Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಕುಪ್ಪಳಿ ಬೆಳಕಿನಲ್ಲಿ, ಬಾಲವನ...

ಕುಪ್ಪಳಿ ಬೆಳಕಿನಲ್ಲಿ, ಬಾಲವನ ಕತ್ತಲಲ್ಲಿ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ6 July 2025 12:28 PM IST
share
ಕುಪ್ಪಳಿ ಬೆಳಕಿನಲ್ಲಿ, ಬಾಲವನ ಕತ್ತಲಲ್ಲಿ!
ಪುತ್ತೂರಿನ ಸಾಹಿತ್ಯ, ಕಾರಂತಪ್ರಿಯರಿಗೆ ಬಾಲವನ ಭೂತದ ಮನೆಯಾಗುತ್ತಿದೆ ಎಂಬ ಹತಾಶೆ ನೋವು ಇದ್ದೇ ಇದೆ. ಬಾಲವನ ಪ್ರಶಸ್ತಿಯ ವಿಚಾರದಲ್ಲಿ ಪ್ರತಿವರ್ಷ ನಡೆಯುವ ಊರಿನ ಸಜ್ಜನ ಸಾಹಿತಿ, ಶಿಕ್ಷಕ, ನಾಗರಿಕರ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇನ್ನೊಂದು ಕಡೆ ಕಾರಂತರ ಹೆಸರಿನಲ್ಲಿ ಬಂದ ಲಕ್ಷಾಂತರ ರೂ. ಅನುದಾನ ಕಾರ್ಯಕ್ರಮಗಳಿಲ್ಲದೆ ಕೊಳೆಯುತ್ತಿದೆ. ಅಧಿಕಾರಿಗಳಿಗೆ ಕಾರಂತರು ಗೊತ್ತಿಲ್ಲ, ಗೊತ್ತಿರುವವರಿಗೆ ಅವಕಾಶಗಳಿಲ್ಲ. ಪ್ರತೀ ಬಾರಿ ಕುಪ್ಪಳಿಗೆ ಹೋಗಿ ಬಂದಾಗ ಛೇ ಎಲ್ಲವೂ ಇದ್ದೂ ಹಾಳಾಯಿತಲ್ಲ, ನಮ್ಮ ಕಾರಂತರಿಗೆ ಈ ಸ್ಥಿತಿ ಬಂತಲ್ಲ! ಎಂದು ಮರುಗುವ ಸ್ಥಿತಿ ನಮ್ಮದು.

ಕರ್ನಾಟಕ ಸಾಹಿತ್ಯ ಅಕಾಡಮಿಯ ಮೂರು ದಿನಗಳ ಕುವೆಂಪು ಅಧ್ಯಯನ ಶಿಬಿರದ ಕೊನೆಯ ದಿನ ಬೆಳ್ಳಂಬೆಳಗ್ಗೆ ಆರು ಗಂಟೆಗೆ ಮಹಾಮನೆಯ ನಡು ತೊಟ್ಟಿಯ ಕಂಬಕ್ಕೊರಗಿ ಕುವೆಂಪು ಅವರಿಗೆ ಸ್ಫೂರ್ತಿಯಾಗಿದ್ದ ಕಾಡು ಸಂಬಂಧವನ್ನು ವಿವರಿಸುವ ಉಪನ್ಯಾಸ ನನ್ನದಾಗಿತ್ತು. ಮಹಾಕವಿಯ ಕುಪ್ಪಳಿ ಮನೆಯಲ್ಲೇ ಅವರ ಇಡೀ ಸಾಹಿತ್ಯಕ್ಕೆ ಪಾಯವಾಗಿದ್ದ ಹಸುರಿನ ಆವರಣದಲ್ಲಿ ಕವಿಗೂ ಹಸುರಿಗೂ ಇದ್ದ ಸಂಬಂಧವನ್ನು ವಿವರಿಸುವ ಅವಕಾಶ ಭುವನದ ಭಾಗ್ಯವೆಂದೇ ಭಾವಿಸಿದ್ದೆ. ಮುಗಿಸಿ ಹೊರಗೆ ಬರುವಾಗ ಆ ಚುಮಚುಮ ಬೆಳಕಿಗೆ ಬೆಂಗಳೂರಿನಿಂದ ಬಂದ ರಾಜಹಂಸ ಬಸ್ಸು ಕುಪ್ಪಳಿ ಮನೆಯ ಆವರಣದೊಳಗಡೆ ನಿಂತಿತ್ತು.

ಅವತ್ತು ಮಹಾಕವಿಯ ಹುಟ್ಟಿದ ದಿವಸ ಬೇರೆ. ರಾಜಧಾನಿಯಿಂದ ಬಂದ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಹೆಚ್ಚು ಇತ್ತು. ಅವರೆಲ್ಲ ಮಲೆಯ ತಂಪು ನೀರಲ್ಲಿ ಮುಖ ತೊಳೆಯುತ್ತಾ ಆ ಮುಂಜಾನೆಯ ಮಂಜು ಬೆಳಗಿನಲ್ಲಿ ಕವಿಮನೆಯನ್ನು ಬೆರಗಿನಿಂದಲೇ ನೋಡುತ್ತಿದ್ದರು. ಜನಸಾಗರದ ಬೆಂಗಳೂರಿನಿಂದ ಕಾಡುರಸ್ತೆಯನ್ನು ಸೀಳಿಕೊಂಡು ರಾತ್ರಿಯಿಡೀ ಪ್ರಯಾಣಿಸಿ ಬಂದ ಆ ಬಿಳಿ ಬಸ್ಸಿನಿಂದ ಇಳಿದಿದ್ದ ನಡುವಯಸ್ಸಿನ ಹಿರಿಯರೊಬ್ಬರನ್ನು ಈ ಸಾಹಿತ್ಯ ಪ್ರವಾಸದ ಉದ್ದೇಶದ ಬಗ್ಗೆ ಕೇಳಿದ್ದೆ.

‘‘ಒಂದು ಭಾಷೆಗೆ ಜ್ಞಾನಪೀಠದಂತಹ ಪ್ರಶಸ್ತಿ ಸಿಗುವುದು ಕೇವಲ ಒಂದು ವ್ಯಕ್ತಿಯ ಸಾಧನೆ, ಗೌರವವಲ್ಲ, ಅದು ನಮ್ಮ ಕನ್ನಡ ಭಾಷೆಯ ಬದುಕು, ಸಾಹಿತ್ಯದ ಶಕ್ತಿ. ಮಲೆನಾಡಿನ ನೆನಪುಗಳೇ ಕುವೆಂಪು ಸಾಹಿತ್ಯದ ಮೂಲನಿಧಿಯಾಗಿರುವಾಗ ಅವರನ್ನು ಓದಿರುವ ಯಾರೂ ಕೂಡ ಕುಪ್ಪಳಿಯನ್ನು ಮರೆಯಲಾರರು. ಆ ಮಹಾಕವಿಯ ಮಹಾಕಾವ್ಯವಿರಬಹುದು, ಬೃಹತ್ ಕಾದಂಬರಿಗಳಿರಬಹುದು, ಗದ್ಯಪದ್ಯದ ಯಾವುದೇ ಅನುಭವ ಕಥನಗಳಿರಬಹುದು, ಎಲ್ಲದರ ಮೂಲ ಮಲೆನಾಡಿನ ಈ ಮನೆ ಕುಪ್ಪಳಿ. ಇಲ್ಲಿಯ ಕವಿಶೈಲ, ಗಡಿಕಲ್ಲು, ಸಿಬ್ಬಲುಗುಡ್ಡ, ನವಿಲುಕಲ್ಲು ಇವೆಲ್ಲವೂ ಸ್ಮತಿ ದೃಶ್ಯಗಳಾಗಿ ನಿರಂತರ ಅವರಿಗೆ ಚೈತನ್ಯ ತುಂಬಿವೆ. ಆ ಕಾರಣಕ್ಕಾಗಿಯೇ ಕವಿಮನೆಯನ್ನು ನೋಡಲೇ ಬೇಕೆಂದು ಬೆಂಗಳೂರಿನಿಂದ ಬಂದೆ’’ ಎಂದರು ಅವರು. ಯಶವಂತಪುರದ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿದ್ದ ರವಿಚಂದ್ರ ಅವರ ಸಾಹಿತ್ಯ ಆಸಕ್ತಿ, ಕುವೆಂಪು ಮೇಲಿನ ಪ್ರೀತಿ ಗೌರವ ಕಂಡು ಅಂದು ಖುಷಿಪಟ್ಟಿದ್ದೆ. ಇದೆಲ್ಲ ನಡೆದು ಮೂರು ವರ್ಷವೇ ಸಂದಿದೆ.

ಬರೀ ರವಿಚಂದ್ರರಷ್ಟೇ ಅಲ್ಲ, ಕುಪ್ಪಳಿಗೆ ಆ ಮುಂಚೆ ಮತ್ತು ಆನಂತರ ಸಾವಿರಾರು ಜನ ಬಂದು ಹೋಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸರಾಸರಿ ಪ್ರತಿದಿನ 300ಕ್ಕಿಂತ ಹೆಚ್ಚು ಜನ ಕವಿಮನೆಯನ್ನು ವೀಕ್ಷಿಸಿರಬಹುದು. ಹೀಗೆ ಯಾರೆಲ್ಲ ಕುಪ್ಪಳಿಗೆ ದೂರದೂರುಗಳಿಂದ ಬರುತ್ತಾರೋ ಅವರ ಉದ್ದೇಶವು ಘನತೆಯದ್ದಾಗಿರುತ್ತದೆ. ಬರೀ ಕನ್ನಡಿಗರಷ್ಟೇ ಅಲ್ಲ; ಈ ದೇಶದ ಬೇರೆ ಬೇರೆ ರಾಜ್ಯಗಳ ಸಾಹಿತ್ಯಾಸಕ್ತರು, ವಿದೇಶಿಯರು ಕುವೆಂಪು ಮನೆಯನ್ನು ನೋಡುವುದಕ್ಕಾಗಿಯೇ ಬರುತ್ತಾರೆ. ಅರ್ಧ ದಿವಸ ನಾಗರಿಕ ಜಗತ್ತಿನಿಂದ ದೂರದ ಹಳ್ಳಿಯ ಹಸಿರು ವನಾವರಣದೊಳಗೆ ನಡೆದು ಕೂತು ವೀಕ್ಷಿಸಿ ಸಂಭ್ರಮಿಸುತ್ತಾರೆ. ಅಲ್ಲಿ ಕವಿ, ಕಾವ್ಯ, ಸಾಹಿತ್ಯ, ಪ್ರಕೃತಿ, ಹಸಿರು ಈ ಎಲ್ಲದಕ್ಕೂ ಒಂದು ಪಾವಿತ್ರ್ಯ ದೈವಿಕತೆಯ ಘನ ಸಂಬಂಧಗಳಿವೆ. ಅಲ್ಲಿ ಬಂದವರಿಗೆ ಮಜಾ ಉಡಾಯಿಸಲು ಬೇರೆ ಮೋಜಿನ ದಾರಿಗಳಿಲ್ಲ, ಬೇಡ ಬಿಡಿ, ಒಳ್ಳೆಯ ಊಟ ಮಾಡುವ ಎಂದರೆ ಹೋಟೆಲುಗಳಿಲ್ಲ. ಮಾಲಿನ್ಯವಿಲ್ಲದ ಹಸಿರೊಳಗಡೆ ಹುದುಗಿ ಗತಿಸಿದ ಕವಿಮಾನವನ್ನು ಅರಿಯುವುದೇ ಆ ನೆಲದ ಸೊಗಸು. ಮಹಾಕವಿಯ ಮನೆ ನೋಡುವುದು, ಅವರ ಬದುಕಿನ ಭಾಗಿದಾರರ ನೆನಪುಗಳ ಚಿತ್ರಗಳನ್ನು ವೀಕ್ಷಿಸುವುದು, ಪ್ರಶಸ್ತಿ ಪುರಸ್ಕಾರಗಳನ್ನು ಗಮನಿಸುವುದು, ಕೃತಿ ಪ್ರದರ್ಶನಗಳನ್ನು ವೀಕ್ಷಿಸುವುದು, ಖರೀದಿಸುವುದು, ಮನೆ ಹಿಂಭಾಗದ ಬೆಟ್ಟವೇರಿ ವಿಶಾಲವಾಗಿ ಹಬ್ಬಿದ ವನರಾಶಿಯನ್ನು ಗಮನಿಸುವುದು ಇವಿಷ್ಟೇ ಅಲ್ಲಿ ಸಿಗುವ ಪರಮಸುಖ.

ಮಹಾಮನೆಯ ಹಿನ್ನೆಲೆಯ ಪ್ರಕೃತಿ ಸಾಹಿತ್ಯದ ನೋಟಕರಿಗೆ ಎಷ್ಟು ಪೂರಕವಾಗಿದೆ ಎಂದರೆ ಕುವೆಂಪು ಅವರ ಒಂದೇ ಒಂದು ಕೃತಿಯನ್ನು ಜೀವಮಾನದಲ್ಲಿ ಓದದವರು ಕೂಡ ಈ ನೆಲದ ಗುಣಕ್ಕೆ, ಪ್ರಕೃತಿಯ ಘನ ಗಂಭೀರತೆಗೆ, ಕವಿಕಾಲದ ಸಾಕ್ಷಿಗಳಿಗೆ, ಪ್ರಕೃತಿಯ ನವಿರು ಹಿಮ್ಮೇಳಕ್ಕೆ ಒಮ್ಮೆಲೇ ಗಂಭೀರವಾಗಿ ಬಿಡುತ್ತಾರೆ. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ನವ ನಾಗರಿಕ ಮನಸ್ಸುಳ್ಳ ಹೊಸ ಮಕ್ಕಳು ಕೂಡ ಈ ಮನೆಯ ಘನ ಗಂಭೀರ ಶಾಂತ ಪ್ರಶಾಂತ ಹೃದಯಕ್ಕೆ ತಲೆಬಾಗಿ ಇಲ್ಲೇನೂ ನಡೆದಿದೆ ಎಂಬ ಚೋದ್ಯಕ್ಕೆ ಒಳಗಾಗುತ್ತಾರೆ. ಆ ಗಂಭೀರತೆಯ ಮಹತ್ವದ ಸಂಗತಿಯ ಒಳಗಡೆ ತಾವೂ ಒಳಗೊಳ್ಳಲು ಪ್ರಯತ್ನಿಸುತ್ತಾರೆ.

ಈ ಕಾರಣಕ್ಕಾಗಿಯೇ ಯಾರೇ ಆಗಲಿ ಕುಪ್ಪಳಿಗೆ ಹೋಗುವುದೆಂದರೆ ಕೇವಲ ಕನ್ನಡ ಸಾಹಿತ್ಯದ ಅಸ್ಮಿತೆಯೊಂದನ್ನು ಜಗತ್ತಿನ ಎತ್ತರಕ್ಕೆ ಪಸರಿಸಿದ ಕವಿಯ ಬದುಕನ್ನು ದರ್ಶಿಸುವುದಷ್ಟೇ ಉದ್ದೇಶವಾಗಿರುತ್ತದೆ. ಇದರ ಸಂಪೂರ್ಣ ಅಭಿವೃದ್ಧಿ ನಿಯತ ವ್ಯವಸ್ಥೆ ಆಗು ಹೋಗುಗಳಿಗೆ ಒಂದು ಟ್ರಸ್ಟ್ ಇದೆ. ಕಳೆದ ಅನೇಕ ವರ್ಷಗಳಿಂದ ಕುವೆಂಪು ಪ್ರತಿಷ್ಠಾನ ಕುವೆಂಪು ಅವರು ಬಾಳಿ ಬದುಕಿದ ಯೋಚಿಸಿದ ಸಾಕ್ಷಿಗಳನ್ನು ಕನ್ನಡಿಗರಿಗೆ ಯಥಾವತ್ತಾಗಿ ಅತ್ಯಂತ ವ್ಯವಸ್ಥಿತವಾಗಿ ಪರಿಚಯಿಸುತ್ತಿದೆ. ಸರಕಾರ ಕೊಡುವ ಅನುದಾನ, ದಾನಿಗಳ ಕೊಡುಗೆ ಎಲ್ಲವುಗಳಿಂದ ಕುವೆಂಪು ಸಾಹಿತ್ಯಗೋಷ್ಠಿ, ತರಬೇತಿ ಶಿಬಿರ, ಪ್ರಕೃತಿ ವೀಕ್ಷಣೆ, ಪ್ರಕಟಣೆ, ಪ್ರಾತ್ಯಕ್ಷಿಕೆ, ರಂಗ ಪ್ರಯೋಗ, ಚಿತ್ರ ಪ್ರದರ್ಶನ... ಹೀಗೆ ಹತ್ತಾರು ದಾರಿಗಳಲ್ಲಿ ಕುವೆಂಪು ಅವರನ್ನು ನಿರಂತರ ಜಾರಿಯಲ್ಲಿಟ್ಟಿದೆ. ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಸೂತ್ರಬದ್ಧ ನಿಯಂತ್ರಣ ಅಭಿನಂದನೀಯ.

ಇಂಗ್ಲೆಂಡಿನ ಯವನ್ ನದಿತೀರದ ಸ್ಟಾರ್ಟ್ ಫೋರ್ಡ್ ಎಂಬ ಹಸಿರುಮಯ ಹಳ್ಳಿ ಮನೆಯಲ್ಲಿ ಬದುಕಿ ತೀರಿ ಹೋದ ಜಗತ್ತಿನ ಶ್ರೇಷ್ಠ ನಾಟಕಕಾರ ಶೇಕ್ಸ್‌ಪಿಯರ್ ಮನೆಯನ್ನು ಇವತ್ತಿಗೂ ಆ ದೇಶ ಸುರಕ್ಷಿತವಾಗಿಟ್ಟಿದೆ. ಬ್ರಿಟಿಷರಿಗೆ ಅದು ಬರೀ ಇಟ್ಟಿಗೆ ಗಾರೆಯ ಆವರಣವಲ್ಲ. ತನ್ನ ನಾಡಿನ ಅಸ್ಮಿತೆಯಾಗಿರುವ, ಅತ್ಯದ್ಭುತ ಸಾಹಿತ್ಯ ಸಂಸ್ಕೃತಿ ಹೊಳಹುಗಳು ಹುಟ್ಟಿದ ನೆಲೆಯದು. ಇಂಗ್ಲಿಷ್ ನ್ಯಾಷನಲ್ ಟ್ರಸ್ಟ್ ಮತ್ತು ಸ್ಥಳೀಯ ಶೇಕ್ಸ್‌ಪಿಯರ್‌ಹುಟ್ಟು ನೆಲದ ಟ್ರಸ್ಟ್ ಗಳು ಜಂಟಿಯಾಗಿ ಆ ಮನೆಯನ್ನು ರಕ್ಷಿಸಿವೆ. ಜಗತ್ತಿನ ಮಹಾನ್ ನಾಟಕಕಾರ ಬರವಣಿಗೆಗೆ ಉಪಯೋಗಿಸಿದ ಹಸ್ತಾಕ್ಷರದ ಕಾಗದಗಳು, ಪುಸ್ತಕಗಳು ಅಲ್ಲಿ ನೋಡಲು ಸಿಗುತ್ತವೆ. ನಾಟಕ ಆಡಿದ ಹಳೆಯ ವೇದಿಕೆಗಳ ಪಾಯ ಪರಿಕರಗಳು ಪ್ರವಾಸಿಗರಿಗೆ ಮುಟ್ಟಲು ಸಿಗುತ್ತವೆ. ಮನೆಯ ಸುತ್ತಲ ಪ್ರದೇಶ ಅಪರೂಪದ ಗಿಡ ವೈವಿಧ್ಯಗಳಿಂದ ಕೂಡಿದೆ. ಪ್ರತಿವರ್ಷ ಸುಮಾರು 25ಲಕ್ಷಕ್ಕಿಂತ ಹೆಚ್ಚು ಪ್ರವಾಸಿಗರು ಶೇಕ್ಸ್‌ಪಿಯರ್‌ನ ಈ ತಾಣವನ್ನು ದರ್ಶಿಸುತ್ತಾರೆ ಎಂದರೆ ಈ ‘ಸಾಹಿತ್ಯ ಪ್ರವಾ ಸೋದ್ಯಮ’ ಇಂಗ್ಲೆಂಡ್‌ನ ಆರ್ಥಿಕತೆಗೆ ಎಷ್ಟೊಂದು ಕೋಟಿ ಕೋಟಿ ಪೌಂಡಿನ ಆದಾಯವನ್ನು ತರಬಹುದೆಂದು ನೀವೇ ಲೆಕ್ಕ ಹಾಕಿ. ಬಂದು ಹೋಗುವ ಪ್ರವಾಸಿಗರಿಗೆ ಶೇಕ್ಸ್‌ಪಿಯರ್‌ನ ನಕಲು ಸಹಿ ಇರುವ ಪೆನ್ನು, ಪೆನ್ಸಿಲ್, ರಬ್ಬರು ಪುಸ್ತಕಗಳು ಆ ಇಡೀ ಆವರಣದೊಳಗಡೆ ಲಭಿಸುತ್ತದೆಯಂತೆ. ಇಡೀ ಜಗತ್ತಿನಲ್ಲಿ ಸಾಹಿತ್ಯ ಪ್ರವಾಸೋದ್ಯಮಕ್ಕೆ ಶೇಕ್ಸ್‌ಪಿಯರ್ ಮನೆಯೊಂದು ಅತ್ಯುತ್ತಮ ಮಾದರಿಯಾಗಿದೆ. ನಮ್ಮ ಕುವೆಂಪು ಮನೆಯೂ ಇದೇ ಹಂತವನ್ನು ತಲುಪಿದೆ.

ಅಷ್ಟೇ ಎತ್ತರದ, ಜ್ಞಾನಪೀಠ ಪ್ರಶಸ್ತಿ ವಿಜೇತ, ಪ್ರಯೋಗಶೀಲ ಲೇಖಕ ಶಿವರಾಮ ಕಾರಂತರ ಕಥೆ ಕೇಳಿ. ನಮ್ಮ ಪುತ್ತೂರು ಬಹಳಷ್ಟು ವರ್ಷ ಅವರ ಕರ್ಮ ಭೂಮಿಯಾಗಿತ್ತು. ಇಲ್ಲಿಯ ಬಿರುಮಲೆ ಬೆಟ್ಟದ ತಡಿಯಲ್ಲಿ ಅವರು ಪ್ರಯೋಗಾರ್ಥವಾಗಿ ಕಟ್ಟಿದ ಬಾಲವನವು ಕುಪ್ಪಳಿ ಅಥವಾ ಶೇಕ್ಸ್‌ಪಿಯರ್‌ನ ಮನೆಯ ಆವರಣಕ್ಕಿಂತ ಖಂಡಿತ ಕಡಿಮೆಯಲ್ಲ. ಬಾಲವನದ ಭೂಮಿಯ ಸ್ವರೂಪವೇ ಚಂದ. ಬೆಟ್ಟದ ಪಾಯಕ್ಕೆ ದಟ್ಟ ಹಸಿರಿನ ಹೊದಿಕೆ ಇದೆ. ನಡುವೆ ಭೂಮಿಯ ವಿನ್ಯಾಸವನ್ನು ಬದಲಾಯಿಸದೆ ಕಾರಂತರು ಕಟ್ಟಿದ ಮನೆ, ಬರಹದ ಓದುಕುಟೀರಗಳೂ ಇವೆ. ಒಂದು ಹಂತದಲ್ಲಿ ತಾನು ಮಾಡಿದ ಅಷ್ಟೂ ಪ್ರಯೋಗ ಪರಿಕರಗಳನ್ನು ಸರಕಾರದ ಕೈಗೊಪ್ಪಿಸಿ ಇನ್ನು ನೀವು ಮುಂದುವರಿಸಿ ಎಂದು ಅವರು ಸಾಲಿಗ್ರಾಮದ ಕಡೆಗೆ ನಡೆದರು. ಸರಕಾರ ಮನಸ್ಸು ಮಾಡಿದ್ದರೆ ಕಳೆದ ಆರು ದಶಕದಲ್ಲಿ ಕಾರಂತರ ಪ್ರಯೋಗ ಆವರಣವನ್ನು ಕುಪ್ಪಳಿ ಮಾದರಿಯಲ್ಲಿ ಕರ್ನಾಟಕದ ಮತ್ತೊಂದು ಸಾಹಿತ್ಯ ಪ್ರವಾಸೋದ್ಯಮಕ್ಕೆ ಏರಿಸಬಹುದಿತ್ತು.

ಬರೀ ಸಾಹಿತ್ಯವಷ್ಟೇ ಅಲ್ಲ, ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚ, ಯಕ್ಷಗಾನ, ರಂಗಭೂಮಿ, ಮಕ್ಕಳ ಆಸಕ್ತಿ- ಕಲಿಕೆ, ಶಿಕ್ಷಣ ಎಲ್ಲದರಲ್ಲೂ ಆಸಕ್ತರಾದ ಶಿವರಾಮ ಕಾರಂತರು ಅವೆಲ್ಲವನ್ನೂ ಬಾಲವನದಲ್ಲಿ ಸಾಂದರ್ಭಿಕವಾಗಿ ಪ್ರಯೋಗಿಸಿ ಯಶಸ್ವಿ ದಾಖಲೆಗಳನ್ನು ಬಿಟ್ಟಿದ್ದರು. ಅವೆಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಒಂದು ಸಾಂಸ್ಕೃತಿಕ ಸಮಿತಿಗೆ ಒಪ್ಪಿಸಿ, ವರ್ಷ ವರ್ಷ ಒಂದಷ್ಟು ಅನುದಾನ ಒದಗಿಸಿ ನಿಯತ್ತಿನಲ್ಲಿ ಉಳಿಸಿಕೊಂಡಿದ್ದರೆ ರಾಜ್ಯಕ್ಕೆ ದೇಶಕ್ಕೆ ‘ಬಾಲವನ’ ‘ಕುಪ್ಪಳಿಯಂತೆ’ ಒಂದು ಅತ್ಯುತ್ತಮ ಮಾದರಿಯಾಗುತ್ತಿತ್ತು. ಇಂದು ಬಾಲವನದ ಒಳಗಡೆ ಇರುವ ಈಜುಕೊಳಕ್ಕೆ ನಿತ್ಯ ಹೋಗುವ ಸಾಹಿತ್ಯೇತರ ಸ್ಥಳೀಯರೊಂದಷ್ಟು ಮಂದಿಯನ್ನು ಬಿಟ್ಟರೆ ಬೇರೆ ನಿಜ ಸಾಹಿತ್ಯಾಸಕ್ತರು ಆ ಕಡೆಗೆ ಹೋಗುವವರೇ ಇಲ್ಲ. ದಶಕದ ಹಿಂದೆ ಕಟ್ಟಿದ ಮಕ್ಕಳ ಆಟಿಕೆಗಳು ಬಳಕೆಯಿಲ್ಲದೆ ತುಕ್ಕು ಹಿಡಿದು ನಿರುಪಯುಕ್ತವಾಗಿವೆ. ಕೆಲವು ಕಟ್ಟಡಗಳ ಸೀಲಿಂಗ್ ಜಾರಿವೆ. ಮೂತ್ರಾಲಯಗಳ ಬಾಗಿಲು ಮುರಿದಿವೆ. ಕಾರಂತರ ಪ್ರತಿಮೂರ್ತಿ ಕೈಕಾಲು ಮುರಿದುಕೊಂಡು ಮೂಲೆ ಸೇರಿದೆ. ಒಳಾಂಗಣದ ರಸ್ತೆಗಳು ಡಾಂಬರ್ ಇಲ್ಲದೆ ಹಾಳಾಗಿವೆ. ನಿಯತ ಕಾರ್ಯಕ್ರಮಗಳಿಲ್ಲದೆ ಬಾಲವನ ಭಣ ಗುಟ್ಟುತ್ತಿದೆ. ಬೇಡ ಬಿಡಿ, ಪ್ರತಿವರ್ಷ ಕಾರಂತರ ಹುಟ್ಟಿದ ದಿನವನ್ನು ನೆನಪಿಸುವ, ಅವರ ಹೆಸರಿನ ‘ಬಾಲವನ ಪ್ರಶಸ್ತಿ’ ಕೊಟ್ಟು ಗೌರವಿಸುವ ಅತ್ಯಂತ ಮಹತ್ವದ ಕಾರ್ಯಕ್ರಮವೂ ಕಳೆದ ವರ್ಷ ನಡೆಯಲಿಲ್ಲ ಎಂದರೆ ಬಾಲವನಕ್ಕೆ ಅಂಟಿದ ಬಾಲ ಪೀಡೆಯನ್ನು ನೀವೇ ಊಹಿಸಿ.

ಯಾವುದೇ ಒಬ್ಬ ಸಾಹಿತಿಯ ಮನೆಯ ಆವರಣ ಅಥವಾ ಪ್ರಯೋಗಾಲಯ ಸದಾ ಜನ ಪ್ರೀತಿಯಿಂದ ವೀಕ್ಷಕರಿಂದ ಜೀವಂತವಾಗಿ ಇರಬೇಕಾದರೆ ಅಲ್ಲೊಂದಷ್ಟು ಕಟ್ಟಡ, ಈಜುಕೊಳ, ಜಾರುಬಂಡಿ, ಆಟಿಕೆಗಳನ್ನು ಇಟ್ಟರೆ ಸಾಕಾಗುವುದಿಲ್ಲ. ಜನರನ್ನು ಸೆಳೆಯುವಂತಹ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಕ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಅದೇ ಲೇಖಕನ ಸಾಹಿತ್ಯವನ್ನು ಬಗೆಯುವ, ಚಿಂತನೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ, ಪ್ರಜ್ಞೆಗಳನ್ನು ವಿಸ್ತರಿಸುವ ಕಾರ್ಯಕ್ರಮಗಳು ಅಲ್ಲಿ ಬೇಕು. ಹಾಗೆ ನೋಡಿದರೆ ಶಿವರಾಮ ಕಾರಂತರ ಆಸಕ್ತಿಯ ಕ್ಷೇತ್ರಗಳು ಹತ್ತಾರು. ಈ ಹಿನ್ನೆಲೆಯಲ್ಲಿ ನೂರು ದಾರಿಯಲ್ಲಿ ಯೋಚಿಸಿ ಬಾಲವನವನ್ನು ಜೀವಂತವಾಗಿಡಬಹುದಿತ್ತು.ಶುದ್ಧ ಮನೋರಂಜನೆಯೂ ಸೇರಿ ಅಲ್ಲಿ ಸುಸಂಸ್ಕೃತ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುತ್ತಿದ್ದರೆ ಆ ಕೇಂದ್ರ ಕಳೆ ಕಟ್ಟುತ್ತದೆ. ಜನ ಬರುತ್ತಾರೆ. ಅಲ್ಲಿ ಏನೋ ನಡೆಯುತ್ತಿದೆ ಎನ್ನುವ ಪ್ರಚಾರ ಪ್ರಭೆ ವಿಸ್ತರಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಲವನ ಈ ಎಲ್ಲದರಲ್ಲೂ ಸೊನ್ನೆ ಸುತ್ತುತ್ತಿದೆ. ಒಂದು ಕಾಲದಲ್ಲಿ ತಿಂಗಳಿಗೆ ರೂ. 40 ಸಾವಿರದಷ್ಟು ಆದಾಯ ಬರೀ ಪ್ರವೇಶ ದರದಿಂದಲೇ ಒದಗುತ್ತಿತ್ತು. ಅದನ್ನೇ ವ್ಯಯಿಸಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಿತ್ತು ಅಥವಾ ಪುತ್ತೂರಿನ ಲಭ್ಯ ಸಾಂಸ್ಕೃತಿಕ ವೇದಿಕೆಗಳಿಂದ ನಿರಂತರ ಕಾರ್ಯಕ್ರಮ ಕೊಡಿಸಬಹುದಿತ್ತು. ತಾಲೂಕಿನಲ್ಲಿ ಹತ್ತಾರು ಶಾಲಾ ಕಾಲೇಜುಗಳಿವೆ, ಶೈಕ್ಷಣಿಕ ಸಂಸ್ಥೆಗಳಿವೆ. ಅವೆಲ್ಲವುಗಳಿಂದ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸುವುದು ಅಥವಾ ಶಿಕ್ಷಕರ ರಂಗಾಸಕ್ತರ ಯಕ್ಷಗಾನ ಕಲಾವಿದರ ತರಬೇತಿ ಪ್ರಾತ್ಯಕ್ಷಿಕೆ ಪ್ರಯೋಗಗಳಿಗೆ, ನಿಯತ ಸಭೆಗಳಿಗೆ ಅವಕಾಶ ಕೊಡುತ್ತಿದ್ದರೂ ಬಾಲವನ ಗಿಜಿಗುಟ್ಟುತ್ತಿತ್ತು. ಇದೇ ಲೇಖಕ ಸ್ಥಳೀಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದಾಗ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳನ್ನು ಸೇರಿಸಿ ಕಾರಂತರ ಅಧ್ಯಯನ ಶಿಬಿರಗಳನ್ನು ಆಯೋಜಿಸಿದ್ದಿದೆ.ಆದರೆ ಎಷ್ಟೋ ಸಲ ಕಾಲೇಜಿನಿಂದಲೇ ಮಕ್ಕಳಿಗೆ ಕೂರುವ ಚೇರ್‌ಗಳನ್ನು ಅಲ್ಲಿಗೆ ಒಯ್ಯಬೇಕಾದ ಅನಿವಾರ್ಯತೆ ಇತ್ತು. ಶಿಬಿರಾರ್ಥಿಗಳಿಗೆ ಊಟೋಪಚಾರಕ್ಕೂ ಅಲ್ಲಿ ವ್ಯವಸ್ಥೆ ಇಲ್ಲ. ಕನಿಷ್ಠ ಒಂದು ಸಭಾ ಕಾರ್ಯಕ್ರಮಕ್ಕೆ, ಅಧ್ಯಯನ ಶಿಬಿರಕ್ಕೆ, ರಂಗ ಚಟುವಟಿಕೆಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿದರೆ ಅಥವಾ ಕನಿಷ್ಠ ಅನುದಾನಗಳನ್ನು ನೀಡಿದರೆ ಇವತ್ತಿಗೂ ಬಾಲವನಕ್ಕೆ ಸಾಂಸ್ಕೃತಿಕ ಮರುಜೀವ ಕೊಡಲು ಸಾಧ್ಯವಿದೆ.

ಪ್ರತೀ ಬಾರಿ ಕಾರಂತರ ಹುಟ್ಟು ಹಬ್ಬವನ್ನು ಆಚರಿಸುವ ದಿನ ಒತ್ತಾಯಕ್ಕೋ, ಮೆಮೋ ಹಾಕಿಯೋ ಸ್ಥಳೀಯ ಶಾಲಾ ಕಾಲೇಜುಗಳ ಶಿಕ್ಷಕರನ್ನು ಮಕ್ಕಳನ್ನು ಸಭೆ ಮುಂದೆ ಕೂರಿಸುವ ಯಾವ ಅಗತ್ಯವೂ ಬರುವುದಿಲ್ಲ. ಎಷ್ಟೋ ಬಾರಿ ನಾನೇ ಲೆಕ್ಕ ಹಾಕಿದ್ದೇನೆ. ಕಾರಂತರ ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ 10 ರಿಂದ 20 ಮಂದಿ ಕಾರಂತರ ಅಭಿಮಾನಿಗಳಷ್ಟೇ ಸೇರುತ್ತಾರೆ. ಉಳಿದಂತೆ ಬಾಡಿಗೆ ನಿರಾಸಕ್ತ ಮಕ್ಕಳೇ ಸಭೆಯಲ್ಲಿ ಕೂತಿರುತ್ತಾರೆ.

ಈ ಎಲ್ಲ ದುರ್ಗತಿಗೆ ಮೊದಲ ಕಾರಣ ಬಾಲವನದ ರಾಜ್ಯ ಸಮಿತಿಯ ಯಾವ ಕ್ರಿಯಾಶೀಲ ಸದಸ್ಯನೂ ಪುತ್ತೂರಲ್ಲಿ ಇಲ್ಲದಿರುವುದು. ಚಿರಂಜೀವಿ ಸಿಂಗ್, ಕ್ಷಮಾ ರಾವ್, ಉಲ್ಲಾಸ ಕಾರಂತ ಮುಂತಾದ ಕಾರಂತರ ಅಭಿಮಾನಿಗಳು, ಕುಟುಂಬ ಸದಸ್ಯರು ಬೇರೆ ಊರುಗಳಲ್ಲಿ ಕೇಂದ್ರೀಕೃತವಾಗಿದ್ದಾರೆ, ಹೊರತು ಪುತ್ತೂರಲ್ಲೇ ಇದ್ದು ಬಾಲವನಕ್ಕೆ ಜೀವಂತಿಕೆಯನ್ನು ತಂದು ಕೊಡಬೇಕೆನ್ನುವ ಕ್ರಿಯಾಶೀಲ ಟ್ರಸ್ಟಿಗಳು ಇಲ್ಲಿ ಇಲ್ಲವೇ ಇಲ್ಲ. ಸ್ಥಳೀಯ ಆಡಳಿತಾಧಿಕಾರಿಯಾಗಿ ತಾಲೂಕಿನ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಪುತ್ತೂರಿಗೆ ಎಸಿಯಾಗಿ ಬರುವ ದಂಡಾಧಿಕಾರಿಗಳೇ ಬಾಲವನದ ಉಸ್ತುವಾರಿ ಆಗಿರುತ್ತಾರೆ. ವರ್ಷಕ್ಕೊಮ್ಮೆ ವರ್ಗಾವಣೆಗೊಂಡು ಬರುವ ಇಂತಹ ದಂಡಾಧಿಕಾರಿಗಳಿಗೆ ಭಾಗಶಃ ಕಾರಂತರ ಪರಿಚಯ ಇರುವುದಿಲ್ಲ. ಬಂದವರು ಆರು ತಿಂಗಳು ತಮ್ಮ ಕಚೇರಿಯ ಕಂದಾಯ ವಿಷಯಗಳ ಅಧ್ಯಯನದಲ್ಲಿ ತೊಡಗುತ್ತಾರೆ. ಮುಂದೆ ನಿಧಾನವಾಗಿ ಬಾಲವನದ ಬಗ್ಗೆ ಒಂದೆರಡು ಸಭೆಯನ್ನು ಮಾಡುತ್ತಾರೆ. ಇನ್ನೇನು ಅವರು ಬಾಲವನಕ್ಕೆ ಬಂದು ಹೋಗಬೇಕೆನ್ನುವ ಹೊತ್ತಿಗೆ ವರ್ಗಾವಣೆಗೊಂಡು ಇನ್ನೊಂದು ಕಡೆಗೆ ಸರಿಯುತ್ತಾರೆ. ಬಾಲವನ ಅಭಿವೃದ್ಧಿ ಫಂಡಿನಲ್ಲಿ ರೂ. 80-90 ಲಕ್ಷದಷ್ಟು ಮೊತ್ತ ಇವತ್ತಿಗೂ ಇದ್ದು ಕೊಳೆಯುತ್ತಿದೆ. ಪಿ.ಎಸ್. ರಾಮಾನುಜಂ, ಹರ್ಷ ಗುಪ್ತ, ಬಸವರಾಜು ಪ್ರಸನ್ನ, ಕೃಷ್ಣಮೂರ್ತಿ ಮುಂತಾದ ಶಿವರಾಮ ಕಾರಂತರನ್ನು ಓದಿದ್ದ, ತಿಳಿದಿದ್ದ ಅಭಿಮಾನಿ ಅಧಿಕಾರಿಗಳು ಪುತ್ತೂರಿಗೆ ಬಂದಿದ್ದಾಗ ಅವರ ಮೊದಲ ಆಯ್ಕೆಯೇ ಬಾಲವನದ ಅಭಿವೃದ್ಧಿಯಾಗಿತ್ತು. ಆಗಾಗ ಬಾಲವನಕ್ಕೆ ಜೀವಂತಿಕೆ ಬಂದದ್ದೇ ಇಂಥ ಅಧಿಕಾರಿಗಳಿಂದ. ಉಳಿದ ಅವಧಿ ಭಣಗುಟ್ಟಿದ್ದೇ ಹೆಚ್ಚು.

ಹರ್ಷ ಗುಪ್ತ ಜಿಲ್ಲಾಧಿಕಾರಿಯಾಗಿರುವಾಗ ಬಾಲವನದ ಅಭಿವೃದ್ಧಿಗೆ ಸ್ಥಳೀಯ ಟ್ರಸ್ಟ್ ಒಂದು ಇರಲೇ ಬೇಕೆನ್ನುವ ಸದುದ್ದೇಶದಿಂದ ಸ್ಥಳೀಯ ಮುಂದಾಳುಗಳ ಸಮಿತಿಯೊಂದನ್ನು ನೇಮಕ ಮಾಡಿದ್ದರು.ಆ ಸಮಿತಿಯಲ್ಲಿದ್ದವರೆಲ್ಲ ಕಾರಂತರನ್ನು ಬಲ್ಲವರೇ ಆಗಿದ್ದುದರಿಂದ ಹೆಚ್ಚು ಕ್ರಿಯಾಶೀಲವಾಗಿತ್ತು. ಈಗ ಆ ಸಮಿತಿಯು ಅಸ್ತಿತ್ವದಲ್ಲಿಲ್ಲ.

ಈಗ ಪುತ್ತೂರಿನ ಕ್ರಿಯಾಶೀಲ ಶಾಸಕರು ಮನಸ್ಸು ಮಾಡಿ ಕಾರಂತರ ಬಾಲವನಕ್ಕೆ ಮತ್ತೆ ವೈಭವ ಘನತೆ ತಂದುಕೊಡಲು ಸಾಧ್ಯವಿದೆ. ಸ್ಥಳೀಯ ಜಾನಪದ ಕಂಬಳವನ್ನು ಬೆಂಗಳೂರು, ಮೈಸೂರಲ್ಲಿ ಪ್ರದರ್ಶಿಸುವ ಉಮೇದು ಇಟ್ಟುಕೊಂಡಿರುವ ಶಾಸಕರು ಅಷ್ಟೇ ಮುತುವರ್ಜಿಯನ್ನು ಬಾಲವನ ಅಭಿವೃದ್ಧಿಗೆ ತೋರಿಸಿದ್ದರೆ ಅವರ ಪಾಲಿಗೆ ಅದು ಬಹುದೊಡ್ಡ ಸಾಂಸ್ಕೃತಿಕ ಅಸ್ಮಿತೆಯಾಗುತ್ತಿತ್ತು. ಬಾಲವನದ ಬೆನ್ನಿಗಿರುವ ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಇರುವಷ್ಟು ಆಸಕ್ತಿ ಶಾಸಕರಿಗೆ ಬಾಲವನದ ಮೇಲೆ ಇಲ್ಲದಿರುವುದು ನೋವಿನ ಸಂಗತಿ. ಪುತ್ತೂರಿನ ಸಾಹಿತ್ಯ, ಕಾರಂತಪ್ರಿಯರಿಗೆ ಬಾಲವನ ಭೂತದ ಮನೆಯಾಗುತ್ತಿದೆ ಎಂಬ ಹತಾಶೆ ನೋವು ಇದ್ದೇ ಇದೆ. ಬಾಲವನ ಪ್ರಶಸ್ತಿಯ ವಿಚಾರದಲ್ಲಿ ಪ್ರತಿವರ್ಷ ನಡೆಯುವ ಊರಿನ ಸಜ್ಜನ ಸಾಹಿತಿ, ಶಿಕ್ಷಕ, ನಾಗರಿಕರ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇನ್ನೊಂದು ಕಡೆ ಕಾರಂತರ ಹೆಸರಿನಲ್ಲಿ ಬಂದ ಲಕ್ಷಾಂತರ ರೂ. ಅನುದಾನ ಕಾರ್ಯಕ್ರಮಗಳಿಲ್ಲದೆ ಕೊಳೆಯುತ್ತಿದೆ. ಅಧಿಕಾರಿಗಳಿಗೆ ಕಾರಂತರು ಗೊತ್ತಿಲ್ಲ, ಗೊತ್ತಿರುವವರಿಗೆ ಅವಕಾಶಗಳಿಲ್ಲ. ಪ್ರತೀ ಬಾರಿ ಕುಪ್ಪಳಿಗೆ ಹೋಗಿ ಬಂದಾಗ ಛೇ ಎಲ್ಲವೂ ಇದ್ದೂ ಹಾಳಾಯಿತಲ್ಲ, ನಮ್ಮ ಕಾರಂತರಿಗೆ ಈ ಸ್ಥಿತಿ ಬಂತಲ್ಲ! ಎಂದು ಮರುಗುವ ಸ್ಥಿತಿ ನಮ್ಮದು.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X