ಕೆಲಸ ಚಲಿಸಲಿ, ಮನುಷ್ಯ ಅಲ್ಲ!

ಕೃಷಿಯನ್ನು ಕೇವಲ ತಂತ್ರಜ್ಞಾನದಿಂದ ವಿವರಿಸಲು ಸಾಧ್ಯವಿಲ್ಲ. ಇವತ್ತು ಡ್ರೋನ್ಗಳಿವೆ, ಸೆನ್ಸರ್ಗಳಿವೆ, ಕೃತಕ ಬುದ್ಧಿಮತ್ತೆಯಿದೆ, ಮೊಬೈಲ್ನಲ್ಲಿ ಹೊಲದ ಚಿತ್ರಗಳು ಬರುತ್ತವೆ. ಬೇರಿಗೆ ಚಿಗುರಿಗೆ ಮೊಗ್ಗಿಗೆ ಹಣ್ಣಿಗೆ ಬರುವ ಕಾಯಿಲೆಗಳ ಪರಿಚಯವಾಗುತ್ತದೆ. ಇವೆಲ್ಲ ಅಗತ್ಯ. ಆದರೆ ಯಾವತ್ತೂ ಅವು ಕೃಷಿಯ ಸಾಧನಗಳು ಮಾತ್ರ. ಕೃಷಿಯ ಆತ್ಮವಲ್ಲ.ಒಂದು ಗಿಡದ ಎಲೆ ಸ್ವಲ್ಪ ಬಾಡಿದರೆ ರೈತನ ಕಣ್ಣಿಗೆ ಅದು ಕಾಣುತ್ತದೆ. ಯಂತ್ರಕ್ಕೆ ಅದು ಕೇವಲ ಒಂದು ದತ್ತಾಂಶ ಮಾತ್ರ. ರೈತನಿಗೆ ಅದು ಒಂದು ಜೀವ.
ಹಸು ನೋಡಿದರೆ ದೂರದಿಂದಲೇ ಅದು ಯಾವ ಜಾತಿಯದ್ದು, ನಾಯಿ ಯಾವ ಮನೆಯದ್ದು, ಅಡಿಕೆ ಯಾವ ತೋಟದ್ದು, ಊರೊಟ್ಟಿಗೆ ಹೊಸದಾಗಿ ಬಂದವರನ್ನು ಯಾವ ಊರಿನವನು ಎಂದೆಲ್ಲ ಸುಲಭವಾಗಿ ಹೇಳುತ್ತಿರುವ ಗ್ರಾಮ ಪ್ರತಿಭೆ ಈ ತ್ಯಾಂಪಣ್ಣ. ಈಗ ಅವನ ಆ ಪ್ರಾವೀಣ್ಯಕ್ಕೆ ಮತ್ತೊಂದು ಗರಿ ಸೇರಿದೆ. ಊರೊಳಗೆ ಹೊಸದಾಗಿ ಯಾರೇ ಮದುವೆ ಮನೆಗೆ ಬರಲಿ, ಮುಂಜಿಯಲ್ಲಿ ಊಟಕ್ಕೆ ಕೂತಿರಲಿ, ಅಂಗಡಿ ಮುಂಗಟ್ಟೆಯ ಮುಂದೆ ಚಹಾ ಕುಡಿಯುತ್ತಿರಲಿ, ರಸ್ತೆ ಬದಿಯಲ್ಲಿ ಮೊಬೈಲ್ ನೋಡುತ್ತಾ ಸಾಗುತ್ತಿರಲಿ ಒಮ್ಮೆ ಅವರತ್ತ ಕಣ್ಣು ಹಾಯಿಸಿ, ‘‘ಇವರೇ ನೋಡು, ನಮ್ಮೂರ ವರ್ಕ್ ಫ್ರಮ್ ಹೋಮ್!’’ ಎಂದು ಖಚಿತವಾಗಿ ಹೇಳಿಬಿಡುತ್ತಾನೆ. ಆಶ್ಚರ್ಯವೆಂದರೆ ಅವನ ಅಂದಾಜು ಅಷ್ಟಾಗಿ ತಪ್ಪುವುದಿಲ್ಲ!
ನಗರವನ್ನು ಕಳಚಿಕೊಂಡು ಊರಿಗೆ ಬಂದು, ಮನೆಯ ಯಾವುದೋ ಮೂಲೆಯಲ್ಲಿ ವೈ-ಫೈ, ಲ್ಯಾಪ್ಟಾಪ್, ಹೆಡ್ಫೋನ್ಗಳ ಜೊತೆ ತಮ್ಮದೇ ಒಂದು ಪುಟ್ಟ ಕಚೇರಿ ಕಟ್ಟಿಕೊಂಡಿರುವ ಈ ಯುವಕ-ಯುವತಿಯರು ಅಪರೂಪಕ್ಕೊಮ್ಮೆ ಹೊರಗೆ ಕಾಣಿಸಿಕೊಂಡಾಗ ಅವರ ಕಣ್ಣುಗಳಲ್ಲಿ ಮೊಬೈಲ್ ಪರದೆಯ ಬೆಳಕು, ಕಿವಿಗಳಲ್ಲಿ ಕಾಣದ ಮೀಟಿಂಗ್ಗಳ ಪ್ರತಿಧ್ವನಿ, ಬಾಯಲ್ಲಿ ಅರ್ಧ ಇಂಗ್ಲಿಷ್-ಅರ್ಧ ಕನ್ನಡದ ಮಾತು, ಮುಖದಲ್ಲಿ ಕಾಲಮಿತಿಯ ಗೊಂದಲ ಇವೆಲ್ಲವನ್ನೂ ಓದಿ ಬಿಡುವ ಕಲೆಯನ್ನು ತ್ಯಾಂಪಣ್ಣ ಈಗ ಸುಲಭವಾಗಿ ಕರಗತ ಮಾಡಿಕೊಂಡಿದ್ದಾನೆ!
‘‘ಹಿಂದೆ ಹಳ್ಳಿಗಳಲ್ಲಿ ಮನುಷ್ಯನ ಮುಖ ದೂರದಿಂದಲೇ ನೋಡಿ ಆತ ರೈತನಾ, ಮೇಷ್ಟ್ರಾ, ಕಂಡಕ್ಟರಾ, ಪೊಲೀಸಾ, ಪಟೇಲರಾ, ಶಾನುಭೋಗರಾ ಅಂತ ಹೇಳಬಹುದಿತ್ತು. ಈಗ ಹೊಸದಾಗಿ ವರ್ಕ್ ಫ್ರಮ್ ಹೋಮ್ ಅಂತಲೂ ಹೇಳಬಹುದು’’ ಎಂದು ತ್ಯಾಂಪಣ್ಣಹೇಳಿದಾಗ, ನನಗೆ ಕಾಲದ ಹೊಸ ಸತ್ಯವೊಂದು ನಮ್ಮ ಹಳ್ಳಿಯಲ್ಲಿ ಗೋಚರಿಸಿತು.
ಹೌದಲ್ಲ, ಈ ಭೂಮಿ ಮೇಲೆ ನಗರಗಳ ಹುಟ್ಟಿಗೆ ಒಂದು ಮುಖ್ಯ ಕಾರಣ ಕೆಲಸದ ಸ್ಥಳ. ಮನುಷ್ಯರಿಗೆ ಬೇಕು ಬೇಕಾದ ಸುಖದ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಒಂದೆಡೆ ನೆಲೆಸಿದವು. ಕಚೇರಿಗಳು ಒಂದೆಡೆ ಕೇಂದ್ರೀಕೃತವಾದವು. ಶಿಕ್ಷಣ, ಆರೋಗ್ಯ, ಬ್ಯಾಂಕು, ಮಾರುಕಟ್ಟೆ, ಸಾರಿಗೆ ಎಲ್ಲವೂ ಅದೇ ಜಾಗದಲ್ಲಿ ಗುಡ್ಡೆಯಾದವು. ಪರಿಣಾಮವಾಗಿ ಜನರು ತಮ್ಮ ಊರುಗಳನ್ನು ಬಿಟ್ಟು ಆ ಕೇಂದ್ರಗಳ ಕಡೆಗೆ ಚಲಿಸಿದರು. ಉದ್ಯೋಗದ ಹಿಂದೆಯೇ ಹೋದರು, ಸೌಲಭ್ಯಗಳ ಹಿಂದೆ ಹೋದರು. ಹೀಗೆ ನಗರಗಳು ಬೆಳೆಯುತ್ತಾ ಬಂದವು....
ನಿಜ ಹೇಳಬೇಕೆಂದರೆ, ನಗರಗಳನ್ನು ಕಟ್ಟಿದ್ದು ಬರೀ ಕಟ್ಟಡಗಳಲ್ಲ; ಮನುಷ್ಯನ ದೈನಂದಿನ ಹಾಜರಾತಿ. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿ ಈ ವ್ಯವಸ್ಥೆಗೆ ಸವಾಲು ಅಥವಾ ಹೊಸ ಅವಕಾಶ ತಂದದ್ದು ಅಂತರ್ಜಾಲ. ಅದರ ನಂತರ ಬಂದದ್ದು ವರ್ಕ್ ಫ್ರಮ್ ಹೋಮ್ ಪರಿಕಲ್ಪನೆ. ಒಂದು ಕಾಲದಲ್ಲಿ ಕಚೇರಿಯ ಕುರ್ಚಿಯಲ್ಲಿ ಕುಳಿತೇ ಮಾಡಬೇಕಾಗಿದ್ದ ಕೆಲಸವನ್ನು ನಾಗರಿಕ ಜಗತ್ತಿನ ಸಂಪರ್ಕವೇ ಇಲ್ಲದ ಹಳ್ಳಿಮನೆಯ ಕೋಣೆಯಲ್ಲಿಯೇ ಕೂತು ಈಗ ಮಾಡಬಹುದು. ಇಂದು ಹೆಗ್ಗೋಡಿನ ಹುಡುಗಿ ತನ್ನ ಮನೆಯಲ್ಲಿದ್ದು ಅಮೆರಿಕದ ಕಂಪೆನಿಗೆ ಕೆಲಸ ಮಾಡುತ್ತಿದ್ದಾಳೆ. ಜಪಾನ್ನ ಹಗಲನ್ನು ಭಾರತದ ರಾತ್ರಿ ನಿಭಾಯಿಸುತ್ತಿದೆ. ಆಸ್ಟ್ರೇಲಿಯದ ಕಚೇರಿಯನ್ನು ಆಫ್ರಿಕಾದ ಯಾವುದೋ ಹಳ್ಳಿಯ ಉದ್ಯೋಗಿ ನಿರ್ವಹಿಸುತ್ತಿದ್ದಾನೆ.ಕೆಲಸದ ಜಾಗ ಮತ್ತು ಬದುಕುವ ಜಾಗ ಒಂದಾಗುತ್ತಿರುವ ಈ ಹೊಸ ವ್ಯವಸ್ಥೆ ಮಾನವ ಇತಿಹಾಸದಲ್ಲಿ ದೊಡ್ಡ ಬದಲಾವಣೆ. ಹಿಂದೆ ಉದ್ಯೋಗದ ಕಾರಣಕ್ಕಾಗಿ ಊರು ಬಿಟ್ಟಿದ್ದವರಲ್ಲಿ ಕೆಲವರು ಮತ್ತೆ ತಮ್ಮ ಮೂಲ ಊರುಗಳಿಗೆ ಮರಳುತ್ತಿದ್ದಾರೆ. ಕೆಲಸಕ್ಕಾಗಿ ನಗರಕ್ಕೆ ಹೋಗಲೇ ಬೇಕೆಂಬ ಅನಿವಾರ್ಯತೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನವು ಮನುಷ್ಯನ ಚಲನೆಯನ್ನು ಕಡಿಮೆ ಮಾಡುತ್ತಿದೆ. ವರ್ತಮಾನದ ಜಗತ್ತಿನಲ್ಲಿ ಮನುಷ್ಯ ಚಲಿಸದೇ ಇದ್ದರೂ ಅವನ ಕೆಲಸ ಮಾತ್ರ ಚಲಿಸುತ್ತಿದೆ!
ಒಂದು ಕಾಲದಲ್ಲಿ ಕೃಷಿ ಮನುಷ್ಯನನ್ನು ಸ್ಥಿರಗೊಳಿಸಿದ್ದರೆ, ಕೈಗಾರಿಕೆ ಮತ್ತು ನಗರೀಕರಣ ಮತ್ತೆ ಅವನ ಕಾಲಿಗೆ ಚಕ್ರ ಕೂರಿಸಿದವು. ಇದೀಗ ಅಂತರ್ಜಾಲ ಮತ್ತೊಂದು ಮೌನ ಕ್ರಾಂತಿಯನ್ನು ನಡೆಸುತ್ತಿದೆ. ವಿಶ್ವವೇ ಒಂದು ಜಾಲವಾಗಿ ಪರಸ್ಪರ ಜೋಡಣೆಯಾದ ನಂತರ ಕೆಲಸಕ್ಕಾಗಿ ದೇಹ ಸ್ಥಳಾಂತರಗೊಳ್ಳಬೇಕಾದ ಅಗತ್ಯ ಅನೇಕ ಕ್ಷೇತ್ರಗಳಲ್ಲಿ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಊರು ಬಿಟ್ಟು ನಗರಕ್ಕೆ ತೆರಳುತ್ತಿದ್ದ ಯುವಕ, ಇಂದು ತನ್ನ ಹಳ್ಳಿಯ ಮನೆಯಲ್ಲೇ ಕುಳಿತು ಸಾವಿರ ಕಿಲೋಮೀಟರ್ ದೂರದ ಕಂಪೆನಿಗೆ ಕೆಲಸ ಮಾಡಬಲ್ಲ. ಕೃಷಿ ಅದೇ ಮನೆಯ ಅಜ್ಜನನ್ನು ನೂರಾರು ವರ್ಷಗಳಿಂದ ಮನೆಯಲ್ಲೇ ನೆಲೆಗೊಳಿಸಿದ್ದರೆ, ಅಪ್ಪನನ್ನು ಉದ್ಯೋಗ ನಗರಕ್ಕೆ ಕರೆದೊಯ್ದಿತು; ಈಗ ಮೊಮ್ಮಗನನ್ನು ಅಂತರ್ಜಾಲ ಮತ್ತೆ ಅದೇ ಮನೆಯತ್ತ ಕರೆತರುತ್ತಿದೆ. ಕೃಷಿ ಮತ್ತು ಅಂತರ್ಜಾಲದ ಕಾಲ ಬೇರೆಬೇರೆ ಆದರೂ ಮನುಷ್ಯನ ಅತಿಯಾದ ಚಲನೆಯನ್ನು ನಿಯಂತ್ರಿಸಿದ ಎರಡು ಮಹತ್ವದ ಸಂಗತಿಗಳಾಗಿ ಕಾಣುತ್ತವೆ.
ಆದರೆ ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿರುವಾಗ ಕೃಷಿ ಮಾತ್ರ ತನ್ನದೇ ಆದ ಸ್ವಭಾವವನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಮಣ್ಣಿನ ತೇವಾಂಶವನ್ನು ಇಂದು ಸೆನ್ಸರ್ ಅಳೆಯಬಲ್ಲದು. ಡ್ರೋನ್ಗಳು ಔಷಧಿ ಸಿಂಪಡಿಸುತ್ತಿವೆ. ಉಪಗ್ರಹಗಳು ಹೊಲದ ಚಿತ್ರಗಳನ್ನು ಕಳುಹಿಸುತ್ತಿವೆ. ಯಾವ ಬೀಜ ಬಿತ್ತಬೇಕು, ಯಾವ ಗಿಡ ನೆಡಬೇಕು, ಯಾವಾಗ ನೀರು ಕೊಡಬೇಕು ಎಂಬುದರ ಬಗ್ಗೆ ಕೃತಕ ಬುದ್ಧಿಮತ್ತೆ ಸಲಹೆ ನೀಡುತ್ತಿದೆ. ಇವೆಲ್ಲವೂ ಕೃಷಿಯ ಹೊಸ ಅಧ್ಯಾಯಗಳು. ಇಷ್ಟಾದರೂ ಕೃಷಿ ಕೇವಲ ಉತ್ಪಾದನೆಯ ತಂತ್ರಜ್ಞಾನವಲ್ಲ. ಅದು ಮಣ್ಣು, ನೀರು, ಗಾಳಿ, ಸೂರ್ಯ, ಜೀವಜಗತ್ತು ಮತ್ತು ಮನುಷ್ಯನ ನಡುವಿನ ಜೀವಂತ ಸಂವಾದ. ಈ ಸಂಬಂಧವನ್ನು ಸಂಪೂರ್ಣವಾಗಿ ಯಂತ್ರಗಳಿಗೆ ಒಪ್ಪಿಸಿ ದೂರದಿಂದ ನಿರ್ವಹಿಸಲು ಭಾರತೀಯ ಮನಸ್ಥಿತಿಗೆ ಬಹುಕಾಲ ಸಾಧ್ಯವಿಲ್ಲ. ಕೃಷಿಯಲ್ಲಿ ಯಾವತ್ತೂ ಭೌತಿಕ ದೂರಕ್ಕೆ ಒಂದು ಮಿತಿಯಿದೆ. ಕೃಷಿ ಒಂದು ಸ್ಥಳಕ್ಕೆ ಕಟ್ಟಿಕೊಂಡಿರುವ ವೃತ್ತಿ. ಅದು ಭೂಮಿಯ ಜೊತೆ ಮಾಡಿಕೊಂಡ ಒಪ್ಪಂದ. ಈ ಕಾರಣಕ್ಕಾಗಿಯೇ ಕೃಷಿ ಬದುಕು ಹೋಗಿ ಉದ್ಯೋಗ ಆದಾಗ, ವ್ಯವಹಾರ ಆದಾಗ ಆ ಸಂಬಂಧದ ಕೇಂದ್ರದಲ್ಲಿ ಕೇವಲ ಭೂಮಿ ಇರಲಾರದು.
ಸಾಮಾನ್ಯವಾಗಿ ನಾವು ಕೃಷಿ ಎಂದರೆ ಮಣ್ಣು ಎಂದುಕೊಳ್ಳುತ್ತೇವೆ. ಹೊಲ, ಗದ್ದೆ, ತೋಟ, ಬೆಳೆ, ನೀರು, ಗೊಬ್ಬರ ಇವೆಲ್ಲ ವ್ಯವಸಾಯ ಪ್ರಕ್ರಿಯೆಯಲ್ಲಿ ಕಣ್ಣಿಗೆ ಕಾಣುವ ಸಂಗತಿಗಳು. ಆದರೆ ಕಾಣದ ಇನ್ನೊಂದು ಅಂಶವಿದೆ. ಅದು ಕೃಷಿ ಮಾಡುವ ಮನಸ್ಸು. ಆ ಮನಸ್ಸಿಲ್ಲದೆ ಕೃಷಿ ಸಾಧ್ಯವಿಲ್ಲ. ಮಣ್ಣು ಇದ್ದರೂ ಸಾಧ್ಯವಿಲ್ಲ. ಹಾಗೆಯೇ ಮಣ್ಣಿನ ಅನುಭವವಿಲ್ಲದ ಮನಸ್ಸಿನಿಂದಲೂ ಕೃಷಿ ಸಾಧ್ಯವಿಲ್ಲ.
ಕೃಷಿ ಯಾವತ್ತೂ ವಿಶ್ವವಿದ್ಯಾನಿಲಯದ ತರಗತಿಯಲ್ಲಿ ಪಠ್ಯದ ಕಾಗದದಲ್ಲಿ ಸಂಪೂರ್ಣವಾಗಿ ಕಲಿಯಬಹುದಾದ ಪಾಠವಲ್ಲ. ಅನೇಕ ಸಾರಿ ನಾನೇ ಹೇಳಿದ್ದೇನೆ. ಅದು ಬದುಕಿನ ಜೊತೆ ಬೆರೆತು ಕಲಿಯುವ ವಿದ್ಯೆ. ಕೃಷಿ ಬದುಕಲ್ಲ, ಅದು ವ್ಯವಹಾರ-ವ್ಯಾಪಾರ ಬಿಸಿನೆಸ್ ಎಂದೇ ಪರಿಗಣಿಸಿದರೂ ಭಾರತದಲ್ಲಿ ಅದನ್ನು ಪರಿಪೂರ್ಣವಾಗಿ ಹಾಗೆ ಭಾವಿಸುವ ಮನಸ್ಥಿತಿ ಇನ್ನೂ ಹುಟ್ಟಿಲ್ಲ. ಸುಲಭದಲ್ಲಿ ಹುಟ್ಟುವುದೂ ಇಲ್ಲ.
ಹಳ್ಳಿಯಲ್ಲಿ ಹುಟ್ಟಿದ ಒಂದು ಮಗು ಕೃಷಿಯನ್ನು ಪುಸ್ತಕದಿಂದ ಕಲಿಯುವುದಿಲ್ಲ. ಅದು ನೋಡುತ್ತಾ ಕಲಿಯುತ್ತದೆ. ಬದುಕುತ್ತಾ ಭಾವಿಸುತ್ತಾ ಕಲಿಯುತ್ತದೆ. ಬೆಳಗಿನ ಕತ್ತಲೆಯಲ್ಲೇ ಎದ್ದು ಅಪ್ಪ ಅಮ್ಮ ಕತ್ತಿ, ಮುಟ್ಟಾಳೆ, ಹಾರೆಗಳನ್ನು ಕೈಗೆತ್ತಿಕೊಳ್ಳುವುದನ್ನು ಅದು ನೋಡುತ್ತದೆ. ಅಪ್ಪ ಹಟ್ಟಿಯ ಬಾಗಿಲು ತೆರೆಯುವ ಶಬ್ದವನ್ನು ಕೇಳುತ್ತದೆ. ಎತ್ತುಗಳ ಉಸಿರಿನ ಬೆಚ್ಚಗೆಯನ್ನು ಅನುಭವಿಸುತ್ತದೆ. ಗದ್ದೆಯ ಕಡೆಗೆ ಹೊರಡುವ ಹೆಜ್ಜೆಗಳ ಹಿಂದೆ ಹಿಂದೆ ನಡೆಯುತ್ತದೆ, ಅಪ್ಪ ಸರಾಗವಾಗಿ ಭೂಮಿಯ ಗಣಿತದ ಪಾಯದಲ್ಲಿ ಮಣ್ಣಿನ ಎದೆಯ ಮೇಲೆ ಗೆರೆ ಎಳೆಯುವುದನ್ನು ಅದು ಮೌನವಾಗಿ ಗಮನಿಸುತ್ತದೆ.ಅಮ್ಮ ಅಟ್ಟದಿಂದ ಬೀಜದ ಚೀಲ ಕೆಳಗಿಳಿಸುವುದನ್ನು ನೋಡುತ್ತದೆ. ಆ ಬೀಜಗಳನ್ನು ಹೇಗೆ ಕಾಪಾಡಿಕೊಂಡಿದ್ದಾರೆ, ಯಾವ ಬೀಜ ಯಾವ ಕಾಲಕ್ಕೆ, ಯಾವ ಮಣ್ಣಿಗೆ ಎಂದು ಮಾತನಾಡುವುದನ್ನು ಕೇಳುತ್ತದೆ. ಒದ್ದೆ ಬೀಜದ ಮೇಲೆ ಸೆಗಣಿ ನೀರು ಬೆರೆಸುವ ಕ್ರಮವನ್ನು, ಗಿಡಗಳ ಜೊತೆ ಮಾತನಾಡುವಂತೆ ಅವುಗಳನ್ನು ಆರೈಕೆ ಮಾಡುವುದನ್ನು ಗಮನಿಸುತ್ತದೆ. ಮಳೆಯ ಬಣ್ಣವನ್ನು ಓದುವುದನ್ನು, ಗಾಳಿಯ ದಿಕ್ಕಿನಲ್ಲಿ ಋತುವಿನ ಸುಳಿವು ಹಿಡಿಯುವುದನ್ನು, ಎಲೆಯ ಬಣ್ಣದಲ್ಲಿ ಗಿಡದ ಆರೋಗ್ಯ ಗುರುತಿಸುವುದನ್ನು ನಿಧಾನವಾಗಿ ಕಲಿಯುತ್ತದೆ.
ಹಾಗಂತ ಇದು ಬರೀ ಕಲಿಕೆಯಲ್ಲ; ಇದು ಒಳಗಿಳಿಯುವಿಕೆ, ಒಳಗೊಳ್ಳುವಿಕೆ. ದೇಹ ಬೆಳದಂತೆ ಅದು ಬೆಳೆಯಲು ಬೇಕಾಗುವ ಅನ್ನವನ್ನು ಹೊಟ್ಟೆಗೆ ಮನಸ್ಸಿಗೆ ದಕ್ಕಿಸಿಕೊಳ್ಳುವ ಕ್ರಮ. ಒಂದು ಮಗು ಹೀಗೆ ವರ್ಷಗಳ ಕಾಲ ಮಣ್ಣಿನ ನಡುವೆ ಬೆಳೆದಾಗ ಅದರೊಳಗೆ ಕೃಷಿಯ ಮನಸ್ಸು ಹುಟ್ಟುತ್ತದೆ. ಕೃಷಿ ಎಂದರೆ ಕೇವಲ ಉತ್ಪಾದನೆ ಅಲ್ಲ, ಕೇವಲ ಹಣ ಕೊಟ್ಟುಕೊಳ್ಳುವ ವ್ಯಾಪಾರ ಅಲ್ಲ ಎಂಬುದು ಅದಕ್ಕೆ ಗೊತ್ತಾಗುತ್ತದೆ. ಅದು ನಿರೀಕ್ಷೆ, ಸಹನೆ, ಕಾಳಜಿ, ಸೋಲನ್ನು ಒಪ್ಪಿಕೊಳ್ಳುವ ಶಕ್ತಿ ಮತ್ತು ಮತ್ತೆ ಆರಂಭಿಸುವ ಧೈರ್ಯ ಮತ್ತು ಮಣ್ಣಿನಿಂದಲೇ ಮಾಗುವ ಪ್ರಕ್ರಿಯೆ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತದೆ.
ಆದ್ದರಿಂದ ಕೃಷಿಯನ್ನು ಕೇವಲ ತಂತ್ರಜ್ಞಾನದಿಂದ ವಿವರಿಸಲು ಸಾಧ್ಯವಿಲ್ಲ. ಇವತ್ತು ಡ್ರೋನ್ಗಳಿವೆ, ಸೆನ್ಸರ್ಗಳಿವೆ, ಕೃತಕ ಬುದ್ಧಿಮತ್ತೆಯಿದೆ, ಮೊಬೈಲ್ನಲ್ಲಿ ಹೊಲದ ಚಿತ್ರಗಳು ಬರುತ್ತವೆ. ಬೇರಿಗೆ ಚಿಗುರಿಗೆ ಮೊಗ್ಗಿಗೆ ಹಣ್ಣಿಗೆ ಬರುವ ಕಾಯಿಲೆಗಳ ಪರಿಚಯವಾಗುತ್ತದೆ. ಇವೆಲ್ಲ ಅಗತ್ಯ. ಆದರೆ ಯಾವತ್ತೂ ಅವು ಕೃಷಿಯ ಸಾಧನಗಳು ಮಾತ್ರ. ಕೃಷಿಯ ಆತ್ಮವಲ್ಲ.ಒಂದು ಗಿಡದ ಎಲೆ ಸ್ವಲ್ಪ ಬಾಡಿದರೆ ರೈತನ ಕಣ್ಣಿಗೆ ಅದು ಕಾಣುತ್ತದೆ. ಯಂತ್ರಕ್ಕೆ ಅದು ಕೇವಲ ಒಂದು ದತ್ತಾಂಶ ಮಾತ್ರ. ರೈತನಿಗೆ ಅದು ಒಂದು ಜೀವ.
ಈ ವ್ಯತ್ಯಾಸವನ್ನು ಸೃಷ್ಟಿಸುವುದು ಮಣ್ಣಿನ ಜೊತೆಗಿನ ದೀರ್ಘಕಾಲದ ಸಹವಾಸ. ಹಳ್ಳಿಯನ್ನು ಬಿಟ್ಟು ನಗರಕ್ಕೆ ಹೋದವರಲ್ಲಿ ಅನೇಕರು ನಂತರ ಕೃಷಿಯ ಕಡೆಗೆ ಮರಳುತ್ತಾರೆ. ಆದರೆ ಕೃಷಿ ಆರಂಭಿಸಿದ ಮೊದಲ ದಿನವೇ ಅವರಿಗೆ ಒಂದು ಸತ್ಯ ಅರ್ಥವಾಗುತ್ತದೆ. ಭೂಮಿ ಖರೀದಿಸುವುದು ಸುಲಭ. ಕೃಷಿಯ ಮನಸ್ಸನ್ನು ಖರೀದಿಸುವುದು ಅಸಾಧ್ಯ. ಅದು ವರ್ಷಗಳ ಅನುಭವದಿಂದ, ವಿಫಲತೆಗಳಿಂದ, ಮಣ್ಣಿನ ವಾಸನೆಯಿಂದ, ಋತುಗಳ ಸಂಗಾತಿತನದಿಂದ ಮಾತ್ರ ಬರುವಂತದ್ದು.
ಹೀಗಾಗಿ ಕೃಷಿ ಎನ್ನುವುದು ಯಾವತ್ತೂ ಮಣ್ಣು ಮತ್ತು ಮನಸ್ಸಿನ ಜಂಟಿ ಯಾತ್ರೆ. ಮಣ್ಣು ಮಾತ್ರ ಇದ್ದರೆ ಅದು ಕೇವಲ ಭೂಮಿ. ಮನಸ್ಸು ಮಾತ್ರ ಇದ್ದರೆ ಅದು ಬರೀ ಕನಸು. ಕೈಯಿಂದ ಬಿತ್ತಿದ ಬೀಜ ಮೊಳೆಯಬೇಕಾದರೆ ಇವೆರಡೂ ಒಂದಾಗಬೇಕು.
ಅದಕ್ಕಾಗಿಯೇ ನನಗೆ ಅನಿಸುತ್ತದೆ, ಕೃಷಿಯನ್ನು ಮಣ್ಣಿನಿಂದ ಹೊರಗೆ ನಿಂತು ಮಾಡಲು ನೋಡಲು ಸಾಧ್ಯವಿಲ್ಲ. ಮನಸ್ಸಿನಿಂದ ಹೊರಗೆ ನಿಂತು ಮಾಡಲು ಸಾಧ್ಯವಿಲ್ಲ. ಕೃಷಿ ಎನ್ನುವುದು ಹೊಲದಲ್ಲಿ ಬೆಳೆಯುವ ಬೆಳೆಯ ಕಥೆಯಲ್ಲ; ಅದು ಮನುಷ್ಯನೊಳಗೆ ಬೆಳೆಯುವ ಮಣ್ಣಿನೊಳಗೆ ಚಿಗುರುವ ಒಂದು ಸಂಬಂಧದ ಕಥೆ. ಆ ಸಂಬಂಧವನ್ನು ಅರಿತವರಿಗೆ ಮಾತ್ರ ಮಣ್ಣಿನ ಗಣಿತವೂ ಅರ್ಥವಾಗುತ್ತದೆ, ಬದುಕಿನ ಗಣಿತವೂ ಅರ್ಥವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಕೃಷಿಯ ತಂತ್ರಜ್ಞಾನದ ಬಗ್ಗೆ ಬಹಳಷ್ಟು ಚರ್ಚೆಗಳು, ಸೆಮಿನಾರ್ಗಳು ನಡೆಯುತ್ತಿವೆ. ಏನೇ ನಡೆದರೂ ನನ್ನ ಪ್ರಕಾರ ಕೃಷಿಗೆ ತಂತ್ರಜ್ಞಾನ ಅಂಟಿಕೊಳ್ಳುವುದು ಮತ್ತು ಕೃಷಿ ಮನಸ್ಸಿಗೆ ತಂತ್ರಜ್ಞಾನ ಅಂಟಿಕೊಳ್ಳುವುದು ಇವೆರಡು ಬೇರೆ ಬೇರೆಯೇ. ಕೃಷಿಗೆ ತಂತ್ರಜ್ಞಾನ ಅಂಟಿಕೊಳ್ಳುವುದು ಎಂದರೆ ರೈತನ ಶ್ರಮವನ್ನು ಕಡಿಮೆ ಮಾಡುವುದು. ನೀರನ್ನು ಉಳಿಸುವುದು. ಉತ್ಪಾದನೆಯನ್ನು ಹೆಚ್ಚಿಸುವುದು. ರೋಗಗಳನ್ನು ಮೊದಲೇ ಗುರುತಿಸುವುದು. ಮಾರುಕಟ್ಟೆಯ ಮಾಹಿತಿಯನ್ನು ತಲುಪಿಸುವುದು. ಅಂದರೆ ತಂತ್ರಜ್ಞಾನ ಇಲ್ಲಿ ಒಂದು ಸಾಧನ. ಅದು ಕೃಷಿಗೆ ಸಹಾಯ ಮಾಡುವ ಸೇವಕ.
ಆದರೆ ಕೃಷಿ ಮನಸ್ಸಿಗೆ ತಂತ್ರಜ್ಞಾನ ಅಂಟಿಕೊಳ್ಳುವುದು ಬೇರೆ ಸಂಗತಿ. ಅಲ್ಲಿ ತಂತ್ರಜ್ಞಾನ ಕೇವಲ ಸಾಧನವಷ್ಟೇ ಆಗಿರುವುದಿಲ್ಲ ; ಅದು ಚಿಂತನೆಯನ್ನೇ ಆಳಲು ಆರಂಭಿಸುತ್ತದೆ.
ಒಂದು ಕಾಲದಲ್ಲಿ ರೈತ ಬೆಳಗ್ಗೆ ಎದ್ದು ಮೊದಲು ಆಕಾಶ ನೋಡುತ್ತಿದ್ದ. ಮೋಡದ ಬಣ್ಣವನ್ನು ಗಮನಿಸುತ್ತಿದ್ದ. ಗಾಳಿಯ ದಿಕ್ಕನ್ನು ಅರ್ಥಮಾಡಿಕೊಳ್ಳುತ್ತಿದ್ದ. ಹಕ್ಕಿಗಳ ಹಾರಾಟದಲ್ಲಿ ಹವಾಮಾನದ ಸುಳಿವು ಹುಡುಕುತ್ತಿದ್ದ. ಈಗ ಕೆಲವರು ಮೊದಲು ಮೊಬೈಲ್ ನೋಡುತ್ತಾರೆ. ಹವಾಮಾನ ಆ್ಯಪ್ ಏನು ಹೇಳುತ್ತದೆ ಎಂದು ಕಾಯುತ್ತಾರೆ. ಇದು ತಪ್ಪಲ್ಲ. ಆದರೆ ಒಂದು ಹಂತದ ನಂತರ ರೈತ ತನ್ನ ಕಣ್ಣಿಗಿಂತ ಆ್ಯಪ್ನ್ನು ಹೆಚ್ಚು ನಂಬಲು ಆರಂಭಿಸಿದರೆ ಸಮಸ್ಯೆ ಆರಂಭವಾಗುತ್ತದೆ.
ಏಕೆಂದರೆ ಪ್ರಕೃತಿಯ ಭಾಷೆ ನಿಧಾನವಾಗಿ ಮರೆಯುತ್ತಾ ತಂತ್ರಜ್ಞಾನದ ಭಾಷೆಯೇ ಸ್ಥಿರವಾಗುತ್ತಾ ಹೋಗುತ್ತದೆ.
ಯಾವತ್ತೂ ಪ್ರಕೃತಿ ಸಾವಿರಾರು ಸಂಕೇತಗಳಲ್ಲಿ ಮಾತನಾಡುತ್ತದೆ. ತಂತ್ರಜ್ಞಾನ ಅದರಲ್ಲಿ ಕೆಲವೇ ಸಂಕೇತಗಳನ್ನು ಅಳೆಯಬಲ್ಲದು. ಮಳೆಯ ಸಾಧ್ಯತೆಯನ್ನು ಯಂತ್ರ ಹೇಳಬಹುದು. ಆದರೆ ಮಣ್ಣಿನ ವಾಸನೆಯಲ್ಲಿ ಅಡಗಿರುವ ಮಳೆಯ ಮುನ್ಸೂಚನೆಯನ್ನು ಅದು ಅನುಭವಿಸಲು ಸಾಧ್ಯವಿಲ್ಲ.
ಇವತ್ತು ಸಂಜೆ ಮಳೆ ಬರುತ್ತದೆ. ಎಂದು ಹೇಳುತ್ತಿದ್ದ ನಮ್ಮೂರ ಅಜ್ಜನ ಬಳಿ ಯಾವುದೇ ಉಪಗ್ರಹ ಚಿತ್ರಗಳಿರಲಿಲ್ಲ. ಆದರೆ ದಶಕಗಳ ಕಾಲ ಪ್ರಕೃತಿಯನ್ನು ನೋಡಿದ ಅನುಭವವಿತ್ತು. ಆ ಅನುಭವ ಒಂದು ಬಗೆಯ ಜ್ಞಾನ. ತಂತ್ರಜ್ಞಾನ ಆ ಜ್ಞಾನವನ್ನು ಬಲಪಡಿಸಿದರೆ ಅದು ಆಶೀರ್ವಾದ. ಆದರೆ ಅದನ್ನು ಬದಲಾಯಿಸಲು ಪ್ರಯತ್ನಿಸಿದರೆ ಅದು ಅಪಾಯ.
ಇವತ್ತು ಕೃಷಿಯಲ್ಲಿ ಇನ್ನೊಂದು ಬದಲಾವಣೆ ನಡೆಯುತ್ತಿದೆ. ಕೃಷಿಯನ್ನು ನಿಧಾನವಾಗಿ ಜೀವಂತ ಸಂಬಂಧದಿಂದ ದತ್ತಾಂಶದ ಸಂಬಂಧವಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ. ಒಂದು ಗಿಡವನ್ನು ನೋಡುವಾಗ ಅದರ ಆರೋಗ್ಯ, ಅದರ ಬೆಳವಣಿಗೆ, ಅದರ ಉತ್ಪಾದನೆ ಎಲ್ಲವೂ ಅಂಕಿಗಳಾಗಿ ಪರಿವರ್ತಿತವಾಗುತ್ತಿದೆ. ಅಂಕಿಗಳು ಮುಖ್ಯ. ಆದರೆ ಅಂಕಿಗಳು ಸಂಪೂರ್ಣ ಸತ್ಯವಲ್ಲ.
ಒಬ್ಬ ರೈತ ತನ್ನ ತೋಟದಲ್ಲಿ ನಡೆಯುವಾಗ ಗಿಡದ ಎಲೆ ಮುಟ್ಟುತ್ತಾನೆ. ಅದರ ಬಣ್ಣವನ್ನು ನೋಡುತ್ತಾನೆ. ಅದರ ದೇಹಭಾಷೆಯನ್ನು ಓದುತ್ತಾನೆ. ಅದು ಕೇವಲ ಕೃಷಿ ವಿಜ್ಞಾನವಲ್ಲ; ಅದು ಒಂದು ಸಂಬಂಧ. ಈ ಸಂಬಂಧವನ್ನು ಯಾವ ತಂತ್ರಜ್ಞಾನವೂ ಸಂಪೂರ್ಣವಾಗಿ ಸೃಷ್ಟಿಸಲು ಸಾಧ್ಯವಿಲ್ಲ.
ಹಳ್ಳಿಗಳಲ್ಲಿ ಹಿಂದೆ ಕೃಷಿ ಒಂದು ಸಂಸ್ಕೃತಿಯಾಗಿತ್ತು. ಮಕ್ಕಳು ಹೊಲದಲ್ಲಿ ಆಟವಾಡುತ್ತಿದ್ದರು. ಬೀಜ ಬಿತ್ತುವ ದಿನ ಹಬ್ಬದಂತಿರುತ್ತಿತ್ತು. ಕೊಯ್ಲು ಒಂದು ಸಾಮೂಹಿಕ ಸಂಭ್ರಮವಾಗಿತ್ತು. ಅಲ್ಲಿ ಕೃಷಿ ಕೇವಲ ಉತ್ಪಾದನೆಯ ಪ್ರಕ್ರಿಯೆಯಾಗಿರಲಿಲ್ಲ. ಅದು ಬದುಕಿನ ಒಂದು ಭಾಗವಾಗಿತ್ತು.
ಇವತ್ತು ಕೃಷಿ ಸಂಪೂರ್ಣವಾಗಿ ತಂತ್ರಜ್ಞಾನದ ಭಾಷೆಗೆ ಇಳಿದರೆ ಆ ಸಂಸ್ಕೃತಿ ಕಣ್ಮರೆಯಾಗುವ ಅಪಾಯವಿದೆ. ಒಂದು ಬೀಜವನ್ನು ನೆಲಕ್ಕೆ ಹಾಕುವಾಗ ಅದು ಕೇವಲ ಜೈವಿಕ ಕ್ರಿಯೆಯಲ್ಲ. ಅದು ಭವಿಷ್ಯದ ಮೇಲೆ ಇಡುವ ನಂಬಿಕೆ. ಒಂದು ಗಿಡವನ್ನು ಬೆಳೆಸುವುದು ಕೇವಲ ಉತ್ಪಾದನೆ ಅಲ್ಲ. ಅದು ಸಹನೆಯ ಅಭ್ಯಾಸ. ಒಂದು ಬೆಳೆ ಹಾಳಾದಾಗ ಮತ್ತೆ ಹೊಸದಾಗಿ ಆರಂಭಿಸುವುದು ಕೇವಲ ಆರ್ಥಿಕ ನಿರ್ಧಾರವಲ್ಲ. ಅದು ಬದುಕಿನ ತತ್ವ.
ಈ ಸಂಗತಿಗಳನ್ನು ಯಾವುದೇ ಯಂತ್ರ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಗೆ ತಂತ್ರಜ್ಞಾನ ಬೇಕು. ಇನ್ನೂ ಹೆಚ್ಚು ಬೇಕು. ಆದರೆ ಕೃಷಿ ಮನಸ್ಸು ತಂತ್ರಜ್ಞಾನದ ಕೈದಿಯಾಗಬಾರದು.
ನೊಗ ಹಿಡಿದ ಕೈಗೆ ಮೊಬೈಲ್ ಬರಲಿ. ಆದರೆ ಮೊಬೈಲ್ ನೊಗದ ಜಾಗವನ್ನು ತೆಗೆದುಕೊಳ್ಳಬಾರದು. ಡ್ರೋನ್ಗಳು ಆಕಾಶದಲ್ಲಿ ಹಾರಲಿ. ಆದರೆ ಮೋಡವನ್ನು ಓದುವ ಕಣ್ಣುಗಳು ಕಳೆದುಹೋಗಬಾರದು. ಕೃತಕ ಬುದ್ಧಿಮತ್ತೆ ಸಲಹೆ ನೀಡಲಿ. ಆದರೆ ಮಣ್ಣಿನ ಬುದ್ಧಿಮತ್ತೆ ಮೌನವಾಗಬಾರದು.






