ನಾವು ತಿನ್ನುವ ಹಣ್ಣಿನ ಹಿಂದೆ ಒಬ್ಬ ಮನುಷ್ಯನಿರುತ್ತಾನೆ!

ಇಂದು ನಾವು ಸುಲಭವಾಗಿ ರಂಬುಟಾನ್, ಮ್ಯಾಂಗೋಸ್ಟೀನ್, ಲಾಂಗನ್ ಫ್ರೂಟ್ ತೋಟಗಳನ್ನು ನೋಡಿ ಮೆಚ್ಚುತ್ತಿದ್ದೇವೆ. ಆದರೆ ಮುಂದಿನ ಸಲ ಈ ಹಣ್ಣುಗಳಲ್ಲಿ ಯಾವುದನ್ನಾದರೂ ಕೈಗೆತ್ತಿಕೊಂಡಾಗ ಒಂದು ಕ್ಷಣ ಅದರ ರುಚಿಯ ಬಗ್ಗೆ ಯೋಚಿಸುವ ಮೊದಲು ಅದರ ಬೇರುಗಳ ಬಗ್ಗೆ ಯೋಚಿಸುವ. ಆ ಬೇರುಗಳು ಕೇವಲ ಮಣ್ಣಿನೊಳಗೆ ಮಾತ್ರ ಇರುವುದಿಲ್ಲ. ಅವು ಕೆಲವರ ಕನಸುಗಳಲ್ಲಿ ಇರುತ್ತವೆ. ಕೆಲವರ ವೈಫಲ್ಯಗಳಲ್ಲಿ ಇರುತ್ತವೆ. ಕೆಲವರ ಹಠದಲ್ಲಿ ಇರುತ್ತವೆ. ಕೆಲವರ ಜೀವಮಾನವಿಡೀ ಮಾಡಿದ ಮೌನ ಸಾಧನೆಯಲ್ಲಿ ಇರುತ್ತವೆ. ನಾವು ತಿನ್ನುವ ಪ್ರತಿಯೊಂದು ಹಣ್ಣಿನ ಹಿಂದೆ ಒಂದು ಮರ ಇರುತ್ತದೆ. ಪ್ರತಿಯೊಂದು ಮರದ ಹಿಂದೆ ಒಂದು ಬೀಜ ಇರುತ್ತದೆ. ಪ್ರತಿಯೊಂದು ಬೀಜದ ಹಿಂದೆ ಒಬ್ಬ ಮನುಷ್ಯ ಇರುತ್ತಾನೆ. ಆ ಮನುಷ್ಯನನ್ನು ನೆನಪಿಟ್ಟುಕೊಳ್ಳುವುದು ಕೂಡ ಒಂದು ಸಂಸ್ಕೃತಿಯ ಲಕ್ಷಣ.
ನಮ್ಮ ಕರ್ನಾಟಕ, ಅದರಾಚೆ ಕೇರಳ-ತಮಿಳುನಾಡು ಹೆದ್ದಾರಿಗಳಲ್ಲಿ ಒಮ್ಮೆ ನಿಧಾನವಾಗಿ ಸಾಗಿ ನೋಡಿ. ಅಲ್ಲಿಲ್ಲಿ, ಕೆಲವೊಂದು ಕಡೆ ಎರಡೂ ಬದಿಗಳಲ್ಲಿ ಈಗ ಬಣ್ಣಬಣ್ಣದ ಹಣ್ಣುಗಳ ರಾಶಿ ನಿಮ್ಮ ಕಣ್ಣಿಗೆ ಸುಲಭವಾಗಿ ಬೀಳುತ್ತದೆ. ಕೆಂಪು ಮುಳ್ಳಿನ ರಂಬುಟಾನ್, ನೇರಳೆ ಬಣ್ಣದ ಮ್ಯಾಂಗೋಸ್ಟೀನ್, ಗುಲಾಬಿ ಸಿಪ್ಪೆಯ ಡ್ರ್ಯಾಗನ್ ಫ್ರೂಟ್, ಅನಾನಸು, ಲಾಂಗನ್... ಒಂದು ಕಾಲದಲ್ಲಿ ಹೆಸರೇ ಕೇಳದ ಕೆಲವು ಹಣ್ಣುಗಳು ಇಂದು ರಸ್ತೆ ಬದಿಯಲ್ಲಿ ತೂಗಾಡುತ್ತಿವೆ. ಇನ್ನೂ ಸ್ವಲ್ಪ ಒಳಗೆ ಹಳ್ಳಿಗಳ ಕಡೆ ತಿರುಗಿ ಹೋದರೆ ಬಹುತೇಕ ರೈತರ ತೋಟಗಳಲ್ಲಿ ಎರಡರಿಂದ ನಾಲ್ಕು ಗಿಡಗಳು ಮನೆ ಬಳಕೆಗೆಂದೇ ಬೆಳೆದಿರುವುದು ಕಾಣುತ್ತವೆ. ಕೆಲವರು ಹತ್ತಾರು ಎಕರೆಗಳಲ್ಲಿ ಬೆಳೆದಿದ್ದಾರೆ. ಇನ್ನೂ ಕೆಲವರು ನೂರಾರು ಎಕರೆಗಳಲ್ಲಿ ಇದೇ ಕೃಷಿಯನ್ನು ವಿಸ್ತರಿಸುತ್ತಿದ್ದಾರೆ. ಬೆಳಗ್ಗೆ ಮರದಿಂದ ಕೊಯ್ದ ತಾಜಾ ಹಣ್ಣು ಸಂಜೆ ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಕೆಲವರು ತಾವೇ ಮಾರುಕಟ್ಟೆಗೆ ಒಯ್ಯುತ್ತಾರೆ. ಕೆಲವರು ಕೇರಳದ ದಲ್ಲಾಳಿಗಳ ಮೂಲಕ ಉತ್ತರ ಭಾರತದ ಮಾರುಕಟ್ಟೆಗೆ ಟನ್‌ಗಟ್ಟಲೆ ಕಳುಹಿಸುತ್ತಿದ್ದಾರೆ.
ಇದು ಇಪ್ಪತ್ತು ವರ್ಷದ ಹಿಂದಿನ ಕರಾವಳಿಯಲ್ಲ. ದಶಕದ ಹಿಂದೆ ಇಲ್ಲಿ ಈ ದೃಶ್ಯ ಇರಲಿಲ್ಲ. ಆಗ ರಂಬುಟಾನ್ ಎನ್ನುವ ಹೆಸರೇ ಜನರಿಗೆ ಹೊಸದು. ಮ್ಯಾಂಗೋಸ್ಟೀನ್ ಎಂದರೆ ಅದು ಯಾವ ದೇಶದ ಹಣ್ಣು ಎಂದು ಕೇಳುತ್ತಿದ್ದರು. ಡ್ರ್ಯಾಗನ್ ಫ್ರೂಟ್ ಕಂಡವರು ಅದನ್ನು ಹಣ್ಣೋ, ಹೂವೋ ಎಂದು ಆಶ್ಚರ್ಯ ಪಡುತ್ತಿದ್ದರು. ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಡಿಕೆಯ ಭವಿಷ್ಯದ ಬಗ್ಗೆ ಕಳವಳ ಹೆಚ್ಚಾದಂತೆ ಕರಾವಳಿ ಮಲೆನಾಡಿನ ರೈತ ಹೊಸ ಬೆಳೆಗಳ ಬಗ್ಗೆ ಯೋಚಿಸುತ್ತಿದ್ದಾನೆ. ಕಡಿಮೆ ನೀರಿನಲ್ಲಿ ಹೆಚ್ಚು ಆದಾಯ ತರುವ ಬೆಳೆಗಳ ಕಡೆ ಅವನ ದೃಷ್ಟಿ ತಿರುಗಿದೆ. ಪರ್ಯಾಯ ಬೆಳೆಗಳ ಹುಡುಕಾಟವೂ ಹೆಚ್ಚಾಗಿದೆ. ಅದಕ್ಕಾಗಿ ಕೆಲವರು ಗುಡ್ಡದ ಮೇಲಿದ್ದ ಗೇರು, ರಬ್ಬರ್ ಕಾಡನ್ನೇ ಕಡಿದು ಸಮತಟ್ಟು ಮಾಡಿ ರಂಬುಟಾನ್ ತೋಟ ಮಾಡಿದ್ದಾರೆ. ಕೆಲವರು ಡ್ರ್ಯಾಗನ್ ಫ್ರೂಟ್‌ನ ಸಾಲುಗಳನ್ನು ಬೆಟ್ಟದ ಇಳಿಜಾರಿನಲ್ಲೇ ಅಡ್ಡಡ್ಡ ನೆಟ್ಟಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ. ರೈತ ತನ್ನ ಕಾಲದೊಂದಿಗೆ ನಡೆಯಲೇಬೇಕು. ಆದರೆ ಮುಂದೆ ಇಷ್ಟೊಂದು ಹಣ್ಣು ಸ್ಥಳೀಯವಾಗಿ ಬಿಕರಿಯಾಗದಿದ್ದರೆ ಮಾರಾಟ ಮಾಡುವುದಾದರೂ ಎಲ್ಲಿ? ಇವುಗಳ ಆಕರ್ಷಣೆಯಿಂದ ನಮ್ಮ ಸಾಂಪ್ರದಾಯಿಕ ಹಣ್ಣುಗಳ ಬಳಕೆಯಲ್ಲಾಗುವ ಬದಲಾವಣೆಗಳೇನು? ಅದಕ್ಕಿಂತಲೂ ಹೆಚ್ಚು ಇಂಥ ಹೊಸ ರೂಪ, ಬಣ್ಣ, ಆಕಾರ ರುಚಿಯ ಈ ಹಣ್ಣುಗಳು ಒಮ್ಮೆಲೇ ನಮ್ಮ ಮಣ್ಣಿಗೆ ಬಂದದ್ದಾದರೂ ಹೇಗೆ?
ನಮಗಿಂದು ಈ ನವೀನ ಹಣ್ಣಿನ ಬೆಲೆ ಗೊತ್ತಿದೆ, ತಿನ್ನುವ ವಿಧಾನ ಗೊತ್ತಿದೆ, ಯಾವ ನರ್ಸರಿಯಲ್ಲಿ ಗಿಡ ಸಿಗುತ್ತದೆ ಎಂಬುದೂ ಗೊತ್ತಿದೆ. ಯಾವ ತಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತೇವೆ, ಆದರೆ ಇದರ ಮೊದಲ ಗಿಡವನ್ನು ಈ ಮಣ್ಣಿನಲ್ಲಿ ನೆಟ್ಟವರು ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಮಾತ್ರ ಇಲ್ಲ. ಕೆಲವು ದಿನಗಳ ಹಿಂದೆ ನಾನು ನನ್ನ ಮನೆಯಲ್ಲಿರುವ ಲಾಂಗಸಾಟ್ ಮರದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ತಂದು ನೆಟ್ಟ ಗಿಡ ಅದು. ಈಗ ಮಾಲೆಮಾಲೆಯಾಗಿ ಗೊಂಚಲು ಗೊಂಚಲಾಗಿ ಹಣ್ಣು ಬಿಡುತ್ತಿದೆ. ಮರುದಿನವೇ ಉಜಿರೆಯ ನಿತಿನ್ ಎನ್ನುವ ಕೃಷಿಕ ಸ್ನೇಹಿತರು ಕರೆ ಮಾಡಿ ‘‘ಸರ್, ಆ ಗಿಡವನ್ನು ನೋಡಬೇಕು. ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದೇ? ಅದಕ್ಕೆ ಮಾರುಕಟ್ಟೆ ಇದೆಯೇ?’’ ಎಂದು ಕೇಳಿದರು. ಅವರ ಪ್ರಶ್ನೆ ನನಗೆ ತುಂಬ ಸಹಜವೆನಿಸಿತು. ಹೊಸ ಹಣ್ಣನ್ನು ಮೊದಲ ಸಲ ಕಂಡಾಗ ಸಾಮಾನ್ಯ ಮನುಷ್ಯ ಅದರ ರುಚಿಯ ಬಗ್ಗೆ ಯೋಚಿಸುತ್ತಾನೆ. ಬೆಳೆದ ರೈತ ಅದರ ಮಾರುಕಟ್ಟೆಯ ಬಗ್ಗೆ ಯೋಚಿಸುತ್ತಾನೆ. ವ್ಯಾಪಾರಿ ಅದರ ಲಾಭದ ಬಗ್ಗೆ ಯೋಚಿಸುತ್ತಾನೆ. ನಿಜವಾಗಿಯೂ ಇವರೆಲ್ಲರೂ ಸೇರಿ ಇಡೀ ಸಮಾಜ ಅದರ ಇತಿಹಾಸದ ಬಗ್ಗೆ ಮಾತ್ರ ಯೋಚಿಸಬೇಕು. ಯಾಕೆಂದರೆ ಪ್ರತಿಯೊಂದು ಹಣ್ಣಿಗೂ ಒಂದು ವಂಶಾವಳಿ ಇರುತ್ತದೆ. ಪ್ರತಿಯೊಂದು ಗಿಡಕ್ಕೂ ಒಂದು ಪ್ರಯಾಣ ಇರುತ್ತದೆ. ಪ್ರತಿಯೊಂದು ತೋಟದ ಹಿಂದೆ ಒಬ್ಬ ಕನಸುಗಾರ ಇದ್ದೇ ಇರುತ್ತಾನೆ.
ನಾವು ಇಂದು ರಸ್ತೆ ಬದಿಯಲ್ಲಿ ನಿಂತು ರಂಬುಟಾನ್ ಕೊಳ್ಳುವಾಗ ಅದರ ಹಿಂದೆ ಎಷ್ಟು ವರ್ಷಗಳ ತಾಳ್ಮೆ ಇದೆ ಎಂಬುದನ್ನು ಊಹಿಸುವುದಿಲ್ಲ. ಮ್ಯಾಂಗೋಸ್ಟೀನ್ ಹಣ್ಣಿನ ಸಿಪ್ಪೆ ತೆಗೆದು ತಿನ್ನುವಾಗ ಅದನ್ನು ಮೊದಲ ಬಾರಿಗೆ ಈ ಮಣ್ಣಿನಲ್ಲಿ ಬೆಳೆಸಲು ಎಷ್ಟು ಪ್ರಯೋಗಗಳು ನಡೆದಿರಬಹುದು ಎಂದು ಯೋಚಿಸುವುದಿಲ್ಲ. ಡ್ರ್ಯಾಗನ್ ಫ್ರೂಟ್ ತೋಟವನ್ನು ನೋಡಿ ಫೋಟೊ ತೆಗೆದು ಸ್ಟೇಟಸ್‌ಗೆ ಏರಿಸುತ್ತೇವೆ. ಆದರೆ ಈ ಮಣ್ಣಿನಲ್ಲಿ ಅದು ಬದುಕಬಹುದೇ ಎಂದು ಮೊದಲು ಅನುಮಾನಪಟ್ಟವರನ್ನು ನೆನಪಿಸಿಕೊಳ್ಳುವುದಿಲ್ಲ.ಕೃಷಿಯಲ್ಲಿ ಬಹಳ ವಿಚಿತ್ರ ಸಂಗತಿಯೊಂದಿದೆ. ಯಶಸ್ಸು ಎಲ್ಲರಿಗೂ ಕಾಣುತ್ತದೆ; ಆದರೆ ಆರಂಭದ ಹೋರಾಟ, ಮಣ್ಣಿನಲ್ಲಿ ಬಿದ್ದದ್ದು ಎದ್ದದ್ದು ಕಳೆದುಕೊಂಡದ್ದು ಯಾರಿಗೂ ಕಾಣುವುದಿಲ್ಲ!
ಇಂದು ಒಂದು ಹಣ್ಣು ಜನಪ್ರಿಯವಾದರೆ ಸಾವಿರಾರು ಗಿಡಗಳು ಮಾರಾಟವಾಗುತ್ತವೆ. ನೂರಾರು ರೈತರು ಅದನ್ನು ಬೆಳೆಯುತ್ತಾರೆ. ನಗರದ ಮಂದಿ ಕೈಗೆಟಕುವ ಬಾಲ್ಕನಿಯಲ್ಲಾದರೂ ಒಂದು ಗಿಡ ಬೆಳೆಯಲು ಪ್ರಯತ್ನಿಸುತ್ತಾರೆ. ನಿಧಾನವಾಗಿ ಮಾರುಕಟ್ಟೆ ತಾನೇ ಹುಟ್ಟಿಕೊಳ್ಳುತ್ತದೆ. ಆದರೆ ಮೊದಲ ಗಿಡವನ್ನು ನೆಟ್ಟ ಮನುಷ್ಯನಿಗೆ ಮಾರುಕಟ್ಟೆ ಇರಲಿಲ್ಲವಲ್ಲ? ಅವನ ಬಳಿ ಇದ್ದದ್ದು ಕೇವಲ ನಂಬಿಕೆ. ಪ್ರಪಂಚದ ಯಾವುದೋ ಮೂಲೆಯ ಗಿಡ ನಮ್ಮ ಮಣ್ಣಿನಲ್ಲಿ ಬೆಳೆಯುತ್ತದೆ, ಒಂದಲ್ಲಾ ಒಂದು ದಿನ ಅದು ಹಣ್ಣು ಬಿಡುತ್ತದೆ ಎನ್ನುವ ನಂಬಿಕೆ. ಕೃಷಿಯ ಇತಿಹಾಸದಲ್ಲಿ ಇಂತಹ ನಂಬಿಕೆಯ ಮನುಷ್ಯರೇ ನಿಜವಾದ ಮೂಲಪುರುಷರು. ದುರದೃಷ್ಟವೆಂದರೆ ನಾವು ಅವರ ಹೆಸರನ್ನು ನೆನಪಿಟ್ಟುಕೊಳ್ಳುವುದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬನ್ನಡ್ಕಕ್ಕೆ ಹೋದಾಗಲೆಲ್ಲ ನನಗೆ ಸೋನ್ಸ್ ಫಾರ್ಮ್ ಕೇವಲ ಒಂದು ತೋಟವಾಗಿ ಕಾಣುವುದಿಲ್ಲ. ಅದು ಒಂದು ಕೃಷಿ ಸಂಗ್ರಹಾಲಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಒಬ್ಬ ಮನುಷ್ಯನ ಹಠ, ತಾಳ್ಮೆ ಮತ್ತು ಕುತೂಹಲದ ಜೀವಂತ ದಾಖಲೆಯಾಗಿ ಕಾಣುತ್ತದೆ. ಶತಮಾನದ ಹೊಸ್ತಿಲಲ್ಲಿರುವ ಆ ತೋಟವನ್ನು 1928ರಲ್ಲಿ ಅಲ್ಫ್ರೆಡ್ ಸೋನ್ಸ್ ಆರಂಭಿಸಿದ್ದರು. ಆರಂಭದಲ್ಲಿ ಅದು ತೆಂಗಿನ ತೋಟ. ನಂತರ ಅನಾನಸು. ಮುಂದೆ ಬನ್ನಡ್ಕವನ್ನು ಈ ರಾಜ್ಯದ ಕೃಷಿ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವರು ಡಾ. ಎಲ್.ಸಿ. ಸೋನ್ಸ್.
ನಮ್ಮಲ್ಲಿ ಬಹಳ ಜನರು ಕೃಷಿ ವಿಜ್ಞಾನಿಗಳನ್ನು ಪ್ರಯೋಗಾಲಯದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಊಹಿಸುತ್ತಾರೆ. ಆದರೆ ಡಾ. ಸೋನ್ಸ್ ಅವರ ನಿಜದ ಪ್ರಯೋಗಾಲಯ ಮಣ್ಣಾಗಿತ್ತು; ಸಂಶೋಧನಾ ಲೇಖನಗಳು ಗಿಡಮರಗಳಾಗಿದ್ದವು; ಅವರ ಸಾಧನೆಗೆ ಸಾಕ್ಷಿಯಾದದ್ದು ಇಂದು ಕರಾವಳಿಯಾದ್ಯಂತ ಕಾಣುವ ಸಾವಿರಾರು ಹಣ್ಣಿನ ತೋಟಗಳು.
ನನ್ನ ಪುಸ್ತಕಕ್ಕಾಗಿ ಅವರೊಂದಿಗೆ ದೀರ್ಘವಾಗಿ ಮಾತನಾಡುವ ಅವಕಾಶ ಒಮ್ಮೆ ದೊರಕಿತ್ತು. ಮಾತಿನ ಮಧ್ಯೆ ಅವರು ಹೇಳಿದ ಕೆಲವು ಪ್ರಸಂಗಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿವೆ. ಇವತ್ತು ವಿಮಾನದಲ್ಲಿ ವಿದೇಶದಿಂದ ಒಂದು ಗಿಡ ತರಿಸಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಅಂತರ್ಜಾಲದಲ್ಲಿ ಹಣ ಪಾವತಿಸಿದರೆ ಕೆಲವೇ ದಿನಗಳಲ್ಲಿ ಆ ಗಿಡ ಸುರಕ್ಷಿತವಾಗಿ ನಮ್ಮ ಮನೆ ಬಾಗಿಲಿಗೆ ಬರುತ್ತದೆ. ಆದರೆ ಐವತ್ತು-ಅರವತ್ತು ವರ್ಷಗಳ ಹಿಂದೆ ಅದು ಸಾಹಸವೇ ಆಗಿತ್ತು. ವಿದೇಶಗಳಿಗೆ ಹೋದಾಗ ಅವರು ಬರೀ ಒಂದು ಹಣ್ಣಿನ ರುಚಿ ನೋಡಿ ಹಿಂದಿರುಗುತ್ತಿರಲಿಲ್ಲ. ಆ ಗಿಡ ಯಾವ ಮಣ್ಣಿನಲ್ಲಿ ಬೆಳೆಯುತ್ತದೆ, ಎಷ್ಟು ಮಳೆ ಬೇಕು, ಯಾವ ತಾಪಮಾನ ಬೇಕು, ನಮ್ಮ ಕರಾವಳಿಯ ವಾತಾವರಣದಲ್ಲಿ ಅದು ಬದುಕಬಹುದೇ ಎಂಬ ಪ್ರಶ್ನೆಗಳೇ ಅವರನ್ನು ಕಾಡುತ್ತಿದ್ದವು. ಉತ್ತರ ಸಿಕ್ಕ ನಂತರ ದುಬಾರಿ ವೆಚ್ಚದಲ್ಲಿ ಗಿಡ ಅಥವಾ ಬೀಜಗಳನ್ನು ವಿಮಾನದಲ್ಲಿ ತರಿಸುತ್ತಿದ್ದರು. ಕೆಲವು ಬಾರಿ ಹಡಗಿನಲ್ಲಿ ಬರುತ್ತಿದ್ದವು. ಆ ಕಾಲದಲ್ಲಿ ಮದ್ರಾಸು ಬಂದರಿಗೆ ಅಥವಾ ವಿಮಾನ ನಿಲ್ದಾಣಕ್ಕೆ ಹೋಗಿ ಅವುಗಳನ್ನು ಬಿಡಿಸಿಕೊಂಡು ಬರುವುದು ಒಂದು ಪ್ರತ್ಯೇಕ ಯಾತ್ರೆಯೇ ಆಗಿತ್ತು. ಪ್ರತಿಯೊಂದಕ್ಕೂ ಕಟ್ಟುನಿಟ್ಟಿನ ನಿಯಮ ನಿಬಂಧನೆ. ಅವರು ನಗುತ್ತಲೇ ಹೇಳಿದ ಒಂದು ಮಾತು ನನಗೆ ನೆನಪಿದೆ. ‘‘ಗಿಡಗಳು ಮನೆ ತಲುಪುವಷ್ಟರಲ್ಲಿ ಅವು ನಮ್ಮ ತಾಳ್ಮೆಯನ್ನೇ ಪರೀಕ್ಷಿಸುತ್ತಿದ್ದವು’’ ಎಂದು.
ಪ್ರಯಾಣದ ಆಯಾಸಕ್ಕೆ ಕೆಲವು ಗಿಡಗಳು ಸಾಯುತ್ತಿದ್ದವು. ಹವಾಮಾನ ಬದಲಾವಣೆಗೆ ಕೆಲವು ತುತ್ತಾಗುತ್ತಿದ್ದವು. ಉಳಿದವುಗಳಲ್ಲಿ ಕೆಲವು ಮಾತ್ರ ಬೇರು ಬಿಡುತ್ತಿದ್ದವು. ಕೆಲವೊಮ್ಮೆ ವರ್ಷಗಳ ಶ್ರಮದ ನಂತರ ಬದುಕಿ ಉಳಿಯುತ್ತಿದ್ದದ್ದು ಒಂದೇ ಒಂದು ಗಿಡ. ಆದರೆ ಆ ಒಂದು ಗಿಡಕ್ಕಾಗಿ ಅವರು ನಿರಾಶರಾಗಲಿಲ್ಲ.
ಮೊದಲ ಹಣ್ಣು ಬಿಟ್ಟಾಗ ಅದನ್ನು ಮಾರುಕಟ್ಟೆಗೆ ಕಳುಹಿಸುವ ಆತುರ ಅವರಿಗಿರಲಿಲ್ಲ. ಆ ಹಣ್ಣಿನ ಬೀಜವನ್ನು ಉಳಿಸಬೇಕು ಎನ್ನುವುದೇ ಮೊದಲ ಯೋಚನೆ. ಬೆಳಗೆದ್ದು ಅವರು ತೋಟ ಸುತ್ತುತ್ತಿದ್ದದ್ದು ಕಾಗೆಯೋ, ಬಾವಲಿಯೋ ತಿಂದು ಕೆಳಗೆ ಬಿದ್ದ ಹಣ್ಣಿನ ಬೀಜಕ್ಕಾಗಿ. ಅವುಗಳನ್ನು ಎತ್ತಿಕೊಂಡು ಬಂದು ಪಾತಿ ಮಾಡುತ್ತಿದ್ದರು. ಒಂದರಿಂದ ಹತ್ತು ಗಿಡಗಳು, ಹತ್ತರಿಂದ ನೂರು, ನೂರರಿಂದ ಸಾವಿರ.ಇಂದು ನಾವು ನೋಡುತ್ತಿರುವ ಈ ರಾಜ್ಯದ ಅನೇಕ ರಂಬುಟಾನ್, ಮ್ಯಾಂಗೋಸ್ಟೀನ್ ತೋಟಗಳ ಬೇರುಕತೆಗಳು ಆರಂಭವಾಗುವುದು ಅಲ್ಲಿಂದಲೇ!
ಕೃಷಿಯಲ್ಲಿ ದೊಡ್ಡ ಕ್ರಾಂತಿಗಳು ಯಾವತ್ತೂ ದೊಡ್ಡ ಘೋಷಣೆ ಗಳಿಂದ ಆರಂಭವಾಗುವುದಿಲ್ಲ. ಅವು ಒಬ್ಬ ಮನುಷ್ಯನ ಕೈಯಲ್ಲಿ ಹಿಡಿದಿರುವ ಒಂದು ಪುಟ್ಟ ಬೀಜದಿಂದಲೇ ಆರಂಭವಾಗುತ್ತವೆ. ಇಂದು ರಂಬುಟಾನ್ ಹಣ್ಣಿನ ಬಗ್ಗೆ ಮಾತನಾಡುವವರು ಬಹಳ ಜನ. ಮ್ಯಾಂಗೋಸ್ಟೀನ್ ಮಾರುಕಟ್ಟೆಯ ಬಗ್ಗೆ ಲೆಕ್ಕ ಹಾಕುವವರು ನೂರಾರು ಜನ. ಡ್ರ್ಯಾಗನ್ ಫ್ರೂಟ್ ಬೆಳೆಸುವ ತರಬೇತಿ ಶಿಬಿರಗಳು ನಡೆಯುತ್ತಿವೆ. ಹಣ್ಣಿನ ನೂರಾರು ಮೇಳಗಳು ನಡೆಯುತ್ತಿವೆ. ನಾಟಿ ಹಣ್ಣುಗಳು ಮಾಲ್‌ಗೆ ಎಂಟ್ರಿ ಕೊಟ್ಟಿವೆ. ಆದರೆ ಇಂತಹ ಹಣ್ಣುಗಳು ಕರಾವಳಿಯ ಮಣ್ಣಿಗೆ ಮೊದಲ ಬಾರಿಗೆ ಬಂದಾಗ ಅವುಗಳ ಹಿಂದೆ ನಿಂತಿದ್ದ ಆ ಮನುಷ್ಯನನ್ನು ನೆನಪಿಸಿಕೊಳ್ಳುವವರು ವಿರಳ.
ಮಂಗಳೂರಿನ ಹಿರಿಯರಿಗೆ ಇನ್ನೂ ಒಂದು ಘಟನೆ ನೆನಪಿರಬೇಕು. ಅರ್ಧಶತಮಾನದ ಹಿಂದೆ ನಗರದ ಶಕ್ತಿ ಕೇಂದ್ರ ಹಂಪನಕಟ್ಟೆಯಲ್ಲಿ ನಾಲ್ಕೈದು ಮಂದಿ ಬುಟ್ಟಿಯಲ್ಲಿ ಸಪೋಟ ಹಣ್ಣುಗಳನ್ನು ಇಟ್ಟು ‘‘ಕಾಪುದ ಚಿಕ್ಕು... ಕಾಪುದ ಚಿಕ್ಕು...’’ ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದರು. ಆ ಸಪೋಟ ಬರುತ್ತಿದ್ದದ್ದು ಕಾಪುವಿನ ಮುದ್ದಣ್ಣ ಶೆಟ್ಟಿಯವರ ಕಾಳಾವರದ ತೋಟದಿಂದ. ಆ ಕಾಲದಲ್ಲಿ ಅಪರೂಪದ ಹಣ್ಣುಗಳನ್ನು ಬೆಳೆಸುವುದು, ಕಸಿ ಕಟ್ಟುವುದು, ಹೊಸ ತಳಿಗಳನ್ನು ಸೃಷ್ಟಿಸುವುದು ಅವರ ವಿಶೇಷತೆ. ಅವರ ಕೃಷಿ ನೈಪುಣ್ಯತೆಯನ್ನು ಕಂಡು ಬ್ರಿಟಿಷ್ ಜಿಲ್ಲಾಧಿಕಾರಿಯೊಬ್ಬರು ಕುಂದಾಪುರದ ಕಾಳಾವರದಲ್ಲಿ ನೂರಾರು ಎಕರೆ ಜಾಗವನ್ನು ಅವರಿಗೆ ಉಚಿತವಾಗಿ ನೀಡಿದರೆಂದು ಹಿರಿಯರು ಹೇಳುತ್ತಾರೆ. ಅವರ ಜೊತೆಗೆ ನಮ್ಮ ಪ್ರಯೋಗಶೀಲ ಸಾಹಿತಿ ಶಿವರಾಮ ಕಾರಂತರ ಕುಟುಂಬದವರೂ ಕೃಷಿಯ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದರು. ಅವರಣ್ಣ ಕೋಟ ಲಕ್ಷ್ಮೀನಾರಾಯಣ ಕಾರಂತರು ಮುದ್ದಣ್ಣ ಶೆಟ್ಟಿಯವರೊಂದಿಗೆ ಸೇರಿ ಕಸಿ ಕಟ್ಟುತ್ತಿದ್ದರು, ಅಪರೂಪದ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದರು, ರಸ್ತೆ ಬದಿಯಲ್ಲಿ ಸಾಲುಗಿಡಗಳನ್ನು ನೆಡುತ್ತಿದ್ದರು. ಇಂದಿಗೂ ಕುಂದಾಪುರದ ಒಳಪೇಟೆಯ ಕೆಲವು ಹಳೆಯ ಮರಗಳ ಬಗ್ಗೆ ಹಿರಿಯರು ಮಾತನಾಡುವಾಗ ಅವರ ಹೆಸರನ್ನು ಗೌರವದಿಂದ ಉಲ್ಲೇಖಿಸುತ್ತಾರೆ.
ಈ ಕಥೆಗಳು ನಮಗೆ ಯಾವಾಗಲೂ ಒಂದು ಸಂಗತಿಯನ್ನು ನೆನಪಿಸುತ್ತವೆ. ನಾವು ಯಾರೋ ನೆಟ್ಟ ಸಾಲುಮರದ ನೆರಳಲ್ಲಿ ನಿಂತು ವಿಶ್ರಾಂತಿ ಪಡೆಯುತ್ತೇವೆ. ಯಾರೋ ನೆಟ್ಟ ಮಾವಿನ ಮರದ ಕೆಳಗೆ ಬಿದ್ದ ಹಣ್ಣನ್ನು ಎತ್ತಿ ತಿನ್ನುತ್ತೇವೆ. ಯಾರೋ ಉಳಿಸಿಕೊಂಡ ತಳಿಯಿಂದ ಗಿಡ ಖರೀದಿಸಿ ನಮ್ಮ ತೋಟದಲ್ಲಿ ನೆಡುತ್ತೇವೆ. ಆದರೆ ಆ ‘ಯಾರೋ’ ಯಾರು ಎಂಬ ಪ್ರಶ್ನೆಯನ್ನು ಮಾತ್ರ ಯಾರೂ ಕೇಳುವುದಿಲ್ಲ. ಇದು ಕೃಷಿಯ ದೊಡ್ಡ ದುರಂತ.
ಇಂದು ವಿಶ್ವವಿದ್ಯಾನಿಲಯಗಳು ಕೃಷಿ ಶಿಕ್ಷಣ ಕೊಡುತ್ತವೆ. ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ. ಕೇರಳದ ರೈತರಂತೂ ಎಷ್ಟು ಮುಂದುವರಿದಿದ್ದಾರೆ ಎಂದರೆ ರಂಬುಟಾನಿನ ಸಿಪ್ಪೆ ತೆಗೆದು ತಿರುಳನ್ನಷ್ಟೇ ಫ್ರಿಡ್ಜಲ್ಲಿಟ್ಟು ಬೇಕಾದಾಗ ತಿನ್ನುವ, ಮಾರುವ ಮೌಲ್ಯವರ್ಧನೆಯ ವಿಧಾನಗಳನ್ನು ಶುರುವಿತ್ತಿದ್ದಾರೆ. ಅದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಅಪರೂಪದ ತಳಿಗಳನ್ನು ಉಳಿಸುವಲ್ಲಿ, ಹೊಸ ಗಿಡಗಳನ್ನು ಮೊದಲ ಬಾರಿಗೆ ತಮ್ಮ ಹೊಲದಲ್ಲಿ ಬೆಳೆಸುವಲ್ಲಿ, ವಿಫಲವಾದರೂ ಮತ್ತೆ ಮತ್ತೆ ಪ್ರಯತ್ನಿಸುವಲ್ಲಿ ನಮ್ಮ ಹಿರಿಯ ರೈತರ ಪಾತ್ರವನ್ನು ನಾವು ಇನ್ನೂ ಸರಿಯಾಗಿ ದಾಖಲಿಸಿಲ್ಲ. ಕರಾವಳಿಯ ಹಣ್ಣಿನ ಇತಿಹಾಸ ಬರೆಯಬೇಕಾದರೆ ಅದರಲ್ಲಿ ಡಾ. ಎಲ್.ಸಿ. ಸೋನ್ಸ್ ಅವರ ಹೆಸರಿನ ಜೊತೆಗೆ ಮುದ್ದಣ್ಣ ಶೆಟ್ಟಿ, ಲಕ್ಷ್ಮೀನಾರಾಯಣ ಕಾರಂತರು ಮತ್ತು ಇನ್ನೂ ಹೆಸರೇ ದಾಖಲಾಗದ ಅನೇಕ ಅಜ್ಞಾತ ರೈತರ ಹೆಸರನ್ನೂ ಬರೆಯಲೇಬೇಕು. ಯಾಕೆಂದರೆ ಅವರು ಕೇವಲ ಗಿಡಗಳನ್ನು ಬೆಳೆಸಲಿಲ್ಲ; ಒಂದು ಪ್ರದೇಶದ ಆಹಾರ ಸಂಸ್ಕೃತಿಯನ್ನೇ ಬದಲಾಯಿಸಿದರು. ಇಂದು ನಮ್ಮ ಮಕ್ಕಳಿಗೆ ರಂಬುಟಾನ್ ಹೊಸ ಹಣ್ಣು ಅಲ್ಲ. ಮ್ಯಾಂಗೋಸ್ಟೀನ್ ಅಪರೂಪವೂ ಅಲ್ಲ. ಡ್ರ್ಯಾಗನ್ - ಲಾಂಗನ್ ಎಂದರೆ ಕುತೂಹಲವೂ ಇಲ್ಲ. ಈ ಸಹಜತೆಯ ಹಿಂದೆ ಎಷ್ಟೊಂದು ಶ್ರಮ ಅಡಗಿದೆ ಎಂಬುದನ್ನು ಮಾತ್ರ ನಾವು ಮರೆಯುತ್ತಿದ್ದೇವೆ.
ಇಂದು ಹಲಸು, ಮಾವೂ ಸೇರಿ ರಾಜ್ಯದಾದ್ಯಂತ ಸಾಲು ಸಾಲು ಹಣ್ಣಿನ ಮೇಳಗಳು ನಡೆಯುತ್ತಿವೆ, ಮೌಲ್ಯವರ್ಧನೆ ಕುರಿತು ನೂರಾರು ವಿಚಾರಗೋಷ್ಠಿಗಳು ನಡೆಯುತ್ತಿವೆ. ಆದರೆ ಈ ಹಣ್ಣುಗಳನ್ನು ನಮ್ಮ ಮಣ್ಣಿಗೆ ತಂದವರನ್ನು ಸ್ಮರಿಸುವ ಸಂಸ್ಕೃತಿ ಯಾಕೆ ಬೆಳೆದಿಲ್ಲ ಎನ್ನುವ ಪ್ರಶ್ನೆ ಕೂಡ ಅಷ್ಟೇ ದೊಡ್ಡದು.
ಕೃಷಿ ಎಂದರೆ ಕೇವಲ ಉತ್ಪಾದನೆಯಲ್ಲ. ಕೃಷಿ ಎಂದರೆ ಒಂದು ನೆನಪು. ಕೃಷಿ ಎಂದರೆ ತಾಳ್ಮೆ. ಕೃಷಿ ಎಂದರೆ ಒಂದು ತಲೆಮಾರಿನ ಕನಸನ್ನು ಮತ್ತೊಂದು ತಲೆಮಾರಿಗೆ ಹಸ್ತಾಂತರಿಸುವ ಸಂಸ್ಕೃತಿ. ಇಂದು ನಾವು ಸುಲಭವಾಗಿ ರಂಬುಟಾನ್, ಮ್ಯಾಂಗೋಸ್ಟೀನ್, ಲಾಂಗನ್ ಫ್ರೂಟ್ ತೋಟಗಳನ್ನು ನೋಡಿ ಮೆಚ್ಚುತ್ತಿದ್ದೇವೆ. ಆದರೆ ಮುಂದಿನ ಸಲ ಈ ಹಣ್ಣುಗಳಲ್ಲಿ ಯಾವುದನ್ನಾದರೂ ಕೈಗೆತ್ತಿಕೊಂಡಾಗ ಒಂದು ಕ್ಷಣ ಅದರ ರುಚಿಯ ಬಗ್ಗೆ ಯೋಚಿಸುವ ಮೊದಲು ಅದರ ಬೇರುಗಳ ಬಗ್ಗೆ ಯೋಚಿಸುವ. ಆ ಬೇರುಗಳು ಕೇವಲ ಮಣ್ಣಿನೊಳಗೆ ಮಾತ್ರ ಇರುವುದಿಲ್ಲ. ಅವು ಕೆಲವರ ಕನಸುಗಳಲ್ಲಿ ಇರುತ್ತವೆ. ಕೆಲವರ ವೈಫಲ್ಯಗಳಲ್ಲಿ ಇರುತ್ತವೆ. ಕೆಲವರ ಹಠದಲ್ಲಿ ಇರುತ್ತವೆ. ಕೆಲವರ ಜೀವಮಾನವಿಡೀ ಮಾಡಿದ ಮೌನ ಸಾಧನೆಯಲ್ಲಿ ಇರುತ್ತವೆ. ನಾವು ತಿನ್ನುವ ಪ್ರತಿಯೊಂದು ಹಣ್ಣಿನ ಹಿಂದೆ ಒಂದು ಮರ ಇರುತ್ತದೆ. ಪ್ರತಿಯೊಂದು ಮರದ ಹಿಂದೆ ಒಂದು ಬೀಜ ಇರುತ್ತದೆ. ಪ್ರತಿಯೊಂದು ಬೀಜದ ಹಿಂದೆ ಒಬ್ಬ ಮನುಷ್ಯ ಇರುತ್ತಾನೆ. ಆ ಮನುಷ್ಯನನ್ನು ನೆನಪಿಟ್ಟುಕೊಳ್ಳುವುದು ಕೂಡ ಒಂದು ಸಂಸ್ಕೃತಿಯ ಲಕ್ಷಣ.






