ಮರವಂತೆ ಬೀಚ್‌ನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರವಾಸಿಗರ "ಫೋಟೊ ಪೈಪೋಟಿ"

ಕುಂದಾಪುರ : ಪ್ರಾಕೃತಿಕ ಸೌಂದರ್ಯ, ಅದ್ಭುತ, ವಿಹಂಗಮ ನೋಟಕ್ಕಾಗಿ ವಿಶ್ವವಿಖ್ಯಾತಿ ಪಡೆದಿರುವ ತ್ರಾಸಿ-ಮರವಂತೆ ಕಡಲ ಕಿನಾರೆಯಲ್ಲಿ ಮಳೆಗಾಲದ ಸಂದರ್ಭ ರಾಜ್ಯ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ಜೀವ ಭದ್ರತೆಗೆ ಕ್ರಮವಹಿಸುವುದೇ ಪೊಲೀಸರು, ಜೀವರಕ್ಷಕರು ಹಾಗೂ ಸ್ಥಳೀಯರಿಗೆ ಹರಸಾಹಸವಾಗಿದೆ.
ಒಂದೆಡೆ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಗೃಹರಕ್ಷಕರು ಸಹಿತ ಹಲವಾರು ಸಿಬ್ಬಂದಿಗಳು ಪ್ರವಾಸಿಗರ ಪ್ರಾಣ ರಕ್ಷಣೆಗೆ ಟೊಂಕ ಕಟ್ಟಿ ನಿಂತರೂ ಕೂಡ ಫೋಟೊ, ಸೆಲ್ಫಿ ಕ್ಲಿಕ್ಕಿಸುವ ಆತುರದಲ್ಲಿ ಸಮುದ್ರದಲೆಗಳ ನಡುವೆ, ಬಂಡೆಕಲ್ಲುಗಳ ಮೇಲೆ ಒಂದಷ್ಟು ಜನರ ಆಟಾಟೋಪ ಹೆಚ್ಚಿದೆ.
ಯಾರ ಮಾತಿಗೂ ಸೊಪ್ಪು ಹಾಕದ ಪ್ರವಾಸಿಗರು: ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕವಾಗಿ ಸಾಗುವ ಈ ಪ್ರದೇಶವು ಅಂದಾಜು 2.5-3 ಕಿ.ಮೀ. ದೂರವಿದ್ದು ಒಂದಷ್ಟು ದೂರ ನದಿ-ಸಮುದ್ರ ಏಕಕಾಲಕ್ಕೆ ಕಾಣುವ ಪ್ರದೇಶವಾಗಿದೆ. ಈ ಭಾಗದ ನಡುವೆ ಹಾದು ಹೋಗುವಾಗ ಪ್ರವಾಸಿಗರು ವಾಹನದಿಂದ ಇಳಿದು ಇಲ್ಲಿನ ವಿಹಂಗಮ ನೋಟವನ್ನು ಆಸ್ವಾದಿಸುವ ಬದಲು, ನೇರ ಸಮುದ್ರದ ನೀರಿಗಿಳಿಯುವುದು, ತಡೆಗೋಡೆ ಸಲುವಾಗಿ ಹಾಕಲಾದ ಬಂಡೆಕಲ್ಲುಗಳ ಮೂಲಕ ಕಡಲಿನ ತೆರೆ ರಭಸದಿಂದ ಬಂದಪ್ಪಳಿಸುವ ಪ್ರದೇಶಕ್ಕೆ ತೆರಳಿ ಫೋಟೊ, ಸೆಲ್ಫಿ ಕ್ಲಿಕ್ಕಿಸುವ ಹರಸಾಹಸ ಮಾಡುತ್ತಿದ್ದಾರೆ.
ಇಂಥ ಸಂದರ್ಭದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಬಹಳಷ್ಟು ದುರಂತಗಳು ಸಂಭವಿಸಿವೆ. ಎಚ್ಚರ ತಪ್ಪಿದರೆ ಮುಂದೆಯೂ ಇದು ಪುನರಾವರ್ತನೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗದಂತೆ ತಡೆಯಲು ಇಲ್ಲಿನ ಸ್ಥಳೀಯರು, ಗಸ್ತು ಸಿಬ್ಬಂದಿ, ಮೀನುಗಾರರು ಪ್ರಯತ್ನಿಸುತ್ತಿದ್ದರು ಕೆಲವರು ಯಾರಿಗೂ ಕ್ಯಾರೇ ಎನ್ನದೆ ಪ್ರಕ್ಷುಬ್ದ ಸಮುದ್ರದಲ್ಲಿ ನೀರಿನೊಂದಿಗೆ ಸರಸವಾಡುವ ಅಪಾಯಕ್ಕೆ ಕೈಹಾಕುತ್ತಾರೆ.
ಇಲಾಖೆಗಳಿಂದ ಕ್ರಮ: ಪೊಲೀಸ್ ಇಲಾಖೆ, ಸಿಎಸ್ಪಿ(ಕರಾವಳಿ ಕಾವಲು ಪಡೆ), ಕರಾವಳಿ ನಿಯಂತ್ರಣ ದಳ (ಕೆಎನ್‌ಡಿ), ಹೋಂ ಗಾರ್ಡ್ಸ್, ಪ್ರವಾಸಿ ಮಿತ್ರ ಸಿಬ್ಬಂದಿ ನಿತ್ಯವೂ ಎರಡು ಪಾಳಿಯಲ್ಲಿ 12 ಮಂದಿಯಂತೆ ಮೂರು ಕಡೆ ಪ್ರವಾಸಿಗರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ. ತ್ರಾಸಿ ಬೀಚ್, ಮರವಂತೆ ಶ್ರೀವರಹಸ್ವಾಮಿ ದೇವಸ್ಥಾನದ ಎದುರು ವಾಚ್‌ಟವರ್ ನಿರ್ಮಿಸಿದ್ದು, ಮೈಕ್ ಹಾಗೂ ವಿಸಿಲ್ ಮೂಲಕ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪಿಎಸ್ಸೈ ಪವನ್ ನಾಯಕ್, ಕರಾವಳಿ ಕಾವಲು ಪಡೆಯ ಪಿಎಸ್ಸೈ ಸುಬ್ರಮಣ್ಯ ತಂಡ ನಿತ್ಯವೂ ಇಲ್ಲಿ ಗಸ್ತು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ.
ದುಸ್ಥಿತಿಯಲ್ಲಿ ವಾಚ್ ಟವರ್ ಮೆಟ್ಟಿಲು
ತ್ರಾಸಿ ಹಾಗೂ ಮರವಂತೆಯಲ್ಲಿ ನಿರ್ಮಿಸಿರುವ ವಾಚ್‌ಟವರ್‌ನ ಕಬ್ಬಿಣದ ಮೆಟ್ಟಿಲುಗಳು ಸಮುದ್ರದಿಂದ ಬೀಸುವ ಉಪ್ಪುಗಾಳಿಗೆ ತುಕ್ಕು ಹಿಡಿದು ತೀರಾ ದುಸ್ಥಿತಿಗೆ ತಲುಪಿದ್ದು, ಗಸ್ತು ಸಿಬ್ಬಂದಿ ಟವರ್ ಹತ್ತಿ ಇಳಿಯಲು ಹರಸಾಹಸ ಪಡಬೇಕಾಗಿದೆ. ಸಿಬ್ಬಂದಿಯೇ ಮರದ ಹಲಗೆ ಬಳಸಿ ಮೆಟ್ಟಿಲು ನಿರ್ಮಿಸಿಕೊಂಡಿದ್ದಾರೆ. ತ್ರಾಸಿ ಹಾಗೂ ಮರವಂತೆಯಲ್ಲಿ ನಿರ್ಮಿಸಿರುವ ವಾಚ್‌ಟವರ್‌ನ ಕಬ್ಬಿಣದ ಮೆಟ್ಟಿಲುಗಳು ಸಮುದ್ರದಿಂದ ಬೀಸುವ ಉಪ್ಪುಗಾಳಿಗೆ ತುಕ್ಕು ಹಿಡಿದು ತೀರಾ ದುಸ್ಥಿತಿಗೆ ತಲುಪಿದ್ದು, ಗಸ್ತು ಸಿಬ್ಬಂದಿ ಟವರ್ ಹತ್ತಿ ಇಳಿಯಲು ಹರಸಾಹಸ ಪಡಬೇಕಾಗಿದೆ. ಸಿಬ್ಬಂದಿಯೇ ಮರದ ಹಲಗೆ ಬಳಸಿ ಮೆಟ್ಟಿಲು ನಿರ್ಮಿಸಿಕೊಂಡಿದ್ದಾರೆ.
ಮಳೆಗಾಲದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯಬಾರದು. ಕಡಲಿಗೆ ಹಾಕಿದ ಕಲ್ಲುಗಳ ಮೇಲೆ ನಿಂತು ಫೋಟೊ ಕ್ಲಿಕ್ಕಿಸಲು ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ದೂರದಿಂದಲೇ ಸಮುದ್ರ ತೀರವನ್ನು ನೋಡುವುದು ಉತ್ತಮ. ಪ್ರವಾಸಿಗರ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸ್, ಸಿಎಸ್ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಚ್ ಟವರ್ ಸಮಸ್ಯೆ, ಲೈಫ್ ಗಾರ್ಡ್ ವಿಚಾರದಲ್ಲಿ ದೂರುಗಳು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ತರಲಾಗುವುದು.
-ಹರಿರಾಮ್ ಶಂಕರ್,
ಉಡುಪಿ ಎಸ್ಪಿ ಮತ್ತು ಸಿಎಸ್ಪಿ ಪ್ರಭಾರ ಎಸ್ಪಿ
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಇಕ್ಕೆಲದಲ್ಲಿ ಸಮುದ್ರ-ನದಿ ವಿಹಂಗಮ ನೋಟ ಸವಿಯಲು ಆಗಮಿಸುವ ಪ್ರವಾಸಿಗರು ಬೃಹತ್ ಅಲೆಗಳ ಬಗ್ಗೆ ಗಮನ ಹರಿಸಬೇಕು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು, ಸ್ಥಳಿಯಾಡಳಿತ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡರೂ ಕೂಡ ಕೆಲವರು ದುಸ್ಸಾಹಸಕ್ಕೆ ಮುಂದಾಗುತ್ತಾರೆ. ಯಾವುದೇ ಪ್ರವಾಸಿಗರು ಸ್ಥಳೀಯರ ಮಾತು, ಬುದ್ಧಿವಾದ ಕೇಳಿದರೆ ಸಂಭಾವ್ಯ ಅವಘಡ ತಪ್ಪುತ್ತದೆ.
-ಇಬ್ರಾಹೀಂ ಗಂಗೊಳ್ಳಿ, ಸಾಮಾಜಿಕ ಕಾರ್ಯಕರ್ತ
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಹಿತದೃಷ್ಟಿಯಿಂದ ಈ ಮರವಂತೆ ಬೀಚ್‌ನಲ್ಲಿ ಅಗತ್ಯ ಕ್ರಮ ವಹಿಸಬೇಕು. ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಸ್ಥಿತಿ ತಿಳಿದಿರುವುದಿಲ್ಲ. ಜನರು ನೀರು, ಕಲ್ಲುಗಳ ಮೇಲೆ ಹೋಗದಂತೆ ನಿರ್ಬಂಧಿಸಲು ಅಗತ್ಯ ಸ್ಥಳಗಳಲ್ಲಿ ಬಲೆ ಅಳವಡಿಕೆ, ಸೂಚನಾ ಫಲಕಗಳನ್ನು ಹಾಕಬೇಕು.
-ಗೋಪಾಲಕೃಷ್ಣ ನಾಡ, ಸ್ಥಳೀಯರು






