ಹುಲಿಯ ಸದ್ದು ಮತ್ತು ಹೂವಿನ ಪರಿಮಳ!

ನಮ್ಮ ಹಿರಿಯರಿಗೆ ಹುಲಿಯ ಸದ್ದು ಅಪರೂಪಕ್ಕೆ ಕೇಳಿಸುತ್ತಿತ್ತು. ಆದರೆ ನಮಗಿಂದು ಪ್ರತಿನಿಮಿಷವೂ ಹುಲಿಯ ಸದ್ದೇ ಕೇಳಿಸುತ್ತಿದೆ. ನಮ್ಮ ಕೈಯಲ್ಲಿರುವ ಮೊಬೈಲ್, ಎದುರಿನ ಟಿ.ವಿ., ಬೆಳಗಿನ ಪತ್ರಿಕೆ, ಮಧ್ಯಾಹ್ನದ ಯೂಟ್ಯೂಬ್, ಸಂಜೆಗಿನ ವಾಟ್ಸ್‌ಆ್ಯಪ್ ಎಲ್ಲವೂ ಸೇರಿ ಜಗತ್ತಿನ ಎಲ್ಲ ಕತ್ತಲೆಯ ವಿಕೃತ ತುಣುಕುಗಳನ್ನು ಒಂದೇ ಜಾಗದಲ್ಲಿ ಕೂಡಿಸಿ ನಮ್ಮ ಮುಂದೆ ರಾಶಿ ಸುರಿಯುತ್ತವೆ. ಇದರ ಪರಿಣಾಮ ನಿಧಾನವಾಗಿ ಗೋಚರಿಸುತ್ತದೆ. ಮೊದಲು ಈ ಜಗತ್ತು ಹಿಂದೆಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂಬ ಭಾವನೆ ಬೆಳೆಯುತ್ತದೆ. ಪಕ್ಕದಲ್ಲಿ ನಿಂತ ಇನ್ನೊಬ್ಬ ಮನುಷ್ಯನನ್ನು ಅವನು ನನ್ನ ಹಾಗೆಯೇ ಎಂದು ನಂಬಲು ಕಷ್ಟವಾಗುತ್ತದೆ. ಮಕ್ಕಳ ಬಗ್ಗೆ ಆತಂಕ ಹೆಚ್ಚುತ್ತದೆ. ಸಮಾಜ ಹಾಳಾಗುತ್ತಿದೆ ಎಂಬ ನಿರಾಶೆ ಮನಸ್ಸನ್ನು ಆವರಿಸುತ್ತದೆ.
ಯಾವುದಾದರೂ ಒಂದು ದಿನ ಬೆಳಗ್ಗೆ ಈ ದೇಶದ ಆಯ್ದ ಕೆಲವೊಂದು ದೈನಿಕವನ್ನು ಕೈಗೆತ್ತಿಕೊಳ್ಳಿ. ಪತ್ರಿಕೆಯ ಜೊತೆ ಒಂದು ಬಿಳಿ ಹಾಳೆಯನ್ನೂ ಇಟ್ಟುಕೊಳ್ಳಿ. ನಂತರ ಆ ಪತ್ರಿಕೆಯ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುತ್ತಾ ಹೋಗಿ. ಹಾಗೆ ವಾಚಿಸುವಾಗ ಒಂದು ಸಣ್ಣ ಕೆಲಸ ಮಾಡಿ. ಎಲ್ಲಿಯಾದರೂ ನಿಮಗೆ ಸಾವಿನ ಸುದ್ದಿ ಕಂಡರೆ ಒಂದು ಗುರುತು ಹಾಕಿ. ಕೊಲೆ, ಆತ್ಮಹತ್ಯೆ, ಅಪಘಾತ, ಮೋಸ, ಜಗಳ, ವಂಚನೆ, ರಾಜಕೀಯ ಕೆಸರೆರಚಾಟ, ಅತ್ಯಾಚಾರ, ಕುಟುಂಬ ಕಲಹ, ಹಲ್ಲೆ, ಕಳ್ಳತನ, ದರೋಡೆ ಇಂಥ ಸುದ್ದಿಗಳು ಕಂಡರೆ ಮತ್ತೆ ಮತ್ತೆ ಒಂದೊಂದು ಗುರುತು ಹಾಕುತ್ತಾ ಹೋಗಿ. ಪತ್ರಿಕೆ ಓದಿ ಮುಗಿಸುವ ಹೊತ್ತಿಗೆ ನಿಮ್ಮ ಬಿಳಿ ಹಾಳೆಯ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ ನೋಡಿ.
ಟೆಲಿವಿಷನ್ ಸುದ್ದಿ ವಾಹಿನಿಗಳಲ್ಲಿ ಈ ಪ್ರಯೋಗ ಇನ್ನೂ ಆಸಕ್ತಿಕರ. ಬೆಳಗ್ಗೆ ಒಂದು ಗಂಟೆ ಸುದ್ದಿ ನೋಡಿದರೂ ಸಾಕು. ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ಯಾರೋ ಯಾರನ್ನೋ ಕೊಂದಿದ್ದಾರೆ, ಗಂಡ-ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ, ತಂದೆ-ಮಗನ ನಡುವೆ ಆಸ್ತಿ ವಿವಾದವಾಗಿದೆ, ರಸ್ತೆ ಮಧ್ಯೆ ಹಲ್ಲೆ ನಡೆದಿದೆ, ರಾಜಕಾರಣಿಗಳು ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಒಂದು ವಾಹನದಲ್ಲಿ ಅನುಮಾನಾಸ್ಪದ ವಸ್ತು ಸಿಕ್ಕಿದೆ. ಒಂದು ವೀಡಿಯೊ ವೈರಲ್ ಆಗಿದೆ. ರಿಕ್ಷಾದಲ್ಲಿ ಕುಕ್ಕರ್ ಬಾಂಬು ಸಿಡಿದಿದೆ, ಪಕ್ಕದ ಮನೆ ಹುಡುಗಿ ಭಿನ್ನ ಕೋಮಿನ ಹುಡುಗನ ಜೊತೆಗೆ ಬೈಕ್ ಹತ್ತಿದ್ದಾಳೆ, ಮಗನಿಂದಲೇ ಅಪ್ಪನ ಕೊಲೆ, ಪಾರ್ಟಿ ಕೇಳಿದ್ದಕ್ಕೆ ಕತ್ತು ಹಿಸುಕಿ ಕೊಲೆ.... ಹೀಗೆ ಪತ್ರಿಕೆ -ವಾಹಿನಿಯ ಸುದ್ದಿ ಹಂಚಿಕೆಯನ್ನು ಓದಿದ-ಕೇಳಿದ ಮೇಲೆ ನಿಮ್ಮ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯವಾಗುವುದಾದರೂ ಹೇಗೆ? ಅಂಗೈಯಲ್ಲಿರುವ ಮೊಬೈಲ್ ಹೊತ್ತು ತರುವ ವಿಕೃತ ಸುದ್ದಿಗಳದ್ದು ಬೇರೆಯೇ ಕಥೆ. ಅವು ಮೇಲಿನದ್ದಕ್ಕಿಂತಲೂ ಮಿಗಿಲಾಗಿ ಬಂದು ಬಂದು ಮನಸ್ಸಿನೊಳಗಡೆ ಕಾರ್ಪೊರೇಟ್ ಕಸದಂತೆ ರಾಶಿ ಸುರಿಯುತ್ತವೆ.!
ಸಮಾಜದಲ್ಲಿ ಕೆಟ್ಟದ್ದು ನಡೆದರೆ ಅದನ್ನು ವರದಿ ಮಾಡಬಾರದು ಎಂದು ಹೇಳುವಷ್ಟು ನಾವು ಮುಗ್ಧರಲ್ಲ. ಪತ್ರಿಕೋದ್ಯಮದ ಮೂಲ ಕರ್ತವ್ಯವೇ ವಾಸ್ತವವನ್ನು ದಾಖಲಿಸುವುದು. ಅಪರಾಧ ನಡೆದಿದ್ದರೆ ಅದನ್ನು ಹೇಳಲೇ ಬೇಕು. ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಬಯಲಿಗೆಳೆಯಬೇಕು. ಅನ್ಯಾಯ ನಡೆದಿದ್ದರೆ ಅದರ ಬಗ್ಗೆ ಸಮಾಜದ ಗಮನ ಸೆಳೆಯಬೇಕು. ಈ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಸಮಸ್ಯೆ ಬೇರೆ ಕಡೆ ಇದೆ.
ಇಂದು ನಾವು ಸಮಾಜದ ಸಂಪೂರ್ಣ ಚಿತ್ರವನ್ನು ನೋಡುತ್ತಿದ್ದೇವೆಯೇ ಅಥವಾ ಅದರ ಕತ್ತಲೆಯೊಳಗಡೆಯ ತುಣುಕನ್ನು ಮಾತ್ರ ದಿನವಿಡೀ ನೋಡುತ್ತಿದ್ದೇವೆಯೇ? ವಾಹಿನಿಯ ಕ್ಯಾಮರಾದ ಬೆಳಕನ್ನು ಅಥವಾ ಪತ್ರಿಕೆಯ ಪೆನ್ನಿನ ಶಾಯಿಯನ್ನು ಸ್ವಲ್ಪ ಈ ಕಡೆಗೂ ತಿರುಗಿಸಿ. ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಾರೆ. ಸಾವಿರಾರು ಶಿಕ್ಷಕರು ಪಾಠ ಮಾಡುತ್ತಾರೆ. ರೈತರು ಹೊಲದಲ್ಲಿ ಬೆವರು ಇಳಿಸಿ ದುಡಿಯುತ್ತಾರೆ. ವೈದ್ಯರು ಸಾವಿರಾರು ರೋಗಿಗಳನ್ನು ಗುಣಪಡಿಸುತ್ತಾರೆ. ಯುವಕರು ಹೊಸ ಉದ್ಯಮಗಳನ್ನು ಆರಂಭಿಸುತ್ತಾರೆ. ಹಳ್ಳಿಗಳಲ್ಲಿ ಜನರೇ ಸೇರಿ ಯಾವುದೋ ಪಾಳು ಕೆರೆಗಳನ್ನು ಉಳಿಸುತ್ತಾರೆ. ಅನೇಕ ಸ್ವಯಂಸೇವಾ ಸಂಘಟನೆಗಳು ಸದ್ದಿಲ್ಲದೆ ಕೆಲಸ ಮಾಡುತ್ತವೆ. ಕನ್ನಡ ಶಾಲೆಗಳನ್ನು ಯಾರೋ ಒಬ್ಬರು ದತ್ತು ತೆಗೆದುಕೊಂಡಿದ್ದಾರೆ, ಊರೊಟ್ಟಿಗೆ ನೂರಾರು ಕುಟುಂಬಗಳು ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಗೌರವದೊಂದಿಗೆ ಬದುಕುತ್ತವೆ. ಆದರೆ ಇವೆಲ್ಲ ಸೇರಿ ಒಂದು ದಿನದ ಸುದ್ದಿಯಾಗುವುದಿಲ್ಲ. ಒಂದು ಕೊಲೆ ಮಾತ್ರ ದಿನವಿಡೀ ಸುದ್ದಿಯಾಗುತ್ತದೆ!
ಇದಕ್ಕೆ ಮಾಧ್ಯಮಗಳ ದುರುದ್ದೇಶವೊಂದೇ ಕಾರಣ ಅಲ್ಲ. ಅದನ್ನು ಓದುವ-ನೋಡುವ ಮಾನವ ಮನಸ್ಸಿನ ರಚನೆಯಲ್ಲೇ ಒಂದು ವಿಚಿತ್ರ ವಿಲಕ್ಷಣ ಭಾವ ಅಡಗಿದೆ. ಅಪಾಯದ ಕಡೆಗೆ ನಮ್ಮ ಗಮನ ಸಹಜವಾಗಿ ಹೆಚ್ಚು ಸೆಳೆಯಲ್ಪಡುತ್ತದೆ. ಕಾಡಿನಲ್ಲಿ ನಡೆಯುತ್ತಿದ್ದ ಬದುಕುತ್ತಿದ್ದ ನಮ್ಮ ಪೂರ್ವಜನಿಗೆ ಅಲ್ಲಿಯ ಹೂವಿನ ಸೌಂದರ್ಯಕ್ಕಿಂತ ಪೊದೆಯೊಳಗಿನ ಹುಲಿಯ ಸದ್ದು ಮುಖ್ಯವಾಗಿತ್ತು. ಹುಲಿಯನ್ನು ನಿರ್ಲಕ್ಷಿಸಿದರೆ ಜೀವ ಹೋಗುತ್ತಿತ್ತು. ಹೂವನ್ನು ನಿರ್ಲಕ್ಷಿಸಿದರೆ ಏನೂ ಆಗುತ್ತಿರಲಿಲ್ಲ. ಬಹುಶಃ ಅದೇ ಮನೋವೃತ್ತಿ ಇನ್ನೂ ನಮ್ಮೊಳಗೆ ಉಳಿದಿದೆ. ಆದ್ದರಿಂದಲೇ ಒಳ್ಳೆಯ ಸುದ್ದಿಗಿಂತ ಕೆಟ್ಟ ಸುದ್ದಿ ನಮ್ಮ ಗಮನವನ್ನು ಬೇಗ ಸೆಳೆಯುತ್ತದೆ.
ಆದರೆ ಇಲ್ಲಿ ಒಂದು ವ್ಯತ್ಯಾಸ ಇದೆ. ನಮ್ಮ ಹಿರಿಯರಿಗೆ ಹುಲಿಯ ಸದ್ದು ಅಪರೂಪಕ್ಕೆ ಕೇಳಿಸುತ್ತಿತ್ತು. ಆದರೆ ನಮಗಿಂದು ಪ್ರತಿನಿಮಿಷವೂ ಹುಲಿಯ ಸದ್ದೇ ಕೇಳಿಸುತ್ತಿದೆ. ನಮ್ಮ ಕೈಯಲ್ಲಿರುವ ಮೊಬೈಲ್, ಎದುರಿನ ಟಿ.ವಿ., ಬೆಳಗಿನ ಪತ್ರಿಕೆ, ಮಧ್ಯಾಹ್ನದ ಯೂಟ್ಯೂಬ್, ಸಂಜೆಗಿನ ವಾಟ್ಸ್‌ಆ್ಯಪ್ ಎಲ್ಲವೂ ಸೇರಿ ಜಗತ್ತಿನ ಎಲ್ಲ ಕತ್ತಲೆಯ ವಿಕೃತ ತುಣುಕುಗಳನ್ನು ಒಂದೇ ಜಾಗದಲ್ಲಿ ಕೂಡಿಸಿ ನಮ್ಮ ಮುಂದೆ ರಾಶಿ ಸುರಿಯುತ್ತವೆ. ಇದರ ಪರಿಣಾಮ ನಿಧಾನವಾಗಿ ಗೋಚರಿಸುತ್ತದೆ. ಮೊದಲು ಈ ಜಗತ್ತು ಹಿಂದೆಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂಬ ಭಾವನೆ ಬೆಳೆಯುತ್ತದೆ. ಪಕ್ಕದಲ್ಲಿ ನಿಂತ ಇನ್ನೊಬ್ಬ ಮನುಷ್ಯನನ್ನು ಅವನು ನನ್ನ ಹಾಗೆಯೇ ಎಂದು ನಂಬಲು ಕಷ್ಟವಾಗುತ್ತದೆ. ಮಕ್ಕಳ ಬಗ್ಗೆ ಆತಂಕ ಹೆಚ್ಚುತ್ತದೆ. ಸಮಾಜ ಹಾಳಾಗುತ್ತಿದೆ ಎಂಬ ನಿರಾಶೆ ಮನಸ್ಸನ್ನು ಆವರಿಸುತ್ತದೆ. ವಾಸ್ತವದಲ್ಲಿ ಅಪರಾಧದ ಪ್ರಮಾಣ ಕಡಿಮೆಯಾಗಿರಬಹುದು, ಜೀವಿತಮಟ್ಟ ಸುಧಾರಿಸಿರಬಹುದು, ಆರೋಗ್ಯ ಸೇವೆ ಉತ್ತಮವಾಗಿರಬಹುದು, ಶಿಕ್ಷಣದ ಅವಕಾಶಗಳು ಹೆಚ್ಚಿರಬಹುದು. ಆದರೆ ನಮ್ಮ ಮನಸ್ಸು ಅದನ್ನು ಒಪ್ಪುವುದಿಲ್ಲ. ಏಕೆಂದರೆ ಪ್ರತಿದಿನ ಅದಕ್ಕೆ ಸಿಗುತ್ತಿರುವ ಆಹಾರ ಭಯ ಮತ್ತು ಆತಂಕದ ಸುದ್ದಿಗಳೇ ಅದನ್ನು ನಂಬದಿರುವಂತೆ ಜೋಡಿಸುತ್ತವೆ.
ಈ ಸಂದರ್ಭದಲ್ಲಿ ನನಗೊಂದು ಕಥೆ ನೆನಪಾಗುತ್ತದೆ. ಅಮಾವಾಸ್ಯೆಯ ಮಧ್ಯರಾತ್ರಿಯ ಸಮಯ. ಕಾಳರಾತ್ರಿ ಎಂದೇ ಇಟ್ಟುಕೊಳ್ಳಿ. ಕಾಡಿನ ಮಧ್ಯೆ ಸಾಗುತ್ತಿದ್ದ ರಸ್ತೆಯಲ್ಲಿ ಒಬ್ಬ ವ್ಯಕ್ತಿಯ ಕಾರು ಕೆಟ್ಟು ನಿಲ್ಲುತ್ತದೆ. ಅದೇ ದಿನ ಊರು ಮುಟ್ಟುವುದು ಅವನಿಗೆ ಅನಿವಾರ್ಯವಾಗಿತ್ತು. ಆದರೆ ಕಾರು ಮುಂದೆ ಸಾಗುವ ಸ್ಥಿತಿಯಲ್ಲಿರಲಿಲ್ಲ. ತಕ್ಷಣದ ದುರಸ್ತಿಗೆ ಒಂದು ಸುತ್ತಿಗೆ ಬೇಕಾಗಿತ್ತು. ಅವನ ಬಳಿ ಅದು ಇರಲಿಲ್ಲ.
ಸುತ್ತಲೂ ಕತ್ತಲು. ದೂರದಲ್ಲಿ ಬಯಲ ನಡುವೆ ಒಂದು ಮಿಣುಕು ದೀಪ ಮಾತ್ರ ಕಾಣಿಸುತ್ತಿತ್ತು. ಅಲ್ಲಿ ಯಾರೋ ಮನುಷ್ಯರಿರಬೇಕು ಎಂದು ಆತ ಆ ಮನೆಯ ಕಡೆಗೆ ಕತ್ತಲೆಗೆ ಕುರುಡುತ್ತಾ ನಡೆಯಲಾರಂಬಿಸಿದ. ಹೀಗೆ ನಡೆಯುತ್ತಾ ಹೋಗುವಾಗ ಅವನ ಮನಸ್ಸು ಕೆಲಸ ಮಾಡಲು ಆರಂಭಿಸಿತು.
ಈ ಕಾಳರಾತ್ರಿಯಲ್ಲಿ ನಾನು ಬಾಗಿಲು ತಟ್ಟಿದರೆ ಅವರು ಸುತ್ತಿಗೆ ಕೊಡಬಹುದೇ? ಕೊಡದಿದ್ದರೆ?
ಅವರು ಜಿಪುಣರಾಗಿದ್ದರೆ? ನನ್ನನ್ನು ಅನುಮಾನದಿಂದ ನೋಡಿದರೆ? ಈ ಹೊತ್ತಿನಲ್ಲಿ ಯಾಕೆ ಬಂದಿದ್ದೀಯಾ ಎಂದು ಬೈದರೆ? ಹೀಗೆ ಅವನೊಳಗೆ ಒಂದು ಪ್ರಶ್ನೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕುತ್ತಾ ಹೋಯಿತು. ಕತ್ತಲೆಯ ಹಾದಿಯಲ್ಲಿ ಅವನು ನಡೆದು ಬಂದಷ್ಟು ದೂರ ಅವನ ಕಲ್ಪನೆಯೂ ಗರಿಗೆದರುತ್ತಲೇ ಇತ್ತು. ಮನೆ ಹತ್ತಿರವಾಗುವ ಹೊತ್ತಿಗೆ ಅಲ್ಲಿ ವಾಸಿಸುವ ವ್ಯಕ್ತಿಯ ಬಗ್ಗೆ ಅವನ ಮನಸ್ಸಿನಲ್ಲಿ ಒಂದು ಸಂಪೂರ್ಣ ಕಥೆಯೇ ಸಿದ್ಧವಾಗಿತ್ತು. ಆತ ಕಠಿಣ ವ್ಯಕ್ತಿ. ಸಹಾಯ ಮಾಡದ ವ್ಯಕ್ತಿ. ತನ್ನ ಬಳಿ ಸುತ್ತಿಗೆ ಇದ್ದರೂ ಕೊಡದ ವ್ಯಕ್ತಿ. ಹೀಗೆಲ್ಲ ನಿರ್ಧಾರಗಳು ಆಗಿಬಿಟ್ಟಿದ್ದವು.
ಕೊನೆಗೆ ಟಕ ಟಕ ಟಕ ಟಕ ಎಂದು ಆತ ಬಾಗಿಲು ತಟ್ಟಿದ. ಬಹಳ ಹೊತ್ತಿನ ನಂತರ ಒಳಗಿನಿಂದ ಕೆಮ್ಮುತ್ತಾ, ಕ್ಯಾಕರಿಸುತ್ತಾ ಒಬ್ಬ ವಯಸ್ಸಾದ ಮುದುಕ ಬಾಗಿಲು ತೆರೆದ. ಆ ಮುದುಕ ಇನ್ನೂ ಏನನ್ನೂ ಕೇಳಿರಲಿಲ್ಲ. ‘ಯಾರು?’ ಎಂಬ ಒಂದು ಪದವನ್ನೂ ಉಚ್ಚರಿಸಿರಲಿಲ್ಲ.ಆದರೆ ಕಾಡಿನ ದಾರಿಯುದ್ದಕ್ಕೂ ತನ್ನ ಕಲ್ಪನೆಗಳ ಜೊತೆ ಜಗಳ ಮಾಡಿಕೊಂಡು ಬಂದಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಉದ್ವೇಗದಿಂದ ಕೂಗಿದ.
‘‘ನಿನ್ನ ಸುತ್ತಿಗೆ ಯಾರಿಗೆ ಬೇಕು? ಇಟ್ಟುಕೋ ನಿನ್ನಲ್ಲೇ! ಅದು ಚಿನ್ನದ್ದೋ ಬೆಳ್ಳಿಯದೋ’’ ಎಂದೆಲ್ಲ ಏಕದಂ ದಬಾಯಿಸಿದ.
ಹೌದು, ಆ ಕ್ಷಣಕ್ಕೆ ಆ ಮುದುಕನಿಗೆ ಏನಾಯಿತು ಎಂಬುದೇ ಅರ್ಥವಾಗಲಿಲ್ಲ. ಈ ಕಥೆ ಮೊದಲಿಗೆ ಕೇಳಿದಾಗ ಹಾಸ್ಯಾಸ್ಪದವಾಗಿ ಕಾಣುತ್ತದೆ. ಆದರೆ ಸ್ವಲ್ಪ ಯೋಚಿಸಿದರೆ ಅದು ನಮ್ಮ ಕಾಲದ ಕಥೆಯೇ ಎಂದು ಅನ್ನಿಸುತ್ತದೆ. ಇಂದು ನಾವು ನಿಜವಾದ ಜಗತ್ತಿಗಿಂತ ಹೆಚ್ಚು ನಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ನಾವು ಏನು ನೋಡುತ್ತೇವೆಯೋ, ಏನು ಕೇಳುತ್ತೇವೆಯೋ, ಏನು ಓದುತ್ತೇವೆಯೋ ಅದು ನಿಧಾನವಾಗಿ ನಮ್ಮ ಆಲೋಚನೆಯ ಭಾಗವಾಗುತ್ತದೆ. ಆಲೋಚನೆಗಳು ನಂಬಿಕೆಗಳಾಗುತ್ತವೆ. ನಂಬಿಕೆಗಳು ನಮ್ಮ ದೃಷ್ಟಿಕೋನವಾಗುತ್ತವೆ. ಪ್ರತಿದಿನ ಕಳ್ಳತನದ ಸುದ್ದಿಗಳನ್ನೇ ನೋಡಿ ನೋಡಿ ಸುತ್ತಲಿನ ಎಲ್ಲರೂ ಕಳ್ಳರಂತೆ ಕಾಣುತ್ತಾರೆ. ಪ್ರತಿದಿನ ಮೋಸದ ಸುದ್ದಿಗಳನ್ನೇ ಓದಿದರೆ ಯಾರನ್ನೂ ನಂಬಲು ಸಾಧ್ಯವಾಗುವುದಿಲ್ಲ.
ಪ್ರತಿದಿನ ಹಿಂಸೆಯ ಸುದ್ದಿಗಳನ್ನೇ ಕೇಳಿದರೆ ಜಗತ್ತು ಸಂಪೂರ್ಣ ಹಿಂಸಾತ್ಮಕವಾಗಿದೆ ಎಂದು ಭಾಸವಾಗುತ್ತದೆ. ಪ್ರತಿದಿನ ರಾಜಕೀಯ ದ್ವೇಷವನ್ನೇ ಕೇಳಿದರೆ ಸಮಾಜದಲ್ಲಿ ಸಂವಾದವೇ ಉಳಿದಿಲ್ಲ ಎಂಬ ಭ್ರಮೆ ಉಂಟಾಗುತ್ತದೆ. ನೀವು ಒಂದು ಕೆಟ್ಟ ಸುದ್ದಿಯನ್ನು ನೋಡಿದರೆ ಅದಕ್ಕೆ ಸಂಬಂಧಿಸಿದ ಹತ್ತು ಸುದ್ದಿಗಳನ್ನು ನಿಮ್ಮ ಮುಂದೆ ತಂದು ಹಾಕುತ್ತವೆ. ನೀವು ಒಂದು ಆತಂಕಕಾರಿ ವೀಡಿಯೊ ನೋಡಿದರೆ ಅದೇ ರೀತಿಯ ಮತ್ತಷ್ಟು ವೀಡಿಯೊಗಳು ನಿಮ್ಮ ಪರದೆಯಲ್ಲಿ ಕಾಣಿಸಿಕೊಳ್ಳುತ್ತವೆ. ನಿಧಾನವಾಗಿ ನಿಮ್ಮ ಜಗತ್ತು ಒಂದೇ ಬಣ್ಣಕ್ಕೆ ತಿರುಗುತ್ತದೆ.
ವಾಸ್ತವದಲ್ಲಿ ಜಗತ್ತು ಅಷ್ಟು ಕೆಟ್ಟದೂ ಅಲ್ಲ, ಅಷ್ಟು ಒಳ್ಳೆಯದೂ ಅಲ್ಲ. ಅದು ಮಿಶ್ರಣ. ಅಲ್ಲಿ ಬೆಳಕೂ ಇದೆ, ಕತ್ತಲೆಯೂ ಇದೆ. ನಂಬಿಕೆಯೂ ಇದೆ, ವಂಚನೆಯೂ ಇದೆ. ಪ್ರೀತಿಯೂ ಇದೆ, ದ್ವೇಷವೂ ಇದೆ. ಆದರೆ ಇಂದು ನಮ್ಮ ಮಾಹಿತಿ ವ್ಯವಸ್ಥೆ ಕತ್ತಲೆಯನ್ನು ಮಾತ್ರ ದೊಡ್ಡದಾಗಿ ತೋರಿಸುವ ಕನ್ನಡಿಯಂತಾಗಿದೆ.
ಆದ್ದರಿಂದಲೇ ಕೆಲವೊಮ್ಮೆ ಪತ್ರಿಕೆ ಓದುವುದಕ್ಕಿಂತ ಮುಖ್ಯವಾದುದು ಪತ್ರಿಕೆಯನ್ನು ಮುಚ್ಚಿಡುವ ಸಮಯವನ್ನು ತಿಳಿದುಕೊಳ್ಳುವುದು. ಸುದ್ದಿ ತಿಳಿದುಕೊಳ್ಳುವುದಕ್ಕಿಂತ ಮುಖ್ಯವಾದುದು ಸುದ್ದಿಯಿಂದ ವಿರಾಮ ಪಡೆಯುವುದು. ಮೊಬೈಲ್ ಪರದೆಯಿಂದ ಕಣ್ಣು ಎತ್ತಿ ಹೊರಗಿನ ಜಗತ್ತನ್ನು ನೋಡುವುದು.
ಯಾಕೆಂದರೆ ಬದುಕು ಕೇವಲ ಪತ್ರಿಕೆಯ ಅಪರಾಧ ಪುಟಗಳಲ್ಲಿ ಮಾತ್ರ ಇಲ್ಲ, ವಾಹಿನಿಯ ಕ್ರೈಂ ಸ್ಟೋರಿಯಲ್ಲಿ ಅಷ್ಟೇ ಅಲ್ಲ, ಅದು ಶಾಲೆಗೆ ಹೊರಟ ಮಗುವಿನ ನಗುವಿನಲ್ಲೂ ಇದೆ. ಬೆಳಗಿನ ಮಂಜಿನಲ್ಲೂ ಇದೆ. ಹೊಲದಲ್ಲಿ ದುಡಿಯುತ್ತಿರುವ ರೈತನ ಬೆವರಲ್ಲೂ ಇದೆ. ಯಾರಿಗೂ ಗೊತ್ತಾಗದಂತೆ ಇನ್ನೊಬ್ಬರಿಗೆ ನೆರವಾಗುವ ಪಕ್ಕದ ಮನೆಯ ಚೋಮಜ್ಜನಲ್ಲೂ ಇದೆ.
ಅವು ಮುಖಪುಟದ ಸುದ್ದಿಯಾಗದೇ ಇರಬಹುದು. ಆದರೆ ಇಂದು ಸಮಾಜವನ್ನು ಉಳಿಸಿಕೊಂಡಿರುವುದು ಬಹುಶಃ ಅವೇ.
ಇವೆಲ್ಲವೂ ಈ ಕ್ಷಣಕ್ಕೆ ನನ್ನೊಳಗೆ ನೆನಪಾಗುವುದಕ್ಕೆ ಒಂದು ಕಾರಣವಿದೆ. ಕಳೆದ ರವಿವಾರ ನಾನು ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಮಳೆಗಾಲದ ಮಧ್ಯೆ, ಪರಿಷತ್ತಿನ ಶಕ್ತಿ ಕೇಂದ್ರದ ಯಾವುದೇ ಅನುದಾನವಿಲ್ಲದೆ, ಕೇವಲ ಇಪ್ಪತ್ತು ದಿನಗಳ ಸಿದ್ಧತೆಯಲ್ಲಿ ನಡೆದ ಆ ಸಾಹಿತ್ಯ ಸಮ್ಮೇಳನವನ್ನು ನಾನೇ ಉದ್ಘಾಟಿಸಿದ್ದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಸಾಹಿತ್ಯಾಸಕ್ತರು, ಹಿರಿಯ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಶಿಕ್ಷಕರು ಅಲ್ಲಿ ಸೇರಿದ್ದರು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಸುರೇಂದ್ರ ಶೆಣೈ ಸರ್ವಾಧ್ಯಕ್ಷರಾಗಿದ್ದರು. ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ಗಣಪತಿ ಭಟ್ ಸಮಾರೋಪ ಭಾಷಣಕ್ಕೆ ನಿಯೋಜಿತರಾಗಿದ್ದರು. ಮಾಧ್ಯಮದ ಕುರಿತು ವಿಚಾರಗೋಷ್ಠಿ, ಕವಿಗೋಷ್ಠಿ, ಸಾಹಿತ್ಯಿಕ ಸಂವಾದಗಳು, ಶಾಸ್ತ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆಲ್ಲ ಸೇರಿ ಒಂದು ಹದವಾದ ಸಾಹಿತ್ಯಿಕ ವಾತಾವರಣವನ್ನು ನಿರ್ಮಿಸಿದ್ದವು.
ಆದರೆ ಆ ದಿನದ ಕೊನೆಯಲ್ಲಿ ಸಮಾಜ ನೆನಪಿಟ್ಟುಕೊಂಡದ್ದು ಏನನ್ನು? ಇಡೀ ದಿನ ನಡೆದ ಸಾಹಿತ್ಯಿಕ ಚರ್ಚೆಗಳನ್ನಲ್ಲ. ಹಿರಿಯ ವಿದ್ವಾಂಸರ ವಿಚಾರಗಳನ್ನಲ್ಲ. ಸಾಹಿತ್ಯಾಸಕ್ತರ ಭಾಗವಹಿಸುವಿಕೆಯನ್ನಲ್ಲ. ಒಬ್ಬ ವಿದ್ಯಾರ್ಥಿನಿ ಅನಿರೀಕ್ಷಿತವಾಗಿ ನೀಡಿದ ಎರಡೂವರೆ ನಿಮಿಷಗಳ ಕಾರ್ಯಕ್ರಮವನ್ನು. ಅದು ಆ ವೇದಿಕೆಗೆ ಸೂಕ್ತವಾಗಿರಲಿಲ್ಲ ಎನ್ನುವುದು ಬೇರೆ ವಿಷಯ. ಅದನ್ನು ಟೀಕಿಸುವವರ ವಾದದಲ್ಲೂ ಉತ್ತಮ ಅಂಶಗಳಿರಬಹುದು. ಆದರೆ ನನ್ನನ್ನು ಕಾಡಿದ ಪ್ರಶ್ನೆ ಬೇರೆ. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಎಂಟು ಗಂಟೆಗಳ ಬೌದ್ಧಿಕ ಚಿಂತನೆಗಿಂತ ಆ ಎರಡೂವರೆ ನಿಮಿಷಗಳು ಮಾತ್ರ ಯಾಕೆ ನಮ್ಮ ಗಮನ ಸೆಳೆದವು?
ಉತ್ತರ ಬಹುಶಃ ಈ ಲೇಖನದ ಆರಂಭದಲ್ಲಿಯೇ ಅಡಗಿದೆ.
ನಮ್ಮ ಗಮನ ಸಹಜವಾಗಿ ವಿವಾದದ ಕಡೆಗೆ ಓಡುತ್ತದೆ. ಕತ್ತಲೆಯ ಕಡೆಗೆ ಸೆಳೆಯಲ್ಪಡುತ್ತದೆ. ಹೂವಿಗಿಂತ ಮುಳ್ಳು ಮೊದಲು ಕಾಣುತ್ತದೆ. ಸಾವಿರ ಒಳ್ಳೆಯ ಸಂಗತಿಗಳ ನಡುವೆ ಒಂದು ಎಡವಟ್ಟು ನಡೆದರೆ ನಮ್ಮ ಕಣ್ಣು ನೇರವಾಗಿ ಅದರ ಮೇಲೆಯೇ ನೆಟ್ಟಗಾಗುತ್ತದೆ. ಕುಂದಾಪುರದ ಸಾಹಿತ್ಯ ಸಮ್ಮೇಳನದಲ್ಲಿ ನಡೆದದ್ದು ಅದೇ. ನಮ್ಮ ಸುದ್ದಿ ದಾರಿಗಳಲ್ಲಿ ನಡೆಯುತ್ತಿರುವುದೂ ಅದೇ.
ನಮ್ಮ ಮೊಬೈಲ್ ಪರದೆಗಳಲ್ಲಿ ನಡೆಯುತ್ತಿರುವುದೂ ಅದೇ.
ಕೆಲವೊಮ್ಮೆ ಜಗತ್ತು ಕೆಟ್ಟದ್ದರಿಂದ ತುಂಬಿಲ್ಲ. ನಾವು ಕೆಟ್ಟದ್ದನ್ನು ಹುಡುಕುವಲ್ಲಿ ಬಹಳ ಪರಿಣತರಾಗಿದ್ದೇವೆ ಅನಿಸುತ್ತದೆ. ಆದ್ದರಿಂದಲೇ ಬೆಳಗಿನ ಪತ್ರಿಕೆಯ ಮೇಲೆ ಕೆಂಪು ಗೆರೆಗಳನ್ನು ಎಳೆಯುವ ಆ ಪ್ರಯೋಗವನ್ನು ಒಮ್ಮೆ ಮಾಡಬೇಕು ಎಂದು ನನಗೆ ಅನ್ನಿಸುತ್ತದೆ. ಆಗ ಬಹುಶಃ ಮತ್ತೊಂದು ಪ್ರಶ್ನೆಯೂ ಹುಟ್ಟಬಹುದು. ಇಷ್ಟೊಂದು ಕೆಂಪು ಶಾಯಿಯ ನಡುವೆ ಸಮಾಜ ಇನ್ನೂ ಉಳಿದಿದೆಯಲ್ಲ, ಅದು ಹೇಗೆ? ಅದು ಯಾವುದರ ಬಲದಿಂದ? ಅದು ವಾಹಿನಿ-ಪತ್ರಿಕೆಯ ಮೊದಲ ಪುಟ- ಪರದೆಗಳಿಂದಲ್ಲ, ಅದು ಪ್ರತಿದಿನ ಸುದ್ದಿಯಾಗದೆ ಉಳಿಯುವ ಲಕ್ಷಾಂತರ ಒಳ್ಳೆಯ ಮನುಷ್ಯರ ಬದುಕಿನಲ್ಲಿ ಸಿಗುತ್ತದೆ!






