ಬದುಕನ್ನು ಕೆಳಗಿನಿಂದ ಪ್ರವೇಶಿಸುವುದೆಂದರೆ...

ಬದುಕನ್ನು ಮೇಲಿನಿಂದ ಪ್ರವೇಶಿಸುವುದಕ್ಕೂ ಕೆಳಗಿನಿಂದ ಪ್ರವೇಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಲಿನಿಂದ ಪ್ರವೇಶಿಸಿದವನು ಸೌಲಭ್ಯಗಳ ಮೂಲಕ ಬದುಕನ್ನು ನೋಡಬಹುದು. ಕೆಳಗಿನಿಂದ ಪ್ರವೇಶಿಸಿದವನು ಅವುಗಳ ಹಿಂದೆ ಇರುವ ಶ್ರಮ, ಪ್ರಕೃತಿ, ಸಂಬಂಧ ಮತ್ತು ಸಂಕಟಗಳನ್ನೂ ಕಾಣಬಲ್ಲನು. ಎರಡನೆಯ ಅನುಭವವು ಮೊದಲನೆಯದಕ್ಕೆ ವಿರೋಧಿಯಲ್ಲ; ಅದಕ್ಕೆ ಅಗತ್ಯವಾದ ನೆಲೆಯನ್ನು ಒದಗಿಸುತ್ತದೆ.
ಇತ್ತೀಚೆಗೆ ಚೀನಾ, ಜಪಾನ್ ಮತ್ತು ದುಬೈಗಳ ಶಾಲೆಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪುಸ್ತಕಗಳ ಆಚೆಯ ಬದುಕನ್ನು ಪರಿಚಯಿಸುವ ಬಗೆಯನ್ನು ತೋರಿಸುವ ವೀಡಿಯೊಗಳನ್ನು ನೋಡುತ್ತಿದ್ದೆ. ಸಾಮಾನ್ಯವಾಗಿ ನಾವು, ಶಾಲೆಯೆಂದರೆ ನಾಲ್ಕು ಗೋಡೆಗಳು, ಕಪ್ಪುಹಲಗೆ, ಪುಸ್ತಕ, ಪೆನ್ನು, ಶಿಕ್ಷಕರು ಮತ್ತು ಪಾಠ ಎಂದುಕೊಂಡಿದ್ದೇವೆ. ಆದರೆ ಈ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದ್ದ ಪಾಠಗಳೇ ಬೇರೆ. ಕೋಳಿಗೂಡಿನೊಳಗಿರುವ ಮೊಟ್ಟೆಗಳನ್ನು ಸಂಗ್ರಹಿಸುವುದು, ಹಸುಗಳಿಗೆ ಹುಲ್ಲು ತಿನ್ನಿಸುವುದು, ಗಿಡ ನೆಡುವುದು, ಬೀಜ ಬಿತ್ತುವುದು, ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು, ಹಣ್ಣುಗಳನ್ನು ಸಂಗ್ರಹಿಸುವುದು, ಮರದ ಕೆಳಗೆ ಬಿದ್ದ ತರಗೆಲೆಗಳನ್ನು ಹೆಕ್ಕುವುದು, ಉಂಡ ಬಟ್ಟಲನ್ನು ತಾವೇ ತೊಳೆಯುವುದು... ಇವೆಲ್ಲವೂ ಅಲ್ಲಿ ಮಕ್ಕಳ ಕಲಿಕೆಯ ಭಾಗವಾಗಿದ್ದವು. ಪುಟ್ಟಪುಟ್ಟ ಗರಗಸಗಳಿಂದ ಹಲಗೆಗಳನ್ನು ಕೊಯ್ಯುವುದು, ಸ್ಕ್ರೂಗಳನ್ನು ಹಾಕುವುದು, ಕೈಯಿಂದ ಕೆಲವು ಸರಳ ವಸ್ತುಗಳನ್ನು ತಯಾರಿಸುವುದು ಮುಂತಾದ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಶಾಲೆಯ ಅಂಗಳದಲ್ಲಿದ್ದ ಪುಟ್ಟ ಈಜುಕೊಳದಲ್ಲಿ ಈಜುವುದು, ನೀರಾಟವಾಡುವುದು, ಹಣ್ಣಿನ ತೋಟದಲ್ಲಿ ಬಿದ್ದ ಹಣ್ಣುಗಳನ್ನು ಆರಿಸುವುದು, ಬಿಸಿಲೇರಿದಾಗ ಮರದ ನೆರಳಿಗೆ ಹೋಗುವುದು, ಜೇನುಹುಳಗಳು ಹೂವುಗಳಿಂದ ಮಕರಂದ ಹೀರುವುದನ್ನು ಗಮನಿಸುವುದು, ಮೊಸರಿನಿಂದ ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುವುದು ಹೀಗೆ ಬದುಕಿನ ಅನೇಕ ಸರಳ ಕ್ರಿಯೆಗಳು ಮಕ್ಕಳಿಗೆ ಅಲ್ಲಿ ಪಾಠವಾಗಿದ್ದವು.
ಬದುಕನ್ನು ಕೆಳಗಡೆಯಿಂದ ಪ್ರವೇಶಿಸುವುದೆಂದರೆ ಹೀಗೆಯೇ ಇರಬೇಕು. ನಾವು ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಇವೆಲ್ಲವೂ ಪಠ್ಯಕ್ರಮದ ಭಾಗವಾಗಿರಲಿಲ್ಲ. ಆದರೆ ಬದುಕಿನ ಭಾಗವಾಗಿದ್ದವು. ಹೊಳೆ, ನದಿ, ತೋಡುಗಳನ್ನು ದಾಟುವುದು, ಅವುಗಳ ಮೇಲಿನ ಪಾಲಗಳನ್ನು ಕ್ರಮಿಸುವುದು, ತಡೆಮೆ ದಾಟುವುದು, ಬೆಟ್ಟ ಹತ್ತುವುದು, ಕಣಿವೆಗೆ ಇಳಿಯುವುದು ಇವೆಲ್ಲ ನಮಗೆ ಗೊತ್ತಿದ್ದವು. ಇವುಗಳನ್ನು ಕಲಿಸುವುದಕ್ಕೆ ಪ್ರತ್ಯೇಕ ಶಿಕ್ಷಕರಿರಲಿಲ್ಲ. ತರಬೇತಿ ಶಿಬಿರಗಳಿರಲಿಲ್ಲ. ನಮ್ಮ ಆ ಕಾಲದ ಬದುಕಿನ ಬಡತನದ ಪರಿಸ್ಥಿತಿಯೇ ನಮಗೆ ಇವುಗಳನ್ನು ಕಲಿಸುತ್ತಿತ್ತು. ಹಿರಿಯರ ನಿರ್ಲಕ್ಷ್ಯ, ಹಸಿವು ಕೂಡ ಒಂದು ರೀತಿಯಲ್ಲಿ ನಮ್ಮ ಬದುಕಿನ ವಿಶ್ವವಿದ್ಯಾನಿಲಯವೇ.
ಆ ಲೋಕದಲ್ಲಿ ನಮಗೆ ಹಸಿವಿನ ಅನುಭವವಿತ್ತು. ಅನ್ನದ ಬೆಲೆಯೂ ರುಚಿಯೂ ಗೊತ್ತಿತ್ತು. ಹೊಟ್ಟೆ ತುಂಬ ತಿನ್ನಲು ಏನೂ ಸಿಗದಿದ್ದಾಗ ಮರ ಹತ್ತಿ ಹಣ್ಣು ಕೊಯ್ಯುವುದು, ಮಣ್ಣನ್ನು ಬಗೆದು ಗೆಡ್ಡೆಗಳನ್ನು ಹುಡುಕುವುದು, ಸುತ್ತಮುತ್ತಲಿನ ಪರಿಸರದಲ್ಲಿ ತಿನ್ನಲು ಸಿಗುವ ವಸ್ತುಗಳನ್ನು ಗುರುತಿಸುವುದು ನಮಗೆ ಗೊತ್ತಿತ್ತು. ಈಜುವುದನ್ನು ಎಂದಿಗೂ ನಾವು ಫ್ಯಾಷನ್ಗಾಗಿ ಕಲಿತವರಲ್ಲ. ಶಾಲೆಯಿಂದ ಮನೆಗೆ ಮರಳುವಾಗ ಯಾವುದೋ ಸಹಪಾಠಿ ಕೆರೆಗೆ ಅಥವಾ ಹೊಳೆಗೆ ಇಳಿದರೆ, ಅವನನ್ನು ಹಿಂಬಾಲಿಸುವುದೋ ನೀರಿನಲ್ಲಿ ಆಟವಾಡುವುದೋ ನಮ್ಮ ಸಹಜ ಆಸಕ್ತಿಯಾಗಿತ್ತು. ಕೆಲವೊಮ್ಮೆ ಮನೆ ಸೇರುವ ದಾರಿಯಲ್ಲಿ ಹೊಳೆಯ ನೀರಿನ ಸೆಳೆತಕ್ಕೆ ಸಿಲುಕಿ ಪಾರಾಗಿ ದಡ ಸೇರುವ ಸಾಮರ್ಥ್ಯವೂ ಬದುಕಿನ ಅನುಭವದಿಂದಲೇ ಬರುತ್ತಿತ್ತು. ಇವೆಲ್ಲವೂ ನಮಗೆ ಕಲಿಕೆಯೆಂದು ಅನಿಸಿರಲಿಲ್ಲ. ಬದುಕಬೇಕಾದ ಅನಿವಾರ್ಯತೆಯೇ ನಮ್ಮೊಳಗೆ ಒಂದಷ್ಟು ಕೌಶಲ್ಯಗಳನ್ನು ಬೆಳೆಸಿತ್ತು. ಹಸಿವು, ಬಡತನ, ಪ್ರಕೃತಿ, ಪರಿಸರ ಮತ್ತು ದೈನಂದಿನ ಕೆಲಸಗಳು ನಮ್ಮನ್ನು ಬದುಕಿನ ಕೆಳಗಿನ ಪಾತಾಳದ ಮೆಟ್ಟಿಲುಗಳಿಂದ ಮೇಲಕ್ಕೆ ಕರೆದುಕೊಂಡು ಹೋಗುತ್ತಿದ್ದವು.
ಆದರೆ ಇಂದಿನ ಮಹಾನಗರದ ಮಗುವಿನ ಬದುಕಿನ ಪ್ರವೇಶದ್ವಾರವೇ ಬೇರೆ. ಅಲ್ಲಿ ಎಲ್ಕೆಜಿ, ಯುಕೆಜಿಗೆ ಲಕ್ಷಾಂತರ ರೂಪಾಯಿ ಶುಲ್ಕ ಕೊಟ್ಟು ಮಗುವನ್ನು ಶಾಲೆಗೆ ಸೇರಿಸುವ ಪೋಷಕರಿದ್ದಾರೆ. ಆ ಮಗುವಿನ ಮುಂದಿನ ಶಿಕ್ಷಣ, ಉದ್ಯೋಗ, ಸಂಬಳ, ಕಾರು, ಮನೆ ಇವೆಲ್ಲವೂ ಬಾಲ್ಯದಲ್ಲೇ ಪೋಷಕರ ಕನಸುಗಳಾಗಿ ರೂಪುಗೊಂಡಿರುತ್ತವೆ. ಉನ್ನತ ಶಿಕ್ಷಣ ಮುಗಿಯುವ ಹೊತ್ತಿಗೆ ದೊಡ್ಡ ಸಂಬಳದ ಉದ್ಯೋಗ ಸಿಗಬೇಕು, ಓಡಾಡಲು ಕಾರು ಇರಬೇಕು, ವಾಸಿಸಲು ದೊಡ್ಡ ಮನೆ ಇರಬೇಕು... ಇವೆಲ್ಲ ತಪ್ಪುಗಳೆಂದು ಹೇಳಲಾಗದು. ಆದರೆ ಆ ಕನಸುಗಳ ನಡುವೆ ಮಗುವಿಗೆ ಬದುಕಿನ ಕೆಳಗಿನ ಮೆಟ್ಟಿಲುಗಳ ಪರಿಚಯವೇ ಇಲ್ಲದಂತಾದರೆ ಏನು ಮಾಡುವುದು? ದುಡಿಯುವ ಮನುಷ್ಯನ ಬೆವರಿನ ಬೆಲೆ, ಅನ್ನದ ಹಿಂದೆ ಇರುವ ಶ್ರಮ, ಒಂದು ಗಿಡ ಬೆಳೆದು ಫಲ ನೀಡಲು ಬೇಕಾದ ಸಮಯ, ನೀರಿನ ಕೊರತೆಯಲ್ಲಿ ರೈತ ಅನುಭವಿಸುವ ಸಂಕಟ, ಒಂದು ಮನೆಯ ದೈನಂದಿನ ಬದುಕನ್ನು ನಡೆಸಲು ಬೇಕಾಗುವ ಶ್ರಮ ಇವೆಲ್ಲವೂ ಮಗುವಿನ ಅನುಭವಕ್ಕೆ ಬಾರದಿದ್ದರೆ, ಮುಂದೆ ಅದು ಬದುಕನ್ನು ಯಾವ ನೆಲೆಯಿಂದ ಅರ್ಥಮಾಡಿಕೊಳ್ಳುತ್ತದೆ? ಬದುಕಿನ ಮೇಲಿನ ಮೆಟ್ಟಿಲುಗಳನ್ನು ತಲುಪುವುದು ತಪ್ಪಲ್ಲ. ಆದರೆ ಕೆಳಗಿನ ಮೆಟ್ಟಿಲುಗಳನ್ನು ನೋಡದೆಯೇ ಮೇಲಕ್ಕೆ ಹೋಗುವುದು ಅಪಾಯಕಾರಿ.
ಕೆಳಗಿನಿಂದ ಮೇಲಕ್ಕೆ ಹತ್ತಿದವನಿಗೆ ದಾರಿಯ ಕಷ್ಟ ಗೊತ್ತಿರುತ್ತದೆ. ಮಧ್ಯದಲ್ಲಿ ಜಾರಿಬಿದ್ದವನ ಸಂಕಟವೂ ಅರ್ಥವಾಗುತ್ತದೆ. ಹಸಿವಿನಿಂದ ಬಳಲಿದವನಿಗೆ ಊಟದ ಬೆಲೆ ಗೊತ್ತಿರುತ್ತದೆ. ದುಡಿದು ಬೆಳೆ ಬೆಳೆದವನಿಗೆ ಒಂದು ಅನ್ನದ ಹಿಂದೆ ಇರುವ ಶ್ರಮ ಗೊತ್ತಿರುತ್ತದೆ. ಆದರೆ ಬದುಕಿನ ಸೌಲಭ್ಯಗಳನ್ನೇ ಸಹಜ ಹಕ್ಕುಗಳೆಂದು ಭಾವಿಸಿ ಬೆಳೆದವನಿಗೆ ಅವುಗಳ ಹಿಂದೆ ಇರುವ ಶ್ರಮ ಮತ್ತು ಸಂಕಟಗಳು ಅರ್ಥವಾಗದೆ ಹೋಗಬಹುದು. ಇದು ಎಲ್ಲ ಮಕ್ಕಳಿಗೂ ಅನ್ವಯಿಸುವ ನಿಯಮವಲ್ಲ. ಸೌಲಭ್ಯಗಳ ನಡುವೆ ಬೆಳೆದವರಲ್ಲೂ ಅಪಾರ ಸಂವೇದನೆ ಇರುವವರಿದ್ದಾರೆ. ಆದರೂ ಬದುಕಿನ ಅನುಭವಗಳಿಂದ ದೂರವಿರುವ ಶಿಕ್ಷಣವು ಮಕ್ಕಳಲ್ಲಿ ಬೆಳೆಸಬಹುದಾದ ಅಂತರದ ಬಗ್ಗೆ ನಾವು ಯೋಚಿಸಬೇಕಾಗಿದೆ.
ನಮ್ಮ ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಬಡತನದ ನಡುವೆಯೇ ಇಂಥ ಅನೌಪಚಾರಿಕ ಶಿಕ್ಷಣ ಮಕ್ಕಳಿಗೆ ಸಿಗುತ್ತಿತ್ತು. ಮನೆಯ ಕೆಲಸಗಳಲ್ಲಿ ಕೈಜೋಡಿಸುವುದು, ದನಕರುಗಳನ್ನು ನೋಡಿಕೊಳ್ಳುವುದು, ಹುಲ್ಲು ತರುವುದು, ಹೊಲದಲ್ಲಿ ದುಡಿಯುವುದು, ಗಿಡಮರಗಳ ಪರಿಚಯ ಮಾಡಿಕೊಳ್ಳುವುದು, ಹಿರಿಯರೊಂದಿಗೆ ತೋಟಕ್ಕೆ ಹೋಗುವುದು, ಮಳೆ ಬಂದಾಗ ನೀರಿನ ಹರಿವನ್ನು ಗಮನಿಸುವುದು, ಅಡುಗೆಮನೆಗೆ ಬೇಕಾದ ಸೌದೆ ಸಂಗ್ರಹಿಸುವುದು ಇವೆಲ್ಲವೂ ಬದುಕಿನ ಪಾಠಗಳಾಗಿದ್ದವು. ಇವುಗಳಲ್ಲಿ ಶ್ರಮವಿತ್ತು; ಜವಾಬ್ದಾರಿಯಿತ್ತು; ಪ್ರಕೃತಿಯ ಪರಿಚಯವಿತ್ತು; ಕುಟುಂಬದ ಇತರ ಸದಸ್ಯರೊಂದಿಗೆ ಸಹಬಾಳ್ವೆಯಿತ್ತು. ಒಂದು ಕೆಲಸವನ್ನು ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬ ಅನುಭವವೂ ಇತ್ತು. ಮಕ್ಕಳು ಪುಸ್ತಕದಿಂದ ಮಾತ್ರವಲ್ಲ, ಸುತ್ತಮುತ್ತಲಿನ ಬದುಕಿನಿಂದಲೂ ಕಲಿಯುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಹತ್ತಿರ ಬೆಂಗಳೆ ಎನ್ನುವ ನಾಗರಿಕ ಜಗತ್ತಿನಿಂದ ದೂರದ ಹಳ್ಳಿಯಲ್ಲಿ ಈ ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಆಲ್ಫಾ ಕಾಮರ್ಸ್ ಎಂಬ ಸಾಫ್ಟ್ವೇರ್ ಕಂಪೆನಿಯೊಂದನ್ನು ಸ್ಥಾಪಿಸಿ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ ಗೌತಮ್ ಬೆಂಗಳೆ ಬದುಕನ್ನು ಹೀಗೆಯೇ ಕೆಳಗಡೆಯಿಂದಲೇ ಪ್ರವೇಶಿಸಿ ಇವತ್ತು ಉನ್ನತ ಹಂತಕ್ಕೆ ಏರಿದವರು. ‘‘ಚಿಕ್ಕಂದಿನಲ್ಲಿ ನನ್ನೂರಲ್ಲಿ ನೋಡಿದ ಮಳೆಗಾಲ, ಗದ್ದೆ ಬಯಲಿನ ಹಸಿರು, ಕಾಡಿನ ಹಣ್ಣುಗಳು, ಊರಿನ ಅಳ್ಳಿಕಟ್ಟೆ, ಮನೆಯವರ, ಊರವರ ಒಡನಾಟ ಇದೆಲ್ಲವನ್ನೂ ನಾನು ಎಷ್ಟೇ ದುಡ್ಡು ಕೊಟ್ಟರೂ ದೊಡ್ಡ ನಗರದಲ್ಲಿ ಕುಳಿತು ಪಡೆಯಲಾರೆ. ನಮ್ಮ ಬಳಿ ದುಡ್ಡು ಇದ್ದರೆ ಈಗ ಹಳ್ಳಿಯಲ್ಲಿ ಸಿಗದ ವಸ್ತುಗಳಿಲ್ಲ. ಅಂತೆಯೇ ನನ್ನ ಬಾಲ್ಯ ನನ್ನ ಮಕ್ಕಳಿಗೆ ಸಿಗಲಿ. ನನ್ನ ಪಾಲಕರಿಗೆ ನಾವು ಮನೆಯಲ್ಲಿ ಇದ್ದೇವೆ ಎಂಬ ಭರವಸೆಯೇ ಒಂದು ಉತ್ಸುಕತೆಯಾಗಲಿ ಎಂಬುದು ಒಂದು ಆಶಯ. ಹಾಗೆಯೇ ಅವಕಾಶವಿದ್ದಲ್ಲಿ ನನ್ನಂತೆ ಮನೆಯಲ್ಲೇ ಉಳಿದು ಕೆಲಸ ಮಾಡುವ ಸಮಾನ ಮನಸ್ಕರಿಗೆ ನನ್ನ ಕಂಪೆನಿ ಒಂದು ವೇದಿಕೆ ಆಗಲಿ ಎಂಬ ಸಣ್ಣ ಪ್ರಯತ್ನ ನನ್ನದು ಎಂಬ ಸ್ವಾರ್ಥ ಸ್ವಲ್ಪ ವಿಸ್ತೃತವಾದಾಗ ನಮ್ಮ ಮನೆಯನ್ನು ದಾಟಿ, ಊರು ಎಂಬ ಕಲ್ಪನೆ ಹುಟ್ಟಿದಾಗ ಅದರ ಮೌಲ್ಯಗಳು ನಮ್ಮನ್ನು ಮರಳಿ ಗೂಡಿಗೆ ಕರೆ ತರುತ್ತದೆ’’ ಎನ್ನುತ್ತಾರೆ ಗೌತಮ್.
ಇಂದು ದೇರ್ಲ, ಬೆಂಗಳೆಯೂ ಸೇರಿ ಈ ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಈ ಸಹಜ ಕಲಿಕೆಯ ಅವಕಾಶಗಳು ಕಡಿಮೆಯಾಗುತ್ತಿವೆ. ಹಳದಿ ಬಣ್ಣದ ಶಾಲಾ ಬಸ್ಸುಗಳು ದಿನಕ್ಕೆ ಎರಡು ಹೊತ್ತು ಗ್ರಾಮಗಳ ಒಳ ರಸ್ತೆಗಳಲ್ಲಿ ಓಡಾಡುತ್ತವೆ. ಬದುಕನ್ನು ಕೆಳಗಡೆಯಿಂದ ಪ್ರವೇಶಿಸಿ ಬೆಳೆದ ತಂದೆತಾಯಂದಿರೇ ತಮ್ಮ ಮಕ್ಕಳನ್ನು ಆ ಬಸ್ಸುಗಳಿಗೆ ಏರಿಸುತ್ತಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದು ಅಗತ್ಯವೇ. ಆದರೆ ಶಾಲೆಯ ಅಂಗಳಕ್ಕೆ ತಲುಪಿದ ಮಗುವಿಗೆ ಅಲ್ಲಿ ಸಿಗುವ ಶಿಕ್ಷಣ ಬದುಕಿನೊಂದಿಗೆ ಸಂಬಂಧ ಹೊಂದಿದೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ಮನೆಯ ಅಂಗಳದಲ್ಲಿ ಬದನೆಕಾಯಿ ಗಿಡವನ್ನು ನೋಡದ ಮಗುವಿಗೆ ತರಗತಿಯೊಳಗೆ ಬದನೆಕಾಯಿಯ ಚಿತ್ರ ತೋರಿಸಿ ಅದರ ಹೆಸರು, ಬಣ್ಣ, ಆಕಾರಗಳನ್ನು ಕಲಿಸಲಾಗುತ್ತದೆ. ಆದರೆ ಆ ಗಿಡವನ್ನು ನೆಡುವುದು ಹೇಗೆ, ಮಣ್ಣು ಹದ ಮಾಡುವುದು ಹೇಗೆ, ನೀರು ಎಷ್ಟು ಬೇಕು, ಕಾಯಿ ಬಿಡಲು ಎಷ್ಟು ದಿನ ಬೇಕು, ಕೀಟಗಳು ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿಸುವ ಅವಕಾಶ ಸಿಗುತ್ತದೆಯೇ?
ಶಿಕ್ಷಣವೆಂದರೆ ಖಂಡಿತ ಪುಸ್ತಕಗಳನ್ನು ನಿರಾಕರಿಸುವುದಲ್ಲ. ಪುಸ್ತಕಗಳ ಮೂಲಕ ಜಗತ್ತನ್ನು ತಿಳಿಯುವುದರ ಜೊತೆಗೆ, ಜಗತ್ತಿನ ಮೂಲಕ ಪುಸ್ತಕಗಳನ್ನು ಅರ್ಥಮಾಡಿಕೊಳ್ಳುವುದೂ ಆಗಿದೆ. ಇಂದಿನ ದೊಡ್ಡ ಸಮಸ್ಯೆಯೆಂದರೆ, ಶಾಲೆಯ ಹೊರಗಿನ ಕಲಿಕೆಯನ್ನು ನಾವು ಶಿಕ್ಷಣವೆಂದೇ ಪರಿಗಣಿಸದಿರುವುದು. ಒಂದು ಶಾಲೆಯಲ್ಲಿ ಮಕ್ಕಳು ಗಿಡ ನೆಡುತ್ತಾರೆ, ಹಣ್ಣು ಸಂಗ್ರಹಿಸುತ್ತಾರೆ, ನೀರಿನಲ್ಲಿ ಈಜುತ್ತಾರೆ ಎಂದಿಟ್ಟುಕೊಳ್ಳಿ. ಇಂಥ ಶಾಲೆಯಲ್ಲಿ ತಮ್ಮ ಮಗುವಿಗೆ ಸಾಕಷ್ಟು ಪಾಠ ಹೇಳಿಕೊಡುತ್ತಿಲ್ಲ ಎಂದು ಕೆಲವು ಪೋಷಕರೇ ಆತಂಕಪಡುತ್ತಾರೆ. ಆ ಕಾರಣಕ್ಕೆ ಮಗುವನ್ನು ಮತ್ತೊಂದು ಶಾಲೆಗೆ ಸೇರಿಸುವ ನಿರ್ಧಾರಕ್ಕೂ ಬರುತ್ತಾರೆ. ಮಗುವಿನ ಬೆರಳುಗಳಿಗೆ ಮಣ್ಣಿನ ಸ್ಪರ್ಶವಾಗುವುದು, ಗಿಡದ ಚಿಗುರನ್ನು ಮುಟ್ಟುವುದು, ಪತಂಗದ ಬಣ್ಣವನ್ನು ಆಸ್ವಾದಿಸುವುದು, ಹೂವಿನ ರಚನೆಯನ್ನು ಹತ್ತಿರದಿಂದ ನೋಡುವುದು, ಒಂದು ವಸ್ತುವನ್ನು ತನ್ನ ಕೈಯಿಂದ ತಯಾರಿಸುವುದು ಇವೆಲ್ಲವೂ ಶಿಕ್ಷಣದ ಭಾಗವಾಗಬೇಕೆಂಬ ನಂಬಿಕೆ ಇನ್ನೂ ನಮ್ಮಲ್ಲಿ ವ್ಯಾಪಕವಾಗಿಲ್ಲ.
ಇವತ್ತು ಬದುಕಿನ ನಿಜವಾದ ಅನುಭವಗಳನ್ನು ಶಿಕ್ಷಣದ ಹೊರಗಡೆ ನಿಲ್ಲಿಸುತ್ತಿದ್ದೇವೆ. ಇದರ ಪರಿಣಾಮ ಮಕ್ಕಳ ಮನಸ್ಸಿನ ಮೇಲೂ ಗಾಢವಾಗಿ ಬೀಳಬಹುದು. ಎಲ್ಲವೂ ಸುಲಭವಾಗಿ ದೊರೆಯುವ ಪರಿಸರದಲ್ಲಿ ಬೆಳೆದ ಮಗುವಿಗೆ ನಿರೀಕ್ಷಿಸಿದ ಕೆಲಸ ತಕ್ಷಣ ಸಿಗದಿದ್ದಾಗ ಅದನ್ನು ಎದುರಿಸುವ ತಾಳ್ಮೆ ಬೆಳೆಸಿಕೊಳ್ಳಲು ಹೆಚ್ಚಿನ ಅವಕಾಶ ಬೇಕಾಗುತ್ತದೆ. ಒಂದು ಗಿಡವನ್ನು ನೆಟ್ಟ ಮರುದಿನವೇ ಹಣ್ಣು ಸಿಗುವುದಿಲ್ಲ. ಬೀಜ ಮೊಳಕೆಯೊಡೆಯಲು ಸಮಯ ಬೇಕು. ಮಳೆ ಬಾರದಿದ್ದರೆ ಬೆಳೆ ಬೆಳೆಯುವುದಿಲ್ಲ. ಒಂದು ಮರದ ಹಲಗೆಯನ್ನು ರೂಪಿಸಲು ಕೈಚಳಕ ಬೇಕು. ಇಂಥ ಅನುಭವಗಳು ಮಕ್ಕಳಿಗೆ ಕಾಯುವುದನ್ನು, ಪ್ರಯತ್ನಿಸುವುದನ್ನು, ತಪ್ಪುಗಳಿಂದ ಕಲಿಯುವುದನ್ನು ಮತ್ತು ಸೋಲಿನ ನಂತರ ಮತ್ತೆ ಪ್ರಯತ್ನಿಸುವುದನ್ನು ಕಲಿಸುತ್ತವೆ. ಬದುಕಿನಲ್ಲಿ ಎಲ್ಲವೂ ತಾವು ಬಯಸಿದಂತೆ ನಡೆಯುವುದಿಲ್ಲ ಎಂಬ ಸರಳ ಸತ್ಯವನ್ನು ಇವು ಪರಿಚಯಿಸುತ್ತವೆ. ಇಂತಹ ಅನುಭವಗಳ ಕೊರತೆಯು ಕೆಲವು ಮಕ್ಕಳಲ್ಲಿ ಸಣ್ಣ ಅಡಚಣೆಗಳನ್ನೂ ದೊಡ್ಡ ಸಂಕಟಗಳಾಗಿ ಅನುಭವಿಸುವ ಮನೋಭಾವಕ್ಕೆ ಕಾರಣವಾಗಬಹುದು. ಆದರೆ ಮಕ್ಕಳನ್ನು ಕಷ್ಟಕ್ಕೆ ಒಡ್ಡುವುದೇ ಶಿಕ್ಷಣವೆಂದು ಇದರ ಅರ್ಥವಲ್ಲ. ಅವರಿಗೆ ಕಷ್ಟವನ್ನು ಅರ್ಥಮಾಡಿಕೊಳ್ಳುವ ಮತ್ತು ಎದುರಿಸುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣದ ಉದ್ದೇಶವಾಗಬೇಕು.
ರೈತನ ಮಗುವಾಗಿರಲಿ, ಮಹಾನಗರದ ಉದ್ಯಮಿಯ ಮಗುವಾಗಿರಲಿ, ಮಣ್ಣನ್ನು ಮುಟ್ಟುವ, ಗಿಡ ಬೆಳೆಸುವ, ನೀರನ್ನು ಉಳಿಸುವ, ಆಹಾರ ತಯಾರಾಗುವ ವಿಧಾನವನ್ನು ತಿಳಿಯುವ, ಕೈಯಿಂದ ಕೆಲಸ ಮಾಡುವ, ಇತರರ ಶ್ರಮವನ್ನು ಗೌರವಿಸುವ ಅವಕಾಶ ಪ್ರತಿಯೊಂದು ಮಗುವಿಗೂ ದೊರೆಯಬೇಕು. ಹಳ್ಳಿಯ ಬದುಕಿನಲ್ಲಿದ್ದ ಅನುಭವಗಳನ್ನು ಹಳ್ಳಿಗಳೇ ಕಳೆದುಕೊಳ್ಳುತ್ತಿರುವಾಗ, ನಗರಗಳ ಮಕ್ಕಳಿಗೆ ಅವುಗಳನ್ನು ಒದಗಿಸುವ ಜವಾಬ್ದಾರಿ ಶಾಲೆಗಳ ಮೇಲಿದೆ.
ಇಲ್ಲಿ ಶಿಕ್ಷಕರ ಪಾತ್ರವೂ ಮುಖ್ಯ. ಅವರು ಪುಸ್ತಕದ ಪಾಠವನ್ನು ಮುಗಿಸುವವರಷ್ಟೇ ಅಲ್ಲ; ಬದುಕಿನ ಕಡೆಗೆ ಮಗುವನ್ನು ಕರೆದೊಯ್ಯುವವರೂ ಆಗಬೇಕು. ಶಾಲೆಯ ಅಂಗಳದಲ್ಲಿ ಒಂದಷ್ಟು ಜಾಗವಿದ್ದರೆ ತರಕಾರಿ ತೋಟ ಮಾಡಬಹುದು. ಜಾಗವಿಲ್ಲದಿದ್ದರೆ ಕುಂಡಗಳಲ್ಲಿ ಗಿಡ ಬೆಳೆಸಬಹುದು. ಹತ್ತಿರದ ಕೃಷಿಭೂಮಿಗೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ರೈತರನ್ನು ಶಾಲೆಗೆ ಆಹ್ವಾನಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಬಹುದು. ಒಂದು ಕೆರೆ, ಒಂದು ಹೊಳೆ, ಒಂದು ತೋಟ, ಒಂದು ಹೈನುಗಾರಿಕೆ ಕೇಂದ್ರ, ಒಂದು ಸಣ್ಣ ಕಾರ್ಯಾಗಾರವೂ ತರಗತಿಯಾಗಬಹುದು. ಮಕ್ಕಳಿಗೆ ಪ್ರಶ್ನಿಸಲು, ಪ್ರಯತ್ನಿಸಲು, ತಪ್ಪು ಮಾಡಲು ಮತ್ತು ಮತ್ತೆ ಕಲಿಯಲು ಅವಕಾಶ ನೀಡಬಹುದು. ಇವೆಲ್ಲವೂ ಪಠ್ಯಕ್ರಮಕ್ಕೆ ಹೊರತಾದ ಚಟುವಟಿಕೆಗಳೆಂದು ನೋಡುವ ಬದಲು ಪಠ್ಯಕ್ರಮದ ಅರ್ಥವನ್ನು ವಿಸ್ತರಿಸುವ ಪ್ರಯತ್ನಗಳಾಗಬೇಕು.
ಇಂದು ನಾವು ಮಕ್ಕಳನ್ನು ಭವಿಷ್ಯದ ಉದ್ಯೋಗಗಳಿಗೆ ಸಿದ್ಧಪಡಿಸುವ ಬಗ್ಗೆ ಬಹಳ ಮಾತನಾಡುತ್ತೇವೆ. ಆದರೆ ಅವರು ಬದುಕನ್ನು ಎದುರಿಸಲು ಸಿದ್ಧರಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಅಷ್ಟೇ ಗಂಭೀರವಾಗಿ ಕೇಳುತ್ತಿಲ್ಲ. ಒಳ್ಳೆಯ ಸಂಬಳ ಪಡೆಯುವ ವ್ಯಕ್ತಿಯಾಗುವುದು ಒಂದು ಸಾಧನೆ. ಆದರೆ ತನ್ನ ಆಹಾರ ಎಲ್ಲಿ ಹುಟ್ಟುತ್ತದೆ ಎಂಬ ಅರಿವುಳ್ಳವನಾಗುವುದು, ನೀರಿನ ಮಹತ್ವ ತಿಳಿದವನಾಗುವುದು, ದುಡಿಯುವ ಮನುಷ್ಯನನ್ನು ಗೌರವಿಸುವುದು, ಸಂಕಷ್ಟದಲ್ಲಿರುವವನನ್ನು ಅರ್ಥಮಾಡಿಕೊಳ್ಳುವುದು, ತನ್ನ ಕೈಯಿಂದ ಒಂದು ಸಣ್ಣ ಕೆಲಸವನ್ನಾದರೂ ಮಾಡಬಲ್ಲವನಾಗುವುದು ಇವೆಲ್ಲವೂ ಬದುಕಿನ ಸಾಧನೆಗಳೇ. ಶಿಕ್ಷಣವು ಉದ್ಯೋಗಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ಮನುಷ್ಯನನ್ನು ಬದುಕಿಗೆ ಸಿದ್ಧಗೊಳಿಸಬೇಕು.
ಮಗುವೊಂದು ಶಾಲೆಯ ಅಂಗಳದಲ್ಲಿ ಗಿಡ ನೆಟ್ಟಾಗ ಅದು ಕೇವಲ ಕೃಷಿಯ ಪಾಠ ಕಲಿಯುವುದಿಲ್ಲ. ತನ್ನ ಕೈಯಿಂದ ಮಾಡಿದ ಕೆಲಸದ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತದೆ. ಹಣ್ಣಿನ ತೋಟದಲ್ಲಿ ಬಿದ್ದ ಹಣ್ಣನ್ನು ಸಂಗ್ರಹಿಸಿದಾಗ ಆಹಾರದ ಮೌಲ್ಯ ತಿಳಿಯುತ್ತದೆ. ಹಸುವಿಗೆ ಹುಲ್ಲು ತಿನ್ನಿಸಿದಾಗ ಮತ್ತೊಂದು ಜೀವಿಯ ಅಗತ್ಯವನ್ನು ಗಮನಿಸುವುದನ್ನು ಕಲಿಯುತ್ತದೆ. ಮರದ ನೆರಳಿನಲ್ಲಿ ಕುಳಿತಾಗ ಪ್ರಕೃತಿಯ ಉಪಕಾರವನ್ನು ಅನುಭವಿಸುತ್ತದೆ. ಮಜ್ಜಿಗೆ ಮಾಡಿ ಬೆಣ್ಣೆ ತೆಗೆದಾಗ ಮನೆಯ ಅಡುಗೆಮನೆಯ ಹಿಂದೆ ಇರುವ ಶ್ರಮದ ಪರಿಚಯವಾಗುತ್ತದೆ. ಇವೆಲ್ಲವೂ ಪ್ರತ್ಯೇಕ ಪಾಠಗಳಲ್ಲ. ಬದುಕಿನ ಬಗ್ಗೆ ಮಗುವಿನೊಳಗೆ ನಿಧಾನವಾಗಿ ರೂಪುಗೊಳ್ಳುವ ಅರಿವಿನ ಭಾಗಗಳು.
ಶಿಕ್ಷಣದ ಮೌಲ್ಯವು ಮಗು ಎಷ್ಟು ಪುಸ್ತಕಗಳನ್ನು ಓದಿತು, ಎಷ್ಟು ಅಂಕಗಳನ್ನು ಗಳಿಸಿತು, ಮುಂದೆ ಎಷ್ಟು ಸಂಬಳ ಪಡೆಯಿತು ಎಂಬುದರಿಂದ ಮಾತ್ರ ನಿರ್ಧಾರವಾಗಬಾರದು. ಅದು ತನ್ನ ಸುತ್ತಲಿನ ಬದುಕನ್ನು ಎಷ್ಟು ಅರ್ಥಮಾಡಿಕೊಂಡಿತು, ತನ್ನ ಕೈಯಿಂದ ಎಷ್ಟು ಕೆಲಸಗಳನ್ನು ಮಾಡಲು ಕಲಿತುಕೊಂಡಿತು ಎಂಬುದರಿಂದಲೂ ನಿರ್ಧಾರವಾಗಬೇಕು. ಶಿಕ್ಷಣವೆಂದರೆ ಬದುಕನ್ನು ಅರ್ಥೈಸುವುದು ಎಂದಾದಾಗ ಮಾತ್ರ ಅದಕ್ಕೆ ಪೂರ್ಣ ಮೌಲ್ಯ ಪ್ರಾಪ್ತವಾಗುತ್ತದೆ. ಬದುಕಿನ ಪಾಠವನ್ನು ಶಾಲೆಯ ಗೋಡೆಗಳ ಆಚೆಗೆ ತಳ್ಳದೆ, ಅದನ್ನೇ ಶಾಲೆಯೊಳಗೆ ಕರೆತರುವ ಕಾಲ ಈಗ ಬಂದಿದೆ. ಮಕ್ಕಳಿಗೆ ಮೇಲಕ್ಕೆ ಹತ್ತುವ ಮೆಟ್ಟಿಲುಗಳನ್ನು ನಿರ್ಮಿಸೋಣ. ಆದರೆ ಆ ಮೆಟ್ಟಿಲುಗಳನ್ನು ಹತ್ತುವ ಮೊದಲು ಅವರು ನಿಂತಿರುವ ನೆಲದ ಪರಿಚಯವನ್ನೂ ಮಾಡಿಸೋಣ. ಬದುಕನ್ನು ಕೆಳಗಡೆಯಿಂದ ಪ್ರವೇಶಿಸುವ ಅವಕಾಶವನ್ನು ಅವರಿಗೆ ಮತ್ತೆ ಕಲ್ಪಿಸಿಕೊಡೋಣ.
(ಅಂಕಣಕಾರರು: ಉಪನ್ಯಾಸಕರು, ಚಿಂತಕರು)






