Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಮೇಸ್ತ್ರಿ.ಕಾಂ-ಹಳ್ಳಿಯ ಶ್ರಮಕ್ಕೀಗ...

ಮೇಸ್ತ್ರಿ.ಕಾಂ-ಹಳ್ಳಿಯ ಶ್ರಮಕ್ಕೀಗ ಡಿಜಿಟಲ್ ವಿಳಾಸ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ9 Aug 2026 12:43 PM IST
share
ಮೇಸ್ತ್ರಿ.ಕಾಂ-ಹಳ್ಳಿಯ ಶ್ರಮಕ್ಕೀಗ ಡಿಜಿಟಲ್ ವಿಳಾಸ!

ನಾವಿಂದು ಸ್ಮಾರ್ಟ್ ಸಿಟಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಿಜವಾದ ನಾಳೆಯ ಭಾರತವನ್ನು ಉಳಿಸುವುದು ಸ್ಮಾರ್ಟ್ ಹಳ್ಳಿಗಳೇ. ಜ್ಞಾನ ನಗರಗಳಲ್ಲಿ ಹುಟ್ಟಿ ಹಳ್ಳಿಗೆ ಬರಬೇಕು ಎನ್ನುವ ಕಾಲ ಮುಗಿದಿದೆ. ಜ್ಞಾನ ಹಳ್ಳಿಯಲ್ಲೇ ಹುಟ್ಟುವ ಕಾಲ ಆರಂಭವಾಗಬೇಕು. ವಡ್ಡಿನಕೊಪ್ಪದಂತಹ ಪುಟ್ಟ ಹಳ್ಳಿಯಲ್ಲಿ ಗೌತಮ್ ಬೆಂಗಳಿ ಮತ್ತು ಅವರ ತಂದೆ ವೆಂಕಟೇಶ್ ಬೆಂಗಳಿ ಮಾಡುತ್ತಿರುವ ಎರಡು ಪ್ರಯೋಗಗಳು ನನಗೆ ಆ ಭರವಸೆಯನ್ನು ನೀಡುತ್ತವೆ.

ದುರ್ಗಮ ಕಾಡು ರಸ್ತೆಯಲ್ಲಿ ಮಧ್ಯರಾತ್ರಿ ಕಾರು ಕೆಟ್ಟರೆ ಒಳಗಡೆ ಇದ್ದ ಚಾಲಕನೋ ಮಾಲಕನೋ ದಿಕ್ಕೆಡುವುದು ಸಹಜ. ಬಾನೆಟ್ ಎತ್ತಿ ವೈರ್ ಮುಟ್ಟಿ ನೋಡುವುದು, ಯಾರ್ಯಾರೂ ಅದೇ ರಸ್ತೆಯಲ್ಲಿ ಬರುತ್ತಾರೋ ಎಂದು ಗಮನಿಸುವುದು, ಪರಿಚಯದವರಿಗೆ ಫೋನ್ ಮಾಡುವುದು, ಹತ್ತಿರದ ಗ್ಯಾರೇಜನ್ನು ಹುಡುಕುವುದು ಇವೆಲ್ಲವೂ ಆ ಕ್ಷಣದ ಪ್ರತಿಕ್ರಿಯೆಗಳು.ಮಧ್ಯರಾತ್ರಿ ಕರೆ ಸ್ವೀಕರಿಸಿದರೂ, ಆ ಕ್ಷಣಕ್ಕೆ ಕಾರು ಸರಿಪಡಿಸುವ ಕೈ ನಿಮ್ಮ ಬಳಿ ತಲುಪುವುದಿಲ್ಲ. ಕೊನೆಗೆ ಕಾರನ್ನು ಅಲ್ಲೇ ಬಿಟ್ಟು ಮನೆಗೆ ಹಿಂದಿರುಗುವ ಪರಿಸ್ಥಿತಿ.

ಇದು ಕೇವಲ ನಿಮ್ಮೊಬ್ಬರ ಕಥೆಯಲ್ಲ ಅಥವಾ ಈ ಅಂಕಣದ ನಾಯಕ ಗೌತಮ್ ಬೆಂಗಳಿ ಅವರಿಗಾದ ಅನುಭವವೂ ಅಲ್ಲ. ಇವತ್ತಿನ ನಗರ ಮತ್ತು ಹಳ್ಳಿ ಭಾರತದ ಎಲ್ಲರ ಕಥೆಯೂ ಹೌದು.

ಬೆಳಗ್ಗೆ ಮಳೆ ನಿಂತ ಕೂಡಲೇ ಅಡಿಕೆ ತೋಟಕ್ಕೆ ಮದ್ದು ಬಿಡಬೇಕು. ಬಾಳೆ, ತೆಂಗು, ಕಾಫಿತೋಟಕ್ಕೆ ಗೊಬ್ಬರ ಹಾಕಬೇಕು. ತೆಂಗಿನ ಮರ ಏರಬೇಕು. ಮನೆ ಕಡೆ ವಾಲಿದ ಮರದ ಗೆಲ್ಲುಸವರಬೇಕು, ಅಡಿಕೆ ತೆಗೆಯಬೇಕು. ಗದ್ದೆ ಹೊಲ ಉಳುಮೆ ಮಾಡಬೇಕು. ಕೊಳವೆ ಬಾವಿಯಲ್ಲಿ ಸಿಲುಕಿದ ಪಂಪನ್ನು ಎತ್ತಬೇಕು. ಕಾಯಿಲೆ ಬಿದ್ದ ಮುದಿ ಅಜ್ಜನನ್ನು ನೋಡಿಕೊಳ್ಳಲು ಜನಬೇಕು. ಇಂತಹ ನೂರಾರು ಕೆಲಸಗಳು ರಾಶಿ ಬಿದ್ದಿರುತ್ತವೆ. ಬೇಕಾದಾಗ ಬೇಕಾದ ಕೆಲಸಕ್ಕೆ ಕುಶಲ ಕೂಲಿ ಆಳುಗಳು ಮಾತ್ರ ಈಗ ಸಿಗುವುದಿಲ್ಲ. ರೈತರಿಗಂತೂ ಹಣದ ಕೊರತೆಯಷ್ಟೇ ಅಲ್ಲ; ಮನುಷ್ಯನ ಕೊರತೆಯೂ ಗಂಭೀರವಾಗಿ ಕಾಡುತ್ತಿದೆ. ಇವೆಲ್ಲವೂ ಸೇರಿ ಮುಂದಿನ ದಿನಗಳಲ್ಲಿ ಕೃಷಿಯನ್ನು ದೊಡ್ಡ ಸಂಕಷ್ಟಕ್ಕೆ ತಳ್ಳುವ ಲಕ್ಷಣ ಕಾಣಿಸುತ್ತಿದೆ.

ಕೃಷಿ ಎಂದರೆ ಕಷ್ಟ, ಅನಿಶ್ಚಿತತೆ, ಕೂಲಿಕಾರರ ಅಭಾವ, ಆದಾಯದ ಅಸ್ಥಿರತೆ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಹಳ್ಳಿ ಮತ್ತು ಕೃಷಿಯು ಯುವಕರ ಕನಸಿನ ಭಾಗವಾಗದೆ, ಅನಿವಾರ್ಯ ಬದುಕಾಗಿ ಉಳಿಯುತ್ತಿರುವುದು ವಿಷಾದದ ಸಂಗತಿ. ಕೃಷಿಯನ್ನು ಉಳಿಸುವ ನಿಜವಾದ ದಾರಿ ಕೇವಲ ಭಾಷಣಗಳಲ್ಲಿಲ್ಲ. ತಂತ್ರಜ್ಞಾನಗಳಲ್ಲಿ ಇದೆ. ಅಂತಹ ಒಂದು ಸಣ್ಣ ಯೋಚನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ಯುವ ಐಟಿ ಇಂಜಿನಿಯರ್ ಹಾಗೂ ಕೃಷಿಕ ಮನೆಮಗ ಗೌತಮ್ ಬೆಂಗಳಿ ಅವರ ಮನಸ್ಸಿನಲ್ಲಿ ಹುಟ್ಟಿದೆ. ದುಡಿಯುವ ಮತ್ತು ದುಡಿಸುವ ಇಬ್ಬರನ್ನು ಸೇರಿಸುವ ತಾಂತ್ರಿಕ ವ್ಯವಸ್ಥೆಗೆ ಅವರಿಟ್ಟ ಹೆಸರು ಮೇಸ್ತ್ರಿ.ಕಾಂ ತನ್ನ ಹುಟ್ಟೂರು ಸೇರಿ ಬೆಂಗಳೂರು, ನೊಯ್ಡಾ ಮುಂತಾದ ಕಡೆ ಸಾಫ್ಟ್‌ವೇರ್ ಸಂಸ್ಥೆಯನ್ನು ನಡೆಸುತ್ತಿರುವ, 39ರ ಹರೆಯದ ಗೌತಮ್ ಅವರ ಜೀವ ಮತ್ತು ಜೀವನ ಯಾವತ್ತೂ ಹಳ್ಳಿಯಲ್ಲೇ ನೆಲೆಸಿದೆ. ಈ ಗ್ರಾಮಮುಖಿ ಯೋಚನೆಗೆ ಬುನಾದಿಯಾಗಿ ನಿಂತವರು ಅವರ ಕೃಷಿಕ ತಂದೆ ಸಮಾಜಮುಖಿ ಚಿಂತನೆಯ ವೆಂಕಟೇಶ್ ನಾರಾಯಣ ಹೆಗಡೆ ಬೆಂಗಳಿಯವರು.

ಈ ದೇಶದ ಆತ್ಮಭಾಗವಾಗಿರುವ ಹಳ್ಳಿಗಳಲ್ಲಿ ಕೆಲಸ ಮಾಡುವವರೂ ಇದ್ದಾರೆ. ಕೆಲಸ ಕೊಡುವವರೂ ಇದ್ದಾರೆ. ಆದರೆ ಇವರಿಬ್ಬರನ್ನು ಪರಸ್ಪರ ಜೋಡಿಸುವ ತಾಂತ್ರಿಕ ಆವಿಷ್ಕಾರವನ್ನು ಯಾರೂ ಮಾಡಿರಲಿಲ್ಲ. ಈಗ ಗೌತಮ್ ಮಾಡಿರುವ ಆ ಕೂಡು ಮಾಧ್ಯಮ ಆವಿಷ್ಕಾರ ‘ಮೇಸ್ತ್ರಿ.ಕಾಂ’ ಬಹುಶಃ ದೇಶದಲ್ಲಿ ಮೊದಲನೆಯದ್ದು!

ಇದೊಂದು ರೀತಿ ಗ್ರಾಮೀಣ ಭಾರತದ ಶ್ರಮಜೀವಿಗಳ ಡಿಜಿಟಲ್ ಜನಗಣತಿ. ಇಲೆಕ್ಟ್ರಿಷಿಯನ್, ಪ್ಲಂಬರ್, ಮೇಸ್ತ್ರಿ, ಬಡಗಿ, ಪೇಂಟರ್, ತೋಟದ ಕೆಲಸಗಾರ, ಅಡಿಕೆ ತೆಗೆಯುವ ಕೊನೆಗೌಡ, ಔಷಧಿ ಸಿಂಪಡಿಸುವ ಕಾರ್ಮಿಕ, ಪೂಜೆ ಭಟ್ರು, ಹೋಳಿಗೆ ಮಾಡುವವರು, ಹಿರಿಯರನ್ನು ನೋಡಿಕೊಳ್ಳುವವರು, ಬಾಡಿಗೆ ವಾಹನದ ಚಾಲಕರು, ಜೆಸಿಬಿ ಯಂತ್ರದ ಮಾಲಕರು, ತೋಟಕ್ಕೆ ಮಣ್ಣು ಹಾಕುವವರು. ಹೀಗೆ ಗ್ರಾಮೀಣ ಬದುಕಿನ ನೂರಾರು ವೃತ್ತಿಗಳನ್ನು ಮೇಸ್ತ್ರಿ. ಕಾಂ ಒಂದೇ ರೇಖೆಯಲ್ಲಿ ಜೋಡಿಸಿದೆ.

ಇದಕ್ಕಾಗಿಯೇ ನಿಯೋಜಿಸಲ್ಪಟ್ಟ ಕ್ಷೇತ್ರಾಧಿಕಾರಿಗಳು ಹಳ್ಳಿ ಹಳ್ಳಿಗೆ ಹೋಗಿ ಲಭ್ಯ ಕುಶಲಿಗಳ ಹೆಸರು, ಫೋಟೊ, ಫೋನ್ ಸಂಖ್ಯೆ, ವಿಳಾಸ, ಅನುಭವ, ಅಪೇಕ್ಷಿತ ಕೂಲಿ, ಪರಿಣತಿ ಎಲ್ಲವನ್ನೂ ಸಂಬಂಧಿಸಿದ ಆ್ಯಪ್ ನಲ್ಲಿ ದಾಖಲಿಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲೇ ಎರಡು ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ನೋಂದಾಯಿಸಿಕೊಂಡಿದ್ದಾರೆ. ಈ ವ್ಯವಸ್ಥೆಯ ದೊಡ್ಡ ವಿಶೇಷವೇನೆಂದರೆ ಇಲ್ಲಿ ಮಧ್ಯವರ್ತಿಗಳಿಲ್ಲ. ಕಮಿಷನ್ ಇಲ್ಲ. ಲಭ್ಯ ಪರಿಣತರಿಂದ ಒಂದು ರೂಪಾಯಿಯನ್ನೂ ಸಂಸ್ಥೆ ಪಡೆಯುವುದಿಲ್ಲ. ಕೆಲಸ ಕೊಡುವವನೂ ಕೆಲಸ ಮಾಡುವವನೂ ಪರಸ್ಪರ ನೇರವಾಗಿ ಮಾತನಾಡುತ್ತಾರೆ. ಕೂಲಿ ಎಷ್ಟು? ಯಾವಾಗ ಬರಬೇಕು? ಎಷ್ಟು ದಿನ ಕೆಲಸ? ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ. ಆದರೆ ನೋಂದಾಯಿತ ಕಾರ್ಮಿಕರ ಸಂಖ್ಯೆಗೆ ತಕ್ಕಂತೆ ಕೆಲಸದ ಬೇಡಿಕೆ ಇನ್ನೂ ಹೆಚ್ಚಾಗಿಲ್ಲ. ಇದಕ್ಕೆ ಕಾರಣ ಸೇವೆಯ ಕೊರತೆಯಲ್ಲ; ಹೊಸ ವ್ಯವಸ್ಥೆಯ ಪರಿಚಯ ಇನ್ನೂ ಹಳ್ಳಿಗಳ ಮೂಲೆಮೂಲೆಗೂ ತಲುಪಿಲ್ಲ. ಯಶೋಗಾಥೆಗಳು, ಬಾಯಿಂದ ಬಾಯಿಗೆ ಹರಡುವ ಅನುಭವಗಳು ಮತ್ತು ಪರಿಣಾಮಕಾರಿ ಪ್ರಚಾರ ಇನ್ನೂ ಸಂಪೂರ್ಣವಾಗಿ ಜನರನ್ನು ತಲುಪಬೇಕಿದೆ ಎನ್ನುತ್ತಾರೆ ಗೌತಮ್ .

ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳು, ಸಹಕಾರಿ ಸಂಘಗಳು, ರೈತರು ಸೇರುವ ಸ್ಥಳಗಳು ಮತ್ತು ಕೃಷಿ ಚಟುವಟಿಕೆಗಳ ಕೇಂದ್ರಗಳಲ್ಲಿ ಈ ಸೇವೆಯ ಕುರಿತು ಮಾಹಿತಿ ತಲುಪಿಸುವ ಪ್ರಯತ್ನಗಳು ಆರಂಭವಾಗಿವೆ. ಗ್ರಾಮಭಾರತವನ್ನೇ ಗುರಿಯಾಗಿಸಿ ರಚನೆಗೊಂಡ ಈ ವ್ಯವಸ್ಥೆಯ ನಿಜವಾದ ಶಕ್ತಿ ಗ್ರಾಮೀಣ ಜನರ ಬಳಕೆಯಲ್ಲೇ ಇದೆ. ವಿಸ್ತರಣೆಗೆ ಇರುವ ಇನ್ನೊಂದು ಮಿತಿ ಡಿಜಿಟಲ್ ಸಾಕ್ಷರತೆ. ಹಳ್ಳಿಯ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇದ್ದರೂ ಅದರ ಎಲ್ಲ ಸೌಲಭ್ಯಗಳನ್ನು ಬಳಸುವ ಪರಿಣತಿ ಇನ್ನೂ ಎಲ್ಲರಿಗೂ ಬಂದಿಲ್ಲ. ಕನ್ನಡದಲ್ಲಾಗಲಿ, ಇಂಗ್ಲಿಷ್‌ನಲ್ಲಾಗಲಿ ಅಕ್ಷರಗಳನ್ನು ಟೈಪ್ ಮಾಡಲು ಅನೇಕರಿಗೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಮಾತನಾಡಿದ ಮಾತನ್ನೇ ಮಾಹಿತಿಯಾಗಿ ಪರಿವರ್ತಿಸುವ ಧ್ವನಿ ಆಧಾರಿತ ವ್ಯವಸ್ಥೆಯನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎನ್ನುವ ಗೌತಮ್, ಕೃಷಿಯೇ ಬದುಕಿನ ಆಧಾರವಾಗಿರುವ ಗ್ರಾಮೀಣ ಪ್ರದೇಶದ ರೈತರು ಮತ್ತು ದುಡಿಮೆಗಾರರು ನಗರವಾಸಿಗಳಷ್ಟು ಮೊಬೈಲ್ ಬಳಕೆಯಲ್ಲಿ ನಿಪುಣರಾಗಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳುತ್ತಾರೆ. ಈ ಸವಾಲನ್ನು ಗೆಲ್ಲುವ ಕಾರಣಕ್ಕಾಗಿಯೇ ತಂತ್ರಜ್ಞಾನವನ್ನು ಇನ್ನಷ್ಟು ಸರಳಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಈ ಎಲ್ಲದರ ಹಿಂದಿರುವ ಗೌತಮ್ ಕುಟುಂಬ ಕಟ್ಟಲು ಹೊರಟಿರುವುದು ಕೇವಲ ಒಂದು ಕಂಪೆನಿಯನ್ನಲ್ಲ; ಗ್ರಾಮೀಣ ಭಾರತದ ದುಡಿಮೆಗೆ ಗೌರವ ತರುವ, ಹಳ್ಳಿ ಮತ್ತು ತಂತ್ರಜ್ಞಾನವನ್ನು ಒಂದೇ ಸೇತುವೆಯಲ್ಲಿ ಜೋಡಿಸುವ ಸಮ ಸಮಾಜದ, ಹಂಚಿಕೆಯ ನ್ಯಾಯದ ಹೊಸ ಮಾದರಿಯ ವ್ಯವಸ್ಥೆಯೊಂದನ್ನು.

ನನ್ನ ಗಮನವನ್ನು ಹೆಚ್ಚು ಸೆಳೆದದ್ದು ಅಡಿಕೆ ತೆಗೆಯುವ -ಬೋರ್ಡು ಸ್ಪ್ರೇ ಮಾಡುವ ಈಶ್ವರ ಗೌಡರದು. ಮೂವತ್ತು ವರ್ಷಗಳಿಂದ ಅವರ ಪರಿಚಯ ಹುಟ್ಟೂರು ವಡ್ಡಿನಕೊಪ್ಪ ದಾಟಿರಲಿಲ್ಲ. ಇಂದು ಅವರ ಫೋಟೋ, ಕೌಶಲ, ಅನುಭವ ಮೊಬೈಲ್ ಪರದೆಯಲ್ಲಿದೆ. ‘ಗೊನೆಗೌಡ’ ಎಂದು ಹುಡುಕಿದರೆ ಈಶ್ವರ ಗೌಡರು ಗೂಗಲ್ ಪರದೆಯಲ್ಲಿ ತೆರೆದುಕೊಳ್ಳುತ್ತಾರೆ. ಹಿಂದೆ ಅವರನ್ನು ಹುಡುಕಬೇಕಾಗಿತ್ತು; ಇಂದು ಕೆಲಸವೇ ಅವರನ್ನು ಹುಡುಕಿಕೊಂಡು ಬರುತ್ತಿದೆ. ಬೆಳಿಗ್ಗೆ ಎಂಟಕ್ಕೆ ಆರಂಭಿಸಿ ದಿನವಿಡೀ ಎಂಟು ಡ್ರಮ್ ಔಷಧಿ ಸಿಂಪಡಿಸಿ ಸಂಜೆ ಎಂಟು ಸಾವಿರ ರೂಪಾಯಿ ಸಂಪಾದಿಸುವ ಅವರಂಥ ಶ್ರಮಜೀವಿಗಳನ್ನು ಮೇಸ್ತ್ರಿ.ಕಾಂ ಈಗ ಊರಿನ ಗಡಿ ದಾಟಿಸಿದೆ.

ಇದು ಈಶ್ವರ ಗೌಡರೊಬ್ಬರ ಕಥೆಯಲ್ಲ. ಶಿರಸಿ ವ್ಯಾಪ್ತಿಯಲ್ಲಿ ಸಾವಿರಾರು ಗ್ರಾಮೀಣ ಕುಶಲಕರ್ಮಿಗಳ ಬದುಕಿನಲ್ಲಿ ಈಗ ನಡೆಯುತ್ತಿರುವ ಮೌನ ಕ್ರಾಂತಿಯ ಕಥೆ. ನಾವು ಆಗಾಗ ಕೃತಕ ಬುದ್ಧಿಮತ್ತೆ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಎಂದು ಹೆಮ್ಮೆಪಡುತ್ತೇವೆ. ಆದರೆ ಹಳ್ಳಿಯ ರೈತನ ಬದುಕನ್ನು ಸುಲಭಗೊಳಿಸದ ತಂತ್ರಜ್ಞಾನ ಎಷ್ಟೇ ಅದ್ಭುತವಾಗಿದ್ದರೂ ಅದರ ಮೌಲ್ಯ ಅಪೂರ್ಣ. ಬೆಳಗ್ಗೆ ತೋಟದ ಮಾಲಕನಿಗೆ ಸ್ಪ್ರೇ ಮಾಡುವ ಕಾರ್ಮಿಕನನ್ನು ತಕ್ಷಣ ಹುಡುಕಿಕೊಟ್ಟರೆ, ಅಡಿಕೆ ತೆಗೆಯುವ ಕೊನೆಗೌಡನನ್ನು ಸಮಯಕ್ಕೆ ತಲುಪಿಸಿದರೆ, ಜೆಸಿಬಿ ಅಥವಾ ಟ್ರ್ಯಾಕ್ಟರ್‌ನ್ನು ಒಂದು ಗಂಟೆಯೊಳಗೆ ಒದಗಿಸಿದರೆ, ವೃದ್ಧ ದಂಪತಿಗೆ ಕಾಯಿಲೆ ಬಿದ್ದಾಗಲೇ ಆರೈಕೆ ಮಾಡುವ ವ್ಯಕ್ತಿಯನ್ನು ಪರಿಚಯಿಸಿದರೆ ಅದೇ ನಿಜವಾದ ಡಿಜಿಟಲ್ ಕ್ರಾಂತಿ.

ಇಂದು ಕೃಷಿಗೆ ದೊಡ್ಡ ಸವಾಲು ನೀರಿನ ಕೊರತೆಯಲ್ಲ, ಗೊಬ್ಬರದ ಕೊರತೆಯಲ್ಲ, ಮಾರುಕಟ್ಟೆಯ ಕೊರತೆಯಲ್ಲ. ಸಮಯಕ್ಕೆ ಬೇಕಾದ ಕೂಲಿಯಾಳು ಸಿಗದಿರುವುದು. ಆ ಸಂಕಷ್ಟವನ್ನು ಕಡಿಮೆ ಮಾಡುವ ಪ್ರತಿಯೊಂದು ಪ್ರಯತ್ನವೂ ಕೃಷಿಯನ್ನು ಉಳಿಸುವ ಪ್ರಯತ್ನವೇ ಆಗುತ್ತದೆ.

ನನಗಂತೂ ‘ದಿ ಮೇಸ್ತ್ರಿ’ ಕೇವಲ ಒಂದು ಮೊಬೈಲ್ ಅಪ್ಲಿಕೇಶನ್ ಆಗಿ ಕಾಣುವುದಿಲ್ಲ. ಇದು ಗ್ರಾಮೀಣ ಭಾರತದ ಶ್ರಮದ ನಕ್ಷೆ. ಇಂತಹ ಸೇವೆಗಳು ಪ್ರತಿಯೊಂದು ಜಿಲ್ಲೆಯಲ್ಲಿ, ಪ್ರತಿಯೊಂದು ತಾಲೂಕಿನಲ್ಲಿ, ಮುಂದೊಂದು ದಿನ ಪ್ರತಿಯೊಂದು ಹೋಬಳಿಯಲ್ಲೂ ಹುಟ್ಟಬೇಕು. ಆಗ ರೈತನು ಕೆಲಸಗಾರನಿಗಾಗಿ ದಿನಗಟ್ಟಲೆ ಕಾಯಬೇಕಾಗುವುದಿಲ್ಲ. ಕೆಲಸಗಾರನು ಕೆಲಸಕ್ಕಾಗಿ ಊರು ಊರು ಅಲೆದಾಡಬೇಕಾಗುವುದಿಲ್ಲ. ಶ್ರಮಕ್ಕೆ ವೇಗ ಬರುತ್ತದೆ. ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ಮೂಡುತ್ತದೆ.

ಇಂಥ ಡಿಜಿಟಲ್ ಆಲೋಚನೆ ಹುಟ್ಟುವ ಮುಂಚೆಯೇ ಗೌತಮ್ ಬೆಂಗಳಿ ಹುಟ್ಟೂರಲ್ಲಿ ಇನ್ನೊಂದು ಪ್ರಯೋಗ ಮಾಡಿದ್ದರು. ಅದು ಮೇಸ್ತ್ರಿ.ಕಾಂಗಿಂತಲೂ ದೊಡ್ಡ ಸಾಮಾಜಿಕ ಪ್ರಯೋಗ. ಸಾಮಾನ್ಯವಾಗಿ ನಾವಿವತ್ತು ಹಳ್ಳಿಯಿಂದ ನಗರಕ್ಕೆ ಹೋಗುವ ಯುವಕರ ಬಗ್ಗೆ ಮಾತನಾಡುತ್ತೇವೆ. ಆದರೆ ನಗರವನ್ನೇ ಹಳ್ಳಿಗೆ ಕರೆತರುವ ಬಗ್ಗೆ ಎಷ್ಟು ಜನ ಯೋಚಿಸಿದ್ದಾರೆ? ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ವಡ್ಡಿನಕೊಪ್ಪ ಎಂಬ ಕೃಷಿಮೂಲ ಪುಟ್ಟ ಹಳ್ಳಿಯಲ್ಲಿ ಗೌತಮ್ ಮಾಡಿದ ಕೆಲಸ ಅದೇ. ಎಲ್ಲಾ ಸುಖ ದುಡ್ಡಿನಲ್ಲಿದೆ ಮತ್ತು ನಗರದಲ್ಲಿದೆ ಎಂಬ ಭ್ರಾಂತಿಯಿಂದನಮ್ಮ ಯುವಕರು ಹಳ್ಳಿ ತೊರೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಉದ್ಯೋಗವೆಂದರೆ ಕೇವಲ ಸಂಬಳವಲ್ಲ. ಘನತೆ, ಅವಕಾಶ, ಬೆಳವಣಿಗೆ, ಕಲಿಕೆ, ಜಗತ್ತಿನ ಜೊತೆ ಸಂಪರ್ಕ ಇವೆಲ್ಲವೂ ಅದರೊಳಗೆ ಸೇರಿವೆ. ಹಳ್ಳಿಯಲ್ಲಿ ಇವು ಸಿಗುವುದಿಲ್ಲ ಎನ್ನುವ ಭ್ರಮೆಯೇ ಲಕ್ಷಾಂತರ ಯುವಕರನ್ನು ಪ್ರತಿವರ್ಷ ನಗರಗಳ ಕಡೆಗೆ ತಳ್ಳುತ್ತಿದೆ.

ಉತ್ತರ ಕನ್ನಡ ಜಿಲ್ಲೆಯನ್ನೇ ಗಮನಿಸಿ. ಆ ಜಿಲ್ಲೆ ವಿದ್ಯಾವಂತರ ಜಿಲ್ಲೆ. ಓದುವ ಸಂಸ್ಕೃತಿ ಇರುವ ಜಿಲ್ಲೆ. ಪ್ರಕೃತಿಯ ಜೊತೆ ಬದುಕುವ ಮನುಷ್ಯರ ಜಿಲ್ಲೆ. ನೈತಿಕತೆ, ಸಾಂಸ್ಕೃತಿಕ ಸೂಕ್ಷ್ಮತೆ, ಸಾಮಾಜಿಕ ಜವಾಬ್ದಾರಿ ಇನ್ನೂ ಸಂಪೂರ್ಣವಾಗಿ ಕಳೆದುಹೋಗದ ಅಪರೂಪದ ಜಿಲ್ಲೆ. ಆದರೆ ಇದೇ ಜಿಲ್ಲೆಯಿಂದ ಸಾವಿರಾರು ಯುವಕರು ಬೆಂಗಳೂರು, ಪುಣೆ, ಗೋವಾ, ಹೈದರಾಬಾದ್‌ಗೆ, ವಿದೇಶಗಳಿಗೆ ಹೊರಡುತ್ತಿದ್ದಾರೆ. ಶಿರಸಿ ಎಂಬ ಪುಟ್ಟ ಪಟ್ಟಣದಿಂದ ಪ್ರತಿದಿನ ರಾತ್ರಿ ಬೆಂಗಳೂರಿಗೆ ಹೊರಡುವ ನೂರಾರು ಬಸ್ಸುಗಳನ್ನು ನೋಡಿದರೆ ಸಾಕು, ಅವು ಕೇವಲ ಪ್ರಯಾಣಿಕರನ್ನು ಮಾತ್ರ ಹೊತ್ತುಕೊಂಡು ಹೋಗುವುದಿಲ್ಲ; ಹಳ್ಳಿಯ ಭವಿಷ್ಯವನ್ನೂ ಹೊತ್ತುಕೊಂಡು ಹೋಗುತ್ತದೆ.

ಇಂತಹ ವಲಸೆಯ ಪರಿಣಾಮವನ್ನು ಈಗ ಪ್ರತೀ ಹಳ್ಳಿಗಳಲ್ಲಿ ನೋಡುತ್ತಿದ್ದೇವೆ. ದೊಡ್ಡ ದೊಡ್ಡ ಮನೆಗಳಲ್ಲಿ ವೃದ್ಧ ದಂಪತಿಗಳು ಮಾತ್ರ ಉಳಿದಿದ್ದಾರೆ. ಮಕ್ಕಳು ನಗರದಲ್ಲಿದ್ದಾರೆ. ಮೊಮ್ಮಕ್ಕಳು ನಗರದಲ್ಲೇ ಹುಟ್ಟಿ ಬೆಳೆಯುತ್ತಿದ್ದಾರೆ. ಹುಟ್ಟೂರುಗಳಲ್ಲಿ ಹೊಲ ಇದೆ, ತೋಟ ಇದೆ, ಅಡಿಕೆ ಇದೆ, ತೆಂಗು ಇದೆ. ಆದರೆ ದುಡಿಯುವ ಕೈಗಳಿಲ್ಲ. ಮಕ್ಕಳನ್ನು ಓದಿಸಿ ನಗರಕ್ಕೆ ಕಳುಹಿಸಿದವರು, ‘ನಮಗೆ ಬಂದ ಕಷ್ಟ ಮಕ್ಕಳಿಗೆ ಬರಬಾರದು’ ಎಂದವರು ಇಂದು ಅವರದೇ ಮಕ್ಕಳು ಹಳ್ಳಿಗೆ ಮರಳಿ ಬರದಿರುವ ನೋವನ್ನು ಮೌನವಾಗಿ ಹೊತ್ತುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲೇ ಯುವ ತಂತ್ರಜ್ಞ ಗೌತಮ್ ಬೆಂಗಳಿ ಅವರ ಮಾಡಿದ ‘ಡೆಲ್ಲಿಯನ್ನೇ ಹಳ್ಳಿಗೆ ತಂದ’ ಪ್ರಯೋಗವನ್ನು ನೋಡಬೇಕು.ಐಟಿ ಕಂಪೆನಿ ಕಟ್ಟಬೇಕಾದರೆ ಬೆಂಗಳೂರು ಬೇಕು, ಹೈದರಾಬಾದ್ ಬೇಕು, ಪುಣೆ ಬೇಕು ಎನ್ನುವುದು ನಮ್ಮ ಸಾಮಾನ್ಯ ಕಲ್ಪನೆ. ದೊಡ್ಡ ಕಟ್ಟಡಗಳು, ಗಾಜಿನ ಗೋಡೆಗಳು, ಇಪ್ಪತ್ನಾಲ್ಕು ಗಂಟೆ ವಿದ್ಯುತ್, ವೇಗದ ಇಂಟರ್ನೆಟ್, ವಿಮಾನ ನಿಲ್ದಾಣ, ಕಾಫಿ ಶಾಪ್, ಮೆಟ್ರೋ ಇವೆಲ್ಲವೂ ಇದ್ದಾಗ ಮಾತ್ರ ಐಟಿ ಬೆಳೆಯುತ್ತದೆ ಎಂದು ನಾವು ನಂಬಿದ್ದೇವೆ. ಐಟಿ ಎಂದರೆ ನಗರ, ನಗರ ಎಂದರೆ ಐಟಿ ಎಂಬ ಸಮೀಕರಣವನ್ನು ನಾವು ಮನಸ್ಸಿನಲ್ಲಿ ಬರೆದುಕೊಂಡಿದ್ದೇವೆ.

ಗೌತಮ್ ಅದನ್ನೇ ಪ್ರಶ್ನಿಸಿದರು. ಕೊರೋನ ನಂತರ ಅವರು ಹುಟ್ಟೂರು ವಡ್ಡಿನಕೊಪ್ಪದಲ್ಲೇ ಐಟಿ ಕಂಪೆನಿಯನ್ನು ಆರಂಭಿಸಿದರು. ಇಂದು ಜಗತ್ತಿನ ವಿವಿಧ ದೇಶಗಳಿಗೆ ತಾಂತ್ರಿಕ ಸೇವೆ ನೀಡುವ ಈ ಸಂಸ್ಥೆಹಳ್ಳಿಯ ಮೂವತ್ತಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕಲ್ಪಿಸಿದೆ. ನಗರಕ್ಕೆ ಹೋಗಲು ಸಿದ್ಧರಾಗಿದ್ದ ಹುಡುಗ-ಹುಡುಗಿಯರು ಬೆಳಿಗ್ಗೆ ತಮ್ಮ ಹುಟ್ಟೂರಲ್ಲೇ ಉಪಾಹಾರ ಮಾಡಿ, ತಮ್ಮ ಊರಲ್ಲೇ ಕೆಲಸಕ್ಕೆ ಹೋಗಿ, ಸಂಜೆ ಮತ್ತೆ ತಮ್ಮ ಕುಟುಂಬದ ಜೊತೆ ಸಮಯ ಕಳೆಯುವ ಬದುಕು ಸಾಧ್ಯವಾಗಿದೆ. ಇದು ಕೇವಲ ಉದ್ಯೋಗ ಸೃಷ್ಟಿಯಲ್ಲ. ಒಂದು ಕುಟುಂಬ, ಒಂದು ಹಳ್ಳಿಯನ್ನು ಒಡೆಯದಂತೆ ಕಾಪಾಡಿದ ಪ್ರಯತ್ನವೂ ಹೌದು. ಹೀಗೆ ಗೌತಮ್ ನಗರವನ್ನು ಹಳ್ಳಿಗೆ ತಂದರು. ಆದರೆ ನಗರವನ್ನು ಹಾಗೆಯೇ ನಕಲು ಮಾಡಲಿಲ್ಲ. ಹಳ್ಳಿಯ ಶಾಂತಿಯನ್ನು, ಹಸಿರನ್ನು, ಗಾಳಿಯನ್ನು, ಬದುಕಿನ ಲಯವನ್ನು ಉಳಿಸಿಕೊಂಡೇ ಜಗತ್ತಿನ ಮಟ್ಟದ ತಂತ್ರಜ್ಞಾನವನ್ನು ಅಲ್ಲಿಗೆ ತಂದರು. ಕಾಡು ಹಾದಿಯಲ್ಲಿ ಮರ ಬಿದ್ದು ಜಾಲ ತಪ್ಪುವುದು ಬೇಡ ಎಂದು ಗೌತಮ್ ನಾಲ್ಕು ಕಡೆಗಳಿಂದ ಅಂತರ್ಜಾಲ ಸಂಪರ್ಕ ಕಲ್ಪಿಸಿದರು. ಸೌರಶಕ್ತಿಯನ್ನು ಬಳಸಿಕೊಂಡು ನಿರಂತರ ವಿದ್ಯುತ್ ವ್ಯವಸ್ಥೆ ನಿರ್ಮಿಸಿದರು. ಜಾಗತಿಕ ಕಂಪೆನಿಗಳಿಗೆ ಸೇವೆ ನೀಡುವ ಮೂಲಸೌಕರ್ಯವನ್ನು ನಿರ್ಮಿಸಿದರು. ಅವರ ಐಟಿ ಕಚೇರಿಯ ಕಿಟಕಿ ತೆರೆದರೆ ಎದುರಿಗೆ ಕಾಂಕ್ರಿಟ್ ಕಾಡು ಕಾಣುವುದಿಲ್ಲ. ಮರಗಳು ಕಾಣುತ್ತವೆ. ಹೂವುಗಳು ಕಾಣುತ್ತವೆ. ಹಕ್ಕಿಗಳು ಕಾಣುತ್ತವೆ. ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತ ಯುವಕ ಆಯಾಸವಾದಾಗ ಹೊರಗೆ ಬಂದು ಹಸಿರನ್ನು ನೋಡಬಹುದು. ನೆಲಕ್ಕೆ ಕಾಲೂರಿ ನಡೆಯಬಹುದು ಪಕ್ಕದ ತೊರೆಯ ನೀರು ಕುಡಿಯಬಹುದು. ಪಾತರಗಿತ್ತಿ ಹಾರಾಡುವುದನ್ನು ನೋಡಬಹುದು. ಕೋಗಿಲೆಯ ಕೂಗು ಕೇಳಬಹುದು. ಎಸಿ ಗಾಳಿಗಿಂತ ನೈಸರ್ಗಿಕ ಗಾಳಿಯಲ್ಲಿ ಉಸಿರಾಡಬಹುದು. ನಗರದಲ್ಲಿ ಕಳೆದುಹೋಗುವ ಮನಸ್ಸು ಇಲ್ಲಿ ನಿಧಾನವಾಗಿ ಪ್ರಕೃತಿಯ ಜೊತೆ ಬೆರೆಯಬಹುದು.

ಒಂದು ಕಡೆ ಗೌತಮ್ ಕುಶಲಕರ್ಮಿಗಳನ್ನು ಗ್ರಾಹಕರೊಂದಿಗೆ ಜೋಡಿಸಿ ಕೃಷಿಯನ್ನು ಸುಲಭಗೊಳಿಸುತ್ತಿದ್ದಾರೆ. ಸಮಯಕ್ಕೆ ಕೆಲಸಗಾರ ಸಿಗದ ರೈತನಿಗೆ ಒಂದು ದಾರಿ ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ನಗರಕ್ಕೆ ಹೋಗುವ ವಿದ್ಯಾವಂತ ಯುವಕರನ್ನು ಹಳ್ಳಿಯಲ್ಲೇ ಉಳಿಸುತ್ತಿದ್ದಾರೆ.

ಒಂದು ಕೈಯಲ್ಲಿ ಶ್ರಮಕ್ಕೆ ಗೌರವ ಕೊಡುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಜ್ಞಾನಕ್ಕೆ ಊರಲ್ಲೇ ಅವಕಾಶ ಕೊಡುತ್ತಿದ್ದಾರೆ. ಈ ಎರಡರ ನಡುವೆ ಇರುವ ಸಂಬಂಧವನ್ನು ನಾವು ಅರ್ಥಮಾಡಿಕೊಳ್ಳಬೇಕು.

ಕೃಷಿಯನ್ನು ಉಳಿಸಬೇಕಾದರೆ ರೈತನನ್ನು ಮಾತ್ರ ಉಳಿಸಿದರೆ ಸಾಲದು. ರೈತನ ಸುತ್ತಲಿನ ಸಮಾಜವನ್ನೂ ಉಳಿಸಬೇಕು. ಹಳ್ಳಿಯಲ್ಲಿ ಬಡಗಿ ಇರಬೇಕು. ಮೇಸ್ತ್ರಿ ಇರಬೇಕು. ಪ್ಲಂಬರ್ ಇರಬೇಕು. ಸ್ಪ್ರೇ ಮಾಡುವವನು ಇರಬೇಕು. ಕೊನೆಗೌಡ ಇರಬೇಕು. ಕಂಪ್ಯೂಟರ್ ಇಂಜಿನಿಯರ್ ಕೂಡ ಇರಬೇಕು. ವೈದ್ಯ, ಶಿಕ್ಷಕ, ಉದ್ಯಮಿ, ತಂತ್ರಜ್ಞ ಎಲ್ಲರೂ ಹಳ್ಳಿಯಲ್ಲೇ ಬದುಕುವ ಅವಕಾಶ ಸಿಕ್ಕಾಗ ಮಾತ್ರ ಹಳ್ಳಿ ಜೀವಂತವಾಗಿರುತ್ತದೆ.

ನಾವಿಂದು ಸ್ಮಾರ್ಟ್ ಸಿಟಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಿಜವಾದ ನಾಳೆಯ ಭಾರತವನ್ನು ಉಳಿಸುವುದು ಸ್ಮಾರ್ಟ್ ಹಳ್ಳಿಗಳೇ. ಜ್ಞಾನ ನಗರಗಳಲ್ಲಿ ಹುಟ್ಟಿ ಹಳ್ಳಿಗೆ ಬರಬೇಕು ಎನ್ನುವ ಕಾಲ ಮುಗಿದಿದೆ. ಜ್ಞಾನ ಹಳ್ಳಿಯಲ್ಲೇ ಹುಟ್ಟುವ ಕಾಲ ಆರಂಭವಾಗಬೇಕು. ವಡ್ಡಿನಕೊಪ್ಪದಂತಹ ಪುಟ್ಟ ಹಳ್ಳಿಯಲ್ಲಿ ಗೌತಮ್ ಬೆಂಗಳಿ ಮತ್ತು ಅವರ ತಂದೆ ವೆಂಕಟೇಶ್ ಬೆಂಗಳಿ ಮಾಡುತ್ತಿರುವ ಈ ಎರಡು ಪ್ರಯೋಗಗಳು ನನಗೆ ಆ ಭರವಸೆಯನ್ನು ನೀಡುತ್ತವೆ.

ಒಂದು ಪ್ರಯೋಗದಲ್ಲಿ ಅವರು ಹಳ್ಳಿಯ ದುಡಿಯುವ ಕೈಗಳಿಗೆ ಡಿಜಿಟಲ್ ವಿಳಾಸ ಕೊಟ್ಟರು. ಇನ್ನೊಂದು ಪ್ರಯೋಗದಲ್ಲಿ ಹಳ್ಳಿಯ ಬುದ್ಧಿವಂತ ಯುವಕರಿಗೆ ಊರಲ್ಲೇ ಭವಿಷ್ಯ ಕೊಟ್ಟರು. ಈ ಎರಡು ಕೆಲಸಗಳಲ್ಲಿ ನನಗೆ ಕಾಣುವುದು ಕೇವಲ ತಂತ್ರಜ್ಞಾನವಲ್ಲ. ಹಳ್ಳಿಯನ್ನು ಉಳಿಸಬೇಕೆಂಬ ಒಂದು ತಲೆಮಾರಿನ ಪ್ರಾಮಾಣಿಕ ಕಾಳಜಿ.!

ಕೃಷಿಯ ಸಮಸ್ಯೆಯನ್ನು ನಾವು ಗೊಬ್ಬರದ ಸಮಸ್ಯೆ, ಮಾರುಕಟ್ಟೆಯ ಸಮಸ್ಯೆ, ಬೆಲೆಯ ಸಮಸ್ಯೆ ಎಂದು ಮಾತ್ರ ನೋಡುತ್ತೇವೆ. ಆದರೆ ಇನ್ನೊಂದು ದೊಡ್ಡ ಸಮಸ್ಯೆ ಇದೆ. ಕೃಷಿಯಲ್ಲಿ ಉಳಿಯಲು ಯುವಕರಿಗೆ ಕಾರಣಗಳು ಕಡಿಮೆಯಾಗುತ್ತಿವೆ. ಕೃಷಿ ಮಾಡುವ ಯುವಕನನ್ನು ಮದುವೆ ಯಾಗಲು ಹಿಂಜರಿಯುವ ಹುಡುಗಿಯರ ಸಂಖ್ಯೆಯೂ ಹೆಚ್ಚುತ್ತಿದೆ. ಕೃಷಿ ಎಂದರೆ ಕಷ್ಟ, ಅನಿಶ್ಚಿತತೆ, ದುಡಿಮೆ, ಏಕಾಂತ ಎನ್ನುವ ಚಿತ್ರ ಸಮಾಜದಲ್ಲಿ ನಿರ್ಮಾಣವಾಗಿದೆ. ಈ ಚಿತ್ರವನ್ನು ಬದಲಾಯಿಸದೆ ಕೃಷಿಯನ್ನು ಉಳಿಸಲು ಸಾಧ್ಯವಿಲ್ಲ.

Tags

village
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X