ಕೃಷಿಯ ಹೊಸ ಭಾಷೆ: ಮೌಲ್ಯವರ್ಧನೆ

ಕೃಷಿಯಲ್ಲಿ ಮೌಲ್ಯವರ್ಧನೆ ಎಂದರೆ ಕೇವಲ ಬೆಳೆಗಳನ್ನು ಲ್ಯಾಬ್‌ನಲ್ಲಿಟ್ಟು ಅದರ ಮೌಲ್ಯ ಅಂಶಗಳನ್ನು ಅಳೆದು ಸುರಿಯುವುದಲ್ಲ; ಒಂದು ಹಣ್ಣಿನೊಳಗಿನ ಸಾಧ್ಯತೆಯನ್ನು ಗುರುತಿಸುವುದು. ನೆಲಕ್ಕೆ ಬೀಳುವ ಮೊದಲು ಅದರ ಮೌಲ್ಯವನ್ನು ಅರಿಯುವುದು. ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚಲ್ಪಡುತ್ತಿದ್ದ ಹಲಸಿನ ಹಣ್ಣು ಇಂದು ನಗರಗಳಲ್ಲಿ ದುಬಾರಿ ಆಹಾರವಾಗಿದೆ. ಇದು ಮಾರುಕಟ್ಟೆಯ ಬದಲಾವಣೆ ಮಾತ್ರವಲ್ಲ; ಗ್ರಾಮೀಣ ಮನಸ್ಸಿನ ಬದಲಾವಣೆ ಕೂಡ.
ಮೊನ್ನೆ ಮೊನ್ನೆಯವರೆಗೆ ನಮ್ಮ ಹಳ್ಳಿಗಳಲ್ಲಿ ಹಲಸಿನ ಮರವೆಂದರೆ ಮನೆಯ ಹಿಂಭಾಗದ ನೆರಳು. ಗೇರು ಹಣ್ಣು ಕೂಡಾ ಅಷ್ಟೇ, ಕೇಳುವವರಿಲ್ಲದೆ ಮರದಡಿಗೆ ಬಿದ್ದು ಮಣ್ಣಾಗುತ್ತಿತ್ತು. ಹಲಸು ಬಿದ್ದು ಕೊಳೆತು ಹೋಗುವುದು, ಗೇರು ಹಣ್ಣು ಪ್ರಾಣಿಗಳ ಬಾಯಿಗೆ ಸಿಕ್ಕಿ ಇಲ್ಲವಾಗುವುದು ಇವೆಲ್ಲ ಹಳ್ಳಿಗಳಲ್ಲಿ ಸಾಮಾನ್ಯ ದೃಶ್ಯಗಳು. ಮನುಷ್ಯ ತಿನ್ನುವುದಕ್ಕಿಂತ ನೆಲವೇ ಹೆಚ್ಚು ಹಣ್ಣು ತಿಂದ ಕಥೆ ಅದು.
ಆದರೆ ವಿಚಿತ್ರ ನೋಡಿ, ಒಂದು ಸಮಾಜ ಯಾವುದನ್ನಾದರೂ ನಿರ್ಲಕ್ಷ್ಯ ಮಾಡುವಷ್ಟರಲ್ಲೇ ಮತ್ತೊಬ್ಬರು ಅದರೊಳಗೆ ಭವಿಷ್ಯವನ್ನು ಹುಡುಕಲು ಶುರು ಮಾಡುತ್ತಾರೆ. ಕರ್ನಾಟಕದಲ್ಲಿ ಹಲಸು ಮತ್ತು ಗೇರು ಹಣ್ಣಿನ ಕಥೆಯೂ ಹಾಗೆಯೇ. ಈ ತಿರುವಿನ ಹಿಂದೆ ಕೆಲವರ ದೀರ್ಘ ಉಸಿರು, ಹಠ ಮತ್ತು ನಿರಂತರ ಪ್ರಯತ್ನಗಳಿವೆ. ಅವುಗಳಲ್ಲಿ ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀ ಪಡ್ರೆ ಅವರ ಪಾತ್ರವನ್ನು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ.
ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳು ಮಾಡಬೇಕಾಗಿದ್ದ ಕೆಲಸಗಳು, ನಿಗಮಗಳು ಕೈಗೆತ್ತಿಕೊಳ್ಳಬೇಕಾಗಿದ್ದ ಕಾರ್ಯಕ್ರಮಗಳು, ದೊಡ್ಡ ಆಹಾರ ಕಂಪೆನಿಗಳು ರೂಪಿಸಬೇಕಾಗಿದ್ದ ಮೌಲ್ಯವರ್ಧನೆಯ ದಾರಿಗಳು ಇವೆಲ್ಲವನ್ನೂ ಒಬ್ಬ ಕೃಷಿಪತ್ರಿಕೆಯ ಸಂಪಾದಕ ಯಾವುದೇ ಅನುದಾನಗಳಿಲ್ಲದೆ ಭಾರತದ ಗ್ರಾಮಗಳೊಳಗೆ ತಿರುಗುತ್ತಾ, ಆಸಕ್ತರನ್ನು ಹುಡುಕುತ್ತಾ, ಮೇಳಗಳನ್ನು ಆಯೋಜಿಸುತ್ತಾ, ಬರಹಗಳನ್ನು ಬರೆಯುತ್ತಾ ನಿಧಾನವಾಗಿ ರೂಪಿಸುತ್ತ ಬಂದದ್ದು ಈ ಕಾಲದ ವಿಚಿತ್ರ ಸಂಗತಿ.
ಹಲಸಿನ ಬಗ್ಗೆ ವಿಶೇಷ ಸಂಚಿಕೆಗಳನ್ನು ಹೊರತರುವುದು ಮಾತ್ರವಲ್ಲ, ಹಲಸನ್ನು ಮನೆಯ ಅಡುಗೆಮನೆಯಿಂದ ಮಾರುಕಟ್ಟೆಯ ತನಕ ಕೊಂಡೊಯ್ಯುವ ದಾರಿಯನ್ನು ಅವರು ಹುಡುಕಿದರು. ಗೇರು ಹಣ್ಣಿನ ಜ್ಯೂಸ್ ಬಗ್ಗೆ ಜನ ಮಾತನಾಡದ ಕಾಲದಲ್ಲಿ ಅದರ ಪ್ರಯೋಗಗಳನ್ನು ಜನರ ಕೈಗೆ ಇಳಿಸಿದರು. ಮಣ್ಣಿನ ಉಳಿಕೆ, ನೀರಿನ ಸಂರಕ್ಷಣೆ, ಪರಿಸರದ ಪ್ರಶ್ನೆಗಳು, ಕೃಷಿಕರನ್ನೇ ಬರಹಗಾರರನ್ನಾಗಿ ಮಾಡಿದ್ದು... ಈ ಹಿಂದೆ ನಡೆಸಿದ ಅವರ ಆಂದೋಲನಗಳು ಕರ್ನಾಟಕಕ್ಕೆ ಪರಿಚಿತವೇ. ನಂತರ ಆ ಕಾಳಜಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಕಡೆ ತಿರುಗಿತು. ಬಿದಿರು, ಹಲಸು, ಹಲಸಿನ ಬೀಜ, ಗೇರು, ಬಾಳೆಕಾಯಿ, ಬೇಲ... ಹೀಗೆ ಗ್ರಾಮಗಳಲ್ಲಿ ಕಡೆಗಣಿತವಾಗಿದ್ದ ವಸ್ತುಗಳೊಳಗೆ ಮಾರುಕಟ್ಟೆಯ ಭವಿಷ್ಯವನ್ನು ಅವರು ನೋಡಿದರು.
ಒಂದು ಬರಹ ಬರೆಯುವುದು ಸುಲಭ. ಮತ್ತೆ ಮರೆತು ಬಿಡುವುದು ಇನ್ನೂ ಸುಲಭ. ಆದರೆ ಜನರ ಮನೆಯೊಳಗೆ ಇವುಗಳ ಕುಟ್ಟು ಯಂತ್ರಗಳು, ಜ್ಯೂಸ್ ಯಂತ್ರಗಳು ಸದ್ದು ಮಾಡುವಂತೆ ಪ್ರೇರೇಪಿಸುವುದು ಬೇರೆ ಕೆಲಸ. ಮೇಳಗಳನ್ನು ನಡೆಸಿ ಸಾಮೂಹಿಕ ರುಚಿಯನ್ನು ರೂಪಿಸುವುದು ಬೇರೆಯೇ ಕೆಲಸ. ಒಂದು ಉತ್ಪನ್ನದ ಸುತ್ತ ಸಮುದಾಯದ ಕಲ್ಪನೆಯನ್ನು ಕಟ್ಟುವುದು ಇನ್ನೂ ದೊಡ್ಡ ಕೆಲಸ. ಶ್ರೀ ಪಡ್ರೆ ಅವರು ಕಳೆದ ಹಲವು ವರ್ಷಗಳಿಂದ ಇದೇ ಕೆಲಸವನ್ನು ಯಾವುದೇ ಪ್ರಚಾರದ ಬೆಳಕಿಲ್ಲದೆ ನಿರಂತರ ಮಾಡಿಕೊಂಡು ಬಂದವರು.
ಇಂದು ಹಲಸು ನಿಧಾನವಾಗಿ ತನ್ನ ಮಾನ್ಯತೆಯನ್ನು ಮರಳಿ ಪಡೆಯುತ್ತಿದೆ. ಅದು ಕೇವಲ ಹಣ್ಣು ಅಲ್ಲ, ಒಂದು ಭವಿಷ್ಯದ ಆಹಾರ ಸಂಪತ್ತು ಎಂಬ ಅರಿವು ಮೂಡುತ್ತಿದೆ. ಹಲಸಿನ ಚಿಪ್ಸ್, ಹಪ್ಪಳ, ಹಿಟ್ಟು, ದೋಸೆ, ಪಲ್ಯ, ಬಿರಿಯಾನಿ, ಕಬಾಬು, ಹಲ್ವಾ.... ಜಗತ್ತಿನಾದ್ಯಂತ ಅದರ ಸಾಧ್ಯತೆಗಳು ಇನ್ನೂ ಸಂಪೂರ್ಣವಾಗಿ ತೆರೆಯಬೇಕಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರದ ಹಲಸು ಮಾಂತ್ರಿಕ ಕೆ.ಎಸ್. ಅಶೋಕ್ ಕುಮಾರ್ ಹೇಳುವ ಮಾತು ಕೇಳಿದರೆ ಅದರೊಳಗಿನ ವ್ಯಾಪಾರದ ಗಾತ್ರ ಅರ್ಥವಾಗುತ್ತದೆ. ‘‘ಈ ದೇಶದ ಯಾವುದೇ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿದರೂ ಚಿಪ್ಸ್ ಸಿಗುತ್ತದೆ. ಆದರೆ ಆ ದೊಡ್ಡ ಮಾರುಕಟ್ಟೆಯೊಳಗೆ ಹಲಸು ಇನ್ನೂ ಸರಿಯಾಗಿ ಪ್ರವೇಶಿಸಿಲ್ಲ. ಯಾರಾದರೂ ಒಬ್ಬರು ಆ ಮಾರುಕಟ್ಟೆಯ ಕೇವಲ ಹತ್ತರಷ್ಟು ಭಾಗವನ್ನಾದರೂ ತೆರೆಯಲು-ಮುಟ್ಟಲು ಸಾಧ್ಯವಾದರೆ ಅದರ ಪ್ರಮಾಣ ಇಂದಿನ ಅಡಿಕೆ ಮಾರುಕಟ್ಟೆಗಿಂತ ದೊಡ್ಡದಾಗಬಹುದು.’’
ಅದೇ ಮಾತು ಹಪ್ಪಳದ ವಿಚಾರಕ್ಕೂ ಅನ್ವಯಿಸುತ್ತದೆ. ಈ ದೇಶದ ಕೋಟ್ಯಂತರ ಜನರ ಊಟದ ತಟ್ಟೆಯಲ್ಲಿ ಪ್ರತಿದಿನ ಹಪ್ಪಳ ಇರುತ್ತದೆ. ಅದು ವೆಜ್ಜು, ನಾನ್ ವೆಜ್ ಯಾವುದೇ ಇರಲಿ, ಅಲ್ಲಿ ಎರಡು ತುಂಡು ಹಪ್ಪಳ ಇರಲೇಬೇಕು. ಭಾರತದ ಬ್ರ್ಯಾಂಡ್‌ಗಳು ಮಂಗಳೂರಿನ ಅಂಗಡಿಗಳಲ್ಲಿಯೂ ಸಿಗುತ್ತವೆ. ಲಿಜ್ಜತ್ ಹಪ್ಪಳ ಎಲ್ಲಾ ಕಡೆ ಇದೆ, ಆದರೆ ನಮ್ಮ ಹಲಸಿನ ಹಪ್ಪಳ ಇನ್ನೂ ಕಾಣುವುದಿಲ್ಲ. ಮಾರುಕಟ್ಟೆ ಖಾಲಿ ಇದೆ. ಅವಕಾಶದ ಬಾಗಿಲು ಅಲ್ಲಿ ತೆರೆದಿದೆ.
ಈ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ಅವರು ಒಂದು ದೊಡ್ಡ ಹೆಬ್ಬಾಗಿಲನ್ನೇ ತೆರೆಯುತ್ತಿದ್ದಾರೆ . ಕೆಲವೊಮ್ಮೆ ಅನಿವಾರ್ಯತೆಗಳು ಬದುಕನ್ನು ಹೊಸ ಸಾಧ್ಯತೆ ಕಡೆಗೆ ತಿರುಗಿಸುತ್ತದೆ ಎನ್ನುವುದಕ್ಕೆ ಈ ಅಶೋಕ್ ಅವರ ಪ್ರಯತ್ನವೇ ಒಂದು ದೃಷ್ಟಾಂತ. ಒಂದು ಕಾಲದಲ್ಲಿ ರೇಷ್ಮೆ, ದ್ರಾಕ್ಷಿ, ಅಡಿಕೆ ಬೆಳೆದ ದೊಡ್ಡಬಳ್ಳಾಪುರದ ಬಹುದೊಡ್ಡ ಹಿಡುವಳಿ ಅವರದು. ಒಮ್ಮೆಲೇ ಅಂತರ್ಜಲ ಕೈಕೊಟ್ಟಾಗ ಸೋತು ಆ ಭೂಮಿಯನ್ನು ಅವರು ಹಡಿಲು ಬಿಡಲಿಲ್ಲ. ಮೂರು ಕಾಸಿಗೆ ಮಾರಿ ಊರಿಗೆ ವಾಪಸಾಗಲಿಲ್ಲ. ದೇಶ ವಿದೇಶ ಸುತ್ತಿ ನೀರಿಲ್ಲದ ನಾಲ್ಕೈದು ಬೆಳೆಗಳನ್ನು ಹುಡುಕಿ ತಂದರು. ಇಂದು ಅವರ ತೋಟದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಹಲಸಿನ ಮರಗಳಿವೆ. ನೂರಾರು ತಳಿಗಳಿವೆ. ಹಲಸು, ಅವಕಾಡೊ, ಮಾವು, ದೀವಿ ಹಲಸು ಎಲ್ಲವೂ ಅಲ್ಲಿ ನೀರಿಲ್ಲದ ಕೃಷಿಗೆ ಹೊಸ ಭಾಷೆ ಕಲಿಸುತ್ತಿವೆ.
ಅವರು ಕೇವಲ ಹಲಸಿನ ಕೃಷಿ ಮಾಡಲಿಲ್ಲ. ಸಮಾನಾಂತರವಾಗಿ ಮಾರುಕಟ್ಟೆಯನ್ನೂ ಹುಡುಕಿದರು. ತೋಟದ ಗೇಟಿನಲ್ಲಿ, ರಸ್ತೆಬದಿಯಲ್ಲಿ, ಆನ್‌ಲೈನ್‌ನಲ್ಲಿ ಹಣ್ಣುಗಳನ್ನು ಹಿಡಿದು ನೇರ ಮಾರಾಟದ ದಾರಿಗಳನ್ನು ಕಂಡುಕೊಂಡರು. ಕಳೆದ ಒಂದು ವರ್ಷದಲ್ಲಿ ಅವರು 45 ಲಕ್ಷ ರೂ. ಮೊತ್ತದ ಹಲಸು ಮಾರಾಟ ಮಾಡಿದ್ದಾರೆ ಎಂದರೆ ಆ ಸಾಮ್ರಾಜ್ಯದಲ್ಲಿ ಅವರ ಪರಿಣತಿ ಎಷ್ಟು ಆಳವಾದದ್ದು ಎಂಬುದನ್ನು ನೀವೇ ಲೆಕ್ಕ ಹಾಕಿ. ನೀರು ಕಡಿಮೆಯಾದ ಭೂಮಿಯಲ್ಲಿ ದಿಕ್ಕೆಡದೆ ಬದುಕಿನ ಸಾಧ್ಯತೆಗಳನ್ನು ಮರುಕಲ್ಪಿಸಿದ ರೈತ ಅವರು.
ನಮ್ಮ ಸಮಾಜದಲ್ಲಿ ಒಂದು ವಿಚಿತ್ರ ದೋಷ ಇದೆ. ಮರ ನಮ್ಮ ಮನೆಯಂಗಳ ಹೊಲದಲ್ಲಿ ನೆಟ್ಟಗೆ ನಿಂತಿರುವವರೆಗೆ ಅದರ ಮೌಲ್ಯ ಕಾಣುವುದಿಲ್ಲ. ಅದೇ ವಸ್ತುವನ್ನು ನಗರದಲ್ಲಿ ಪ್ಯಾಕೆಟ್ ಹೊದಿಸಿ ಮಾರಿದಾಗ ಮಾತ್ರ ಅದನ್ನು ‘ಪ್ರಾಡಕ್ಟ್’ ಎಂದು ಒಪ್ಪುತ್ತೇವೆ. ಹಲಸಿನ ಕಥೆಯೂ ಅದೇ. ಹಳ್ಳಿಯಲ್ಲಿ ಕೊಳೆತು ಬಿದ್ದ ಹಣ್ಣುಗಳೆಲ್ಲ ನಿಧಾನವಾಗಿ, ನಗರದಲ್ಲಿ ಈಗ ಆರೋಗ್ಯಕರ ಆಹಾರವಾಗಿ ಮರುಜನ್ಮ ಪಡೆಯುತ್ತಿದೆ.
ಶ್ರೀ ಪಡ್ರೆ, ಅಶೋಕ್ ಕುಮಾರ್ ಇಂಥ ಹತ್ತಾರು ಮಂದಿಯ ಪ್ರಯತ್ನ, ಹುಡುಕಾಟ ಕೇವಲ ಲೇಖನ ಬರೆಯುವ ಕಾಗದದಲ್ಲಿ, ಅದನ್ನು ಹಂಚುವ ಮಾಧ್ಯಮದಲ್ಲಿ, ಮೇಳಗಳ ಗೋಷ್ಠಿಗಳಲ್ಲಿ ಮಾತ್ರವಲ್ಲ ಈ ನೆಲದ ಪ್ರತಿಯೊಬ್ಬ ರೈತರಲ್ಲೂ ಇರಬೇಕು. ಬಳಕೆದಾರನಲ್ಲೂ ಇರಬೇಕು. ಒಂದು ಕಾಲದಲ್ಲಿ ನಿರ್ಲಕ್ಷ್ಯಗೊಂಡಿದ್ದ ಮರಗಳನ್ನು ಮತ್ತೆ ಗಮನದಿಂದ ನೋಡುವ ದೃಷ್ಟಿ ಸಮಾಜಕ್ಕೆ ಮರಳಬೇಕು. ರೈತ ತನ್ನ ಹೊಲದ ಕಡೆ ಹೊಸ ಕಣ್ಣಿನಿಂದ ನೋಡಲು ಶುರು ಮಾಡಬೇಕು. ನೆಲದಲ್ಲಿ ಬಿದ್ದಿದ್ದ ವಸ್ತುವಿನೊಳಗೆ ಭವಿಷ್ಯದ ಮೌಲ್ಯವನ್ನು ಗುರುತಿಸುವ ಆ ಕ್ಷಣ ಖಂಡಿತ ಕೃಷಿಯನ್ನು ಬೆಳಗುತ್ತದೆ.
ಹಿಂದೆ, ಕೃಷಿ ಯಾವಾಗ ಬದುಕಿನ ಭಾವನಾತ್ಮಕತೆಯ ಭಾಗವಾಗಿತ್ತೋ ಆಗ ಅದು ಕೇವಲ ಆದಾಯದ ಲೆಕ್ಕಾಚಾರವಾಗಿರಲಿಲ್ಲ. ಅದು ಮನೆಯ ಉಸಿರಾಟದ ಹಾಗಿತ್ತು. ಹೊಲದಲ್ಲಿ ಬೆಳೆದದ್ದು ಮಾರುಕಟ್ಟೆಗೆ ಹೋಗುವ ಮೊದಲು ಮನೆಯ ಅಡುಗೆಗೆ ಬರುತ್ತಿತ್ತು. ಮನೆಯ ಅಡುಗೆಯಿಂದ ಹೊರಬಂದ ಮೇಲೆ ಹಟ್ಟಿಯ ದನಗಳಿಗೆ ಹೋಗುತ್ತಿತ್ತು. ಅಲ್ಲಿಂದ ಉಳಿದದ್ದು ಹಕ್ಕಿಗಳ ಪಾಲಾಗುತ್ತಿತ್ತು. ಇನ್ನೂ ಮಿಕ್ಕಿದರೆ ಮಣ್ಣಿನ ಪಾಲಾಗುತ್ತಿತ್ತು. ಅಲ್ಲಿ ನಷ್ಟ ಎನ್ನುವ ಪದಕ್ಕಿಂತ ಹಂಚಿಕೆ ಎನ್ನುವ ಪದಕ್ಕೆ ಹೆಚ್ಚು ಅರ್ಥ ಇತ್ತು. ಮರದಿಂದ ಉದುರಿದ ಮಾವಿನ ಹಣ್ಣು ಕೊಳೆತರೂ ರೈತನಿಗೆ ಬೇಸರ ಇರಲಿಲ್ಲ. ಹಲಸಿನ ಹಣ್ಣು ಕಾಡುಪ್ರಾಣಿಗಳ ಬಾಯಿಗೆ ಸಿಕ್ಕರೂ ಅದು ಪ್ರಕೃತಿಯ ಪಾಲು ಎನ್ನುವ ಸಮಾಧಾನ ಅವನಿಗಿತ್ತು. ಏಕೆಂದರೆ ಕೃಷಿ ಅವನಿಗೆ ಉದ್ಯಮವಾಗಿರಲಿಲ್ಲ, ಅದು ಸಂಸ್ಕೃತಿ ಆಗಿತ್ತು.
ನಮ್ಮ ಹಳ್ಳಿಗಳ ಹಳೆಯ ತೋಟಗಳನ್ನೊಮ್ಮೆ ನೆನಪಿಸಿಕೊಂಡರೆ ಈ ಸತ್ಯ ಸ್ಪಷ್ಟವಾಗಿ ಕಾಣುತ್ತದೆ. ಒಂದು ಮನೆಯ ತೋಟದ ಅಂಚಿನಲ್ಲಿ ಹತ್ತಾರು ಹಳೆಯ ಹಲಸಿನ ಮರಗಳು, ಮಧ್ಯದಲ್ಲಿ ಅಷ್ಟೇ ಕಾಡುಮಾವಿನ ಮರಗಳು. ಬೇಲಿಯ ಬಳಿಯಲ್ಲಿ ಗೇರು. ಮಳೆಗಾಲ ಮುಗಿದು ಬೇಸಿಗೆ ಶುರುವಾದರೆ ಆ ಮರಗಳು ಫಲದಿಂದ ತುಂಬಿ ಹೋಗುತ್ತವೆ. ಸದಾ ನೆಲದ ಮೇಲೆ ಹಣ್ಣುಗಳು ಉದುರುತ್ತವೆ. ಮಕ್ಕಳು ಓಡಿ ಹೋಗಿ ಕೆಲವನ್ನು ತಿನ್ನುತ್ತಾರೆ. ಹೆಂಗಸರು ಒಂದಷ್ಟು ಉಪ್ಪಿನಕಾಯಿ ಹಾಕುತ್ತಾರೆ. ದಾರಿಯಲ್ಲಿ ಹೋಗುವವರೂ ಹೆಕ್ಕಿಯಾರು. ಹಟ್ಟಿಯ ಹಸುಗಳಿಗೆ ಬಿದ್ದದ್ದನ್ನು ಹಾಕುತ್ತಿದ್ದೆವು. ಅದರಾಚೆಗೆ ಆ ಹಣ್ಣನ್ನು ಸಂಗ್ರಹಿಸಿ, ವಿಂಗಡಿಸಿ, ಮಾರುಕಟ್ಟೆಗೆ ಕೊಂಡೊಯ್ದು, ಅದರ ಮೌಲ್ಯ ಹೆಚ್ಚಿಸಿ ಹಣ ಮಾಡುವ ಯೋಚನೆ ಮಾತ್ರ ಹುಟ್ಟುತ್ತಿರಲಿಲ್ಲ. ಯಾಕೆಂದರೆ ಆ ಕೃಷಿಯೊಳಗೆ ವ್ಯಾಪಾರ ಪ್ರಜ್ಞೆ ಗಿಂತ ಬದುಕಿನ ಪ್ರಜ್ಞೆ ಹೆಚ್ಚು ಗಟ್ಟಿಯಾಗಿತ್ತು.
ಆದರೆ ಕೃಷಿ ನಿಧಾನವಾಗಿ ಬದಲಾಗತೊಡಗಿದಾಗ, ಅದು ಕೇವಲ ಅನ್ನದ ದಾರಿ ಅಲ್ಲ ಹಣದ ದಾರಿಯೂ ಎಂದಾದಾಗ, ಅದರೊಳಗೆ ಬಂಡವಾಳದ ಲೆಕ್ಕಗಳು ಪ್ರವೇಶಿಸಿದಾಗ, ಒಂದು ಹೊಸ ಚಿಂತನೆ ಹುಟ್ಟಿತು. ಹಣ ಹಾಕಿ ಗಿಡ ನೆಟ್ಟವನು ಅದರ ಪ್ರತಿಫಲವನ್ನು ಹುಡುಕತೊಡಗಿದ. ಒಂದು ಮರ ಕೇವಲ ನೆರಳು ಕೊಡಬೇಕೆಂದಲ್ಲ, ಆದಾಯ ಕೊಡಬೇಕು ಎನ್ನುವ ನಿರೀಕ್ಷೆ ಶುರುವಾಯಿತು. ಅಲ್ಲೇ ಮೌಲ್ಯವರ್ಧನೆಯ ಆಲೋಚನೆ ಹುಟ್ಟಿಕೊಳ್ಳುತ್ತದೆ. ಹಲಸು ಕೇವಲ ಹಣ್ಣಾಗಿರದೆ ಚಿಪ್ಸ್ ಆಗುತ್ತದೆ, ಹಪ್ಪಳವಾಗುತ್ತದೆ, ಹಿಟ್ಟು ಆಗುತ್ತದೆ. ಗೇರು ಹಣ್ಣು ಕಣೇರು ಕಳೆದು ಜ್ಯೂಸ್ ಆಗುತ್ತದೆ, ನಿಧಾನವಾಗಿ ಇವೆಲ್ಲ ಪ್ಯಾಕೆಟ್‌ನೊಳಗೆ ಕೂತು ಬ್ರ್ಯಾಂಡ್ ಆಗಿ ನಗರಕ್ಕೆ ಹೋಗುತ್ತದೆ. ಕಾಡುಮಾವಿನ ಹಣ್ಣು ಕೇವಲ ಉಪ್ಪಿನಕಾಯಿಯಾಗಿ, ಸಾಸ್ ಆಗಿ ಮಾರುಕಟ್ಟೆ ಸೇರುತ್ತದೆ. ಕೃಷಿ ಒಂದು ಉದ್ಯಮವಾದಾಗ ಪ್ರಕೃತಿಯ ಕೊಡುಗೆಗಳನ್ನು ಸಂಪೂರ್ಣವಾಗಿ ಬಳಸಬೇಕು ಎನ್ನುವ ತುರ್ತು ಅಲ್ಲಿ ಹುಟ್ಟುತ್ತದೆ.
ಹಾಗಂತ ಇದು ಕೇವಲ ಹಣ ಮಾಡುವ ವಿಧಾನವಲ್ಲ. ಕೃಷಿಯೊಳಗಿನ ಒಂದು ಹೊಸ ಅರಿವು. ಕೃಷಿಯಲ್ಲಿ ಮೌಲ್ಯವರ್ಧನೆ ಎಂದರೆ ಕೇವಲ ಬೆಳೆಗಳನ್ನು ಲ್ಯಾಬ್‌ನಲ್ಲಿಟ್ಟು ಅದರ ಮೌಲ್ಯ ಅಂಶಗಳನ್ನು ಅಳೆದು ಸುರಿಯುವುದಲ್ಲ; ಒಂದು ಹಣ್ಣಿನೊಳಗಿನ ಸಾಧ್ಯತೆಯನ್ನು ಗುರುತಿಸುವುದು. ನೆಲಕ್ಕೆ ಬೀಳುವ ಮೊದಲು ಅದರ ಮೌಲ್ಯವನ್ನು ಅರಿಯುವುದು. ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚಲ್ಪಡುತ್ತಿದ್ದ ಹಲಸಿನ ಹಣ್ಣು ಇಂದು ನಗರಗಳಲ್ಲಿ ದುಬಾರಿ ಆಹಾರವಾಗಿದೆ. ಇದು ಮಾರುಕಟ್ಟೆಯ ಬದಲಾವಣೆ ಮಾತ್ರವಲ್ಲ; ಗ್ರಾಮೀಣ ಮನಸ್ಸಿನ ಬದಲಾವಣೆ ಕೂಡ.
ಹಾಗಂತ ಈ ಪ್ರಪಂಚದಲ್ಲಿ ಇನ್ನೂ ಸಂಪೂರ್ಣವಾಗಿ ಲಾಭಾಂಶದ ಕಡೆಗೆ ತಿರುಗದ ಉದ್ಯಮವೋ, ಬದುಕೋ ಒಂದಿದ್ದರೆ ಅದು ಕೃಷಿಯೇ. ಅಲ್ಲಿಯ ಭಾಷೆ, ಭಾವನೆ ಬಹುತೇಕ ಇನ್ನೂ ಬದಲಾಗಿಲ್ಲ. ಕೃಷಿ ಸಂಪೂರ್ಣವಾಗಿ ಲಾಭದ ಭಾಷೆಗೆ ಬದಲಾಗಿಬಿಟ್ಟರೆ ಅದರೊಳಗಿನ ಹಂಚುವ ಗುಣ, ಅದರ ಮಾನವೀಯತೆ, ಅದರ ಪ್ರಕೃತಿಯ ಜೊತೆಯ ಬದುಕು, ಹಳ್ಳಿಯ ಕೃಷಿ ಜಗತ್ತಿನ ಒಳ ಸಂಬಂಧಗಳು ಕಳೆದುಹೋಗುವ ಅಪಾಯ ಇರಬಹುದೇ ಎಂಬುವುದು ನನ್ನ ಸಂಶಯ.
ಹಿಂದೆ ಇಂಥ ಕಾಡು ಮರದ ಹಣ್ಣುಗಳಲ್ಲಿ ಪ್ರಾಣಿ-ಪಕ್ಷಿಗಳು ಪಾಲು ಪಡೆಯುತ್ತಿದ್ದವು. ಹೊರಗಡೆಯಿಂದ ಗೊಬ್ಬರ ಕೊಡದ ಮರಗಳಿಗೆ ಅವುಗಳೇ ಗೊಬ್ಬರವಾಗುತ್ತಿತ್ತು. ಈಗ ಎಲ್ಲವೂ ಮಾರುಕಟ್ಟೆಯ ಲೆಕ್ಕಕ್ಕೆ ಸೇರಿಬಿಟ್ಟರೆ ಪ್ರಕೃತಿಯ ಪಾಲು ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಕೃಷಿರಂಗ ಕಲಿಯಬೇಕಾದ ಪುಟ್ಟ ಪಾಠವೂ ಇದೇ. ನೆಲ ತನ್ನ ಪಾಲಿನ ಸಂಸ್ಕೃತಿಯನ್ನು ಕಳೆದುಕೊಳ್ಳದೆ ಮೌಲ್ಯವರ್ಧನೆ ಮಾಡುವುದು ಹೇಗೆ? ಲಾಭವನ್ನು ಹುಡುಕುತ್ತಾ ಹಂಚುವ ಮನಸ್ಸನ್ನು ಉಳಿಸಿಕೊಳ್ಳುವುದು ಹೇಗೆ? ಯಾಕೆಂದರೆ ಕೃಷಿಯ ಭವಿಷ್ಯ ಕೇವಲ ಉತ್ಪಾದನೆಯಲ್ಲಿ ಇಲ್ಲ. ಅದು ಉತ್ಪನ್ನದ ಕಥೆಯಲ್ಲೂ ಇದೆ. ಒಂದು ಹಲಸಿನ ಹಣ್ಣು ಮರದಿಂದ ನೆಲಕ್ಕೆ ಬೀಳುವ ಮೊದಲು ಅದು ಎಷ್ಟು ಬದುಕುಗಳಿಗೆ ಮೌಲ್ಯವಾಗಬಹುದು ಎನ್ನುವುದನ್ನು ಅರಿಯುವಲ್ಲೂ ಇದೆ. ಹಳ್ಳಿಯ ತೋಟಗಳಲ್ಲಿ ಕೊಳೆಯುತ್ತಿದ್ದ ಹಣ್ಣುಗಳು ಒಂದು ದಿನ ಗ್ರಾಮೀಣ ಆರ್ಥಿಕತೆಯ ದೊಡ್ಡ ಆಧಾರವಾಗಬಹುದು. ಆದರೆ ಅದಕ್ಕಾಗಿ ಕೃಷಿಕನು ಕೇವಲ ಬೆಳೆ ಬೆಳೆಸುವವನಾಗಿರದೆ, ತನ್ನ ಮಣ್ಣಿನ ಸಂಪತ್ತನ್ನು ಗುರುತಿಸುವ ಸೃಜನಶೀಲ ಮನುಷ್ಯನಾಗಬೇಕು.






