5 ರಾಜ್ಯಗಳಲ್ಲಿ 'ರಥ ಪ್ರಭಾರಿ' ನೇಮಕಕ್ಕೆ ತಡೆ ಹಾಕಿದ ಚುನಾವಣಾ ಆಯೋಗ
► ಬಿಜೆಪಿಯಿಂದ ಸರಕಾರಿ ಅಧಿಕಾರಿಗಳ, ಯೋಧರ ದುರ್ಬಳಕೆ ► ಚುನಾವಣೆ ಗೆಲ್ಲಲು ಏನು ಮಾಡುವುದಕ್ಕೂ ಹೇಸದ ಬಿಜೆಪಿ

ತಾನು ಮಾತ್ರ ಗೆದ್ದುಬಿಡಬೇಕು. ಅದಕ್ಕಾಗಿ ಹಿಡಿಯುವ ದಾರಿ ಯಾವುದಾದರೂ ಅದೊಂದು ವಿಷಯವೇ ಅಲ್ಲ. ಇಷ್ಟು ವರ್ಷವೂ ಚುನಾವಣೆ ಗೆಲ್ಲಲು ಯಾವ ದಾರಿ ಹಿಡಿಯಲೂ ಹೇಸದ ಮೋದಿ ಸರ್ಕಾರ ಈಗ ಮತ್ತೂ ಒಂದು ವಿಪರೀತದ ನಿರ್ಧಾರ ತೆಗೆದುಕೊಂಡುಬಿಟ್ಟಿದೆ. ಬೇರೆಯವರಿಗೆ ನೀತಿ, ನಿಯಮ ಎಂದು ವಿಧಿಸಿ ನಿರ್ಬಂಧಿಸುವ ಈ ಸರ್ಕಾರ, ತಾನು ಮಾತ್ರ ತನ್ನ ಉದ್ದೇಶ ಸಾಧಿಸಿಕೊಳ್ಳಲು ಯಾವುದೇ ನಿಯಮವನ್ನೂ ಮುರಿಯುವ ಭಂಡತನ ತೋರಿಸಬಲ್ಲೆ ಎಂಬುದನ್ನೇ ತೋರಿಸಿಕೊಂಡಿದೆ.
ಕಳೆದ 9 ವರ್ಷಗಳಲ್ಲಿ ಅದು ತನ್ನ ವಿರೋಧಿಗಳನ್ನು ಹಣಿಯಲು ಹೇಗೆ ತನಿಖಾ ಸಂಸ್ಥೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತ ಬಂತು ಎಂಬುದನ್ನು ದೇಶ ನೋಡಿದೆ. ಹೇಗೆ ಆಯಕಟ್ಟಿನ ಜಾಗದಲ್ಲಿ ತನಗೆ ಬೇಕಾದವರನ್ನೇ ಕೂರಿಸಿಕೊಂಡು ಅವರ ಮೂಲಕ ತನಗೆ ಬೇಕಾದಂತೆ ಆಟವಾಡುತ್ತ ಬಂತು ಎಂಬುದನ್ನೂ ನೋಡಿಯಾಗಿದೆ.
ಈಗ ಸರ್ಕಾರಿ ಅಧಿಕಾರಿಗಳನ್ನು ನೇರವಾಗಿಯೇ ಬಿಜೆಪಿ ಪ್ರಚಾರಕ್ಕೆ ಇಳಿಸಿಬಿಡುವುದಕ್ಕೆ ಹೊರಟಿದೆ ಮೋದಿ ಸರ್ಕಾರ. ಕಳೆದ 9 ವರ್ಷಗಳಲ್ಲಿನ ಬಿಜೆಪಿ ಸರ್ಕಾರ ಮಾಡಿದೆ ಎನ್ನಲಾದ ಸಾಧನೆಗಳನ್ನು ಸರ್ಕಾರಿ ಅಧಿಕಾರಿಗಳು ಮತ್ತು ಸೇನಾಪಡೆ ಯೋಧರು ಪ್ರಚಾರ ಮಾಡಬೇಕಾದ ಸ್ಥಿತಿ ಬಂದಿದೆ.
ಮತ್ತಿದರ ಬಗ್ಗೆ ಕನಿಷ್ಠ ಲಜ್ಜೆಯೂ ಇಲ್ಲದೆ ಆದೇಶ ನೀಡುವ ಮಟ್ಟಕ್ಕೆ ಈ ಸರ್ಕಾರ ಇಳಿದಿದೆ. ರಥ ಪ್ರಭಾರಿಗಳು ಎಂದು ಹೆಸರು ನೀಡಿ ಕಾರ್ಯನಿರ್ವಹಿಸಲು ಹಿರಿಯ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯ ಪ್ರಕಾರ, ಹಿರಿಯ ಸರ್ಕಾರಿ ಅಧಿಕಾರಿಗಳು ಮೋದಿ ಸರ್ಕಾರದ ಕಳೆದ 9 ವರ್ಷದ ಸಾಧನೆಗಳ ಪ್ರಚಾರ ಮಾಡಬೇಕು.
ಜಂಟಿ ಕಾರ್ಯದರ್ಶಿ ಅಥವಾ ನಿರ್ದೇಶಕ ಅಥವಾ ಉಪ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ರಥ ಪ್ರಭಾರಿಗಳು ಎಂದು ನೇಮಿಸಿ ಬಿಜೆಪಿ ಪ್ರಚಾರಕ್ಕೆ ಹಚ್ಚಲಾಗುತ್ತದೆ. ದೇಶದ 2.69 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ 765 ಜಿಲ್ಲೆಗಳಲ್ಲಿ ರಥ ಪ್ರಭಾರಿಗಳನ್ನು ನಿಯೋಜಿಸಲು ಸುತ್ತೋಲೆ ಸೂಚಿಸಿದೆ.
ಇನ್ನೊಂದೆಡೆ, ವಾರ್ಷಿಕ ರಜೆಯ ಮೇಲೆ ಊರಿಗೆ ತೆರಳಿರುವ ಯೋಧರು ಕೂಡ ಕುಟುಂಬದವರೊಂದಿಗೆ ರಜೆ ಅನುಭವಿಸುವುದನ್ನು ಬಿಟ್ಟು ಬಿಜೆಪಿ ಪ್ರಚಾರದಲ್ಲಿ ತೊಡಗಬೇಕಿದೆ. ಕೇಂದ್ರ ರಕ್ಷಣಾ ಸಚಿವಾಲಯ ಯೋಧರಿಗೆ ಇಂಥದೊಂದು ಆದೇಶ ನೀಡಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಯೋಧರನ್ನು ಹೀಗೆ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುವ ಈ ನಡೆಗೆ ತೀವ್ರ ತಕರಾರು ವ್ಯಕ್ತವಾಗಿದೆ.
ಇದೊಂದು ತೀವ್ರ ಕಳವಳಕಾರಿ ವಿಚಾರ ಎಂದು ಕಾಂಗ್ರೆಸ್ ಹೇಳಿದೆ. ಸರ್ಕಾರಿ ಅಧಿಕಾರಿಗಳನ್ನು ಬಿಜೆಪಿ ಸರ್ಕಾರದ ಮಾರ್ಕೆಟಿಂಗ್ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ರಜೆಯ ಮೇಲೆ ತೆರಳುವ ಸೇನಾಪಡೆಯ ಯೋಧರಿಗೂ ಮೋದಿ ಪ್ರಚಾರ ಮಾಡುವಂತೆ ಹುಕುಂ ಹೊರಡಿಸಿದ ಕೇಂದ್ರ ಸರ್ಕಾರ ಲಜ್ಜೆ ಬಿಟ್ಟು ಅಧಿಕಾರ ದುರ್ಬಳಕೆಗೆ ಇಳಿದಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.
ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಇ.ಎ.ಎಸ್. ಶರ್ಮಾ ಅವರು ಸರ್ಕಾರಿ ಅಧಿಕಾರಿಗಳನ್ನು ರಥ ಪ್ರಭಾರಿಗಳಾಗಿ ನೇಮಿಸುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಚುನಾವಣಾ ಆಯೋಗಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ವರು ಕೇಂದ್ರ ಸಚಿವರು ಸ್ಪರ್ಧಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಶರ್ಮಾ, ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಆಡಳಿತ ಪಕ್ಷದ ಅಭ್ಯರ್ಥಿಗಳ ಅನರ್ಹತೆಗೆ ಕಾರಣವಾಗಲಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆಯಲ್ಲಿ ಸರ್ಕಾರಿ ಉದ್ಯೋಗಿಗಳು ಪಾಲ್ಗೊಳ್ಳುವುದು ಕೇಂದ್ರ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆ ಎಂದು ಶರ್ಮಾ ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಐಪಿಸಿ ಸೆಕ್ಷನ್ 171 ಸಿ ಅಡಿಯಲ್ಲಿ, ಕೇಂದ್ರ ಸರ್ಕಾರ ಅಧಿಕಾರಿಗಳನ್ನು ರಥ ಪ್ರಭಾರಿಗಳಾಗಿ ಕಾರ್ಯನಿರ್ವಹಿಸಲು ನಿಯೋಜಿಸುವುದು ಚುನಾವಣೆಯಲ್ಲಿ ಅನಗತ್ಯ ಪ್ರಭಾವಕ್ಕೆ ಸಮ ಮತ್ತು ಶಿಕ್ಷಾರ್ಹ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.
ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲ ಎಂದಲ್ಲ. ಆದರೆ ಗೆಲುವೊಂದನ್ನೇ ಗುರಿಯಾಗಿಸಿಕೊಂಡ ಸರ್ಕಾರ ಗೆಲ್ಲುವುದಕ್ಕೆ ಏನೇನೋ ದಾರಿ ಹುಡುಕುತ್ತದೆ. ಯಾಕೆಂದರೆ, ಇಲ್ಲದ ಸಾಧನೆಗಳನ್ನು ಇದೆ ಎಂದು ಹೇಳಿಕೊಳ್ಳಬೇಕಾಗಿದೆ. ಅಂಥ ತುತ್ತೂರಿ ಊದಲು ಈಗ ಸರ್ಕಾರಿ ಉದ್ಯೋಗಿಗಳನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಿದೆ. ಚುನಾವಣೆಗಳು ಸಮೀಪಿಸಿರುವಾಗ ಸರಕಾರದ ಆಡಳಿತ ಯಂತ್ರ ರಾಜಕಾರಣದಿಂದ ದೂರದಲ್ಲಿ ಇರಬೇಕು. ಹಿಂದಿನ ಯಾವ ಸರಕಾರವೂ ಆಡಳಿತ ಸಿಬ್ಬಂದಿಯನ್ನು ಈ ಪರಿ ಚುನಾವಣಾ ಪ್ರಚಾರಕ್ಕೆ ದುರುಪಯೋಗ ಮಾಡಿಕೊಂಡದ್ದಿಲ್ಲ.
ಆದರೆ ಮೋದಿ ಸರ್ಕಾರ ಎಂದರೆ ಕಡಿಮೆಯೆ? ಯಾರೂ ಮಾಡದೇ ಇರುವುದನ್ನೇ ಅದು ಮಾಡಿ ತೋರಿಸುತ್ತದೆ. ಈಗ ಸರ್ಕಾರಿ ಅಧಿಕಾರಿಗಳು, ಸೇನಾಪಡೆ ಯೋಧರನ್ನೂ ತನ್ನ ಗೆಲುವಿಗೆ ದಾರಿ ನಿರ್ಮಿಸಲು ರಾಜಕೀಯಕ್ಕೆ ಇಳಿಸ ಹೊರಟಿದೆ. ಒಂದು ಕಡೆ ಸರ್ಕಾರಿ ಅಧಿಕಾರಿಗಳ ಘನತೆಯನ್ನೂ ಸ್ವತಃ ಸರ್ಕಾರವೇ ಕಳೆಯಲು ಮುಂದಾಗಿದೆ. ಇನ್ನೊಂದೆಡೆ, ದೇಶಕ್ಕೆ ಮತ್ತು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿರಬೇಕಾಗಿದ್ದ ಯೋಧರನ್ನು ಬಿಜೆಪಿ ಪ್ರಚಾರಕರನ್ನಾಗಿಸುವ ಕೀಳು ಬುದ್ಧಿಯನ್ನು ತೋರಿಸಿದೆ.
ಒಂದು ಸಣ್ಣ ಸಮಾಧಾನವೆಂದರೆ, ಚುನಾವಣಾ ಆಯೋಗ ಮೋದಿ ಸರ್ಕಾರಕ್ಕೆ ಅದರ ನಿರ್ಧಾರದ ವಿರುದ್ಧ ಸೂಚನೆ ಕೊಡುವ ಮಟ್ಟದ ಧೈರ್ಯವನ್ನು ತೋರಿಸುತ್ತಿದೆ ಎಂಬುದು. ಈಗ, ರಥ ಪ್ರಭಾರಿಗಳ ಕುರಿತ ನಿರ್ಧಾರದ ವಿಚಾರದಲ್ಲಿಯೂ ಚುನಾವಣಾ ಆಯೋಗ ಕೇಂದ್ರದ ವಿರುದ್ಧ ನಿಂತಿದೆ.
ನವೆಂಬರ್ನಲ್ಲಿ ಆರಂಭಗೊಳ್ಳಲಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಬಳಸಿಕೊಳ್ಳಲು ಸರ್ಕಾರಿ ಅಧಿಕಾರಿಗಳನ್ನು ರಥ ಪ್ರಭಾರಿಗಳೆಂದು ಕರೆದಿರುವುದಕ್ಕೆ ಆಕ್ಷೇಪವೆತ್ತಿರುವ ಆಯೋಗ, ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ನೀತಿ ಸಂಹಿತೆ ಜಾರಿಯಲ್ಲಿರುವಲ್ಲಿ ಇಂಥ ಚಟುವಟಿಕೆಗಳಿಗೆ ಆಸ್ಪದವಿಲ್ಲ ಎಂದು ಆಯೋಗ ಹೇಳಿದೆ.
ವಿಧಾನಸಭೆ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಮತ್ತು ಉಪಚುನಾವಣೆ ನಡೆಯಲಿರುವ ನಾಗಾಲ್ಯಾಂಡ್ನ ತಾಪೀ ಕ್ಷೇತ್ರದಲ್ಲಿ ಜಿಲ್ಲಾ ರಥ ಪ್ರಭಾರಿಗಳನ್ನು ನೇಮಕ ಮಾಡಬಾರದು ಮತ್ತು ಅಲ್ಲಿ ಡಿಸೆಂಬರ್ 5ರವರೆಗೆ ಯಾತ್ರೆಯನ್ನು ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಆದರೆ, ಇಂಥ ಯಾವ ಲಗಾಮುಗಳನ್ನೂ ಸಹಿಸದ ವಿಶ್ವಗುರು ಪಡೆ ಇನ್ನೇನು ಹಾದಿ ಹುಡುಕುತ್ತದೊ ಗೊತ್ತಿಲ್ಲ. ಯಾಕೆಂದರೆ ಎಲ್ಲದಕ್ಕೂ ಈ ಸರ್ಕಾರದೆದುರು ಇರುವ ಪರಿಹಾರವೆಂದರೆ ಅಡ್ಡದಾರಿ ಮಾತ್ರ.







