ಚೋಮನ ದುಡಿ-ನ್ಯಾಯದ ನಿಶ್ಯಬ್ದ ಧ್ವನಿ!

427 ಪುಸ್ತಕ, 80 ಸಾವಿರಕ್ಕಿಂತ ಹೆಚ್ಚು ಪುಟಗಳ ಸಾಹಿತ್ಯ ಬರೆದ ಕಾರಂತರ ಕೈಯಿಂದ ಕೇವಲ 104 ಪುಟಗಳ ಚೋಮನ ದುಡಿ ಜನ್ಮತಾಳಿತು. ಆದರೆ ಆ ಚಿಕ್ಕ ಕೃತಿಯಲ್ಲೇ ಒಂದು ಜಾತಿಯ ದುಃಖ, ಒಂದು ಜನಾಂಗದ ಹೋರಾಟ, ಒಂದು ಕಾಲದ ಬದಲಾವಣೆಯ ಧ್ವನಿ ತುಂಬಿಕೊಂಡಿತ್ತು. ಅದೇ ಕಾರಂತರಿಗೆ ಶಾಶ್ವತ ಮಾನ್ಯತೆ ತಂದುಕೊಟ್ಟಿತು. ಆದರೂ ಒಂದು ಪ್ರಶ್ನೆ ಇಂದಿಗೂ ಜೀವಂತ - ಚೋಮನ ಧ್ವನಿ ನಮ್ಮ ರಾಷ್ಟ್ರದ ಪ್ರಭುತ್ವದ ಕಿವಿಯೂ ಸೇರಿ ಲೋಕ ವ್ಯಾಪ್ತಿಗೆ ಮುಟ್ಟಿದೆಯೇ ಎಂಬುವುದು. ಸಂವಿಧಾನ-ಪ್ರಭುತ್ವ ಕೊಟ್ಟ ಅವಕಾಶವನ್ನು ಚೋಮನ ತಲೆಮಾರು ಎಷ್ಟು ಬಳಸಿಕೊಂಡಿದೆ ಎಂಬುವುದು ಇನ್ನೊಂದು.
ಡಾ. ಕೆ. ಶಿವರಾಮ ಕಾರಂತರ ‘ಚೋಮನ ದುಡಿ ’ಪ್ರಕಟವಾಗಿ ಈಗ ತೊಂಭತ್ತೆರಡು ವರ್ಷ. ಈ ಒಂದು ಶತಮಾನಕ್ಕೂ ಸಮೀಪವಾದ ಕಾಲದೊಳಗೆ ಭಾರತ ಸಾಕಷ್ಟು ಬದಲಾಗಿದೆ, ಸಂವಿಧಾನ ತಿದ್ದುಪಡಿಯಾಗಿದೆ, ಕಾನೂನುಗಳು ಬದಲಾಗಿವೆ, ಹಳ್ಳಿಹಳ್ಳಿಗಳಿಗೆ ರಸ್ತೆಯಾಗಿದೆ, ಕರೆಂಟು ಬಂದಿದೆ, ಮೊಬೈಲ್ ರೇಂಜ್ ಸಿಗುತ್ತದೆ, ಕುಡಿಯುವ ನೀರು ಹರಿದಿದೆ, ಹಳ್ಳಿಗಳಲ್ಲೂ ಆಂಗ್ಲ ಮಾಧ್ಯಮ ಶಾಲೆಗಳು ತೆರೆದಿವೆ, ಇಷ್ಟಾದರೂ ಕಾರಂತರ ಚೋಮ ಬದಲಾಗಿದ್ದಾರೆಯೇ?
ಚೋಮನ ಕಥೆ ಇನ್ನೂ ನೇರವಾಗಿ ಈ ಮಣ್ಣಿನೊಳಗೇ ಉಸಿರಾಡುತ್ತಿದೆ. ಆ ಕತೆ ನಡೆಯುವ ಭೋಗನಹಳ್ಳಿ ಬೇರೆಯಲ್ಲ, ನನ್ನೂರು ದೇರ್ಲ ಬೇರೆಯಲ್ಲ. ಇಂಥ ಊರಲ್ಲಿ 92 ವರ್ಷ ಪ್ರಾಯದ ವಯೋವೃದ್ಧ ಚೋಮ ಒಬ್ಬರಾದ್ರೂ ಇದ್ದಾರೋ ಎಂದು ನಾನು ಈಗಲೂ ಆಗಾಗ ಹುಡುಕುವುದಿದೆ. ಇಲ್ಲ, ಅವರ ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ, ಮರಿ ಮಕ್ಕಳಿದ್ದಾರೆ, ಭಾಗಶಃ ಅವರೆಲ್ಲ ಈಗ ಭೂಮಿಯ ಮೇಲೆ ಗದ್ದೆ ಹೊಲ ತೋಟಗಳಲ್ಲಿ ದುಡಿಯುವುದಕ್ಕಿಂತ ಹೆಚ್ಚು ನಗರ ಕೇಂದ್ರಿತ ದುಡಿಮೆಗಳಿಗೆ ಹಾಜರಾಗುತ್ತಾರೆ. ಅಡಿಕೆ ಗಾರ್ಬಲ್‌ಗಳಲ್ಲಿ, ಕಾರ್ಖಾನೆಗಳಲ್ಲಿ, ಕಟ್ಟಡಗಳ ಸೆಂಟ್ರಿಂಗ್ ಕೆಲಸದಲ್ಲಿ, ಕಲ್ಲು ಕೋರೆಗಳಲ್ಲಿ, ಮರಳು ಎತ್ತುವಲ್ಲಿ ಕೂಲಿಗಳಾಗಿ, ಮೇಸ್ತ್ರಿಗಳಾಗಿ, ಪೇಂಟರ್‌ಗಳಾಗಿದ್ದಾರೆ. ಬಹುಪಾಲು ಅವರು ಇವತ್ತಿಗೂ ದಿನಗೂಲಿಗಳು!
ದಿನಕ್ಕೆ ಎರಡು ಬಾರಿ ನನ್ನೂರಿಗೆ ಬಂದು ಹೋಗುವ ಕೆಂಪು ಬಸ್ಸು ಹತ್ತಿ ಬೆಳಗ್ಗೆ ಅವರೆಲ್ಲ ನಗರ ಸೇರಿ ಸಂಜೆ ವಾಪಸ್ ಆಗುತ್ತಾರೆ. ಹಾಗಂತ ಅವರಲ್ಲಿ ಪದವೀಧರರಿದ್ದರೂ ಭಾಗಶಃ ಯಾರೂ ಕೂಡ ಕಾರಂತರ ‘ಚೋಮನ ದುಡಿ’ಯನ್ನು ಓದಿದವರಲ್ಲ.! ಕಾರಂತರ ಚೋಮನ ದುಡಿ ಕೇವಲ ಒಬ್ಬ ಉಳುವವನ ಕಥೆಯಲ್ಲ. ಅವನು ಅನ್ಯಾಯದ ಮಣ್ಣಿನಲ್ಲಿ ಹುಟ್ಟಿ, ಆ ಮಣ್ಣನ್ನೇ ಆರಾಧನೆ ಮಾಡಿದವನು. ಅವನಿಗೆ ಪಂಜುರ್ಲಿ ಇದ್ದರೂ ಅದು ದಿನಾ ಪೂಜಿಸುವ ದೇವರಲ್ಲ, ಮಣ್ಣಿನ ಗೋಡೆಗೆ ಒರಗಿ ಬಡಿಯುವ ದುಡಿ ಧ್ವನಿಯೇ ದೇವರು.
ಕಾರಂತರ ಕಾಲದ ಭಾರತದಲ್ಲಿ ಅವರ ಕಥಾನಾಯಕ ಚೋಮ ಭೂಮಾಲಕರ ಹೊಲದಲ್ಲಿ ಹುಟ್ಟುತ್ತಾನೆ, ಅಲ್ಲೇ ದುಡಿಯುತ್ತಾನೆ, ಅಲ್ಲೇ ಸಾಯುತ್ತಾನೆ. ಅವನ ಜೀವ -ಜೀವನ ಮಣ್ಣಿಗೇ ಸೇರಿದರೂ ಭೂಮಿಯ ಮೇಲೆ ಎಲ್ಲೂ ಅವನ ಹೆಸರಿಲ್ಲ. ಇಂಥ ಹಂಚಿಕೆಯ ಅಸಮಾನತೆಯ ತಿರುಳೇ ಕಾರಂತರ ಕಾದಂಬರಿಯ ವಸ್ತು. ಭೂಮಿ ಮೇಲೆ ಸ್ವಂತ ಅಂಗೈಯಗಲ ಜಾಗವಿಲ್ಲದ ಚೋಮ ತನ್ನದೇ ಕರು ಎತ್ತುಗಳಿಗೆ ನೇಗಿಲು ಹೂಡಿ ದನಿಗಳ ಗದ್ದೆಯ ಮೇಲೆ ಉಳುಮೆ ಮಾಡುತ್ತಾ ಆ ದುಡಿತದಿಂದ ತನಗೆ ಗೌರವ ಬರುವುದು ಹೇಗೆ ಎಂಬ ಯೋಚನೆಯಲ್ಲೇ ಹೊಲಕ್ಕೆ ಸುತ್ತು ಸುತ್ತು ಸುಳಿ ಸುಳಿದು ಆ ಚಕ್ರ ಸುಳಿಯಲ್ಲಿ ಮಗ್ನನಾಗುತ್ತಾನೆ.
1970ರ ದಶಕದಲ್ಲಿ ಕರ್ನಾಟಕದಲ್ಲಿ ಜಾರಿಗೆ ಬಂದ ಭೂಸುಧಾರಣಾ ಕಾಯ್ದೆ ನೆಲದವರ ಪಾಲಿಗೆ ಹೊಸ ಆಶೆಯ ಬೆಳಕಾಗಿ ಹೊಳೆಯಿತು. ಅದು ಗಟ್ಟಿಯಾಗಿಯೇ ಹೇಳಿತು. ‘‘ಯಾರು ಭೂಮಿಯಲ್ಲಿ ದುಡಿಯುತ್ತಾರೋ, ಅವರಿಗೂ ಆ ಭೂಮಿಯಲ್ಲಿ ಹಕ್ಕು ಇದೆ’’ ಎಂದು. ಹೀಗಾಗಿ ಸಾವಿರಾರು ಚೋಮಂದಿರ ಕೈಗೆ ಮೊದಲ ಬಾರಿಗೆ ಭೂಮಿಯ ಚುಕ್ಕಾಣಿ ಬಂತು. ಅವರಿನ್ನು ಮಾಲಕರ ಹೊಲದಲ್ಲಿ ಉಳುವವರಲ್ಲ, ತಮ್ಮದೇ ಹೊಲದ ಮಾಲಕರಾದರು. ಅದು ಸಾಮಾಜಿಕ ನ್ಯಾಯದ ಹಾದಿಯ ಮೊದಲ ಹೆಜ್ಜೆ. ಆದರೆ ಹಕ್ಕು ದೊರೆತ ದಿನದಿಂದಲೇ ಹೋರಾಟ ಮುಗಿಯಿತು ಎಂದಲ್ಲ. ನಿಜವಾದ ಹೋರಾಟ ಅಂದರೆ ಭೂಮಿಯ ಪಹಣಿ ಪತ್ರ ಪಡೆಯುವುದಲ್ಲ, ತಾನು ದುಡಿದ ಮಣ್ಣಿನೊಳಗೆ ತನ್ನದೇ ಬದುಕನ್ನು ಬಿತ್ತುವುದು. ಕಾಗದದಲ್ಲಿ ಭೂಮಿ ಅವರದ್ದಾದರೂ ಬದುಕಿನಲ್ಲಿ ಅವರಿಗೆ ಮಾಲಕತ್ವದ ಸಹಜ ಗಟ್ಟಿ ಗುಣಗಳು ಪ್ರಾಪ್ತವಾಗಲಿಲ್ಲ. ಅವರಿಗೆ ಹಕ್ಕು ಸಿಕ್ಕಿದೆ, ಆದರೆ ಇನ್ನು ನೈತಿಕ ಬಲ ಬರಲಿಲ್ಲ.
ಭೂಸುಧಾರಣಾ ಕಾಯ್ದೆ ಹಂಚಿಕೆಯ ನ್ಯಾಯವನ್ನು ಕೊಟ್ಟಿತು, ಆದರೆ ಸರಿಪಡಿಸುವಿಕೆಯ ನ್ಯಾಯ ಕೊಡಲಿಲ್ಲ. ಹಂಚಿಕೆಯ ನ್ಯಾಯ ಅಂದರೆ ಎಲ್ಲರಿಗೂ ಸಮಾನ ಹಕ್ಕು ನೀಡುವುದು. ಸರಿಪಡಿಸುವಿಕೆಯ ನ್ಯಾಯ ಅಂದರೆ ಶತಮಾನಗಳ ಅಸಮಾನತೆಯಿಂದ ಉಂಟಾದ ಗಾಯಕ್ಕೆ ಮದ್ದಿಡುವುದು. ಕಾರಂತರ ಚೋಮನಿಗೆ ಅವನು ಕಳೆದುಕೊಂಡ ಗೌರವ ಮರಳಿ ಬರಬೇಕಿತ್ತು. ಆದರೆ ನಾವು ಕೇವಲ ಅವನ ಕೈಗೆ ಭೂಮಿಯ ಕಾಗದ ಮಾತ್ರ ಕೊಟ್ಟೆವು.
ನ್ಯಾಯ ಅಂದರೆ ಕೇವಲ ಕಾನೂನಿನ ಹಕ್ಕಲ್ಲ, ಅದು ಮನಸ್ಸಿನ ಬದಲಾವಣೆ. ಸಮಾಜದ ಮನಸ್ಸಿನಲ್ಲಿ ಬದಲಾವಣೆ ಆಗದೆ ಇದ್ದರೆ, ಕಾನೂನಿನ ಬದಲಾವಣೆಗಳು ಕೇವಲ ಘೋಷಣೆಗಳಾಗುತ್ತವೆ. ಚೋಮನಿಗೆ ಭೂಮಿ ಸಿಕ್ಕರೂ ಅವನ ಹೃದಯದಲ್ಲಿ ಇನ್ನೂ ಅನುಮಾನವಿದೆ. ಈ ಲೋಕ ‘‘ನನ್ನನ್ನು ಮನುಷ್ಯನೆಂದು ನೋಡುತ್ತಿದೆಯಾ?’’ ಎಂಬ ಸಂದೇಹವದು. ಆ ಪ್ರಶ್ನೆಗೆ ಉತ್ತರ ಸಮಾಜದ ಹೃದಯದಿಂದ ಸಿಗಬೇಕಿತ್ತು, ಹೊರತು ಬರೀ ಕಾನೂನು ಒಂದರಿಂದ ಅಲ್ಲ.
ಕಾಲ ಬದಲಾಗುತ್ತಿದೆ. ಕೆಲವು ಚೋಮರು ಮಾತ್ರ ತಮ್ಮ ತಮ್ಮದೇ ಹೊಲದಲ್ಲೇ ದುಡಿಯುತ್ತಿದ್ದಾರೆ. ಆದರೆ ಅವರ ಹೊಲದ ಪಕ್ಕದಲ್ಲಿ ಈಗ ದೊಡ್ಡ ದೊಡ್ಡ ಕಾರ್ಖಾನೆ, ಕಂಪೆನಿ, ಹೊಸ ಹೊಸ ನಗರ, ಮಹಾ ನಗರಗಳಿಂದ ಒತ್ತುವರಿಯಾಗಿದೆ. ಅವರ ಹೊಲದ ಮಣ್ಣಿನ ಮೇಲೆ ಅಭಿವೃದ್ಧಿಯ ಬ್ಲೂಪ್ರಿಂಟ್ ಸಿದ್ಧವಾಗಿದೆ. ಒಮ್ಮೆ ಕೈಗೆ ಬಂದ ಭೂಮಿ ಮತ್ತೆ ಕೈತಪ್ಪುತ್ತಿದೆ. ಒಂದು ಕಾಲದಲ್ಲಿ ಪಕ್ಕದ ಭೂಮಾಲಕರು ಪುಡಿಗಾಸು ಕೊಟ್ಟು ಕೊಂಡುಕೊಂಡಿದ್ದರು, ಈಗ ಕಾರ್ಪೊರೇಟುಗಳು ಕೊಂಡುಕೊಳ್ಳುತ್ತಿವೆ. ಹೀಗಾಗಿ ನ್ಯಾಯದ ಮುಖ ಬದಲಾಗಿದೆ, ಆದರೆ ಅನ್ಯಾಯದ ಕ್ರೂರತೆ ಮಾತ್ರ ಇನ್ನೂ ಹಾಗೆಯೇ ಉಳಿದಿದೆ.
ಚೋಮನ ಮಕ್ಕಳ ಕೈಯಲ್ಲಿ ಈಗ ದುಡಿಯ ರಿಂಗ್‌ಟೋನ್ ಇರುವ ಮೊಬೈಲ್ ಇದೆ, ಆಧಾರ್ ಕಾರ್ಡ್ ಇದೆ, ಬ್ಯಾಂಕ್ ಖಾತೆ ಇದೆ, ಮತದಾರನ ಹಕ್ಕು ಇದೆ. ಗೂಗಲ್ ಪೇ ವ್ಯವಸ್ಥೆ ಇದೆ. ಆದರೆ ಅವರ ಬದುಕಿನ ಗೌರವ ಇನ್ನೂ ಭಾಗಶಃ ಸಾಲದ ಬಡ್ಡಿಯ ಅಂಕಿಗಳಲ್ಲಿ ಸಿಕ್ಕಿಹಾಕಿಕೊಂಡಿದೆ. ಸಬ್ಸಿಡಿ ಸಾಲ ಉಚಿತ ಭಾಗ್ಯಗಳ ಕರುಣೆಯಲ್ಲೇ ಆತ ಇದ್ದಾನೆ. ಆತನ ದುಡಿ ದುಡಿಮೆಯ ಬೆಲೆಯನ್ನು ಅವನಿಗೆ ಕಾಣಿಸದ ಮಾರುಕಟ್ಟೆ ನಿರ್ಧರಿಸುತ್ತದೆ. ಮೀಸಲಾತಿಯ ದಾರಿಯಲ್ಲಿ ಕಲಿಕೆ-ಉದ್ಯೋಗದ ಅವಕಾಶಗಳು ಪ್ರಾಪ್ತವಾಗಿದೆ. ಆದರೆ ಆ ಏಣಿಯಲ್ಲಿ ಎತ್ತರಕ್ಕೆ ಹತ್ತಿದವರು ಮಾತ್ರ ಬೆರಳೆಣಿಕೆಯ ಮಂದಿ.
ನಮ್ಮ ಸಮಾಜದ ದೊಡ್ಡ ತಪ್ಪು ಏನೆಂದರೆ, ನಾವು ನ್ಯಾಯವನ್ನು ಕಾನೂನಿನ ಪರಿಧಿಯೊಳಗೆ ಮಾತ್ರ ನೋಡುತ್ತೇವೆ. ಆದರೆ ನ್ಯಾಯದ ನಿಜವಾದ ಹಾದಿ ಮನಸ್ಸಿನಲ್ಲಿ ಆರಂಭವಾಗಬೇಕು. ಭೂಮಿಯ ಹಕ್ಕು ಸಿಕ್ಕಾಗ ನಾವು ಸಹಜವಾಗಿ ಹರ್ಷಿಸುತ್ತೇವೆ. ಆದರೆ ಆ ಹಕ್ಕಿನೊಂದಿಗೆ ಗೌರವವೂ ಸಿಕ್ಕಿತೆಂದು ಯೋಚಿಸುತ್ತೇವೆಯಾ? ಸಾಮಾಜಿಕ ನ್ಯಾಯವು ಕೇವಲ ಹಕ್ಕು ಕೊಡುವುದರಿಂದ ಮಾತ್ರ ಸಾಧ್ಯವಾಗುವುದಿಲ್ಲ, ಅದು ಹೃದಯ ಬದಲಿಸುವುದರಿಂದ ಮಾತ್ರ ಸಾಧ್ಯ. ಕಾರಂತರ ಚೋಮನಿಗೆ ನ್ಯಾಯ ಸಿಕ್ಕಿತು ಎಂದರೆ ಅದು ಕೇವಲ ಭೂಮಿಯ ಹಕ್ಕಿನಿಂದ ಅಲ್ಲ, ಅದು ಸಮಾಜ ಅವನನ್ನು ಮನುಷ್ಯನೆಂದು ಒಪ್ಪಿಕೊಂಡ ದಿನದಿಂದ ಮಾತ್ರ!
ಈ ತೊಂಭತ್ತೆರಡು ವರ್ಷಗಳಲ್ಲಿ ಚೋಮನ ಕಥೆ ಅನೇಕ ರೂಪದಲ್ಲಿ ಮತ್ತೆ ಮತ್ತೆ ಅಭಿವ್ಯಕ್ತ ಗೊಂಡಿದೆ. ಬೇರೆ ಬೇರೆ ಹೆಸರಿನಲ್ಲಿ ಅದೇ ಚೋಮನ ಸಾಹಿತ್ಯ ಕಾಣಿಸಿಕೊಂಡಿದೆ. ಚಲನಚಿತ್ರವಾಗಿದೆ, ನಾಟಕವಾಗಿದೆ, ಮಕ್ಕಳ ಪಠ್ಯಕ್ಕೆ ಸೇರಿದೆ, ಚುನಾವಣೆಯ ಭಾಷಣವಾಗಿದೆ, ರಾಜಕೀಯ ಘೋಷಣೆಯಾಗಿದೆ, ಕಲಿಕೆ ಉದ್ಯೋಗ ಮೀಸಲಾತಿಯ ಅರ್ಜಿಯ ಕಾಲಂ ಆಗಿದೆ. ಆದರೆ ಎಲ್ಲಿಯೂ ಅವನ ನಿಶ್ಯಬ್ದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇಂದಿನ ಚೋಮನ ಮಗ ನಗರದೊಳಗಡೆ ನಿರ್ಮಾಣ ಕಾರ್ಮಿಕ, ಡೆಲಿವರಿ ಬಾಯ್, ಕ್ಲೀನರ್, ಬೂತ್ ಕೆಲಸಗಾರ, ವಾಚ್‌ಮನ್, ಕರಾವಳಿಯ ಜಾತ್ರೆ ತೇರು ಹಬ್ಬ ಆಚರಣೆಗಳಂದು ಅವನು ರಾತ್ರಿ ರಾಜರಸ್ತೆಯ ಬದಿಯಲ್ಲಿ ಬಂಟಿಂಗ್ ಕಟ್ಟುತ್ತಾನೆ. ನವರಾತ್ರಿಯ ಹುಲಿ ವೇಷದೊಳಗಡೆಯ ಮನುಷ್ಯನಾಗುತ್ತಾನೆ. ಪಕ್ಷಗಳ ಮೆರವಣಿಗೆಯಲ್ಲಿ ಬಾವುಟ ಏರಿಸಿ ನಡೆಯುತ್ತಾನೆ. ಕಂಬಳದ ಕೋಣನನ್ನು ಹೊರುವ ಪಿಕಪ್ ಮೇಲೆ ನಿಂತು ಕೈ ಬೀಸುತ್ತಾನೆ, ಶ್ರೀಮಂತರು, ಪಕ್ಷ ಧರ್ಮದ ನೇತಾರರು, ರಾಜಕೀಯ ಮುಖಂಡರು ಎತ್ತಿ ಕಟ್ಟುವ ಮತೀಯ ಗುಂಪುಗಳಲ್ಲಿ ಮುನ್ನುಗ್ಗಿ ಏರಿ ಹೋಗಿ ದೇಹ ಒಡ್ಡುತ್ತಾನೆ.
ಚೋಮನ ದುಡಿ ಕೇವಲ ಒಂದು ಕಾದಂಬರಿಯ ಶೀರ್ಷಿಕೆ ಅಲ್ಲ. ಅದು ನ್ಯಾಯದ ಶಾಶ್ವತ ಪ್ರಶ್ನೆ. ನ್ಯಾಯ ಯಾವಾಗ? ಎಲ್ಲಿ? ಯಾರಿಗೆ? ಎಷ್ಟು? ಈ ನಾಲ್ಕು ಪ್ರಶ್ನೆಗಳ ಮಧ್ಯದಲ್ಲಿ ಚೋಮನ ಜೀವನ ಇನ್ನೂ ಅರೆ ಬರೆ ಉಸಿರಾಡುತ್ತಿದೆ. ನ್ಯಾಯ ಎಂದರೆ ಕೇವಲ ಸಮಾನ ಅವಕಾಶವಲ್ಲ. ಅಸಮಾನತೆಯ ಇತಿಹಾಸವನ್ನು ತಿದ್ದಿ ಹಿಡಿಯುವ ಪ್ರಯತ್ನ. ಚೋಮನಿಗೆ ಭೂಮಿ ಸಿಕ್ಕರೂ, ಅವನ ಮಗ ಸಾಮಾಜಿಕವಾಗಿ ದೂರ ಉಳಿದರೆ ಅದು ನ್ಯಾಯವಲ್ಲ, ಮೀಸಲಾತಿಯಲ್ಲಿ ಚುನಾವಣೆ ಗೆದ್ದರೂ ಅವನ ಮಾತು ಪಂಚಾಯತ್‌ನಲ್ಲಿ ಕೇಳಿಸದಿದ್ದರೆ, ಪಾಲಿಸದಿದ್ದರೆ ಅದು ನ್ಯಾಯವಲ್ಲ. ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್‌ಗಳಲ್ಲಿ ಬರೀ ಸ್ಟ್ಯಾಂಪ್ ಸೈಜಿನ ಫೋಟೊಗಳಾಗಿ ಕಾಣಿಸಿಕೊಂಡರೆ ಅದು ಧಾರ್ಮಿಕ, ಸಾಮಾಜಿಕ ಯಶಸ್ಸು ಖಂಡಿತ ಅಲ್ಲ.
ಕಾರಂತರ ಚೋಮನಿಗೆ ನ್ಯಾಯ ದೊರಕಬೇಕಾದರೆ, ನಾವು ನಮ್ಮ ಮನಸ್ಸಿನ ಮಣ್ಣನ್ನು ಮೊದಲು ಉಳುಮೆ ಮಾಡಬೇಕು. ಹಳೆಯ ಅಸಮಾನತೆಯ ಬೇರುಗಳನ್ನು ನಮ್ಮೊಳಗೇ ಕಿತ್ತು ಒಗೆಯಬೇಕು. ಅಸಾಧ್ಯವಾದರೆ ಅಲ್ಲಿ ಖಂಡಿತವಾಗಿಯೂ ಹೊಸ ನ್ಯಾಯದ ಬೆಳೆ ಬರೋದಿಲ್ಲ.
ನಮ್ಮ ದೇಶದಲ್ಲಿ ಸಹಜವಾಗಿ ಎರಡು ಮನಸ್ಥಿತಿಗಳಿವೆ. ಒಂದು ಸಂಗ್ರಹಿಸಿ ನಂತರ ಅದನ್ನು ಹಂಚುವ, ತ್ಯಜಿಸುವ ಮನಸ್ಸು, ಮತ್ತೊಂದು ಬರಿಗೈಯ ಆತ್ಮನಿಷ್ಠೆಯ ಮನಸ್ಸು. ಬುದ್ಧ, ಬಸವ, ಪುರಂದರ ದಾಸರಂಥವರು ಮೊದಲು ಲೋಕದೊಳಗೆ ಇಳಿದು ಜ್ಞಾನ, ಅನುಭವ, ಅಧಿಕಾರ, ಪೀಠಸ್ಥ ಶ್ರೀಮಂತಿಕೆಯನ್ನು ಸಂಗ್ರಹಿಸಿದರು. ಬಳಿಕ ಅದನ್ನೆಲ್ಲ ಬಿಟ್ಟುಹೋದರು. ಅವರ ತ್ಯಾಗವು ಅಜ್ಞಾನದಿಂದ ಬಂದದ್ದಲ್ಲ; ಅದು ಪರಿಪೂರ್ಣತೆಯ ನಂತರದ ವಿಮೋಚನೆ. ನೆಮ್ಮದಿಯ ದಾರಿಯನ್ನು ಹುಡುಕುವ ಮನಸ್ಸಿನ ಶಾಶ್ವತ ಮುಕ್ತಿ.
ಶ್ರೀಮಂತಿಕೆ ಮತ್ತು ಸಿರಿವಂತಿಕೆ- ಇವೆರಡರ ಮಧ್ಯೆ ಸೂಕ್ಷ್ಮವಾದ ವ್ಯತ್ಯಾಸವಿದೆ. ಶ್ರೀಮಂತಿಕೆ ಎಂದರೆ ಕಿಸೆಯೊಳಗಿನ ಚಿನ್ನ, ಅರಮನೆಯ ವೈಭೋಗ, ಕತ್ತಿಯ ಮಿನುಗು, ಕಿರೀಟದ ಹೊಳಪು, ಸಿಂಹಾಸನದ ಮೃದುತ್ವ. ಅದು ಎಂದೂ ಮುಗಿಯದ ಬಯಕೆಯೊಳಗೆ ಮುಳುಗುತ್ತದೆ. ಆದರೆ ಸಿರಿವಂತಿಕೆ-ಅದು ಮನಸ್ಸಿನ ಸಂಪತ್ತು, ಹೃದಯದ ಮೃದುತ್ವ, ದಾನದ ಸೌಂದರ್ಯ. ಬುದ್ಧನಿಗೂ, ಬಸವನಿಗೂ, ಪುರಂದರ ದಾಸನಿಗೂ ಈ ಮನಸ್ಸಿನ ಸಿರಿವಂತಿಕೆಯೇ ಪರಮ ಶ್ರೇಷ್ಠತೆಯ ಹಾದಿಯಾಗಿತ್ತು. ಅವರು ಎಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಬದುಕಿನ ಸತ್ಯವನ್ನು ಕಂಡುಕೊಂಡರು.
ಆದರೆ ನಮ್ಮ ಚೋಮ ಹಾಗಲ್ಲ. ಅವನು ಸಂಗ್ರಹಕನಲ್ಲ. ಬಿಟ್ಟುಬಿಡಲು ಮೊದಲೇ ಏನೂ ಇಲ್ಲದವನಿಗೆ ತ್ಯಾಗದ ಮಾತೇ ಅನರ್ಹ. ಅದು ದಾರಿದ್ರ್ಯವಲ್ಲ, ಬಡತನದ ಮತ್ತೊಂದು ದಿಗಂತ. ಭಾರತದ ಬಡವರಲ್ಲಿ, ದಲಿತರಲ್ಲಿ, ಶೋಷಿತರಲ್ಲಿ ಇರುವ ಮಹತ್ತರವಾದ ಮಿತಿ ಮತ್ತು ಸಾಧ್ಯತೆ ಇದೇ - ಅವರು ಶ್ರೀಮಂತರನ್ನು ನೋಡುವರು, ಅವರ ಹಾದಿಯನ್ನೇ ಬದುಕಿನ ಮಾನದಂಡವೆಂದು ಭಾವಿಸುವರು. ಶ್ರೀಮಂತರಾಗುವುದಾದರೆ ಮಾತ್ರ ಈ ಲೋಕದಲ್ಲಿ ಮಾನ ಮರ್ಯಾದೆ ಎಂದು ತಿಳಿದವರು.
ಈ ಗುರುತಿಸುವಿಕೆಯ ಆಸೆ, ಈ ಅಸ್ಮಿತೆಯ ಹೋರಾಟವೇ ಚೋಮನೊಳಗೆ ಇವತ್ತಿಗೂ ಉಳಿದಿದೆ. ಕಾರಂತರು ಅದನ್ನೇ ಜೀವಂತ ರೂಪದಲ್ಲಿ ಚೋಮ ಎನ್ನುವ ವ್ಯಕ್ತಿಯಲ್ಲಿ ಹಿಡಿದಿಟ್ಟಿದ್ದಾರೆ. ಚೋಮನದು ಕೇವಲ ಕಥೆಯಲ್ಲ, ಅದು ಈ ದೇಶದ ಅಸಂಖ್ಯಾತ ನೆಲದವರ ಅಂತಃಸತ್ಯದ ಧ್ವನಿ - ತನ್ನ ಭಾಗ್ಯದ ವಿರುದ್ಧ ಹೋರಾಡುವ, ಆದರೆ ಅದನ್ನೇ ದೈವದ ಆಜ್ಞೆಯೆಂದು ಭಾವಿಸುವ ಆ ಕತ್ತಲೆಯ ಮನಸ್ಸಿನ ಧ್ವನಿ.
ಅವನು ದುಡಿಯುತ್ತಾನೆ, ಬಯಸುತ್ತಾನೆ, ಮತ್ತೆ ಮತ್ತೆ ದುಡಿಯುತ್ತಾನೆ - ಆದರೆ ದೊರೆಯದದೇ ಅವನ ದೈವ. ಈ ದ್ವಂದ್ವದೊಳಗೇ ಚೋಮನ ದುಡಿ ಹುಟ್ಟಿದೆ; ಬಡತನ ಶಾಪವಲ್ಲ, ಬಡತನದ ಅರಿವು, ಅದರ ಆತ್ಮದ ಹುಡುಕಾಟ ಇಲ್ಲಿಯ ಕೃತಿ ಶೋಧ.
427 ಪುಸ್ತಕ, 80 ಸಾವಿರಕ್ಕಿಂತ ಹೆಚ್ಚು ಪುಟಗಳ ಸಾಹಿತ್ಯ ಬರೆದ ಕಾರಂತರ ಕೈಯಿಂದ ಕೇವಲ 104 ಪುಟಗಳ ಚೋಮನ ದುಡಿ ಜನ್ಮತಾಳಿತು. ಆದರೆ ಆ ಚಿಕ್ಕ ಕೃತಿಯಲ್ಲೇ ಒಂದು ಜಾತಿಯ ದುಃಖ, ಒಂದು ಜನಾಂಗದ ಹೋರಾಟ, ಒಂದು ಕಾಲದ ಬದಲಾವಣೆಯ ಧ್ವನಿ ತುಂಬಿಕೊಂಡಿತ್ತು. ಅದೇ ಕಾರಂತರಿಗೆ ಶಾಶ್ವತ ಮಾನ್ಯತೆ ತಂದುಕೊಟ್ಟಿತು. ಆದರೂ ಒಂದು ಪ್ರಶ್ನೆ ಇಂದಿಗೂ ಜೀವಂತ - ಚೋಮನ ಧ್ವನಿ ನಮ್ಮ ರಾಷ್ಟ್ರದ ಪ್ರಭುತ್ವದ ಕಿವಿಯೂ ಸೇರಿ ಲೋಕ ವ್ಯಾಪ್ತಿಗೆ ಮುಟ್ಟಿದೆಯೇ ಎಂಬುವುದು. ಸಂವಿಧಾನ-ಪ್ರಭುತ್ವ ಕೊಟ್ಟ ಅವಕಾಶವನ್ನು ಚೋಮನ ತಲೆಮಾರು ಎಷ್ಟು ಬಳಸಿಕೊಂಡಿದೆ ಎಂಬುವುದು ಇನ್ನೊಂದು.







