಿಯುವ ಮಂದಿ ಅದರ ಮೂಲವನ್ನು ಮರೆತುಬಿಡಬಹುದು; ಆದರೆ ಆ ನೀರಿನ ಮೊದಲ ಸೆಳೆ ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿರುತ್ತದೆ. ನಮ್ಮ ಹಳ್ಳಿಯ ಬಾವಿ, ನಮ್ಮ ಹೊಲದ ನೀರು, ನಮ್ಮ ಕೃಷಿ, ನಮ್ಮ ಕುಡಿಯುವ ನೀರು, ಅನೇಕ ನಗರಗಳ ಬದುಕು ಮತ್ತು ಹಲವು ಕೈಗಾರಿಕೆಗಳ ಅಸ್ತಿತ್ವವೂ ಈ ಜಲವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ. ಪಶ್ಚಿಮ ಘಟ್ಟದ ಮೇಲೆ ಆಗುವ ಅತಿಯಾದ ಹಸ್ತಕ್ಷೇಪ ಕೊನೆಗೆ ಆ ಬೆಟ್ಟದೊಳಗೆ ಮಾತ್ರ ಉಳಿಯುವುದಿಲ್ಲ; ಅದರ ಪರಿಣಾಮ ಬೆಟ್ಟ ಇಳಿದು ಸಮತಟ್ಟಿನ ಮನುಷ್ಯನ ಮನೆಯ ಬಾಗಿಲಿಗೂ ಬರುತ್ತದೆ.

ಮನುಷ್ಯನಿಗೆ ಈ ಭೂಮಿಯನ್ನು ಅನುಭವಿಸುವ ಹಕ್ಕು ಬೇರೆ ಪ್ರಾಣಿಗಳಿಗಿಂತ ಎಷ್ಟು ಹೆಚ್ಚಿದೆ ಎಂಬುದನ್ನು ಅಳೆಯಲು ನಮ್ಮಲ್ಲಿ ಯಾವ ಮಾಪಕವೂ ಇಲ್ಲ. ಈ ಭೂಮಿ ಮೇಲಿನ ಒಂದು ಕೋಗಿಲೆಯ ಹಾಡು, ಒಂದು ಗುಲಾಬಿಯ ಅರಳುವಿಕೆ, ಬೆಟ್ಟದಿಂದ ಸಮುದ್ರದತ್ತ ಹರಿಯುವ ಪುಟ್ಟ ತೊರೆ, ತರಗೆಲೆಯ ಅಡಿಯಲ್ಲಿ ನಿಗೂಢವಾಗಿ ಚಲಿಸುವ ಇರುವೆ... ಇವೆಲ್ಲವೂ ಭೂಮಿಯ ಬದುಕಿನಷ್ಟೇ ಮನುಷ್ಯನ ಬದುಕಿನ ಭಾಗಗಳೂ ಹೌದು. ಹಾಗಿರುವಾಗ ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ, ಬಗ್ಗಿಸುವ, ಬಡಿಯುವ, ಬೆಟ್ಟಗಳನ್ನು ಕತ್ತರಿಸುವ, ನದಿಗಳ ದಿಕ್ಕು ಬದಲಿಸುವ, ಕಾಡಿನೊಳಗೆ ಅಭಿವೃದ್ಧಿಯ ಹೆಸರಿನಲ್ಲಿ ಹೆಜ್ಜೆ ವಿಸ್ತರಿಸುವ ಅಧಿಕಾರವನ್ನು ಕೇವಲ ಮನುಷ್ಯನಿಗೆ ಮಾತ್ರ ಯಾರು ಕೊಟ್ಟರು? ಅದೇ ಸಂದರ್ಭದಲ್ಲಿ ಪ್ರಕೃತಿಯೊಂದಿಗೆ ಶತಮಾನಗಳಿಂದ ಬದುಕುತ್ತಿರುವ ಕೃಷಿಕರ ಬುಡಕಟ್ಟು ಜನಾಂಗದವರ ಬದುಕನ್ನು ಪ್ರಕೃತಿ ಸಂರಕ್ಷಣೆಯ ಹೆಸರಿನಲ್ಲಿ ನಿರಾಕರಿಸುವ ಅಧಿಕಾರವನ್ನು ಪ್ರಭುತ್ವಕ್ಕೆ ಯಾರು ಕೊಟ್ಟರು? ಕಸ್ತೂರಿರಂಗನ್ ವರದಿಯ ಕುರಿತ ಇಂದಿನ ಚರ್ಚೆಯ ಮೂಲ ತಾಕಲಾಟ ಬಹುಶಃ ಈ ಎರಡು ಪ್ರಶ್ನೆಗಳ ನಡುವೆಯೇ ಇದೆ.

ನನ್ನ ಈ ಸಂದರ್ಭದ ಬಹುಮುಖ್ಯ ಪ್ರಶ್ನೆ ಕಸ್ತೂರಿರಂಗನ್ ವರದಿ ಬೇಕೋ ಬೇಡವೋ ಎಂಬುದಲ್ಲ. ನಮಗೆ ಯಾವ ರೀತಿಯ ಪಶ್ಚಿಮ ಘಟ್ಟ ಬೇಕು ಎಂಬುದು. ಕಲ್ಲುಕೋರೆಗಳಿಂದ ಕತ್ತರಿಸಲ್ಪಟ್ಟ, ಕಾಂಕ್ರಿಟ್‌ನಿಂದ ಮುಚ್ಚಲ್ಪಟ್ಟ, ನೀರಿನ ಮೂಲಗಳನ್ನು ಕಳೆದುಕೊಂಡ, ಹೋಂಸ್ಟೇ, ರೆಸಾರ್ಟ್‌ಗಳಿಂದ ತುಂಬಿ ಯಾವುದೇ ಕ್ಷಣದಲ್ಲಿ ಜರಿದು ಬೀಳಬಲ್ಲ ಪಶ್ಚಿಮ ಘಟ್ಟವೇ? ಅಥವಾ ಕಾಡು, ನದಿ, ಕೃಷಿ ಮತ್ತು ಮನುಷ್ಯ ಎಲ್ಲವೂ ಪರಸ್ಪರ ಸಹಬಾಳ್ವೆ ನಡೆಸುವ ಪಶ್ಚಿಮ ಘಟ್ಟವೇ?

ಪಶ್ಚಿಮ ಘಟ್ಟವನ್ನು ಉಳಿಸಬೇಕಾದರೆ ಮೊದಲು ನಾವು ಅಲ್ಲಿಯ ಮೌನವನ್ನು ಕೇಳಬೇಕು. ಆಲಿಸುವ ಶಕ್ತಿ ಸೂಕ್ಷ್ಮವಾದರೆ ಮಾತ್ರ ಆ ಮೌನದ ನಡುವೆ ಒಂದು ಹಳ್ಳಿಯ ಮನುಷ್ಯನ ಧ್ವನಿಯೂ ಕೇಳಿಸುತ್ತದೆ. ಆ ಧ್ವನಿಯನ್ನು ಪರಿಸರ ವಿರೋಧದ ಶಬ್ದವೆಂದು ಮುಚ್ಚಿಹಾಕದೆ, ಪಶ್ಚಿಮ ಘಟ್ಟವನ್ನು ನಿಜವಾಗಿ ಉಳಿಸಬೇಕೆನ್ನುವ ಮತ್ತೊಂದು ಎಚ್ಚರಿಕೆಯಾಗಿಯೂ ಕೇಳಿಸಿಕೊಳ್ಳಬೇಕು. ಕರ್ನಾಟಕ ಘನ ಸರಕಾರ ಆಯೋಜಿಸಿದ ಆ ವಿಶೇಷ ಅಧಿವೇಶನ ಅಂಥ ಧ್ವನಿಯನ್ನು ಕೇಳುವ ಮೊದಲ ಜಾಗವಾಗಲಿ ಎಂಬುವುದೇ ನನ್ನ ಮೊದಲ ಹಕ್ಕೊತ್ತಾಯ.

ಕಸ್ತೂರಿರಂಗನ್ ವರದಿಯ ಗುಮ್ಮವನ್ನು ಓಡಿಸುವುದಕ್ಕಿಂತ, ಆ ಗುಮ್ಮದ ಹಿಂದೆ ಇರುವ ನಿಜವಾದ ಪ್ರಶ್ನೆಗಳನ್ನು ಎದುರಿಸುವ ಕೆಲಸ ಅಲ್ಲಿಂದಲೇ ಆರಂಭವಾಗಲಿ ಮತ್ತು ಪಶ್ಚಿಮ ಘಟ್ಟವನ್ನು ಉಳಿಸುವ ನಿರ್ಣಯವೂ ಅಲ್ಲಿಂದಲೇ ಬರಲಿ; ಹಾಗೆಯೇ ಈ ಅಧಿವೇಶನ ಒಂದು ವರದಿಯ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಲ್ಲ; ನಮ್ಮ ಕಾಡು, ಬೆಟ್ಟ, ಕಣಿವೆ, ನದಿ ಬಹುಮುಖ್ಯವಾಗಿ ನಮ್ಮ ಕೃಷಿಕರ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನೂ ನಿರ್ಧರಿಸಲಿ.

ಜಗತ್ತಿನ ಅತ್ಯಂತ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟವೂ ಒಂದು ಎಂಬುದು ಸರ್ವವಿಧಿತ. ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮ ಜೀವಿಗಳ ಅಪಾರ ವೈವಿಧ್ಯವನ್ನು ತನ್ನೊಳಗೆ ಹೊತ್ತಿರುವ ಈ ಪ್ರದೇಶದಲ್ಲಿ ಒಂದು ನೈಸರ್ಗಿಕ ವ್ಯವಸ್ಥೆಯ ಕೊಂಡಿ ಮುರಿದರೆ ಅದರ ಪರಿಣಾಮ ಇನ್ನೊಂದು ಕೊಂಡಿಯ ಮೇಲೆ ಬೀಳುತ್ತದೆ. ಒಂದು ಮರವನ್ನು ಕಡಿದಾಗ ನಾವು ಸಾಮಾನ್ಯವಾಗಿ ಮರದ ಸಂಖ್ಯೆಯನ್ನಷ್ಟೇ ಎಣಿಸುತ್ತೇವೆ; ಆದರೆ ಆ ಮರದ ನೆರಳಿನಲ್ಲಿ ಬೆಳೆದ ಸಸ್ಯಗಳು, ಅದರ ಮೇಲೆ ಗೂಡು ಕಟ್ಟಿದ ಪಕ್ಷಿಗಳು, ಅದರ ಬೇರುಗಳ ಸುತ್ತ ಬದುಕಿದ ಜೀವಿಗಳು ಮತ್ತು ಅದು ಹಿಡಿದಿಟ್ಟ ಮಣ್ಣು, ನೀರು ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಪ್ರಕೃತಿಯಲ್ಲಿ ಒಂದು ಮರದ ಬೆಲೆ ನಮಗೆ ಗೊತ್ತಾಗುತ್ತದೆ. ಅದಕ್ಕಾಗಿಯೇ ಗಣಿಗಾರಿಕೆ, ಮರಳುಗಾರಿಕೆ, ಕಲ್ಲುಕೋರೆಗಳು, ಅತಿಯಾದ ಯಾಂತ್ರೀಕರಣ, ನಿಯಂತ್ರಣವಿಲ್ಲದ ನಿರ್ಮಾಣ ಮತ್ತು ಪರಿಸರದ ಸಾಮರ್ಥ್ಯವನ್ನು ಮೀರಿಸುವ ವಿದ್ಯುತ್ ಹಾಗೂ ಕೈಗಾರಿಕಾ ಯೋಜನೆಗಳ ವಿರುದ್ಧ ಪರಿಸರವಾದಿಗಳು ಎತ್ತುವ ಪ್ರಶ್ನೆಯಲ್ಲಿ ಗಂಭೀರವಾದ ಅರ್ಥವಿದೆ.

ಆದರೆ ಇಲ್ಲಿಂದಲೇ ನನ್ನೊಳಗೆ ಮತ್ತೊಂದು ಪ್ರಶ್ನೆ ಆರಂಭವಾಗುತ್ತದೆ. ಪಶ್ಚಿಮ ಘಟ್ಟವನ್ನು ಉಳಿಸುವಾಗ ಪಶ್ಚಿಮ ಘಟ್ಟದ ಮನುಷ್ಯನನ್ನು ನಾವು ಎಲ್ಲಿ ಇಡುತ್ತೇವೆ? ಆಗ ವರದಿ ಪಶ್ಚಿಮ ಘಟ್ಟದೊಳಗಡೆ ಬದುಕುವ ಆನೆ, ಹುಲಿ, ಮಂಗ, ಕಾಗೆ, ಕೋಗಿಲೆಯ ಲೆಕ್ಕ ಹೇಳುತ್ತದೆ. ಆದರೆ ಅದೇ ಪ್ರದೇಶದಲ್ಲಿ ಅವುಗಳೊಂದಿಗೆ ಬದುಕುತ್ತಿರುವ ಮನುಷ್ಯನ ಬದುಕಿನ ಪ್ರಶ್ನೆಯೂ ಅಷ್ಟೇ ಮುಖ್ಯವಲ್ಲವೇ? ಅವರ ಲೆಕ್ಕ ಕೇಳುವುದು ಬೇಡವೇ? ಪಶ್ಚಿಮ ಘಟ್ಟದ ಒಂದು ಭಾಗದಲ್ಲಿ ಶತಮಾನಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತನಿಗೆ ಈ ಬೆಟ್ಟ ಕೇವಲ ಜೀವವೈವಿಧ್ಯದ ನಕ್ಷೆಯಲ್ಲ. ಅದು ಅವನ ಹೊಲ, ಅವನ ಮನೆ, ಅವನ ನೆನಪು, ಅದು ಅವನ ಬದುಕಿನ ಆಧಾರ. ಅಲ್ಲಿ ಅವನ ತಂದೆ ನೆಟ್ಟ ಹಲಸು, ಮಾವು, ತೆಂಗು, ಕಂಗಿನ ಮರ, ನಾಗಬನ ಅವನಿಗೆ ಕೇವಲ ಸಸ್ಯವಲ್ಲ; ಅದು ಕುಟುಂಬದ ನೆನಪು. ಅವನು ಬೆಳೆಸಿದ ತೋಟ ಕೇವಲ ಕೃಷಿಭೂಮಿಯಲ್ಲ; ಅದು ಅವನ ವೃದ್ಧಾಪ್ಯದ ಭರವಸೆ. ಇಂತಹ ಬದುಕನ್ನು ಕೇವಲ ಒಂದು ಪರಿಸರ ನಕ್ಷೆಯೊಳಗಿನ ಗುರುತಾಗಿ ನೋಡಿದರೆ ವರದಿ ಮತ್ತು ಜನರ ನಡುವೆ ಖಂಡಿತ ಅಂತರ ಉಂಟಾಗುವುದು ಸಹಜ.

ಪಶ್ಚಿಮ ಘಟ್ಟದ ರಕ್ಷಣೆಗೆ ಈ ಭಾಗದ ಜನರ ತಕರಾರು ಇಲ್ಲ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಅವರು ವಿರೋಧಿಸುತ್ತಿರುವುದು ಪಶ್ಚಿಮ ಘಟ್ಟ ಉಳಿಸುವ ಆಶಯವನ್ನಲ್ಲ; ತಮ್ಮ ಬದುಕಿನ ಮೇಲೆ ಬರುವ ಅನಿಶ್ಚಿತತೆಯನ್ನು. ನಾಳೆ ತಮ್ಮ ಮನೆಯ ದುರಸ್ತಿಗೂ ನಿಯಮ, ಗುಂಡಿ ಬಿದ್ದ ರಸ್ತೆಗೆ ನಾಲ್ಕು ಬುಟ್ಟಿ ಮಣ್ಣು ಹಾಕಲು ನಿಯಮ, ಕಾಡುಹಾದಿಯ ಕರೆಂಟು ಲೈನಿಗೆ ಗೆಲ್ಲು ಬಿದ್ದು ತಂತಿ ತುಂಡಾದರೆ ವಿದ್ಯುತ್ ಇಲಾಖೆಯ ನಿಯಮ, ಸಣ್ಣ ಉದ್ಯಮಕ್ಕೆ ನಿಯಮ, ಕೃಷಿಯ ವಿಧಾನಕ್ಕೆ ನಿಯಮಗಳು ಕಠಿಣವಾಗುತ್ತಾ ಹೋದರೆ ಎಂಬ ಆತಂಕ ಅವರಲ್ಲಿದೆ. ವರದಿಯ ಸಾಂಸ್ಕೃತಿಕ ವಲಯದಲ್ಲಿ ವಾಸಿಸುವ ಜನರಿಗೆ ಅಭಿವೃದ್ಧಿ ಎಂಬ ಪದವೇ ಅಪರಾಧದಂತೆ ಕಾಣುವ ಪರಿಸ್ಥಿತಿ ಬರಬಾರದು.

ಒಂದು ಹಳ್ಳಿಗೆ ರಸ್ತೆ ಬೇಕು ಎಂದರೆ ಹಾಗಂತ ಅದು ಕಾಡು ನಾಶದ ಬೇಡಿಕೆಯಲ್ಲ. ಒಬ್ಬ ರೈತ ತನ್ನ ಮನೆಯ ಮೇಲ್ಛಾವಣಿ ದುರಸ್ತಿ ಮಾಡಿಕೊಳ್ಳಬೇಕು ಎಂದರೆ ಅದು ಪಶ್ಚಿಮ ಘಟ್ಟದ ವಿರುದ್ಧದ ಸಂಚಲ್ಲ. ಸ್ಥಳೀಯ ಬದುಕಿಗೆ ಅಗತ್ಯವಾದ ಅಡಿಕೆ ಹಾಳೆ ತಟ್ಟೆ ಮಾಡುವಂಥ ಸಣ್ಣ ಕೈಗಾರಿಕೆ ಅಥವಾ ಕೃಷಿ ಆಧಾರಿತ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಪರಿಸರ ಸಂರಕ್ಷಣೆಯ ಏಕೈಕ ಮಾರ್ಗವಾಗಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಒಂದು ವಿಚಿತ್ರ ಪ್ರವೃತ್ತಿ ಇದೆ. ದೊಡ್ಡ ಯೋಜನೆಗಳಿಗೆ ನಾವು ದೊಡ್ಡ ಬಾಗಿಲುಗಳನ್ನು ತೆರೆದುಕೊಡುತ್ತೇವೆ; ಆದರೆ ಸಣ್ಣ ರೈತನಿಗೆ ಸಣ್ಣ ಕಿಟಕಿಯನ್ನೂ ಮುಚ್ಚಿಬಿಡುತ್ತೇವೆ. ದೊಡ್ಡ ರಸ್ತೆಯು ಬೆಟ್ಟವನ್ನು ಕತ್ತರಿಸಿಕೊಂಡು ಹೋಗಬಹುದು, ದೊಡ್ಡ ಯೋಜನೆ ನದಿಯ ದಿಕ್ಕನ್ನು ಬದಲಾಯಿಸಬಹುದು, ದೊಡ್ಡ ಕೈಗಾರಿಕೆಗೆ ಭೂಮಿ ಸಿಗಬಹುದು; ಆದರೆ ತನ್ನ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿರುವ ಸಣ್ಣ ರೈತನಿಗೆ ಪರಿಸರದ ಹೆಸರಿನಲ್ಲಿ ಒಂದೊಂದೇ ನಿರ್ಬಂಧಗಳನ್ನು ತೋರಿಸಲಾಗುತ್ತದೆ. ಈ ವೈರುಧ್ಯವನ್ನು ಸರಿಪಡಿಸದೆ ಯಾವುದೇ ಸಂರಕ್ಷಣಾ ನೀತಿಗೂ ಜನರ ಒಪ್ಪಿಗೆ ಸಿಗುವುದು ಕಷ್ಟ.

ಇನ್ನೊಂದು ಮೂಲಭೂತ ಪ್ರಶ್ನೆಯೂ ಇದೆ. ಪಶ್ಚಿಮ ಘಟ್ಟವನ್ನು ಹಾಳು ಮಾಡಿದ್ದವರು ಯಾರು? ಮೊದಲು ಕಾಡು ಕಡಿದು ರಬ್ಬರ್ ನೆಟ್ಟದ್ದು ಯಾರು? ಅಕೇಶಿಯಾ, ಮ್ಯಾಂಜಿಯಂ, ನೀಲಗಿರಿ ಮುಂತಾದ ವಾಣಿಜ್ಯ ನೆಡುತೋಪುಗಳನ್ನು ಬೆಳೆಸಿದ್ದು ಯಾರು? ದೊಡ್ಡ ವಿದ್ಯುತ್ ಘಟಕಗಳನ್ನು ನಿರ್ಮಿಸಿದ್ದು ಯಾರು? ಎತ್ತಿನಹೊಳೆ ಸೇರಿದಂತೆ ದೊಡ್ಡ ನೀರಿನ ಯೋಜನೆಗಳನ್ನು ರೂಪಿಸಿದ್ದು ಯಾರು? ಬೆಟ್ಟಗಳನ್ನು ಕತ್ತರಿಸಿ ರಸ್ತೆಗಳನ್ನು ಹಾಕಿದ್ದು ಯಾರು? ಕಲ್ಲುಕೋರೆ, ಮರಳುಗಾರಿಕೆ ಮತ್ತು ಗಣಿಗಾರಿಕೆಗಳಿಗೆ ಅನುಮತಿ ನೀಡಿದ್ದು ಯಾರು? ನಮ್ಮೂರಿನ ಚೋಮನೂ ಅಲ್ಲ, ದೂಮನೂ ಅಲ್ಲ. ಮೇಲಿನ ನಿರ್ಧಾರಗಳಲ್ಲಿ ಸಾಮಾನ್ಯ ಗ್ರಾಮೀಣ ರೈತನ ಪಾತ್ರ ಎಷ್ಟಿತ್ತು? ಈ ಪ್ರಶ್ನೆಗಳಿಗೆ ಉತ್ತರಿಸದೆ ಪಶ್ಚಿಮ ಘಟ್ಟದ ಪರಿಸರ ನಾಶದ ಹೊಣೆಯನ್ನು ಮುಖ್ಯವಾಗಿ ಅಲ್ಲಿಯೇ ಬದುಕುತ್ತಿರುವ ಜನರ ಮೇಲೆ ಹೇರುವುದು ನ್ಯಾಯವಲ್ಲ.

ಇದಕ್ಕಿಂತಲೂ ಮುಖ್ಯವಾದ ಪ್ರಶ್ನೆ ಕಸ್ತೂರಿರಂಗನ್ ವರದಿಯ ತಯಾರಿಕೆಯ ಪ್ರಕ್ರಿಯೆಯ ಕುರಿತದ್ದು. ವರದಿ ರೂಪಿಸುವ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ನೆಲದ ಜನರ ಧ್ವನಿ ಎಷ್ಟು ಪ್ರಮಾಣದಲ್ಲಿ ಕೇಳಿಸಲ್ಪಟ್ಟಿತು ಎಂಬುದನ್ನು ನಾವು ಕೇಳಬೇಕು. ರೈತರು, ಕೂಲಿಕಾರ್ಮಿಕರು, ಗ್ರಾಮಸಭೆಯ ಸದಸ್ಯರು, ಸಣ್ಣ ಕೈಗಾರಿಕೆಗಳ ಪಾಲುದಾರರು ಮತ್ತು ಸ್ಥಳೀಯ ಸಮುದಾಯಗಳ ಅನುಭವವನ್ನು ವರದಿಯ ವೈಜ್ಞಾನಿಕ ಮಾಹಿತಿಯಷ್ಟೇ ಗಂಭೀರವಾಗಿ ಪರಿಗಣಿಸಲಾಗಿದೆಯೇ ಎಂಬುದು ತಿಳಿಯಬೇಕು. ನಕ್ಷೆಯಲ್ಲಿ ಪಶ್ಚಿಮ ಘಟ್ಟವನ್ನು ಮೇಲಿಂದ ನೋಡುವುದು ಒಂದು ಅನುಭವ; ಅದೇ ಕಾಡು ಬೆಟ್ಟದ ರಸ್ತೆಯಲ್ಲಿ ನಡೆದು ನೋಡುವುದು ಮತ್ತೊಂದು ಅನುಭವ. ಈ ಭೂಮಿಯ ಮೇಲೆ ಸಾವಿರಾರು ಮೀಟರ್ ಎತ್ತರದಿಂದ ಒಂದು ಫೋಟೊ ಕ್ಲಿಕ್ಕಿಸಿದರೆ ಎಲ್ಲವೂ ಹಸಿರಾಗಿಯೇ ಕಾಣಿಸುತ್ತದೆ. ಹಸಿರಿನ ಶಕ್ತಿಯದು. ಆ ಹಸಿರು ಒಳಗಡೆ ಬದುಕು ಕಟ್ಟಿಕೊಂಡ ಮನುಷ್ಯ ಜೀವಗಳು ಕಾಣಿಸುವುದೇ ಇಲ್ಲ. ಒಂದು ಕಚೇರಿಯ ಟೇಬಲ್ ಮೇಲೆ ಪಶ್ಚಿಮ ಘಟ್ಟದ ನಕ್ಷೆಯನ್ನು ತೆರೆದು ನೋಡುವುದಕ್ಕೂ, ಅದೇ ಘಟ್ಟದಹಳ್ಳಿಯ ರೈತನ ಮನೆಯ ಅಂಗಳದಲ್ಲಿ ಕುಳಿತು ಅವನ ಬದುಕಿನ ಕಥೆಯನ್ನು ಕೇಳುವುದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ಇಂದು ಪಶ್ಚಿಮ ಘಟ್ಟದ ಮುಂದೆ ನಿಂತಿರುವ ದೊಡ್ಡ ಅಪಾಯಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು. ಕಸ್ತೂರಿರಂಗನ್ ವರದಿಯ ವ್ಯಾಪ್ತಿಯ ಅನೇಕ ಹಳ್ಳಿಗಳು ನಿಧಾನವಾಗಿ ಕೃಷಿ ಪ್ರದೇಶಗಳಿಂದ ನಿವೇಶನ ಪ್ರದೇಶಗಳಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೊಲದ ಮಧ್ಯೆ ಮನೆಗಳು ಬರುತ್ತಿವೆ, ಗುಡ್ಡಗಳನ್ನು ಕತ್ತರಿಸಲಾಗುತ್ತಿದೆ, ಕಾಡಿನ ಅಂಚಿನಲ್ಲಿ ಕಾಂಕ್ರಿಟ್ ಏರುತ್ತಿದೆ, ಕೃಷಿಭೂಮಿಗೆ ‘ಸೈಟ್’ ಎಂಬ ಹೊಸ ಹೆಸರು ಬರುತ್ತಿದೆ. ಈ ಬದಲಾವಣೆಯನ್ನು ಅಭಿವೃದ್ಧಿ ಎಂದು ಕರೆಯುವುದಾದರೆ ಅದು ಪಶ್ಚಿಮ ಘಟ್ಟದ ಭವಿಷ್ಯಕ್ಕೆ ಖಂಡಿತ ಅಪಾಯವೇ. ಆದ್ದರಿಂದ ವರದಿಯನ್ನು ವಿರೋಧಿಸುವ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುವುದೂ ಸರಿಯಲ್ಲ. ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕನ ಬದುಕನ್ನು ಕಟ್ಟಿಹಾಕುವುದೂ ಸರಿಯಲ್ಲ. ಈ ಎರಡರ ನಡುವೆ ವೈಜ್ಞಾನಿಕವೂ ಮಾನವೀಯವೂ ಆದ ಒಂದು ದಾರಿ ಬೇಕಾಗಿದೆ.

ಆದ್ದರಿಂದ ಕರ್ನಾಟಕ ಸರಕಾರ ಈಗ ಕರೆದಿರುವ ವಿಶೇಷ ಅಧಿವೇಶನ ಬಹಳ ಮಹತ್ವದ್ದಾಗಿದೆ. ಈ ಅಧಿವೇಶನ ಕೇವಲ ಕಸ್ತೂರಿರಂಗನ್ ವರದಿಯನ್ನು ಒಪ್ಪಬೇಕೋ, ತಿರಸ್ಕರಿಸಬೇಕೋ ಎಂಬ ರಾಜಕೀಯ ತೀರ್ಮಾನದ ವೇದಿಕೆಯಾಗಬಾರದು. ಪಶ್ಚಿಮ ಘಟ್ಟದ ಭವಿಷ್ಯವನ್ನು ಕುರಿತು ಕರ್ನಾಟಕ ತನ್ನೊಳಗೆ ನಡೆಸಿಕೊಳ್ಳುವ ಗಂಭೀರ ಸಾರ್ವಜನಿಕ ಸಂವಾದವಾಗಬೇಕು. ಸರಕಾರ ಪರಿಸರ ವಿಜ್ಞಾನಿಗಳ ಮಾತು ಕೇಳಬೇಕು, ಜೊತೆಗೆ ರೈತರ ಮಾತನ್ನೂ ಕೇಳಬೇಕು. ಅರಣ್ಯಾಧಿಕಾರಿಗಳ ವರದಿಯನ್ನು ಓದಬೇಕು, ಗ್ರಾಮಸಭೆಯ ಅನುಭವವನ್ನೂ ದಾಖಲಿಸಬೇಕು. ಜೀವವೈವಿಧ್ಯದ ಅಂಕಿಅಂಶಗಳನ್ನು ಪರಿಗಣಿಸಬೇಕು, ಆದರೆ ಅಲ್ಲಿನ ಜನರ ಬದುಕಿನ ಅಂಕಿಅಂಶವನ್ನೂ ಅಷ್ಟೇ ಗಂಭೀರವಾಗಿ ನೋಡಬೇಕು. ಆನೆಗಳ ಲೆಕ್ಕದ ಜೊತೆಗೆ, ಹುಲಿಗಳ ಲೆಕ್ಕದ ಜೊತೆಗೆ, ಸಿಂಗಳಿಕ, ಕಾಳಿಂಗ ಈ ಎಲ್ಲದರ ಜೊತೆಗೆ ಮನುಷ್ಯನ ಲೆಕ್ಕವನ್ನು ತಾಳೆ ಹಾಕಬೇಕು!

ಪ್ರಕೃತಿಯನ್ನು ಉಳಿಸುವ ಅತ್ಯಂತ ದೀರ್ಘಕಾಲೀನ ಮಾರ್ಗವೆಂದರೆ ಪ್ರಕೃತಿಯೊಂದಿಗೆ ಬದುಕುವ ಮನುಷ್ಯನನ್ನು ಅದರ ಶತ್ರುವನ್ನಾಗಿ ಮಾಡದಿರುವುದು. ಅವನನ್ನು ಸಂರಕ್ಷಣೆಯ ಪಾಲುದಾರನನ್ನಾಗಿ ಮಾಡುವುದು. ಅವನ ಕೃಷಿಯನ್ನು ಉಳಿಸಿಕೊಂಡೇ ಸ್ಥಳೀಯ ಪರಿಸರಕ್ಕೆ ಹೊಂದುವ ಅಭಿವೃದ್ಧಿಯನ್ನು ರೂಪಿಸುವುದು, ದೊಡ್ಡ ಯೋಜನೆಗಳಿಂದ ಪರಿಸರದ ಮೇಲಾಗುವ ಪರಿಣಾಮವನ್ನು ನಿಖರವಾಗಿ ಅಳೆಯುವುದು ಮತ್ತು ಪಶ್ಚಿಮ ಘಟ್ಟದ ಸಹನಾಶಕ್ತಿಯನ್ನು ಮೀರಿದ ಯಾವುದೇ ಚಟುವಟಿಕೆಗೆ ಕಡಿವಾಣ ಹಾಕುವುದು ಇದೇ ಸಮತೋಲನದ ಸರಿಯಾದ ದಾರಿ. ಪಶ್ಚಿಮ ಘಟ್ಟವನ್ನು ಉಳಿಸುವ ಕೆಲಸದಲ್ಲಿ ಮನುಷ್ಯನನ್ನು ಹೊರಗಿಟ್ಟರೆ ಆ ಘಟ್ಟದ ಕಥೆ ಅಪೂರ್ಣವಾಗುತ್ತದೆ. ಮನುಷ್ಯನ ಬದುಕಿನ ಹೆಸರಿನಲ್ಲಿ ಘಟ್ಟವನ್ನು ಮುಕ್ತವಾಗಿ ಬಳಸಿಕೊಂಡರೆ ನಾಳೆ ನಮ್ಮ ಮಕ್ಕಳ ಉಸಿರಿಗೆ ಆಮ್ಲಜನಕವೇ ಉಳಿಯುವುದಿಲ್ಲ. ಕುಡಿಯಲು ನೀರಿರುವುದಿಲ್ಲ. ಈ ಎರಡೂ ಸತ್ಯಗಳನ್ನು ಒಂದೇ ಸಮಯದಲ್ಲಿ ಹಿಡಿದುಕೊಳ್ಳುವಷ್ಟು ಪ್ರಬುದ್ಧವಾಗಬೇಕಾದ ಸಮಯ ಇದು.

ಹೀಗಾಗಿ ಕರ್ನಾಟಕ ಸರಕಾರದ ವಿಶೇಷ ಅಧಿವೇಶನದಿಂದ ನಾವು ನಿರೀಕ್ಷಿಸಬೇಕಾದದ್ದು ಒಂದು ನಿರ್ಣಯವಲ್ಲ; ಒಂದು ಹೊಸ ದೃಷ್ಟಿಕೋನ. ಕಸ್ತೂರಿರಂಗನ್ ವರದಿ ಪಶ್ಚಿಮ ಘಟ್ಟವನ್ನು ಉಳಿಸುವ ಉದ್ದೇಶದಿಂದ ಬಂದಿದ್ದರೆ ಅದರ ಪರಿಸರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಅದರ ಅನುಷ್ಠಾನದಿಂದ ನೆಲದ ಮನುಷ್ಯನ ಬದುಕಿಗೆ ಅನ್ಯಾಯವಾಗುವ ಸಾಧ್ಯತೆಗಳಿದ್ದರೆ ಅವುಗಳನ್ನೂ ಮುಕ್ತವಾಗಿ ಚರ್ಚಿಸಬೇಕು. ವರದಿಯಲ್ಲಿರುವ ಅಂಶಗಳನ್ನು ವೈಜ್ಞಾನಿಕವಾಗಿ ಮರುಪರಿಶೀಲಿಸಬೇಕು. ಒಟ್ಟು ಪ್ರಕ್ರಿಯೆಯಲ್ಲಿಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಬೇಕು. ಪಶ್ಚಿಮ ಘಟ್ಟವನ್ನು ಒಂದು ಜೀವಂತ ಪರಿಸರ ವ್ಯವಸ್ಥೆಯಾಗಿ ನೋಡಬೇಕು; ಕೇವಲ ನಕ್ಷೆಯ ಮೇಲೆ ಹಸಿರು ಬಣ್ಣ ಹಚ್ಚಿದ ಸಂರಕ್ಷಣಾ ಪ್ರದೇಶವಾಗಿ ಅಲ್ಲ.

(ಅಂಕಣಗಾರರು: ಉಪನ್ಯಾಸಕರು, ಚಿಂತಕರು)

Tags

Kasturirangan reportChief MinisterD.K. Shivakumar
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X