Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಮಣ್ಣಿನ ಮೌನ ಮತ್ತು ಮಾತಾಡುವ ಹಳ್ಳಿ!

ಮಣ್ಣಿನ ಮೌನ ಮತ್ತು ಮಾತಾಡುವ ಹಳ್ಳಿ!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ11 Jan 2026 12:27 PM IST
share
ಮಣ್ಣಿನ ಮೌನ ಮತ್ತು ಮಾತಾಡುವ ಹಳ್ಳಿ!

ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ.

ಮೊನ್ನೆ ಮೊನ್ನೆಯವರೆಗೆ ಭಾರತದ ಹಳ್ಳಿಯನ್ನು ನೋಡಿದಾಗ ಅಲ್ಲೊಂದು ವಿಚಿತ್ರ ಮೌನ ಕಣ್ಣಿಗೆ ಬೀಳುತ್ತಿತ್ತು. ಅದು ಮಾತಿಲ್ಲದ ಮೌನ, ಘೋಷಣೆ ಇಲ್ಲದ ಮೌನ, ಬ್ಯಾನರ್, ಬಾವುಟ, ಮೈಕ್‌ಗಳಿಲ್ಲದ ಮೌನ. ಆ ಮೌನದೊಳಗೆ ಸಾವಿರಾರು ಜನ ಇದ್ದರು. ಅವರೆಲ್ಲ ಯಾವುದೇ ಸಂಘಟನೆಯ ಸಾರಥ್ಯಗಳಿಲ್ಲದೆ, ಯಾವ ರಗಳೆಯೂ ಇಲ್ಲದೆ, ಬೆಳಗ್ಗೆ ತೋಟಕ್ಕೆ ಹೋಗಿ ಸಂಜೆ ಮನೆಗೆ ಮರಳುವವರು ಅಥವಾ ತೋಟದೊಳಗಡೆಯೇ ಮನೆ ಕಟ್ಟಿ ಬದುಕುವವರು. ಭತ್ತ, ಜೋಳ, ರಾಗಿಯಂತಹ ನವಧಾನ್ಯಗಳಿರಬಹುದು, ಹೂವು, ಗೆಡ್ಡೆ, ತರಕಾರಿಗಳಿರಬಹುದು, ಅಡಿಕೆ, ಕಾಫಿ, ರಬ್ಬರ್, ಕಿತ್ತಳೆ, ಕೊಕ್ಕೋ ಏನೋ ಒಂದನ್ನು ನಂಬಿ ಬದುಕಲು ಒಪ್ಪಂದ ಮಾಡಿಕೊಂಡವರಿವರು.

‘‘ನಿನ್ನನ್ನು ನಾನು ಪೋಷಿಸುತ್ತೇನೆ, ನನ್ನನ್ನು ನೀನು ಬದುಕಿಸು’’ ಎಂಬ ಬೆಳೆಯೊಂದಿನ ನಿಶ್ಶಬ್ದ ಒಪ್ಪಂದದಲ್ಲಿ ಇವರೆಲ್ಲ ತಾವು ಬಿತ್ತಿದ ಬೀಜದೆದುರು ಧ್ಯಾನಕ್ಕೆ ಕೂತವರಂತೆ ಬದುಕುತ್ತಿರುವವರು. ಇಂಥವರ ಬದುಕು ಯಾವತ್ತೂ ಅಂಕಿ-ಅಂಶಗಳಲ್ಲಿ ಕಾಣಿಸುವುದಿಲ್ಲ. ಊರ ಸಂಘಗಳ ವರದಿಗಳಲ್ಲಿ ಅವರ ಹೆಸರು ಇಲ್ಲ. ವೇದಿಕೆಗಳ ಮೇಲೆ ಅವರ ಮಾತು ಇಲ್ಲ. ಆದರೆ ಇವರಿಗೆ ಆದಾಯದ ನಾಲ್ಕು ಮುಕ್ಕಾಲು ಭಾಗ ಕೃಷಿಯಿಂದಲೇ ಬರುತ್ತದೆ. ಅದನ್ನೇ ನಂಬಿ ಮನೆ ಕಟ್ಟಿದ್ದಾರೆ, ಮಕ್ಕಳನ್ನು ಓದಿಸಿದ್ದಾರೆ, ಬದುಕನ್ನು ಈವರೆಗೆ ಎಳೆದಿದ್ದಾರೆ. ಇಂಥ ರೈತರು ಇರುವ ಹಳ್ಳಿಗಳಲ್ಲಿ, ಒಂದು ಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳು ಅಷ್ಟಾಗಿ ಲೆಕ್ಕಕ್ಕೆ ಬರುತ್ತಿರಲಿಲ್ಲ. ಭಾಗಶಃ ಅವು ನಗರಗಳ ವಿಷಯವಾಗಿದ್ದವು. ಹಳ್ಳಿಗೆ ಬರುವ ಹೊತ್ತಿಗೆ ಅವು ದಣಿದು ಹೋಗುತ್ತಿದ್ದವು.

ಆದರೆ ಈಗ ಹಾಗಿಲ್ಲ. ಹಳ್ಳಿ-ನಗರದ ವ್ಯತ್ಯಾಸವೇ ಇಲ್ಲದಷ್ಟು ಸಂಘಟನೆಗಳು ವಿಸ್ತರಿಸಿಕೊಂಡಿವೆ. ಹಳ್ಳಿಗಳ ಮನೆಮನೆಗೂ ನುಗ್ಗಿವೆ. ಅಂಗಳ ದಾಟಿ ಒಳಗಡೆ ಬಂದಿವೆ. ಗಂಡ-ಹೆಂಡತಿ, ಮಕ್ಕಳು, ಅಕ್ಕ-ತಂಗಿ, ದೊಡ್ಡಪ್ಪ-ಚಿಕ್ಕಪ್ಪ-ಎಲ್ಲರ ಮಧ್ಯೆ ಮಾನಸಿಕ ಗೋಡೆ ಕಟ್ಟುವಲ್ಲಿ ಈ ಸಂಘಟನೆಗಳ ಪಾತ್ರ ದೊಡ್ಡದು. ಒಂದೇ ಮನೆಯೊಳಗೆ ಬೇರೆ ಬೇರೆ ಧ್ವಜಗಳು, ಬೇರೆ ಬೇರೆ ನಂಬಿಕೆಗಳು, ಬೇರೆ ಬೇರೆ ದ್ವೇಷಗಳು.

ಇಂಥ ಪರಿಸ್ಥಿತಿಯಲ್ಲಿ, ‘ನನಗೆ ಇದೆಲ್ಲ ಬೇಡವೇ ಬೇಡ’ ಎಂದು ಮೌನವಾಗಿ ಕುಳಿತವನು, ಎಲ್ಲವನ್ನು ಬಿಟ್ಟು ಮಣ್ಣಿಗೆ ಗಟ್ಟಿಯಾಗಿ ಅಂಟಿಕೊಂಡವನು ಅದೇ ಮೌನದ ಕಾರಣಕ್ಕೆ ಅನುಮಾನಕ್ಕೆ ಗುರಿಯಾಗುತ್ತಾನೆ. ಮಹಾನಗರದ ಒಳಗಡೆ ಅದ್ಯಾವುದೋ ದೇವಸ್ಥಾನದ ಬ್ರಹ್ಮಕಲಶಕ್ಕೆ, ಶಾಲೆಯ ವಾರ್ಷಿಕೋತ್ಸವಕ್ಕೆ, ಕಬಡ್ಡಿ ಟೂರ್ನಮೆಂಟ್‌ಗೆ ರಶೀದಿ ಹರಿಯದವ ಗೊತ್ತೇ ಆಗುವುದಿಲ್ಲ.ಆದರೆ ಗ್ರಾಮದ ನಡುವೆ ದೇಣಿಗೆ ಕೊಡದವ ಬೇಗನೆ ಮರ್ಯಾದೆಯ ವರ್ತುಲದೊಳಗಡೆ ಸೇರಿಕೊಳ್ಳುತ್ತಾನೆ. ಯಾವಾಗಲೂ ಹೀಗೆಯೇ. ಪಟ್ಟಣಕ್ಕಿಂತ ಗ್ರಾಮದ ಒಳಗಡೆಯ ಮರ್ಯಾದೆಗೆ ಒಂದು ಗುಲಗಂಜಿ ತೂಕ ಹೆಚ್ಚೇ.

‘‘ಅವನು ಮಾತಾಡುವುದಿಲ್ಲ, ಮನುಷ್ಯರೊಂದಿಗೆ ಹೆಚ್ಚು ಬೆರೆಯುವುದಿಲ್ಲ, ಗ್ರಾಮದ ಯಾವ ಸುಖ ದುಃಖವೂ ಅವನಿಗೆ ಬೇಕಾಗಿಲ್ಲ, ಮೊನ್ನೆವರೆಗೆ ಸರಿಯಿದ್ದ. ಅವನಿಗೀಗ ಏನಾಯಿತು?. ಗುಟ್ಟಾಗಿ ಏನೋ ಮಾಡುತ್ತಿದ್ದಾನೆ’’ ಎಂಬ ಅನುಮಾನಗಳು ಹಳ್ಳಿಗಳಲ್ಲೂ ಹುಟ್ಟುತ್ತವೆ. ಹಳ್ಳಿಯಲ್ಲೂ ಈಗ ಧ್ಯಾನ, ಮೌನ, ಏಕಾಂತ-ಇವುಗಳಿಗೂ ವಿವರಣೆ ಕೊಡಬೇಕಾದ ಕಾಲ ಬಂದಿದೆ!

ದೇವಾಲಯಕ್ಕೆ ನಿತ್ಯ ಹೋದಾಗ ಮಾತ್ರ ಆತ ಭಕ್ತ. ರಾಜಕೀಯ ಪಕ್ಷದ ಸಭೆಗಳಿಗೆ ಹಾಜರಾದಾಗ ಮಾತ್ರ ಆತ ಜಾಗೃತ ನಾಗರಿಕ. ಯುವಕ ಸಂಘಟನೆಗಳಿಗೆ ನಿರಂತರ ಓಡಾಡಿದಾಗ ಮಾತ್ರ ಆತ ಸಮಾಜಸೇವಕ. ಓದಿದ ಶಾಲೆಗೆ ಹತ್ತು ಸಲ ಹೋದಾಗ ಮಾತ್ರ ಆತ ಶಿಕ್ಷಣ ಪ್ರೇಮಿ ಇಲ್ಲವಾದರೆ ಅವನು ಅನುಮಾನಾಸ್ಪದ. ಇಂತಹ ಸಂದೇಹಗಳು ಊರ ನಡುವಿನ ನಾನೂ ಸೇರಿ ನನ್ನಂಥ ಮೌನಿಯ ಬೆನ್ನ ಹಿಂದೆಯೇ ಈಗ ಓಡಾಡುತ್ತವೆ.

ನನ್ನ ಊರಲ್ಲೇ ಯಾಕೆ? ಇಂಥ ರೈತರು ನಿಮ್ಮ ಊರಲ್ಲೂ ಇರಬಹುದು. ಸಂಘಟನೆ, ಸಭೆ, ಘೋಷಣೆಗಳ ಮಧ್ಯೆ ಹೊಲ ತೋಟಗಳಿಗೆ ಅವರು ಯಾವಾಗ ಹೋಗುತ್ತಾರೆ, ಯಾರಿಂದ ಮಾಡಿಸುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ. ಬೆಳಗೆದ್ದು ಬಿಳಿ ಬಟ್ಟೆ ತೊಟ್ಟು ನಗರದ ಮನಸ್ಸು ಧರಿಸಿ ಹೊರಗಡೆ ಉಳಿಯುವ ಇವರಿಗೆ ಎಲ್ಲವೂ ಕೊಡುವುದು ಅವರ ಕೃಷಿಯೇ ಎಂಬುದನ್ನು ಅವರು ಮರೆತಂತಿದೆ. ಉಣ್ಣುವ ಅನ್ನ ಕೊಡುವ, ತನ್ನ ಮಕ್ಕಳಿಗೆ ಶಿಕ್ಷಣ ಕೊಡುವ, ತನಗೆ ಓಡಾಡಲು ವಾಹನ ಕೊಟ್ಟ, ತನಗೊಂದು ಘನತೆಯ ಬದುಕು ಕೊಡುವ ಕೃಷಿ ಬೆಳೆಯ ಜೊತೆಗೇ ತಾನು ಸದಾ ಇರಬೇಕು, ಅಸಾಧ್ಯವಾದರೆ ಕೃಷಿ ಹಿಂದುಳಿಯುತ್ತದೆ, ಆದಾಯ ಕುಂಠಿತವಾಗುತ್ತದೆ ಎಂದು ಇವರ್ಯಾರು ಕೆಸರು ಮೆಟ್ಟಿದ್ದನ್ನು ನಾನು ನೋಡೇ ಇಲ್ಲ. ಬಹಳಷ್ಟು ಸಂದರ್ಭದಲ್ಲಿ ಮದುವೆ ಮುಂಜಿ ಬೊಜ್ಜದ ಕೂಟದಲ್ಲಿ ಈಗ ಕೃಷಿ ಪ್ರಯೋಜನ ಇಲ್ಲ, ಇದರಿಂದ ಬದುಕು ಆಗಲ್ಲ ಎಂದು ಅಡ್ಡ ಮಾತು ಮಾತನಾಡುವವರು ಕೂಡ ಇವರೇ.

ಗ್ರಾಮದೊಳಗಡೆಯೇ ಬದುಕುತ್ತಿರುವ ನಾನು ಕೆಲವೊಂದು ಊರುಗಳು ಹೇಗೆ ಕೋಮುವಾದಿ, ಜಾತಿವಾದಿ, ಮತೀಯ ಸಂಘರ್ಷಗಳಿಗೆ ಬಲಿಯಾಗುತ್ತಿವೆ ಅನ್ನುವುದನ್ನು ಗಮನಿಸುತ್ತಾ ಬಂದಿದ್ದೇನೆ. ಬೆಳೆ-ಬೆಲೆಯ ಬಗ್ಗೆ ಮಾತಾಡಬೇಕಾದ ಜಾಗದಲ್ಲಿ ಧರ್ಮದ ಚರ್ಚೆ, ಕೃಷಿಯ ಮೌಲ್ಯವರ್ಧನೆಯ ಮಾತು ಬರಬೇಕಾದ ಜಾಗದಲ್ಲಿ ರಾಜಕೀಯದ ವಿಷ, ಬೀಜ ನೀರಾವರಿ ಗೊಬ್ಬರದ ಮಾತಿನ ಬದಲು ದ್ವೇಷದ ಘೋಷಣೆ. ಕೃಷಿಯನ್ನು ನಿರ್ಲಕ್ಷಿಸಿದ ಪರಿಣಾಮಕ್ಕೆ ಬಡತನ ಬಂದು; ಬಡತನ ಬಂದ ಮೇಲೆ ಕೃಷಿಯೇ ತಪ್ಪು ಎಂದು ತೀರ್ಮಾನ ಎಷ್ಟೊಂದು ಹಾಸ್ಯಾಸ್ಪದ!.

ಹಳ್ಳಿಯ ಸುಸ್ಥಿರ ಬದುಕು ಅನ್ನೋದು ಕೇವಲ ಬೆಳೆ-ಮಳೆ-ಬೆಲೆಗಳ ಗಣಿತವಲ್ಲ. ಅದು ಒಂದು ಮನಸ್ಥಿತಿ. ಒಂದು ನಂಬಿಕೆಯ ಕ್ರಮ. ನಾನು ಇಲ್ಲೇ ಇದ್ದೇನೆ, ಈ ಮಣ್ಣಿನ ಜೊತೆಗೆ ಅನ್ನುವ ದೀರ್ಘ ಶ್ವಾಸ. ಇವತ್ತು ಆ ಶ್ವಾಸವೇ ತುಂಡಾಗುತ್ತಿದೆ. ಅದರ ಹಿಂದೆ ಕಾಣಿಸದ ಅನೇಕ ಕಾರಣಗಳು ಇವೆ. ನಾವು ಮಾತನಾಡುತ್ತಿರುವ ಈ ನಂಬಿಕೆಗಳು, ಈ ಸಂಘಟನೆಗಳ ವಿಸ್ತರಣೆ, ಈ ಮನಸ್ಸಿನ ವಿಘಟನೆ ಎಲ್ಲವೂ ಒಂದಾಗಿ ಹಳ್ಳಿಯ ಬದುಕಿನ ಬೇರುಗಳನ್ನು ಮೌನವಾಗಿ ಕತ್ತರಿಸುತ್ತಿವೆ.

ಒಂದು ಕಾಲದಲ್ಲಿ ಹಳ್ಳಿಯ ರೈತನಿಗೆ ಕೃಷಿ ಕೇವಲ ಉದ್ಯೋಗವಾಗಿರಲಿಲ್ಲ. ಅದು ಅವನ ಗುರುತು. ಬೆಳೆಯುವ ಪ್ರತೀ ಬೆಳೆಯ ಮೇಲೆ ಅವನಿಗೆ ವಿಶ್ವಾಸ ಇತ್ತು. ಮಣ್ಣಿನ ಮೇಲೆ ಒಂದು ಅಂತರಂಗದ ಸಂಬಂಧ ಇತ್ತು. ಆದರೆ ಇವತ್ತು ಆ ನಂಬಿಕೆಯನ್ನು ಬದಲಿಸುವ ಹೊಸ ಹೊಸ ನಂಬಿಕೆಗಳು ಬಂದಿವೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ರಾಜಕೀಯದ ಹೆಸರಿನಲ್ಲಿ. ‘‘ಇವುಗಳ ಜೊತೆಗೆ ಸಂಬಂಧ ಇಲ್ಲದಿದ್ದರೆ ನೀನು ಏನೂ ಅಲ್ಲ’’ ಅನ್ನುವ ಭಾವನೆಗಳನ್ನು ಅವನೊಳಗೆ ತುಂಬಲಾಗಿದೆ. ಕೃಷಿ ಅವನ ಬದುಕನ್ನು ಪೋಷಿಸುತ್ತಿದ್ದರೂ, ಗೌರವ ಕೊಡದ ಕೆಲಸದಂತೆ ಕಾಣಿಸುವಂತೆ ಮಾಡಲಾಗಿದೆ.

ಇದರಿಂದ ಮೊದಲ ಬಿರುಕು ಬರುವುದು ಅವನ ಸಮಯದಲ್ಲಿ. ಈ ದೇಶದ ರೈತನ ಪಾಲಿಗೆ ದಿನದ 24 ಗಂಟೆಯೂ ಅವನ ಕೈಯಲ್ಲೇ ಇತ್ತು. ಬದುಕಿನ ಆಯ್ಕೆ, ಕೃಷಿಯ ವಿನ್ಯಾಸ ಎಲ್ಲದಕ್ಕೂ ಕಾಲವಿತ್ತು. ರೈತ ತೋಟ, ಹೊಲದಲ್ಲಿ ಇರಬೇಕಾದ ಸಮಯದಲ್ಲೀಗ ಸಭೆಯಲ್ಲಿ, ಜಾತ್ರೆಯಲ್ಲಿ, ರಾಜಕೀಯ, ಮತೀಯ ಸಂಘಟನೆಯ ಕರೆಯ ಮೇಲೆ ಓಡಾಡುತ್ತಾನೆ. ಸಾಲ ಸಬ್ಸಿಡಿ ಬೆಳೆ ವಿಮೆ... ಪರಿಣಾಮ ಅವನ ಕೃಷಿಯ ಶಿಸ್ತು ಕುಂಠಿತವಾಗುತ್ತದೆ. ಜೊತೆಗೆ ನೂರಾರು ನಮೂನೆಯ ಪ್ರಾಕೃತಿಕ ಸಮಸ್ಯೆಗಳು. ನಿಧಾನವಾಗಿ ಬೆಳೆ ಕಡಿಮೆಯಾಗುತ್ತದೆ. ಆದಾಯ ಇಳಿಯುತ್ತದೆ. ಆಗ ಮತ್ತೆ ಅದೇ ಸಂಘಟನೆಗಳು ಬಂದು ಹೇಳುತ್ತವೆ ‘‘ಕೃಷಿಯಿಂದ ಪ್ರಯೋಜನ ಇಲ್ಲ, ಬೇರೆ ದಾರಿ ಹಿಡಿ.’’ ಎಂದು!

ಇದು ಒಂದು ವೃತ್ತ. ಅದರಿಂದ ಹೊರಬರಲು ಸುಲಭವಿಲ್ಲ. ಈ ಮನಸ್ಸಿನ ಸ್ಥಿತಿಯೇ ನೇರವಾಗಿ ಆರ್ಥಿಕ ಅಸಮತೋಲನಕ್ಕೂ ಕಾರಣವಾಗುತ್ತದೆ. ಕೃಷಿಯ ಆದಾಯ ಕಡಿಮೆಯಾದಾಗ ರೈತ ಸಾಲಕ್ಕೆ ಮೊರೆ ಹೋಗುತ್ತಾನೆ. ಬ್ಯಾಂಕ್ ಸಾಲ, ಸಹಕಾರಿ ಸಾಲ, ಖಾಸಗಿ ಸಾಲ-ಎಲ್ಲವೂ. ಸಾಲ ತೀರಿಸಲು ಮತ್ತೆ ಕೃಷಿಯ ಮೇಲೆ ಹೆಚ್ಚು ಒತ್ತಡ. ಆದರೆ ಮನಸ್ಸು ಈಗ ಕೃಷಿಯಲ್ಲಿಲ್ಲ. ಅದು ಬೇರೆ ಬೇರೆ ಗುರುತುಗಳ ನಡುವೆ ಹರಿದಿದೆ. ಅದೇ ಗುರುತುಗಳ ದಾರಿಯಲ್ಲಿ ಆತ ಕೃಷಿಯೇತರ ಕಾರಣಗಳಿಗೂ ಕೃಷಿ ಭೂಮಿಯನ್ನೇ ತೋರಿಸಿ ಸಾಲ ಮಾಡುವುದು ಇದೆ. ಹೀಗಾಗಿ ಸಾಲ ಹೆಚ್ಚುತ್ತದೆ. ಋಣ ಯಾವತ್ತೂ ಒಂದು ಸಂಖ್ಯೆಯಲ್ಲ; ಅದು ಒಂದು ಭಯ. ಆ ಭಯ ರೈತನ ನಿರ್ಧಾರಗಳನ್ನು ನಿಯಂತ್ರಿಸುತ್ತದೆ.

ಇಲ್ಲೇ ಮತ್ತೊಂದು ಅಪಾಯಕಾರಿ ಅಂಶ ಇದೆ. ಈ ಸಂಘಟನೆಗಳು ಹಳ್ಳಿಯಲ್ಲಿ ಪರಸ್ಪರ ನಂಬಿಕೆಯನ್ನು ಒಡೆಯುತ್ತವೆ. ಒಂದೇ ಊರಿನ ರೈತರೆಲ್ಲ ಒಂದೇ ನೀರು ಕುಡಿದವರು. ಬೇರೆ ಬೇರೆ ಧರ್ಮದವರಾದರೂ ಒಂದೇ ಹೊಲದ ಗಡಿ ಹಂಚಿಕೊಂಡವರು. ಬೇರೆ ಬೇರೆಯವರಾದರೂ ಸರಕಾರಿ ದಾಖಲೆಗೆ ಅವೆಲ್ಲವನ್ನು ಮರೆತು ಒಟ್ಟಾಗಿ ಸಹಿ ಹಾಕಿದವರು. ಆದರೆ ಇಂದು ಅದೇ ಊರು ಸಹಕಾರ, ಸಾಲದ ನೆರವು, ಕೆಲಸದ ವಿನಿಮಯಗಳಲ್ಲಿ ಶಂಕೆಯಿಂದ ನೋಡಲ್ಪಡುತ್ತವೆ. ಹಳ್ಳಿಯ ಆರ್ಥಿಕ ವ್ಯವಸ್ಥೆ ಸಹಕಾರದ ಮೇಲೆ ನಿಂತಿದ್ದದ್ದು; ಈಗ ಅದು ಅನುಮಾನಗಳ ಮೇಲೆ ನಿಂತಿದೆ.

ಈ ವಿಘಟನೆ ಹಳ್ಳಿಯನ್ನು ಸುಸ್ಥಿರತೆಯಿಂದ ದೂರ ಒಯ್ಯುತ್ತಿದೆ. ಸುಸ್ಥಿರತೆ ಅನ್ನೋದು ಕೇವಲ ಪರಿಸರದ ಮಾತಲ್ಲ; ಅದು ಸಾಮಾಜಿಕ ಸ್ಥಿರತೆ, ಆರ್ಥಿಕ ಸಮತೋಲನ, ಮಾನಸಿಕ ನೆಮ್ಮದಿ ಎಲ್ಲವೂ ಆಗಿದೆ. ರೈತ ತನ್ನ ಕೆಲಸದ ಮೇಲೆ ನಂಬಿಕೆ ಕಳೆದುಕೊಂಡಾಗ, ಸಹಜವಾಗಿಯೇ ಅವನ ಮಕ್ಕಳು ಹಳ್ಳಿಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಹಳ್ಳಿ ಖಾಲಿಯಾಗುತ್ತದೆ. ಉಳಿದವರು ಇನ್ನಷ್ಟು ಒಂಟಿಯಾಗುತ್ತಾರೆ.

ನನಗೆ ಅನಿಸುವುದು ಏನೆಂದರೆ, ಇವತ್ತಿನ ಹಳ್ಳಿಯ ಅತಿ ದೊಡ್ಡ ಸಂಕಷ್ಟ ಮೈಕ್ರೋಫೋನ್‌ಗಳಲ್ಲಿಲ್ಲ, ಮೈಕ್ರೋ ಫೈನಾನ್ಸ್‌ಗಳಲ್ಲೂ ಇಲ್ಲ, ಘೋಷಣೆಗಳಲ್ಲಿಲ್ಲ. ಅದು ಮನಸ್ಸಿನೊಳಗೆ ಇದೆ. ಮೌನವನ್ನು ಅನುಮಾನಿಸುವ ಪ್ರವೃತ್ತಿಯಲ್ಲಿದೆ. ಕೃಷಿಯನ್ನು ಕೇವಲ ಲಾಭ-ನಷ್ಟದ ಪಟ್ಟಿಯಾಗಿ ನೋಡುವ ದೃಷ್ಟಿಯಲ್ಲಿದೆ. ಹಳ್ಳಿಯ ಸುಸ್ಥಿರ ಬದುಕನ್ನು ಮರಳಿ ಕಟ್ಟಬೇಕಾದರೆ, ಮೊದಲಿಗೆ ಆ ಮೌನಕ್ಕೆ ಮರಳಿ ಗೌರವ ಕೊಡಬೇಕು. ಮಣ್ಣಿನ ಜೊತೆಗಿನ ಆ ಹಳೆಯ ನಂಬಿಕೆಯನ್ನು ಮತ್ತೆ ಜೀವಂತ ಮಾಡಬೇಕು. ಇಲ್ಲದಿದ್ದರೆ, ಸಂಘಟನೆಗಳ ಗದ್ದಲದ ನಡುವೆ ಹಳ್ಳಿ ನಿಧಾನವಾಗಿ ಕರಗುತ್ತಲೇ ಹೋಗುತ್ತದೆ.

ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ.

ಇಲ್ಲಿ ಸಮಸ್ಯೆ ಯಶಸ್ಸಿನಲ್ಲಿಲ್ಲ. ಸಮಸ್ಯೆ ಗುರುತಿನ ಬದಲಾವಣೆಯಲ್ಲಿ. ಕೃಷಿ ಅವನಿಗೆ ಮೂಲ; ಆದರೆ ಆ ಮೂಲವನ್ನೇ ಹೊತ್ತುಕೊಳ್ಳಲು ಅವನು ಹಿಂಜರಿಯುತ್ತಾನೆ. ಶಿಕ್ಷಣ ತಜ್ಞನಾದವನು ತನ್ನ ಕೃಷಿ ಬೇರುಗಳನ್ನು ಮರೆತು ಮಾತಾಡುತ್ತಾನೆ; ಧಾರ್ಮಿಕ ನಾಯಕನಾದವನು ದೇವಾಲಯದ ನೆರಳಲ್ಲಿ ನಿಂತು ಹೊಲವನ್ನು ದೂರ ಇಡುತ್ತಾನೆ; ಉದ್ಯಮಿಪತಿಯಾದವನು ಲಾಭ-ನಷ್ಟದ ಲೆಕ್ಕದಲ್ಲಿ ಮಣ್ಣಿನ ಲೆಕ್ಕವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ಕೃಷಿಯಿಂದ ಹುಟ್ಟಿದ ಗುರುತು ಹೊಸ ಪದವಿಗಳ ಹಿಂದೆ ಕರಗಿಹೋಗುತ್ತದೆ.

ಈ ಗುರುತಿಸುವಿಕೆಯ ಪಲ್ಲಟ ಹಳ್ಳಿಗಳಲ್ಲಿ ಜಾಸ್ತಿ. ನಗರಗಳಲ್ಲಿ ಪದವಿ ಬದಲಾವಣೆ ಸಹಜವಾದರೆ, ಹಳ್ಳಿಯಲ್ಲಿ ಅದು ಗೌರವದ ಮಾನದಂಡವಾಗಿಬಿಡುತ್ತದೆ. ರೈತನಾಗಿರುವುದು ‘ಹಿಂದಿನ ಹಂತ’ ಎನ್ನುವ ಅಜ್ಞಾತ ಭಾವನೆ, ಬೆಳೆಸಿದ ಹೊಲಕ್ಕಿಂತ ಬೆಳೆದ ಮಾತಿಗೆ ಹೆಚ್ಚು ಬೆಲೆ ಕೊಡುವ ವಾತಾವರಣ-ಇವೆಲ್ಲ ಸೇರಿ ರೈತನನ್ನು ಮಾತುಗಾರನಾಗಿಸುತ್ತವೆ. ಮೊದಲು ಮಣ್ಣಿನ ಜೊತೆ ಮಾತನಾಡುತ್ತಿದ್ದವನು, ಈಗ ವೇದಿಕೆಯ ಮೇಲೆ ನಿಂತು ರಣ ಭೀಕರ ಭಾಷಣ ಮಾಡುತ್ತಾನೆ. ಮಾತು ಮಾತಾಗಿ, ವಾಕ್ಚಾತುರ್ಯ ವಾಚಾಳಿತನವಾಗುತ್ತಾ ಬೆಳೆಯುತ್ತದೆ.

ಇದು ಕೇವಲ ವ್ಯಕ್ತಿಯ ಕಥೆಯಲ್ಲ. ಇದು ಹಳ್ಳಿಯ ಮನಸ್ಥಿತಿಯ ಚಿತ್ರ. ಕೃಷಿ ಎಲ್ಲದರ ಮೂಲವಾದರೂ, ಅದನ್ನು ಗುರುತಾಗಿ ಧರಿಸುವ ಧೈರ್ಯ ಕಡಿಮೆಯಾಗುತ್ತಿದೆ. ಹೊಲದಿಂದ ಹುಟ್ಟಿದ ಶಕ್ತಿ ಬೇರೆ ಬೇರೆ ರೂಪಗಳಲ್ಲಿ ಹರಿಯುತ್ತದೆ; ಆದರೆ ಆ ಶಕ್ತಿಯ ಮೂಲವನ್ನು ಒಪ್ಪಿಕೊಳ್ಳಲು ಹಳ್ಳಿಯೇ ಹಿಂಜರಿಯುತ್ತದೆ. ಗುರುತಿನ ಈ ಪಲ್ಲಟವನ್ನು ಅರಿಯದೇ ಹೋದರೆ, ಮಾತು ಹೆಚ್ಚುತ್ತದೆ-ಮಣ್ಣು ಕಡಿಮೆಯಾಗುತ್ತದೆ ಮತ್ತು ಹಳ್ಳಿಯ ನಿಜವಾದ ಮೌಲ್ಯ, ಅದೇ ಮಣ್ಣಿನೊಳಗೆ ಮೌನವಾಗಿ ಮಲಗಿಹೋಗುತ್ತದೆ.

Tags

silencesoiltalking village
share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X