Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಸರಕಾರದ ಬಾಗಿಲಲ್ಲಿ ನಾನೆಂಬ ತಬರ !

ಸರಕಾರದ ಬಾಗಿಲಲ್ಲಿ ನಾನೆಂಬ ತಬರ !

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ1 Nov 2026 10:24 AM IST
share
ಸರಕಾರದ ಬಾಗಿಲಲ್ಲಿ ನಾನೆಂಬ ತಬರ !

ತೇಜಸ್ವಿಯವರ ತಬರನಿಗೆ ನ್ಯಾಯ ಸಿಗದ ನೋವು ಕಥೆಯೊಳಗೆ ಮಾತ್ರ ಉಳಿಯಬೇಕಿತ್ತು. ಇಂದಿನ ತಂತ್ರಜ್ಞಾನದ ಕಾಲದಲ್ಲಿ ಮತ್ತೆ ಮತ್ತೆ ನನ್ನಂಥ ಹೊಸ ತಬರರು ಹುಟ್ಟಬಾರದು. ಪ್ರಜಾಸೌಧದ ಬಾಗಿಲು ದಾಟುವ ಮನುಷ್ಯನಿಗೆ ತಾನು ಪ್ರಜೆ, ಈ ದೇಶದ ವ್ಯವಸ್ಥೆಯಲ್ಲಿ ತನಗೂ ಗೌರವವಿದೆ ಎಂಬ ಭರವಸೆ ಸಿಗಬೇಕು. ಆತ ಅಧಿಕಾರಿಯ ಮುಂದೆ ಕೈಮುಗಿದು ನಿಲ್ಲಬೇಕಾಗಿಲ್ಲ; ತನ್ನ ಅರ್ಜಿಯ ಸ್ಥಿತಿ ತಿಳಿಯಲು ಹಿಂಜರಿಯಬೇಕಾಗಿಲ್ಲ; ತನ್ನ ಕೆಲಸ ಮಾಡಿಸಿಕೊಳ್ಳಲು ಹಣದ ದಾರಿ ಹಿಡಿಯಬೇಕಾಗಿಲ್ಲ. ಈ ಸರಳವಾದ ನ್ಯಾಯವೇ ನಿಜವಾದ ಆಡಳಿತ ಸುಧಾರಣೆ.

ನಮ್ಮ ರಾಜ್ಯದ ಅನೇಕ ತಾಲೂಕು ಕಚೇರಿಗಳಿಗೆ ಪ್ರಜಾಸೌಧ, ಮಿನಿವಿಧಾನಸೌಧ ಎಂಬ ಹೆಸರು ಕೊಟ್ಟಿದ್ದೇವೆ. ಅಲ್ಲಿ ದೊರೆಯುವ ಸೇವೆಗಳನ್ನು ‘ಪ್ರಜಾಸೇವೆ’ ಎಂದು ಕರೆಯುತ್ತೇವೆ. ಈ ಹೆಸರುಗಳಲ್ಲಿರುವ ಆಶಯ ಬಹಳ ದೊಡ್ಡದು.

ಆದರೆ ಪ್ರಜೆಗಳಿಗಾಗಿ ನಿರ್ಮಿಸಿದ ಸೌಧ, ಪ್ರಜೆಗಳ ಸೇವೆಗಾಗಿ ಇರುವ ಕಚೇರಿ, ಅವುಗಳೊಳಗೆ ಕುಳಿತಿರುವವರು ಅದರ ಅರ್ಥವನ್ನೇ ಮರೆತರೆ ಏನು ಮಾಡುವುದು? ಹಳ್ಳಿಯಿಂದ ಬರುವ ಜನರೊಂದಿಗೆ ಮಾತನಾಡುವ ರೀತಿಯಲ್ಲಿ, ಅರ್ಜಿಗಳನ್ನು ಸ್ವೀಕರಿಸುವ ಮನೋಭಾವದಲ್ಲಿ, ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಹೊಣೆಗಾರಿಕೆಯಲ್ಲಿ ಪ್ರಜಾಸೇವೆಯ ಆಶಯ ಕಾಣಿಸುತ್ತದೆಯೇ? ಕಟ್ಟಡಕ್ಕೆ ಪ್ರಜಾಸೌಧ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಪ್ರಜಾಪರ ಸೌಧವಾಗುವುದಿಲ್ಲ. ಅಲ್ಲಿಗೆ ಬರುವ ಮನುಷ್ಯನಿಗೆ ಗೌರವ ಸಿಕ್ಕಾಗ, ಆತನ ಕೆಲಸಕ್ಕೆ ಕಾಲಮಿತಿ ಇದ್ದಾಗ, ಆತ ಯಾರಿಗೂ ಕೈಮುಗಿಯದೆ ತನ್ನ ಹಕ್ಕನ್ನು ಪಡೆದುಕೊಳ್ಳುವಂತಾದಾಗ ಮಾತ್ರ ಆ ಹೆಸರು ಸಾರ್ಥಕವಾಗುತ್ತದೆ.

ನಮ್ಮ ದೇಶದ ಸರಕಾರಿ ಕಚೇರಿಯಲ್ಲಿ, ಅದರಲ್ಲೂ ಕಂದಾಯ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ನಿರ್ಲಕ್ಷ್ಯರು, ಅಪ್ರಾಮಾಣಿಕರು, ಲಂಚಕೋರರು ಎಂದು ನಾನು ಯಾವತ್ತೂ ಹೇಳಲಾರೆ. ಜನರ ಕೆಲಸಗಳನ್ನು ತಮ್ಮ ಕರ್ತವ್ಯವೆಂದು ತಿಳಿದು ಪ್ರಾಮಾಣಿಕವಾಗಿ ಮತ್ತು ಅಷ್ಟೇ ವೇಗವಾಗಿ ಸ್ಪಂದಿಸುವ ಕೆಲವು ಅಧಿಕಾರಿಗಳಿದ್ದಾರೆ. ರಾಜಕೀಯ ಒತ್ತಡಗಳ ನಡುವೆಯೂ ನಿಷ್ಠೆಯಿಂದ ಕೆಲಸ ಮಾಡುವವರಿದ್ದಾರೆ. ಆದರೆ ಅಂಥವರಿರುವ ವ್ಯವಸ್ಥೆಯಲ್ಲಿಯೇ ಕೆಲವರ ನಿರ್ಲಕ್ಷ್ಯ, ವಿಳಂಬ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮನೋಭಾವ ಇಡೀ ಇಲಾಖೆಯ ಬಗ್ಗೆ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಒಂದು ಕಡತವನ್ನು ಮುಂದಕ್ಕೆ ಕಳಿಸದೆ ಇಟ್ಟುಕೊಳ್ಳುವುದರಿಂದ ಯಾರ ಬದುಕು ಎಷ್ಟು ದಿನ ನಿಂತುಹೋಗುತ್ತದೆ ಎಂಬುದನ್ನು ಆ ಕಡತದ ಮೇಲೆ ಲಂಚದ ಹಣಕ್ಕಾಗಿ ಕೈ ಇಟ್ಟು ಕಾಯುವವರು ಯೋಚಿಸಬೇಕು. ಅವರ ಪಾಲಿಗೆ ಅದು ಕೇವಲ ಕಾಗದದ ಒಂದು ಕಟ್ಟು. ಆದರೆ ಅರ್ಜಿ ಕೊಟ್ಟವನ ಪಾಲಿಗೆ ಅದು ಜಮೀನಿನ ಹಕ್ಕು, ಸಾಲ ಪಡೆಯುವ ಅವಕಾಶ, ಮಕ್ಕಳ ಭವಿಷ್ಯ, ಕುಟುಂಬದ ನೆಮ್ಮದಿ ಅಥವಾ ತನ್ನ ಬದುಕಿನ ಬಹುಕಾಲದ ದುಡಿಮೆಯ ಒಟ್ಟು ದಾಖಲೆ.

ನಿವೃತ್ತಿಯ ನಂತರ ಕೃಷಿಯೊಂದಿಗೆ ನೆಮ್ಮದಿಯಿಂದ ಬದುಕಬೇಕೆಂದುಕೊಂಡಿದ್ದ ನನಗೆ, ಭೂಮಿಯ ಪ್ಲಾಟಿಂಗ್, ಪೋಡಿ, ಕೆಲವೊಂದು ಭೂ ದಾಖಲೆ ತಿದ್ದುಪಡಿಗಾಗಿ ತಾಲೂಕು ಕಚೇರಿಗೆ ಆರು ತಿಂಗಳಿಗೂ ಹೆಚ್ಚು ಕಾಲ ಅಲೆಯಬೇಕಾಯಿತು. ಅಲ್ಲಿದ್ದವರಲ್ಲಿ ಕೆಲವರು ನನ್ನ ವಿದ್ಯಾರ್ಥಿಗಳು; ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನನ್ನನ್ನು ಗೌರವಿಸಿದವರೂ, ಗಾಂಧಿ ಜಯಂತಿ, ಬಸವ ಜಯಂತಿಗಳಂದು ಭಾಷಣ ಮಾಡಿಸಿದವರೂ ಇದ್ದರು. ಸಮಾಜದ ಮೌಲ್ಯಗಳ ಕುರಿತು ಮಾತನಾಡಲು ಆಹ್ವಾನಿಸುವ ಅದೇ ವ್ಯವಸ್ಥೆಯಲ್ಲೇ , ನನ್ನದೇ ಒಂದೆರಡು ಕಡತಕ್ಕಾಗಿ ಅಸಹಾಯಕನಾಗಿ ನಿಲ್ಲಬೇಕಾದಾಗ ಸಮಸ್ಯೆ ವ್ಯಕ್ತಿಯದ್ದಲ್ಲ, ಇಡೀ ವ್ಯವಸ್ಥೆಯದ್ದೆನಿಸಿತು. ಆ ದಾರಿಯುದ್ದ ಲಂಚ ಕೊಡದೆ, ಪ್ರಭಾವ ಬಳಸದೆ ನಿಯಮದ ದಾರಿಯಲ್ಲಿಯೇ ಕೆಲಸ ಮಾಡಿಸಿಕೊಳ್ಳಬೇಕೆಂಬುದು ನನ್ನ ಸಣ್ಣ ಹಠ ಸೋತು ಸುಣ್ಣವಾಯಿತು ಮತ್ತು ಅದಕ್ಕಾಗಿ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಬೇಕಾಯಿತು.

ನನ್ನಂತಹ ನಿವೃತ್ತ ಅಧ್ಯಾಪಕನಿಗೆ ಈ ಓಡಾಟ ಸಾಧ್ಯವಿರಬಹುದು. ಆದರೆ ದಿನಗೂಲಿ ಮಾಡುವವನಿಗೆ, ಗದ್ದೆ ತೋಟದ ಕೆಲಸ ಬಿಟ್ಟು ಬಹುದೂರದ ಹಳ್ಳಿಯಿಂದ ಬರುವ ರೈತನಿಗೆ, ಪಿಂಚಣಿಗಾಗಿ ಅಲೆದಾಡುವ ವೃದ್ಧರಿಗೆ ಇದು ಎಷ್ಟು ಕಷ್ಟ? ಜನರ ಕೆಲಸ ಸುಲಭಗೊಳಿಸಬೇಕಾದ ಕಚೇರಿಯೇ ಅವರ ಬದುಕನ್ನು ತಡೆತಡೆದು ಕಷ್ಟಗೊಳಿಸಿದರೆ ಕೇಳುವವರು ಯಾರು? ಅಲ್ಲಿ ನಿಯಮಗಳಿರುವುದಷ್ಟೇ ಸಾಲದು; ಜನರ ಬಗ್ಗೆ ಕಾಳಜಿಯೂ ಇರಬೇಕು.

ನನ್ನ ಈ ಓಡಾಟದ ಅವಧಿಯಲ್ಲಿ ನನಗೆ ಮತ್ತೆ ಮತ್ತೆ ನೆನಪಾಗುತ್ತಿದ್ದದ್ದು ತೇಜಸ್ವಿಯವರ ‘ತಬರನ ಕಥೆ’. ಐದಾರು ದಶಕಗಳ ಹಿಂದಿನ ಆ ಕಥೆಯ ತಬರ ಒಬ್ಬ ವ್ಯಕ್ತಿ ಮಾತ್ರವಲ್ಲ; ಸರಕಾರಿ ವ್ಯವಸ್ಥೆಯ ಮುಂದೆ ತನ್ನ ಹಕ್ಕಿಗಾಗಿ ನಿಂತು ನಿಂತು ದಣಿಯುವ ಅಸಂಖ್ಯಾತ ಜನಸಾಮಾನ್ಯರ ಪ್ರತಿನಿಧಿ. ಕಚೇರಿಯೊಳಗೆ ನಿಯಮಗಳಿವೆ, ಅಧಿಕಾರಿಗಳಿದ್ದಾರೆ, ಕಡತಗಳಿವೆ, ಸಹಿಗಳಿವೆ. ಆದರೆ ಇವೆಲ್ಲದರ ಮಧ್ಯೆ ಮನುಷ್ಯ ಎಲ್ಲಿ ಕಳೆದುಹೋಗುತ್ತಾನೆ ಎಂಬ ಪ್ರಶ್ನೆಯನ್ನು ತೇಜಸ್ವಿ ಆಗ ನಮ್ಮ ಮುಂದಿಟ್ಟಿದ್ದರು. ಆ ಕಥೆಯನ್ನು ಓದುವಾಗ ಅದು ಒಂದು ಕಾಲದ ಆಡಳಿತ ವ್ಯವಸ್ಥೆಯ ಚಿತ್ರಣ ಎಂದುಕೊಳ್ಳಬಹುದಿತ್ತು. ಆದರೆ ಇಂದಿಗೂ ನಮ್ಮ ಕಚೇರಿಗಳಲ್ಲಿ ಓಡಾಡುವ ಜನರನ್ನು ನೋಡಿದಾಗ ತಬರನ ಸಂಕಟ ಮುಗಿದಿಲ್ಲವೆಂಬ ಅನುಮಾನ ಕಾಡುತ್ತದೆ.

ಕಾಲ ಬದಲಾಗಿದೆ, ಕಟ್ಟಡಗಳು ಬದಲಾಗಿವೆ, ಕಂಪ್ಯೂಟರ್‌ಗಳು ಬಂದಿವೆ, ಅರ್ಜಿಗಳ ಸ್ವರೂಪ ಬದಲಾಗಿದೆ. ಆಗಾಗ ಅನಿರೀಕ್ಷಿತ ಭೇಟಿಕೊಟ್ಟು ಚುರುಕು ಮುಟ್ಟಿಸುವ ಜನಪ್ರತಿನಿಧಿಗಳು ಇರುತ್ತಾರೆ. ಆದರೆ ತನ್ನದೇ ಕೆಲಸಕ್ಕಾಗಿ ಒಬ್ಬ ಮನುಷ್ಯ ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಸ್ಥಿತಿ ಬದಲಾಗಿದೆಯೇ? ಡಿಜಿಟಲ್ ಆಡಳಿತದ ಬಗ್ಗೆ ನಾವು ಬಹಳ ಮಾತನಾಡುತ್ತೇವೆ. ಆನ್‌ಲೈನ್ ಅರ್ಜಿ, ಡಿಜಿಟಲ್ ದಾಖಲೆ, ಭೂಮಿ ತಂತ್ರಾಂಶ, ಸಕಾಲದಂತಹ ಸೇವಾ ವ್ಯವಸ್ಥೆಗಳು ಜನರ ಕೆಲಸಗಳನ್ನು ಸುಲಭಗೊಳಿಸಬೇಕೆಂಬ ಉದ್ದೇಶದಿಂದ ಬಂದಿವೆ. ಇವುಗಳ ಅಗತ್ಯವನ್ನು ನಾನು ಪ್ರಶ್ನಿಸುವುದಿಲ್ಲ. ಬದಲಾಗಿ ಅವು ನಿಜವಾಗಿಯೂ ಜನರಿಗೆ ಅನುಕೂಲವಾಗಬೇಕು ಎಂದು ಬಯಸುತ್ತೇನೆ. ಆದರೆ ತಂತ್ರಜ್ಞಾನವೆಂದರೆ ಕಚೇರಿಯೊಳಗಿನ ಕಡತಕ್ಕೆ ಹೊಸ ರೂಪ ಕೊಡುವುದಷ್ಟೇ ಅಲ್ಲ. ಕಡತದ ಚಲನೆಗೆ ಹೊಣೆಗಾರಿಕೆ ತರುವುದು, ವೇಗ ಹೆಚ್ಚಿಸುವುದು, ಅರ್ಜಿದಾರನಿಗೆ ಕೆಲಸದ ಸ್ಥಿತಿ ತಿಳಿಸುವುದು, ನಿಗದಿತ ಅವಧಿಯಲ್ಲಿ ಕೆಲಸವಾಗದಿದ್ದರೆ ಕಾರಣ ಕೇಳುವ ವ್ಯವಸ್ಥೆ ರೂಪಿಸುವುದು, ಅನಗತ್ಯವಾಗಿ ಕಚೇರಿಗೆ ಬರುವುದನ್ನು ತಪ್ಪಿಸುವುದು... ಇವುಗಳೂ ಸುಧಾರಣೆಯ ಭಾಗವಾಗಬೇಕು. ಕಂಪ್ಯೂಟರಿನಲ್ಲಿ ಅರ್ಜಿ ಸ್ವೀಕರಿಸಿಕೊಂಡು ಅದೇ ಅರ್ಜಿಯನ್ನು ತಿಂಗಳುಗಟ್ಟಲೆ ಯಾರೂ ಮುಟ್ಟದೆ ಇಟ್ಟರೆ, ಹಳೆಯ ವಿಳಂಬಕ್ಕೆ ಹೊಸ ತಂತ್ರಜ್ಞಾನದ ಹೊದಿಕೆ ಹಾಕಿದಂತಾಗುತ್ತದೆ.

ಲಂಚವೆಂಬುದು ಕೇವಲ ಹಣದ ವ್ಯವಹಾರವಲ್ಲ. ಜನರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಮನೋಭಾವವೂ ಅದರ ಭಾಗವಾಗಿದೆ. ಬೇರೆ ಬೇರೆ ಕಾರಣ ಒಡ್ಡಿ ಒಬ್ಬನ ಕೆಲಸವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ, ಆತ ಮತ್ತೆ ಮತ್ತೆ ಬರುವಂತೆ ಮಾಡಿ, ಕೊನೆಗೆ ಬೇರೆ ದಾರಿ ಹಿಡಿಯುವ ಪರಿಸ್ಥಿತಿಗೆ ತಳ್ಳುವುದೂ ಆಡಳಿತದ ನೈತಿಕತೆಯನ್ನು ಪ್ರಶ್ನಿಸುವ ಸಂಗತಿಯೇ.ಈ ಎಲ್ಲ ವಿಳಂಬಗಳ ಹಿಂದೆ ಕೇವಲ ಲಂಚದ ಉದ್ದೇಶವಿದೆ ಎಂದು ಹೇಳಲಾಗದು. ಸಿಬ್ಬಂದಿಯ ಕೊರತೆ, ಕೆಲಸದ ಒತ್ತಡ, ತಾಂತ್ರಿಕ ಸಮಸ್ಯೆಗಳು ನಿಜವಾಗಿಯೂ ಇರಬಹುದು. ಆದರೆ ಇಂಥ ಕಾರಣಗಳಿದ್ದರೆ ಅವುಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಒಂದು ಅರ್ಜಿ ಎಲ್ಲಿ ಯಾಕೆ ನಿಂತಿದೆ, ಯಾವ ಹೊಸ ಪೂರಕ ದಾಖಲೆ ಬೇಕು, ಯಾರ ಹಂತದಲ್ಲಿ ಕೆಲಸ ಬಾಕಿಯಿದೆ ಎಂಬುದನ್ನು ಅರ್ಜಿದಾರನಿಗೆ ತಿಳಿಸುವುದು ದೊಡ್ಡ ಉಪಕಾರವಲ್ಲ; ಅದು ಆತನ ಹಕ್ಕು. ಆಡಳಿತದಲ್ಲಿ ಪಾರದರ್ಶಕತೆ ಇದ್ದರೆ ಅನಗತ್ಯ ಅನುಮಾನಗಳಿಗೆ ಅವಕಾಶ ಕಡಿಮೆಯಾಗುತ್ತದೆ.

ಭೂಮಿಯ ವಿಚಾರದಲ್ಲಿ ಈ ಸಮಸ್ಯೆ ಇನ್ನೂ ಸೂಕ್ಷ್ಮವಾದುದು. ರೈತನಿಗೆ ಭೂಮಿ ಕೇವಲ ಆಸ್ತಿಯಲ್ಲ. ಅದು ಅವನ ಬದುಕಿನ ನೆಲೆ, ಕುಟುಂಬದ ಇತಿಹಾಸ, ದುಡಿಮೆಯ ನೆನಪು ಮತ್ತು ಮುಂದಿನ ಪೀಳಿಗೆಯ ಭರವಸೆ. ಭೂದಾಖಲೆಗಳಲ್ಲಿ ಅಧಿಕಾರಿಗಳೇ ಯಾವತ್ತೋ ಮಾಡಿದ ಸಣ್ಣ ತಪ್ಪೊಂದು ಹಲವು ವರ್ಷಗಳ ವಿವಾದಕ್ಕೆ ಕಾರಣವಾಗಬಹುದು. ಪೋಡಿ, ಸರ್ವೇ, ಹಕ್ಕುಪತ್ರ, ಪಹಣಿ, ನಕ್ಷೆ ಮುಂತಾದ ಕೆಲಸಗಳಿಗೆ ಸಂಬಂಧಿಸಿದಂತೆ ಒಬ್ಬ ರೈತ ಕಚೇರಿಗೆ ಬಂದಾಗ ಅವನಿಗೆ ಕಾನೂನಿನ ಭಾಷೆಯೂ ಗೊತ್ತಿರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಅವನಿಗೆ ಬೇಕಾಗಿರುವುದು ಸರಳವಾದ ಮಾರ್ಗದರ್ಶನ, ಸ್ಪಷ್ಟವಾದ ಮಾಹಿತಿ ಮತ್ತು ನ್ಯಾಯಸಮ್ಮತವಾದ ಸೇವೆ. ಅವನ ಅಜ್ಞಾನವನ್ನು ಬಳಸಿಕೊಳ್ಳುವುದಕ್ಕಿಂತ ಅವನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುವುದು ಸರಕಾರಿ ಸಿಬ್ಬಂದಿಯ ಕರ್ತವ್ಯ. ಒಂದು ದಾಖಲೆ ಪಡೆಯಲು ಹತ್ತು ಬಾರಿ ಬರುವಂತೆ ಮಾಡುವುದಕ್ಕಿಂತ, ಮೊದಲ ಬಾರಿಯೇ ಯಾವ ದಾಖಲೆ ಬೇಕು ಎಂಬುದನ್ನು ತಿಳಿಸುವುದರಿಂದ ಜನರ ಸಮಯವೂ ಉಳಿಯುತ್ತದೆ, ಕಚೇರಿಯ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ.

ನಾನು ನಿವೃತ್ತ ಅಧ್ಯಾಪಕನಾಗಿ, ಸಾರ್ವಜನಿಕ ಬದುಕಿನಲ್ಲಿ ಒಂದಷ್ಟು ಕಾಲ ಕಳೆದವನಾಗಿ, ಕಚೇರಿಗಳಲ್ಲಿ ಓಡಾಡುವಾಗ ಕೆಲವು ಸಂಗತಿಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಓದಲು ಬರೆಯಲು ಬಾರದವರು, ತಮ್ಮ ಸಮಸ್ಯೆಯನ್ನು ಸರಿಯಾಗಿ ವಿವರಿಸಲಾರದವರು, ಕಾನೂನು ಪ್ರಕ್ರಿಯೆಗಳ ಪರಿಚಯವಿಲ್ಲದವರು ಈ ಕಚೇರಿಗಳಲ್ಲಿ ಎಷ್ಟು ಅಸಹಾಯಕರಾಗಿರಬಹುದು ಎಂದು ಯೋಚಿಸಿದಾಗ ಮನಸ್ಸಿಗೆ ನೋವಾಗುತ್ತದೆ. ಕಚೇರಿಯ ಬಾಗಿಲಿನವರೆಗೆ ಬಂದು ಅಲ್ಲಿನ ಭಾಷೆ, ಕ್ರಮ, ಅಧಿಕಾರಿಗಳ ವರ್ತನೆಗಳಿಗೆ ಹೆದರಿ ಹಿಂದಿರುಗುವವರೂ ಎಷ್ಟೋ ಮಂದಿ. ನನ್ನಂಥವರಿಂದ ಅಧಿಕಾರಿಗಳಿಗಾಗುವ ದೊಡ್ಡ ಕಷ್ಟ ‘ಈತನಿಂದ ಲಂಚ ಪಡೆಯಲಾಗವುದಿಲ್ಲ’ ಎಂಬ ಸಂಕೋಚ, ‘ಲಾಭಕರ ವ್ಯಕ್ತಿಯಲ್ಲ’ ಅನ್ನುವ ಸೀಮಿತತೆ. ಇದರಿಂದ ಆಗಬಹುದಾದ ನಿಧಾನ ಗತಿ, ಅಸಹಾಯಕತೆಯನ್ನೇ ದುಡ್ಡಾಗಿ ಪರಿವರ್ತಿಸಿಕೊಳ್ಳುವ ದಲ್ಲಾಳಿಗಳು ಅಲ್ಲೇ ಬೀಡುಬಿಟ್ಟಿರುತ್ತಾರೆ. ಬೇರೆಯವರ ಕಥೆ ನೋಡಿ, ದಿನದ ಕೂಲಿ ಬಿಟ್ಟು ಬಂದವನಿಗೆ ಒಂದು ದಿನದ ವಿಳಂಬವೆಂದರೆ ಒಂದು ದಿನದ ಆದಾಯದ ನಷ್ಟ. ಬಸ್ಸು ಹಿಡಿದು ದೂರದ ಊರಿನಿಂದ ಬಂದವನಿಗೆ ಮತ್ತೆ ಬರುವುದೆಂದರೆ ಪ್ರಯಾಣದ ಖರ್ಚು, ಸಮಯದ ನಷ್ಟ. ಮನೆಯಲ್ಲಿರುವ ಅನಾರೋಗ್ಯದ ವ್ಯಕ್ತಿಯನ್ನು ಬಿಟ್ಟು ಬಂದವನಿಗೆ ಕಚೇರಿಯ ಒಂದು ಸುತ್ತು ಇನ್ನೊಂದು ಆತಂಕ. ಈ ನಷ್ಟಗಳನ್ನು ಯಾವ ಕಡತದಲ್ಲೂ ದಾಖಲಿಸುವುದಿಲ್ಲ. ಆದರೆ ಅವು ಜನಸಾಮಾನ್ಯರ ಬದುಕಿನ ಮೇಲೆ ಬೀರುವ ಪರಿಣಾಮ ಎಷ್ಟೊಂದು ದೊಡ್ಡದು?.

ಒಂದು ತಾಲೂಕಿನ ಆಡಳಿತವನ್ನು ಶಕ್ತಿಕೇಂದ್ರದ ದೊಡ್ಡ ಕಟ್ಟಡಗಳಿಂದಲೋ, ಅಲ್ಲಿ ಆಗಾಗ ಉದ್ಘಾಟಿಸುವ ಯೋಜನೆಗಳಿಂದಲೋ, ಅಲ್ಲಿ ನಡೆಯುವ ಗಾಂಧಿ ಜಯಂತಿ, ಬಸವ ಜಯಂತಿಯಿಂದ ಅಳೆಯಬಾರದು. ದೂರದ ಹಳ್ಳಿಯಿಂದ ಬಂದ ಒಬ್ಬ ರೈತನ ಅರ್ಜಿ ಎಷ್ಟು ದಿನಗಳಲ್ಲಿ ವಿಲೇವಾರಿಯಾಗುತ್ತದೆ ಎಂಬುದರಿಂದಲೂ ಅಳೆಯಬೇಕು. ವೃದ್ಧೆಯೊಬ್ಬಳು ತನ್ನ ಜಮೀನಿನ ದಾಖಲೆಯನ್ನು ಪಡೆಯಲು ಎಷ್ಟು ಬಾರಿ ಕಚೇರಿಗೆ ಬರಬೇಕಾಗುತ್ತದೆ ಎಂಬುದರಿಂದಲೂ ಅಳೆಯಬೇಕು. ಒಬ್ಬ ಕೂಲಿ ಕಾರ್ಮಿಕ ತನ್ನ ನ್ಯಾಯಯುತ ಕೆಲಸಕ್ಕಾಗಿ ಯಾರಿಗಾದರೂ ಹಣ ಕೊಡಬೇಕಾದ ಅನಿವಾರ್ಯತೆ ಎದುರಿಸುತ್ತಾನೆಯೇ ಎಂಬುದರಿಂದಲೂ ಅಳೆಯಬೇಕು. ಜನರ ಬದುಕಿನಲ್ಲಿ ಆಡಳಿತದ ಮುಖ ಕಾಣಿಸುವುದು ಇಂಥ ಸಣ್ಣ ಕೆಲಸವೆಂದು ಕಾಣುವ ಸಂದರ್ಭಗಳಲ್ಲಿಯೇ.

ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಚುನಾವಣೆಗಳ ದಿನ ಮಾತ್ರವಲ್ಲ; ಪ್ರತೀ ದಿನ ಸರಕಾರಿ ಕಚೇರಿಯ ಬಾಗಿಲಿಗೆ ಬರುವ ಪ್ರಜೆಯೊಂದಿಗೆ ವ್ಯವಸ್ಥೆ ಹೇಗೆ ನಡೆದುಕೊಳ್ಳುತ್ತದೆ ಎಂಬುದರಲ್ಲಿದೆ.

ಸರಕಾರಗಳು ಸುಧಾರಣೆಗಳನ್ನು ಘೋಷಿಸುತ್ತವೆ. ಹೊಸ ಯೋಜನೆಗಳನ್ನು ತರುತ್ತವೆ. ಅಧಿಕಾರಿಗಳಿಗೆ ತರಬೇತಿ ಕೊಡುತ್ತವೆ. ತಂತ್ರಜ್ಞಾನವನ್ನು ಬಳಸುತ್ತವೆ. ಇವೆಲ್ಲವೂ ಅಗತ್ಯವೇ. ಆದರೆ ಅಧಿಕಾರಿಗಳಿಗೆ ಜನಸೇವೆಯ ಮನೋಭಾವವಿಲ್ಲದಿದ್ದರೆ ಯಾವ ಸುಧಾರಣೆಯೂ ಪೂರ್ಣವಾಗುವುದಿಲ್ಲ. ಒಂದು ಕಡತವನ್ನು ಮುಂದಕ್ಕೆ ಕಳಿಸುವುದೂ ಸೇವೆಯೇ, ಒಬ್ಬ ಅರ್ಜಿದಾರನಿಗೆ ಸರಿಯಾದ ಮಾಹಿತಿ ನೀಡುವುದೂ ಸೇವೆಯೇ, ಕೆಲಸ ವಿಳಂಬವಾಗಿದ್ದರೆ ಅದರ ಕಾರಣ ತಿಳಿಸುವುದೂ ಸೇವೆಯೇ. ಇಂಥ ಸರಳ ಕರ್ತವ್ಯಗಳಿಗೆ ಜನರು ಯಾರದೋ ಶಿಫಾರಸು ಹುಡುಕಬೇಕಾಗಬಾರದು. ಲಂಚ ಕೊಡಬೇಕಾಗಬಾರದು. ತಮ್ಮದೇ ಹಕ್ಕಿಗಾಗಿ ಕಚೇರಿಯ ಪರಿಚಿತ ಗೋಡೆಗಳ ನಡುವೆ ಅಲೆದಾಡಬೇಕಾಗಬಾರದು.

ತೇಜಸ್ವಿಯವರ ತಬರನಿಗೆ ನ್ಯಾಯ ಸಿಗದ ನೋವು ಕಥೆಯೊಳಗೆ ಮಾತ್ರ ಉಳಿಯಬೇಕಿತ್ತು. ಇಂದಿನ ತಂತ್ರಜ್ಞಾನದ ಕಾಲದಲ್ಲಿ ಮತ್ತೆ ಮತ್ತೆ ನನ್ನಂಥ ಹೊಸ ತಬರರು ಹುಟ್ಟಬಾರದು. ಪ್ರಜಾಸೌಧದ ಬಾಗಿಲು ದಾಟುವ ಮನುಷ್ಯನಿಗೆ ತಾನು ಪ್ರಜೆ, ಈ ದೇಶದ ವ್ಯವಸ್ಥೆಯಲ್ಲಿ ತನಗೂ ಗೌರವವಿದೆ ಎಂಬ ಭರವಸೆ ಸಿಗಬೇಕು. ಆತ ಅಧಿಕಾರಿಯ ಮುಂದೆ ಕೈಮುಗಿದು ನಿಲ್ಲಬೇಕಾಗಿಲ್ಲ; ತನ್ನ ಅರ್ಜಿಯ ಸ್ಥಿತಿ ತಿಳಿಯಲು ಹಿಂಜರಿಯಬೇಕಾಗಿಲ್ಲ; ತನ್ನ ಕೆಲಸ ಮಾಡಿಸಿಕೊಳ್ಳಲು ಹಣದ ದಾರಿ ಹಿಡಿಯಬೇಕಾಗಿಲ್ಲ. ಈ ಸರಳವಾದ ನ್ಯಾಯವೇ ನಿಜವಾದ ಆಡಳಿತ ಸುಧಾರಣೆ.

ನನ್ನ ಕೆಲಸದ ಕಡತ ಎಷ್ಟು ವೇಗವಾಗಿ ಚಲಿಸಿತು ಎಂಬುದಕ್ಕಿಂತ, ಇಂಥ ಅನುಭವವನ್ನು ಎದುರಿಸುವ ಸಾಮಾನ್ಯ ಜನರ ಬದುಕು ಎಷ್ಟು ನಿಧಾನವಾಗಿ ನಿಂತುಹೋಗುತ್ತದೆ ಎಂಬುದೇ ಈಗ ನನ್ನನ್ನು ಹೆಚ್ಚು ಕಾಡುತ್ತಿದೆ. ನಾನು ನನ್ನ ತಾಲೂಕು ಕಚೇರಿಯ ಕಂಬ, ಗೋಡೆ, ಕಿಟಕಿಗಳಿಗೆ ಪರಿಚಿತನಾಗುವಷ್ಟು ಅಲ್ಲಿ ಓಡಾಡಿದ್ದೇನೆ. ಆದರೆ ಪ್ರತಿದಿನ ಅಲ್ಲಿಗೆ ಬರುವ ಪ್ರತಿಯೊಬ್ಬರೂ ಅಷ್ಟು ದಿನ ಓಡಾಡುವ ಶಕ್ತಿ ಹೊಂದಿರುವುದಿಲ್ಲ. ಅವರಿಗಾಗಿ ಪ್ರಜಾಸೌಧಗಳು ನಿಜವಾದ ಪ್ರಜಾಸೌಧಗಳಾಗಬೇಕು. ಕಚೇರಿಯ ಬಾಗಿಲಿನೊಳಗೆ ಕಾಲಿಟ್ಟಾಗಲೇ ಜನರಿಗೆ ತಮ್ಮ ಕೆಲಸವಾಗುತ್ತದೆ ಎಂಬ ವಿಶ್ವಾಸ ಮೂಡಬೇಕು. ಅಂಥ ದಿನ ಬಂದಾಗ ಮಾತ್ರ ತಬರನ ಕಥೆಯನ್ನು ನಾವು ಹಳೆಯ ಕಾಲದ ಕಥೆಯೆಂದು ನೆಮ್ಮದಿಯಿಂದ ಓದಬಹುದು. ಮರೆತುಬಿಡಬಹುದು.

(ಅಂಕಣಕಾರರು: ಉಪನ್ಯಾಸಕರು, ಚಿಂತಕರು)

Tags

Government
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X