ತಾಳ್ಮೆ: ನಮ್ಮ ಕಾಲದ ಅತಿ ದೊಡ್ಡ ಬಡತನ!

ಇವತ್ತು ನಾವು ಕಟ್ಟಿಕೊಂಡ ಯಂತ್ರಗಳ ವೇಗ ನಮ್ಮ ಮನಸ್ಸಿನ ಲಯವನ್ನು ನಿರ್ಧರಿಸುತ್ತಿದೆ. ಮೊಬೈಲ್ ಪರದೆಗಳು, ರೀಲ್ಸ್‌ಗಳು, ಶಾರ್ಟ್ ವೀಡಿಯೊಗಳು, ಕ್ಷಣಕ್ಷಣಕ್ಕೂ ಬದಲಾಗುವ ಚಿತ್ರಗಳು ನಮ್ಮ ಕಣ್ಣುಗಳಿಗೆ ನಿರಂತರ ಉದ್ವೇಗ ನೀಡುತ್ತಿವೆ. ಪರಿಣಾಮವಾಗಿ ಕಾಯುವಿಕೆ ಭಾರವಾಗಿ ಕಾಣುತ್ತಿದೆ. ಮೌನ ಅಸಹನೀಯವಾಗುತ್ತಿದೆ. ಏಕಾಗ್ರತೆ ಶ್ರಮದ ಕೆಲಸವಾಗುತ್ತಿದೆ. ಮೊನ್ನೆಯವರೆಗೆ ಮನುಷ್ಯ ಸಮಯವನ್ನು ಹಿಡಿದು ಬದುಕುತ್ತಿದ್ದ. ಈಗ ಸಮಯವೇ ಮನುಷ್ಯನನ್ನು ಎಳೆದುಕೊಂಡು ಹೋಗುತ್ತಿದೆ.
ಇಬ್ಬರು ಯೂಟ್ಯೂಬರ್‌ಗಳು ಪರಸ್ಪರ ಮಾತನಾಡಿಕೊಳ್ಳು ವುದನ್ನು ಮೊನ್ನೆ ಕೇಳಿಸಿಕೊಳ್ಳುತ್ತಿದ್ದೆ. ಅವರ ಆತಂಕ ಬಹಳ ಸರಳವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಅವರು ಮಾಡುತ್ತಿದ್ದ ಇಪ್ಪತ್ತು-ಮೂವತ್ತು ನಿಮಿಷಗಳ ವೀಡಿಯೊಗಳನ್ನು ಜನ ತದೇಕಚಿತ್ತದಿಂದ ನೋಡುತ್ತಿದ್ದರು. ವಿಷಯವನ್ನು ಆಲಿಸುತ್ತಿದ್ದರು. ಅದರ ಬಗ್ಗೆ ಯೋಚಿಸುತ್ತಿದ್ದರು. ಸ್ನೇಹಿತರ ಜೊತೆ ಚರ್ಚಿಸುತ್ತಿದ್ದರು. ಈಗ ಅದೇ ಜನರಿಗೆ ಐದು ನಿಮಿಷದ ವೀಡಿಯೊ ಕೂಡ ದೀರ್ಘವಾಗಿ ಕಾಣುತ್ತಿದೆ, ಒಂದು ನಿಮಿಷದೊಳಗೆ ಮಾತು ಮುಗಿಯದಿದ್ದರೆ ಬೆರಳು ಮತ್ತೊಂದು ಪರದೆಗೆ ಜಿಗಿಯುತ್ತದೆ. ಕಣ್ಣು ಇನ್ನೊಂದು ಚಿತ್ರ ಹುಡುಕುತ್ತದೆ.
ಇದು ಕೇವಲ ಯೂಟ್ಯೂಬರ್‌ಗಳ ಸಮಸ್ಯೆಯಲ್ಲ. ನಮ್ಮ ಕಾಲದ ಮನಸ್ಥಿತಿಯ ಕನ್ನಡಿ. ನಿಧಾನವಾಗಿ ಮನುಷ್ಯನ ಅದರಲ್ಲೂ ಮಕ್ಕಳ ಸಹನೆ, ಏಕಾಗ್ರತೆ ಕಡಿಮೆಯಾಗುತ್ತಿದೆಯೇ? ತಾಳ್ಮೆ ಕರಗುತ್ತಿದೆಯೇ? ಗಮನವನ್ನು ಒಂದೇ ಕಡೆ ನೆಟ್ಟಗಿಡುವ ಸಾಮರ್ಥ್ಯ ಕ್ಷೀಣಿಸುತ್ತಿದೆಯೇ? ಎಂಬ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತವೆ. ಈ ಪ್ರಶ್ನೆಗೆ ಉತ್ತರ ಹುಡುಕಲು ದೊಡ್ಡ ಸಂಶೋಧನೆಗಳ ಅಗತ್ಯವಿಲ್ಲ. ನಮ್ಮ ಸುತ್ತಲಿನ ಬದುಕನ್ನು ಸ್ವಲ್ಪ ಹೊತ್ತು ಗಮನಿಸಿದರೆ ಸಾಕು.
ನಾನು ಬರೆದಿದ್ದ ಲೇಖನವೊಂದು ಪಠ್ಯವಾಗಿದ್ದ ಶಾಲೆಯ ಕನ್ನಡ ಶಿಕ್ಷಕಿಯೊಬ್ಬರು ‘‘ಸರ್ ಅದನ್ನು ನೀವೇ ಪಾಠ ಮಾಡಿ, ಪುಟ್ಟ ಮಕ್ಕಳೊಂದಿಗೆ ನಿಮಗೂ ಒಂದು ಅನುಭವ, ಬನ್ನಿ’’ ಎಂದು ಅವರ ಶಾಲೆಗೆ ಆಹ್ವಾನಿಸಿದ್ದರು. ಖುಷಿಯಿಂದಲೇ ಹೋದೆ. ತರಗತಿ ಸ್ವಲ್ಪ ಆತ್ಮೀಯವಾಗಿರಲಿ ಎಂಬ ಕಾರಣಕ್ಕೆ ಒಂದಷ್ಟು ಚಾಕಲೇಟ್ ಒಯ್ದು ಪ್ರತಿಯೊಬ್ಬ ವಿದ್ಯಾರ್ಥಿಗೂ ಕೊಟ್ಟೆ. ಇನ್ನೇನು ಮಕ್ಕಳನ್ನು ಪರಿಚಯಿಸಿಕೊಂಡು ಪಾಠ ಆರಂಭಿಸೋಣ ಎಂದಾಗ ಒಂದು ಸಂಗತಿ ನನ್ನ ಗಮನ ಸೆಳೆಯಿತು. ಆಗಲೇ ಎಲ್ಲ ಚಾಕಲೇಟ್‌ಗಳೂ ಮಕ್ಕಳ ಬಾಯಿಂದ ಹೊಟ್ಟೆಗೆ ಇಳಿದಿದ್ದವು. ಸವಿಯುವ ಪ್ರಶ್ನೆಯೇ ಇರಲಿಲ್ಲ. ಜಗಿದು ನುಂಗಿ ಮುಗಿಸಿ ಇನ್ನೊಂದು ಸಿಗುತ್ತದೆಯೇ ಎಂಬ ನಿರೀಕ್ಷೆಯ ಕಣ್ಣುಗಳು ಮಾತ್ರ ಉಳಿದಿದ್ದವು.
ಆ ಕ್ಷಣದಲ್ಲಿ ನನಗೆ ನನ್ನ ಬಾಲ್ಯ ನೆನಪಾಯಿತು. ನಮ್ಮ ಕಾಲದಲ್ಲಿ ಪೆಪ್ಪರಮೆಂಟು ಅಂದರೆ ಕೇವಲ ಸಿಹಿಯಲ್ಲ; ಅದು ಒಂದು ಅನುಭವ. ಅಪರೂಪಕ್ಕೆ ಸಿಗುವ ಆ ಸಣ್ಣ ಸಿಹಿಯನ್ನು ಸಾಧ್ಯವಾದಷ್ಟು ಹೊತ್ತು ಬಾಯಲ್ಲೇ ಇಟ್ಟುಕೊಂಡು ಅದರ ರುಚಿಯನ್ನು ಅನುಭವಿಸುತ್ತಿದ್ದೆವು. ಬೇಗ ಮುಗಿದುಹೋಗಬಾರದು ಎಂಬ ಆಸೆಯೇ ಅದಕ್ಕೆ ಕಾರಣ. ಕೆಲವೊಮ್ಮೆ ಗಂಟೆಗಟ್ಟಲೆ, ಕೆಲವೊಮ್ಮೆ ಅರ್ಧ ದಿನದವರೆಗೂ ಅದರ ಸಿಹಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದೆವು. ಆ ಸ್ವಾದದ ಮಧ್ಯೆ ಬೇರೆ ಏನನ್ನೂ ತಿನ್ನದೆ, ಅದರ ಸಿಹಿ ಕಡಿಮೆಯಾಗದಂತೆ ಕಾಪಾಡಿಕೊಂಡು ಆಸ್ವಾದಿಸುತ್ತಿದ್ದೆವು. ಚಾಕಲೇಟ್‌ನ ಬೆಲೆ ದೊಡ್ಡದಲ್ಲ; ಆದರೆ ಅದನ್ನು ಅನುಭವಿಸುವ ತಾಳ್ಮೆ ದೊಡ್ಡದಾಗಿತ್ತು.
ಇಂದಿನ ಮಕ್ಕಳನ್ನು ನೋಡಿ ನನಗೆ ಅನ್ನಿಸಿದ್ದು ಅವರು ಚಾಕಲೇಟ್ ತಿನ್ನುವ ವಿಧಾನ ಬದಲಾಗಿದೆ ಎಂಬುದಲ್ಲ. ಬದುಕನ್ನು ಅನುಭವಿಸುವ ವಿಧಾನವೇ ಬದಲಾಗುತ್ತಿದೆ ಎಂಬುದು! ಕಾಯಲು ಅವರು ಸಿದ್ಧರಿಲ್ಲ, ಕಷ್ಟವಾಗುತ್ತಿದೆ. ನಿಧಾನವಾಗಿ ಸವಿಯುವುದು ಅನಗತ್ಯವಾಗುತ್ತಿದೆ. ತಕ್ಷಣ ಸಿಗುವುದು, ತಕ್ಷಣ ಮುಗಿಯುವುದು, ತಕ್ಷಣ ಮತ್ತೊಂದಕ್ಕೆ ಜಿಗಿಯುವುದು ಅವರ ಸಹಜ ಸ್ವಭಾವವಾಗುತ್ತಿದೆ. ಈ ಚಾಕಲೇಟ್‌ನ ಕಥೆ ಚಿಕ್ಕದಾದರೂ ಅದರ ಹಿಂದೆ ದೊಡ್ಡ ಸಾಂಸ್ಕೃತಿಕ ಬದಲಾವಣೆ ಅಡಗಿದೆ.
ಇವತ್ತು ನಾವು ಕಟ್ಟಿಕೊಂಡ ಯಂತ್ರಗಳ ವೇಗ ನಮ್ಮ ಮನಸ್ಸಿನ ಲಯವನ್ನು ನಿರ್ಧರಿಸುತ್ತಿದೆ. ಮೊಬೈಲ್ ಪರದೆಗಳು, ರೀಲ್ಸ್ ಗಳು, ಶಾರ್ಟ್ ವೀಡಿಯೊಗಳು, ಕ್ಷಣಕ್ಷಣಕ್ಕೂ ಬದಲಾಗುವ ಚಿತ್ರಗಳು ನಮ್ಮ ಕಣ್ಣುಗಳಿಗೆ ನಿರಂತರ ಉದ್ವೇಗ ನೀಡುತ್ತಿವೆ. ಪರಿಣಾಮವಾಗಿ ಕಾಯುವಿಕೆ ಭಾರವಾಗಿ ಕಾಣುತ್ತಿದೆ. ಮೌನ ಅಸಹನೀಯವಾಗುತ್ತಿದೆ. ಏಕಾಗ್ರತೆ ಶ್ರಮದ ಕೆಲಸವಾಗುತ್ತಿದೆ. ಮೊನ್ನೆಯವರೆಗೆ ಮನುಷ್ಯ ಸಮಯವನ್ನು ಹಿಡಿದು ಬದುಕುತ್ತಿದ್ದ. ಈಗ ಸಮಯವೇ ಮನುಷ್ಯನನ್ನು ಎಳೆದುಕೊಂಡು ಹೋಗುತ್ತಿದೆ.
ಇವತ್ತಿನ ನಮ್ಮ ಕಾಲದ ಅತಿದೊಡ್ಡ ಶಾಪ ಹಣದ ಬಡತನವಲ್ಲ; ತಾಳ್ಮೆಯ ಬಡತನ. ವಿದ್ಯಾರ್ಥಿಗಳ ಸಮಸ್ಯೆಯೂ ಅದೇ. ಅವರಿಗೆ ಮಾಹಿತಿಯ ಕೊರತೆ ಇದೆ ಎನ್ನುವುದೂ ತಪ್ಪು. ಆದರೆ ಒಂದು ವಿಷಯದ ಜೊತೆ ಹೆಚ್ಚು ಹೊತ್ತು ಉಳಿಯುವ ಶಕ್ತಿ ಕಡಿಮೆಯಾಗುತ್ತಿದೆ. ಕೇಳುವುದು, ಯೋಚಿಸುವುದು, ಪ್ರಶ್ನಿಸುವುದು, ಅರ್ಥ ಮಾಡಿಕೊಳ್ಳುವುದು ಎಲ್ಲವೂ ಸಮಯ ಬೇಡುವ ಪ್ರಕ್ರಿಯೆಗಳು. ಆದರೆ ಇಂದಿನ ಡಿಜಿಟಲ್ ಜಗತ್ತು ಪ್ರತಿಯೊಂದನ್ನೂ ಕ್ಷಣಗಳಲ್ಲಿ ಮುಗಿಸಿಬಿಡಲು ಒತ್ತಾಯಿಸುತ್ತಿದೆ. ಕಳೆದ ೪೦ ವರ್ಷಗಳಿಂದ ನಾವು ಅತ್ಯುತ್ತಮ ಶೈಕ್ಷಣಿಕ ಮಾದರಿ- ಆದರ್ಶ ಎಂದೇ ಭಾವಿಸಿದ್ದ ಕರಾವಳಿಯ ಒಂದು ಖಾಸಗಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಭಾಗವಹಿಸಿದ್ದೆ. ವೇದಿಕೆಯಲ್ಲಿ ಗಂಭೀರ ಉಪನ್ಯಾಸವಾಗುತ್ತಿದ್ದಾಗ ಶೇ. ೯೦ರಷ್ಟು ಮಕ್ಕಳು ಅನ್ಯಮನಸ್ಕರಾಗಿದ್ದರು. ಕೆಲವರು ಮೊಬೈಲ್ ನೋಡುತ್ತಿದ್ದರು, ಇನ್ನು ಕೆಲವರು ಪಕ್ಕದವರ ಜೊತೆಗೆ ಮಾತನಾಡುತ್ತಿದ್ದರು. ಒಂದೆರಡು ಗಂಟೆ ನೆಟ್ಟಗೆ ಕೂತು ಮಾತು ಕೇಳುವ ತಾಳ್ಮೆ ಯಾರಲ್ಲೂ ಇದ್ದಹಾಗೆ ನನಗೆ ಕಾಣಿಸಲಿಲ್ಲ!
ಬಹುಶಃ ನಮ್ಮ ಕಾಲದ ದೊಡ್ಡ ಸವಾಲು ಇದೇ ಇರಬಹುದು. ಮಕ್ಕಳಿಗೆ ಹೊಸ ತಂತ್ರಜ್ಞಾನ ಕಲಿಸುವುದಕ್ಕಿಂತ, ಹೊಸ ಮಾಹಿತಿಗಳನ್ನು ನೀಡುವುದಕ್ಕಿಂತ, ಮತ್ತೆ ಸಹನೆಯ ಸೌಂದರ್ಯವನ್ನು ಕಲಿಸಬೇಕಾದ ಅಗತ್ಯ ಎದುರಾಗಿದೆ. ಏಕೆಂದರೆ ವೇಗ ಮನುಷ್ಯನನ್ನು ಮುಂದೆ ಕರೆದೊಯ್ಯಬಹುದು; ಆದರೆ ನಮ್ಮನ್ನು ಆಳಕ್ಕೆ ಇಳಿಸುವುದು ತಾಳ್ಮೆಯೇ.
ತಾಳ್ಮೆ ಎನ್ನುವುದು ಕೇವಲ ಒಂದು ಮಾನಸಿಕ ಗುಣವಲ್ಲ. ಅದು ಆಗ ನಾನು ಹೇಳಿದ ಹಾಗೆ ಚಾಕಲೇಟ್ ತಿನ್ನುವ ದೀರ್ಘಕಾಲದ ರಸಸ್ವಾದದ ಸಾಮರ್ಥ್ಯ.
ನಮ್ಮ ಬಾಲ್ಯದ ಬಹಳ ದೊಡ್ಡ ಸೊಗಸು ಗಮನಿಸುವುದು, ಮಳೆಗಾಲದಲ್ಲಿ ಅಟ್ಟದಲ್ಲಿ ಕೂತು ತೂತು ಬಿದ್ದ ಹಂಚಿನೆಡೆಯಿಂದ ತೂರಿಬರುವ ಬಿಸಿಲ ರೇಖೆಗೆ ಅಡ್ಡವಾಗಿ ಬಲೆ ಒಡ್ಡುವ ಜೇಡನ ಬದುಕನ್ನು ಗಂಟೆಗಟ್ಟಲೆ ನೋಡಿದವನು ನಾನು. ಬೇಡ ಬಿಡಿ, ನಮ್ಮ ಜಗಲಿಯಲ್ಲಿ ಕೂತ ಹಿರಿಯರು ಕವಳ ಮೆಲ್ಲುವ ಕಥೆಯನ್ನೇ ನೋಡಿ. ಅರ್ಧ ಎಲೆ, ಒಂದು ಚೂರು ಅಡಿಕೆ, ಚಿಟಿಕೆ ಸುಣ್ಣ, ಅಷ್ಟೇ. ಆದರೆ ಅದನ್ನು ಬಾಯಲ್ಲಿಟ್ಟು ಗಂಟೆಗಟ್ಟಲೆ ಅವರು ಮೆಲ್ಲುತ್ತಿದ್ದರು. ಅವರಿಗದು ಕೇವಲ ತಿನ್ನುವ ಕ್ರಿಯೆಯಲ್ಲ, ಒಂದು ಅನುಭವ. ರೈತರು ಬೀಡಿ ಸೇದುವ ವಿಧಾನವೂ ಹಾಗೆಯೇ. ಒಂದೇ ಬೀಡಿಯನ್ನು ಒಮ್ಮೆಲೇ ಪೂರ್ತಿ ಸುಟ್ಟು ಮುಗಿಸುವುದಿಲ್ಲ. ಸ್ವಲ್ಪ ಸೇದಿ, ನಂದಿಸಿ, ಮತ್ತೆ ಸಮಯ ಸಿಕ್ಕಾಗ ಹಚ್ಚಿ ಸೇದುತ್ತಿದ್ದರು. ಅಲ್ಲಿ ಆತುರವಿರಲಿಲ್ಲ. ಕ್ಷಣವನ್ನು ಅನುಭವಿಸುವ ಮನಸ್ಸಿತ್ತು.
ಸೇಂದಿ ಕುಡಿಯುವುದು, ತಾಂಬೂಲ ತಿನ್ನುವುದು, ಬೀಡಿ ಸೇದುವುದು, ಚಾಕಲೇಟ್ ಚೀಪುವುದು ಇವೆಲ್ಲದರಲ್ಲಿ ಆರೋಗ್ಯದ ವಿಚಾರವನ್ನು ಬದಿಗಿಟ್ಟು ನೋಡಿದರೆ, ಅವುಗಳ ಹಿಂದೆ ಒಂದು ಸಾಮಾನ್ಯ ಗುಣ ಇತ್ತು. ಅವು ಮನುಷ್ಯನನ್ನು ನಿಧಾನಗೊಳಿಸುತ್ತಿದ್ದವು. ಒಂದು ಕ್ಷಣದ ಜೊತೆ ಸ್ವಲ್ಪ ಹೊತ್ತು ಬದುಕುವಂತೆ ಮಾಡುತ್ತಿದ್ದವು. ಸುತ್ತಲಿನ ಪರಿಸರದ ಜೊತೆ, ಮಾತುಕತೆಯ ಜೊತೆ, ನೆನಪುಗಳ ಜೊತೆ ಜೋಡಿಸುತ್ತಿದ್ದವು.
ಇಂದು ಆ ಜಗತ್ತು ಬಹುತೇಕ ಕಣ್ಮರೆಯಾಗಿದೆ. ಎಲ್ಲವೂ ಪ್ಯಾಕೆಟ್ಟಿನಲ್ಲಿ ಬರುತ್ತದೆ. ತೆರೆದ ತಕ್ಷಣ ಮುಗಿಯುತ್ತದೆ. ರುಚಿಯೂ ಕ್ಷಣಿಕ, ಅನುಭವವೂ ಕ್ಷಣಿಕ. ನಾವು ಆಹಾರವನ್ನು ತಿನ್ನುವುದಕ್ಕಿಂತ ಹೆಚ್ಚು ನುಂಗುತ್ತಿದ್ದೇವೆ. ಮಾಹಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚು ಸ್ಕ್ರೋಲ್ ಮಾಡುತ್ತಿದ್ದೇವೆ. ಮಾತುಗಳನ್ನು ಆಲಿಸುವುದಕ್ಕಿಂತ ಹೆಚ್ಚು ಮುಂದಿನ ಶಬ್ದದ ಕಡೆ ಓಡುತ್ತಿದ್ದೇವೆ.
ಬಹುಶಃ ಅದಕ್ಕೇ ಇಂದಿನ ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲಿಯೂ ಸಹನೆ ಕಡಿಮೆಯಾಗುತ್ತಿದೆ. ಏಕೆಂದರೆ ತಾಳ್ಮೆ ಎನ್ನುವುದು ಪುಸ್ತಕಗಳಿಂದ ಕಲಿಯುವ ಪಾಠವಲ್ಲ. ಅದು ಬದುಕಿನ ಸಣ್ಣ ಸಣ್ಣ ಅಭ್ಯಾಸಗಳಿಂದ ಬೆಳೆಯುವ ಗುಣ. ಚಾಕಲೇಟ್‌ನ್ನು ನಿಧಾನವಾಗಿ ಚೀಪುವುದರಿಂದ ಹಿಡಿದು ಒಂದು ಕಥೆಯನ್ನು ತಾಳ್ಮೆಯಿಂದ ಆಲಿಸುವ ತನಕ, ಒಂದು ಬೀಜ ಮೊಳಕೆಯೊಡೆಯುವುದನ್ನು ಕಾಯುವುದರಿಂದ ಹಿಡಿದು ಒಂದು ಆಲೋಚನೆ ಮನಸ್ಸಿನಲ್ಲಿ ಪಕ್ವವಾಗುವ ತನಕ ಇವೆಲ್ಲವೂ ತಾಳ್ಮೆಯ ಪಾಠಗಳೇ.
ನೆಲ ನಡಿಗೆ ಬಿಟ್ಟು ಬಸ್ಸು ಹತ್ತಿದ ದಿನವೇ ನಾವು ವೇಗವನ್ನು ಸಾಕಷ್ಟು ರೂಢಿಸಿಕೊಂಡಿದ್ದೇವೆ. ಈಗಿನ ತಲೆಮಾರಿಗೆ ಕಲಿಸಬೇಕಾಗಿರುವುದು ಬಹುಶಃ ಒಂದೇ ವಿಷಯ ನಿಧಾನತೆ ಮತ್ತು ಅದರ ಪ್ರಧಾನತೆ. ಹಳ್ಳಿಯ ಮನೆಯ ಅಂಗಳದಲ್ಲಿ ಕುಳಿತಿದ್ದ ನಮ್ಮಜ್ಜಿ ಒಂದು ಕಥೆ ಹೇಳಲು ಶುರು ಮಾಡಿದರೆ, ಅದು ಮುಗಿಯುವ ತನಕ ನಾವು ಮಕ್ಕಳು ಕಣ್ಣೆದುರಿಗೆ ಕುಳಿತು ಕೇಳುತ್ತಿದ್ದೆವು. ಕಥೆಯ ಮಧ್ಯೆ ಕುತೂಹಲ ಇತ್ತು, ಅಂತ್ಯದ ಬಗ್ಗೆ ಕಾತರ ಇತ್ತು, ಆದರೆ ಆ ಕಾತರವನ್ನು ಹಿಡಿದುಕೊಂಡು ಕಾಯುವ ತಾಳ್ಮೆಯೂ ಇತ್ತು. ಇಂದು ಅದೇ ಮಗುವಿನ ಕೈಗೆ ಮೊಬೈಲ್ ಕೊಟ್ಟರೆ ಐದು ಸೆಕೆಂಡಿನ ವೀಡಿಯೊ ಕೂಡ ಬೋರ್ ಎನಿಸುತ್ತದೆ. ಒಂದು ವೀಡಿಯೊ ಮುಗಿಯುವ ಮುನ್ನ ಇನ್ನೊಂದು, ಅದು ಮುಗಿಯುವ ಮುನ್ನ ಮತ್ತೊಂದು. ಕಥೆಯ ಅಂತ್ಯವನ್ನು ಕಾಯುವ ಮನಸ್ಸು ಇಲ್ಲ; ಅದಕ್ಕೆ ಮುಂದಿನ ಉದ್ವೇಗದ ಹುಡುಕಾಟ ಮಾತ್ರ ಇದೆ.
ಹಾಗಾದರೆ ಮನುಷ್ಯನ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಕಡಿಮೆಯಾಗುತ್ತಿದೆಯೇ? ಅಥವಾ ನಮಗೆ ಹಾಗೆ ಅನಿಸುತ್ತಿದೆಯೇ? ಇದಕ್ಕೆ ಉತ್ತರ ಹುಡುಕಲು ನಾವು ನಮ್ಮ ಮೆದುಳಿನೊಳಗೆ ಹೋಗಬೇಕು. ಜೈವಿಕವಾಗಿ ನೋಡಿದರೆ ಸಾವಿರಾರು ವರ್ಷಗಳಿಂದ ಮನುಷ್ಯನ ಮೆದುಳು ಬಹಳಷ್ಟು ಬದಲಾಗಿಲ್ಲ. ನಮ್ಮ ಪೂರ್ವಜರು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಇದ್ದ ಮೆದುಳು ಮತ್ತು ಇಂದು ಮೊಬೈಲ್ ಹಿಡಿದುಕೊಂಡು ಕುಳಿತಿರುವ ನಮ್ಮ ಮೆದುಳು ಮೂಲತಃ ಒಂದೇ. ಆದರೆ ಪರಿಸರ ಬದಲಾಗಿದೆ. ಮೆದುಳು ಅದೇ ಆಗಿದ್ದರೂ ಅದರ ಸುತ್ತಲಿನ ಜಗತ್ತು ಸಂಪೂರ್ಣ ಬದಲಾಗಿದೆ.
ಮನುಷ್ಯನ ಮೆದುಳಿಗೆ ಒಂದು ವಿಶೇಷ ಗುಣವಿದೆ. ಅದು ಹೊಸತನವನ್ನು ಇಷ್ಟಪಡುತ್ತದೆ. ಹೊಸ ಶಬ್ದ, ಹೊಸ ದೃಶ್ಯ, ಹೊಸ ಮಾಹಿತಿ ಸಿಕ್ಕಾಗ ಮೆದುಳಿನಲ್ಲಿ ಒಂದು ಬಗೆಯ ರಾಸಾಯನಿಕ ಬಿಡುಗಡೆಯಾಗುತ್ತದೆ. ಅದರಿಂದ ಸಂತೋಷ, ಕುತೂಹಲ, ಉತ್ಸಾಹ ಉಂಟಾಗುತ್ತದೆ. ಹಿಂದೆ ಆ ರಾಸಾಯನಿಕ ಸೃಜಿಸುವುದಕ್ಕೆ ಮನುಷ್ಯ ಗಂಟೆಗಟ್ಟಲೆ ದುಡಿಯಬೇಕಾಗುತ್ತಿತ್ತು, ಕಾಯಬೇಕಿತ್ತು. ತಿಂಗಳುಗಟ್ಟಲೆ ಕಷ್ಟಪಟ್ಟು ಬೆಳೆಸಿದ ಪೈರು ಕಟಾವು ಮಾಡಿದಾಗ ರೈತನಿಗೆ ಸಿಗುತ್ತಿದ್ದ ಸಂತೋಷ, ವಿದ್ಯಾರ್ಥಿ ವರ್ಷಗಟ್ಟಲೆ ಓದಿ ಫಲಿತಾಂಶ ಪಡೆದಾಗ ಸಿಗುವ ಖುಷಿ, ಪ್ರೇಮಿಯೊಬ್ಬ ತಿಂಗಳುಗಟ್ಟಲೆ ಕಾಯ್ದು ಒಂದು ಒಲವಿನ ಪತ್ರ ಪಡೆದಾಗ ಆಗುವ ಸಂಭ್ರಮ-ಇವೆಲ್ಲವೂ ತಡವಾಗಿ ಸಿಗುವ ಪ್ರತಿಫಲಗಳಾಗಿದ್ದವು.
ಆದರೆ ಇಂದು ಮೊಬೈಲ್ ಜಗತ್ತು ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿದೆ. ಒಂದು ಸ್ಕೈಪ್ ಮಾಡಿದರೆ ಹೊಸ ವೀಡಿಯೊ, ಇನ್ನೊಂದು ಸ್ಕೈಪ್ ಮಾಡಿದರೆ ಹೊಸ ಸುದ್ದಿ, ಮತ್ತೊಂದು ಸ್ಕೈಪ್ ಮಾಡಿದರೆ ಹೊಸ ಹಾಸ್ಯ.ಮೆದುಳಿಗೆ ಬೇಕಾದ ಖುಷಿಯ ರಸ ಈಗ ಕ್ಷಣಕ್ಷಣಕ್ಕೂ ಸಿಗುತ್ತಿದೆ. ಪರಿಣಾಮವಾಗಿ ವೇಗವಾಗಿ ಬರುವ ಇಂಥ ಸಂತೋಷಗಳಿಗೆ ಮೆದುಳು ಕಡಿಮೆ ಮೌಲ್ಯ ನೀಡಲು ಆರಂಭಿಸಿದೆ. ಅದಕ್ಕಾಗಿಯೇ ಪುಸ್ತಕ ಓದುವುದು ಕಷ್ಟವೆನಿಸುತ್ತದೆ, ಒಂದು ಗಂಟೆಯ ಉಪನ್ಯಾಸ ಕೇಳುವುದು ಬೇಸರವಾಗುತ್ತದೆ, ಬಸ್ಸು ಐದು ನಿಮಿಷ ತಡವಾದರೂ ಕೋಪ ಬರುತ್ತದೆ, ಅಪ್ಪನ ಮಾತು, ಅಮ್ಮನ ಮಾತು, ಅಕ್ಕನ ಮಾತು... ಎಲ್ಲವೂ ಇಷ್ಟವಾಗದೆ ಹೋಗುತ್ತದೆ. ಇಂಟರ್ನೆಟ್ ಹತ್ತು ಸೆಕೆಂಡು ನಿಧಾನವಾದರೂ ಅಸಹನೆ ಉಂಟಾಗುತ್ತದೆ.
ಇದು ಜೈವಿಕ ಬದಲಾವಣೆ ಅಲ್ಲ; ಜೈವಿಕ ವ್ಯವಸ್ಥೆಯ ಮೇಲೆ ಪರಿಸರದ ಒತ್ತಡ.
ನಮ್ಮ ಅಜ್ಜನ ಕಾಲದಲ್ಲಿ ದೇರ್ಲಕ್ಕೆ ಒಂದು ಪತ್ರ ಬರುವುದಕ್ಕೆ ವಾರಗಳು ಬೇಕಾಗುತ್ತಿತ್ತು. ಆ ಕಾಯುವಿಕೆಯಲ್ಲಿ ಒಂದು ಸೌಂದರ್ಯವಿತ್ತು. ಇಂದು ವಾಟ್ಸ್‌ಆ್ಯಪ್‌ನಲ್ಲಿ ಎರಡು ನಿಮಿಷಕ್ಕೆ ಉತ್ತರ ಬರದಿದ್ದರೆ ಎದುರಾಳಿಯ ಮೇಲೆ ಅನುಮಾನ ಹುಟ್ಟುತ್ತದೆ. ಉತ್ತರ ತಡವಾಗುವುದಲ್ಲ; ನಮ್ಮ ಸಹನೆಯ ಗಡಿಯೇ ಕುಗ್ಗಿ ಹೋಗುತ್ತದೆ.
ಈ ಕಾರಣಕ್ಕಾಗಿಯೇ ಇದು ‘ಕ್ಷಣಿಕ ತೃಪ್ತಿಯ ಸಂಸ್ಕೃತಿಯ, ಅವಸರದ ಕಾಲ’. ಇಂದು ಎಲ್ಲವೂ ತಕ್ಷಣ ಬೇಕು. ಕಾಫಿ ತಕ್ಷಣ, ಊಟ ತಕ್ಷಣ, ಮಾಹಿತಿ ತಕ್ಷಣ, ಹಣ ವರ್ಗಾವಣೆ ತಕ್ಷಣ, ಮನರಂಜನೆ ತಕ್ಷಣ. ಇಡೀ ಸಮಾಜವೇ ಕಾಯುವಿಕೆಯನ್ನು ಶತ್ರುವಿನಂತೆ ನೋಡುತ್ತಿದೆ. ಪರಿಣಾಮವಾಗಿ ತಾಳ್ಮೆ ಎನ್ನುವ ಸ್ನಾಯು ಬಳಕೆಯಾಗದೆ ಕ್ಷೀಣಿಸುತ್ತಿದೆ.
ತಾಳ್ಮೆಯೂ ಒಂದು ರೀತಿಯ ಮಾನಸಿಕ ಸ್ನಾಯುವೇ. ಬಳಸಿದಷ್ಟು ಬಲಗೊಳ್ಳುತ್ತದೆ. ಬಳಸದಿದ್ದರೆ ದುರ್ಬಲವಾಗುತ್ತದೆ.
ಹಿಂದೆ ನಮ್ಮ ರೈತ ಲೋಕವಂತೂ ತಾಳ್ಮೆಯ ಜಗತ್ತೇ ಆಗಿತ್ತು. ಬೀಜ ಬಿತ್ತಿದ ಮರುದಿನವೇ ಬೆಳೆ ಸಿಗುವುದಿಲ್ಲ. ಮಳೆಯ ನಿರೀಕ್ಷೆ ಮಾಡಬೇಕು. ಮೊಳಕೆ ಬರಲು ಕಾಯಬೇಕು. ರೋಗ ಬರದಂತೆ ಕಾಪಾಡಬೇಕು, ಕಟಾವಿಗೆ ತಿಂಗಳುಗಳ ಕಾಲ ಬೇಕು.
ಆದರೆ ನಗರದ ಬದುಕು ಕಾಯುವಿಕೆಯನ್ನು ಕಡಿಮೆ ಮಾಡಿದೆ. ಇಂಟರ್ನೆಟ್ ವ್ಯಾಪ್ತಿ ಒಳಗಡೆ ನಮ್ಮ ಮೆದುಳು ದಿನವಿಡೀ ಸಾವಿರಾರು ಮಾಹಿತಿಗಳನ್ನು ಸ್ವೀಕರಿಸುತ್ತದೆ. ಸುದ್ದಿ, ಜಾಹೀರಾತು, ರೀಲ್ಸ್, ಮೆಸೇಜ್‌ಗಳು, ನೋಟಿಫಿಕೇಶನ್‌ಗಳು. ಈ ನಿರಂತರ ದಾಳಿಯಿಂದ ಮೆದುಳು ಆಯಾಸಗೊಳ್ಳುತ್ತದೆ. ಆಯಾಸಗೊಂಡ ಮನಸ್ಸಿಗೆ ತಾಳ್ಮೆ ಕಡಿಮೆ.
ಆದರೆ ಇದನ್ನು ಕೇವಲ ಮೊಬೈಲ್ ಮೇಲಷ್ಟೇ ಹಾಕಿ ತಪ್ಪಿಸಿಕೊಳ್ಳಲಾಗುವುದಿಲ್ಲ.
ಮೊಬೈಲ್ ಒಂದು ಸಾಧನ ಮಾತ್ರ. ಸಮಸ್ಯೆ ನಮ್ಮ ಬಳಕೆಯ ವಿಧಾನದಲ್ಲಿದೆ. ಅದೇ ಮೊಬೈಲ್‌ನಲ್ಲಿ ಒಬ್ಬರು ಎರಡು ಗಂಟೆ ಸಾಹಿತ್ಯ ಓದುತ್ತಾರೆ. ಸಂಗೀತ ಕೇಳುತ್ತಾರೆ, ಇನ್ನೊಬ್ಬರು ಎರಡು ಗಂಟೆ ರೀಲ್ಸ್ ನೋಡುತ್ತಾರೆ. ಪರಿಣಾಮ ಒಂದೇ ಆಗುವುದಿಲ್ಲ. ನಿಜವಾದ ಪ್ರಶ್ನೆ ಎಂದರೆ ನಾವು ನಮ್ಮ ಗಮನವನ್ನು ಯಾರಿಗೆ ಒಪ್ಪಿಸಿದ್ದೇವೆ ಎನ್ನುವುದು.
ಗಮನ ಕಳೆದುಕೊಂಡ ಮನುಷ್ಯ ತಾಳ್ಮೆಯನ್ನೂ ಕಳೆದುಕೊಳ್ಳುತ್ತಾನೆ. ಅದಕ್ಕೇ ಇಂದಿನ ಜಗತ್ತಿನಲ್ಲಿ ತಾಳ್ಮೆ ಒಂದು ನೈತಿಕ ಗುಣವಲ್ಲ; ಅದು ಒಂದು ಕೌಶಲ್ಯ. ಅದನ್ನು ಜಾಗೃತಿಯಿಂದ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದು, ತೋಟದಲ್ಲಿ ಕೆಲಸ ಮಾಡುವುದು, ನಡೆಯುವುದು, ಸಂಗೀತ ಕೇಳುವುದು, ಮೀನು ಹಿಡಿಯುವುದು, ಕೃಷಿ ಮಾಡುವುದು, ಮಕ್ಕಳ ಜೊತೆ ಸಮಯ ಕಳೆಯುವುದು ಇವೆಲ್ಲವೂ ತಾಳ್ಮೆಯನ್ನು ಮರಳಿ ಕಲಿಸುವ ಶಾಲೆಗಳು.
ಪ್ರತಿಯೊಂದು ಫಲಕ್ಕೂ ಅದರದ್ದೇ ಕಾಲವಿದೆ ಎಂದು ಪ್ರಕೃತಿ ರೈತನಿಗೆ ಪ್ರತಿದಿನ ಕಲಿಸುತ್ತದೆ.
ಬಹುಶಃ ಅದಕ್ಕೇ ಕೃಷಿ ಮಾಡುವ ಮನುಷ್ಯನ ಮುಖದಲ್ಲಿ ಬೇರೆಯವರಿಗಿಂತ ಹೆಚ್ಚು ಒಂದು ವಿಶಿಷ್ಟ ಶಾಂತಿ ಕಾಣುತ್ತದೆ. ಆತ ಸಮಯದ ಜೊತೆ ಹೋರಾಡುವುದಿಲ್ಲ; ಸಮಯದ ಜೊತೆ ನಡೆಯುತ್ತಾನೆ. ಬದುಕುತ್ತಾನೆ!






