Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಬೆಟ್ಟವನ್ನು ಗೆಲ್ಲದೆ ಬದುಕಿದವರು...

ಬೆಟ್ಟವನ್ನು ಗೆಲ್ಲದೆ ಬದುಕಿದವರು...

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ13 Sept 2026 10:37 AM IST
share
ಬೆಟ್ಟವನ್ನು ಗೆಲ್ಲದೆ ಬದುಕಿದವರು...

ನಾನು ಭೂತಾನ್‌ನ ಬೆಟ್ಟಗಳನ್ನು ನೋಡುತ್ತಾ ಬಂದಾಗ ಕೊನೆಗೆ ನನಗೆ ಅನಿಸಿದ್ದು ಇದು: ಮನುಷ್ಯನು ಭೂಮಿಯನ್ನು ಗೆಲ್ಲಬೇಕೆಂದು ಹೊರಟಾಗ ಭೂಮಿ ಅವನಿಗೆ ಯಾವಾಗಲೂ ದೊಡ್ಡದಾಗಿಯೇ ಕಾಣುತ್ತದೆ. ಆದರೆ ಭೂಮಿಯೊಂದಿಗೆ ಬದುಕಬೇಕೆಂದು ನಿರ್ಧರಿಸಿದಾಗ ಒಂದು ಸಣ್ಣ ತುಂಡು ನೆಲವೂ ಸಾಕಾಗುತ್ತದೆ. ಭೂತಾನ್‌ನ ಜನರು ಬಹುಶಃ ಈ ಎರಡನೆಯ ದಾರಿಯನ್ನು ಆರಿಸಿಕೊಂಡಿದ್ದಾರೆ. ಬೆಟ್ಟವನ್ನು ಕೆಡವಿ ಸಮತಟ್ಟು ಮಾಡುವ ಬದಲು ಬೆಟ್ಟ ಇರುವ ಹಾಗೆಯೇ ಅದರ ಜೊತೆ ಬದುಕುತ್ತಿದ್ದಾರೆ. ಪ್ರಕೃತಿಯನ್ನು ಸೋಲಿಸುವ ಬದಲು ಅದರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಭೂತಾನ್‌ಗೆ ಬರುವ ಮುನ್ನ ಈ ದೇಶದ ಬಗ್ಗೆ ನನಗೆ ಗೊತ್ತಿದ್ದದ್ದು ಹಿಮಾಲಯದ ತಪ್ಪಲಿನ ಒಂದು ಪುಟ್ಟ ರಾಷ್ಟ್ರ, ಸಂತೋಷವನ್ನು ಅಭಿವೃದ್ಧಿಯೊಂದಿಗೆ ಸಮೀಕರಿಸಿ ಪ್ರಕೃತಿಯನ್ನು ಹಾಳುಗೆಡವದ ಬೌದ್ಧ ಸಂಸ್ಕೃತಿಯ ಜನರ ದೇಶವೆಂದು. ಶೇ. 70ರಷ್ಟು ಕಾಡನ್ನು ಉಳಿಸಿಕೊಂಡ, ಪ್ರಾಣಿ ಹಿಂಸೆ ಇಲ್ಲದ, ಸಂಯಮ ತಾಳ್ಮೆ ಹೆಚ್ಚು ಇರುವ ಪ್ರಾಮಾಣಿಕ ಜನರಿರುವ ದೇಶ ಎಂದಷ್ಟೇ. ಆದರೆ ಇಲ್ಲಿ ಬಂದು ಬೆಟ್ಟಗಳನ್ನು ಹತ್ತುತ್ತಾ, ಇಳಿಯುತ್ತಾ, ಕಣಿವೆಗಳನ್ನು ದಾಟುತ್ತಾ, ಹಳ್ಳಿಗಳ ನಡುವೆ ಸಾಗುತ್ತಾ ಹೋದಂತೆ ಭೂತಾನ್‌ನ ನಿಜವಾದ ಪರಿಚಯ ನಿಧಾನವಾಗಿ ಆಗತೊಡಗಿತು.

ಈ ದೇಶದ ಮತ್ತೊಂದು ವಿಶೇಷತೆ ಮತ್ತು ನೆಮ್ಮದಿ ಇಲ್ಲಿಯ ಮನುಷ್ಯರು ನೆಲದೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿದೆ. ಭೂಮಿಯ ಮೇಲಿನ ಅತ್ಯಂತ ಕಡಿದಾದ, ತುಂಡು ತುಂಡಾದ ಭೂಭಾಗಗಳಲ್ಲಿ ಒಂದಿಷ್ಟು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವ ಅವರ ಹಠ ಮತ್ತು ಶ್ರಮದಲ್ಲಿದೆ. ಹಿಮಾಲಯದ ಈ ಭಾಗದಲ್ಲಿ ಸಮತಟ್ಟು ಎನ್ನುವುದು ಮನುಷ್ಯನಿಗೆ ದೊರೆತ ವಿಶೇಷ ಸೌಲಭ್ಯವಲ್ಲ. ಬೆಟ್ಟವೇ ಇಲ್ಲಿ ನೆಲ. ಇಳಿಜಾರೇ ಜಾಗ. ಕಣಿವೆಯೊಂದು ಸಿಕ್ಕರೆ ಅದೃಷ್ಟ. ಮನೆ ಕಟ್ಟಲು ಒಂದು ಚಿಕ್ಕ ಸಮತಟ್ಟು ಸಿಕ್ಕರೂ ಭಾಗ್ಯ. ಕೃಷಿಗೆ ನಾಲ್ಕು ಗುಂಟೆ, ಐದು ಗುಂಟೆ, ಹತ್ತು ಗುಂಟೆ ಜಾಗ ಸಿಕ್ಕರೆ ಅದೇ ಪರಮ ಸಂಪತ್ತು. ಆದರೆ ಇಲ್ಲಿಯ ಮನುಷ್ಯನ ಸುಖದ ಬದುಕು ಜಾಗದ ಅಳತೆಯಿಂದ ಮಾತ್ರ ನಡೆಯುವುದಿಲ್ಲ ಎಂಬುದನ್ನು ಇಲ್ಲಿನ ಜನರು ತೋರಿಸಿಕೊಡುತ್ತಾರೆ.

ಬೆಟ್ಟದ ಇಳಿಜಾರು ಮೈಯನ್ನು ಮೆಟ್ಟಿಲುಗಳಂತೆ ಕತ್ತರಿಸಿ ಪುಟ್ಟ ಪುಟ್ಟ ಗದ್ದೆಗಳನ್ನು ಮಾಡುತ್ತಾರೆ. ಮನೆಯ ಸುತ್ತ ಅಂಗೈಯಗಲ ಜಾಗದಲ್ಲಿ ತರಕಾರಿ ಬೆಳೆಯುತ್ತಾರೆ. ಇಳಿಜಾರಿನಲ್ಲೂ ನೆಲವನ್ನು ವ್ಯರ್ಥವಾಗಿ ಬಿಟ್ಟುಕೊಡುವುದಿಲ್ಲ. ಭೂಮಿ ಎಷ್ಟೇ ಕಡಿಮೆಯಿದ್ದರೂ ಅದರಿಂದ ಬದುಕಿಗಷ್ಟು ಮಾತ್ರವಲ್ಲ, ಬದುಕಿನ ಅರ್ಥವನ್ನೂ ಪಡೆಯಲು ಪ್ರಯತ್ನಿಸುತ್ತಾರೆ.

ನಮ್ಮ ಮಲೆನಾಡು - ಕರಾವಳಿಯಲ್ಲಿ ಮನೆಯ ಸುತ್ತ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆದು ಮನೆ ಮತ್ತು ತೋಟ ಒಂದಕ್ಕೊಂದು ಬೆಸೆದುಕೊಂಡಿರುವಂತೆ, ಇಲ್ಲಿ ಬೆಟ್ಟದ ಇಳಿಜಾರು ಮನುಷ್ಯನ ಮನೆಯ ವಿಸ್ತರಣೆಯಂತೆ ಕಾಣುತ್ತದೆ. ಎಲ್ಲೆಲ್ಲಿ ಮಣ್ಣು ಸಿಕ್ಕಿದೆಯೋ ಅಲ್ಲೆಲ್ಲಾ ಯಾವುದೋ ಒಂದು ಸಸ್ಯ ಜೀವ ಪಡೆಯುತ್ತದೆ. ಅದು ಗದ್ದೆಯಾಗಿರಬಹುದು, ತರಕಾರಿ ತೋಟವಾಗಿರಬಹುದು, ಹಣ್ಣಿನ ಮರವಾಗಿರಬಹುದು. ಕೃಷಿ ಇಲ್ಲಿ ದೊಡ್ಡ ಹೊಲದ ವ್ಯವಹಾರವಲ್ಲ. ಬದುಕಿನ ಅವಿಭಾಜ್ಯ ಅಂಗ. ಕೈಯಲ್ಲಿ ಸಿಗುವಷ್ಟೇ ನೆಲವನ್ನು ಮನುಷ್ಯ ತನ್ನ ಶ್ರಮದಿಂದ ಅರ್ಥಪೂರ್ಣವಾಗಿಸಿಕೊಳ್ಳುವ ಒಂದು ನಿರಂತರ ಪ್ರಯತ್ನ.

ಭೂತಾನ್‌ನ ಇಳಿಜಾರಿನಲ್ಲಿ ಇಂದು ಒಂದು ಗದ್ದೆ ನೋಡಿದೆ. ಹೆಚ್ಚು ಎಂದರೆ ಅದು ಒಂಭತ್ತು ಅಡಿ ಅಗಲ, ಇಪ್ಪತ್ತು ಅಡಿ ಉದ್ದ ಇರಬಹುದು. ಲೆಕ್ಕ ಹಾಕಿದರೆ 180 ಚದರ ಅಡಿ; ನಮ್ಮೂರಿನ ಭಾಷೆಯಲ್ಲಿ ಹೇಳುವುದಾದರೆ ಒಂದು ಗದ್ದೆ ಎಂದು ಕರೆಯಲು ನಾವೇ ಮುಜುಗರಪಡಬಹುದಾದಷ್ಟು ಪುಟ್ಟದದು. ಇಷ್ಟು ಜಾಗದಲ್ಲಿ ಎಷ್ಟು ಭತ್ತ ಬಂದೀತು? ಒಂದು ಕುಟುಂಬದ ಹೊಟ್ಟೆಯನ್ನು ಎಷ್ಟು ದಿನ ತುಂಬಿಸೀತು? ಲೆಕ್ಕ ಹಾಕುತ್ತಾ ಹೋದರೆ ಉತ್ತರ ನಿರಾಶೆಯದೇ. ಆದರೆ ಖಂಡಿತ ಆ ಮನುಷ್ಯನಿಗೆ ಅದು ಲೆಕ್ಕವಲ್ಲ.

ಅವನು ಆ ಅಂಗೈಯಗಲದ ಇಳಿಜಾರನ್ನು ಕುಡುಗೋಲಿನಿಂದ ಕೊಚ್ಚಿ, ಮಣ್ಣನ್ನು ಸಿದ್ಧಮಾಡಿ, ಭತ್ತದ ಸಸಿ ನೆಡುತ್ತಾನೆ. ತೊಂಭತ್ತು, ನೂರು ದಿನ ಅದನ್ನು ಮಗುವಿನಂತೆ ನೋಡಿಕೊಳ್ಳುತ್ತಾನೆ. ಮಳೆ ಜಾಸ್ತಿಯಾದರೂ ಕಾಳಜಿ, ಮಳೆ ಕಡಿಮೆಯಾದರೂ ಕಾಳಜಿ; ಕಾಡುಪ್ರಾಣಿಗಳು ಬಂದು ಮೇಯದಂತೆ ಕಾಯುತ್ತಾನೆ. ಕೊನೆಗೆ ಬಾಗಿದ ತೆನೆಗಳನ್ನು ನೋಡಿ, ‘ನನಗೆ ಇಷ್ಟು ಜಾಗ ಸಿಕ್ಕಿದೆಯಲ್ಲ, ಅದೇ ನನ್ನ ಅದೃಷ್ಟ’ ಎಂದುಕೊಳ್ಳುತ್ತಾನೆ.

ನಮ್ಮೂರಿನಲ್ಲಿ ಇಂಥ ಜಾಗವನ್ನು ತೋರಿಸಿ ‘ಇದೇನು ಗದ್ದೆಯಾ?’ ಎಂದು ಕೇಳಬಹುದು. ಭೂತಾನ್‌ನ ಈ ಮನುಷ್ಯನಿಗೆ ಮಾತ್ರ ಅದು ಗದ್ದೆಯಲ್ಲ; ಅವನ ಪಾಲಿಗೆ ಸಿಕ್ಕಿರುವ ಒಂದು ತುಂಡು ಭೂಮಿ, ಒಂದು ಋತು, ಒಂದಷ್ಟು ಅನ್ನ ಮತ್ತು ಬದುಕಿನ ಮೇಲಿರುವ ನಂಬಿಕೆ. ಮನುಷ್ಯನ ಹೊಟ್ಟೆ ತುಂಬಿಸುವ ಮೊದಲು ಮಣ್ಣು ಅವನ ಮನಸ್ಸನ್ನು ತುಂಬಿಸುತ್ತದೆ ಎಂಬುದನ್ನು ಆ ಪುಟ್ಟ ಗದ್ದೆ ಕಲಿಸುತ್ತದೆ.

ಈ ದೇಶದ ಉದ್ದಗಲಕ್ಕೆ ಸಾಗುವಾಗ ನನಗೆ ಮತ್ತೆ ಮತ್ತೆ ಒಂದು ಪ್ರಶ್ನೆ ಮೂಡಿತು. ಇಷ್ಟು ಕಡಿದಾದ ನೆಲದಲ್ಲಿ ಬದುಕುವುದನ್ನು ಬಿಟ್ಟು ಬೇರೆಡೆಗೆ ಹೋಗಿಬಿಡುವ ಯೋಚನೆ ಈ ಜನರಿಗೆ ಬರುವುದಿಲ್ಲವೇ? ಇಂಥದೊಂದು ಜಾಗಕ್ಕೆ ಮನುಷ್ಯ ಯಾಕೆ ಬಂದ? ಜಗತ್ತಿನ ಯಾವ ಮನುಷ್ಯನಿಗೂ ಸುಲಭವಾದ ಬದುಕಿನ ಆಸೆ ಇಲ್ಲವೆಂದು ಹೇಳಲಾಗುವುದಿಲ್ಲ. ಆದರೆ ಇಲ್ಲಿನ ಬದುಕು ನನಗೆ ಹೇಳಿದ ಒಂದು ಸಂಗತಿ ಬಹಳ ಮುಖ್ಯವಾದದ್ದು. ಅದು ಸುಖವೆಂದರೆ ಬರೀ ಸೌಲಭ್ಯಗಳ ಪ್ರಮಾಣವಲ್ಲ; ಮನುಷ್ಯ ತನ್ನ ಸುತ್ತಲಿನ ನೆಲದೊಂದಿಗೆ ಎಷ್ಟು ಹೊಂದಾಣಿಕೆ ಮಾಡಿಕೊಂಡಿದ್ದಾನೆ ಎನ್ನುವುದೂ ಒಂದು ಬದ್ಧತೆ. ಬೆಟ್ಟವನ್ನು ಸಮತಟ್ಟಾಗಿಸುವ ಬದಲು ಬೆಟ್ಟದ ಸ್ವಭಾವವನ್ನು ಒಪ್ಪಿಕೊಂಡು ಬದುಕುವ ಜಾಣ್ಮೆ ಇಲ್ಲಿದೆ.

ಬಹುಶಃ ಅದಕ್ಕೇ ಈ ಬೆಟ್ಟಗಳ ಮೇಲೆ ಮನೆಗಳೂ ಇವೆ, ಗದ್ದೆಗಳೂ ಇವೆ, ಸ್ತೂಪಗಳೂ ಇವೆ. ಮನುಷ್ಯ ತನ್ನ ದೇವರನ್ನು ಸಮತಟ್ಟಾದ ಜಾಗದಲ್ಲಿ ಮಾತ್ರ ಹುಡುಕುವುದಿಲ್ಲ ಎಂಬುದನ್ನು ಈ ದೇಶದ ಬೆಟ್ಟಗಳು ಹೇಳುತ್ತವೆ. ಏರಲಾಗದಷ್ಟು ಕಡಿದಾದ ಬೆಟ್ಟದ ಮೇಲೂ ಪ್ರಾರ್ಥನಾ ಧ್ವಜ ಹಾರುತ್ತದೆ. ಗಾಳಿ ಬೀಸಿದಾಗ ಆ ಬಣ್ಣದ ಬಟ್ಟೆಗಳು ಅಲುಗಾಡುತ್ತವೆ. ಕೆಳಗೆ ಮನುಷ್ಯ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮೇಲೊಂದು ಬುದ್ಧನ ಸ್ಮರಣೆ. ಮಧ್ಯದಲ್ಲಿ ಅವನ ಮನೆ. ಒಂದೇ ಭೂಭಾಗದಲ್ಲಿ ಕೃಷಿ, ಮನೆ, ಧರ್ಮ ಮತ್ತು ಬದುಕು ಪರಸ್ಪರ ದೂರವಾಗದೆ ಇರುವ ಒಂದು ದೃಶ್ಯ ಅದು.

ಬೌದ್ಧ ಧರ್ಮದ ಪ್ರಭಾವ ಭೂತಾನ್‌ನ ಬದುಕಿನ ಮೇಲೆ ಬಹಳ ಆಳವಾಗಿದೆ. ಆದರೆ ಅದನ್ನು ಕೇವಲ ಬುದ್ಧಸ್ತೂಪಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಮನುಷ್ಯನ ನಡವಳಿಕೆಯಲ್ಲಿ, ಪ್ರಕೃತಿಯನ್ನು ನೋಡುವ ರೀತಿಯಲ್ಲಿ, ಸರಳತೆಯ ಬಗ್ಗೆ ಇರುವ ಒಲವಿನಲ್ಲಿ ಅದರ ನೆರಳು ಕಾಣಿಸುತ್ತದೆ. ಬೌದ್ಧ ಧರ್ಮದೊಂದಿಗೆ ಭಾಗಶಃ ಹಿಂದೂ ಧರ್ಮವೂ ಈ ದೇಶದ ಸಾಮಾಜಿಕ ಬದುಕಿನ ಒಂದು ಭಾಗವಾಗಿದೆ. ವಿವಿಧ ನಂಬಿಕೆಗಳ ಜನರು ತಮ್ಮ ತಮ್ಮ ಆಚರಣೆಗಳೊಂದಿಗೆ ಬದುಕುತ್ತಿದ್ದಾರೆ. ಧರ್ಮ ಇಲ್ಲಿ ಕೇವಲ ದೇವರನ್ನು ಪೂಜಿಸುವ ವಿಷಯವಾಗಿರದೆ ಬದುಕನ್ನು ಹೇಗೆ ನೋಡಬೇಕು ಎಂಬ ಪ್ರಶ್ನೆಯೊಂದಿಗೂ ಬೆಸೆದುಕೊಂಡಿರುವಂತೆ ಕಾಣಿಸುತ್ತದೆ.

ಭೂತಾನ್‌ನ ಇನ್ನೊಂದು ಕುತೂಹಲಕರ ಸಂಗತಿ ಅದರ ರಾಜಕೀಯ ವ್ಯವಸ್ಥೆ. ಜಗತ್ತಿನ ಅನೇಕ ಕಡೆಗಳಲ್ಲಿ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವವನ್ನು ಪರಸ್ಪರ ವಿರುದ್ಧವಾದ ವ್ಯವಸ್ಥೆಗಳಂತೆ ನೋಡುವಾಗ, ಭೂತಾನ್‌ನಲ್ಲಿ ಅವುಗಳ ನಡುವೆ ಒಂದು ವಿಶಿಷ್ಟ ಹೊಂದಾಣಿಕೆ ರೂಪುಗೊಂಡಿದೆ. ಸುಮಾರು ಎಂಟು ಲಕ್ಷದಷ್ಟಿರುವ ಜನಸಂಖ್ಯೆಯ ಈ ಪುಟ್ಟ ರಾಷ್ಟ್ರ ತನ್ನದೇ ಆದ ದಾರಿಯಲ್ಲಿ ಆಧುನಿಕತೆಯನ್ನು ಸ್ವೀಕರಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ನನಗೆ ಹೆಚ್ಚು ಕಾಡಿದ್ದು ಇಲ್ಲಿಯ ಜನರ ಶ್ರಮ. ಈ ದೇಶಕ್ಕೆ ಅನೇಕ ವಸ್ತುಗಳನ್ನು ಹೊರಗಿನಿಂದ ತರಬೇಕಾಗುತ್ತದೆ. ಕೈಗಾರಿಕಾ ಉತ್ಪಾದನೆಯ ವ್ಯಾಪ್ತಿ ಸೀಮಿತ. ಸಮತಟ್ಟು ಕಡಿಮೆ. ಕೃಷಿಗೆ ಪ್ರಕೃತಿಯೇ ಹಲವು ರೀತಿಯ ಸವಾಲುಗಳನ್ನು ಮುಂದಿಟ್ಟಿದೆ. ಆದರೂ ಮನುಷ್ಯ ತನ್ನ ಕೈಯಲ್ಲಿರುವುದನ್ನು ಬಿಟ್ಟುಬಿಡುವುದಿಲ್ಲ. ಬಿದಿರು ಸಿಕ್ಕರೆ ಅದರಿಂದ ಉಪಯೋಗದ ವಸ್ತು ಮಾಡುತ್ತಾನೆ. ಮರ ಸಿಕ್ಕರೆ ಅದನ್ನು ತನ್ನ ಬದುಕಿಗೆ ಬಳಸಿಕೊಳ್ಳುತ್ತಾನೆ. ಮಣ್ಣು ಸಿಕ್ಕರೆ ಅದರಲ್ಲಿ ಬೀಜ ಬಿತ್ತುತ್ತಾನೆ. ಬೆಟ್ಟ ಸಿಕ್ಕರೆ ಅದರ ದಾರಿಯಲ್ಲಿ ನಡೆಯುತ್ತಾನೆ. ಪ್ರಕೃತಿ ಅವನಿಗೆ ಸವಾಲು ಹಾಕಿದಷ್ಟೂ ಅವನು ತನ್ನ ಬದುಕಿನ ವಿಧಾನವನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾನೆ.

ಇಲ್ಲಿ ನಾನು ಒಬ್ಬ ಸಾಂಪ್ರದಾಯಿಕ ಬಿಲ್ಲು ತಯಾರಕ ಜಿಗ್ಮಿಯನ್ನು ಭೇಟಿಯಾದೆ. ಸ್ಥಳೀಯ ಬಿದಿರಿನಿಂದ ಬಿಲ್ಲು ತಯಾರಿಸಿ ಇಲ್ಲಿನ ಬಿಲ್ಲುವಿದ್ಯೆಯ ಆಸಕ್ತರಿಗೆ ಕೊಡುತ್ತಿರುವ ಅವರ ಕೆಲಸವನ್ನು ನೋಡಿದಾಗಲೂ ಇದೇ ಸಂಗತಿ ನೆನಪಾಯಿತು. ಕೈಗಾರಿಕೆಯಿಂದ ತಯಾರಾದ ವಸ್ತುವನ್ನು ದೂರದ ದೇಶದಿಂದ ತರಿಸಿಕೊಳ್ಳುವುದಕ್ಕಿಂತ ತನ್ನ ಸುತ್ತಲಿನ ಕಾಡು ಕೊಟ್ಟ ಬಿದಿರನ್ನು ಗುರುತಿಸಿ, ಅದನ್ನು ಒಣಗಿಸಿ, ಬಾಗಿಸಿ, ರೂಪಿಸಿ ಒಂದು ಬಿಲ್ಲನ್ನಾಗಿ ಮಾಡುವುದು ಒಂದು ವಸ್ತು ತಯಾರಿಕೆಯ ಕೆಲಸ ಮಾತ್ರವಲ್ಲ. ಅದು ನೆಲದೊಂದಿಗೆ ಮನುಷ್ಯನ ಸಂಬಂಧದ ಒಂದು ರೂಪ. ಪ್ರಕೃತಿ ಕೊಟ್ಟದ್ದನ್ನು ಕೇವಲ ಕಚ್ಚಾ ವಸ್ತುವಾಗಿ ನೋಡುವುದಕ್ಕೂ, ಅದರಲ್ಲಿ ತನ್ನ ಸಂಸ್ಕೃತಿಯನ್ನು ರೂಪಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸ ಇಲ್ಲಿದೆ.

ಈ ದೇಶದಲ್ಲಿ ಎಲ್ಲವೂ ಪರಿಪೂರ್ಣವೆಂದು ಹೇಳಲು ಸಾಧ್ಯವಿಲ್ಲ. ಯಾವುದೇ ದೇಶವೂ ಪರಿಪೂರ್ಣವಲ್ಲ. ಉದ್ಯೋಗ, ಶಿಕ್ಷಣ, ಆಧುನಿಕ ಸೌಲಭ್ಯ, ಆರ್ಥಿಕ ಅವಕಾಶಗಳು, ಯುವಜನರ ವಲಸೆ ಇವೆಲ್ಲ ಭೂತಾನ್‌ಗೂ ಪ್ರಶ್ನೆಗಳೇ.

ಇಂದು ಇಡೀ ಜಗತ್ತು ಅಭಿವೃದ್ಧಿಯೆಂದರೆ ಹೆಚ್ಚು ಉತ್ಪಾದನೆ, ಹೆಚ್ಚು ಬಳಕೆ, ಹೆಚ್ಚು ಕಟ್ಟಡ, ಹೆಚ್ಚು ವಾಹನ, ಹೆಚ್ಚು ವೇಗ ಎಂದು ಅರ್ಥೈಸಿಕೊಳ್ಳುತ್ತಿರುವಾಗ ಭೂತಾನ್‌ನಂತಹ ದೇಶವೊಂದು ಬೇರೆ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ. ಮನುಷ್ಯನಿಗೆ ನಿಜವಾಗಿ ಎಷ್ಟು ಬೇಕು? ಒಂದು ದೇಶ ಶ್ರೀಮಂತವಾಗುವುದು ಅದರ ಜನರ ಕೈಯಲ್ಲಿ ಎಷ್ಟು ವಸ್ತುಗಳಿವೆ ಎಂಬುದರಿಂದ ಮಾತ್ರವೇ?

ಖಂಡಿತ ಅಲ್ಲ, ಪ್ರಕೃತಿಯನ್ನು ಉಳಿಸಿಕೊಂಡು, ಸಮುದಾಯದ ಸಂಬಂಧಗಳನ್ನು ಉಳಿಸಿಕೊಂಡು, ತನ್ನ ಸಂಸ್ಕೃತಿಯನ್ನು ಕಾಪಾಡಿಕೊಂಡು ಬದುಕುವುದಕ್ಕೂ ಅಭಿವೃದ್ಧಿ ಎನ್ನಬಹುದಲ್ಲವೇ?

ಭೂತಾನ್‌ನ ಜನಸಂಖ್ಯೆ ಕಡಿಮೆ. ಉಪಯುಕ್ತ ಭೂಮಿ ಕಡಿಮೆ. ಕೈಗಾರಿಕೆ ಕಡಿಮೆ. ಪ್ರಕೃತಿಯ ಸವಾಲು ಹೆಚ್ಚು. ಆದರೆ ಮನುಷ್ಯನಿಗೆ ಬೇಕಾದ ಒಂದು ಸಂಗತಿ ಇಲ್ಲಿ ಸಾಕಷ್ಟಿದೆ; ತನ್ನ ನೆಲದ ಮೇಲಿನ ನಂಬಿಕೆ. ಅದಕ್ಕೇ ಬೆಟ್ಟದ ಒಂದು ಸಣ್ಣ ತುಂಡಿನಲ್ಲೂ ಮನೆ ಕಾಣುತ್ತದೆ. ಮನೆಯ ಪಕ್ಕದಲ್ಲಿ ತರಕಾರಿ ಕಾಣುತ್ತದೆ. ನಾನು ಭೂತಾನ್‌ನ ಬೆಟ್ಟಗಳನ್ನು ನೋಡುತ್ತಾ ಬಂದಾಗ ಕೊನೆಗೆ ನನಗೆ ಅನಿಸಿದ್ದು ಇದು: ಮನುಷ್ಯನು ಭೂಮಿಯನ್ನು ಗೆಲ್ಲಬೇಕೆಂದು ಹೊರಟಾಗ ಭೂಮಿ ಅವನಿಗೆ ಯಾವಾಗಲೂ ದೊಡ್ಡದಾಗಿಯೇ ಕಾಣುತ್ತದೆ. ಆದರೆ ಭೂಮಿಯೊಂದಿಗೆ ಬದುಕಬೇಕೆಂದು ನಿರ್ಧರಿಸಿದಾಗ ಒಂದು ಸಣ್ಣ ತುಂಡು ನೆಲವೂ ಸಾಕಾಗುತ್ತದೆ. ಭೂತಾನ್‌ನ ಜನರು ಬಹುಶಃ ಈ ಎರಡನೆಯ ದಾರಿಯನ್ನು ಆರಿಸಿಕೊಂಡಿದ್ದಾರೆ. ಬೆಟ್ಟವನ್ನು ಕೆಡವಿ ಸಮತಟ್ಟು ಮಾಡುವ ಬದಲು ಬೆಟ್ಟ ಇರುವ ಹಾಗೆಯೇ ಅದರ ಜೊತೆ ಬದುಕುತ್ತಿದ್ದಾರೆ. ಪ್ರಕೃತಿಯನ್ನು ಸೋಲಿಸುವ ಬದಲು ಅದರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಡಿದಾದ ನೆಲವನ್ನು ಶಾಪವೆಂದು ಕಾಣದೆ ಅದೇ ನೆಲದಲ್ಲಿ ಮನೆ ಕಟ್ಟಿದ್ದಾರೆ, ಗದ್ದೆ ಮಾಡಿದ್ದಾರೆ, ದೇವರನ್ನು ಪ್ರತಿಷ್ಠಾಪಿಸಿದ್ದಾರೆ, ಮಕ್ಕಳನ್ನು ಬೆಳೆಸಿದ್ದಾರೆ, ಹಬ್ಬಗಳನ್ನು ಆಚರಿಸಿದ್ದಾರೆ, ಪ್ರಾರ್ಥಿಸಿದ್ದಾರೆ.

ಆದ್ದರಿಂದ ಭೂತಾನ್‌ನ ಬಗ್ಗೆ ಬರೆಯುವಾಗ ನನಗೆ ಅಲ್ಲಿಯ ಬುದ್ಧ ಕೇಂದ್ರಿತ ಆಲಯಗಳಿಗಿಂತಲೂ, ಪ್ರವಾಸಿಗರ ಕಣ್ಣಿಗೆ ಕಾಣುವ ಸುಂದರ ದೃಶ್ಯಗಳಿಗಿಂತಲೂ ಆ ಬೆಟ್ಟದ ಇಳಿಜಾರಿನಲ್ಲಿ ಬಾಗಿಕೊಂಡು ಕೆಲಸ ಮಾಡುವ ಒಬ್ಬ ಸಾಮಾನ್ಯ ಮನುಷ್ಯನೇ ಮುಖ್ಯವಾಗಿ ಕಾಣಿಸುತ್ತಾನೆ. ಅವನ ಕೈಯಲ್ಲಿ ಮಣ್ಣು ಇದೆ. ಬೆನ್ನಿನ ಮೇಲೆ ಶ್ರಮ ಇದೆ. ದೊಡ್ಡ ಭೂಮಿಯ ಮೇಲೆ ಅವನಿಗೆ ದೊರೆತಿರುವ ತುಂಡು ಭೂಮಿ ಬಹಳ ಕಡಿಮೆ. ಆದರೆ ಅದರಲ್ಲಿ ಬದುಕನ್ನು ಕಟ್ಟಿಕೊಳ್ಳುವ ಅವನ ಧೈರ್ಯ ಮಾತ್ರ ಬಹಳ ದೊಡ್ಡದು.

ಬಹುಶಃ ಅದಕ್ಕೇ ಭೂತಾನನ್ನು ನೋಡಿದ ಮೇಲೆ ನನಗೆ ಈ ದೇಶ ಚಿಕ್ಕದಾಗಿ ಕಾಣುತ್ತಿಲ್ಲ. ಎಂಟು ಲಕ್ಷ ಜನರಿರುವ ಪುಟ್ಟ ರಾಷ್ಟ್ರವೆಂದು ನಕ್ಷೆ ಹೇಳಬಹುದು. ಆದರೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಅಳೆಯಲು ನಕ್ಷೆಯ ಅಳತೆ ಸಾಲದು. ಕಡಿದಾದ ನೆಲದಲ್ಲೂ ನೆಮ್ಮದಿಯನ್ನು ಬೆಳೆಸಬಹುದು ಎಂಬುದನ್ನು ತೋರಿಸುವ ದೇಶದ ಗಾತ್ರ ಬೇರೆ. ಆ ಅಳತೆಯಲ್ಲಿ ಭೂತಾನ್‌ನ ಭೂಮಿ ಬಹಳ ದೊಡ್ಡದು.

ಪಶ್ಚಿಮ ಬಂಗಾಳದ ದಾರಿಯಲ್ಲಿ ಭೂತಾನನ್ನು ಪ್ರವೇಶಿಸುವಾಗ ಎರಡು ರಾಷ್ಟ್ರಗಳ ನಡುವಿನ ಗಡಿ ಕೇವಲ ನಕ್ಷೆಯ ಮೇಲಿರುವ ಒಂದು ರೇಖೆಯಲ್ಲ ಎಂಬುದು ಕಣ್ಣಿಗೆ ಕಟ್ಟುತ್ತದೆ. ಒಂದೇ ಕ್ಷಣದಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಾಲಿಡುತ್ತೇವೆ. ಗಡಿಯಲ್ಲಿರುವ ಒಂದು ಮೂರು ಅಡಿ ಗೋಡೆ, ಅದರ ಈಚೆ ಮತ್ತು ಆಚೆಯ ಬದುಕಿನ ನಡುವೆ ವಿಚಿತ್ರವಾದ ಕನ್ನಡಿಯಂತೆ ನಿಂತಿದೆ. ಭಾರತದ ಬದಿಯಲ್ಲಿ ರಸ್ತೆಯ ಬದಿಗೆ ಬಿಸಾಡಿದ ವಸ್ತುಗಳು, ಅಸ್ತವ್ಯಸ್ತತೆ, ಎಲ್ಲವನ್ನೂ ಹೇಗಾದರೂ ನಡೆಸಿಕೊಂಡು ಹೋಗುವ ನಮ್ಮ ಮನೋಭಾವ ಕಣ್ಣಿಗೆ ಬೀಳುತ್ತದೆ. ಅದೇ ಗೋಡೆಯ ಆಚೆಗೆ ಕಾಲಿಟ್ಟ ತಕ್ಷಣ ದೃಶ್ಯ ಬದಲಾಗುತ್ತದೆ. ರಸ್ತೆ ಸ್ವಚ್ಛವಾಗಿದೆ. ಕಸ ಕಾಣಿಸುವುದಿಲ್ಲ. ಸಾರ್ವಜನಿಕ ಸ್ಥಳವೂ ತನ್ನದೇ ಮನೆಯ ಅಂಗಳದಂತೆ ಕಾಪಾಡಲ್ಪಟ್ಟಿದೆ. ದೊಡ್ಡ ದೊಡ್ಡ ಘೋಷಣೆಗಳಿಲ್ಲ; ಸಣ್ಣ ಸಣ್ಣ ಜವಾಬ್ದಾರಿಗಳಿವೆ. ಈ ವ್ಯತ್ಯಾಸವನ್ನು ಹೇಳಲು ಯಾವ ವರದಿಯೂ ಬೇಕಾಗಿಲ್ಲ. ಗಡಿಯಲ್ಲಿರುವ ಆ ಮೂರು ಅಡಿ ಗೋಡೆಯೇ ಸಾಕು. ಈಚೆ ಮತ್ತು ಆಚೆ ನಿಂತಿರುವುದು ಎರಡು ಭೂಭಾಗಗಳಲ್ಲ; ಎರಡು ಮನೋಭಾವಗಳು.

ಒಂದು ಕಡೆ ಪ್ರಕೃತಿಯನ್ನು ಬಳಸಿಕೊಂಡು ಹೋಗುವ ಆತುರ, ಮತ್ತೊಂದು ಕಡೆ ಅದನ್ನು ಕಾಪಾಡಿಕೊಂಡೇ ಬದುಕಬೇಕೆಂಬ ಎಚ್ಚರ. ಆ ಗೋಡೆಯನ್ನು ದಾಟಿ ಭೂತಾನ್‌ನ ನೆಲಕ್ಕೆ ಕಾಲಿಟ್ಟಾಗ ನನಗೆ ಅನಿಸಿದ್ದು, ದೇಶಗಳು ಗಡಿಯಿಂದ ಬೇರ್ಪಡುತ್ತವೆ; ಆದರೆ ಅವುಗಳ ಸಂಸ್ಕೃತಿ ಮನುಷ್ಯನ ನಡವಳಿಕೆಯಲ್ಲಿ ಕಾಣಿಸುತ್ತದೆ.

‘‘ನನಗೆ ಜಿಡಿಪಿ ಮುಖ್ಯ ಅಲ್ಲ, ನನ್ನ ದೇಶದ ನೆಲವಾಸಿಗಳ ನೆಮ್ಮದಿ ಮುಖ್ಯ’’. ಭೂತಾನ್‌ನ ರಾಜನ ಮಾತು ಎಷ್ಟು ಅರ್ಥಪೂರ್ಣ!

(ಅಂಕಣಗಾರರು: ಉಪನ್ಯಾಸಕರು, ಚಿಂತಕರು)

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X