ಮಣ್ಣು ಬರೀ ಮಣ್ಣಲ್ಲ!

ನಮ್ಮ ಹಿರಿಯರ ಬಳಿ ಇವತ್ತಿನ ಭಾಷೆಯ ವಿಜ್ಞಾನ ಇರಲಿಲ್ಲ. ಆದರೆ ಮಣ್ಣಿನ ಉಸಿರು ಕೇಳಬಲ್ಲ ಕಿವಿ ಇತ್ತು. ಗಿಡದ ಬಣ್ಣ ನೋಡಿ ಅದರ ಹಸಿವು ಅರ್ಥಮಾಡಿಕೊಳ್ಳುವ ಕಣ್ಣು ಇತ್ತು. ಪ್ರಕೃತಿಯನ್ನು ಗೆಲ್ಲಬೇಕು ಎನ್ನುವ ಅಹಂಕಾರ ಇರಲಿಲ್ಲ; ಅದರ ಜೊತೆ ಬದುಕಬೇಕು ಎನ್ನುವ ವಿನಯ ಇತ್ತು. ಅದೇ ಕಾರಣಕ್ಕೆ ಅವರ ಹಲವಾರು ಕ್ರಮಗಳು ಇವತ್ತು ನಿಧಾನವಾಗಿ ಸಾವಯವ ವಿಜ್ಞಾನ, ಜೈವಿಕ ನಿಯಂತ್ರಣ, ಸಸ್ಟೇನಬಲ್ ಅಗ್ರಿಕಲ್ಚರ್ ಎಂಬ ಹೊಸ ಹೆಸರುಗಳೊಂದಿಗೆ ಮತ್ತೆ ವಿಶ್ವವಿದ್ಯಾನಿಲಯಗಳ ಬಾಗಿಲು ತಟ್ಟುತ್ತಿವೆ.
ನಮ್ಮ ಮನೆಯ ತೋಟದ ಮಧ್ಯದಲ್ಲಿ ನಾನು ಮೊದಲ ಬಾರಿಗೆ ಗುಂಡಿ ತೋಡಿದ ದಿನ ಇನ್ನೂ ನೆನಪಿದೆ. ನಲ್ವತ್ತು ವರ್ಷಗಳ ಹಿಂದಿನ ಮಾತದು. ಆ ಕಾಲದ ಪುತ್ತೂರಿನಲ್ಲಿ ಮಣ್ಣು ಪರೀಕ್ಷೆ ಎನ್ನುವ ಪದವೇ ಹೊಸದಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ತಜ್ಞರೊಬ್ಬರು ಮಣ್ಣನ್ನು ತೆಗೆದುಕೊಂಡು ಹೋದರೆ ಪರೀಕ್ಷಿಸಿ ಅದರೊಳಗಿನ ಸಾರ, ಕೊರತೆಯ ಅಂಶ ಎಲ್ಲವನ್ನೂ ಹೇಳಿಕೊಡುತ್ತಾರೆ ಎಂಬ ಸುದ್ದಿ ನನ್ನ ಕಿವಿಗೆ ಬಿದ್ದಿತ್ತು. ಆ ಸುದ್ದಿ ಕೇಳಿದ ಕ್ಷಣದಿಂದಲೇ ನನಗೆ ತೋಟದ ಮಣ್ಣು ಏಕಾಏಕಿ ಚೋದ್ಯದ ಗ್ರಂಥವಾಗಿ ಒಂದು ಬೆಳಗ್ಗೆ ತೋಟದ ನಡುವೆ ಗುಂಡಿ ತೋಡುತ್ತಾ, ಪದರ ಪದರವಾಗಿ ಮಣ್ಣು ಎತ್ತಿ ನೋಡುತ್ತಿದ್ದೆ.
ನನ್ನ ಅಪ್ಪಯ್ಯ ಅದನ್ನೆಲ್ಲ ದೂರದಿಂದಲೇ ಗಮನಿಸಿ, ಹತ್ತಿರ ಬಂದು, ‘‘ಅಲ್ಲೇನು ನೆಡುತ್ತಿ, ಇದೇನು ಹೊಸ ಕೆಲಸ?’’ ಎಂದು ಗದರಿಸುವಂತೆ ಕೇಳಿದರು. ನಾನು ದೊಡ್ಡ ವಿಜ್ಞಾನಿಯ ದಾಟಿಯಲ್ಲಿ, ಪರೀಕ್ಷೆಗಾಗಿ ಮಣ್ಣು ತೆಗೆದುಕೊಳ್ಳುತ್ತಿದ್ದೇನೆ. ಮಣ್ಣಿನಲ್ಲೇನು ಕೊರತೆ ಇದೆ ಎಂದು ಗೊತ್ತಾದರೆ ಅದಕ್ಕೆ ತಕ್ಕ ಗೊಬ್ಬರ ಹಾಕಿ ಕೃಷಿಯನ್ನು ಹೊಸ ರೀತಿಯಲ್ಲಿ ಕಟ್ಟಬಹುದು ಎಂದು ವಿವರಿಸಿದೆ.
ಅಪ್ಪಯ್ಯನ ಮುಖದಲ್ಲಿ ಮೂಡಿದ ಆಶ್ಚರ್ಯ ನನಗೆ ಇನ್ನೂ ಮರೆಯಾಗಿಲ್ಲ. ಅವರ ಅಚ್ಚರಿಯ ಕಣ್ಣಲ್ಲಿ ಎರಡು ಪ್ರಶ್ನೆಗಳಿದ್ದವು. ಒಂದು, ಈ ಲೋಕದಲ್ಲಿ ಮಣ್ಣನ್ನೂ ಕೂಡ ಪರೀಕ್ಷೆ ಮಾಡುತ್ತಾರೆಯೇ? ಇನ್ನೊಂದು, ಈ ಹುಡುಗನಿಗೆ ಏನೋ ಹೊಸ ಹುಚ್ಚು ಹಿಡಿದಿದೆ ಎಂದು.
ಇವತ್ತಿಗೂ ತಿರುಗಿ ನೋಡಿದರೆ ಅವತ್ತಿನ ಆ ದೃಶ್ಯದಲ್ಲಿ ವಿಚಿತ್ರ ವ್ಯಂಗ್ಯ ಕಾಣಿಸುತ್ತದೆ. ಆ ಕ್ಷಣದಲ್ಲಿ ನನಗೇ ನಾನು ದೊಡ್ಡ ವಿಜ್ಞಾನಿಯಂತೆ ಕಾಣುತ್ತಿದ್ದೆ. ನನ್ನ ಅಪ್ಪಯ್ಯ ಅಜ್ಞಾನಿಯಂತೆ ಕಾಣುತ್ತಿದ್ದರು. ಆದರೆ ವರ್ಷಗಳು ಕಳೆಯುತ್ತಾ ಹೋದಂತೆ ಕೃಷಿ ನನ್ನ ಕಿವಿಯಲ್ಲಿ ನಿಧಾನವಾಗಿ ಮತ್ತೊಂದು ಸತ್ಯ ಹೇಳತೊಡಗಿತು. ಕೃಷಿಯಲ್ಲಿ ಮಾತ್ರ ಅಜ್ಞಾನವೆಂದು ನಾವು ತಳ್ಳಿಬಿಡುವುದರಲ್ಲಿ ಕೆಲವೊಮ್ಮೆ ಮಣ್ಣಿನ ನಿಜವಾದ ಜ್ಞಾನ ಮಲಗಿರುತ್ತದೆ ಎಂಬುವುದು.
ನಮ್ಮ ಹಿರಿಯರು ವಿಶ್ವವಿದ್ಯಾನಿಲಯಗಳಲ್ಲಿ ಓದಿದವ ರಲ್ಲ. ಎಂದಿಗೂ ತನ್ನ ಬದುಕಿನ ಪಾಯವಾದ ಮಣ್ಣಿನ ಮಾದರಿಗಳನ್ನು ಲ್ಯಾಬೋರೇಟರಿಗಳಿಗೆ ಕಳುಹಿಸಿದವರಲ್ಲ. ಆದರೆ ಮಣ್ಣಿನ ಬಣ್ಣ, ಸಾಂದ್ರತೆ ನೋಡಿ ಅದರ ತ್ರಾಣ ಅರಿಯುತ್ತಿದ್ದರು. ಎಲೆಗಳ ಹೊಳಪು ನೋಡಿ ಗಿಡದ ಹಸಿವು ಗುರುತಿಸುತ್ತಿದ್ದರು. ಮಳೆಯ ವಾಸನೆ ಹಿಡಿದು ಬಿತ್ತನೆ ದಿನ ತೀರ್ಮಾನಿಸುತ್ತಿದ್ದರು. ಖಂಡಿತಾ ಇದು ಅವರ ಸರಳ ಅನುಭವವಲ್ಲ; ಬದುಕನ್ನು ಮಣ್ಣಿನೊಂದಿಗೆ ಬೆರೆಸಿ ಗಳಿಸಿದ ಬಹುದೊಡ್ಡ ನೆಲಜ್ಞಾನ.
ಆ ಜ್ಞಾನವನ್ನು ನಾವು ಬಹಳ ಸುಲಭವಾಗಿ ‘ಸಾಂಪ್ರದಾಯಿಕತೆ’ ಎಂದು ಕರೆದೇವು. ಆದರೆ ನಿಜವಾಗಿ ಅದು ನೆಲದೊಂದಿಗೆ ನಡೆಸಿದ ಸಾವಿರಾರು ವರ್ಷಗಳ ದೀರ್ಘ ಸಂವಾದದ ಸಾರ, ಕಾಲು ಕೈ ಮನಸ್ಸಿನಲ್ಲಿ ಮಣ್ಣು ಮೆಟ್ಟಿ ಮೆಟ್ಟಿ ಪಡೆದ ಅನುಭವ. ಆ ದಾರಿಯಲ್ಲಿ ಇವತ್ತು ವಿಜ್ಞಾನ ನಮ್ಮ ಕೈಗೆ ಅನೇಕ ಸಾಧನಗಳನ್ನು ಕೊಟ್ಟಿದೆ. ಮಣ್ಣು ಪರೀಕ್ಷೆ, ಎಲೆ ವಿಶ್ಲೇಷಣೆ, ಸೂಕ್ಷ್ಮ ಪೋಷಕಾಂಶಗಳು, ಡ್ರಿಪ್, ಸೆನ್ಸರ್‌ಗಳು - ಇವೆಲ್ಲವೂ ಕೃಷಿಯನ್ನು ಹೊಸ ದಿಕ್ಕಿಗೆ ಕರೆದೊಯ್ಯಬಲ್ಲ ಶಕ್ತಿಗಳು. ಅವುಗಳ ಅಗತ್ಯವನ್ನು ನಾನು ಪ್ರಶ್ನಿಸುವುದಿಲ್ಲ ಮತ್ತು ಅದರ ಪ್ರಯೋಜನವನ್ನು ನಾವೆಲ್ಲ ಪಡೆಯುತ್ತಿರುವವರೇ. ಆದರೆ ಸಮಸ್ಯೆ ಹುಟ್ಟುವುದು ಒಂದು ಜ್ಞಾನ ಮತ್ತೊಂದು ಜ್ಞಾನವನ್ನು ಸಂಪೂರ್ಣ ನಿರಾಕರಿಸಲು ಹೊರಟಾಗ.
ನಗರದ ವಿಜ್ಞಾನ ನಮ್ಮ ಅನ್ನ ಬೆಳೆಯುವ ಮಣ್ಣನ್ನು ಕೇವಲ ರಾಸಾಯನಿಕ ಸಮೀಕರಣವಾಗಿ ನೋಡುತ್ತದೆ. ಆದರೆ ಮಣ್ಣು ಕೇವಲ ಅಷ್ಟೇ ಅಲ್ಲ. ಅದು ಜೀವಂತ ದೇಹ. ಅದರೊಳಗೆ ನೆನಪುಗಳಿವೆ. ಅದರೊಳಗೆ ಋತುಗಳ ಅನುಭವವಿದೆ. ಅದರೊಳಗೆ ಮರಗಳ ನೆರಳು, ಹಕ್ಕಿಗಳ ಮಲ, ಬ್ಯಾಕ್ಟೀರಿಯಗಳ ಪದರ, ಮಳೆಯ ಹಾದಿ, ಬೇರುಗಳ ಉಸಿರು ಎಲ್ಲವೂ ಬೆರೆತಿವೆ.
ನನ್ನೊಬ್ಬ ಗೆಳೆಯ ತೈವಾನ್ ಪಪ್ಪಾಯಿಯ ಸಾವಿರ ಗಿಡಗಳನ್ನು ಬೆಳೆಸಿದ್ದರು. ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದವು. ಆದರೆ ಇನ್ನೂ ಕೊಬ್ಬಾಗಿ ಬರಬೇಕೆಂಬ ಆಸೆಯಿಂದ ಕೃಷಿ ವಿಜ್ಞಾನಿಯೊಬ್ಬರ ಸಲಹೆ ಕೇಳಿದರು. ವಿಜ್ಞಾನಿ ಅವರ ತೋಟ ನೋಡಲಿಲ್ಲ. ಮಣ್ಣು ಮುಟ್ಟಲಿಲ್ಲ. ಗಿಡದ ಎಲೆ ಕೂಡ ಪರಿಶೀಲಿಸಲಿಲ್ಲ. ಕುಳಿತಲ್ಲೇ, ಪ್ರತೀ ಬುಡಕ್ಕೂ ಇಷ್ಟಿಷ್ಟು ಯೂರಿಯಾ ಕೊಡಿ ಎಂದರು. ನನ್ನ ಗೆಳೆಯರು ಅದನ್ನೇ ಮಾಡಿದರು. ಎರಡು ದಿನಗಳಲ್ಲಿ ಸಾವಿರ ಗಿಡಗಳು ಒಂದೇ ದಮ್ಮಿಗೆ ಸತ್ತು ಹೋದವು. ತಪ್ಪಾದುದು ಅವರು ಕೊಟ್ಟ ರಾಸಾಯನಿಕದಲ್ಲಿ ಅಲ್ಲ. ಅದನ್ನು ಕೊಟ್ಟ ಕ್ರಮದಲ್ಲಿ ಮತ್ತು ಪ್ರಮಾಣದಲ್ಲಿ.
ಆ ದಿನ ನನಗೆ ಮತ್ತೊಮ್ಮೆ ಅಪ್ಪಯ್ಯ ನೆನಪಾದರು.
ಏಕೆಂದರೆ ನಮ್ಮ ಹಳೆಯ ಕೃಷಿಯಲ್ಲಿ ಅತಿಯಾದ ಹಸಿವೂ ವಿಷ, ಅತಿಯಾದ ಊಟವೂ ವಿಷ ಎನ್ನುವ ಮಣ್ಣಿನ ನೀತಿ ಇತ್ತು. ಗಿಡವನ್ನು ಎಳೆದು ಬೆಳೆಸಲು ಸಾಧ್ಯವಿಲ್ಲ ಎಂಬ ಅರಿವು ಇತ್ತು. ಮಣ್ಣು ಒಂದು ಮಗು ಅಲ್ಲ, ಒಂದು ಜೀವಸಂಸ್ಥೆ ಎಂಬ ವಿನಯವೂ ಇತ್ತು.
ಇವತ್ತು ಕೃಷಿಗೆ ದೊಡ್ಡ ಅಪಾಯ ಬರದಿಂದಲೋ ಮಳೆಯಿಂದಲೋ ಮಾತ್ರವಲ್ಲ; ಒಂದೇ ಜ್ಞಾನ ತನ್ನನ್ನೇ ಸಂಪೂರ್ಣ ಸತ್ಯವೆಂದು ಘೋಷಿಸುವ ಅಹಂಕಾರದಿಂದಲೂ ಬರುತ್ತಿದೆ.
ನಮಗೀಗ ನಮ್ಮ ಹಿರಿಯರ ನೆಲಜ್ಞಾನವೂ ಬೇಕು. ಹೊಸ ವಿಜ್ಞಾನವೂ ಬೇಕು. ಆದರೆ ಈ ಎರಡೂ ಎಲ್ಲೂ ಪರಸ್ಪರ ಯುದ್ಧ ಮಾಡದೆ ಒಂದಕ್ಕೊಂದು ಕೈಹಿಡಿಯಬೇಕು. ಕೃಷಿಯಲ್ಲಿ ಅನುಭವವಿಲ್ಲದ ವಿಜ್ಞಾನ ಅಪಾಯಕರ. ವಿಜ್ಞಾನವಿಲ್ಲದ ಅನುಭವವೂ ಕೆಲವೊಮ್ಮೆ ಮಿತಿಯೊಳಗೆ ಸಿಲುಕುತ್ತದೆ. ಈ ಎರಡರ ನಡುವೆ ಸೇತುವೆ ಕಟ್ಟಿದಾಗ ಮಾತ್ರ ಭವಿಷ್ಯದ ಕೃಷಿ ಆರೋಗ್ಯಕರವಾಗುತ್ತದೆ. ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ಒಂದಕ್ಕೆ ಒಂದು ಸೇರಿಸಿದರೆ ಎರಡು ಆಗುತ್ತದೆ. ಆದರೆ ಕೃಷಿಯಲ್ಲಿ ಹಾಗಾಗುವುದಿಲ್ಲ. ಇಲ್ಲಿ ಒಂದಕ್ಕೆ ಒಂದು ಸೇರಿಸಿದರೆ ಕೆಲವೊಮ್ಮೆ ಒಂದು ಆಗಬಹುದು, ಕೆಲವೊಮ್ಮೆ ಅದೇ ಮೂರು ಆಗಬಹುದು. ಏಕೆಂದರೆ ಕೃಷಿ ಕೇವಲ ಗಣಿತದ ವಿಷಯ ಮಾತ್ರವಲ್ಲ; ಅದು ಜೀವದ ವ್ಯವಹಾರವೂ ಹೌದು.
ಆ ಕಾರಣಕ್ಕೇ ಮಣ್ಣನ್ನು ಮುಟ್ಟದೆ ಕೃಷಿ ಅರ್ಥವಾಗುವುದಿಲ್ಲ. ಹಿರಿಯರನ್ನು ಕೇಳದೆ ಮಣ್ಣು ಅರ್ಥವಾಗುವುದಿಲ್ಲ. ವಿಜ್ಞಾನವನ್ನು ಅರಿಯದೆ ಅದೇ ಮಣ್ಣಿನ ಭವಿಷ್ಯವೂ ಅರ್ಥವಾಗುವುದಿಲ್ಲ. ಈ ಮೂರನ್ನೂ ಒಂದೇ ಕೈಯಲ್ಲಿ ಹಿಡಿಯಬಲ್ಲವನಿಗೇ ನಾಳೆಯ ಕೃಷಿ ತನ್ನ ಬಾಗಿಲು ತೆರೆದುಕೊಡಬಹುದು. ನಮ್ಮ ಮನೆಯ ಅಲಸಂಡೆ ಬಳ್ಳಿಗಳಿಗೆ ಬಂಬುಚ್ಚಿ ಬಿದ್ದರೆ ಅಪ್ಪಯ್ಯ ಯಾವುದೋ ಕಾಡುಬೂರೊಂದನ್ನು ಕಟ್ಟಿ ದೂರದಿಂದ ಅಲಸಂಡೆಯ ಬಳ್ಳಿಗೆ ಉರಿ ಜಮಾಯಿಸುವ ಹಾಗೆ ಮಾಡುತ್ತಿದ್ದರು ಅಥವಾ ಕೆಂಪು ಇರುವೆಗಳ ಮೂಡೆ ತಂದು ಅಲಸಂಡೆ ಬಳ್ಳಿಗಳ ಮೇಲೆ ಹಬ್ಬಿಸಿ ಬಿಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಆ ಇರುವೆಗಳು ಬಳ್ಳಿಯೊಳಗೆ ಹರಿದಾಡತೊಡಗುತ್ತವೆ. ಬಂಬುಚ್ಚಿ ನಿಧಾನವಾಗಿ ಮಾಯವಾಗುತ್ತದೆ. ಆಗ ನನಗೆ ಅದು ಕೇವಲ ಹಳ್ಳಿಗರ ತಂತ್ರದಂತೆ ಕಾಣುತ್ತಿತ್ತು. ಇವತ್ತು ಯೋಚಿಸಿದರೆ ಅದು ಪ್ರಕೃತಿಯೊಳಗಿಂದಲೇ ಹುಟ್ಟಿದ ಕೃಷಿ ವಿಜ್ಞಾನ. ಯಾವ ತರಕಾರಿಗೆ ಎಷ್ಟು ಬೂದಿ ಬೇಕು, ಯಾವ ಬಳ್ಳಿಗೆ ಎಷ್ಟು ಸುಡುಮಣ್ಣು ಹಾಕಬೇಕು, ಮಳೆಯ ಮುನ್ನ ಯಾವ ಬೀಜ ಬಿತ್ತಬೇಕು, ಭತ್ತದ ಬೀಜ ಮೊಳಕೆಗೆ ಹೇಗೆ ಸೆಗಣಿ ನೀರು ಹಚ್ಚಬೇಕು, ಮೊಳಕೆಯ ಮೇಲೆ ಯಾವ ಕಾಡುಸೊಪ್ಪು ಹಾಸಬೇಕು, ಬಿತ್ತಿದ ಮೇಲೆ ಗದ್ದೆಯಲ್ಲಿ ನೀರು ಹೇಗೆ ನಿಲ್ಲಬೇಕು... ಇವೆಲ್ಲ ನಮ್ಮ ಹಿರಿಯರು ಪುಸ್ತಕಗಳಿಂದ ಕಲಿತದ್ದಲ್ಲ. ಅವರ ವಿಶ್ವವಿದ್ಯಾನಿಲಯವೇ ಮಣ್ಣು, ಅವರ ಪ್ರಯೋಗಾಲಯವೇ ತೋಟ. ಅವರ ಬದುಕೇ ಒಂದು ಪಿಎಚ್.ಡಿ.
ಇವತ್ತು ಕೃಷಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗಿದೆ. ಪದವೀಧರರು ಹೆಚ್ಚಾಗಿದ್ದಾರೆ. ಹೊಸ ಹೊಸ ಸಂಶೋಧನೆಗಳು ಬರುತ್ತಿವೆ. ಬೆಳೆಗಳ ಉತ್ಪಾದನೆಯೂ ಕೆಲವೊಮ್ಮೆ ಹೆಚ್ಚಾಗಿದೆ. ಹಿಂದೊಮ್ಮೆ ಕೃಷಿಯಲ್ಲಿ ಔಷಧಿ ಎಂದರೆ ಕಷಾಯದ ವಾಸನೆ ಇತ್ತು, ಬೇವು, ಕಾಸರಕನ ಕಹಿ ಇತ್ತು. ಈಗ ಅದಕ್ಕೆ ಕಾರ್ಖಾನೆಯ ವಾಸನೆ ಬಂದಿದೆ. ಮಿಲಿ ಗ್ರಾಂನ ತೂಕ ಬಂದಿದೆ. ನಗರ ಬಿಡಿ, ಹಳ್ಳಿಯ ಗೊಬ್ಬರ ಅಂಗಡಿಗಳಿಗೆ ಹೋಗಿ ನೋಡಿದರೆ ಕೆಲವೊಮ್ಮೆ ಆಸ್ಪತ್ರೆಯ ಔಷಧಿ ಮಳಿಗೆಯೇ ನೆನಪಾಗುತ್ತದೆ. ಒಬ್ಬ ನಾಟಿ ಕೃಷಿಕ, ಬೆಳೆಗೆ ಏನೋ ಕಂಟಕ ಎಂದು ಬಾಯಿ ಬಿಡುವಷ್ಟರಲ್ಲಿ ಅಂಗಡಿಯವನ ಕೈಗೆ ಚೈತನ್ಯ ಬರುತ್ತದೆ. ಹೊಟ್ಟೆನೋವಿಗೆ ಡಾಕ್ಟರ್ ಐದಾರು ಮದ್ದು ಬರೆದುಕೊಟ್ಟ ಹಾಗೆ, ಇದನ್ನೂ ತೆಗೆದುಕೊಳ್ಳಿ, ಅದನ್ನೂ ಮಿಕ್ಸ್ ಮಾಡಿ, ಇದನ್ನೂ ಸಿಂಪಡಿಸಿ ಎಂದು ಬಾಟಲಿಗಳ ಸಾಲು ಕಟ್ಟುತ್ತಾನೆ. ಜೀವಮಾನದಲ್ಲಿ ಒಂದೇ ಒಂದು ಗಿಡ ನೆಡದ, ಬೀಜ ಬಿತ್ತದ ಆ ಅಂಗಡಿಯವನ ಮಾತು ಕೇಳಿದರೆ ಬೆಳೆ ಬದುಕುವುದಕ್ಕಿಂತ ಮದ್ದು ಬದುಕಬೇಕು ಎನ್ನುವ ಆತುರ ಹೆಚ್ಚು ಕಾಣಿಸುತ್ತದೆ!
ಮೊದಲು ಅಡಿಕೆಗೆ ಬೋರ್ಡೋ ಸ್ಪ್ರೇ ಕೊಡುವುದು ಮಾತ್ರ ಇತ್ತು. ಸುಣ್ಣ, ಮೈಲ್ ತುತ್ತು, ನೀರು ಅಷ್ಟೇ. ಈಗ ಅದೇ ಡ್ರಮ್ಮಿಗೆ ಎಷ್ಟು ಚೋದಕ, ಎಷ್ಟು ಹಾರ್ಮೋನ್, ಎಷ್ಟು ವಿಷ, ಎಷ್ಟು ಸ್ಟಿಕ್ಕರ್, ಎಷ್ಟು ಪೌಡರ್ ಬೆರೆಸುತ್ತಾರೆ ಎನ್ನುವುದನ್ನು ದೇವರೇ ಲೆಕ್ಕ ಹಾಕಬೇಕು. ನನ್ನೊಬ್ಬ ಗೆಳೆಯ ಮೊನ್ನೆ ಅಡಿಕೆ ಸಿಂಗಾರಕ್ಕೆ ಮದ್ದು ಬಿಡುವಾಗ ಎಂಟು ಬಗೆಯ ಔಷಧಿಯನ್ನು ಒಂದೇ ಡ್ರಮ್ಮಿಗೆ ಸುರಿದ. ಅವನಿಗೂ ಒಂದು ಭ್ರಮೆ; ಅಂಗಡಿಯವನಿಗೂ ಒಂದು ಭ್ರಮೆ ಈ ಎಂಟರಲ್ಲಿ ಖಂಡಿತ ಒಂದಾದರೂ ಕೆಲಸ ಮಾಡಬಹುದು ಎಂಬುವುದು! ಈ ಭ್ರಮೆಗಳೇ ಇವತ್ತು ಕೃಷಿಯ ದೊಡ್ಡ ರೋಗವಾಗಿ ಬೆಳೆದಿದೆಯೇನೋ ಅನ್ನಿಸುತ್ತದೆ.
ನಿಜವಾಗಿ ನಮ್ಮ ಬೆಳೆಗಳನ್ನು ಕೀಟಗಳು ನಾಶ ಮಾಡುತ್ತಿವೆಯೋ ಅಥವಾ ಕೀಟಗಳ ಭಯದಿಂದ ನಾವು ಸುರಿಯುತ್ತಿರುವ ವಿಷಗಳೇ ನಾಶ ಮಾಡುತ್ತಿವೆಯೋ ಎನ್ನುವುದು ಅರ್ಥವಾಗದ ಕಾಲಕ್ಕೆ ನಾವು ಬಂದು ಮುಟ್ಟಿದ್ದೇವೆ. ಗದ್ದೆ ತೋಟದ ಅಂಚಿನಲ್ಲಿ ನಿಂತ ಹಿರಿಯರು ಗಿಡದ ಎಲೆ ಮುಟ್ಟಿ ಅದರ ಕಾಯಿಲೆ ಹೇಳುತ್ತಿದ್ದ ಕಾಲವಿತ್ತು. ಈಗ ಮೊಬೈಲ್ ಫೋಟೊ ತೆಗೆದು ಹತ್ತು ಜನರಿಗೆ ಕಳುಹಿಸಿದರೂ ಖಚಿತ ಉತ್ತರ ಸಿಗುವುದಿಲ್ಲ. ಏಕೆಂದರೆ ಮಣ್ಣಿನ ಜೊತೆಗಿನ ಆತ್ಮೀಯತೆ ಕಡಿಮೆಯಾಗಿದೆ. ಅನುಭವದ ಜಾಗವನ್ನು ಉತ್ಪನ್ನಗಳ ಜಾಹೀರಾತು ಹಿಡಿದುಕೊಂಡಿದೆ. ಇಂತಹ ನಮ್ಮ ಮನೆಯ ಹಿರಿಯರು ಒಬ್ಬೊಬ್ಬರಾಗಿ ಹೋಗುತ್ತಿದ್ದಂತೆ ಮನೆಯೊಳಗಿನ ಧೈರ್ಯವೂ ಕಡಿಮೆಯಾಯಿತು. ಅವರು ಕೇವಲ ಮನುಷ್ಯರಲ್ಲ; ಕೃಷಿಯ ನೆನಪುಗಳಾಗಿದ್ದರು. ಮೋಡದ ಹರಿವು ನೋಡಿ ಮಳೆ ಊಹಿಸುವ ಕಣ್ಣುಗಳಾಗಿದ್ದರು. ಮಣ್ಣಿನ ವಾಸನೆ ಹಿಡಿದು ತೀರ್ಮಾನ ಮಾಡುವ ಒಳನೋಟವಾಗಿದ್ದರು.
ಈಗ ಮನೆಯಲ್ಲಿ ಹೊಸ ಪದವೀಧರರು ಹುಟ್ಟಿದ್ದಾರೆ. ಅವರು ಜಗತ್ತನ್ನು ಪುಸ್ತಕದ ಕಣ್ಣಿನಿಂದ ನೋಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಕೃಷಿಯನ್ನು ಕೇವಲ ವಿಜ್ಞಾನದ ಲೆಕ್ಕದಲ್ಲಿ ಮಾತ್ರ ನೋಡಲು ಶುರು ಮಾಡಿದಾಗ ಅಪಾಯ ಆರಂಭವಾಗುತ್ತದೆ.
ಏಕೆಂದರೆ ಕೃಷಿ ಎಂದರೆ ಕೇವಲ ಉತ್ಪಾದನೆಯ ತಂತ್ರಜ್ಞಾನವಲ್ಲ; ಅದು ಬದುಕಿನ ಸಮತೋಲನ.
ಹೊಸ ವಿಜ್ಞಾನ ಬೇಕು. ಹೊಸ ಪರಿಕರಗಳು ಬೇಕು. ಹೊಸ ಸಂಶೋಧನೆಗಳೂ ಬೇಕು. ಆದರೆ ಅವು ಮಣ್ಣಿನ ಮೇಲೆ ವಿನಯ ಕಳೆದುಕೊಂಡ ಕ್ಷಣದಿಂದಲೇ ಅವು ಅಪಾಯಕರವಾಗುತ್ತವೆ. ಹಿರಿಯರ ಅನುಭವವನ್ನು ಅಜ್ಞಾನ ಎಂದು ತಳ್ಳಿಬಿಟ್ಟ ಕ್ಷಣದಿಂದಲೇ ಕೃಷಿ ತನ್ನ ನೆಲೆ ಕಳೆದುಕೊಳ್ಳತೊಡಗುತ್ತದೆ.
ಇವತ್ತು ನಾವು ಮಣ್ಣಿಗಿಂತ ಮದ್ದಿನ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದೇವೆ. ಗಿಡದ ಪ್ರತಿರೋಧ ಶಕ್ತಿಗಿಂತ ಕಂಪೆನಿಯ ಬಾಟಲಿಯ ಮೇಲೆ ಹೆಚ್ಚು ಭರವಸೆ ಇಟ್ಟಿದ್ದೇವೆ. ಪ್ರಕೃತಿಯ ಚಕ್ರಕ್ಕಿಂತ ಮಾರುಕಟ್ಟೆಯ ಸಲಹೆಯನ್ನು ಹೆಚ್ಚು ಕೇಳುತ್ತಿದ್ದೇವೆ.
ಅದರಲ್ಲೇ ಎಲ್ಲೋ ಒಂದು ಕಡೆ ಕೃಷಿ ನಿಧಾನವಾಗಿ ತನ್ನ ಆತ್ಮ ಕಳೆದುಕೊಳ್ಳುತ್ತಿದೆ.
ಅವತ್ತು ಅಪ್ಪಯ್ಯ ಅಲಸಂಡೆ ಬಳ್ಳಿಯ ಮೇಲೆ ಕೆಂಪು ಇರುವೆ ಹರಿಬಿಟ್ಟಾಗ, ಬದನೆಯ ಪೀಡೆಗೆ ಬೇವು ಸಿಂಪಡಿಸಿದಾಗ ಅದು ನನಗೆ ಹಳ್ಳಿಯ ಮನುಷ್ಯನ ಚಿಕ್ಕ ಉಪಾಯದಂತೆ ಕಾಣಿಸಿತ್ತು. ಇವತ್ತು ಅದು ಒಂದು ತತ್ವದಂತೆ ಕಾಣುತ್ತದೆ. ಪ್ರಕೃತಿಯನ್ನು ಗೆಲ್ಲುವುದಲ್ಲ, ಅದರ ಜೊತೆಗೂಡಿ ಬದುಕುವುದೇ ಕೃಷಿಯ ನಿಜವಾದ ಜ್ಞಾನ. ಕೃಷಿಯಲ್ಲಿ ಮಾತ್ರ ಪರಿಗಣಿಸಬಹುದಾದ ವೈಚಿತ್ರವೇನೆಂದರೆ ಇಲ್ಲಿ ಅಜ್ಞಾನವೆಂದು ಕಾಣಿಸುವುದೇ ಕೆಲವೊಮ್ಮೆ ಆಳವಾದ ವಿಜ್ಞಾನವಾಗಿರುತ್ತದೆ; ವಿಜ್ಞಾನವೆಂದು ಘೋಷಿಸುವುದೇ ಕೆಲವೊಮ್ಮೆ ಅಪಾಯಕಾರಿ ಅಜ್ಞಾನವಾಗಿಬಿಡುತ್ತದೆ. ಬೇರೆ ಕ್ಷೇತ್ರಗಳಲ್ಲಿ ಇದು ಇಷ್ಟು ಸ್ಪಷ್ಟವಾಗಿ ಕಾಣಿಸದೇ ಇರಬಹುದು. ಆದರೆ ಕೃಷಿಯಲ್ಲಿ ಮಣ್ಣೇ ಅಂತಿಮ ತೀರ್ಪುಗಾರ. ಅದು ಪದವಿಯನ್ನು ನೋಡಿ ಫಲ ಕೊಡುವುದಿಲ್ಲ; ಅನುಭವವನ್ನು ನೋಡಿ ದಯೆ ತೋರುತ್ತದೆ. ಯಾವ ಜ್ಞಾನ ಬದುಕನ್ನು ಉಳಿಸುತ್ತದೆ, ಯಾವುದು ನಾಶಕ್ಕೆ ಒಯ್ಯುತ್ತದೆ ಎಂಬುದನ್ನು ಮಣ್ಣು ತನ್ನದೇ ರೀತಿಯಲ್ಲಿ ಪರೀಕ್ಷಿಸುತ್ತದೆ.
ನಮ್ಮ ಹಿರಿಯರ ಬಳಿ ಇವತ್ತಿನ ಭಾಷೆಯ ವಿಜ್ಞಾನ ಇರಲಿಲ್ಲ. ಆದರೆ ಮಣ್ಣಿನ ಉಸಿರು ಕೇಳಬಲ್ಲ ಕಿವಿ ಇತ್ತು. ಗಿಡದ ಬಣ್ಣ ನೋಡಿ ಅದರ ಹಸಿವು ಅರ್ಥಮಾಡಿಕೊಳ್ಳುವ ಕಣ್ಣು ಇತ್ತು. ಪ್ರಕೃತಿಯನ್ನು ಗೆಲ್ಲಬೇಕು ಎನ್ನುವ ಅಹಂಕಾರ ಇರಲಿಲ್ಲ; ಅದರ ಜೊತೆ ಬದುಕಬೇಕು ಎನ್ನುವ ವಿನಯ ಇತ್ತು. ಅದೇ ಕಾರಣಕ್ಕೆ ಅವರ ಹಲವಾರು ಕ್ರಮಗಳು ಇವತ್ತು ನಿಧಾನವಾಗಿ ಸಾವಯವ ವಿಜ್ಞಾನ, ಜೈವಿಕ ನಿಯಂತ್ರಣ, ಸಸ್ಟೇನಬಲ್ ಅಗ್ರಿಕಲ್ಚರ್ ಎಂಬ ಹೊಸ ಹೆಸರುಗಳೊಂದಿಗೆ ಮತ್ತೆ ವಿಶ್ವವಿದ್ಯಾನಿಲಯಗಳ ಬಾಗಿಲು ತಟ್ಟುತ್ತಿವೆ.
ಆದರೆ ಅದೇ ಸಮಯದಲ್ಲಿ, ಹಿರಿಯರ ಪ್ರತಿಯೊಂದು ಪದವೂ ಅಂತಿಮ ಸತ್ಯ ಎಂದು ಹಿಡಿದುಕೊಳ್ಳುವುದೂ ಕೂಡ ಅಷ್ಟೇ ಅಪಾಯಕಾರಿ. ಏಕೆಂದರೆ ಪ್ರಕೃತಿ ನಿರಂತರ ಬದಲಾಗುತ್ತಿದೆ. ಮಳೆ ಹಂಚಿಕೆ ಬದಲಾಗಿದೆ. ಬೀಜ ಬದಲಾಗಿದೆ. ಮಣ್ಣಿನ ದಣಿವು ಬದಲಾಗಿದೆ. ಕೀಟಗಳು ರಂಗೋಲಿಯಡಿ ತೂರಿಕೊಂಡಿವೆ. ಹೀಗಾಗಿ ಅನುಭವಕ್ಕೆ ವಿಜ್ಞಾನದ ಬೆಳಕು ಬೇಕು; ವಿಜ್ಞಾನಕ್ಕೆ ಅನುಭವದ ನೆರಳು ಬೇಕು. ಈ ಎರಡರಲ್ಲಿ ಒಂದನ್ನು ಇನ್ನೊಂದು ತಳ್ಳಿಬಿಟ್ಟ ಕ್ಷಣದಿಂದಲೇ ಕೃಷಿ ತನ್ನ ಸಮತೋಲನ ಕಳೆದುಕೊಳ್ಳುತ್ತದೆ.
ಖಂಡಿತ ಮುಂದಿನ ಕಾಲದ ಕೃಷಿ ಕೇವಲ ಹೊಸ ತಂತ್ರಜ್ಞಾನ ದಿಂದ ಮಾತ್ರ ಉಳಿಯುವುದಿಲ್ಲ; ಮಣ್ಣಿನೊಂದಿಗೆ ಮಾತನಾಡಬಲ್ಲ ಹಳೆಯ ಜ್ಞಾನದ ಜೊತೆ ಕೈಹಿಡಿದ ಹೊಸ ವಿಜ್ಞಾನದಿಂದ ಮಾತ್ರ ಉಳಿಯಬಹುದು. ಕೃಷಿಯ ಭವಿಷ್ಯ ಅಂದರೆ ಇದೇ. ಪರಂಪರೆಯ ವಿನಯ ಮತ್ತು ವಿಜ್ಞಾನದ ಪರಿಶೋಧನೆ ಒಂದೇ ಹೊಲದಲ್ಲಿ ಮತ್ತೆ ಭೇಟಿಯಾಗುವ ಕ್ಷಣ.






