ಮಣ್ಣು ಕರಗುವ ಸಮಯ...

ಭೂಮಿ ಹಸುರಾಗಿದೆ ಇಳೆಯೂ ತಂಪಾಗಿದೆ.... ಎಂಬುವುದು ಭಾವಗೀತೆಯೊಂದರ ಸಾಲು. ಮುಂಗಾರಿನ ಮೊದಲ ಮಳೆಗೆ ಭೂಮಿ ಹಸುರಾಗುವುದು ಅತ್ಯಂತ ಸಹಜ. ಮಿಂಚು ಗುಡುಗು ಗಾಳಿ ಸಮೇತ ಸುರಿಯುವ ಆರಂಭದ ಮಳೆ ಭೂಮಿ ಮೇಲೆ ಬದುಕುವ ಸಕಲ ಜೀವರಾಶಿಗೆ ಭಯ ಹುಟ್ಟಿಸುವಂತಿದ್ದರೂ ಪ್ರಕೃತಿ ಪಾಲಿಗೆ ಅದು ವರವೇ. ನಿತ್ಯ ನಿಬಿಡ ಹಸಿರು ಕಾಡು ಬಿಡಿ, ನೀವು ದಿನ ಓಡಾಡುವ ರಸ್ತೆ ಬದಿಯನ್ನೊಮ್ಮೆ ಗಮನಿಸಿ. ಬರೀ ಒಂದು ದಿನದ ಮಳೆಗೆ ಅಂಗೈಯಗಲ ಖಾಲಿ ಜಾಗ ಬಿಡದಂತೆ ಹಸಿರು ಹೊದ್ದುಕೊಳ್ಳುತ್ತದೆ. ಮುಂದೆ ನಾಲ್ಕೈದು ತಿಂಗಳು ಸುರಿಯಬಹುದಾದ ಬೀಸು ಮಳೆಗೆ ತನ್ನ ಅಂಗ ಊಣಗೊಳ್ಳದಂತೆ ಭೂಮಿ ಹಸಿರು ಚಾದರ ಸೃಷ್ಟಿಸಿಕೊಳ್ಳುತ್ತದೆ. ಇದು ನಿಸರ್ಗ ನಿಯಮವೂ ಹೌದು.
ಈ ಭೂಮಿಯ ಮೇಲೆ ಮನುಷ್ಯಜೀವಿ ಎಷ್ಟೇ ನೆಲ ಬಗೆದು ಅಡ್ಡಾದಿಡ್ಡಿ ಗಾಯಗೊಳಿಸಿದರೂ ಮೊದಲ ಮಳೆಯ ಮುಲಾಮು ಭೂಮಿ ಮೇಲಿನ ಕೆಂಪು ನೆಲರಕ್ತ ಸೋರದಂತೆ ವಾಸಿಗೊಳಿಸುತ್ತದೆ. ಹಸಿರು ಮರಗಳ ಹುಲ್ಲು ಸದೆಗಳ ಬೇರು ಜಾಲ ಮಣ್ಣೊಂದಿಗೆ ಅಡ್ಡ ದಿಡ್ಡಿ ಅಜ್ಞಾತವಾಗಿ ನುಸುಳಿ ಭೂಮಿ ಸವೆಯದಂತೆ ಕಾಪಾಡುತ್ತದೆ.
ಅದೇ ನಿಮ್ಮ ಕಣ್ಣಂಚಿನ ಭೂಮಿ ಮೇಲಿನ ಖಾಲಿ ಜಾಗಕ್ಕೆಲ್ಲ ರಣರಣ ಬೇಸಿಗೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ತಂದು ಸುರಿಯಿರಿ, ಭೂಮಿ ದಮ್ಮಯ್ಯ ಅಂದರೂ ಹಸುರಾಗದು. ಆದರೆ ಈ ಮಿಂಚುಮಳೆ ನೀರಿಗೆ ಅದೇನು ಶಕ್ತಿಯೋ? ಹತ್ತೇ ನಿಮಿಷದ ಬೀಸು ಮಳೆಯ ಆರ್ದ್ರತೆಗೆ ನಿಗೂಢವಾಗಿದ್ದ ಬೀಜಗಳೆಲ್ಲ ಮಂತ್ರಶಕ್ತಿಯಂತೆ ಮೊಳೆಯಲಾರಂಭಿಸುತ್ತವೆ. ನೋಡು ನೋಡುತ್ತಿದ್ದಂತೆ ಅಂಗೈಯಗಲ ಜಾಗ ಖಾಲಿ ಬಿಡದೆ ಹಸಿರು ತನ್ನ ಬುಡದ ಮಣ್ಣು ಕರಗದಂತೆ ನೋಡಿಕೊಳ್ಳುತ್ತದೆ.
ಆದರೆ ಈ ವರ್ಷದ ಮಹಾಮಳೆಗೆ ‘‘ಈ ಭೂಮಿ ಹಸುರಾಗಿದೆ, ಇಳೆಯು ತಂಪಾಗಿದೆ...’’ ಎನ್ನುವ ಕವಿವಾಣಿ ಬರೀ ಅಕ್ಷರಗಳಲ್ಲಿ ಮಾತ್ರ ಉಳಿದಿದೆ. ಮಲೆನಾಡು ಕರಾವಳಿಯಾದ್ಯಂತ ಬರೀ ಒಂದು ವಾರದ ಮಳೆಗೆ ನೀರೊರತೆ ಅತಿಯಾಗಿ ಗುಡ್ಡೆ ಬೆಟ್ಟಗಳು ಜರಿದದ್ದು ಕಣ್ಣಿಗೆ ರಾಚುತ್ತದೆ. ಕಳೆದ 80 ವರ್ಷಗಳಲ್ಲಿ ಸುರಿಯದಷ್ಟು ಗರಿಷ್ಠ ಮೇ ಮಳೆ ಈ ವರ್ಷ ದಾಖಲಾಗಿದೆ. ಹಾಗಂತ ಇಳೆ ತಂಪಾಗಿದೆಯೋ? ಅದೂ ಇಲ್ಲ. ಮಳೆ ಬಿಟ್ಟು ಹತ್ತೇ ನಿಮಿಷದಲ್ಲಿ ಬರೀ ಸೆಕೆ. ಥಂಡಿ ಬೆವರು. ಹೊರಗಡೆ ಮಳೆ, ಒಳಗಡೆ ದಗೆ.
ಬೇರೇನು ಬೇಡ ನಿಮ್ಮ ಹಳ್ಳಿ ಮನೆಯ ಜಗಲಿಯ ಅಡಿಯನ್ನೊಮ್ಮೆ ಸುಮ್ಮಗೆ ನೋಡಿ. ಸವೆದು ಹೋದ ನಿಮ್ಮ ಅಂಗಳದ ಮೇಲ್ಪದರ ಅಲ್ಲೊಂದು ಲೆಕ್ಕ ಕೊಡುತ್ತದೆ. ಇಂಟರ್ಲಾಕ್ ಹಾಕದ ಅಂಗಳವೇ ಆಗಿದ್ದರೆ ಕಡಿಮೆ ಪಕ್ಷ ಒಂದು ಇಂಚು ನೆಲ ತಿಂಗಳ ಮಳೆಗೆ ಕರಗಿ ಹೊಳೆ ಸೇರಿದೆ. ಸಿಮೆಂಟ್ ಜಗಲಿಯ ಅಡಿಯ ಗ್ಯಾಪು ಕರಗಿ ಹೋದ ಮಣ್ಣಿನ ಲೆಕ್ಕ ಕೊಡುತ್ತದೆ. ನಮ್ಮ ಊರಿನ ಸುದ್ದಿ ಪತ್ರಿಕೆ ಬರೀ ಪುತ್ತೂರು ಒಂದೇ ತಾಲೂಕಿನಲ್ಲಿ ಒಂದೇ ದಿನ ಗುಡ್ಡೆ ಜರಿದ 26 ಪ್ರಕರಣಗಳನ್ನು ಫೋಟೊ ಸಮೇತ ಪ್ರಕಟಿಸಿದೆ. ಪುತ್ತೂರಿನ ಶಾಸಕರು ಅದೇ ದಿನ ಸುಮಾರು 120 ಕಡೆ ಗುಡ್ಡ ಕುಸಿತದ ಪ್ರಕರಣಗಳನ್ನು ಉಲ್ಲೇಖಿಸಿ ನಷ್ಟದ ವಿವರಗಳನ್ನು ದಾಖಲಿಸಿದ್ದಾರೆ.
ಇದು ಕೇವಲ ಕರಾವಳಿಯ ಒಂದು ತಾಲೂಕಿನ ಕಥೆ. ಮನುಷ್ಯ ನಿತ್ಯ ಓಡಾಡುವ, ಕಣ್ಣಿಗೆ ಕಾಣಿಸುವ, ಜನವಾಸಿ ನೆಲೆಗಳಿಗೆ ಮಣ್ಣು ಜರಿದು ಬಿದ್ದ ದೃಶ್ಯಗಳಿವು. ಇನ್ನು ಮನುಷ್ಯ ಓಡಾಡದ, ಪತ್ರಕರ್ತರು ಗಮನಿಸದ, ಜೀವ ಹಾನಿಯಾಗದ ನಿಗೂಢ ಕಡೆಗಳಲ್ಲಿ ಎಷ್ಟೊಂದು ಅನಾಹುತಗಳಾಗಿವೆಯೋ ಯಾರೂ ಲೆಕ್ಕ ತೆಗೆದಿಲ್ಲ.
ಈ ಬಾರಿ ಕರಾವಳಿ, ಮಲೆನಾಡಿನಲ್ಲಿ ಹಳ್ಳಿಹಳ್ಳಿಗಳಿಗೆ ಕುಡಿವನೀರು ಒದಗಿಸಬೇಕು ಎನ್ನುವ ಯೋಜನೆಗೆ ಬಹುತೇಕ ಎಲ್ಲಾ ಕಡೆ ಮುಖ್ಯರಸ್ತೆ, ಹಳ್ಳಿರಸ್ತೆ ಇವೆಲ್ಲವುಗಳ ಇಕ್ಕಡೆಗಳನ್ನು ಬಗೆಯಲಾಗಿದೆ. ಉಳಿದಂತೆ ಕೇಬಲ್ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಇದು ಪ್ರಭುತ್ವ ನಾಗರಿಕರಿಗಾಗಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮವಾದರೆ, ಅಡಿಕೆ ವಿಸ್ತರಣೆಗಾಗಿ ಕಾಡು ಗುಡ್ಡಗಳನ್ನೆಲ್ಲ ಕಡಿದು ಖಾಸಗಿ ರೈತರು ಮಾಡಿರುವ ಅನಾಹುತ ಅದು ಬೇರೆಯೇ ಲೆಕ್ಕ. ಕೊಡಗಿನಾದ್ಯಂತ ಖಾಸಗಿ ರೆಸಾರ್ಟುಗಳ ದಾಂಗುಡಿಯಾದರೆ ಕರಾವಳಿಯಾದ್ಯಂತ ಕೃಷಿ ವಿಸ್ತರಣೆ ದಿನೇ ದಿನೇ ಅತ್ಯಂತ ಅಪಾಯವನ್ನು ತಂದೊಡ್ಡುತ್ತದೆ.
ಮೂರು ನಾಲ್ಕು ದಶಕಗಳಿಂದ ಮುಳುಗದ ಸಂಕ- ಸೇತುವೆಗಳು ಈ ಬಾರಿ ಮುಳುಗಿವೆ. ರಸ್ತೆಯಂಚಿನ ಗುಡ್ಡೆಗಳು ಜರಿದಿವೆ. ಮಳೆ ಶುರುವಾಗಿ ತಿಂಗಳು ಕಳೆದರೂ ಈ ಭಾಗದ ಯಾವ ನದಿ ಹೊಳೆಗಳಲ್ಲೂ ಇನ್ನೂ ಶುದ್ಧ ತಿಳಿನೀರು ಹೋಗುತ್ತಿಲ್ಲ. ಮುಂದೆ ಅನೇಕ ದಿನ ಕೆಂಪು ನೀರೇ ಹರಿಯಲಿದೆ. ನನಗಿನ್ನೂ ನೆನಪಿದೆ, ನನ್ನ ಬಾಲ್ಯದಲ್ಲಿ ಮೊದಲ ಮಳೆಗೇ ಹೊಳೆಗಳಲ್ಲಿ ಬರೀ ತಿಳಿನೀರು ಹರಿಯುತ್ತಿತ್ತು. ಒಂದು ವೇಳೆ ಅದು ಕೆಂಪಾಗಿದ್ದರೆ ಅದಕ್ಕೆ ಕಾರಣ ಇಂದಿನಂತೆ ಅಭಿವೃದ್ಧಿಯ ಶಾಪವಲ್ಲ. ಬದಲಾಗಿ ರೈತರು ಉಳುಮೆ ಮಾಡಿದ ಗದ್ದೆಯಿಂದ ಬೀಜ ನೇಜಿ ನಿಲ್ಲುವುದಿಲ್ಲ ಎಂದು ಬಿಡುತ್ತಿದ್ದ ಕೆಸರು ಮಲಂಪು ನೀರು. ಹೊರತು ಗುಡ್ಡೆ ಕುಸಿಯುವ, ರಸ್ತೆ, ಮನೆಯಂಗಳ ಇನ್ನಿತರ ಸ್ಥಾವರ ಕೇಂದ್ರಿತ ಅಡಿನೆಲ ಕರಗುವ ದೃಷ್ಟಾಂತ ಆಗ ಇರುತ್ತಿರಲಿಲ್ಲ.
ಆ ಕಾಲಕ್ಕೆ ಬರೀ ಎರಡು ಮಳೆ ಸುರಿದರೆ ಸಾಕು, ಊರ ನಡುವೆ ಹರಿಯುವ ಹೊಳೆ ತೋಡು ಕಣಿಯ ತಿಳಿ ನೀರಲ್ಲಿ, ಪುಟ್ಟ ಪುಟ್ಟ ಗುಂಡಿ ಜಲಪಾತಗಳಲ್ಲಿ ಹೊಸ ನೀರ ಮೂಲ ಹುಡುಕಿಕೊಂಡು ಮೊಟ್ಟೆಯಿಡಲು ರಾಶಿ ರಾಶಿ ಮೀನುಗಳು ಹತ್ತುತ್ತಿದ್ದವು. ಎಷ್ಟೋ ಬಾರಿ ಅವು ನದಿಯಿಂದ ಹೊಳೆಗೆ, ಹೊಳೆ ಬಿಟ್ಟು ತೋಡು, ಕಣಿ ಏರಿ ಏರಿ ರೈತರ ಮನೆಯಂಗಳಕ್ಕೂ ಬಂದದ್ದಿದೆ. ಆದರೆ ಈಗ ಹರಿಯುವ ಕೆಂಪು ನೀರು, ಪ್ಲಾಸ್ಟಿಕ್ ಕೊಳೆ ಕಸ ಸೇರಿ ಏರು ಮೀನುಗಳಿಗೆ ವಿಷವಾಗಿ ದಾರಿ ತಪ್ಪಿಸುವ ಮಹಾಪ್ರಳಯವಾಗಿ ಕಾಣಿಸಬಹುದು. ಮೊದಲ ಮಳೆಗೆ ಹತ್ತುವ ಏರು ಮೀನು ಹಿಡಿಯುವ ರೋಚಕ ಜಲಬೇಟೆ ಇವತ್ತು ಹಳ್ಳಿಗಳಲ್ಲಿ ಕಥೆಗಳಾಗುವುದೇ ಇಲ್ಲ. ಹಿರಿಯರಿಗೆ ಬರೀ ನೆನಪುಗಳಷ್ಟೇ.
ಸುಮಾರು 35 ವರ್ಷಗಳ ಹಿಂದೆ ನಮ್ಮ ಇಡೀ ತಾಲೂಕಿನಲ್ಲಿ ಮೂರಕ್ಕಿಂತ ಹೆಚ್ಚು ಜೆಸಿಬಿ ಯಂತ್ರಗಳು ಇರಲಿಲ್ಲ. ಈಗ ಇಂಥ ಮಣ್ಣು ಬಾಚುವ ಯಂತ್ರಗಳು ಒಂದೊಂದು ಗ್ರಾಮದಲ್ಲಿ ಹತ್ತಿಪ್ಪತ್ತು ನಿಂತಿವೆ. ಜೆಸಿಬಿ ಬೋರ್‌ವೆಲ್ ಯಂತ್ರ, ಹಿಟಾಚಿ, ಕ್ರೇನ್, ಟಿಪ್ಪರ್ ಇವೆಲ್ಲ ಗ್ರಾಮ ಕೇಂದ್ರಿತ ಕೂಡು ರಸ್ತೆಯಲ್ಲಿ ಗಿರಾಕಿಗಳಿಗೆ ಕಾಯುತ್ತಿರುವ ದೃಶ್ಯ ಹಳ್ಳಿಗಳಲ್ಲಿ ಈಗ ಮಾಮೂಲು. ಹಳ್ಳಿಯ ಯಾವುದೇ ಮೂಲೆಗೆ ಅರ್ಧ ಗಂಟೆಯಲ್ಲಿ ತಲುಪುವಷ್ಟು ದೂರದಲ್ಲಿ ಇಂತಹ ಯಂತ್ರಗಳು ಕರೆಗಾಗಿ ಕಾಯುತ್ತಿವೆ. ಈಗ ನೀವೇ ಯೋಚಿಸಿ ಬರೀ ತಾಲೂಕು, ಜಿಲ್ಲೆಗಳಲ್ಲಿರುವ ಇಂತಹ ಸಾವಿರಾರು ಯಂತ್ರಗಳು ಈ ಭೂಮಿಯ ಆಯಪಾಯಗಳನ್ನು ಎಷ್ಟೊಂದು ವೇಗವಾಗಿ ಬಾಚುತಿರಬಹುದು ಮತ್ತು ಈ ಬೀಸು ಮಳೆಗೆ ಆ ಮಣ್ಣು ಎಷ್ಟು ವೇಗವಾಗಿ ಕರಗಬಹುದೆಂದು!
ಹಳ್ಳಿಗಳ ಕಥೆ ಹೇಳುವ ಮುಂಚೆ ಮಹಾಮಳೆಗೆ ನಮ್ಮ ಮಹಾನಗರಗಳ ಕಥೆ ಕೇಳಿ. ಬೆಂಗಳೂರು, ಮಂಗಳೂರು ಮುಂತಾದ ನಗರಗಳು ನಿರಂತರ ಎರಡು ದಿವಸ ಮಳೆ ಸುರಿದರೆ ಪ್ರವಾಹವನ್ನು ಬಗಲಲ್ಲಿ ಕಟ್ಟಿಕೊಳ್ಳುತ್ತವೆ. ಮಹಾರಾಜರಿಂದ ಶತಮಾನಪೂರ್ವದಲ್ಲಿ ನಿರ್ಮಾಣಗೊಂಡ ಮೈಸೂರು ಇವತ್ತಿಗೂ ಬೀಸುಮಳೆಗೆ ತತ್ತರಿಸುವುದಿಲ್ಲ. ಸ್ವತಂತ್ರ ಭಾರತದ ಅಭಿವೃದ್ಧಿ ಮಹಾನಗರಗಳಿಗೆ ಯಾವ ಪ್ರಮಾಣದಲ್ಲಿ ಶಾಪವಾಗಿ ಪರಿಣಮಿಸಿದೆ ಮತ್ತು ಅದರ ನಿತ್ಯ ನಿರಂತರ ಅನುಭೋಗಿಗಳೀಗ ಭಾಗಶಃ ನಗರದ ಪ್ರಜೆಗಳೇ.
ಹಳ್ಳಿಗೇನು ಕಡಿಮೆ ಇಲ್ಲ. ಕುಟುಂಬಗಳು ಪಾಲಾಗಿ ಎರಡು ಮೂರು ಆಗುತ್ತಾ ಹೋದ ಹಾಗೆಯೇ ಮೊದಲಿದ್ದ ಮನೆಯ ಹಿಂದೆ ಮುಂದೆ ಹೊಸ ಮನೆಗಳಿಗೆ ಪಾಯ ತೆಗೆಯುವ ಕೆಲಸ ನಡೆಯುತ್ತಲೇ ಇರುತ್ತದೆ. ಒಂದು ಸಲ ನಿಮ್ಮ ನಿಮ್ಮ ಊರುಗಳ ನಡುವೆ ಹಾದು ಹೋಗುವ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾದುಹೋಗಿ. ಆರೇಳು ದಶಕಗಳ ಹಿಂದೆ ಮೂರು ಬೆಳೆ ಕೊಡುತ್ತಿದ್ದ ಗದ್ದೆಗಳೆಲ್ಲ ಕೆಂಪು ಮಣ್ಣು ತುಂಬಿಕೊಂಡು ಮಟ್ಟಸವಾಗಿವೆ. ಗುರುತು ಸಿಗದಷ್ಟು ಕಟ್ಟಡಗಳೇ ತುಂಬಿ ಹಳ್ಳಿಗಳು ಊರಾಗಿ ಇಡೀ ಜಿಲ್ಲೆಯ ಚಹರೆ ಬದಲಾಗಿದೆ. ಕಾಲಿಟ್ಟರೆ ಹೂತು ಹೋಗುವ ಒಂದು ಕಾಲದ ಕೊಳಕೆ ಗದ್ದೆಗಳು ಈಗ ಅಗಾಧ ಪ್ರಮಾಣದ ಮಣ್ಣು ತುಂಬಿಕೊಂಡು ಸಿಮೆಂಟ್ ಸ್ಥಾವರವಾಗಿ ಬದಲಾಗಿವೆ. ಹೀಗೆ ಕಟ್ಟಡಗಳು ಎದ್ದು ನಿಂತ ಮಟ್ಟಸ ಜಾಗದಲ್ಲಿ ನಿಂತಾಗಲೆಲ್ಲ ನಿಮ್ಮ ಕಾಲಡಿಯ ಕೆಂಪು ಮಣ್ಣು ಎಲ್ಲಿಂದ ಬಂದಿರಬಹುದು ಎಂದು ಅಲ್ಲೇ ದೂರ ಒಮ್ಮೆ ದೃಷ್ಟಿ ಹಾಯಿಸಿ, ಮೊನ್ನೆ ಮೊನ್ನೆಯವರೆಗೆ ಎದೆಸೆಟೆದು ಆಕಾಶಕ್ಕೆ ಮುಖ ಮಾಡಿ ನಿಂತಿದ್ದ ಎಷ್ಟೋ ಗುಡ್ಡ ಬೆಟ್ಟಗಳು ಈಗ ನಿಮಗಲ್ಲಿ ಕಾಣಿಸದೆ ಹೋಗಬಹುದು. ಸಾಲು ಸಾಲು ಲಾರಿಗಳು ಮಣ್ಣು ತುಂಬಿ ತಂದು ಸುರಿಯುವ ದೃಶ್ಯಗಳು ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಈಗ ಸಮಾನಾಂತರವಾಗಿ ಕಾಣಿಸುತ್ತವೆ. ಲಕ್ಷಾಂತರ ವರ್ಷಗಳ ಹಿಂದೆ ಪ್ರಕೃತಿಯೇ ಕಟ್ಟಿದ ಈ ಆಯಪಾಯಗಳನ್ನು ಕಳೆದ 50 ವರ್ಷಗಳಲ್ಲಿ ಬುಡ ಸಮೇತ ದಿಕ್ಕೆಡಿಸಿದ ಕೀರ್ತಿ ಮನುಷ್ಯನದ್ದಾಗಿದೆ.
ಇಲ್ಲೆಲ್ಲ ಬಿದ್ದ ಮಹಾಮಳೆಗೆ ಬರೀ ಈ ಮಳೆಗಾಲದಲ್ಲಿ ಎಷ್ಟು ಟನ್ ಮಣ್ಣು ಕರಗಿ ನದಿ ಪಾತ್ರಗಳಲ್ಲಿ ಸೇರಿದೆ ಎಂದು ಲೆಕ್ಕ ತೆಗೆಯಲು ಸಾಧ್ಯವೇ ಇಲ್ಲ. ಪಶ್ಚಿಮ ಘಟ್ಟದಲ್ಲಿ ಭೂಮಿಯ ಪದರ ಕೆಂಪಾಗುವಿಕೆಯನ್ನು (ಮಣ್ಣಿನ ಕೆಂಪುತನವನ್ನು) ಸ್ಯಾಟಲೈಟ್ ಚಿತ್ರಗಳ ಮೂಲಕ ವಿವರಿಸುವುದು ಸಾಧ್ಯ, ಏಕೆಂದರೆ ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವು ಭೂಮಿಯ ಮೇಲ್ಮೈಯ ಭೌಗೋಳಿಕ ಬದಲಾವಣೆಗಳನ್ನು, ವಿಶೇಷವಾಗಿ ಮಣ್ಣಿನ ಕ್ಷಯ ಮತ್ತು ಗುಣಲಕ್ಷಣಗಳನ್ನು ಗುರುತಿಸಲು ಸಹಾಯಕವಾಗಿದೆ. ಪಶ್ಚಿಮ ಘಟ್ಟದ ಸಂದರ್ಭದಲ್ಲಿ, ಈ ಕೆಂಪುತನವು ಮುಖ್ಯವಾಗಿ ಮಣ್ಣಿನ ಕ್ಷಯ (soiಟ eಡಿosioಟಿ) ಮತ್ತು ಭೂಮಿಯ ಮೇಲಿನ ಫಲವತ್ತಾದ ಪದರದ ನಷ್ಟದಿಂದ ಉಂಟಾಗುತ್ತದೆ. ಐಐಟಿ ಮುಂಬೈಯ ಒಂದು ಅಧ್ಯಯನದ ಪ್ರಕಾರ, 1990ರಿಂದ 2020ರವರೆಗೆ ಪಶ್ಚಿಮ ಘಟ್ಟದಲ್ಲಿ ಮಣ್ಣಿನ ಕ್ಷಯ ಶೇ. 94ರಷ್ಟು ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಶೇ. 121, ಗುಜರಾತ್‌ನಲ್ಲಿ ಶೇ. 119, ಮಹಾರಾಷ್ಟ್ರದಲ್ಲಿ ಶೇ. 97, ಕೇರಳದಲ್ಲಿ ಶೇ. 90, ಗೋವಾದಲ್ಲಿ ಶೇ. 80 ಮತ್ತು ಕರ್ನಾಟಕದಲ್ಲಿ ಶೇ. 56ರಷ್ಟು ಮಣ್ಣು ಕ್ಷಯವಾಗಿದೆ. ಇದರಿಂದ ಫಲವತ್ತಾದ ಮೇಲ್ಮೈ ಮಣ್ಣು ಕಳೆದುಕೊಂಡು ಕೆಂಪು, ಕಡಿಮೆ ಫಲವತ್ತಾದ ಲ್ಯಾಟರೈಟ್ ಮಣ್ಣು ಎದ್ದೆದ್ದು ನದಿ, ಕಡಲು ಸೇರಿದೆ. ತೀವ್ರ ಮಳೆ, ಕಾಡು ಕಿರಿದುಗೊಳ್ಳುವಿಕೆ, ಕೃಷಿ ವಿಸ್ತರಣೆ, ಗಣಿಗಾರಿಕೆ, ಭೂಕುಸಿತಗಳೆಲ್ಲ ಮಣ್ಣಿನ ಕ್ಷಯವನ್ನು ಉಲ್ಬಣಗೊಳಿಸಿವೆ. ಇದಕ್ಕೆ ಸಾಕ್ಷಿಯಾಗಿ, 2025ರ ಜೂನ್‌ನಲ್ಲಿ ಕರ್ನಾಟಕದ ಸರಕಾರವು ಭೂಕುಸಿತದ ಕಾರಣದಿಂದ ಪಶ್ಚಿಮ ಘಟ್ಟದ ಧಾರಣ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿದೆ. ಪರಿಣಾಮ ದಾರುಣ, ಕೆಂಪು ಮಣ್ಣಿನ ಹೆಚ್ಚಳವು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿದೆ, ಜಲಾಶಯಗಳಲ್ಲಿ ಕೆಸರು ಶೇಖರಣೆಯನ್ನು ಉಂಟುಮಾಡಿದೆ ಮತ್ತು ಜೈವಿಕ ವೈವಿಧ್ಯಕ್ಕೆ ಧಕ್ಕೆ ತಂದಿದೆ. ಇದು ಕೃಷಿ ಉತ್ಪಾದಕತೆಯನ್ನು ಕಡಿಮೆ ಮಾಡಿ, ಜಲಗುಣಮಟ್ಟವನ್ನು ಹಾಳುಮಾಡಿದೆ.
ಈ ಭೂಮಿ ಮೇಲಿನ ಒಂದು ಹಿಡಿ ಮಣ್ಣನ್ನು ಕ್ಷಣಾರ್ಧದಲ್ಲಿ ನಾವು ನಾಶ ಮಾಡಿಬಿಡಬಹುದು. ಅದೇ ಮಣ್ಣನ್ನು ನಾಶ ಮಾಡಿದ ನಾವಲ್ಲ, ಮುಂದಿನ ನಮ್ಮ ಮೂರು ತಲೆಮಾರು ಸೇರಿದರೂ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಂತ ಈ ಭೂಮಿ ಮೇಲೆ ಮನುಷ್ಯನ ಹಾಗೆ ಜೀವಿಸಲು ಸಮಾನ ಅಸ್ತಿತ್ವ ಸ್ವಾತಂತ್ರ್ಯ ಪಡೆದಿರುವ ಕೋಟಿ ಕೋಟಿ ಜೀವರಾಶಿಗಳ ಪೈಕಿ ನೆಲವನ್ನು ಈ ನಮೂನೆ ಕೆದಕುವವ ಮನುಷ್ಯ ಮಾತ್ರ. ನಾಯಿ, ಮಂಗ, ನವಿಲು, ಆನೆ, ಕೋಗಿಲೆ ಇವು ಯಾವುವು ಕೂಡ ಭೂಮಿಯಲ್ಲಿ ಬದುಕುತ್ತವೆ, ಹೊರತು ತಮ್ಮ ಅಸ್ತಿತ್ವಕ್ಕಾಗಿ ನೆಲದ ಆಯಪಾಯವನ್ನು ಬದಲಾಯಿಸಲಾರವು.







