ಹಂದಿಗಳು ಓಡಾಡುವ ಸರಕಾರಿ ಆಸ್ಪತ್ರೆ !। 35 ಜೀವ ಹೋಗಿದ್ದಕ್ಕೆ ಹೊಣೆ ಯಾರು ?
► ಸರಕಾರಿ ಆಸ್ಪತ್ರೆ ನಡೆಸಲು ವಿಫಲರಾದ ಆಪರೇಷನ್ ಕಮಲದ ಪರಿಣತರು ! ► ಔಷಧವೇ ಸಿಗದ ಆಸ್ಪತ್ರೆಯಲ್ಲೇ ಇನ್ನೇನು ಸಿಕ್ಕೀತು ?

ಸಾಂದರ್ಭಿಕ ಚಿತ್ರ.| Photo: PTI
ಶಾರುಖ್ ಖಾನ್ ರ ಹೊಸ ಚಿತ್ರ ಜವಾನ್ ನಲ್ಲಿ ಒಂದು ಸರಕಾರಿ ಆಸ್ಪತ್ರೆ ತೀರಾ ದುಸ್ಥಿತಿಯಲ್ಲಿ ಇರೋದನ್ನು ತೋರಿಸ್ತಾರೆ. ಅತ್ಯಂತ ಕೆಟ್ಟ, ಕೊಳಕು ಸ್ಥಿತಿಯಲ್ಲಿರುವ ಆ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಸೌಲಭ್ಯವೂ ಇರೋದಿಲ್ಲ. ಹಾಗಾಗಿ ಅಲ್ಲಿ ಒಬ್ಬರು ಪ್ರಾಣ ಕಳಕೊಳ್ಳುವ ಸ್ಥಿತಿ ನಿರ್ಮಾಣ ಆಗುತ್ತೆ. ಚಿತ್ರ ನೋಡಿದ ಹಲವರು ಇದು ತೀರಾ ಜಾಸ್ತಿ ಆಯಿತು. ಯಾವುದೇ ಸರಕಾರಿ ಆಸ್ಪತ್ರೆ ಇಷ್ಟೆಲ್ಲಾ ಕೆಟ್ಟದಾಗಿ ಇರೋದಿಲ್ಲ ಅಂತ ಹೇಳಿದ್ರು.
ಆದರೆ ಈಗ ನೋಡಿದ್ರೆ ಆ ಚಿತ್ರದಲ್ಲಿ ತೋರಿಸಿದ್ದೆ ಕಡಿಮೆ ಎಂಬಂತಹ ದುರಂತವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.ಕೇವಲ 48 ಗಂಟೆಗಳಲ್ಲಿ 35ಕ್ಕೂ ಹೆಚ್ಚು ಸಾವುಗಳು ಸಂಭವಿಸಿರುವ ಮಹಾರಾಷ್ಟ್ರದ ನಾಂದೇಡ್ ಸರಕಾರಿ ಆಸ್ಪತ್ರೆಯ ದುರಂತ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದೇಶವನ್ನು ಎಲ್ಲಿಗೋ ಕೊಂಡೊಯ್ಯುತ್ತಿದ್ದೇವೆ ಎಂದೆಲ್ಲ ಕೊಚ್ಚಿಕೊಳ್ಳುವ ವಿಶ್ವಗುರುವಿನ ಪಕ್ಷದ್ದೇ ಪಾಲುದಾರಿಕೆಯ ಸರ್ಕಾರವಿರುವ ಮಹಾರಾಷ್ಟ್ರದಲ್ಲಿ ರಾಜಕಾರಣದ ಕೊಳಕುತನ ಆರೋಗ್ಯ ವ್ಯವಸ್ಥೆಯನ್ನು ಅಷ್ಟು ಬಿಗಡಾಯಿಸಿ ಬಿಟ್ಟಿದೆ.
ಆರೋಗ್ಯ ವ್ಯವಸ್ಥೆ ಇಷ್ಟೊಂದು ಅನಾರೋಗ್ಯಕಾರಿಯಾಗುವ ಮಟ್ಟಕ್ಕೆ ಅಲ್ಲಿನ ಸರ್ಕಾರ ನಿರ್ಲಕ್ಷ್ಯ ತೋರಿಸಿದೆಯೆ?. ಎಲ್ಲವನ್ನೂ ಹಾಳುಗೆಡವಿದೆಯೆ?. ಬಡವರ ಜೀವಗಳಿಗೆ ಬೆಲೆಯೇ ಇಲ್ಲವೆ?. ದೇಶದ ವಾಣಿಜ್ಯ ರಾಜಧಾನಿಯಿರುವ ರಾಜ್ಯದಲ್ಲಿ, ಆಸ್ಪತ್ರೆಗೆ ದಾಖಲಾದವರು ಹೀಗೆ ಸಾಲುಸಾಲಾಗಿ ಸಾಯುವಷ್ಟು ದುಸ್ಥಿತಿ, ಆಸ್ಪತ್ರೆಯೊಳಗೆ ಔಷಧಗಳೂ ಇರದ ದುಸ್ಥಿತಿ ಅಲ್ಲಿದೆ ಅಂದ್ರೆ ಏನು ಹೇಳೋದು?.
ಬರೀ ಅಧಿಕಾರ ಲಾಲಸೆ, ಪಕ್ಷಾಂತರ, ಬಡಾಯಿಗಳಲ್ಲೇ ಮುಳುಗಿರುವ ರಾಜಕಾರಣಿಗಳಿಗೆ ಹೊಣೆಗಾರಿಕೆಯೇ ಇಲ್ಲವೆ?. ಅಂಥವರ ಆಡಳಿತದಲ್ಲಿ, ಜೀವ ಕಾಯಬೇಕಾದ ಆರೋಗ್ಯ ವ್ಯವಸ್ಥೆ ಕೂಡ ಬರೀ ಪ್ರಚಾರದಲ್ಲಿ ಮಾತ್ರ ಉಳಿದಿದೆಯೆ?. ರಾಜಕಾರಣಿಗಳಿಗೆ ಆಪರೇಶನ್ ಮಾಡಿ ತಮ್ಮ ಪಕ್ಷದ ಸರ್ಕಾರ ತರುವವರಿಗೆ ನಿಜವಾದ ಆಪರೇಶನ್ ಮಾಡುವ ಸರಕಾರಿ ಆಸ್ಪತ್ರೆ ಬಗ್ಗೆ ಅದೆಷ್ಟು ದೊಡ್ಡ ನಿರ್ಲಕ್ಷ್ಯ ?.
ಸರ್ಕಾರದ ಪ್ರಚಾರಕ್ಕೆ ಕೋಟಿ ಕೋಟಿ ವೆಚ್ಚ ಮಾಡುವ ಶೋಕಿಯುಳ್ಳವರಿಗೆ, ಬಡವರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಅದಕ್ಕಾಗಿ ಹಣ ಇಡಲು ಆಗೋದಿಲ್ವ?. ನಾಂದೇಡ್ನಲ್ಲಿರುವ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 16 ನವಜಾತ ಶಿಶುಗಳೂ ಸೇರಿ 35ಕ್ಕೂ ಹೆಚ್ಚು ರೋಗಿಗಳು ಸಾವಿಗೀಡಾಗಿದ್ದಾರೆ.
ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರ ನಡುವೆ 24 ಸಾವುಗಳು ಸಂಭವಿಸಿದ್ದವು. ಹೀಗೆ ಆಘಾತಕಾರಿ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿದ ಒಂದೇ ದಿನದ ನಂತರ ಅಕ್ಟೋಬರ್ 3ರಂದು ಮತ್ತೆ 7 ಸಾವುಗಳು ವರದಿಯಾದವು. ಬಳಿಕ ಆಸ್ಪತ್ರೆಯಲ್ಲಿನ ಸಾವುಗಳ ಸಂಖ್ಯೆ 35ನ್ನೂ ದಾಟಿರುವುದಾಗಿ ವರದಿಯಾಗಿದೆ.
ಕೆಲವೇ ದಿನಗಳ ಹಿಂದೆ, ಆಗಸ್ಟ್ನಲ್ಲಿ ಥಾಣೆ ಜಿಲ್ಲೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿಯಲ್ಲಿ 18 ರೋಗಿಗಳು ಸಾವನ್ನಪ್ಪಿದ್ದರು. ಅಂಥದೊಂದು ದುರದೃಷ್ಟಕರ ಘಟನೆಯ ಬಳಿಕವೂ ಎಚ್ಚೆತ್ತುಕೊಳ್ಳದ, ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣ ಈಗ ನಾಂದೇಡ್ನ ಸರ್ಕಾರಿ ಆಸ್ಪತ್ರೆಯಲ್ಲಿ ಅಂಥದೇ ಆಘಾತಕಾರಿ ಘಟನೆ ಮರುಕಳಿಸಿದೆ.
ಈ ಎರಡು ಘಟನೆಗಳು ಮಹಾರಾಷ್ಟ್ರ ರಾಜ್ಯದಲ್ಲಿನ ಸಾರ್ವಜನಿಕ ಆರೋಗ್ಯ ಸೌಕರ್ಯ ಯಾವ ಪರಿ ಹದಗೆಟ್ಟಿದೆ, ಎಂಥ ದುರವಸ್ಥೆ ತಲುಪಿದೆ ಎಂಬುದರ ಕಡೆ ಗಮನ ಸೆಳೆಯುತ್ತಿವೆ. ಈ ಸರ್ಕಾರಿ ಆಸ್ಪತ್ರೆಯಿರುವ ಪ್ರದೇಶದಲ್ಲಿ ಸುತ್ತಮತ್ತ ಇತರ ಪ್ರಮುಖ ಚಿಕಿತ್ಸಾ ಕೇಂದ್ರಗಳೇ ಇಲ್ಲ. ಊರಿಗೊಂದೇ ಎಂಬಂತಿರುವ ಈ ಆಸ್ಪತ್ರೆಯಲ್ಲೂ ವೈದ್ಯರು, ಅರೆವೈದ್ಯರು, ನರ್ಸ್ಗಳ ಕೊರತೆ. ಮಾತ್ರವಲ್ಲದೆ ಔಷಧಗಳ ಕೊರತೆಯೂ ಇದೆಯೆಂಬ ಆರೋಪಗಳು ಕೇಳಿಬಂದಿವೆ.
ಸಿಟಿ ಸ್ಕ್ಯಾನ್ಗಳಂಥ ಕೆಲವು ರೋಗನಿರ್ಣಯ ಯಂತ್ರಗಳು ಕೂಡ ನಿರ್ವಹಣೆ ಕೊರತೆಯಿಂದಾಗಿ ನಿಷ್ಕ್ರಿಯವಾಗಿವೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಕೊರತೆಗಳು ಮತ್ತು ಅವಾಂತರಗಳಲ್ಲದೆ, ನಾಂದೇಡ್ ಆಸ್ಪತ್ರೆಯಲ್ಲಿ ಅಷ್ಟೇ ಕೊಳಕುತನವೂ ಇದೆ ಎಂಬ ದೂರುಗಳಿವೆ. ಆಸ್ಪತ್ರೆ ಆವರಣದಲ್ಲಿ ಗಲೀಜು ಕಣ್ಣಿಗೆ ರಾಚುವಂತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕಸಕಡ್ಡಿಗಳು ಬಿದ್ದಿವೆ ಎನ್ನಲಾಗುತ್ತದೆ. ಆಸ್ಪತ್ರೆ ಕ್ಯಾಂಟೀನ್ ಪಕ್ಕದ ಚರಂಡಿಗಳಲ್ಲಿ ಹಂದಿಗಳು ಅಡ್ಡಾಡುತ್ತಿರುವ ದೃಶ್ಯಗಳೂ ಸಾಮಾನ್ಯ ಎಂದು ವರದಿ ಬಂದಿದೆ.
ಅಲ್ಲಿನ ಶೌಚಾಲಯಗಳಂತೂ ಗಬ್ಬು ನಾರುತ್ತಿವೆ. ಔಷಧ ಬೇಕೆಂದರೆ ಖಾಸಗಿ ಔಷಧಾಲಯಗಳಿಗೆ ಹೋಗುವ ಪರಿಸ್ಥಿತಿ ಇದೆ ಎಂದು ಅಲ್ಲಿಗೆ ಹೋದ ಜನರು ದೂರಿದ್ದಾರೆ. ಸಾವುಗಳಿಗೆ ಔಷಧಿಗಳ ಕೊರತೆಯೂ ಒಂದು ಮುಖ್ಯ ಕಾರಣವೆಂದು ಹೇಳಲಾಗುತ್ತಿದ್ದು, ಇದು ಆ ರಾಜ್ಯದ ಔಷಧ ಖರೀದಿ ಅವ್ಯವಸ್ಥೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಔಷಧ ಕೊರತೆಯಿರಲಿಲ್ಲ ಎಂದು ಮರೆಮಾಚುವ ಯತ್ನಗಳೂ ಇನ್ನೊಂದು ದಿಕ್ಕಿನಿಂದ ನಡೆದಿವೆ. ಆದರೆ, ಇತ್ತೀಚೆಗಷ್ಟೇ ಅಂಗೀಕರಿಸಿದ ವೈದ್ಯಕೀಯ ಸರಕುಗಳ ಖರೀದಿ ಪ್ರಾಧಿಕಾರ ಕಾಯಿದೆಯ ಜಾರಿ ವಿಳಂಬ ಹಾಗೂ ಖರೀದಿ ನಿಯಮಗಳ ಬದಲಾವಣೆಯೇ ರಾಜ್ಯದಲ್ಲಿ ಔಷಧ ಕೊರತೆಗೆ ಕಾರಣ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳುತ್ತಿದೆ.
ಸಾರ್ವಜನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಕೆಲವು ಔಷಧಗಳು, ವೈದ್ಯಕೀಯ ಸರಕುಗಳು, ವೈದ್ಯಕೀಯ ಉಪಕರಣಗಳು ಇತ್ಯಾದಿಗಳ ಸಂಗ್ರಹಣೆ ಮತ್ತು ಪೂರೈಕೆಗಾಗಿ ಪ್ರಾಧಿಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಈ ವರ್ಷದ ಮಾರ್ಚ್ನಲ್ಲಿ ಮಹಾರಾಷ್ಟ್ರ ಸರ್ಕಾರ ವೈದ್ಯಕೀಯ ಸರಕುಗಳ ಸಂಗ್ರಹಣೆ ಪ್ರಾಧಿಕಾರ ಕಾಯಿದೆಯನ್ನು ತಂದಿತು.
ಇದರಿಂದ ಸರ್ಕಾರದ ಆರೋಗ್ಯ ಸಂಸ್ಥೆಗಳಿಗೆ ಸಂಗ್ರಹಣೆ ಮತ್ತು ಪೂರೈಕೆ ಪ್ರಕ್ರಿಯೆ ಸುಗಮಗೊಳ್ಳಲಿದೆ ಮತ್ತು ವಿಳಂಬವನ್ನು ತಡೆಯಬಹುದು ಎನ್ನಲಾಗಿತ್ತು. ರಾಜ್ಯ ಸರ್ಕಾರ ತನ್ನ ಎಲ್ಲಾ ಇಲಾಖೆಗಳಾದ್ಯಂತ ವೈದ್ಯಕೀಯ ಖರೀದಿಗಾಗಿ ವಾರ್ಷಿಕವಾಗಿ 20,000 ಕೋಟಿ ರೂ. ನಿಗದಿಪಡಿಸುತ್ತದೆ ಎಂದೂ ಆಗ ಮಹಾರಾಷ್ಟ್ರದ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿದ್ದರು.
ಅಷ್ಟಾದ ಮೇಲೂ ಸಮಿತಿ ರಚನೆ, ಪ್ರೋಟೋಕಾಲ್ ಇತ್ಯಾದಿಗಳ ಕಾರಣದಿಂದ ಕಾಯಿದೆ ಅನುಷ್ಠಾನ ವಿಳಂಬವಾಯಿತು ಮತ್ತು ಟೆಂಡರ್ ಪ್ರಕ್ರಿಯೆ ಐದು ತಿಂಗಳ ಬಳಿಕ, ಅಂದರೆ ಆಗಸ್ಟ್ ಮಧ್ಯದಲ್ಲಿ ಶುರುವಾಯಿತು. ಆದರೆ ಇದು ಸಾಮಾನ್ಯವಾಗಿ ಸಂಗ್ರಹಣೆ ಮತ್ತು ವಿತರಣೆಗೆ ಮತ್ತೂ ಒಂದೆರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವುದನ್ನು ಆ ವರದಿ ಉಲ್ಲೇಖಿಸಿದೆ.
ಖರೀದಿ ನಿಯಮಗಳ ಬದಲಾವಣೆಯಿಂದಾಗಿ, ಔಷಧ ಪೂರೈಕೆ ನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರದ್ದೇ ಸಂಸ್ಥೆಯಾಗಿರುವ ಹಾಫ್ಕಿನ್ ಕೂಡ ಖರೀದಿಯಿಂದ ದೂರವುಳಿದಿತ್ತು. ಹೀಗಾಗಿ, ರಾಜ್ಯದಲ್ಲಿ ಔಷಧ ಕೊರತೆ ಸಮಸ್ಯೆ ಉಲ್ಬಣಗೊಂಡಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಔಷಧಿಗಳ ಖರೀದಿ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ನಲ್ಲಿ ಪ್ರಾರಂಭವಾಗುತ್ತದೆ. ಅಗತ್ಯವಿರುವ ಔಷಧಗಳ ಶೇ.50ರಷ್ಟು ಸ್ಟಾಕ್ ಅನ್ನು ಪೂರೈಕೆ ಸಂಸ್ಥೆ ಹೊಂದಿರಬೇಕಾಗುತ್ತದೆ. ಆದರೆ ಹಾಫ್ಕಿನ್ ಈವರೆಗೆ ಕೇವಲ ಶೇ.10ರಿಂದ 20ರಷ್ಟು ಔಷಧಗಳನ್ನು ಮಾತ್ರ ಸಂಗ್ರಹಿಸಿದೆ. ಸರ್ಕಾರಿ ಆಸ್ಪತ್ರೆಗಳು ಕೊರತೆ ನೀಗಿಸಲು ತಾವೇ ಸ್ವತಃ ಖರೀದಿ ಮಾಡುತ್ತಿವೆ ಎಂದು ಸಗಟು ಔಷಧ ಪೂರೈಕೆದಾರರ ಸಂಘವಾದ ಆಲ್ ಫುಡ್ ಮತ್ತು ಡ್ರಗ್ಸ್ ಲೈಸೆನ್ಸ್ ಹೋಲ್ಡರ್ಸ್ ಫೌಂಡೇಶನ್ನ ಅಧ್ಯಕ್ಷ ಅಭಯ್ ಪಾಂಡೆ ಹೇಳಿರುವುದನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಹೊಸ ನೀತಿಯ ಪರಿಣಾಮವಾಗಿ ಹಲವಾರು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹ್ಯಾಫ್ಕಿನ್ನಿಂದ ಖರೀದಿಯನ್ನು ಥಟ್ಟನೆ ನಿಲ್ಲಿಸಬೇಕಾದ ಸ್ಥಿತಿಯೂ ಎದುರಾಯಿತೆಂದು ವರದಿ ಹೇಳುತ್ತದೆ. ನಾಂದೇಡ್ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಉಂಟಾಗಿರುವುದು ನಾಚಿಕೆಗೇಡು ಎಂದು ತಜ್ಞರು ಟೀಕಿಸಿರುವುದರ ಬಗ್ಗೆಯೂ ವರದಿ ಪ್ರಸ್ತಾಪಿಸುತ್ತದೆ.
ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕಾಗಿ 400 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಿದರೂ, ನಿರಂತರವಾಗಿ ಕಡಿಮೆ ಖರ್ಚು ಮಾಡುತ್ತದೆ ಎಂಬುದನ್ನು ಕೂಡ ಸ್ವತಂತ್ರ ಆರೋಗ್ಯ ಸಂಶೋಧಕ ಮತ್ತು ಅರ್ಥಶಾಸ್ತ್ರಜ್ಞ ಡಾ ರವಿ ದುಗ್ಗಲ್ ವಿವರಿಸುವುದನ್ನು ವರದಿ ಉಲ್ಲೇಖಿಸಿದೆ. ಪ್ರತಿ ವರ್ಷವೂ ಔಷಧಿಗಳ ಮತ್ತು ಜೀವರಕ್ಷಕ ಸಲಕರಣೆಗಳ ಕೊರತೆಯ ಬಗ್ಗೆ ಕೇಳುತ್ತೇವೆ. ಹಾಗಾದರೆ, ಅದಕ್ಕಾಗಿ ಇಡಲಾದ ಹಣವನ್ನು ಏಕೆ ಬಳಸುತ್ತಿಲ್ಲ ಎಂಬುದು ಡಾ.ದುಗ್ಗಲ್ ಪ್ರಶ್ನೆ.
2017ರಲ್ಲಿ ರಾಜ್ಯ ಸರ್ಕಾರ ಹಾಫ್ಕಿನ್ನಲ್ಲಿ ಕನಿಷ್ಠ ದರದಲ್ಲಿ ವೈದ್ಯಕೀಯ ಸರಕುಗಳ ಬೃಹತ್ ಖರೀದಿಯನ್ನು ಖಾತ್ರಿಪಡಿಸಿಕೊಳ್ಳಲು ಖರೀದಿ ಸೆಲ್ ಅನ್ನು ಸ್ಥಾಪಿಸಿತ್ತು ಮತ್ತು ವೈದ್ಯಕೀಯ ಸೇವಾ ಇಲಾಖೆಗಳು ಅಲ್ಲಿಂದಲೇ ಖರೀದಿಸುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಆ ಖರೀದಿ ಸೆಲ್ ವೈಫಲ್ಯದ ಬಗ್ಗೆ ದೂರುಗಳು ಬೆಳೆದವೇ ಹೊರತು, ಮತ್ತೇನೂ ಉಪಯೋಗವಾಗಲಿಲ್ಲ. ವೈದ್ಯಕೀಯ ಸಂಸ್ಥೆಗಳಿಗೆ ಔಷಧಗಳು ಮತ್ತು ಉಪಕರಣಗಳನ್ನು ತಲುಪಿಸುವಲ್ಲಿ ಒಂದೂವರೆ ವರ್ಷದಿಂದ 4 ವರ್ಷಗಳಷ್ಟು ವಿಳಂಬವಾದದ್ದೂ ಇದೆ. ಇದರಿಂದಾಗಿ ಗ್ರಾಮೀಣ ರೋಗಿಗಳು ಪರದಾಡುವ ಹಾಗಾಯಿತು.
ಔಷಧಿ ಸಂಗ್ರಹಣೆಯ ಶೇ.90ರಷ್ಟನ್ನು ಆರಂಭದಲ್ಲಿ ಹ್ಯಾಫ್ಕಿನ್ಗೇ ವಹಿಸಲಾಗಿತ್ತು. ಉಳಿದ ಶೇ.10ರಷ್ಟನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಖರೀದಿಸಬಹುದಿತ್ತು. ಆದರೆ, ವಿಳಂಬದಿಂದಾಗಿ ತಾವೇ ಶೇ.20-30ರಷ್ಟು ಔಷಧಗಳನ್ನು ಖರೀದಿಸಿದ್ದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಡೀನ್ ಹೇಳಿರುವುದು ವರದಿಯಲ್ಲಿದೆ. ರಾಜ್ಯದ ಬಹುತೇಕ ವೈದ್ಯಕೀಯ ಕಾಲೇಜುಗಳು ಇದೇ ರೀತಿಯ ಸವಾಲುಗಳನ್ನು ಎದುರಿಸಿವೆ. ಇದಲ್ಲದೆ, ರಾಜ್ಯ ಸರ್ಕಾರದಿಂದ ಶೇ.10ರಷ್ಟು ಹಂಚಿಕೆಯನ್ನು ಮೀರಿದ ಖರೀದಿಗೆ ಹಣ ವಿತರಿಸುವಲ್ಲಿಯೂ ವಿಳಂಬವಾಗಿದೆ. ಒಟ್ಟು 100 ಕೋಟಿ ರೂಪಾಯಿಗಳ ಬಿಲ್ಗಳು ಬಾಕಿ ಉಳಿದಿವೆ. ಇದರಿಂದಾಗಿ ಸ್ಥಳೀಯ ಪೂರೈಕೆದಾರರು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಔಷಧಿಗಳನ್ನು ಪೂರೈಸುವುದಕ್ಕೆ ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳೂ ಇವೆ ಎನ್ನುತ್ತದೆ ವರದಿ.
2022ರಲ್ಲಿ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆ ಇದೇ ರೀತಿಯ ಔಷಧದ ಕೊರತೆಯನ್ನು ಎದುರಿಸಿದ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ, ಆಗಿನ ವೈದ್ಯಕೀಯ ಶಿಕ್ಷಣ ಸಚಿವರು ಇ-ಮೆಡಿಸಿನ್ ಎಂಬ ಲೈವ್ ಡ್ಯಾಶ್ಬೋರ್ಡ್ ಸ್ಥಾಪಿಸುವ ಯೋಜನೆಯ ಬಗ್ಗೆ ಹೇಳಿದ್ದರು. ಜಿಲ್ಲಾವಾರು ಔಷಧಿಗಳ ಲಭ್ಯತೆ ಕುರಿತು ಸಾರ್ವಜನಿಕ ಆರೋಗ್ಯ ಇಲಾಖೆಗೆ ಆಯಾ ಸಮಯದಲ್ಲಿಯೇ ಅಪ್ಡೇಟ್ ಮಾಡುವುದೆನ್ನಲಾಗಿದ್ದ ಆ ಯೋಜನೆ, ನಂತರ ಸರ್ಕಾರ ಬದಲಾದಾಗ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ ಎಂದಿದೆ ವರದಿ.
ಬರೀ 48 ಗಂಟೆಗಳಲ್ಲಿ ಅಷ್ಟೊಂದು ಜೀವಗಳು ಇಲ್ಲವಾಗುವಂಥ ದುರ್ಘಟನೆಗೆ ರಾಜ್ಯ ಸರ್ಕಾರದ ನೀತಿ ಮತ್ತು ನಿಷ್ಕಾಳಜಿ ಹೇಗೆ ಕಾರಣವಾಗಿದೆ ಎಂಬುದನ್ನು ಈ ವರದಿ ನಿರೂಪಿಸಿದೆ. ಆದರೆ, ಸರ್ಕಾರ ಏನೆನೋ ಕಥೆ ಹೇಳುತ್ತ, ಘಟನೆಯ ಬಗ್ಗೆ ತನಿಖೆ ಮಾಡುತ್ತೇವೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದೆ. ಆದರೆ ನಿಜವಾಗಿಯೂ ತಪ್ಪಿತಸ್ಥರು ಯಾರು? ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿಯೇ ಔಷಧಿಗಳ, ವೈದ್ಯಕೀಯ ಯಂತ್ರೋಪಕರಣಗಳ ಕೊರತೆ ಆಗುವುದಕ್ಕೆ ಕಾರಣವಾದ ಸರ್ಕಾರ ಇಲ್ಲಿ ಮೊದಲ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಲ್ಲವೆ? ಆ ರಾಜ್ಯದ ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿ ಇನ್ನೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಉಳಿಸಿ ಕೊಂಡಿದ್ದಾರೆಯೆ ? ಜೀವ ಉಳಿಸಲು ಆಗದವರು ಯಾಕೆ ಅಧಿಕಾರದಲ್ಲಿ ಇರಬೇಕು ?
ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಿಲ್ಲ, ಸಿಬ್ಬಂದಿ ಕೊರತೆಯಿಲ್ಲ ಎಂದೇ ಮುಖ್ಯಮಂತ್ರಿ ಶಿಂಧೆ ಸಮರ್ಥಿಸಿಕೊಳ್ಳುತ್ತಿರುವುದು, ಅಂಥ ಆರೋಪಗಳು ಸುಳ್ಳೆಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತಿರುವುದು ಮತ್ತೂ ದೊಡ್ಡ ಅಪರಾಧವಲ್ಲವೆ?. ಮಹತ್ವದ ಬೆಳವಣಿಗೆಯಲ್ಲಿ ಈ ಘಟನೆ ಬಗ್ಗೆ ಬಾಂಬೆ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಆಸ್ಪತ್ರೆಯಲ್ಲಿನ ಸಾವುಗಳ ಪ್ರಕರಣದ ಬಗ್ಗೆ ಕೋರ್ಟ್ ವಿಚಾರಣೆ ನಡೆಸಲಿದೆ.
ಆರೋಗ್ಯಕ್ಕಾಗಿ ರಾಜ್ಯದ ಬಜೆಟ್ ಹಂಚಿಕೆಯ ವಿವರಗಳನ್ನು ಶುಕ್ರವಾರ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರಿಗೆ ನಿರ್ದೇಶಿಸಿದೆ.
ಇನ್ನೊಂದೆಡೆ, ಅದೇ ನಾಂದೇಡ್ ಆಸ್ಪತ್ರೆಯಲ್ಲಿ ಡೀನ್ ಅವರೇ ಶೌಚಾಲಯ ಸ್ವಚ್ಛಗೊಳಿಸುವಂತೆ ಮಾಡಿದ ಶಿವಸೇನಾ ಶಿಂಧೆ ಬಣದ ಸಂಸದ ಹೇಮಂತ್ ಪಾಟೀಲ್ ಅಧಿಕಾರದ ಮದ ಮತ್ತು ದುರಹಂಕಾರದ ವರ್ತನೆ ಅಮಾನವೀಯತೆಯ ಅತಿರೇಕದಂತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಡೀನ್ ಕೈಯಲ್ಲಿಯೇ ಪೊರಕೆ ಹಿಡಿಸಿ ಶೌಚಾಲಯ ಕ್ಲೀನ್ ಮಾಡಿಸಿದ ಸಂಸದನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೇಮಂತ್ ಪಾಟೀಲ್ ವಿರುದ್ಧ ನಾಂದೇಡ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಶ್ಯಾಮರಾವ್ ವಾಕೋಡೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಸಾರ್ವಜನಿಕ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಮತ್ತು ಅವರನ್ನು ಅವಮಾನಿಸಿದ ಆರೋಪಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಾಟೀಲ್ ವಿರುದ್ಧ ಹಲ್ಲೆ ಅಥವಾ ಬಲ ಪ್ರಯೋಗ, ಮಾನಹಾನಿ, ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಆ ದುರಹಂಕಾರಿ ಸಂಸದನಂಥ ಕೊಳಕು ಮನಃಸ್ಥಿತಿಯ ರಾಜಕಾರಣಿಗಳ ಆಡಳಿತದಿಂದಾಗಿಯೇ ಆ ರಾಜ್ಯದ ಆಸ್ಪತ್ರೆಗಳು ಮತ್ತು ಆರೋಗ್ಯ ವ್ಯವಸ್ಥೆ ಇಷ್ಟೊಂದು ಶೋಚನೀಯ ಸ್ಥಿತಿ ಮುಟ್ಟಿದೆ. ಆಸ್ಪತ್ರೆಯಲ್ಲಿನ ಸಾವುಗಳ ಘಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಎನ್ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದುರಂತದ ಬಗ್ಗೆ ಮರುಕ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಬಿಜೆಪಿ ದೃಷ್ಟಿಯಲ್ಲಿ ಬಡವರ ಜೀವಕ್ಕೆ ಬೆಲೆಯಿಲ್ಲ ಎಂದು ಟೀಕಿಸಿದ್ದಾರೆ. ಬಿಜೆಪಿ ಸರ್ಕಾರ ತನ್ನ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಅದರೆ, ಮಕ್ಕಳ ಔಷಧಕ್ಕಾಗಿ ಹಣ ನೀಡುವುದಿಲ್ಲ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತದ ಬಗ್ಗೆ ಸಮಗ್ರ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿನ ಆರೋಗ್ಯ ಸೌಲಭ್ಯಗಳ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ಆಸ್ಪತ್ರೆಯಲ್ಲಿನ ಸಾವುಗಳ ಬಗ್ಗೆ ಪ್ರಧಾನಿ ಏಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ್ಧಾರೆ. ಸನಾತನ ಧರ್ಮದ ಬಗ್ಗೆ ಮಾತನಾಡಲು, ಜಿ20 ಯಶಸ್ವಿಯಾಯಿತೆಂದು ಬಡಾಯಿ ಕೊಚ್ಚಲು, ಇಡೀ ಪ್ರಪಂಚವೇ ನಮ್ಮತ್ತ ನೋಡುತ್ತಿದೆ ಎನ್ನಲು ಸಾಕಷ್ಟು ಪುರುಸೊತ್ತಿರುವವರಿಗೆ ಇಂಥ ದುರಂತದ ಬಗ್ಗೆ, ಆ ಹಸುಗೂಸುಗಳ ಸಾವಿನ ಬಗ್ಗೆ ಮಾತಾಡಲು ಸಮಯವಿರುವುದಿಲ್ಲ.
ಅಮಾಯಕರ ಜೀವ ಉಳಿಸಲು ಆಗದ ಸರಕಾರ ಇದ್ದರೆ ಏನು ಪ್ರಯೋಜನ ?. ಒಬ್ಬ ರಾಜಕಾರಣಿ ಆರೋಗ್ಯ ಕೆಟ್ಟರೆ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಕೋಟಿಗಟ್ಟಲೆ ತೆರಿಗೆ ಹಣ ಖರ್ಚು ಮಾಡುವ ನಮ್ಮ ದೇಶದಲ್ಲಿ ಅದೇ ತೆರಿಗೆ ಹಣದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಸೌಲಭ್ಯ ಒದಗಿಸಲು ವಿಶ್ವಗುರು ದೇಶಕ್ಕೆ ಆಗುತ್ತಿಲ್ಲ. ಎಂಥ ವಿಪರ್ಯಾಸ ಇದು?.







