ಪ್ರಕೃತಿಯ ಮತದಾನ, ಸೋಲುತ್ತಿರುವ ಮನುಷ್ಯ!

ಈಗ ನಮಗೆ ಪ್ರಕೃತಿಯ ಶಬ್ದ ಹೆಚ್ಚು ಬಲವಾಗಿ ಕೇಳುತ್ತಿದೆಯೆಂದರೆ - ನಾವು ಬಹಳ ಕಾಲದಿಂದ ಕಿವಿ ಮುಚ್ಚಿಕೊಂಡಿದ್ದೇವೆ ಎಂಬುದೇ ಸತ್ಯ. ಪ್ರಕೃತಿ ಯಾವಾಗಲೂ ನಿಷ್ಪಕ್ಷಪಾತಿ. ಅದು ಯಾರನ್ನೂ ಭೇದ ಮಾಡುವುದಿಲ್ಲ. ಆದರೆ ನಾವು ಅದರೊಳಗೆ ಬದುಕುತ್ತಾ ಅದರ ನ್ಯಾಯವನ್ನು ಮರೆತು ಬಿಟ್ಟಿದ್ದೇವೆ.
ಉತ್ತರದ ಹಿಮಾಚಲದಿಂದ ದಕ್ಷಿಣದ ಕೇರಳದವರೆಗೆ, ಪಶ್ಚಿಮದ ಮಹಾರಾಷ್ಟ್ರದಿಂದ ಪೂರ್ವದ ನಾಗಾಲ್ಯಾಂಡ್ ತನಕ ಈ ಬಾರಿ ಭಾರತದಲ್ಲಿ ಪ್ರಳಯಾಂತಕ ಮಳೆಯೇ. ನಿನ್ನೆ ಮೊನ್ನೆಯವರೆಗೆ ಉತ್ತರ ಭಾರತ, ಉತ್ತರ ಕರ್ನಾಟಕದಲ್ಲಂತೂ ಆಕಾಶಕ್ಕೆ ತೂತು ಬಿದ್ದ ಹಾಗೆ ರಕ್ಕಸ ಮಳೆ ಸುರಿದಿದೆ. ವಿದೇಶಗಳಲ್ಲೂ ಇದೇ ಕಥೆ. ಈ ವಾರದಲ್ಲಿ ಮತ್ತೆ ಮಳೆ ರಜೆ ಹೋಗಿದೆ ಎಂಬ ಕಾರಣಕ್ಕಾಗಿ ಅದು ಸೃಷ್ಟಿಸಿದ ಅವಾಂತರ ನಮಗೆ ಮರೆತು ಹೋಗಬಾರದು. ಮುಂದಿನ ಮಳೆಗಾಲವನ್ನು ಎದುರಿಸುವುದಕ್ಕೆ ಈ ಬೇಸಿಗೆಯಲ್ಲಿ ನಾವು ಸಿದ್ಧರಾಗಬೇಕು.
ಜಪಾನ್‌ನ ಹೊಳೆಯಲ್ಲಿ ಕಳೆದು ಹೋದ ಮನೆಗಳು, ಯೂರೋಪಿನ ಪ್ರವಾಹದಿಂದ ಕುಸಿದ ಸೇತುವೆಗಳು, ಅಮೆರಿಕದ ಚಂಡಮಾರುತದಿಂದ ನಾಶವಾದ ಹಳ್ಳಿ-ಪಟ್ಟಣಗಳು ಎಲ್ಲೆಡೆ ಪ್ರಕೃತಿಯದ್ದು ಮೇರೆ ಮೀರಿದ ಒಂದೇ ಶಬ್ದ. ಭಯಂಕರ ಬುದ್ಧಿಜೀವಿಗಳಾದ ನಮ್ಮ ಕಡೆ ಅದು ಬೆರಳಿಟ್ಟು ಹೇಳುವುದಿಷ್ಟೇ ನಾನಲ್ಲ, ನೀನು ಮೀರಿದ್ದೀಯ! ಎಂದು!
ಕೊರತೆ ಎಂದರೆ ನಮ್ಮ ಮಾಧ್ಯಮಗಳಲ್ಲಿ ಪ್ರಕೃತಿ ವಿಕೋಪದ ಕಥೆಗಳು ಇತ್ತೀಚೆಗೆ ಕ್ಷೀಣವಾಗುತ್ತಿವೆ. ಮನುಷ್ಯ ಕೇಂದ್ರಿತ ವಿಸಂಗತಿಗಳೇ ಪ್ರತೀ ದಿನ ನಮ್ಮ ಮನೆ-ಮನಸ್ಸಿನ ಮುಂದೆ ರಾಶಿ ಸುರಿಯುತ್ತವೆಯೇ ಹೊರತು ಪ್ರಕೃತಿ ವಿಕೃತಿಯ ಗಾಥೆಗಳು ಮನುಷ್ಯ ಮನಸ್ಸು ಎಚ್ಚರಗೊಳ್ಳುವಷ್ಟು ತಲುಪುತ್ತಿಲ್ಲ. ನಿಜವಾಗಿಯೂ ಎದ್ದು ತೋರಬೇಕಾದ ಹೆಡ್ಡಿಂಗ್‌ಗಳು ಬ್ರೇಕಿಂಗ್ ನ್ಯೂಸ್‌ಗಳು ಅವೇ ಆಗಬೇಕಾಗಿತ್ತು. ಬದಲಾಗಿ ಮನುಷ್ಯ ಜಗಳಗಳು, ಯುದ್ಧದ ಹೋಳು, ಧರ್ಮದ ಕಲಹ, ರಾಜಕೀಯದ ಕುತಂತ್ರ, ಸಿನೆಮಾ ನಟರ ಡೈವೋರ್ಸ್, ಬಣ್ಣದ ದ್ವೇಷ ಇವೇ ಇತ್ತೀಚೆಗೆ ನಮ್ಮ ಸುದ್ದಿಪೆಟ್ಟಿಗೆಗಳಲ್ಲಿ ರಾಶಿ ಸುರಿಯುತ್ತಿವೆ.
ಪ್ರಾಕೃತಿಕ ಭಯಾನಕಗಳು ಈ ಭೂಮಿಯ ಮನುಷ್ಯನ ಮರ್ಮದಲ್ಲಿ ನಿರಂತರ ಉಳಿಯಬೇಕು, ಅವು ಶಾಶ್ವತ ಪ್ರಜ್ಞೆಯಾಗಬೇಕು. ಯಾವುದೋ ರಾಜ್ಯದಲ್ಲಿ ಗುಡ್ಡ ಜರಿದದ್ದು, ಸೇತುವೆ ಮುರಿದದ್ದು, ಮನುಷ್ಯಮಳೆಯಲ್ಲಿ ಕೊಚ್ಚಿಕೊಂಡು ಹೋದದ್ದು ಇವೆಲ್ಲವೂ ನಮ್ಮ ಸಂಕಟಗಳು ಆದಾಗ ಭಾಗಶಃ ಇವೆಲ್ಲ ನಮ್ಮೊಳಗಡೆ ಸ್ಥಿರವಾಗಿ ಉಳಿಯುವ ಸಾಧ್ಯತೆಗಳಿವೆ. ಪ್ರಕೃತಿ ಕಮರಿದ ಸುದ್ದಿಗಳು ಈ ಭೂಮಿಯನ್ನು ಸುರಕ್ಷಿತವಾಗಿ ಮುಂದಿನ ತಲೆಮಾರಿಗೆ ದಾಟಿಸುವ ಹಾಗೆ ಸಂರಕ್ಷಣೆಯ ಭಾವವನ್ನು ನಮ್ಮೊಳಗಡೆ ಮೇಳೈಸುವಂತಿರಬೇಕು. ಮನುಷ್ಯ ಮನುಷ್ಯನನ್ನೇ ಸಾಯಿಸಿದಾಗ ಚಿಮ್ಮುವ ರಕ್ತಕ್ಕಿಂತ, ಅವನ ವರ್ಣ, ಜಾತಿ, ನಂಬುವ ದೇವರು, ನಂಬಿಕೆಗಳಿಗಿಂತ ಭೂಮಿ ಕ್ಷೇಮದ ಆಲೋಚನೆಗಳು ನಮ್ಮೊಳಗಡೆಯ ಸ್ವಯಂ ಕಾಳಜಿಗಳಾಗಬೇಕು.
ಮೊದಲಿನಿಂದಲೂ ಹೀಗೆಯೇ. ಈ ದೇಶದ ಮಾಧ್ಯಮಗಳು ಮನುಷ್ಯ ಕೇಂದ್ರಿತ ಸುದ್ದಿಗಳಿಗೆ ಆದ್ಯತೆ ಕೊಡುತ್ತವೆಯೇ ಹೊರತು ಅವು ಪ್ರಕೃತಿ ಕೇಂದ್ರೀತವಾಗುವುದೇ ಇಲ್ಲ. ಗಣಪತಿ ಮೆರವಣಿಗೆಯಲ್ಲಿ ತೂರಿ ಬಂದ ಕಲ್ಲು, ಥಿಯೇಟರ್ ಒಳಗಡೆ ಪ್ರೇಕ್ಷಕನೊಬ್ಬನಿಗೆ ಭೂತ ಹಿಡಿದದ್ದು, ಬಿಗ್‌ಬಾಸ್ ಸ್ಥಗಿತಗೊಂಡದ್ದು ಇವೆಲ್ಲವೂ ಆದ್ಯತೆಯ ಸುದ್ದಿಗಳಾಗುತ್ತವೆಯೇ ಹೊರತು ನಮ್ಮ ಮನೆ ಮುಂದೆ ಹರಿಯುವ ಹೊಳೆಯಲ್ಲಿ ಇದ್ದಕ್ಕಿದ್ದಂತೆ ಮಡ್ಡಿ ಕೆಂಪು ನೀರು ಹರಿದು ಬಂದಾಗ ಅದಕ್ಕೆ ಕಾರಣವಾದ ಮೂಲವನ್ನು ಹುಡುಕುವ ಶೋಧನೆಗಳು ಆಗುವುದಿಲ್ಲ. ಗಂಗೆ, ಯಮುನೆ, ಸರಸ್ವತಿ ಎಲ್ಲವೂ ನಮಗೆ ನೆನಪಿರುತ್ತದೆ. ಆದರೆ ನಮ್ಮ ಮನೆ ಮುಂದೆ ಹರಿಯುವ ಪುಟ್ಟ ಹೊಳೆ, ತೋಡಿನ ಹೆಸರು, ಅದರ ಮೂಲ ಯಾವುದೂ ನಮಗೆ ಗೊತ್ತಿರುವುದಿಲ್ಲ!
ಪಶ್ಚಿಮ ಘಟ್ಟದ ನಿಗೂಢ ಹಸಿರುಮರೆಯಲ್ಲಿ ಅಳಿಯುವ ಯಾವುದೋ ಒಂದು ಗಿಡದ, ಒಂದು ಜಂತುವಿನ ನಾಶದಿಂದ ಭವಿಷ್ಯದಲ್ಲಿ ಮಾನವ ಸಂಕುಲಕ್ಕೆ ಆಗುವ ಅಪಾಯದ ಬಗ್ಗೆ ನಾವು ಯೋಚಿಸುವುದಿಲ್ಲ. ಪರಿಸರದಿಂದ ಹೊರಗಡೆ ನಿಂತು ನೀರು, ಗಾಳಿ, ಮಣ್ಣು, ಅನ್ನದ ವಿಷದ ಬಗ್ಗೆ ಯೋಚಿಸುವ ನಮ್ಮ ದೇಶದ ಶೈಕ್ಷಣಿಕ ಪಠ್ಯಗಳಂತೆ ಮಾಧ್ಯಮಗಳು ಕೂಡ ಪ್ರಕೃತಿಯ ಒಳಗಡೆಯ ವ್ಯತ್ಯಾಸವನ್ನು, ಅನಾಹುತಕ್ಕೆ ಕಾರಣವಾಗುವ ಮೂಲಾಂಶಗಳನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡುತ್ತಿಲ್ಲ. ಮೊನ್ನೆ ಮೊನ್ನೆಯವರೆಗೆ ಕೆಲವೊಂದು ದೈನಿಕಗಳಲ್ಲಿದ್ದ ವಿಶೇಷ ಹಸಿರು ಪುಟಗಳೇ ಈಗ ಮಾಯವಾಗಿವೆ. ಪರಿಸರದ ಬಗ್ಗೆ ಮಾತನಾಡುವ ಹಸಿರುವಾದಿ ಲೋಕಕ್ಕೆ ತಮಾಷೆಯ ವಸ್ತುವಾಗಿ ಕಾಣಿಸುತ್ತಿದ್ದಾನೆ.
ಪ್ರಕೃತಿಯ ಸಾವು ಎಂದರೆ ಅದು ನಮ್ಮ ಉಸಿರಿನ ಸಾವು. ನಾವು ನಿರ್ಮಿಸಿದ ಆಣೆಕಟ್ಟುಗಳು ನಮ್ಮ ಮೇಲೇ ಮಳೆಗಾಲದಲ್ಲಿ ಖಡ್ಗ ಎತ್ತಿವೆ. ನದಿಯ ದಾರಿ ತಡೆದು ನಗರಕ್ಕೆ ನೀರು ತಂದು ಬಿಟ್ಟವನೇ ಇಂದು ಪ್ರವಾಹಕ್ಕೆ ಬಲಿಯಾಗಿ ಹೋಗುತ್ತಿದ್ದಾನೆ. ದೇವರ ದೇಗುಲಗಳನ್ನು ಬೆಟ್ಟದ ತುದಿಯಲ್ಲಿ ಕಟ್ಟಿದವರೇ ಇಂದು ಆ ದೇವರ ಮುಂದೆ ಹತಾಶರಾಗಿದ್ದಾರೆ. ಪರ್ವತಗಳ ಶಿಲೆಗಳಲ್ಲಿ ಧಾರ್ಮಿಕ ನಾಮಗಳನ್ನು ಕೆತ್ತಿಸಿದವನೇ ಈಗ ಆ ಶಿಲೆಯ ಕುಸಿತದಲ್ಲಿ ಅಳಿಯುತ್ತಿದ್ದಾರೆ.
ಇದು ಕೇವಲ ಪ್ರಕೃತಿಯ ಪ್ರತೀಕಾರವಲ್ಲ; ಅದು ಮನುಷ್ಯನ ಬುದ್ಧಿಯ ಮೇಲಿನ ಪರೀಕ್ಷೆ. ಇಷ್ಟಾದರೂ ನಾವು ಕಲಿಯುವುದಿಲ್ಲ. ಪ್ರತೀ ಬಾರಿ ರಾಕ್ಷಸ ಮಳೆಗೆ ಮನೆ ತೊಳೆದು ಹೋದರೆ ದೇವರ ಕೋಪ ಎಂದು ಹೇಳುತ್ತೇವೆ. ಭೂಕುಸಿತ ಬಂದರೆ ನಮ್ಮ ಕರ್ಮ ಎಂದು ತಪ್ಪಿಸಿಕೊಳ್ಳುತ್ತೇವೆ. ಆದರೆ ಯಾವ ದೇವರು, ಯಾವ ವಿಧಿ ಕರ್ಮ ಇಷ್ಟೊಂದು ನಿರ್ಲಕ್ಷ್ಯವನ್ನು ಕ್ಷಮಿಸುತ್ತದೆ? ಭೂಮಿ ಕುಸಿದಾಗ, ಊರು ಕೊಳ್ಳೆ ಹೋದಾಗ ಸಾಯುವುದು ಬರೀ ಮನುಷ್ಯನಲ್ಲ. ಈ ನಿಸರ್ಗಕ್ಕೆ ಯಾವ ಸಮಸ್ಯೆಯನ್ನು ಸೃಷ್ಟಿಸದ ಲಕ್ಷಾಂತರ ಜೀವ ಜಂತುಗಳು ಪ್ರವಾಹಕ್ಕೆ ಕೊಚ್ಚಿ ಹೋಗಿ ವಿನಾಶಕ್ಕೆ ಸರಿಯುತ್ತವೆ. ಆ ಕಾರಣಕ್ಕಾಗಿಯೇ ಭೂಮಿ ಮೇಲೆ ಜರುಗುವ ಅತಿವೃಷ್ಟಿಯಾಗಲೀ ಅನಾವೃಷ್ಟಿಯೇ ಆಗಲಿ ಅದು ಯಾವತ್ತೂ ಧರ್ಮದ ವಿಷಯವಲ್ಲ; ಭೂಮಿ ಮೇಲಿನ ಸಕಲ ಜೀವದ ವಿಷಯವೇ.
ಪ್ರತೀ ವಿಕೋಪದ ಹಿಂದೆ ಒಂದು ಸ್ಪಷ್ಟ ಸಂದೇಶ ಇದೆ - ‘‘ನೀನು ನಿನ್ನ ನಿರ್ಧಾರವನ್ನು ಬದಲಿಸು, ಇಲ್ಲದಿದ್ದರೆ ನಾನೇ ಬದಲಿಸುತ್ತೇನೆ’’ ಎಂಬುದು. ಪ್ರತೀ ಪ್ರವಾಹದ ನಂತರ ಪ್ರತೀ ಬೇಸಿಗೆಯಲ್ಲೂ ಮತ್ತೆ ನಾವು ನಿರ್ಮಾಣ ಶುರುಮಾಡುತ್ತೇವೆ, ಅದೇ ನಿವಾಸದ ಬುಡದಲ್ಲಿ ಮೊನ್ನೆ ಸುರಿದು ಹೋದ ಮಳೆ ಪರಿಣಾಮದ ಚಿಂತನೆಯನ್ನು ನಿಲ್ಲಿಸುತ್ತೇವೆ. ಪ್ರತೀ ಅತಿವೃಷ್ಟಿಯ ನಂತರ ನಾವು ಪರಿಹಾರ ಘೋಷಿಸುತ್ತೇವೆ, ಆದರೆ ಕಾರಣವನ್ನು ಮರೆಮಾಡುತ್ತೇವೆ. ನಾವು ಬದಲಾಯಿಸಬೇಕಾದದ್ದು ಮನುಷ್ಯ ಬದುಕುವ ಮನೆ, ಬಡಾವಣೆಯ ವಿನ್ಯಾಸವನ್ನಲ್ಲ, ಸಂಕ, ಸೇತುವೆ, ಕಟ್ಟೆಗಳ ಆಯಪಾಯವನ್ನಲ್ಲ. ಅದನ್ನು ಕಟ್ಟುವ ಮನಸ್ಸಿನ ವಿನ್ಯಾಸ ಎಂಬ ಕನಿಷ್ಠ ಪ್ರಜ್ಞೆ ನಮಗಿಲ್ಲ.
ಪರಿಸರ ವಿಕೋಪಗಳ ಬಗ್ಗೆ ಮಾಧ್ಯಮಗಳು ಮೌನವಾಗಿವೆ, ಆಳುವವರು, ಅಧಿಕಾರಿಗಳು ನಿರ್ಲಕ್ಷ್ಯದಲ್ಲಿದ್ದಾರೆ, ಜನರು ಪ್ರಾರ್ಥನೆಯಲ್ಲಿದ್ದಾರೆ. ಆದರೆ ಪ್ರಕೃತಿಯೂ ಬರೀ ಪ್ರಾರ್ಥನೆ ಒಂದನ್ನೇ ಕೇಳುವುದಿಲ್ಲ - ಅದು ಕ್ರಮ ಕೇಳುತ್ತದೆ. ಹಸಿರು ಕಾಡು ಉಳಿಸುವ ಕ್ರಮ, ನದಿಗೆ ದಾರಿ ಬಿಡುವ ಕ್ರಮ, ಪರ್ವತ ಬೆಟ್ಟ ಗುಡ್ಡಗಳ ಮೇಲೆ ಅಭಿವೃದ್ಧಿಯ ರೇಖೆ ಎಳೆಯದೆ ಕಾಪಾಡುವ ಕ್ರಮ. ನಮ್ಮ ಪರಿಸರದ ಸುತ್ತಮುತ್ತ ಪ್ಲಾಸ್ಟಿಕ್ ಸುರಿಯದೆ ಇರುವ ಕ್ರಮ, ಭೂಮಿಯ ಬೆಳೆಗಳಿಗೆ ವಿಷ ಹಾಕದಿರುವ ಕ್ರಮ.
ಅತಿವೃಷ್ಟಿಯ ಕಾಲದಲ್ಲಿ ನಾವೆಲ್ಲರೂ ಒಂದೇ ನದಿ ತೀರದ ಮನುಷ್ಯರು. ನದಿ ಉಕ್ಕಿದರೆ ಯಾರ ಯಾವ ಧರ್ಮವೂ ಕಾಪಾಡುವುದಿಲ್ಲ; ನೀರಿಗೆ ಎಲ್ಲರ ಬಣ್ಣವೂ ಒಂದೇ. ತುಂಬಿ ಹರಿಯುವ ನದಿ ಭಟ್ಟರನ್ನು, ಬಂಟರನ್ನು, ಗೌಡರನ್ನು, ಕ್ರೈಸ್ತರನ್ನು, ಮುಸಲ್ಮಾನರನ್ನು, ಜೈನರನ್ನು, ಗಂಡು, ಹೆಣ್ಣು, ಮಕ್ಕಳು, ಶ್ರೀಮಂತರು, ಬಡವರು ಎಲ್ಲರನ್ನು ಎತ್ತಿ ಎತ್ತಿ ಎಳೆಯುತ್ತದೆ. ಜಾತಿ, ಧರ್ಮದ ಆಧಾರದಲ್ಲಿ ಬೊಳ್ಳದ ನೀರು ಎತ್ತಿ ಕಾಪಾಡಲಾರದು. ಅದನ್ನು ಅರಿಯದ ಸಮಾಜ ಮುಂದಿನ ವಿಕೋಪದ ಮೊದಲ ಬಲಿಯಾಗುತ್ತದೆ ಎಂಬ ಎಚ್ಚರಿಕೆ ನಮ್ಮದಾಗಬೇಕು.
ಇದು ಕೇವಲ ಒಂದು ಮಳೆಗಾಲದ ಕಥೆಯಲ್ಲ. ಈಗ ನಮಗೆ ಪ್ರಕೃತಿಯ ಶಬ್ದ ಹೆಚ್ಚು ಬಲವಾಗಿ ಕೇಳುತ್ತಿದೆಯೆಂದರೆ - ನಾವು ಬಹಳ ಕಾಲದಿಂದ ಕಿವಿ ಮುಚ್ಚಿಕೊಂಡಿದ್ದೇವೆ ಎಂಬುದೇ ಸತ್ಯ. ಪ್ರಕೃತಿ ಯಾವಾಗಲೂ ನಿಷ್ಪಕ್ಷಪಾತಿ. ಅದು ಯಾರನ್ನೂ ಭೇದ ಮಾಡುವುದಿಲ್ಲ. ಆದರೆ ನಾವು ಅದರೊಳಗೆ ಬದುಕುತ್ತಾ ಅದರ ನ್ಯಾಯವನ್ನು ಮರೆತು ಬಿಟ್ಟಿದ್ದೇವೆ. ಪ್ರಾಕೃತಿಕ ವಿಕೋಪಗಳ ಮಧ್ಯೆ ಉತ್ತರ ಭಾರತದ ಚುನಾವಣಾ ಪ್ರಚಾರಗಳಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಮಾತುಗಳೇ ಇಲ್ಲ. ಅಲ್ಲಿ ಭಾಷಣಗಳಲ್ಲಿ ಕೇಳಿಬರುವ ಮಾತುಗಳು ನಮ್ಮ ಮತದಾರರು, ನಮ್ಮ ಪಕ್ಷ, ನಮ್ಮ ಮತ, ಧರ್ಮ ಇವು ಪ್ರಕೃತಿಯ ವ್ಯಥೆಗೆ ಕಿವಿಗೊಡದ ಕಿವಿಗಳು. ಮನುಷ್ಯನಿಗೆ ಪ್ರಕೃತಿಯ ಅನಾಹುತದ ಶಬ್ದ ಕೇಳಿಸದಂತೆ ಮಾಡಿದ್ದು ಯಾರು? ಅಭಿವೃದ್ಧಿಯ ಹೆಸರಿನಲ್ಲಿ ನದಿಯ ದಿಕ್ಕು ತಿರುಗಿಸುವ ಮನುಷ್ಯ, ಹೊಳೆಗಳ ಮೇಲೆ ಸಿಮೆಂಟು ಸೇತುವೆ ನಿರ್ಮಿಸುವ ನಾಯಕ, ಪರ್ವತದ ಎತ್ತರದಲ್ಲಿ ರೆಸಾರ್ಟ್ ಕಟ್ಟುವ ಹೂಡಿಕೆದಾರ - ಇವರೆಲ್ಲರೂ ಪ್ರಕೃತಿಯ ಸಹನೆಗೆ ಪರೀಕ್ಷೆ ಇಡುತ್ತಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿ, ಕಾಯಿಲೆ, ಬಿಸಿಗಾಳಿ, ಭೂಕಂಪ, ಕಾಡ್ಗಿಚ್ಚು, ಸುನಾಮಿ - ಇವು ಸರ್ವಸಾಮಾನ್ಯ ಘಟನೆಗಳಲ್ಲ. ಇವು ಪ್ರಕೃತಿಯ ಮತದಾನ. ಮನುಷ್ಯನ ಅಭಿವೃದ್ಧಿ ಯೋಜನೆಗಳಿಗೆ ಅದು ನೀಡುವ ಅಂಕೆ. ನಾವು ಓದಿಕೊಳ್ಳಬೇಕಾದ ಪ್ರಶ್ನೆ: ‘‘ನಿನ್ನ ಸೌಕರ್ಯಕ್ಕಾಗಿಯೇ ನಾನು ಜೀವ ಕಳೆದುಕೊಳ್ಳಬೇಕೆ?’’ ಎಂದು ಪ್ರಕೃತಿಯು ಕೇಳಿದರೆ ನಾವು ಯಾವ ಉತ್ತರ ಕೊಡಬಲ್ಲೆವು?
ನಮ್ಮ ದೇಶದಲ್ಲಿ ಪ್ರಾಕೃತಿಕ ಸಮಸ್ಯೆಗಳು ರಾಜಕೀಯದ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವು ಮಾನವೀಯ ಪ್ರಶ್ನೆಗಳಾಗಿ ಮುಂದೆ ಹುಟ್ಟಬೇಕಾದ ಮಕ್ಕಳ ಭವಿಷ್ಯವಾಗಿ ಕಾಣಿಸಿಕೊಳ್ಳಬೇಕು. ಆದರೆ ನಾವು ಅದನ್ನೂ ಮತದಾರರ ಸಂಖ್ಯೆಯಲ್ಲಿ ಅಳೆಯುತ್ತಿದ್ದೇವೆ. ಬಸ್ ಕೊಚ್ಚಿ ಹೋದರೂ ಸುದ್ದಿ ಚಾನೆಲ್‌ಗಳು ಹೇಳುವುದು ಅಲ್ಲಿ ‘‘ಯಾವ ಪಕ್ಷದ ಶಾಸಕ ಭೇಟಿ ಕೊಟ್ಟರು?’’ ಎಂದು. ಅಲ್ಲಿ ಸತ್ತ ಮನುಷ್ಯನ ಧರ್ಮವೇ ಮುಖ್ಯ ವಿಷಯವಾಗುತ್ತದೆ. ಈ ದೃಷ್ಟಿಕೋನವೇ ನಮ್ಮ ಸಾಮಾಜಿಕ ಕುರುಡತನದ ಮೂಲ. ನೀರಿಗೆ ಬಿದ್ದವನನ್ನು ಎತ್ತುವ ಮುಂಚೆ ಹಾರಲು ಸಿದ್ಧಗೊಂಡ ರಕ್ಷಕನ ಮನಸ್ಸಿನೊಳಗೆ ಬಿದ್ದವನ ಜಾತಿ ಧರ್ಮವನ್ನು ವಿಚಾರಿಸುವ ಮಟ್ಟಕ್ಕೆ ಈ ದೇಶದ ರಾಜಕೀಯ ನಮ್ಮನ್ನು ಹಾಳು ಮಾಡಿದೆ.
ಪ್ರಕೃತಿಯು ಕೊಡುವ ಪ್ರತಿಯೊಂದು ಪಾಠವೂ ಸರ್ವಜನೀನ. ಅದು ನಮ್ಮ ರಾಜಕೀಯವನ್ನೂ, ಸಾಮಾಜಿಕತೆಯನ್ನೂ ಪುನರ್ ವಿಚಾರಿಸಲು ಪ್ರೇರೇಪಿಸಬೇಕು. ಬೆಟ್ಟ ಕುಸಿದರೆ ಕೇವಲ ಮಣ್ಣಲ್ಲ, ಮನುಷ್ಯನ ಅಹಂಕಾರವೂ ಕುಸಿಯುತ್ತದೆ. ನೀರು ತುಂಬಿದರೆ ಕೇವಲ ನದಿಯೇ ಅಲ್ಲ, ಅದರಿಂದ ನಮ್ಮ ನಿಷ್ಕಾಳಜಿತನವೂ ತುಂಬಿ ಹರಿಯಬೇಕು.
ಅಧಿಕಾರ ಸ್ಥಾನದಲ್ಲಿ ಕೂತಿರುವವರು ಈ ಪ್ರಶ್ನೆಗಳನ್ನು ಕೇಳಿಕೊಳ್ಳ ಬೇಕಾದ ಹೊತ್ತು ಇದು. ಜನರ ಹಿತಕ್ಕಾಗಿ ಪ್ರಾಕೃತಿಕ ಸೂಚನೆಗೆ ಸೂಕ್ಷ್ಮವಾಗಬೇಕಾದ ಸಮಯ ಇದು. ನದಿಯ ತೀರದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅನುಮತಿ ಕೊಡುವ ಮೊದಲು, ಕಾಡಿನೊಳಗೆ ರಸ್ತೆ ತೆಗೆಯುವ ಮೊದಲು, ಶಾಶ್ವತ ಪರಿಹಾರಗಳ ಬಗ್ಗೆ ಚಿಂತಿಸಬೇಕು. ಜನರ ಜೀವ ಮತ್ತು ಪ್ರಕೃತಿಯ ಜೀವ-ಎರಡೂ ಪರಸ್ಪರ ಅವಲಂಬಿತ ಎಂಬ ಅರಿವಿಲ್ಲದೆ ಯಾವುದೇ ಅಭಿವೃದ್ಧಿ ನಿಜವಾದ ಅಭಿವೃದ್ಧಿಯಾಗುವುದಿಲ್ಲ.ಮುಂದಿನ ಪೀಳಿಗೆಯು ನಮ್ಮನ್ನು ಕೇಳಬಹುದು- ‘‘ನೀವು ಎಷ್ಟು ಬಾರಿ ಎಚ್ಚರಿಸಲ್ಪಟ್ಟಿರಿ?’’ ಎಂದು. ಆ ಹೊತ್ತಿಗೆ ನಮ್ಮ ಉತ್ತರ ಏನಿರಬಹುದು? ‘‘ನಾವು ದೇವರ ಹಬ್ಬ ಆಚರಿಸುತ್ತಿದ್ದೆವು, ಮತಗಳ ಲೆಕ್ಕ ಹಾಕುತ್ತಿದ್ದೆವು’’ ಎಂದಾದರೆ ಅದು ಇತಿಹಾಸದ ನಾಚಿಕೆ. ಪ್ರಕೃತಿಯು ಪ್ರತಿಯೊಂದು ವಿಕೋಪದ ಮುಖಾಂತರ ಹೇಳುತ್ತಿದೆ:
‘‘ನೀವು ನನ್ನೊಳಗೆ ಬದುಕುತ್ತೀರಿ, ನನ್ನ ವಿರೋಧದಲ್ಲಲ್ಲ.’’







