Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ‘ದೇಸಿರಿ’ಯ ದಾರಿ: ಹಳ್ಳಿಯ ಭವಿಷ್ಯದ ಹೊಸ...

‘ದೇಸಿರಿ’ಯ ದಾರಿ: ಹಳ್ಳಿಯ ಭವಿಷ್ಯದ ಹೊಸ ಹೆಜ್ಜೆ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ2 Aug 2026 11:30 AM IST
share
‘ದೇಸಿರಿ’ಯ ದಾರಿ: ಹಳ್ಳಿಯ ಭವಿಷ್ಯದ ಹೊಸ ಹೆಜ್ಜೆ!

ಇಂದು ಹಳ್ಳಿಯ ಯುವಕರು ಕೃಷಿಯನ್ನು ಬಿಟ್ಟು ನಗರಗಳತ್ತ ಸಾಗುತ್ತಿದ್ದಾರೆ ಎಂದು ನಾವು ಬೇಸರಪಡುತ್ತೇವೆ. ಆದರೆ ಹಳ್ಳಿಯಲ್ಲಿ, ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆಯನ್ನು ನಾವು ನಿರ್ಮಿಸಿದ್ದೇವೆಯೇ ಎಂಬುದೇ ಮುಖ್ಯ ಪ್ರಶ್ನೆ. ‘ದೇಸಿರಿ’ಯಂತಹ ಪ್ರಯತ್ನಗಳು ಕೃಷಿಗೂ ಹೊಸ ತಲೆಮಾರಿಗೂ ಭರವಸೆಯ ದಾರಿಯನ್ನು ತೋರಿಸುತ್ತಿವೆ. ಅಡಗನಹಳ್ಳಿಯ ಗಾಣದಲ್ಲಿ ಜಿನುಗುವ ಪ್ರತಿಯೊಂದು ಹನಿ ಎಣ್ಣೆಯೂ ಒಂದು ಸತ್ಯವನ್ನು ಹೇಳುತ್ತದೆ. ಅಭಿವೃದ್ಧಿ ಎಂದರೆ ಕೇವಲ ವೇಗವಲ್ಲ; ಮನುಷ್ಯ, ಮಣ್ಣು ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ಪುನಃ ಕಟ್ಟುವುದು. ಇದೇ ನಮ್ಮ ಕಾಲದ ನಿಜವಾದ ಸಂಪತ್ತು.

ಮೊನ್ನೆ ಮೊನ್ನೆಯವರೆಗೆ ನಮ್ಮನೆಯ ಅಡುಗೆಮನೆ ಕೇವಲ ಹಸಿವು ನೀಗಿಸುವ ಜಾಗವಾಗಿರಲಿಲ್ಲ; ಆರೋಗ್ಯ ಹುಟ್ಟುವ ಸ್ಥಳವಾಗಿತ್ತು. ‘ಊಟವೇ ಔಷಧ’ಎಂದು ವೈದ್ಯರು ಹೇಳುವ ಮೊದಲೇ ನಮ್ಮ ಅಜ್ಜಿಯರು ಅದೇ ಅಡುಗೆ ಮನೆಯಲ್ಲಿ ಕೂತು ಅದನ್ನೇ ಹೇಳುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಾವು ಏನು ತಿನ್ನುತ್ತಿದ್ದೇವೆ ಎನ್ನುವುದಕ್ಕಿಂತ ಎಷ್ಟು ಬೇಗ ತಿನ್ನುತ್ತಿದ್ದೇವೆ ಎಂಬುದೇ ಮುಖ್ಯವಾಗಿರುವ ಕಾಲ ಇದು. ಸಾವಯವ ತರಕಾರಿ ಬೇಕು, ವಿಷರಹಿತ ಅಕ್ಕಿ ಬೇಕು, ನಾಡಹಸುವಿನ ಹಾಲು, ತುಪ್ಪ, ಮೊಸರು, ಮಜ್ಜಿಗೆ ಬೇಕು ಎಂದು ಹುಡುಕಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ದಿನಕ್ಕೆ ಮೂರು ಹೊತ್ತು ನಮ್ಮ ದೇಹದೊಳಗೆ ಸೇರುವ ಅಡುಗೆ ಎಣ್ಣೆಯ ಬಗ್ಗೆ ಮಾತ್ರ ನಾವು ಅಷ್ಟಾಗಿ ಪ್ರಶ್ನಿಸುವುದಿಲ್ಲ. ಅಂಗಡಿಗೆ ಹೋದಾಗ ಎಣ್ಣೆಯ ಗುಣಮಟ್ಟದ ಬಗ್ಗೆ ಕೇಳುವ ಮೊದಲ ಪ್ರಶ್ನೆ ಬಹಳ ಅಪರೂಪ. ‘ಎಷ್ಟು ಬೆಲೆ?’ ಎಂಬುದೇ ನಮ್ಮ ಮೊದಲ ಕುತೂಹಲ.

ಈ ಪ್ರಶ್ನೆಯಲ್ಲೇ ನಮ್ಮ ಆಹಾರ ಸಂಸ್ಕೃತಿಯ ದೊಡ್ಡ ದುರಂತ ಅಡಗಿದೆ. ಕೊಬ್ಬರಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಸಾಸಿವೆ ಈ ಎಲ್ಲ ಎಣ್ಣೆಕಾಳುಗಳನ್ನು ಬೆಳೆಯಲು ರೈತ ಪಡುವ ಶ್ರಮ ನಮಗೆ ಗೊತ್ತಿದೆ. ಕೂಲಿ, ಗೊಬ್ಬರ, ನೀರಾವರಿ, ಸಾಗಣೆ, ಕಟಾವು ಇವೆಲ್ಲದರ ವೆಚ್ಚವೂ ತಿಳಿದೇ ಇದೆ. ಹಾಗಿದ್ದೂ ಮಾರುಕಟ್ಟೆಯಲ್ಲಿ ಅದೇ ಕಾಳಿನ ಬೆಲೆಗಿಂತ ಕಡಿಮೆ ದರದಲ್ಲಿ ಎಣ್ಣೆ ಹೇಗೆ ಸಿಗುತ್ತದೆ ಎಂಬ ಸರಳ ಪ್ರಶ್ನೆಯನ್ನು ನಾವು ನಮ್ಮನ್ನೇ ಕೇಳಿಕೊಳ್ಳುವುದಿಲ್ಲ.

ಅಗ್ಗದ ಬೆಲೆಯ ಸಂತೋಷ-ಅವಸರದಲ್ಲಿ ಅದರ ಹಿಂದಿನ ಸತ್ಯವನ್ನು ಮರೆತುಬಿಡುತ್ತೇವೆ. ಇತ್ತೀಚಿನ ಆಹಾರ ಸುರಕ್ಷತಾ ಇಲಾಖೆಯ ಪರೀಕ್ಷೆಗಳು ಈ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿವೆ. ಪರೀಕ್ಷೆಗೆ ಒಳಪಟ್ಟ ಅಡುಗೆ ಎಣ್ಣೆ ಪೈಕಿ 59 ಮಾದರಿಗಳಲ್ಲಿ ಸುಮಾರು ಶೇ. 46ರಷ್ಟು ಗುಣಮಟ್ಟದ ಮಾನದಂಡಗಳನ್ನು ಪೂರೈಸದಿರುವುದು ಕೇವಲ ಅಂಕಿಅಂಶವಲ್ಲ; ಅದು ನಮ್ಮ ಅಡುಗೆಮನೆಯೊಳಗೆ ನುಗ್ಗಿಬಂದ ಅಪಾಯದ ಎಚ್ಚರಿಕೆ. ಅಗ್ಗದ ಎಣ್ಣೆಗಳನ್ನು ಬೆರೆಸಿ, ಕೃತಕ ಬಣ್ಣ ಮತ್ತು ಪರಿಮಳ ಸೇರಿಸಿ ಆರೋಗ್ಯವನ್ನೇ ವ್ಯಾಪಾರದ ಸರಕಾಗಿಸಿರುವ ಈ ಕಾಲದಲ್ಲಿ ಶುದ್ಧ ಎಣ್ಣೆ ಎಂಬುದು ಒಂದು ಉತ್ಪನ್ನವಲ್ಲ; ಅದು ವಿಶ್ವಾಸದ ಹೆಸರು.

ಹೃದಯರೋಗ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್, ಕೊಬ್ಬಿನ ಸಮಸ್ಯೆ, ಕ್ಯಾನ್ಸರ್ ಹಿಂದೊಮ್ಮೆ ದೂರದ ಕಾಯಿಲೆಗಳಂತೆ ಕಂಡಿದ್ದವು. ಇಂದು ನಮ್ಮ ಮಕ್ಕಳು ಆಸ್ಪತ್ರೆಯಲ್ಲೇ ಹುಟ್ಟಿ, ಆಸ್ಪತ್ರೆಯಲ್ಲೇ ಬೆಳೆದು, ಆಸ್ಪತ್ರೆಯಲ್ಲೇ ಜೀವನ ಮುಗಿಸುವ ಕಾಲದತ್ತ ಸಾಗುತ್ತಿದ್ದೇವೆಯೇ ಎಂಬ ಆತಂಕ ಮೂಡುತ್ತದೆ. ಈ ಎಲ್ಲ ಕಾಯಿಲೆಗಳ ಚರ್ಚೆಯಲ್ಲಿ ನಮ್ಮ ಅಡುಗೆ ಎಣ್ಣೆಯ ಪಾತ್ರ ಎಷ್ಟು ಬಾರಿ ಬರುತ್ತದೆ? ಬಹಳ ವಿರಳ. ಔಷಧಿಗಳ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡುತ್ತೇವೆ; ಆದರೆ ಪ್ರತಿದಿನ ದೇಹದೊಳಗೆ ಸೇರುವ ವಿಷ ಆಹಾರದ ಬಗ್ಗೆ ಕೆಲವೇ ನಿಮಿಷ ಯೋಚಿಸುತ್ತೇವೆ.

ಆದರೆ ಕೆಲವರ ಬದುಕಿನಲ್ಲಿ ಈ ಒಂದು ಪ್ರಶ್ನೆಯೇ ಕ್ರಾಂತಿಯನ್ನು ಹುಟ್ಟಿಸುತ್ತದೆ. ಮೈಸೂರಿನ ಸಮೀಪದ ಕೆ.ಆರ್. ನಗರದ ಅಡಗನಹಳ್ಳಿಯ ನವೀನ್ ಕುಮಾರ್ ಎಚ್.ಆರ್. ಬದುಕಿನಲ್ಲೂ ಅಂತಹ ಒಂದು ಪ್ರಶ್ನೆ ಹುಟ್ಟಿತ್ತು. ಕೃಷಿ ಕುಟುಂಬದಲ್ಲಿ ಹುಟ್ಟಿದ್ದರೂ ಅವರ ಬದುಕು ಮಣ್ಣಿನಿಂದ ದೂರ ಹೋಗಿತ್ತು. ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹದಿನಾಲ್ಕು ವರ್ಷಗಳ ಯಶಸ್ವಿ ಉದ್ಯೋಗ, ಬೆಂಗಳೂರಲ್ಲಿ ಉತ್ತಮ ಸಂಬಳ, ನಗರ ಜೀವನ, ಭದ್ರ ಭವಿಷ್ಯ ಎಲ್ಲವೂ ಅವರ ಕೈಯಲ್ಲಿತ್ತು. ಆದರೆ ಒಂದೆಡೆ ರೈತರ ಸಂಕಷ್ಟ, ಇನ್ನೊಂದೆಡೆ ಆಹಾರದ ಗುಣಮಟ್ಟದ ಕುಸಿತ ಅವರನ್ನು ಕಾಡತೊಡಗಿತು. ಬದುಕಿನ ಉಳಿದ ದಿನಗಳನ್ನು ಕೇವಲ ಸಂಬಳಕ್ಕಾಗಿ ಕಳೆಯಬೇಕೋ ಅಥವಾ ಸಮಾಜಕ್ಕೆ ಉಪಯೋಗವಾಗುವ ಕೆಲಸಕ್ಕಾಗಿ ಬದುಕಬೇಕೋ ಎಂಬ ಪ್ರಶ್ನೆ ಅವರನ್ನು ಬಿಡಲಿಲ್ಲ.

ಆ ಪ್ರಶ್ನೆ ಕೇವಲ ನವೀನ್ ಅವರನ್ನು ಮಾತ್ರ ಬದಲಿಸಲಿಲ್ಲ. ಅವರ ಜೊತೆಗೆ ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದ ಯೋಗೀಶ್ ಎನ್., ಮಹೇಶ್ ಎಂ. ಅವರಿಗೂ ಅನಿಸಿತು. ಈ ಮೂವರೂ ನಗರ ಜೀವನದ ತ್ರಿಶಂಕು ಸ್ಥಿತಿಯಿಂದ ಹೊರಬಂದರು. ಭದ್ರ ಉದ್ಯೋಗ, ಹವಾನಿಯಂತ್ರಿತ ಕಚೇರಿ, ಉತ್ತಮ ಸಂಬಳ, ಕಾರ್ಪೊರೇಟ್ ಬದುಕಿನ ಎಲ್ಲ ಸೌಲಭ್ಯಗಳನ್ನು ಹಿಂದೆ ಬಿಟ್ಟು ಗ್ರಾಮಕ್ಕೆ ಮರಳಿದರು. ಅವರ ಪಾಲಿಗೆ ಇದು ಉದ್ಯೋಗ ಬದಲಾವಣೆ ಮಾತ್ರವಾಗಿರಲಿಲ್ಲ; ಬದುಕಿನ ತತ್ವವನ್ನೇ ಬದಲಿಸಿದ ನಿರ್ಧಾರವಾಗಿತ್ತು. ಮೊದಲು ದೇಶದ ವಿವಿಧ ಭಾಗಗಳನ್ನು ಸುತ್ತಿದರು. ನೂರಾರು ರೈತರನ್ನು ಭೇಟಿಯಾದರು. ಹಳೆಯ ಆಹಾರ ಪದ್ಧತಿಗಳನ್ನು ಅಧ್ಯಯನ ಮಾಡಿದರು. ಹಿರಿಯರನ್ನು ಕೇಳಿದರು. ಮರೆತುಹೋದ ತಂತ್ರಜ್ಞಾನಗಳನ್ನು ಹುಡುಕಿದರು. ಆಗ ಅವರಿಗೆ ಒಂದು ಸತ್ಯ ಸ್ಪಷ್ಟವಾಯಿತು.

ನಮ್ಮ ಹಿರಿಯರ ಆರೋಗ್ಯದ ಹಿಂದೆ ಕೇವಲ ಕಠಿಣ ದುಡಿಮೆ ಇರಲಿಲ್ಲ; ಅವರು ಸೇವಿಸುತ್ತಿದ್ದ ಆಹಾರದ ಗುಣಮಟ್ಟವೂ ಇತ್ತು. ಅದರಲ್ಲೂ ಮರದ ಗಾಣದಲ್ಲಿ, ಎತ್ತಿನ ನಿಧಾನ ಹೆಜ್ಜೆಯಲ್ಲಿ ತೆಗೆದ ಎಣ್ಣೆಗೆ ವಿಶೇಷ ಸ್ಥಾನವಿತ್ತು. ಅಲ್ಲಿಂದಲೇ ಅವರ ಹೊಸ ಪಯಣ ಆರಂಭವಾಯಿತು. ಮರೆಯಾಗಿ ಹೋಗಿದ್ದ ಎತ್ತಿನ ಗಾಣವನ್ನು ಮತ್ತೆ ಹುಡುಕುವುದು ಸುಲಭವಾಗಿರಲಿಲ್ಲ. ಕರ್ನಾಟಕದಾದ್ಯಂತ ಹುಡುಕಿದರೂ ಗಾಣ ನಿರ್ಮಿಸುವ ಕುಶಲ ಶಿಲ್ಪಿಗಳು ಸಿಗಲಿಲ್ಲ. ಕೊನೆಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯವರೆಗೆ ಹುಡುಕಾಟ ಸಾಗಿತು. ಅಲ್ಲಿಂದ ಗಾಣ ನಿರ್ಮಿಸುವವರನ್ನು ಕರೆಸಿ ತಮ್ಮ ತೋಟದಲ್ಲಿ ಮರದ ಗಾಣವನ್ನು ಸ್ಥಾಪಿಸಿದರು. ಆದರೆ ಗಾಣವನ್ನು ನಿರ್ಮಿಸಿದರೆ ಎಣ್ಣೆ ಹರಿಯುವುದಿಲ್ಲ. ಎತ್ತುಗಳ ಹೆಜ್ಜೆಯ ಲಯ, ಮರದ ಒತ್ತಡ, ಕಾಳಿನ ಸ್ವಭಾವ, ಉಷ್ಣದ ನಿಯಂತ್ರಣ ಇವೆಲ್ಲವೂ ಒಂದೇ ವೇಳೆ ಸರಿಯಾಗಬೇಕು. ತಿಂಗಳುಗಟ್ಟಲೆ ಪ್ರಯೋಗಗಳು ನಡೆದವು. ತಪ್ಪುಗಳಾದವು. ಮತ್ತೆ ತಿದ್ದಿಕೊಂಡರು. ಕೊನೆಗೆ ಮರದ ಗಾಣ ಮಾತಾಡಲು ಆರಂಭಿಸಿತು.

ಆ ದಿನ ಕೇವಲ ಒಂದು ಉದ್ಯಮ ಹುಟ್ಟಲಿಲ್ಲ. ಒಂದು ಮರೆತುಹೋದ ಜ್ಞಾನ ಪರಂಪರೆ ಮತ್ತೆ ಜೀವ ಪಡೆಯಿತು.ಇಂದು ನಾವು ವೇಗವನ್ನೇ ಅಭಿವೃದ್ಧಿಯ ಮಾನದಂಡವನ್ನಾಗಿ ಮಾಡಿಕೊಂಡಿದ್ದೇವೆ. ಬೇಗ ಬೆಳೆಯುವ ಬೆಳೆ, ಬೇಗ ಉತ್ಪಾದಿಸುವ ಕಾರ್ಖಾನೆ, ಬೇಗ ತಲುಪುವ ಮಾರುಕಟ್ಟೆ, ಬೇಗ ಲಾಭ ಕೊಡುವ ವ್ಯಾಪಾರ ಇವೆಲ್ಲವೂ ಯಶಸ್ಸಿನ ಹೊಸ ವ್ಯಾಖ್ಯಾನಗಳಾಗಿವೆ. ಆದರೆ ಪ್ರಕೃತಿ ಎಂದಿಗೂ ಈ ತರ್ಕವನ್ನು ಒಪ್ಪಿಕೊಂಡಿಲ್ಲ. ಬೀಜ ಮೊಳಕೆಯೊಡೆಯಲು ತನ್ನದೇ ಸಮಯ ಬೇಕು. ಗಿಡ ಮರವಾಗಿ ಬೆಳೆಯಲು ವರ್ಷಗಳು ಬೇಕು. ಹೂವು ಹಣ್ಣಾಗಲು ಋತು ಬದಲಾಗಬೇಕು. ಅದೇ ರೀತಿ ಉತ್ತಮ ಆಹಾರವೂ ಆತುರದಲ್ಲಿ ಹುಟ್ಟುವುದಿಲ್ಲ. ಅದು ಸಹನೆಯಿಂದ ರೂಪುಗೊಳ್ಳುತ್ತದೆ.

ಎತ್ತಿನ ಗಾಣದ ಎಣ್ಣೆಯ ಹಿಂದಿರುವ ವಿಜ್ಞಾನವೂ ಇದೇ. ಎತ್ತಿನ ನಿಧಾನ ಹೆಜ್ಜೆಯ ಲಯದಲ್ಲಿ ಮರದ ಗಾಣ ಸುತ್ತುತ್ತದೆ. ಅತಿಯಾದ ಉಷ್ಣ ಉತ್ಪತ್ತಿಯಾಗುವುದಿಲ್ಲ. ಎಣ್ಣೆಯ ಸಹಜ ಗುಣಗಳು ಉಳಿಯುತ್ತವೆ. ಅದರ ಪರಿಮಳ, ರುಚಿ, ಪೌಷ್ಟಿಕತೆಯೂ ಜೀವಂತವಾಗಿರುತ್ತದೆ. ನಮ್ಮ ಹಿರಿಯರು ಯಂತ್ರಗಳಿರಲಿಲ್ಲ ಎಂಬ ಕಾರಣಕ್ಕೆ ಗಾಣ ಬಳಸಲಿಲ್ಲ; ಎಣ್ಣೆಯ ಗುಣಮಟ್ಟವನ್ನು ಅವರು ಅನುಭವದಿಂದ ಅರಿತಿದ್ದರು. ಆದ್ದರಿಂದ ಗಾಣದ ಎಣ್ಣೆಗೆ ವಿಶೇಷ ಮೌಲ್ಯ ನೀಡುತ್ತಿದ್ದರು.

ನವೀನ್ ಗೆಳೆಯರಿಗೆ ಈ ಗಾಣ ಕೇವಲ ಎಣ್ಣೆ ತೆಗೆಯುವ ಸಾಧನವಾಗಿ ಕಾಣಲಿಲ್ಲ. ಅದರ ಸುತ್ತ ಒಂದು ಸಂಪೂರ್ಣ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಅವರು ಕಂಡರು. ರೈತ ಬೆಳೆದ ಎಣ್ಣೆಕಾಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಗ್ರಾಮದಲ್ಲೇ ಮೌಲ್ಯವರ್ಧನೆ ಆಗಬೇಕು. ಉತ್ಪನ್ನ ನೇರವಾಗಿ ಗ್ರಾಹಕರ ಮನೆ ತಲುಪಬೇಕು. ಮಧ್ಯವರ್ತಿಗಳ ಸರಪಳಿ ಕಡಿಯಬೇಕು. ಹೀಗೆ ಯೋಚಿಸಿದಾಗ ಗಾಣದ ಸುತ್ತ ಕೇವಲ ಎಣ್ಣೆಯಲ್ಲ, ಬದುಕಿನ ಹೊಸ ವೃತ್ತವೇ ರೂಪುಗೊಳ್ಳತೊಡಗಿತು.

ಇಂದು ಅವರ ‘ದೇಸಿರಿ’ ಸಂಸ್ಥೆಯ ಸುತ್ತ ಅರುವತ್ತಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ. ಅವರಲ್ಲಿ ಬಹುಪಾಲು ಮಹಿಳೆಯರು. ಇದು ಕೇವಲ ಉದ್ಯೋಗದ ಅಂಕಿಅಂಶವಲ್ಲ. ಹಳ್ಳಿಯ ಮಹಿಳೆಯೊಬ್ಬಳು ತನ್ನ ಊರಿನಲ್ಲೇ ಗೌರವಯುತ ಕೆಲಸ ಪಡೆದು ಕುಟುಂಬದ ಆದಾಯದಲ್ಲಿ ಪಾಲುದಾರಳಾಗುವುದು ಗ್ರಾಮೀಣ ಅಭಿವೃದ್ಧಿಯ ಅತ್ಯಂತ ಮಹತ್ವದ ಸೂಚನೆ. ಹಿಂದೆ ಪ್ರತಿಯೊಂದು ಹಳ್ಳಿಗೂ ತನ್ನದೇ ಗಾಣವಿತ್ತು. ತನ್ನದೇ ಗಿರಣಿಯಿತ್ತು. ಬೆಲ್ಲದ ಆಲೆ ಇತ್ತು. ಕುಂಬಾರನಿದ್ದ, ಕಮ್ಮಾರನಿದ್ದ, ಬಡಗಿಯಿದ್ದ. ಹಳ್ಳಿಯ ಅಗತ್ಯಗಳನ್ನು ಹಳ್ಳಿಯೇ ಪೂರೈಸಿಕೊಳ್ಳುತ್ತಿತ್ತು. ಹಣವೂ ಊರಿನಲ್ಲೇ ಸುತ್ತುತ್ತಿತ್ತು. ನಂತರ ಉತ್ಪಾದನೆಯೂ ನಗರಕ್ಕೆ ಹೋಯಿತು; ಉದ್ಯೋಗವೂ ಹೋಯಿತು; ಕೌಶಲ್ಯವೂ ಹೋಯಿತು; ಕೊನೆಗೆ ಸ್ವಾಭಿಮಾನವೂ ನಗರಗಳ ಬಾಗಿಲು ತಟ್ಟಿತು.

ಅದಕ್ಕಾಗಿಯೇ ದೇಸಿರಿಯ ಗಾಣ ನನಗೆ ಕೇವಲ ಮರದ ಚಕ್ರವಾಗಿ ಕಾಣುವುದಿಲ್ಲ. ಅದು ಕಳೆದುಹೋದ ಗ್ರಾಮ ಸ್ವಾವಲಂಬನೆಯ ಸಂಕೇತವಾಗಿ ಕಾಣುತ್ತದೆ. ಅಭಿವೃದ್ಧಿಯನ್ನು ಮತ್ತೆ ಹಳ್ಳಿಯ ದಾರಿಯಲ್ಲಿ ಹುಡುಕುವ ಒಂದು ಮೌನ ಪ್ರಯತ್ನವಾಗಿ ಕಾಣುತ್ತದೆ.

ಇನ್ನೊಂದು ಸಂಗತಿ ನನ್ನನ್ನು ಹೆಚ್ಚು ಸ್ಪರ್ಶಿಸುತ್ತದೆ. ನಾವು ದೇಶೀ ಎತ್ತುಗಳ ಬಗ್ಗೆ ಬಹಳ ಮಾತನಾಡುತ್ತೇವೆ. ಗೋಸಂರಕ್ಷಣೆಯ ಕುರಿತು ಸಭೆಗಳನ್ನು ನಡೆಸುತ್ತೇವೆ. ಭಾಷಣಗಳನ್ನು ಮಾಡುತ್ತೇವೆ. ಆದರೆ ಎತ್ತನ್ನು ಉಳಿಸಬೇಕಾದರೆ ಅದಕ್ಕೆ ಕೆಲಸವೂ ಕೊಡಬೇಕು ಎಂಬ ಸರಳ ಸತ್ಯವನ್ನು ಮರೆತುಬಿಡುತ್ತೇವೆ. ಕೆಲಸವಿಲ್ಲದ ಪ್ರಾಣಿಯನ್ನು ಸಮಾಜ ದೀರ್ಘಕಾಲ ಸಾಕುವುದಿಲ್ಲ. ನವೀನ್ ಬಳಗ ನಲವತ್ತಕ್ಕೂ ಹೆಚ್ಚು ದೇಶೀ ಎತ್ತುಗಳನ್ನು ಗಾಣದ ಕೆಲಸಕ್ಕೆ ಬಳಸುತ್ತಿದೆ. ಇದು ಪ್ರಾಣಿದಯೆಯ ಪ್ರದರ್ಶನವಲ್ಲ; ಗ್ರಾಮೀಣ ಆರ್ಥಿಕತೆಯ ಹೊಸ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನ.

ಇಂದು ಜಗತ್ತು ಇಂಧನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕಾರ್ಬನ್ ಹೊರಸೂಸುವಿಕೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದೆ. ಆದರೆ ನಮ್ಮ ಹಳ್ಳಿಗಳಲ್ಲಿ ಶತಮಾನಗಳಿಂದ ಬದುಕಿದ್ದ ಕೆಲವು ವ್ಯವಸ್ಥೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿದ್ದವು. ಎತ್ತಿನ ಗಾಣಕ್ಕೆ ಡೀಸೆಲ್ ಬೇಕಾಗುವುದಿಲ್ಲ. ವಿದ್ಯುತ್ ಬೇಕಾಗುವುದಿಲ್ಲ. ಹೊಗೆ ಇಲ್ಲ. ಶಬ್ದ ಮಾಲಿನ್ಯ ಇಲ್ಲ. ಪ್ರಕೃತಿಯ ಲಯಕ್ಕೆ ಅನುಗುಣವಾಗಿ ಅದು ತನ್ನ ಕೆಲಸ ಮಾಡುತ್ತದೆ. ಸಾವಿರಾರು ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಕೇವಲ ಲೆಕ್ಕವಲ್ಲ; ಅಭಿವೃದ್ಧಿಯ ಮತ್ತೊಂದು ಸಾಧ್ಯತೆಯ ಸೂಚನೆ.

ಇಂದು ಯಾವುದೇ ಸೂಪರ್‌ಮಾರ್ಕೆಟ್‌ಗೆ ಹೋದರೂ ಸಾಲು ಸಾಲು ಎಣ್ಣೆಯ ಬಾಟಲಿಗಳು ಕಾಣುತ್ತವೆ. ಅವುಗಳ ಜಾಹೀರಾತುಗಳು ಆರೋಗ್ಯದ ಕನಸುಗಳನ್ನು ಮಾರುತ್ತವೆ. ಆದರೆ ಯಾವ ಬಾಟಲಿಯ ಹಿಂದೆಯೂ ರೈತನ ಮುಖ ಕಾಣುವುದಿಲ್ಲ. ‘ದೇಸಿರಿ’ಯ ಎಣ್ಣೆಯ ಬಾಟಲಿಯ ಮೇಲಿರುವ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ ಆ ಎಣ್ಣೆಯ ಗುಣಮಟ್ಟದ ವಿವರಗಳ ಜೊತೆಗೆ ಅದನ್ನು ಉತ್ಪಾದಿಸಿದ ರೈತರ ಮಾಹಿತಿಯೂ ಕಾಣಿಸುತ್ತದೆ. ಉತ್ಪನ್ನ ಮತ್ತು ಉತ್ಪಾದಕನ ನಡುವಿನ ಸಂಬಂಧವನ್ನು ಮತ್ತೆ ಜೀವಂತಗೊಳಿಸುವ ಈ ಪ್ರಯತ್ನ ಇಂದಿನ ಮಾರುಕಟ್ಟೆಯಲ್ಲಿ ಅಪರೂಪ.

‘ದೇಸಿರಿ’ಯ ಕಥೆ ಗಾಣದ ಸುತ್ತಲೇ ಮುಗಿಯುವುದಿಲ್ಲ. ಅದು ಕೃಷಿಯಲ್ಲೂ ಮುಂದುವರಿಯುತ್ತದೆ. ಸುಮಾರು ಎರಡೂವರೆ ಎಕರೆ ಭೂಮಿಯಲ್ಲಿ ನವೀನ್ ನೈಸರ್ಗಿಕ ಕೃಷಿಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಹಣ್ಣುಗಳು, ತರಕಾರಿಗಳು, ಪಪ್ಪಾಯಿ, ಸಂಬಾರ ಪದಾರ್ಥಗಳು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಒಂದು ಕಡೆ ಶುದ್ಧ ಆಹಾರವನ್ನು ಉತ್ಪಾದಿಸುತ್ತಾ, ಇನ್ನೊಂದು ಕಡೆ ಆ ಆಹಾರಕ್ಕೆ ಬೇಕಾದ ಶುದ್ಧ ಎಣ್ಣೆಯನ್ನು ತಯಾರಿಸುತ್ತಿದ್ದಾರೆ. ಕೃಷಿ ಮತ್ತು ಗ್ರಾಮೀಣ ಉದ್ಯಮ ಪರಸ್ಪರ ವಿರೋಧಿಗಳಲ್ಲ; ಒಂದಕ್ಕೊಂದು ಪೂರಕವಾಗಬಹುದು ಎಂಬುದನ್ನು ಈ ಪ್ರಯತ್ನ ತೋರಿಸುತ್ತದೆ.

ಅವರ ಕೆಲಸ ಕೇವಲ ಉತ್ಪಾದನೆಯಲ್ಲೇ ನಿಂತಿಲ್ಲ. ದೇಶದ ವಿವಿಧ ಭಾಗಗಳಿಂದ ರೈತರು, ವಿದ್ಯಾರ್ಥಿಗಳು, ಸಂಶೋಧಕರು, ಯುವಕರು ಅಡಗನಹಳ್ಳಿಗೆ ಬಂದು ಈ ಮಾದರಿಯನ್ನು ನೋಡಿ ಕಲಿಯುತ್ತಿದ್ದಾರೆ. ಹಲವರಿಗೆ ತರಬೇತಿ ನೀಡಲಾಗಿದೆ. ಅವರ ಪ್ರೇರಣೆಯಿಂದ ಅನೇಕ ಕಡೆ ಹೊಸ ಗಾಣಗಳು ಆರಂಭವಾಗಿವೆ. ಜ್ಞಾನವನ್ನು ತನ್ನಲ್ಲೇ ಇಟ್ಟುಕೊಂಡರೆ ಅದು ವ್ಯಾಪಾರವಾಗಬಹುದು; ಸಮಾಜದೊಂದಿಗೆ ಹಂಚಿಕೊಂಡರೆ ಅದು ಚಳವಳಿಯಾಗುತ್ತದೆ. ನವೀನ್ ಅವರು ಎರಡನೆಯ ದಾರಿಯನ್ನು ಆರಿಸಿಕೊಂಡಿದ್ದಾರೆ.

ಇಂದು ಅವರ ಉತ್ಪನ್ನ ಮೈಸೂರು, ಬೆಂಗಳೂರು, ತುಮಕೂರು, ಕೆ.ಆರ್. ನಗರ, ತಿಪಟೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಿಗೆ ತಲುಪುತ್ತಿದೆ. ಅಷ್ಟೇ ಅಲ್ಲ, ಸಣ್ಣ ಪ್ರಮಾಣದಲ್ಲಾದರೂ ಅಮೆರಿಕಕ್ಕೂ ರಫ್ತಾಗುತ್ತಿದೆ. ಒಂದು ಹಳ್ಳಿಯ ಎತ್ತಿನ ಗಾಣದಲ್ಲಿ ತಯಾರಾಗುವ ಎಣ್ಣೆ ಜಾಗತಿಕ ಮಾರುಕಟ್ಟೆಯನ್ನು ತಲುಪಿರುವುದು ಕೇವಲ ವ್ಯಾಪಾರದ ಯಶಸ್ಸಲ್ಲ. ನಮ್ಮ ದೇಸಿ ಆಹಾರ ಸಂಸ್ಕೃತಿಯ ಮೇಲೆ ವಿಶ್ವಾಸ ಇಟ್ಟಿರುವ ಗ್ರಾಹಕರ ಗೆಲುವು ಕೂಡ ಹೌದು.

ಯೋಗೀಶ್ ಎನ್., ಮಹೇಶ್ ಎಂ. ನವೀನ್ ಮತ್ತು ಕುಮಾರ್ ಎಚ್.ಆರ್.

ಪ್ರತೀ ವರ್ಷ ಸುಮಾರು ರೂ. 5.5 ಕೋಟಿ ವ್ಯವಹಾರ ನಡೆಸುವ ಈ ಸಂಸ್ಥೆಯ ದೊಡ್ಡ ಸಾಧನೆ ಅದರ ವಹಿವಾಟಿನ ಮೊತ್ತವಲ್ಲ. ನಗರ ಜೀವನವನ್ನೇ ಯಶಸ್ಸಿನ ಅಂತಿಮ ಹಂತ ಎಂದು ನಂಬಿದ್ದ ವಿದ್ಯಾವಂತ ಯುವಕರು, ಕೃಷಿ ಆಧಾರಿತ ಉದ್ಯಮದಲ್ಲಿಯೂ ಗೌರವಯುತ ಬದುಕು ಕಟ್ಟಿಕೊಳ್ಳಬಹುದು ಎಂಬ ವಿಶ್ವಾಸವನ್ನು ಅದು ಮೂಡಿಸಿದೆ.

ಇಂದು ಹಳ್ಳಿಯ ಯುವಕರು ಕೃಷಿಯನ್ನು ಬಿಟ್ಟು ನಗರಗಳತ್ತ ಸಾಗುತ್ತಿದ್ದಾರೆ ಎಂದು ನಾವು ಬೇಸರಪಡುತ್ತೇವೆ. ಆದರೆ ಹಳ್ಳಿಯಲ್ಲಿ, ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆಯನ್ನು ನಾವು ನಿರ್ಮಿಸಿದ್ದೇವೆಯೇ ಎಂಬುದೇ ಮುಖ್ಯ ಪ್ರಶ್ನೆ. ‘ದೇಸಿರಿ’ಯಂತಹ ಪ್ರಯತ್ನಗಳು ಕೃಷಿಗೂ ಹೊಸ ತಲೆಮಾರಿಗೂ ಭರವಸೆಯ ದಾರಿಯನ್ನು ತೋರಿಸುತ್ತಿವೆ. ಅಡಗನಹಳ್ಳಿಯ ಗಾಣದಲ್ಲಿ ಜಿನುಗುವ ಪ್ರತಿಯೊಂದು ಹನಿ ಎಣ್ಣೆಯೂ ಒಂದು ಸತ್ಯವನ್ನು ಹೇಳುತ್ತದೆ. ಅಭಿವೃದ್ಧಿ ಎಂದರೆ ಕೇವಲ ವೇಗವಲ್ಲ; ಮನುಷ್ಯ, ಮಣ್ಣು ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ಪುನಃ ಕಟ್ಟುವುದು. ಇದೇ ನಮ್ಮ ಕಾಲದ ನಿಜವಾದ ಸಂಪತ್ತು.

(ನವೀನ್ +91 99458 11771)

Tags

DesiriVillagefuture
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X