Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಬರೆದುದ್ದಕ್ಕಿಂತ ಹೆಚ್ಚು ಬದುಕಿದ...

ಬರೆದುದ್ದಕ್ಕಿಂತ ಹೆಚ್ಚು ಬದುಕಿದ ಅಮೃತರು!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ27 Sept 2026 10:10 AM IST
share
ಬರೆದುದ್ದಕ್ಕಿಂತ ಹೆಚ್ಚು ಬದುಕಿದ ಅಮೃತರು!

ಅಮೃತರ ವೈಚಾರಿಕತೆಯ ಒಂದು ಮುಖ್ಯ ಗುಣ ಅವರು ಬರೆಯುವುದನ್ನು ಯಾವತ್ತೂ ತಮ್ಮ ಪಾಂಡಿತ್ಯದ ಪ್ರದರ್ಶನವೆಂದು ನೋಡಲಿಲ್ಲ. ತಮ್ಮೊಳಗೆ ಹುಟ್ಟಿದ ಜಿಜ್ಞಾಸೆಯನ್ನು, ಅನುಭವದಿಂದ ಮೂಡಿದ ಪ್ರಶ್ನೆಯನ್ನು, ಸಮಾಜದ ಬಗ್ಗೆ ತಮ್ಮಲ್ಲಿ ಮೂಡಿದ ವೈಚಾರಿಕ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಉದ್ದೇಶ ಅವರ ಬರವಣಿಗೆಯಲ್ಲಿತ್ತು.

ಜಾನಪದ, ಯಕ್ಷಗಾನ, ಸಂಶೋಧನೆ, ತುಳು-ಕನ್ನಡ- ಮಲಯಾಳಂ ಸಾಹಿತ್ಯ, ಕಥೆ, ಕಾದಂಬರಿ, ಕಾವ್ಯ, ನಾಟಕ, ಅಧ್ಯಾಪನ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಗುರುತು ಮೂಡಿಸಿದ ಡಾ. ಅಮೃತ ಸೋಮೇಶ್ವರರು ಕರಾವಳಿ ಕಂಡ ಬಹುಮುಖ ಪ್ರತಿಭೆ. ಅದರಲ್ಲೂ ಜಾನಪದ ಮತ್ತು ಯಕ್ಷಗಾನ ಅವರ ಆಸಕ್ತಿಯ ಪ್ರಮುಖ ಕ್ಷೇತ್ರಗಳು. ಭಾಗಶಃ ಇವು ನಮ್ಮ ಸ್ಮತಿಲೋಕದ ಭಾಗಗಳು. ಗತಕಾಲದ ಬದುಕು, ನಂಬಿಕೆ, ಅನುಭವ ಮತ್ತು ಕಲಾಪ್ರಕಾರಗಳನ್ನು ಅವು ನಮ್ಮ ಮುಂದೆ ತಂದು ನಿಲ್ಲಿಸುತ್ತವೆ. ಆದರೆ ಅಮೃತರನ್ನು ಕೇವಲ ನಮ್ಮ ನೆನಪಿನ ಲೋಕದಸಾಹಿತಿಯಾಗಿ ನೋಡುವುದರಿಂದ ಅವರ ಇನ್ನೊಂದು ಮುಖ್ಯ ಮುಖವನ್ನು ಮರೆತಂತಾಗುತ್ತದೆ. ಅವರು ಕಳೆದು ಹೋದ ಕಾಲವನ್ನು ಎಷ್ಟು ಎಚ್ಚರದಿಂದ ನೋಡುತ್ತಿದ್ದರೋ, ವಾಸ್ತವವನ್ನೂ ಅಷ್ಟೇ ಸೂಕ್ಷ್ಮವಾಗಿ ಗಮನಿ ಸುತ್ತಿದ್ದವರು. ಈ ಕಾರಣಕ್ಕಾಗಿಯೇ ಅಮೃತರ ಬರವಣಿಗೆಯಲ್ಲಿ ಸ್ಮತಿಯ ಜೊತೆಗೆ ವರ್ತಮಾನದ ಸಮಾಜವೂ ಕಾಣಿಸುತ್ತದೆ.

ಮನುಷ್ಯನ ಬದುಕು, ಸಾಮಾಜಿಕ ಅಸಮಾನತೆ, ಅನ್ಯಾಯ, ಸ್ತ್ರೀ ಶೋಷಣೆ, ಧಾರ್ಮಿಕ ಮೌಢ್ಯಗಳು, ಮೂಢನಂಬಿಕೆ, ದೇವರ ಹೆಸರಿನಲ್ಲಿ ನಡೆಯುವ ವಂಚನೆ, ಪರಿಸರ, ಶಿಕ್ಷಣ, ಸಾಂಸ್ಕೃತಿಕ ಬದಲಾವಣೆಗಳು, ಸಮಾಜದ ತಪ್ಪುಗಳು ಇವೆಲ್ಲವೂ ಅವರ ಚಿಂತನೆಯೊಳಗೆ ನಿರಂತರವಾಗಿ ಓಡಾಡುತ್ತಿದ್ದವು. ಅವರ ದೊಡ್ಡ ದೊಡ್ಡ ಕೃತಿಗಳನ್ನೆಲ್ಲ ಬದಿಗಿಟ್ಟು, ಓದುಗರು ಸುಲಭವಾಗಿ ನಿರ್ಲಕ್ಷಿಸಬಹುದಾದ ಅವರ ಚಿಕ್ಕ ಚಿಕ್ಕ ಚಿಂತನೆಗಳನ್ನು, ಪತ್ರಿಕೆಗಳಿಗೆ ಅವರು ಬರೆದ ಪತ್ರಗಳನ್ನು ಮಾತ್ರ ಇಲ್ಲಿ ಗಮನಿಸುತ್ತಿದ್ದೇನೆ. ಯಾಕೆಂದರೆ ಒಬ್ಬ ಲೇಖಕನ ವೈಚಾರಿಕತೆಯನ್ನು ಅರ್ಥಮಾಡಿಕೊಳ್ಳಲು ಯಾವಾಗಲೂ ಅವನ ದೊಡ್ಡ ಕೃತಿಗಳನ್ನೇ ಹುಡುಕಬೇಕಾಗಿಲ್ಲ. ಕೆಲವೊಮ್ಮೆ ಪತ್ರಿಕೆಗೆ ಬರೆದ ಒಂದು ಪತ್ರ, ಸಮಕಾಲೀನ ವಿದ್ಯಮಾನವೊಂದರ ಕುರಿತು ದಾಖಲಿಸಿದ ಒಂದು ಸಣ್ಣ ಪ್ರತಿಕ್ರಿಯೆಯಲ್ಲೇ ಅವನ ಒಳಗಿನ ಮನುಷ್ಯ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ. ಅಮೃತರ ಈ ಸಣ್ಣ ಬರಹಗಳನ್ನು ಗಮನಿಸಿದಾಗ ಈ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ. ಹಾಗೆಯೇ ಅವರು ಯಾವತ್ತೂ ದೊಡ್ಡ ದೊಡ್ಡ ವೇದಿಕೆಯೊಂದನ್ನು ಹುಡುಕಿಕೊಂಡು ಮಾತನಾಡಿದವರಲ್ಲ. ಆ ಕಾಲಕ್ಕೆ ಯಾವುದೋ ಬೆಟ್ಟ ಹತ್ತಿ, ತೋಡು ಹೊಳೆ ದಾಟಿ ಜನಪದರ ಅಂಗಳದಲ್ಲಿ ನಿಂತು ತಮಗೆ ಕಂಡದ್ದು, ತಪ್ಪೆನಿಸಿದರೆ ಅದು ಎಷ್ಟು ಸಣ್ಣ ವಿಷಯವಾಗಿದ್ದರೂ ಅದನ್ನು ನಯವಾಗಿ ಹೇಳಬೇಕೆನ್ನುವ ಛಾತಿ ಅವರಲ್ಲಿತ್ತು. ಅಂಕಣ ಬರೆಯುವಾಗಲೂ ಸಾವಿರಾರು ಓದುಗರನ್ನು ತಲುಪಬೇಕು ಎಂಬ ಪ್ರಚಾರದ ಹಂಬಲಕ್ಕಿಂತ, ಕಂಡದ್ದನ್ನು ನಿಷ್ಠುರವಾಗಿ ಹೇಳಿ ಅದು ಒಂದಷ್ಟು ಜನರಿಗಾದರೂ ತಲುಪಲಿ ಎಂಬ ಕಾಳಜಿ ಅವರಲ್ಲಿತ್ತು.

ವಿಶ್ವವಿದ್ಯಾನಿಲಯವೇ ಇರಲಿ, ಕಾಲೇಜೇ ಇರಲಿ, ಸಾಮಾನ್ಯವಾಗಿ ಅಲ್ಲಿನ ಪ್ರಾಧ್ಯಾಪಕರಲ್ಲಿ ಒಂದು ಬಗೆಯ ಮಡಿವಂತಿಕೆ ಇರುತ್ತದೆ. ತಾವು ಬರೆದ ಲೇಖನಗಳು ಪ್ರಕಟವಾಗಬೇಕಾದರೆ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದ ಜರ್ನಲ್‌ಗಳನ್ನೇ ಅವರು ಹುಡುಕುತ್ತಾರೆ. ಅಲ್ಲಿ ಪ್ರಕಟವಾದರೆ ತಮ್ಮ ಬರವಣಿಗೆಗೆ ಒಂದು ಶೈಕ್ಷಣಿಕ ಮೌಲ್ಯ, ಭಡ್ತಿ ಸಿಗುತ್ತದೆ ಎಂಬ ಭಾವನೆ ಸಹಜವಾಗಿಯೇ ಇರುತ್ತದೆ. ಅಂಥವರು ಲಕ್ಷಾಂತರ ಜನ ಓದುವ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ, ಸಣ್ಣಪುಟ್ಟ ನಿಯತಕಾಲಿಕೆಗಳಲ್ಲಿ ಬರೆಯುವುದಕ್ಕೆ ಹಿಂದೇಟು ಹಾಕುತ್ತಾರೆ. ಇದೊಂದು ಬಗೆಯ ಮಡಿವಂತಿಕೆ. ಇಂಥವರಿಗೆ ತಮ್ಮ ವಿಚಾರಗಳು ಯಾರಿಗೆ ತಲುಪಬೇಕು ಎನ್ನುವುದಕ್ಕಿಂತ ಯಾವ ವೇದಿಕೆಯಲ್ಲಿ ಪ್ರಕಟವಾಗಬೇಕು ಎಂಬ ಪ್ರಶ್ನೆಯೇ ಕೆಲವೊಮ್ಮೆ ಮುಖ್ಯವಾಗಿಬಿಡುತ್ತದೆ.

ಅಮೃತ ಸೋಮೇಶ್ವರರಿಗೆ ತಾನು ಬರೆಯುವ ಪತ್ರಿಕೆಗಳ ಬಗ್ಗೆ ಯಾವುದೇ ಮಡಿವಂತಿಕೆ ಇರಲಿಲ್ಲ. ಅದು ರಾಜ್ಯದ ಗರಿಷ್ಠ ಪ್ರಸಾರದ ದೊಡ್ಡ ಪತ್ರಿಕೆಯೇ ಆಗಿರಲಿ, ಸಂಜೆಪತ್ರಿಕೆಯೇ ಆಗಿರಲಿ, ಪ್ರಸಾರದಲ್ಲಿ ದೊಡ್ಡ ಹೆಸರಿಲ್ಲದ ಸಣ್ಣ ಪತ್ರಿಕೆಯೇ ಆಗಿರಲಿ, ತಮ್ಮಲ್ಲಿ ಮೂಡಿದ ವಿಚಾರವನ್ನು ಬರೆಯುವುದಕ್ಕೆ ಅವರು ಹಿಂಜರಿಯುತ್ತಿರಲಿಲ್ಲ. ಪತ್ರಿಕೆಯ ದೊಡ್ಡತನಕ್ಕಿಂತ ತಾವು ಹೇಳಬೇಕೆಂದಿರುವ ವಿಚಾರ ಓದುಗರಿಗೆ ತಲುಪುದೇ ಅವರಿಗೆ ಮುಖ್ಯವಾಗಿತ್ತು.

ಅಮೃತರ ವೈಚಾರಿಕತೆಯ ಒಂದು ಮುಖ್ಯ ಗುಣ ಅವರು ಬರೆಯುವುದನ್ನು ಯಾವತ್ತೂ ತಮ್ಮ ಪಾಂಡಿತ್ಯದ ಪ್ರದರ್ಶನವೆಂದು ನೋಡಲಿಲ್ಲ. ತಮ್ಮೊಳಗೆ ಹುಟ್ಟಿದ ಜಿಜ್ಞಾಸೆಯನ್ನು, ಅನುಭವದಿಂದ ಮೂಡಿದ ಪ್ರಶ್ನೆಯನ್ನು, ಸಮಾಜದ ಬಗ್ಗೆ ತಮ್ಮಲ್ಲಿ ಮೂಡಿದ ವೈಚಾರಿಕ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಉದ್ದೇಶ ಅವರ ಬರವಣಿಗೆಯಲ್ಲಿತ್ತು. ಅದಕ್ಕಾಗಿಯೇ ಅವರ ಬರಹಗಳು ಕೇವಲ ಸಂಶೋಧನಾ ಕೊಠಡಿಗಳಲ್ಲಿ ಸಿಲುಕಿಕೊಳ್ಳಲಿಲ್ಲ. ಅವು ಅವರ ಪುಸ್ತಕಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ವೇಗದಲ್ಲಿ ಪತ್ರಿಕೆಗಳ ಮೂಲಕ ಮನೆಮನೆಗೆ ಹೋದವು. ಓದುಗರೊಂದಿಗೆ ನೇರವಾದ ಸಂಬಂಧ ಬೆಳೆಸಿಕೊಂಡವು.

ಒಬ್ಬ ಸಂಶೋಧಕನಿಗೆ, ಪ್ರಾಧ್ಯಾಪಕನಿಗೆ ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಬರಹ ಪ್ರಕಟವಾಗುವುದು ಅವರ ವೃತ್ತಿಪರ ಬದುಕಿನ ಅಗತ್ಯವಾಗಿರಬಹುದು. ಆದರೆ ಒಬ್ಬ ಲೋಕ ಕಾಳಜಿಯ ಚಿಂತಕನಿಗೆ ತನ್ನ ವಿಚಾರ ಸಮಾಜದೊಳಗೆ ಹೋಗುವುದು ಇನ್ನೊಂದು ಬಗೆಯ ಅಗತ್ಯ. ಈ ಎರಡನ್ನೂ ಬೇರೆಬೇರೆ ಎಂದು ನೋಡಬೇಕಾಗಿಲ್ಲ. ಆದರೆ ಎರಡನೆಯದು ಇಲ್ಲದೆ ಮೊದಲನೆಯದು ಮಾತ್ರ ಇದ್ದರೆ ಜ್ಞಾನವು ಸಮಾಜದಿಂದ ದೂರವಾಗುವ ಸಾಧ್ಯತೆ ಹೆಚ್ಚು. ಅಮೃತ ಸೋಮೇಶ್ವರರು ಈ ಅಂತರವನ್ನು ತಮ್ಮ ಬರವಣಿಗೆಯಿಂದ ಕಡಿಮೆ ಮಾಡಿದವರು. ಅವರು ಉನ್ನತ ಬೌದ್ಧಿಕತೆಯನ್ನು ಪತ್ರಿಕೆಯ ಸರಳ ಓದುಗರ ಮನೆ ಬಾಗಿಲಿಗೆ ತಂದು ನಿಲ್ಲಿಸಿದರು. ಬಹುಶಃ ಅವರ ಬರವಣಿಗೆಯ ದೊಡ್ಡ ಸಾಮಾಜಿಕ ಅರ್ಥವೂ ಅದೇ. ಇದು ಅಮೃತರ ವ್ಯಕ್ತಿತ್ವದ ಬಹಳ ದೊಡ್ಡ ಸಂಗತಿ ಅಷ್ಟೇ ಅಲ್ಲ ವಿನಮ್ರತೆಯ ಒಂದು ಭಾಗವೂ ಹೌದು.

ಒಬ್ಬ ಸಾಹಿತಿ ಕವಿತೆ ಬರೆಯಬಹುದು, ಕಥೆ ಬರೆಯಬಹುದು, ನಾಟಕ ಬರೆಯಬಹುದು. ಕೃತಿ ಪ್ರಕಟವಾದಾಗ ಅದರ ಬಗ್ಗೆ ಮಾತನಾಡಬಹುದು. ಪ್ರಶಸ್ತಿ ಬಂದಾಗ ಸಂತೋಷಪಡಬಹುದು. ಓದುಗರು ಮೆಚ್ಚಿದಾಗ ಸಂಭ್ರಮಿಸಬಹುದು. ಇವೆಲ್ಲವೂ ಸಹಜ. ಆದರೆ ಒಬ್ಬ ಬರಹಗಾರನ ನಿಜವಾದ ಪರೀಕ್ಷೆ ಅವನ ಸುತ್ತ ನಡೆಯುತ್ತಿರುವ ಬದುಕಿನ ಬಗ್ಗೆ ಅವನು ಎಷ್ಟು ಜಾಗೃತನಾಗಿದ್ದಾನೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದರಲ್ಲಿ ಇದೆ. ಅಮೃತರು ಈ ಜಾಗೃತಿಯನ್ನು ಯಾವತ್ತೂ ತಮ್ಮ ಬರವಣಿಗೆಯ ಹೊರಗಡೆ ಇಟ್ಟುಕೊಂಡಿರಲಿಲ್ಲ. ಅವರ ಸಾಹಿತ್ಯದೊಳಗೂ ಅದು ಇತ್ತು, ಪತ್ರಗಳಲ್ಲೂ ಇತ್ತು, ಮಾತುಗಳಲ್ಲೂ ಇತ್ತು, ಮೂರು ದಶಕದ ಪಾಠಗಳಲ್ಲೂ ಇತ್ತು. ಎಷ್ಟೋ ಬಾರಿ ಅವರ ಮೌನದಲ್ಲೂ ಇತ್ತು!

ಅಮೃತರ ಬಗ್ಗೆ ನನಗೆ ಯಾವಾಗಲೂ ನೆನಪಾಗುವ ಒಂದು ಸಂಗತಿಯೆಂದರೆ ಅವರ ಅಧಿಕಾರ ನಿರಾಕರಣೆ, ಶ್ರೇಷ್ಠತೆಯ ವ್ಯಸನ ವಿಮುಖತೆ. ನಮ್ಮ ಕಾಲದಲ್ಲಿ ಸಾಹಿತಿಗೆ ಬರವಣಿಗೆಯಷ್ಟೇ ಮುಖ್ಯವಾಗಿರುವುದು ತನ್ನ ಬರವಣಿಗೆಯನ್ನು ಎಲ್ಲಿ ಪ್ರಕಟಿಸಬೇಕು, ಮುನ್ನುಡಿ ಯಾರು ಬರೆಯಬೇಕು, ಪುಸ್ತಕ ಬಿಡುಗಡೆ ಯಾರು ಮಾಡಬೇಕು, ತನ್ನ ಬಗ್ಗೆ ಯಾರು ಮಾತನಾಡಬೇಕು, ಯಾವ ಯಾವ ವೇದಿಕೆಯಲ್ಲಿ ತನ್ನ ಹೆಸರು ಕಾಣಿಸಬೇಕು ಎಂಬುದೂ ಆಗಿಬಿಟ್ಟಿದೆ. ಅಮೃತರ ಈ ಓಟ, ಪೀಠಗಳ ಆಂಟಿನೊಳಗೆ ಯಾವತ್ತೂ ಇರಲಿಲ್ಲ. ಅವರು ಬರೆದ ಅನೇಕ ಕೃತಿಗಳನ್ನು ಅವರೇ ಪ್ರಕಟಿಸುತ್ತಿದ್ದರು. ಪುಸ್ತಕ ಚೆನ್ನಾಗಿ ಕಾಣಬೇಕು, ಮುಖಪುಟ ಅದ್ಭುತವಾಗಿರಬೇಕು, ದೊಡ್ಡ ಪ್ರಕಾಶಕರ ಹೆಸರಿರಬೇಕು ಎಂಬ ಹಂಬಲವೂ ಅವರಲ್ಲಿ ಕಾಣಿಸುತ್ತಿರಲಿಲ್ಲ. ಕೃತಿಯ ಒಳಗಿನ ವಿಚಾರ ಒಂದಷ್ಟು ಜನರನ್ನು ತಲುಪಬೇಕು ಎಂಬುದೇ ಮುಖ್ಯ. ಬಹುತೇಕ ಪುಸ್ತಕಗಳನ್ನು ಉಚಿತವಾಗಿಯೇ ಹಂಚುತ್ತಿದ್ದರು. ಒಂದು ಪುಸ್ತಕದಿಂದ ಹಣ ಗಳಿಸಬೇಕು ಎನ್ನುವುದಕ್ಕಿಂತ, ಪುಸ್ತಕದೊಳಗಿನ ಆಲೋಚನೆ ಬದುಕಿನಲ್ಲಿ ಯಾವುದಾದರೂ ಸಣ್ಣ ಬದಲಾವಣೆಗೆ ಕಾರಣವಾಗಬಹುದೇ ಎನ್ನುವುದು ಅವರಿಗೆ ಮುಖ್ಯವಾಗಿತ್ತು.

ಜನಪದ ಸಂಶೋಧಕರಾಗಿ ಬೆಳೆದ ಅಮೃತ ಸೋಮೇಶ್ವರರು ತಮ್ಮ ಮನೆಗೆ ಬಂದ ಕಿರಿಯ ಸಂಶೋಧಕರು, ಅಧ್ಯಯನಾರ್ಥಿಗಳಿಗೆ ನೀಡಿದ ಮಾಹಿತಿಯ ಪ್ರಮಾಣವೂ ಕಡಿಮೆಯಲ್ಲ. ಅವರ ಬಳಿ ಮಾಹಿತಿ ಕೇಳಿಕೊಂಡು ಹೋದ ಎಷ್ಟೋ ಮಂದಿ, ಗಂಟೆಗಟ್ಟಲೆ ಅವರ ಪಕ್ಕದಲ್ಲಿ ಕುಳಿತು ಮಾತನಾಡಿ, ಒಂದು ಪುಸ್ತಕ ಬರೆಯುವಷ್ಟು, ಒಂದು ಪಿಎಚ್.ಡಿ. ಪ್ರಬಂಧವನ್ನು ಮುಗಿಸುವಷ್ಟು ಮಾಹಿತಿಯನ್ನು ಬಗೆದುಕೊಂಡು ಹೋಗಿರುವುದನ್ನು ನಾನು ಕಂಡಿದ್ದೇನೆ. ಕೆಲವರು ನಂತರ ತಮ್ಮ ಕೃತಿಗಳಲ್ಲಿ ಅಮೃತರಿಗೆ ಕೃತಜ್ಞತೆ ಸೂಚಿಸಿದ್ದಾರೆ. ಇನ್ನೂ ಕೆಲವರ ಸಂಶೋಧನೆಯ ಹಿಂದೆ ಅಮೃತರ ಮಾತು, ನೆನಪು, ಅನುಭವ ಮತ್ತು ಅವರು ತೋರಿಸಿದ ದಾರಿ ಎಷ್ಟು ದೊಡ್ಡ ಪಾಲು ವಹಿಸಿದೆ ಎನ್ನುವುದು ಕೃತಿಯನ್ನು ಓದಿದಾಗ ಮಾತ್ರ ಗೊತ್ತಾಗುತ್ತದೆ. ಜನಪದ ಸಂಶೋಧನೆ ಎಂದರೆ ಕೇವಲ ಪುಸ್ತಕಗಳಲ್ಲಿ ಸಿಗುವ ಮಾಹಿತಿಯಲ್ಲ; ಬದುಕಿನೊಳಗೆ ಉಳಿದಿರುವ ನೆನಪುಗಳನ್ನು, ಆಚರಣೆಗಳನ್ನು, ಮಾತುಗಳನ್ನು, ನಂಬಿಕೆಗಳನ್ನು, ಮರೆತುಹೋಗುತ್ತಿರುವ ವಿವರಗಳನ್ನು ಹಿಡಿದುಕೊಳ್ಳುವ ಕೆಲಸ. ಈ ಸಂಪತ್ತನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಮುಂದಿನ ಪೀಳಿಗೆಯ ಸಂಶೋಧಕರಿಗೆ ಹಂಚಿಕೊಡುವ ದೊಡ್ಡ ಮನಸ್ಸು ಅಮೃತರಲ್ಲಿತ್ತು.

ಅವರ ಮನೆ ಒಲುಮೆಗೆ ಯಾರು ಬಂದರೂ ‘ಇಲ್ಲ’ ಎಂದು ಕಳುಹಿಸುವ ಸ್ವಭಾವ ಅವರದಲ್ಲ. ಕಿರಿಯ ಸಂಶೋಧಕನೋ, ವಿದ್ಯಾರ್ಥಿಯೋ, ಯಾವುದೋ ವಿಷಯದ ಬಗ್ಗೆ ಕುತೂಹಲ ಹೊಂದಿರುವ ಸಾಮಾನ್ಯ ವ್ಯಕ್ತಿಯೋ ಯಾರೇ ಬಂದರೂ ಅವರ ಮಾತನ್ನು ಕೇಳುತ್ತಿದ್ದರು. ತಮಗೆ ಗೊತ್ತಿರುವುದನ್ನು ಹಂಚಿಕೊಳ್ಳುವುದರಲ್ಲಿ ಅವರು ಯಾವುದೇ ಮಿತಿಯನ್ನು ಹಾಕಿಕೊಂಡಿರಲಿಲ್ಲ. ಕೆಲವೊಮ್ಮೆ ಒಂದು ಪ್ರಶ್ನೆಗೆ ಉತ್ತರಿಸುವುದರಿಂದ ಆರಂಭವಾದ ಮಾತು ಒಂದು ಗಂಟೆ, ಎರಡು ಗಂಟೆ ಸಾಗುತ್ತಿತ್ತು. ಆ ಮಾತಿನ ನಡುವೆ ಒಂದು ಹೆಸರು, ಒಂದು ಊರು, ಒಂದು ಆಚರಣೆ, ಒಂದು ಹಾಡು, ಒಂದು ಪ್ರಸಂಗ, ಒಂದು ಮರೆತುಹೋದ ಪುಸ್ತಕದ ಉಲ್ಲೇಖ ಹೀಗೆ ಸಂಶೋಧಕರಿಗೆ ಬೇಕಾದ ಅನೇಕ ಬಾಗಿಲುಗಳನ್ನು ಅವರು ತೆರೆದುಕೊಡುತ್ತಿದ್ದರು. ಸಂಶೋಧಕನಿಗೆ ಬೇಕಾದ ಮಾಹಿತಿಯನ್ನು ಕೊಟ್ಟು ‘ನನ್ನನ್ನು ಉಲ್ಲೇಖಿಸಬೇಕು’ ಎನ್ನುವ ನಿರೀಕ್ಷೆಗಿಂತ, ವಿಷಯ ಬೆಳಕಿಗೆ ಬರಬೇಕು, ಮುಂದಿನವರು ಅದನ್ನು ಅಧ್ಯಯನ ಮಾಡಬೇಕು ಎಂಬುದು ಅವರಲ್ಲಿ ಮುಖ್ಯವಾಗಿತ್ತು.

ಒಬ್ಬ ಸಂಶೋಧಕ ತನ್ನಲ್ಲಿ ಸಂಗ್ರಹವಾದ ಜ್ಞಾನವನ್ನು ತನ್ನ ಸ್ವಂತ ಆಸ್ತಿ ಎಂದು ಭಾವಿಸದೆ, ಅದನ್ನು ಮುಂದಿನ ಸಂಶೋಧಕರಿಗೆ ದಾಟಿಸಬೇಕಾದ ಹೊಣೆ ಎಂದು ತಿಳಿದುಕೊಂಡಾಗ ಮಾತ್ರ ಇಂಥ ಉದಾರತೆ ಸಾಧ್ಯ. ಅಮೃತರ ಮನೆ ಈ ಅರ್ಥದಲ್ಲಿ ಕೇವಲ ಒಬ್ಬ ಜನಪದ ಸಂಶೋಧಕರ ಮನೆಯಲ್ಲ; ಅನೇಕ ಕಿರಿಯ ಸಂಶೋಧಕರಿಗೆ ಅದು ಒಂದು ತೆರೆದ ಜನಪದ ಗ್ರಂಥಾಲಯವಾಗಿತ್ತು. ಬುದ್ಧಿಯ ಲಾಭ ಅಷ್ಟೇ ಅಲ್ಲ, ಅಮೃತರ ಮನೆಯಲ್ಲಿ ಆರ್ಥಿಕವಾಗಿ ಸೋತ ಎಷ್ಟೋ ಕಲಾವಿದರಿಗೆ ಹಣಕಾಸಿನ ನೆರವು ದೊರೆತ ದೃಷ್ಟಾಂತಗಳು ಇವೆ.

ಹಾಗಂತ ಸಾಹಿತ್ಯದ ಸ್ವಾಯತ್ತತೆ ಬೇರೆ, ಬದುಕಿನ ಸ್ವಾಯತ್ತತೆ ಬೇರೆ ಎಂಬುದನ್ನು ಅರಿತ ವ್ಯಕ್ತಿತ್ವ ಅವರದು. ಸಾಹಿತ್ಯದ ಮೂಲಕ ಅಧಿಕಾರವನ್ನು ಪಡೆಯಬೇಕು ಎನ್ನದವರವರು. ಸಾಹಿತ್ಯದ ಮೂಲಕ ತನ್ನ ಸುತ್ತ ಒಂದು ಗುಂಪನ್ನು ಕಟ್ಟಿಕೊಳ್ಳಬೇಕು ಎನ್ನದವರು. ತನ್ನನ್ನು ಕೇಂದ್ರವನ್ನಾಗಿ ಮಾಡಿಕೊಂಡು ಒಂದು ವಲಯ ಸೃಷ್ಟಿಸಿಕೊಳ್ಳುವ ಆಸೆಯೂ ಅವರದ್ದಲ್ಲ. ಅದಕ್ಕಾಗಿಯೇ ಬಹುಶಃ ತಮ್ಮೊಂದಿಗೆ ಯಾವುದೇ ರೀತಿಯಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲದವರನ್ನೂ ಅವರು ಮನುಷ್ಯರೆಂಬ ಕಾರಣಕ್ಕೆ ಹತ್ತಿರ ಇಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು.

ಅಮೃತರ ವಿನಯ ಅವರ ಸಾಹಿತ್ಯಕ್ಕಿಂತಲೂ ದೊಡ್ಡ ಗುಣವೆಂದು ಕೆಲವೊಮ್ಮೆ ಭಾವಿಸುತ್ತೇನೆ. ಏಕೆಂದರೆ ಸಾಹಿತ್ಯದ ಸಾಧನೆಗೆ ಪ್ರತಿಭೆ ಬೇಕು; ಆದರೆ ತನ್ನ ಪ್ರತಿಭೆಯ ನೆರಳಿನಲ್ಲಿ ಇತರರನ್ನು ಕಳೆದುಕೊಳ್ಳದೆ ಬದುಕಲು ಬೇರೆ ರೀತಿಯ ದೊಡ್ಡತನ ಬೇಕು. ನನಗಂತಲ್ಲ, ಕೊನೆಯವರೆಗೂ ಪುಸ್ತಕ ಓದಿ ಅವರು ಲೇಖಕರಿಗೆ ಬರೆಯುತ್ತಿದ್ದ ಒಂದು ಪತ್ರ, ಅಭಿಪ್ರಾಯದಲ್ಲಿ ಅಂತಹ ದೊಡ್ಡತನ ಅವರಲ್ಲಿತ್ತು.

ಅವರ ಸಾಮಾಜಿಕ ಸ್ಪಂದನೆಯ ಒಂದು ಸಣ್ಣ ಉದಾಹರಣೆ ಇಲ್ಲಿ ನೆನಪಿಸಿಕೊಳ್ಳಬೇಕೆನಿಸುತ್ತದೆ. ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಅವರ ಕಥೆ ಇಂದು ಎಲ್ಲರಿಗೂ ಗೊತ್ತಿದೆ. ಅವರಿಗೆ ಪದ್ಮಶ್ರೀ ಬಂದದ್ದು, ಅವರ ಹಿಂದೆ ನಿಂತ ಗುರುವಪ್ಪ ಬಾಳೆಪುಣಿ ಯಂಥ ಪತ್ರಕರ್ತರು, ಅವರ ಸಾಧನೆಯನ್ನು ದೇಶದ ಗಮನಕ್ಕೆ ತಂದ ಪ್ರಯತ್ನಗಳು ಇವೆಲ್ಲವೂ ದಾಖಲಾದ ಸಂಗತಿಗಳೇ. ಆದರೆ ಹಾಜಬ್ಬರ ಬಗ್ಗೆ ಮೊದಲ ಬಾರಿಗೆ ಲೇಖನ ಬರೆದವರಲ್ಲಿ ಅಮೃತ ಸೋಮೇಶ್ವರರೂ ಒಬ್ಬರು ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ.

ಆ ಕಾಲದಲ್ಲಿ ಸಂಜೆ ಪತ್ರಿಕೆ ಒಂದರಲ್ಲಿ ಆ ಲೇಖನ ಪ್ರಕಟವಾದಾಗ ಹಾಜಬ್ಬ ಅದನ್ನು ಓದಿ ಸಂತೋಷಪಟ್ಟು, ಕೃತಜ್ಞತೆಯ ಸಂಕೇತವಾಗಿ ಎರಡು ಗೆಂದಾಳಿ ಬೊಂಡವನ್ನು ಅಮೃತರಿಗೆ ತಂದುಕೊಟ್ಟಿದ್ದರು ಎಂಬ ಸಂಗತಿ ಅಮೃತರು ಬರೆದ ಪತ್ರವೊಂದರಲ್ಲಿ ದಾಖಲಾಗಿದೆ. ಎರಡು ಎಳನೀರು ದೊಡ್ಡ ಬಹುಮಾನವಲ್ಲ. ಆದರೆ ಒಬ್ಬ ಸಾಮಾನ್ಯ ಮನುಷ್ಯನ ಹೊಸ ಪ್ರಯತ್ನವನ್ನು ಸಮಾಜ ಗಮನಿಸಬೇಕು ಎಂದು ಅದನ್ನು ಮೊದಲೇ ಗುರುತಿಸಿದ ಬರಹಗಾರನಿಗೆ ಅದಕ್ಕಿಂತ ದೊಡ್ಡ ಪ್ರತಿಫಲ ಮತ್ತೇನು ಬೇಕು? ಅಮೃತರೊಳಗಿನ ಹೊಸತನವನ್ನು ಅರ್ಥಮಾಡಿಕೊಳ್ಳಲು ಇಂತಹ ಹತ್ತಾರು ಸಣ್ಣ ಸಣ್ಣ ಘಟನೆಗಳೇ ಸಾಕು.

ಅಮೃತರ ಬದುಕನ್ನು ನಾವು ಪ್ರಶಸ್ತಿಗಳ ಪಟ್ಟಿಯಿಂದ ಮಾತ್ರ ಓದಬಾರದು. ಅವರು ಎಷ್ಟು ಪ್ರಸಂಗ ಬರೆದರು, ಎಷ್ಟು ಪುಸ್ತಕ ಬರೆದರು, ಎಷ್ಟು ಸಂಶೋಧನೆ ಮಾಡಿದರು ಎಂಬ ಅಂಕಿಗಳಿಂದ ಅಳೆಯಬಾರದು. ಅವರ ಕಾಲದ ಬದುಕನ್ನು ಅವರು ಹೇಗೆ ನೋಡಿದರು, ತಮ್ಮ ಸುತ್ತಲಿನ ಮನುಷ್ಯರ ನೋವು-ಸಂತೋಷಗಳಿಗೆ ಹೇಗೆ ಪ್ರತಿಕ್ರಿಯಿಸಿದರು, ತಪ್ಪು ಕಂಡಾಗ ಎಷ್ಟು ನೇರವಾಗಿ ಮಾತನಾಡಿದರು, ತಮಗೆ ಸಿಗಬಹುದಾದ ಸ್ಥಾನಮಾನದ ಅವಕಾಶ ಪ್ರಚಾರಗಳನ್ನು ಎಷ್ಟು ನಿರ್ಲಕ್ಷಿಸಿದರು ಎಂಬುದನ್ನೂ ನೋಡಬೇಕು.

ಕರಾವಳಿಯಲ್ಲಿ ಈ ರೀತಿಯ ಸಾಮಾಜಿಕ ಸ್ಪಂದನದ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿದವರಲ್ಲಿ ಶಿವರಾಮ ಕಾರಂತರು ಪ್ರಮುಖರು. ಮಲ್ಪೆಗೆ ಬಂದ ಯಾವುದೋ ವಲಸೆ ಹಕ್ಕಿಯ ಬಗ್ಗೆ, ಮೀಯಪದವಿನ ಯಾವುದೋ ಪಾದೆ ಹೂವಿನ ಬಗ್ಗೆ, ಕಣ್ಣಿಗೆ ಬಿದ್ದ ಒಂದು ಸಣ್ಣ ಸಂಗತಿ ಇರಲಿ, ಅವುಗಳೆಲ್ಲವೂ ಕಾರಂತರಿಗೆ ಪತ್ರಿಕೆಯ ‘ಜನತಾವಾಣಿ’ಯಂತಹ ಅಂಕಣಗಳಿಗೆ ಅಥವಾ ಸಂಪಾದಕರಿಗೆ ಬರೆಯುವ ಪತ್ರಗಳಿಗೆ ವಸ್ತುವಾಗುತ್ತಿದ್ದವು. ಆ ಪತ್ರಗಳನ್ನು ಬರೆಯುವಾಗ ತಾನು ಕನ್ನಡದ ಶ್ರೇಷ್ಠ ಲೇಖಕ, ಜ್ಞಾನಪೀಠ ಪ್ರಶಸ್ತಿ ಪಡೆದವನು ಎಂಬ ಭಾವನೆ ಅವರಲ್ಲಿ ಇರುತ್ತಿರಲಿಲ್ಲ. ಸಮಾಜದ ಮುಂದೆ ಕಂಡ ಸಂಗತಿಗೆ ಒಬ್ಬ ನಾಗರಿಕನಾಗಿ, ಒಬ್ಬ ಬರಹಗಾರನಾಗಿ ಪ್ರತಿಕ್ರಿಯಿಸಬೇಕು ಎಂಬುದು ಮುಖ್ಯವಾಗಿತ್ತು.

ಇದೇ ದಾರಿಯಲ್ಲಿ ಅಮೃತರೂ ತಮ್ಮದೇ ರೀತಿಯಲ್ಲಿ ನಿರಂತರವಾಗಿ ಪ್ರತಿಕ್ರಿಯಿಸುತ್ತ ಬಂದವರು. ಆ ಪ್ರತಿಕ್ರಿಯೆಗಳು ಚಿಕ್ಕದಾಗಿದ್ದರೂ ಅವುಗಳ ಹಿಂದೆ ಇದ್ದ ಸಾಮಾಜಿಕ ಹೊಣೆಗಾರಿಕೆ ಚಿಕ್ಕದಲ್ಲ. ಬರಹಗಾರನ ಜವಾಬ್ದಾರಿ ಕೇವಲ ಕೃತಿ ರಚಿಸಿ ಮುಗಿಯುವುದಲ್ಲ; ತನ್ನ ಸುತ್ತ ನಡೆಯುತ್ತಿರುವುದನ್ನು ಗಮನಿಸಿ, ಅಗತ್ಯವಿದ್ದಾಗ ತನ್ನ ಧ್ವನಿಯನ್ನು ದಾಖಲಿಸುವುದೂ ಬರಹಗಾರನ ಬದುಕಿನ ಒಂದು ಮುಖ್ಯ ಭಾಗ ಎಂಬುದನ್ನು ಅಮೃತರ ಈ ಬರಹಗಳು ನಮಗೆ ನೆನಪಿಸುತ್ತವೆ.

(ಇಂದು ಸಂತ ಎಲೋಸಿಸ್ ಕಾಲೇಜ್ ಮಂಗಳೂರು ಇಲ್ಲಿ ಇಡೀ ದಿವಸ ಅಮೃತ ಸೋಮೇಶ್ವರ ಕುರಿತು ನೆನಪಿನ ಕಾರ್ಯಕ್ರಮ ವಿಚಾರಗೋಷ್ಠಿ, ಸಂವಾದ ನಡೆಯಲಿದೆ.

(ಅಂಕಣಗಾರರು: ಉಪನ್ಯಾಸಕರು, ಚಿಂತಕರು)

Tags

wordsFolk artsYakshaganaresearchnovelPoetry
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X