Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಈ ಸೀತಾಪುರ ನನ್ನ ದೇರ್ಲವೂ ಹೌದು!

ಈ ಸೀತಾಪುರ ನನ್ನ ದೇರ್ಲವೂ ಹೌದು!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ30 Aug 2026 12:03 PM IST
share
ಈ ಸೀತಾಪುರ ನನ್ನ ದೇರ್ಲವೂ ಹೌದು!

‘ಮೋಕ್ಷ’ ಕಾದಂಬರಿ ನನಗೆ ಇಷ್ಟವಾಗುವುದಕ್ಕೆ ಅದರ ಕಥಾವಸ್ತು ಮಾತ್ರ ಕಾರಣವಲ್ಲ. ಅದು ಎತ್ತುವ ಪ್ರಶ್ನೆಗಳು, ದಾಖಲಿಸುವ ಬದಲಾವಣೆಗಳು ಮತ್ತು ಓದುಗರನ್ನು ಯೋಚನೆಗೆ ಹಚ್ಚುವ ಅದರ ಒಳಸುರಿ ಕಾರಣ. ಒಂದು ಹಳ್ಳಿ ಹೇಗೆ ಬದಲಾಗುತ್ತದೆ? ಅಲ್ಲಿಗೆ ರಸ್ತೆ ಬಂದರೆ ಏನಾಗುತ್ತದೆ? ಶಾಲೆ ಬಂದರೆ ಏನಾಗುತ್ತದೆ? ಆ ಶಾಲೆ ಇಂಗ್ಲಿಷ್ ಮಾಧ್ಯಮವಾಗಿ ಬದಲಾದರೆ ಏನಾಗುತ್ತದೆ? ಹಣದ ಹರಿವು ಹೆಚ್ಚಾದರೆ ಏನಾಗುತ್ತದೆ? ಊರಿನ ಭಾಷೆ, ಸಂಬಂಧ, ಗೌರವ, ಅಧಿಕಾರ, ಸಂಸ್ಕೃತಿ, ನಂಬಿಕೆಗಳು ಹೇಗೆ ರೂಪಾಂತರಗೊಳ್ಳುತ್ತವೆ? ಎಂಬ ಪ್ರಶ್ನೆಗಳಿಗೆ ಈ ಕಾದಂಬರಿ ಕಥೆಯ ಮೂಲಕ ಉತ್ತರ ಹುಡುಕುತ್ತದೆ.

ವೈಯಕ್ತಿಕವಾಗಿ ನಾನು ತುಂಬಾ ಗೌರವಿಸುವ ಸಾಹಿತಿ, ಸಂಘಟಕ, ಪ್ರಕಾಶಕ ಮತ್ತು ಸಂಸ್ಕೃತಿ ಪೋಷಕ ಎಂಬ ಹಲವು ಮುಖಗಳನ್ನು ಹೊಂದಿರುವ ಮೊಗಸಾಲೆಯವರು ಸಾಹಿತ್ಯವನ್ನು ಕೇವಲ ಬರವಣಿಗೆಯ ಕ್ರಿಯೆಯಾಗಿ ನೋಡದೆ, ಸಮಾಜವನ್ನು ರೂಪಿಸುವ ಜೀವಂತ ಶಕ್ತಿಯಾಗಿ ಪರಿಗಣಿಸಿದವರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅವರ ಅಚಲ ನಿಷ್ಠೆ ಕಾಂತಾವರವನ್ನು ಒಂದು ಸಾಂಸ್ಕೃತಿಕ ತಾಣವಾಗಿ ರೂಪಿಸಿದ್ದು ಮಾತ್ರವಲ್ಲ, ಗ್ರಾಮೀಣ ಕರ್ನಾಟಕದಲ್ಲಿ ಸಾಹಿತ್ಯ ಸಂಘಟನೆಗಳ ಸಾಧ್ಯತೆಗಳಿಗೆ ಒಂದು ಪ್ರಬಲ ಮಾದರಿಯನ್ನೂ ನಿರ್ಮಿಸಿದೆ.

ನಾ. ಮೊಗಸಾಲೆಯವರು ಇತ್ತೀಚಿನ ತನ್ನ ಹೊಸ ‘ಮೋಕ್ಷ’ ಕಾದಂಬರಿಗೆ ಮುನ್ನುಡಿ ಬರೆಯಬೇಕೆಂದು ನನ್ನನ್ನು ಸಂಪರ್ಕಿಸಿದಾಗ ನನಗೆ ಮೊದಲು ನೆನಪಾದದ್ದು ನನ್ನ ಅಸಮರ್ಥತೆಯೇ. ಮೊಗಸಾಲೆ ಅವರು ಕನ್ನಡದ ಹಿರಿಯ ಕವಿ, ಕಥೆಗಾರ, ಕಾದಂಬರಿಕಾರ, ಸಂಘಟಕ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದವರು. ನಾನು ಮುಖ್ಯವಾಗಿ ಗದ್ಯದ ಜಗತ್ತಿನಲ್ಲಿ ಓಡಾಡಿದವನು. ಕೃಷಿ ಪರಿಸರ ಎಂದು ಬಹುಪಾಲು ಮಣ್ಣಿನಲ್ಲೇ ಉಳಿದವನು. ಕಾವ್ಯ, ಕಥೆ, ಕಾದಂಬರಿ ಮೊದಲಾದ ಸೃಜನಶೀಲ ಸಾಹಿತ್ಯದ ಕ್ಷೇತ್ರದಲ್ಲಿ ನನ್ನ ಕೊಡುಗೆ ಅಷ್ಟೇನೂ ಇಲ್ಲ. ಹೀಗಿರುವಾಗ ಅವರ ಕಾದಂಬರಿಗೆ ಮುನ್ನುಡಿ ಬರೆಯುವುದು ನನ್ನ ಪಾಲಿಗೆ ಸುಲಭದ ಕೆಲಸವಾಗಿರಲಿಲ್ಲ. ನಿರಾಕರಿಸಲು ಮತ್ತೊಂದು ಕಾರಣವೂ ಇತ್ತು. ಲೇಖಕನ ಕೃತಿಯ ಮುಂದೆ ಮುನ್ನುಡಿಕಾರನಿಗೆ ಸಿಗುವ ಜಾಗ ಯಾವತ್ತೂ ಸೀಮಿತ. ಕೃತಿಯೇ ಮಾತನಾಡಬೇಕಾದಲ್ಲಿ ಮುನ್ನುಡಿ ಹೆಚ್ಚು ಮಾತನಾಡಬಾರದು. ಆದರೆ ಮೊಗಸಾಲೆಯವರ ವಿನಂತಿಯನ್ನು ನಿರಾಕರಿಸಲು ಮನಸ್ಸಾಗಲಿಲ್ಲ. ಅದಕ್ಕೆ ಕಾರಣ ಅವರ ಮೇಲಿನ ಗೌರವ ಮಾತ್ರವಲ್ಲ; ‘ಮೋಕ್ಷ’ ಕಾದಂಬರಿ ಓದಿದ ನಂತರ ಅದರೊಳಗೆ ಕಾಣಿಸಿಕೊಂಡ ಭಾರತದ ಹಳ್ಳಿ ಮತ್ತು ಅದು ಈ ದೇಶದ ಆತ್ಮಭಾಗವಾದ ನನ್ನ ಹಳ್ಳಿ. ನಾನು ನಿರಂತರ ಬರೆಯುತ್ತಿರುವ, ಸಾಂಸ್ಕೃತಿಕ ಪಲ್ಲಟಕ್ಕೆ ಒಳಗಾದ, ಜೀವಪರತೆಯನ್ನು ಕಳೆದುಕೊಂಡ ಹಳ್ಳಿ. ಈ ಕತೆ ನಡೆಯುವ ಸೀತಾಪುರ ಬೇರೆ ಅಲ್ಲ ನನ್ನ ದೇರ್ಲ ಬೇರೆ ಅಲ್ಲ!

ಈ ಕಾದಂಬರಿ ನನಗೆ ಇಷ್ಟವಾಗುವುದಕ್ಕೆ ಅದರ ಕಥಾವಸ್ತು ಮಾತ್ರ ಕಾರಣವಲ್ಲ. ಅದು ಎತ್ತುವ ಪ್ರಶ್ನೆಗಳು, ದಾಖಲಿಸುವ ಬದಲಾವಣೆಗಳು ಮತ್ತು ಓದುಗರನ್ನು ಯೋಚನೆಗೆ ಹಚ್ಚುವ ಅದರ ಒಳಸುರಿ ಕಾರಣ. ಒಂದು ಹಳ್ಳಿ ಹೇಗೆ ಬದಲಾಗುತ್ತದೆ? ಅಲ್ಲಿಗೆ ರಸ್ತೆ ಬಂದರೆ ಏನಾಗುತ್ತದೆ? ಶಾಲೆ ಬಂದರೆ ಏನಾಗುತ್ತದೆ? ಆ ಶಾಲೆ ಇಂಗ್ಲಿಷ್ ಮಾಧ್ಯಮವಾಗಿ ಬದಲಾದರೆ ಏನಾಗುತ್ತದೆ? ಹಣದ ಹರಿವು ಹೆಚ್ಚಾದರೆ ಏನಾಗುತ್ತದೆ? ಊರಿನ ಭಾಷೆ, ಸಂಬಂಧ, ಗೌರವ, ಅಧಿಕಾರ, ಸಂಸ್ಕೃತಿ, ನಂಬಿಕೆಗಳು ಹೇಗೆ ರೂಪಾಂತರಗೊಳ್ಳುತ್ತವೆ? ಎಂಬ ಪ್ರಶ್ನೆಗಳಿಗೆ ಈ ಕಾದಂಬರಿ ಕಥೆಯ ಮೂಲಕ ಉತ್ತರ ಹುಡುಕುತ್ತದೆ.

ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ನಾವು ಬಹಳ ಸುಲಭವಾಗಿ ಹೇಳುತ್ತೇವೆ. ಆದರೆ ಆ ಆತ್ಮ ಇವತ್ತು ಯಾವ ಸ್ಥಿತಿಯಲ್ಲಿದೆ ಎನ್ನುವ ಪ್ರಶ್ನೆಯನ್ನು ಅಷ್ಟೇ ಗಂಭೀರವಾಗಿ ಕೇಳುವುದಿಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಹಳ್ಳಿಗಳು ಬದಲಾದ ವೇಗ ಬಹುಶಃ ಕಳೆದ ಐನೂರು ವರ್ಷಗಳಲ್ಲಿ ಬದಲಾಗಿರಲಿಕ್ಕಿಲ್ಲ. ಹಿಂದೆ ಊರಿಗೆ ಬದಲಾವಣೆಗಳು ನಿಧಾನವಾಗಿ ಬರುತ್ತಿದ್ದವು. ಈಗ ಅವು ಒಂದರ ಹಿಂದೆ ಒಂದರಂತೆ ದೌಡಾಯಿಸುತ್ತಿವೆ. ಒಂದು ರಸ್ತೆ ಬರುತ್ತದೆ. ಅದರ ಹಿಂದೆ ವಾಹನಗಳು ಬರುತ್ತವೆ. ವಾಹನಗಳ ಹಿಂದೆ ಮಾರುಕಟ್ಟೆ ಬರುತ್ತದೆ. ಮಾರುಕಟ್ಟೆಯ ಹಿಂದೆ ಹೊಸ ಆಸೆಗಳು ಬರುತ್ತವೆ. ಹೊಸ ಆಸೆಗಳ ಹಿಂದೆ ಹೊಸ ಶಿಕ್ಷಣ ಪದ್ಧತಿ ಬರುತ್ತದೆ. ಅದರ ಹಿಂದೆ ವಲಸೆ ಬರುತ್ತದೆ. ವಲಸೆಯ ಹಿಂದೆ ಹಣ ಬರುತ್ತದೆ. ಹಣದ ಹಿಂದೆ ಮೌಲ್ಯಗಳ ಮರುಹಂಚಿಕೆ ಆರಂಭವಾಗುತ್ತದೆ. ಹೀಗೆ ಕಾಣದ ಅನೇಕ ಎಳೆಗಳು ಒಂದಕ್ಕೊಂದು ಹೆಣೆದುಕೊಂಡು ಊರಿನ ಆತ್ಮವನ್ನೇ ಬದಲಾಯಿಸಲು ಆರಂಭಿಸುತ್ತವೆ.

ಮಹಾತ್ಮಾ ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಆಧುನಿಕ ನಾಗರಿಕತೆಯ ಬಗ್ಗೆ ಮಾತನಾಡುವಾಗ ರಸ್ತೆ ಮತ್ತು ರೈಲುಗಳ ಪ್ರಶ್ನೆಯನ್ನು ಎತ್ತಿದ್ದರು. ಅದು ಕೇವಲ ಸಾರಿಗೆ ವ್ಯವಸ್ಥೆಯ ಪ್ರಶ್ನೆಯಾಗಿರಲಿಲ್ಲ. ಸಮಾಜದ ಸ್ವಭಾವ ಬದಲಾಗುವ ಪ್ರಶ್ನೆಯಾಗಿತ್ತು. ಮಾರುಕಟ್ಟೆ ಊರಿನೊಳಗೆ ನುಗ್ಗುವ ದಾರಿಗಳು ಯಾವುವು ಎಂಬ ಪ್ರಶ್ನೆಯಾಗಿತ್ತು. ‘ಮೋಕ್ಷ’ ಕಾದಂಬರಿ ಇದೇ ಪ್ರಶ್ನೆಯನ್ನು ತನ್ನದೇ ರೀತಿಯಲ್ಲಿ ಮುಂದುವರಿಸುತ್ತದೆ.

ಸೀತಾಪುರ ಇಲ್ಲಿ ಕೇವಲ ಹಳ್ಳಿಯಲ್ಲ. ಅದು ಈ ದೇಶದ ಸಾವಿರಾರು ಹಳ್ಳಿಗಳ ಪ್ರತಿನಿಧಿ. ಇಲ್ಲಿ ನಾನು ಕರ್ನಾಟಕದ ಒಂದು ಹಳ್ಳಿಯ ಕಥೆ ಓದುತ್ತಿದ್ದೇವೆ ಎಂದು ಭಾವಿಸುವಷ್ಟರಲ್ಲಿ ಅದು ಕೇರಳದ ಹಳ್ಳಿಯೂ ಆಗುತ್ತದೆ; ಮಹಾರಾಷ್ಟ್ರದ ಹಳ್ಳಿಯೂ ಆಗುತ್ತದೆ; ಬಿಹಾರದ ಹಳ್ಳಿಯೂ ಆಗುತ್ತದೆ. ಯಾಕೆಂದರೆ ಬದಲಾವಣೆಯ ಮಾದರಿ ಬಹುತೇಕ ಎಲ್ಲೆಡೆ ಒಂದೇ.

ಕಾದಂಬರಿಯ ಕೇಂದ್ರದಲ್ಲಿ ಕಾಣಿಸಿಕೊಳ್ಳುವ ವೆಂಕಪ್ಪಯ್ಯ ಈ ಬದಲಾವಣೆಗಳನ್ನು ನೋಡುವ ಸಾಕ್ಷಿಯೂ ಹೌದು, ಅವುಗಳೊಂದಿಗೆ ಬದುಕುವ ಮನುಷ್ಯನೂ ಹೌದು. ಈ ಕಥೆ ನಡೆಯುವುದು ಬಹುತೇಕ ಕಳೆದ ಶತಮಾನದಲ್ಲಿ. ಶಿಕ್ಷಕರಾಗಿರುವ ಅವರು ಒಂದು ಕಾಲದ ಭಾರತದ ಗ್ರಾಮೀಣ ನೈತಿಕತೆಯ ಪ್ರತಿನಿಧಿಯಂತೆ ಕಾಣಿಸುತ್ತಾರೆ. ನಮ್ಮ ದೇಶದಲ್ಲಿ ಅಧಿಕಾರದ ಎಲ್ಲ ಹುದ್ದೆಗಳಿಗೂ ಅವಧಿ ಇರುತ್ತದೆ. ಆದರೆ ‘ಮೇಷ್ಟ್ರು’ ಎಂಬ ಪದವಿಗೆ ನಿವೃತ್ತಿಯಿಲ್ಲ. ಒಮ್ಮೆ ಶಿಕ್ಷಕರಾದವರು ಜೀವಮಾನವಿಡೀ ಮೇಷ್ಟ್ರೇ. ಯಾಕೆಂದರೆ ಅವರು ಪಾಠ ಹೇಳುವುದಷ್ಟೇ ಮಾಡುವುದಿಲ್ಲ; ಊರನ್ನು ರೂಪಿಸುವ ಕೆಲಸದಲ್ಲೂ ಪಾಲ್ಗೊಳ್ಳುತ್ತಾರೆ.

ಒಂದು ತಲೆಮಾರಿನ ಮಕ್ಕಳನ್ನು ತಿದ್ದುವ ಶಿಕ್ಷಕ ಸಮಾಜದ ಮೇಲೆ ಪ್ರಭಾವ ಬೀರುತ್ತಾನೆ. ಎರಡು ತಲೆಮಾರಿನ ಮಕ್ಕಳಿಗೆ ಕಲಿಸುವ ಶಿಕ್ಷಕ ಊರಿನ ಮೇಲೆ ಪ್ರಭಾವ ಬೀರುತ್ತಾನೆ. ವೆಂಕಪ್ಪಯ್ಯ ಅಂತಹ ವ್ಯಕ್ತಿ. ಅವರ ಮಾತಿಗೆ ಊರು ಕಿವಿಗೊಡುತ್ತದೆ. ಅವರ ಬದುಕಿಗೆ ಊರು ಗೌರವ ಕೊಡುತ್ತದೆ. ಅವರು ಯಾವುದೇ ಅಧಿಕೃತ ಹುದ್ದೆಯಲ್ಲಿಲ್ಲದಿದ್ದರೂ ಅವರ ನೈತಿಕ ಅಧಿಕಾರವೇ ಅವರನ್ನು ಸಮಾಜದ ಮಧ್ಯವರ್ತಿಯನ್ನಾಗಿ ರೂಪಿಸುತ್ತದೆ.

ಈ ಕಾದಂಬರಿಯ ಒಂದು ವಿಶೇಷವೆಂದರೆ ಅದು ಬದಲಾವಣೆಯನ್ನು ವಿರೋಧಿಸುವುದಿಲ್ಲ; ಅದನ್ನು ಅಂಧವಾಗಿ ಸ್ವಾಗತಿಸುವುದೂ ಇಲ್ಲ. ಬದಲಾವಣೆ ಎಂಬ ಸಂಕೀರ್ಣ ಪ್ರಕ್ರಿಯೆಯನ್ನು ಅದು ಗಮನಿಸುತ್ತದೆ. ದತ್ತು ಪುತ್ರಿ ಪೂರ್ಣಿಮಾಳ ಬದುಕು, ಆಕೆಯ ಆಯ್ಕೆಗಳು, ಕುಟುಂಬದ ಒಳಸಂಘರ್ಷಗಳು, ಆಕೆ ಬರೆಯುವ ಪತ್ರ, ಹೊಸ ತಲೆಮಾರಿನ ಜೀವನದೃಷ್ಟಿ ಇವೆಲ್ಲವೂ ಹಳೆಯ ಮತ್ತು ಹೊಸ ಜಗತ್ತುಗಳ ನಡುವಿನ ಸಂಭಾಷಣೆಯಾಗಿ ಮೂಡುತ್ತವೆ.

ಇನ್ನೊಂದು ಕಡೆ ಕೇರಳದಿಂದ ಜಾರ್ಜ್ ಸೀತಾಪುರಕ್ಕೆ ಬರುತ್ತಾನೆ. ನೆಲದ ಕೊರತೆಯಿಂದ ಬಳಲಿದ ಕೇರಳದ ಬದುಕಿನಿಂದ ಹೊರಟು ಬಂದು ಕನ್ನಾಡಿನಲ್ಲಿ ಭೂಮಿ ಖರೀದಿಸುತ್ತಾನೆ. ರಬ್ಬರ್ ತೋಟ ಬೆಳೆಸುತ್ತಾನೆ. ಸ್ಥಳೀಯ ಭೂಗೋಳವೇ ಬದಲಾಗುತ್ತದೆ. ಮತ್ತೊಂದೆಡೆ ಗುತ್ತಿನ ಮನೆಗಳ ವಾರಸುದಾರರು ನಗರಗಳ ಅಪಾರ್ಟ್‌ಮೆಂಟ್‌ಗಳಿಗೆ ತೆರಳುತ್ತಾರೆ. ಅವರು ಬಿಟ್ಟ ಮನೆಗಳನ್ನು ಹೊಸ ಹಣದ ಮಾಲಕರು ಖರೀದಿಸುತ್ತಾರೆ. ಒಂದು ಕಾಲದಲ್ಲಿ ಬದುಕಿದ್ದ ಸಂಸ್ಕೃತಿ- ‘ಪರಂಪರಾ’ ಈಗ ಸಂಗ್ರಹಿಸಿಟ್ಟ ನೆನಪಾಗಿ ಉಳಿಯುತ್ತದೆ.

ಇಲ್ಲಿ ಮೊಗಸಾಲೆ ಅವರು ದಾಖಲಿಸುವುದು ಕೇವಲ ಭೂಮಿಯ ಮಾಲಕತ್ವದ ಬದಲಾವಣೆ ಅಲ್ಲ. ಸಾಂಸ್ಕೃತಿಕ ಅಧಿಕಾರದ ಬದಲಾವಣೆ. ಒಂದು ಸಮಾಜದ ಸ್ಮತಿ ಯಾರ ಕೈಯಲ್ಲಿರುತ್ತದೆ ಎಂಬ ಪ್ರಶ್ನೆ.

ಕಾದಂಬರಿಯ ಮಧ್ಯದಲ್ಲಿ ಕಾಣಿಸಿಕೊಳ್ಳುವ ಕುಪ್ಪಣ್ಣನ ಹೋಟೆಲ್ ಕೂಡ ಗಮನಾರ್ಹ. ಹಳ್ಳಿಯ ಹೋಟೆಲುಗಳು ಕೇವಲ ಚಹಾ ಕುಡಿಯುವ ಸ್ಥಳಗಳಲ್ಲ. ಅವು ಅನೌಪಚಾರಿಕ ವಿಶ್ವವಿದ್ಯಾನಿಲಯಗಳು. ಅಲ್ಲೇ ಸುದ್ದಿಗಳು ಹುಟ್ಟುತ್ತವೆ. ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅಲ್ಲೇ ಊರು ತನ್ನನ್ನು ತಾನೇ ಅರ್ಥ ಮಾಡಿಕೊಳ್ಳುತ್ತದೆ. ಮೋಕ್ಷದಲ್ಲಿ ಆ ಹೋಟೆಲ್ ಹಳ್ಳಿ ಮತ್ತು ಹೊರ ಜಗತ್ತಿನ ನಡುವಿನ ಸೇತುವೆಯಾಗಿ ನಿಲ್ಲುತ್ತದೆ.

ಈ ಕಾದಂಬರಿಯನ್ನು ಓದುತ್ತಿರುವಾಗ ಮತ್ತೆ ಮತ್ತೆ ಒಂದು ಪ್ರಶ್ನೆ ಕಾಡುತ್ತದೆ. ನಾವು ಹಳ್ಳಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೋ ಅಥವಾ ಅವುಗಳನ್ನು ಮಾರುಕಟ್ಟೆಯ ವಿಸ್ತರಣಾ ಕೇಂದ್ರಗಳನ್ನಾಗಿ ಮಾಡುತ್ತಿದ್ದೇವೋ? ರಸ್ತೆ, ಶಾಲೆ, ಬ್ಯಾಂಕ್, ಮೊಬೈಲ್, ಇಂಟರ್ನೆಟ್, ವಾಹನ, ಹಣ ಇವೆಲ್ಲ ಅಗತ್ಯವೇ. ಆದರೆ ಇವುಗಳ ಜೊತೆ ಹಳ್ಳಿಯ ಆತ್ಮವೂ ಉಳಿಯುತ್ತಿದೆಯೇ? ಅಥವಾ ಅದು ನಿಧಾನವಾಗಿ ಕರಗುತ್ತಿದೆಯೇ?

ಮೊಗಸಾಲೆಯವರು ಈ ಪ್ರಶ್ನೆಗಳಿಗೆ ನೇರ ಉತ್ತರ ಕೊಡುವುದಿಲ್ಲ. ಒಳ್ಳೆಯ ಕಾದಂಬರಿಕಾರನ ಕೆಲಸವೂ ಅದಲ್ಲ. ಅವರು ಬದುಕನ್ನು ನಮ್ಮ ಮುಂದೆ ಇಡುತ್ತಾರೆ. ಮನುಷ್ಯರನ್ನು ನಮ್ಮ ಮುಂದೆ ನಿಲ್ಲಿಸುತ್ತಾರೆ. ಅವರ ಆಯ್ಕೆಗಳು, ಸಂಘರ್ಷಗಳು, ಯಶಸ್ಸುಗಳು, ಸೋಲುಗಳು, ನಂಬಿಕೆಗಳು ಮತ್ತು ಗೊಂದಲಗಳನ್ನು ತೋರಿಸುತ್ತಾರೆ. ತೀರ್ಮಾನವನ್ನು ಓದುಗರಿಗೇ ಬಿಡುತ್ತಾರೆ.

ಅದೇ ಕಾರಣಕ್ಕೆ ‘ಮೋಕ್ಷ’ ಕೇವಲ ಒಂದು ಹಳ್ಳಿಯ ಕಥೆಯಲ್ಲ. ಅದು ಬದಲಾಗುತ್ತಿರುವ ಭಾರತದ ಕಥೆ. ಅಭಿವೃದ್ಧಿ ಮತ್ತು ಸಂಸ್ಕೃತಿಯ ನಡುವಿನ ಸಂಘರ್ಷದ ಕಥೆ. ನೆನಪು ಮತ್ತು ಮಾರುಕಟ್ಟೆಯ ನಡುವಿನ ಮಾತುಕತೆಯ ಕಥೆ. ಒಂದು ತಲೆಮಾರಿನ ಕನಸುಗಳು ಮತ್ತೊಂದು ತಲೆಮಾರಿನ ವಾಸ್ತವಗಳಾಗಿ ಬದಲಾಗುವ ಕಥೆ.

ಈ ಕಾದಂಬರಿಯ ಪುಟಗಳನ್ನು ತಿರುಗಿಸುತ್ತಿರುವಾಗ ಓದುಗನಿಗೆ ಸೀತಾಪುರ ಎಲ್ಲೋ ದೂರದ ಊರಾಗಿ ಕಾಣಿಸುವುದಿಲ್ಲ. ತನ್ನದೇ ಊರಿನ ಬೀದಿಗಳು, ತನ್ನ ಬಾಲ್ಯದ ದಾರಿಗಳು, ತನ್ನ ಕಣ್ಣೆದುರೇ ಬದಲಾಗುತ್ತಿರುವ ಹಳ್ಳಿಗಳು ನೆನಪಾಗುತ್ತವೆ. ಬಹುಶಃ ಇದೇ ‘ಮೋಕ್ಷ’ ಕಾದಂಬರಿಯ ದೊಡ್ಡ ಗೆಲುವು.

ಹಳ್ಳಿ ಬದಲಾಗುವುದು ಎಂದರೆ ಕೇವಲ ಮನೆಗಳ ವಿನ್ಯಾಸ ಬದಲಾಗುವುದಲ್ಲ. ಅದು ಮನುಷ್ಯರ ಕನಸುಗಳು ಬದಲಾಗುವುದು. ಹಿಂದೆ ಊರಿನ ಹುಡುಗ ದೊಡ್ಡವನಾದರೆ ತನ್ನ ಹೊಲದ ಅಳತೆಯಲ್ಲಿ ಕನಸು ಕಾಣುತ್ತಿದ್ದ. ಇಂದು ಅವನ ಕನಸು ದುಬೈ, ಬೆಂಗಳೂರು, ಮುಂಬೈಗಳ ಅಳತೆಯಲ್ಲಿ ಬೆಳೆಯುತ್ತದೆ. ಹಿಂದೆ ಮನೆಯ ಅಂಗಳದಲ್ಲಿ ಕೂತು ಹಿರಿಯರು ಹೇಳುತ್ತಿದ್ದ ಕಥೆಗಳು ಮಕ್ಕಳ ಕಲ್ಪನೆಯನ್ನು ರೂಪಿಸುತ್ತಿದ್ದವು. ಈಗ ಮೊಬೈಲ್ ಪರದೆಯ ಕಥೆಗಳು ಅದನ್ನು ನಿರ್ಧರಿಸುತ್ತಿವೆ. ಹಿಂದೆ ಹಳ್ಳಿಯ ಗುತ್ತು ತರವಾಡು, ನಾಗಬನ, ಅದರ ಪ್ರತಿಯೊಂದು ಮರ, ಹೊಳೆ, ದೈವಸ್ಥಾನ, ಗದ್ದೆ ಮತ್ತು ಬೀದಿಗೆ ಒಂದು ನೆನಪು ಅಂಟಿಕೊಂಡಿರುತ್ತಿತ್ತು. ಈಗ ಅವುಗಳ ಜಾಗದಲ್ಲಿ ಮೌಲ್ಯ ನಿಗದಿಪಡಿಸಿದ ಆಸ್ತಿ ದಾಖಲೆಗಳು ಕಾಣಿಸಿಕೊಳ್ಳುತ್ತಿವೆ. ಅಭಿವೃದ್ಧಿ ಎಂಬುದು ಅಗತ್ಯವೇ ಸರಿ; ಆದರೆ ಅದರ ವೇಗದಲ್ಲಿ ನೆನಪು, ಸಂಬಂಧ, ಸಮುದಾಯ ಮತ್ತು ಸಂವೇದನೆಗಳು ಹಿಂದೆ ಬೀಳುತ್ತಿವೆಯೇ ಎಂಬ ಪ್ರಶ್ನೆಯನ್ನು ‘ಮೋಕ್ಷ’ ನಮ್ಮ ಮುಂದೆ ಇಡುತ್ತದೆ. ಈ ಕಾರಣಕ್ಕಾಗಿಯೇ ಈ ಕಾದಂಬರಿ ಕೇವಲ ಸಾಹಿತ್ಯ ಕೃತಿಯಾಗಿ ಉಳಿಯದೆ ನಮ್ಮ ಕಾಲದ ಸಾಮಾಜಿಕ ದಾಖಲೆಯಾಗಿಯೂ ಮಹತ್ವ ಪಡೆಯುತ್ತದೆ. ನನ್ನನ್ನು ಹಗುರಗೊಳಿಸಿದ ಇಂಥದ್ದೊಂದು ಸೃಜನಶೀಲ ಕೃತಿಗಾಗಿ ಹೃದಯ ತುಂಬಿ ಕಾದಂಬರಿಕಾರ ಮೊಗಸಾಲೆ ಅವರಿಗೆ ಅಭಿನಂದಿಸುವೆ.

Tags

mano boomike
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X