ಪ್ರಕೃತಿ ಏನು ಹೇಳುತ್ತಿದೆ, ನಾವು ಏನು ಕೇಳುತ್ತಿದ್ದೇವೆ?

ಒಂದು ವರ್ಷದ ಮಳೆ ಹಂಚಿಕೆಯಲ್ಲಿ ಆಗುವ ವ್ಯತ್ಯಾಸವನ್ನು ನಾವು ಸಾಮಾನ್ಯ ಹವಾಮಾನ ಬದಲಾವಣೆ ಎಂದು ನೋಡಬಹುದು. ಆದರೆ ಅದು ಸೃಷ್ಟಿಸುವ ಬರಗಾಲ ಮನುಷ್ಯನೊಬ್ಬನ ಸಮಸ್ಯೆಯಲ್ಲ. ಅದು ಮಣ್ಣಿನ ಸಮಸ್ಯೆ. ಅದು ಮರಗಳ ಸಮಸ್ಯೆ. ಅದು ಕಾಡಿನ ಸಮಸ್ಯೆ. ಅದು ಪಕ್ಷಿಗಳ ಸಮಸ್ಯೆ. ಅದು ಕಾಡುಪ್ರಾಣಿಗಳ ಸಮಸ್ಯೆ. ಅದು ನದಿಗಳ ಸಮಸ್ಯೆ. ಕೊನೆಗೆ ಅದು ನಾಗರಿಕತೆಯ ಸಮಸ್ಯೆ. ಕಾಡಿನ ನೀರಿನ ಗುಂಡಿ ಒಣಗಿದರೆ ಮೊದಲು ದಾಹವಾಗುವುದು ಜಿಂಕೆಗೆ. ನಂತರ ಅದರ ಹಿಂದೆ ನಡೆಯುವ ಚಿರತೆಗೆ. ಕೊನೆಗೆ ಆ ಕಾಡಿನಿಂದ ಹುಟ್ಟುವ ಹೊಳೆಯ ನೀರನ್ನು ಕುಡಿಯುವ ಮನುಷ್ಯನಿಗೂ!
ನಮ್ಮ ದೇಶದಲ್ಲಿ ಹೊಳೆಗಳು ಉಕ್ಕಿ ಹರಿದಾಗ, ನದಿಗಳು ದಡ ಮೀರಿದಾಗ, ಪಟ್ಟಣಗಳು ಮುಳುಗಿದಾಗ, ಗುಡ್ಡಗಳು ಜರಿದಾಗ, ಹಳ್ಳಿಗಳು ಸಂಪರ್ಕ ಕಳೆದುಕೊಂಡಾಗ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ಆರಂಭವಾಗುತ್ತವೆ. ಕೇಂದ್ರೀಯ ರಕ್ಷಣಾ ತಂಡಗಳು ಬರುತ್ತವೆ. ಮಿಲಿಟರಿ ನಿಯೋಜನೆಯಾಗುತ್ತದೆ. ದೋಣಿಗಳು, ಹೆಲಿಕಾಪ್ಟರ್‌ಗಳು, ಪರಿಹಾರ ಕೇಂದ್ರಗಳು ಸಿದ್ಧವಾಗುತ್ತವೆ. ನೆರೆ ಎನ್ನುವುದು ದೃಶ್ಯಮಾನವಾದ ವಿಪತ್ತು. ಅದರ ಚಿತ್ರಗಳು ಸುದ್ದಿಯಾಗುತ್ತವೆ. ಅದರ ನೋವು ಕಣ್ಣಿಗೆ ಕಾಣುತ್ತದೆ.
ಬರಗಾಲ ಹಾಗಲ್ಲ. ಅದು ರಾತ್ರಿ ಹೊತ್ತು ಬರುವ ಕಳ್ಳನಂತೆ ನಿಧಾನವಾಗಿ ಒಳನುಗ್ಗುತ್ತದೆ. ಮೊದಲಿಗೆ ಬಾವಿಯಲ್ಲಿ ನೀರು ಒಂದು ಅಡಿ ಕಡಿಮೆಯಾಗುತ್ತದೆ. ನಂತರ ಹೊಳೆಯಲ್ಲಿ ಹರಿವು ಕುಗ್ಗುತ್ತದೆ. ಆಮೇಲೆ ಕೆರೆಗಳು ಒಣಗುತ್ತವೆ. ಒಂದು ದಿನ ಮರಗಿಡಬಳ್ಳಿಗಳ ಎಲೆಗಳು ಬಾಡಲು ಆರಂಭಿಸುತ್ತವೆ. ಇನ್ನೊಂದು ದಿನ ರೈತನು ತನ್ನ ತೋಟದಲ್ಲಿ ನಿಂತು ನೀರಿನ ಲೆಕ್ಕ ಹಾಕಲು ಶುರುಮಾಡುತ್ತಾನೆ. ಬರಗಾಲ ಯಾವತ್ತೂ ಇದ್ದಕ್ಕಿದ್ದಂತೆ ಕಿರುಚುವುದಿಲ್ಲ. ಅದು ಮೌನವಾಗಿ ನಮ್ಮ ಭವಿಷ್ಯವನ್ನು ಕತ್ತರಿಸುತ್ತಾ ಸಾಗುತ್ತದೆ. ಅದರ ಪರಿಣಾಮ ದೂರಗಾಮಿ. ಅದರ ಗಾಯ ಹಲವು ವರ್ಷಗಳವರೆಗೆ ಕಾಣಿಸುತ್ತವೆ.
ಈ ವರ್ಷ ನನ್ನ ಮನಸ್ಸನ್ನು ಹೆಚ್ಚು ಕಾಡುತ್ತಿರುವುದು ಬರೀ ಮಳೆಯ ಕೊರತೆಯಲ್ಲ, ಮುಂದೆ ಆಗಬಹುದಾದ ಅಪಾಯದ ಬಗ್ಗೆ ಗಿಡಮರಗಳು ಹೇಳುತ್ತಿರುವ ಮೌನದ ಮುನ್ಸೂಚನೆ. ವಿಜ್ಞಾನ ಇದನ್ನು ಒಪ್ಪಿಕೊಳ್ಳುತ್ತದೆಯೋ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ ಗ್ರಾಮಜೀವನದ ಅನುಭವಗಳಿಗೂ ತನ್ನದೇ ಆದ ಒಂದು ವಿಜ್ಞಾನವಿದೆ. ಅದನ್ನು ನಾನು ‘ಗ್ರಾಮವಿಜ್ಞಾನ’ ಎಂದು ಕರೆಯುತ್ತೇನೆ. ಅದು ವಿಶ್ವವಿದ್ಯಾನಿಲಯದ ಪ್ರಯೋಗಾಲಯಗಳಲ್ಲಿ ಹುಟ್ಟಿದ್ದಲ್ಲ; ಹೊಲದ ಅಂಚಿನಲ್ಲಿ, ಬಾವಿಯ ದಡದಲ್ಲಿ, ತೋಟದ ನೆರಳಿನಲ್ಲಿ, ತಲೆಮಾರುಗಳಿಂದ ಸಂಗ್ರಹವಾದ ಅನುಭವಗಳಲ್ಲಿ ರೂಪುಗೊಂಡ ಲೋಕಜ್ಞಾನ.
ನೇರಳೆ ಮರಗಳು ಒಂದೇ ಅಲ್ಲ, ಬೇರೆ ಮರಗಳು ಕೂಡ ಈ ವರ್ಷ ಅಸಾಮಾನ್ಯ ಪ್ರಮಾಣದಲ್ಲಿ ಹಣ್ಣು ಬಿಟ್ಟಿವೆ. ನನ್ನ ಮನೆಯ ಸುತ್ತಮುತ್ತ ನಾನು ವರ್ಷಗಳ ಹಿಂದೆ ಕೈಯಾರೆ ನೆಟ್ಟ ಅನೇಕ ಹಣ್ಣಿನ ಗಿಡಗಳು ಈವರೆಗೆ ಯಾವತ್ತೂ ಕಾಣದಷ್ಟು ಹೂ ಬಿಟ್ಟಿವೆ. ಕೆಲವು ಗಿಡಗಳು ಜೀವನದಲ್ಲಿ ಮೊದಲ ಬಾರಿಗೆ ಕಾಯಿ ಕಚ್ಚಿವೆ. ಸಾಮಾನ್ಯವಾಗಿ ಹೂ ಬಿಡುವ ಮರಗಳೂ ಈ ಬಾರಿ ತಮ್ಮ ಸಾಮರ್ಥ್ಯವನ್ನು ಮೀರಿ ಫಲಭಾರ ಹೊತ್ತಿವೆ. ಮರುಭೂಮಿಯ ಬೆಳೆ ಎಂದೇ ಖ್ಯಾತಿ ಪಡೆದ ಡ್ರ್ಯಾಗನ್ ಈ ಸಲ ಗಂಟು ಗಂಟುಗಳಲ್ಲಿ ಹೂ ಚಾಚಿದೆ. ಇದನ್ನೆಲ್ಲ ನೋಡಿದಾಗ ಹಳ್ಳಿಯ ಹಿರಿಯರು ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ. ನೇರಳೆ ಸೇರಿದಂತೆ ಕಾಡುಮರಗಳು, ಹಣ್ಣಿನ ಮರಗಳು ಅತಿಯಾಗಿ ಕಾಯಿ ಕಟ್ಟಿದ ವರ್ಷ ಬರಗಾಲದ ನೆರಳು ಹತ್ತಿರದಲ್ಲಿರುತ್ತದೆ!
ಇದು ಮೂಢನಂಬಿಕೆಯೇ? ಅಥವಾ ಪ್ರಕೃತಿಯೇ ತನ್ನ ಭಾಷೆಯಲ್ಲಿ ಕೊಡುವ ಮುನ್ನೆಚ್ಚರಿಕೆಯೇ? ನನಗೆ ಖಚಿತವಾಗಿ ಗೊತ್ತಿಲ್ಲ. ಇದರ ಫಲಿತ ಕಾಣಿಸಬೇಕಾದರೆ ಇನ್ನೂ ಒಂದೆರಡು ತಿಂಗಳು ಕಾಯಬೇಕು. ಪ್ರಕೃತಿ ತನ್ನ ಬದುಕಿನ ರಕ್ಷಣೆಗೆ ಸಾವಿರಾರು ವರ್ಷಗಳಿಂದ ರೂಪಿಸಿಕೊಂಡಿರುವ ತಂತ್ರಗಳನ್ನು ನಾವು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ ಎನ್ನುವುದು ಮಾತ್ರ ಸತ್ಯ. ಕೆಲವೊಮ್ಮೆ ಮರಗಳು ತಮ್ಮ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳುವ ಆತಂಕದಲ್ಲಿ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತವೆಯೇನೋ ಎಂಬ ಪ್ರಶ್ನೆಯೂ ಮೂಡುತ್ತದೆ. ಪ್ರಾಣಿ, ಪಕ್ಷಿಗಳು ಭೂಕಂಪದ ಮುನ್ನ ವಿಚಿತ್ರವಾಗಿ ವರ್ತಿಸುತ್ತವೆ ಎಂದು ನಾವು ಕೇಳಿದ್ದೇವೆ. ಸುನಾಮಿಯ ಮುಂಚೆ ಸಮುದ್ರದ ಆಳ ಗುಳ್ಳೆಯನ್ನು ಎಬ್ಬಿಸುತ್ತದೆ ಎಂದು ಕೇಳಿದ್ದೇವೆ. ಹಾಗಿದ್ದರೆ ಗಿಡಮರಗಳು ಹವಾಮಾನದ ವ್ಯತ್ಯಾಸಗಳನ್ನು ಮುಂಚಿತವಾಗಿ ಗ್ರಹಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದು ಹೇಗೆ?
ಬಯಲುಸೀಮೆಯ ರೈತರಿಗೆ ಬರಗಾಲ ಹೊಸದಲ್ಲ. ಅಲ್ಲಿ ಮಳೆಯ ಅನಿಶ್ಚಿತತೆ ಬದುಕಿನ ಭಾಗವೇ ಆಗಿದೆ. ಆರು ತಿಂಗಳ ಬೆಳೆಯನ್ನು ಬಿಟ್ಟು ಮೂರು ತಿಂಗಳ ಬೆಳೆಗೆ ಬರುವುದು, ನೀರು ಕಡಿಮೆ ಬೇಕಾಗುವ ಬೆಳೆಗಳನ್ನು ಆಯ್ಕೆ ಮಾಡುವುದು, ಬಿತ್ತನೆ ದಿನಾಂಕಗಳನ್ನು ಬದಲಾಯಿಸುವುದು ಇವೆಲ್ಲ ಅವರ ಅನುಭವದ ಭಾಗ. ಆದರೆ ಅಡಿಕೆ, ತೆಂಗು, ಕೋಕೋ, ಜಾಯಿಕಾಯಿ ಮೊದಲಾದ ದೀರ್ಘಕಾಲಿಕ ಬೆಳೆಗಳನ್ನು ಅವಲಂಬಿಸಿರುವ ಮಲೆನಾಡು ಮತ್ತು ಕರಾವಳಿಯ ರೈತರಿಗೆ ಈ ಆಯ್ಕೆಗಳು ಅಷ್ಟು ಸುಲಭವಲ್ಲ. ಒಂದು ಅಡಿಕೆ ತೋಟವನ್ನು ಇದ್ದಕ್ಕಿದ್ದಂತೆ ಮೂರು ತಿಂಗಳ ಬೆಳೆಯಾಗಿ ಬದಲಾಯಿಸಲಾಗುವುದಿಲ್ಲ. ಒಂದು ತೆಂಗಿನ ಮರವನ್ನು ನೀರಿಲ್ಲದೆ ಬದುಕಿಸಿಕೊಳ್ಳುವುದೂ ಕಷ್ಟ.
ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಜನರ ಮನಸ್ಸಿನಲ್ಲಿ ಇನ್ನೂ ಮಳೆಯ ಬಗ್ಗೆ ಒಂದು ನಂಬಿಕೆ ಉಳಿದಿದೆ. ಎಷ್ಟೇ ಕಷ್ಟವಾದರೂ ಕೊನೆಗೆ ಮಳೆ ಬಂದೇ ಬರುತ್ತದೆ ಎನ್ನುವ ಭರವಸೆಯದು. ಈ ಭರವಸೆ ಹಲವು ತಲೆಮಾರುಗಳನ್ನು ಕಾಪಾಡಿದೆ. ಆದರೆ ಹವಾಮಾನ ವೈಪರೀತ್ಯಗಳ ಈ ಹೊಸ ಯುಗದಲ್ಲಿ ಆ ಭರವಸೆಯೂ ಪರೀಕ್ಷೆಗೆ ಒಳಗಾಗುತ್ತಿದೆ. ಬಯಲುಸೀಮೆಯ ನೋವು ಈಗ ನಿಧಾನವಾಗಿ ಮಲೆನಾಡು ಮತ್ತು ಕರಾವಳಿಯ ಬಾಗಿಲು ತಟ್ಟುತ್ತಿರುವಂತೆ ಕಾಣುತ್ತಿದೆ!
ನಾನು ಜ್ಯೋತಿಷಿಯಲ್ಲ. ಹವಾಮಾನ ತಜ್ಞನೂ ಅಲ್ಲ. ಆದರೆ ಈ ವರ್ಷ ಮರಗಳ ವರ್ತನೆ, ಹೂಗಳ ಸಮೃದ್ಧಿ, ಹಣ್ಣಿನ ಅತಿರೇಕ, ಬಿಸಿಲಿನ ಸ್ವಭಾವ, ನೀರಿನ ಬಗ್ಗೆ ಮನಸ್ಸಿನಲ್ಲಿ ಮೂಡುತ್ತಿರುವ ಆತಂಕ ಸಹಜವಾಗಿಯೇ ಇವೆಲ್ಲ ಸೇರಿ ಒಂದು ಪ್ರಶ್ನೆಯನ್ನು ಎಬ್ಬಿಸುತ್ತಿವೆ. ಪ್ರಕೃತಿ ನಮಗೆ ಏನಾದರೂ ಹೇಳಲು ಯತ್ನಿಸುತ್ತಿದೆಯೇ? ಪ್ರಶ್ನೆ ಇರುವುದು ಪ್ರಕೃತಿ ಏನು ಹೇಳುತ್ತಿದೆ ಎನ್ನುವುದಲ್ಲ. ನಾವು ಅದನ್ನು ಕೇಳುತ್ತಿದ್ದೇವೆಯೇ ಎನ್ನುವುದು. ನೆರೆ ಬಂದಾಗ ಮಾಡುವಷ್ಟೇ ಗಂಭೀರವಾಗಿ ಬರಗಾಲದ ಬಗ್ಗೆ ಯೋಚಿಸುತ್ತಿದ್ದೇವೆಯೇ? ನೀರನ್ನು ಉಳಿಸಿಕೊಳ್ಳುವ, ಬೆಳೆಗಳನ್ನು ಮರುಪರಿಶೀಲಿಸುವ, ಭೂಮಿಯ ತೇವವನ್ನು ಕಾಪಾಡುವ, ಹಳ್ಳಿಗಳ ಜಲಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸುವ ಕೆಲಸಗಳನ್ನು ಈಗಲೇ ಆರಂಭಿಸಿದ್ದೇವೆಯೇ?
ಏಕೆಂದರೆ ನೆರೆ ಕೇವಲ ಒಂದು ಋತುವಿನ ದುರಂತವಾಗಬಹುದು. ಆದರೆ ಬರಗಾಲ ಮುಂದಿನ ಹಲವು ವರ್ಷಗಳ ಭವಿಷ್ಯವನ್ನು ನಿರ್ಧರಿಸುವ ದುರಂತ.
ಈ ದೇಶದಲ್ಲಿ ಧಾರ್ಮಿಕವಾಗಿ ಒಂದು ಇಂಚು ಆಯತಪ್ಪಿದರೂ ಚರ್ಚೆಗಳು ಬೀದಿಗೆ ಇಳಿಯುತ್ತವೆ. ಅಯೋಧ್ಯೆಯ ಹುಂಡಿ ಕಳವಾದದ್ದು ದಿನವಿಡಿ ಚರ್ಚೆಯಾಗುತ್ತದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಮತೀಯವಾಗಿ ಯಾವುದಾದರೂ ಘಟನೆ ನಡೆದರೆ ಪತ್ರಿಕೆಗಳಲ್ಲಿ ಪುಟಗಟ್ಟಲೆ ಲೇಖನಗಳು ಪ್ರಕಟವಾಗುತ್ತವೆ. ಪರ-ವಿರೋಧದ ವಾದಗಳು ಕೇಳಿಬರುತ್ತವೆ. ಸಾಮಾಜಿಕ ಜಾಲತಾಣಗಳು ಕಾವೇರುತ್ತವೆ. ಆದರೆ ಪ್ರಕೃತಿ ಒಂದು ಇಂಚು ಆಯತಪ್ಪಿದಾಗ ಮಾತ್ರ ವಿಚಿತ್ರವಾದ ಮೌನ ಆವರಿಸುತ್ತದೆ.
ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಇನ್ನೂ ಮಳೆ ಬಿರುಸು ಪಡೆಯದಿರುವುದು, ಜೂನ್ ತಿಂಗಳ ಮಧ್ಯಭಾಗದಲ್ಲೂ ಭೂಮಿ ಬೆವರಾಡುತ್ತಿರುವುದು, ತೋಡು-ಕಣಿಗಳಲ್ಲಿ ನೀರು ಹರಿಯದಿರುವುದು, ನದಿಗಳು ಇನ್ನೂ ಮಳೆಗಾಲದ ಮುಖ ಕಾಣದಿರುವುದು, ಗುಡ್ಡಗಳ ಮೇಲೆ ಮೋಡಗಳು ಅಡ್ಡಾಡದಿರುವುದು ಇವೆಲ್ಲವೂ ಸಹಜ ಸಂಗತಿಗಳಲ್ಲ. ಇವು ಪ್ರಕೃತಿ ನಮಗೆ ಕಳುಹಿಸುತ್ತಿರುವ ಎಚ್ಚರಿಕೆಯ ಸಂದೇಶಗಳು. ಆದರೆ ಈ ಸಂದೇಶಗಳನ್ನು ಓದಲು ಇನ್ನೂ ನಾವು ಕಲಿತಿಲ್ಲ. ಇದರ ಬಗ್ಗೆ ಯಾವ ಟಿ.ವಿ.ಯಲ್ಲೂ ಗಂಭೀರ ಚರ್ಚೆಯಾದದ್ದನ್ನು ನಾನು ಕಂಡಿಲ್ಲ.
ಕ್ಯಾಲೆಂಡರ್ ಹೇಳುವ ಪ್ರಕಾರ ಈ ವರ್ಷ ಮಳೆಗಾಲ ಶುರುವಾಗಿ ಬಹಳ ದಿನಗಳಾಗಿವೆ. ತೋಟಗಳಿಗೆ ನೀರು ಹಾಕುವ ಕೆಲಸ ನಿಂತಿರಬಹುದು; ಆದರೆ ಅದರರ್ಥ ಪೂರ್ಣವಾಗಿ ಮಳೆಗಾಲ ಬಂದಿದೆ ಎಂದಲ್ಲ. ಮೋಡಗಳು ಬರುತ್ತಿವೆ, ಹೋಗುತ್ತಿವೆ; ಆದರೆ ಮಳೆಯ ಭರವಸೆ ಮಾತ್ರ ಕಾಣುತ್ತಿಲ್ಲ.
ಇವತ್ತು ಉಪಗ್ರಹ ಚಿತ್ರಗಳನ್ನು ಗಮನಿಸಿದರೆ ಇನ್ನಷ್ಟು ಆತಂಕವಾಗುತ್ತದೆ. ಮೋಡರಹಿತ ಭೂಮಿಯ ವಿಶಾಲ ವ್ಯಾಪ್ತಿ ಕಣ್ಣಿಗೆ ಬೀಳುತ್ತದೆ. ಮಳೆಗಾಲದ ಮಧ್ಯದಲ್ಲಿ ಕಾಣಬೇಕಾದ ಹಸಿರು-ಬೂದು ಮೋಡಗಳ ಬದಲಿಗೆ ನಿರ್ಜೀವವಾದ ಆಕಾಶ ಕಾಣುತ್ತದೆ. ಇದು ಕೇವಲ ಒಂದು ಹವಾಮಾನ ವೈಪರೀತ್ಯವಲ್ಲ. ಕೃಷಿ, ಕುಡಿಯುವ ನೀರು, ಜಲಾಶಯಗಳು, ಜೈವಿಕ ವೈವಿಧ್ಯ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಬೆಳವಣಿಗೆ.
ಇಂತಹ ಸಂದರ್ಭದಲ್ಲಿ ಭಾರತದ ಹವಾಮಾನ ಇಲಾಖೆ ನೀಡುವ ಮಾಹಿತಿಯನ್ನು ಕೇವಲ ಸುದ್ದಿಯಾಗಿ ಓದಿ ಮರೆತು ಬಿಡುವಂತಿಲ್ಲ. ಆ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಸರಕಾರದ ವಿವಿಧ ಇಲಾಖೆಗಳು ಗಂಭೀರವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಮಳೆ ತಡವಾದರೆ ಯಾವ ಬೆಳೆಗಳಿಗೆ ಆದ್ಯತೆ? ನೀರಿನ ನಿರ್ವಹಣೆ ಹೇಗೆ? ಜಲಾಶಯಗಳ ಸಂರಕ್ಷಣೆ ಹೇಗೆ? ಪರ್ಯಾಯ ಬೆಳೆಗಳ ಮಾರ್ಗದರ್ಶನ ಏನು? ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೇಗಿರಬೇಕು? ಎಂಬ ಪ್ರಶ್ನೆಗಳಿಗೆ ಈಗಲೇ ಉತ್ತರ ಹುಡುಕಬೇಕು.
ಕೇವಲ ‘ಬೆಳೆ ಬದಲಾಯಿಸಿ’, ‘ಪರ್ಯಾಯ ಕೃಷಿ ಮಾಡಿ’ ಎಂದು ರೈತರಿಗೆ ಸಲಹೆ ನೀಡುವುದರಿಂದ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಬೆಳೆ ಬದಲಾಯಿಸುವುದು ಒಂದು ವಾಕ್ಯದಲ್ಲಿ ಹೇಳಬಹುದಾದ ಕೆಲಸ. ಆದರೆ ರೈತನ ಬದುಕು ಒಂದು ವಾಕ್ಯದಲ್ಲಿ ಬದಲಾಗುವುದಿಲ್ಲ. ಅವನ ಬಳಿ ಬೀಜ ಇರಬೇಕು. ಮಾಹಿತಿ ಇರಬೇಕು. ಮಾರುಕಟ್ಟೆ ಇರಬೇಕು. ಆರ್ಥಿಕ ಭದ್ರತೆ ಇರಬೇಕು. ಇವೆಲ್ಲವೂ ಇಲ್ಲದೆ ನೀಡುವ ಸಲಹೆಗಳು ಕಾಗದದ ಮೇಲಿನ ಪರಿಹಾರಗಳಷ್ಟೇ.
ಈ ದೇಶದಲ್ಲಿ ಮಳೆ ಬರಬೇಕಾದ ಸಮಯದಲ್ಲಿ ಬರದಿದ್ದರೆ ಅದರ ಪರಿಣಾಮ ಮತಪೆಟ್ಟಿಗೆಯ ಮೇಲೆ ತಕ್ಷಣ ಕಾಣಿಸದಿರಬಹುದು. ಆದರೆ ಹೊಲದ ಮೇಲೆ, ಕೆರೆಯ ಮೇಲೆ, ರೈತನ ಮುಖದ ಮೇಲೆ, ಮುಂದಿನ ಪೀಳಿಗೆಯ ಬದುಕಿನ ಮೇಲೆ ಖಂಡಿತವಾಗಿಯೂ ಕಾಣಿಸುತ್ತದೆ. ಆದ್ದರಿಂದ ಮಳೆ ಬಾರದಿರುವುದು ಕೇವಲ ಹವಾಮಾನ ವರದಿಯ ವಿಷಯವಲ್ಲ. ಅದು ಸಮಾಜದ, ಸರಕಾರದ, ಕೃಷಿಯ ಮತ್ತು ಭವಿಷ್ಯದ ಚರ್ಚೆಯ ವಿಷಯವಾಗಬೇಕು. ಯಾಕೆಂದರೆ ಪ್ರಕೃತಿ ಒಂದು ಇಂಚು ಆಯತಪ್ಪಿದರೆ ಅದರ ಪರಿಣಾಮವನ್ನು ಸರಿಪಡಿಸಲು ಮನುಷ್ಯನಿಗೆ ಕೆಲವೊಮ್ಮೆ ಹಲವು ದಶಕಗಳೇ ಬೇಕಾಗುತ್ತವೆ. ನಮ್ಮಲ್ಲಿ ಜಾತಿ, ಭಾಷೆ, ಮತ, ಮಠ, ದೇವರು, ದೇವಾಲಯ, ಮಸೀದಿ, ಚರ್ಚ್ ಇವುಗಳ ಸುತ್ತ ಸಮಾಜದ ಗಮನ ಸುಲಭವಾಗಿ ಕೇಂದ್ರೀಕೃತವಾಗುತ್ತದೆ. ಜನ ಬೀದಿಗೆ ಇಳಿಯುತ್ತಾರೆ. ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಹೋರಾಟಗಳು ನಡೆಯುತ್ತವೆ. ಮಾಧ್ಯಮಗಳು ಗಂಟೆಗಟ್ಟಲೆ ಪ್ರಸಾರ ಮಾಡುತ್ತವೆ. ಆದರೆ ಮಳೆ ತನ್ನ ಸಮಯವನ್ನು ತಪ್ಪಿಸಿದಾಗ, ನದಿಯೊಂದು ಸಾಯಲು ಆರಂಭಿಸಿದಾಗ, ಬೆಟ್ಟವೊಂದು ಗಣಿಗಾರಿಕೆಯ ಹೆಸರಿನಲ್ಲಿ ನಶಿಸಿದಾಗ, ಕಾಡಿನೊಳಗಿದ್ದ ಅಪರೂಪದ ಯಾವುದೋ ಒಂದು ಗಿಳಿ ಕಾಣೆಯಾಗಲು ಆರಂಭಿಸಿದಾಗ, ಬುಡಕಟ್ಟು ಜನಾಂಗದ ಬದುಕು ಸಂಕಷ್ಟಕ್ಕೆ ಸಿಲುಕಿದಾಗ, ನಮ್ಮ ಸಮಾಜ ಅದೇ ಮಟ್ಟದ ಆತಂಕವನ್ನು ವ್ಯಕ್ತಪಡಿಸುವುದಿಲ್ಲ. ಇವುಗಳನ್ನು ನಾವು ಅಭಿವೃದ್ಧಿಯ ಬೆಲೆ, ಪರಿಣಾಮ ಎಂದು ಒಪ್ಪಿಕೊಳ್ಳುತ್ತೇವೆ. ಪ್ರಕೃತಿಯ ಸಂಕಟವನ್ನು ಒಂದು ಅಂಕಿ ಅಂಶವಾಗಿ ಓದುತ್ತೇವೆ. ಆದರೆ ಅದರ ಹಿಂದೆ ಅಡಗಿರುವ ಭವಿಷ್ಯದ ಅಪಾಯವನ್ನು ಗ್ರಹಿಸುವುದಿಲ್ಲ. ಈ ವಿಷಯ ರಾಷ್ಟ್ರದ ಆದ್ಯತೆಯ ಚರ್ಚೆಯಾಗಿ ರೂಪುಗೊಳ್ಳುತ್ತಿಲ್ಲ.
ಬಹುಶಃ ನಮ್ಮ ಸಮಸ್ಯೆಗೆ ಮೂಲ ಕಾರಣ, ನಾವು ಭೂಮಿಯನ್ನು ನಮ್ಮ ಹೊರಗಿರುವ ವಸ್ತುವೆಂದು ಭಾವಿಸುತ್ತೇವೆ. ಪ್ರಕೃತಿಯನ್ನು ನಮ್ಮ ಬದುಕಿನ ಹಿನ್ನೆಲೆಯೆಂದು ಕಾಣುತ್ತೇವೆ. ಮನುಷ್ಯನನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಯೋಚಿಸುತ್ತೇವೆ. ಆದರೆ ಸತ್ಯ ಹಾಗಲ್ಲ. ಮನುಷ್ಯನು ಪ್ರಕೃತಿಯ ಭಾಗ. ಮಣ್ಣು, ನೀರು, ಗಾಳಿ, ಕಾಡು, ಪಕ್ಷಿ, ಪ್ರಾಣಿ, ಕೀಟ, ಸೂಕ್ಷ್ಮಜೀವಿ ಇವೆಲ್ಲದರ ಒಟ್ಟಾರೆ ವ್ಯವಸ್ಥೆಯೊಳಗೆ ಮನುಷ್ಯನೂ ಸೇರಿದ್ದಾನೆ. ಅವುಗಳಲ್ಲಿ ಒಂದು ಭಾಗಕ್ಕೆ ತೊಂದರೆಯಾದರೆ ಅದರ ಪರಿಣಾಮ ಕೊನೆಗೆ ಮನುಷ್ಯನ ಬದುಕಿನ ಮೇಲೆಯೇ ಬೀಳುತ್ತದೆ.
ಒಂದು ವರ್ಷದ ಮಳೆ ಹಂಚಿಕೆಯಲ್ಲಿ ಆಗುವ ವ್ಯತ್ಯಾಸವನ್ನು ನಾವು ಸಾಮಾನ್ಯ ಹವಾಮಾನ ಬದಲಾವಣೆ ಎಂದು ನೋಡಬಹುದು. ಆದರೆ ಅದು ಸೃಷ್ಟಿಸುವ ಬರಗಾಲ ಮನುಷ್ಯನೊಬ್ಬನ ಸಮಸ್ಯೆಯಲ್ಲ. ಅದು ಮಣ್ಣಿನ ಸಮಸ್ಯೆ. ಅದು ಮರಗಳ ಸಮಸ್ಯೆ. ಅದು ಕಾಡಿನ ಸಮಸ್ಯೆ. ಅದು ಪಕ್ಷಿಗಳ ಸಮಸ್ಯೆ. ಅದು ಕಾಡುಪ್ರಾಣಿಗಳ ಸಮಸ್ಯೆ. ಅದು ನದಿಗಳ ಸಮಸ್ಯೆ. ಕೊನೆಗೆ ಅದು ನಾಗರಿಕತೆಯ ಸಮಸ್ಯೆ. ಕಾಡಿನ ನೀರಿನ ಗುಂಡಿ ಒಣಗಿದರೆ ಮೊದಲು ದಾಹವಾಗುವುದು ಜಿಂಕೆಗೆ. ನಂತರ ಅದರ ಹಿಂದೆ ನಡೆಯುವ ಚಿರತೆಗೆ. ಕೊನೆಗೆ ಆ ಕಾಡಿನಿಂದ ಹುಟ್ಟುವ ಹೊಳೆಯ ನೀರನ್ನು ಕುಡಿಯುವ ಮನುಷ್ಯನಿಗೂ.!
ಪ್ರಕೃತಿಯಲ್ಲಿ ಯಾವುದೂ ಪ್ರತ್ಯೇಕವಾಗಿಲ್ಲ. ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಆದರೆ ನಮ್ಮ ಅಭಿವೃದ್ಧಿಯ ಕಲ್ಪನೆ ಮಾತ್ರ ಈ ಸಂಬಂಧವನ್ನು ಕಡಿದು ಮರೆತು ಮುಂದುವರಿಯುತ್ತಿದೆ.
ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯೂ ಹೌದು. ನಾವು ಮಣ್ಣಿನ ಬಗ್ಗೆ ಕಲಿಯುತ್ತೇವೆ. ಆದರೆ ಮಣ್ಣಿನಲ್ಲಿ ಮಕ್ಕಳನ್ನು ನಿಲ್ಲಿಸುವುದಿಲ್ಲ. ನೀರಿನ ಬಗ್ಗೆ ಓದುತ್ತೇವೆ. ಆದರೆ ನದಿಯ ದಡದಲ್ಲಿ ಕುಳಿತು ಅದರ ಹರಿವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಗಾಳಿಯ ಬಗ್ಗೆ ಪಾಠ ಮಾಡುತ್ತೇವೆ. ಆದರೆ ಮರಗಳಿಲ್ಲದ ಭೂಮಿಯಲ್ಲಿ ಗಾಳಿಯ ಅರ್ಥವೇನು ಎಂಬುದನ್ನು ಅನುಭವಿಸುವುದಿಲ್ಲ. ನಮ್ಮ ತರಗತಿಗಳು ನೆಲದಿಂದ ದೂರವಾಗಿವೆ. ನಮ್ಮ ಪುಸ್ತಕಗಳು ಪ್ರಕೃತಿಯಿಂದ ದೂರವಾಗಿವೆ. ನಮ್ಮ ಜ್ಞಾನ ಪರೀಕ್ಷೆಯ ಅಂಕಗಳಿಗೆ ಹತ್ತಿರವಾಗಿದೆ; ಬದುಕಿನ ಅನುಭವಕ್ಕೆ ಅಲ್ಲ.
ಆ ಕಾರಣಕ್ಕಾಗಿಯೇ ಪರಿಸರ ಕಾಳಜಿ ನಮಗೆ ಬದುಕಿನ ಪ್ರಶ್ನೆಯಾಗುವುದಿಲ್ಲ. ಅದು ಅಧ್ಯಯನದ ವಿಷಯವಾಗಿಯೇ ಉಳಿದುಬಿಡುತ್ತದೆ. ಪರೀಕ್ಷೆ ಮುಗಿದ ನಂತರ ಮರೆತುಹೋಗುವ ಪಾಠವಾಗುತ್ತದೆ.
ಪರಿಸರದ ಬಗ್ಗೆ ಜಾಸ್ತಿ ಮಾತನಾಡುವವರು ಕೆಲವು ಕಾರ್ಯಕರ್ತರು, ಕೆಲವು ಶಿಕ್ಷಕರು, ಕೆಲವು ಸಂಶೋಧಕರು ಎಂಬ ಭಾವನೆ ಸಮಾಜದಲ್ಲಿ ಬೆಳೆದಿದೆ. ಆದರೆ ವಾಸ್ತವದಲ್ಲಿ ಪರಿಸರ ಎನ್ನುವುದು ಎಲ್ಲರ ಬದುಕಿನ ಪ್ರಶ್ನೆ. ನದಿಯ ಬಗ್ಗೆ ಹೋರಾಟ ನಡೆಯಬೇಕು. ಕಾಡಿನ ಬಗ್ಗೆ ಚಳವಳಿ ನಡೆಯಬೇಕು. ಗಣಿಗಾರಿಕೆಯ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ಮಳೆಯ ಬಗ್ಗೆ ಜನಜಾಗೃತಿ ಮೂಡಬೇಕು. ನೀರಿನ ಬಗ್ಗೆ ಮಕ್ಕಳಿಂದ ಹಿರಿಯರವರೆಗೆ ಶಿಕ್ಷಣ ನೀಡಬೇಕು. ಯಾಕೆಂದರೆ ಇವುಗಳೆಲ್ಲವೂ ಯಾವುದೋ ಒಂದು ಪ್ರತ್ಯೇಕ ವಿಷಯಗಳಲ್ಲ; ನಮ್ಮ ಅಸ್ತಿತ್ವದ ಪ್ರಶ್ನೆಗಳು.






