ಸಮಕಾಲೀನವಾಗುವ ‘ಕೃಷ್ಣೇಗೌಡರ ಆನೆ’

‘‘ವೇಲಾಯುಧ ಎಂಬ ‘ಮನುಷ್ಯ’ ಆನೆ ಎಂಬ ಪ್ರಕೃತಿಯನ್ನು ನಿಯಂತ್ರಣ ಮಾಡೋಕೆ ಆಗುತ್ತಾ? ‘ಆನೆ’ಯೆಂಬ ‘ಪ್ರಕೃತಿ’ ಮೇಲೆ ಇಲ್ಲಸಲ್ಲದ ಆರೋಪದ ದೌರ್ಜನ್ಯಗಳನ್ನು ಮಾಡುತ್ತಲೇ ಹೋದರೆ, ಅದಾದರೂ ಎಷ್ಟು ಅಂತ ಸಹಿಸಿಕೊಳ್ಳುತ್ತೆ? ಕೆರಳೋದು ಸಹಜ ಅಲ್ವಾ? ವೇಲಾಯುಧ ತನ್ನ ‘ಗೌರಿ’ ಆನೆಗೆ ಅಂಕುಶ ಪ್ರಯೋಗ ಮಾಡ್ತೀನಿ ಅಂತ ಹೋದವನು, ಕುಡಿದ ಮತ್ತಿನಲ್ಲಿ ಕಾಡಿನ ಯಾವುದೋ ಗಂಡಾನೆಗೆ ಅಂಕುಶ ಪ್ರಯೋಗ ಮಾಡಿ ಹತನಾದ. ಇನ್ನು ಅರಣ್ಯಾಧಿಕಾರಿ ನಾಗರಾಜ, ಆನೆನ ಭಸ್ಮ ಮಾಡುತ್ತೇನೆ ಅಂತ ಅಟ್ಟಹಾಸ ಮಾಡುತ್ತಿದ್ದವನು, ಕಳ್ಳ ಸಾಗಣೆದಾರ ಗಂಗಾಧರನ ಕೈಗೆ ಸಿಕ್ಕಿ ನಿಗೂಢವಾಗಿ ಹತ್ಯೆಯಾದ. ಇವರಿಬ್ಬರಿಗೂ ಆದ ಗತೀನೇ ನಮಗೂ ನಿಮಗೂ ಆಗೋದು. ಇಲ್ಲಿ ‘ಆನೆ’ ಅನ್ನುವುದು ಬರೀ ‘ರೂಪಕ’ ಮಾತ್ರ...’’
ಹೀಗೆ ಪೂರ್ಣಚಂದ್ರ ತೇಜಸ್ವಿ ಪಾತ್ರಧಾರಿ ನಾಟಕದ ಕೊನೆಗೆ ವಿವರಿಸುವುದು. ಇದು ಇಡೀ ‘ಕೃಷ್ಣೇಗೌಡರ ಆನೆ’ ನಾಟಕದ ತಿರುಳು.
ಮೈಸೂರಿನ ನಟನ ರಂಗಶಾಲೆಯ 2022-23ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೂರನೇ ಅಭ್ಯಾಸ ಪ್ರಯೋಗವಾಗಿ ಈ ನಾಟಕ ಕಳೆದ ಶುಕ್ರವಾರ, ಶನಿವಾರ ಪ್ರದರ್ಶನಗೊಂಡಾಗ ಹೌಸ್ಫುಲ್ ಆಗಿತ್ತು. ಮಠದ ಸ್ವಾಮೀಜಿ ಸಾಕುತ್ತಿದ್ದ ಆನೆಯನ್ನು ಕೃಷ್ಣೇಗೌಡರು ಎರಡು ಸಾವಿರ ರೂಪಾಯಿಗೆ ಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುವ ಆಸೆ ಹೊತ್ತು ತರುತ್ತಾರೆ. ಮನೆಯ ಬಳಿ ತಂದಾಗ ಅವರ ಮಕ್ಕಳು ಬೆರಗಾಗುತ್ತಾರೆ. ಆದರೆ ಅವರ ಹೆಂಡತಿ ಇದನ್ನು ‘‘ಸಾಕಾಗುತ್ತಾ?’’ ಎಂದು ಪ್ರಶ್ನಿಸುತ್ತಾರೆ. ಆಮೇಲೆ ಊರಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳಿಗೆ ಆನೆಯೇ ಕಾರಣ ಎಂದು ಆರೋಪಿಸುವ ಚಾಳಿ ಜನರಿಂದ ಹೆಚ್ಚುತ್ತದೆ. ಹೀಗೆ ಸಾಗುವ ನಾಟಕದ ಕೊನೆಗೆ ಆನೆಯನ್ನು ಕುರುಡರು ಮುಟ್ಟುವ ಮೂಲಕ ಕೊನೆಗೊಳ್ಳುತ್ತದೆ. ಈ ಮೂಲಕ ಆನೆಯೆಂಬ ಪ್ರಕೃತಿಯನ್ನು ನಮಗೆ ತಿಳಿದ ಹಾಗೆ ತಿಳಿದುಕೊಂಡು, ಅರ್ಥ ಮಾಡಿಕೊಂಡೂ ಕುರುಡರಾಗುತ್ತೇವೆ. ಅಂದರೆ ನಿಜವಾಗಿಯೂ ಪ್ರಕೃತಿಯನ್ನು ಅರ್ಥ ಮಾಡಿಕೊಂಡಿದ್ದೇವೆಯೇ ಎಂದು ಕಾಡುತ್ತದೆ. ನಿಜವಾಗಿಯೂ ಕುರುಡರಲ್ಲದ ಆದರೆ ಕುರುಡರು ಅಂದರೆ ಅಂತರಂಗದಲ್ಲಿ ಕುರುಡರು. ಏಕೆಂದರೆ ಯಾವ ಅಪರಾಧವೂ ಮಾಡದ ಆನೆಯ ಮೇಲೆ ಎಲ್ಲ ತಪ್ಪುಗಳನ್ನು ಹೊರಿಸುತ್ತ ಹೋಗುವ ಈ ನಾಟಕ ನಮ್ಮ ಕಣ್ಣು ತೆರೆಸುತ್ತದೆ.
ಮುಖ್ಯವಾಗಿ ಆನೆಯನ್ನೇ ರಂಗದ ಮೇಲೆ ತಂದಿದ್ದು ಮಂಡ್ಯ ರಮೇಶ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. ಪ್ರತೀ ದೃಶ್ಯದ ನಂತರ ಆನೆ ಘೀಳಿಡುವ ಸದ್ದಿನೊಂದಿಗೆ ಕೊನೆಗೊಳ್ಳುತ್ತಿತ್ತು. ಈಮೂಲಕ ಆನೆಯು ಪ್ರಮುಖ ಪಾತ್ರಧಾರಿಯಾಗಿ ಗಮನ ಸೆಳೆಯಿತು. ಐವರು ಆನೆಯ ಪಾತ್ರಧಾರಿಗಳಾಗಿದ್ದು, ಇದನ್ನು ಕಂಡ ಪ್ರೇಕ್ಷಕರಲ್ಲಿದ್ದ ಬಾಲಕನೊಬ್ಬ ‘ಆನೆಯೊಳಗೆ ಐವರು ಮನುಷ್ಯರು!’ ಎಂದು ಬೆರಗಾಗಿದ್ದ. ಏಕೆಂದರೆ ಈ ನಾಟಕವನ್ನು ಬೇರೆ ಬೇರೆ ತಂಡಗಳು ಪ್ರಯೋಗಿಸಿದ್ದರೂ ಆನೆಯೆಂಬ ಪಾತ್ರವನ್ನು ರಂಗದ ಮೇಲೆ ತಂದಿರಲಿಲ್ಲ. 2000-01ರಲ್ಲಿ ಇದೇ ನಾಟಕವನ್ನು ಆರ್. ನಾಗೇಶ್ ಅವರು ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದ್ದರು. ಛತ್ರಿ ಹಾಗೂ ಘಂಟೆಯ ಮೂಲಕ ಆನೆಯ ಪಾತ್ರವನ್ನು ಪರಿಚಯಿಸಲಾಗಿತ್ತು. ಹೀಗೆಯೇ ರಾಜ್ಯದ ಅನೇಕ ತಂಡಗಳು ಈ ನಾಟಕವನ್ನು ಪ್ರಯೋಗಿಸಿವೆ. ಹಾಗೆ ಪ್ರಯೋಗಿಸಲು ಮುಖ್ಯ ಕಾರಣ; ತೇಜಸ್ವಿ ಅವರ ಈ ಕೃತಿಯು ಪಿಯುಗೆ ಪಠ್ಯವಾಗಿರುವುದು. ಇದರಿಂದ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.
ಮಂಡ್ಯ ರಮೇಶ್ ಅವರ ಸಮರ್ಥ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ ಎಂದೆನಿಸಲಿಲ್ಲ. ಪಳಗಿದ ಕಲಾವಿದರು ಪ್ರಸ್ತುತಪಡಿಸಿದ ಹಾಗಿತ್ತು. ಆದರೂ ಅವಸರವಾಗಿ ಸಂಭಾಷಣೆ ಒಪ್ಪಿಸುವುದನ್ನು ಬಿಡಬೇಕು. ಪಾತ್ರವನ್ನು ಅನುಭವಿಸಿ ಅಭಿನಯಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ನಾಟಕ ಯಶಸ್ವಿಯಾಗಲಿದೆ. ಆದರೂ ಕನ್ನಡ ಓದದ, ಕಾನ್ವೆಂಟಿನಲ್ಲಿ ಕಲಿತ ಬೇರೆ ಬೇರೆ ಊರಿನ ಪದವಿ ಪಡೆದ, ಇಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳನ್ನು ಪಳಗಿಸಿದ್ದು ಗಮನಾರ್ಹ.
ಇದರೊಂದಿಗೆ ಈ ನಾಟಕವನ್ನು ವಿಸ್ತರಿಸಿದ್ದು ಮಂಡ್ಯ ರಮೇಶ್ ಅವರ ಹೆಗ್ಗಳಿಕೆ. ಹೇಗೆಂದರೆ ಕೇವಲ ತೇಜಸ್ವಿ ಅವರು ಮೂಡಿಗೆರೆ ಸುತ್ತಮುತ್ತ ನಡೆಯುವ ಘಟನೆಗಳನ್ನು ತಮ್ಮ ಈ ಕೃತಿಯಲ್ಲಿ ಹಿಡಿದಿಟ್ಟರೆ, ನಿಸರ್ಗದ ಮೇಲೆ ಎಗ್ಗಿಲ್ಲದೆ ಪ್ರಹಾರ ನಡೆಯುತ್ತಿರುವುದನ್ನು ಮಂಡ್ಯ ರಮೇಶ್ ಸಾರ್ವಕಾಲಿಕಗೊಳಿಸಿದ್ದಾರೆ. ಹೀಗೆ ನಿಸರ್ಗದ ಮೇಲೆ ನಡೆಯುವ ನಮ್ಮ ಆಕ್ರಮಣಗಳನ್ನು ಬೇರೊಬ್ಬರ ಮೇಲೆ ಹಾಕುತ್ತ ಹೋಗುತ್ತೇವೆ. ಆದರೆ ನಮ್ಮ ನಾಶವನ್ನು ನಾವೇ ತಂದುಕೊಳ್ಳುತ್ತೇವೆ ಎನ್ನುವುದನ್ನೂ ನಾಟಕ ತೆರೆದಿಡುತ್ತದೆ. ಆದರೆ ಇದನ್ನು ಹಾಸ್ಯ, ವ್ಯಂಗ್ಯದ ದೃಶ್ಯಗಳ ಮೂಲಕ ಮಂಡ್ಯ ರಮೇಶ್ ತಿಳಿಸುತ್ತಾರೆ. ಉದಾಹರಣೆಗೆ ಅರಣ್ಯಾಧಿಕಾರಿ ನಾಗರಾಜ್ ಪಾತ್ರಧಾರಿ ಸಿನೆಮಾ ನಟರ ಹಾಗೆ ಸಂಭಾಷಣೆ ಹೇಳುವುದು ಪ್ರೇಕ್ಷಕನನ್ನು ನಗಿಸುತ್ತದೆ. ಹೀಗೆಯೇ ರಾಜ್ಯದ ಪ್ರಮುಖ ಸ್ವಾಮೀಜಿ ಹಾಗೆ ಸಂಭಾಷಣೆ ಹಾಗೂ ಆಂಗಿಕ ಅಭಿನಯದ ಮೂಲಕ ಈ ನಾಟಕದ ಸ್ವಾಮೀಜಿ ಪಾತ್ರಧಾರಿ ಹೇಳುವುದು, ಟಿವಿ ನಿರೂಪಕರ ಹಾಗೆ ಇನ್ನೊಂದು ಪಾತ್ರ ಸಂಭಾಷಣೆ ಹೇಳುವುದು ಕೂಡಾ ಗಮನಾರ್ಹ. ಇದು ಮಂಡ್ಯ ರಮೇಶ್ ಅವರ ಟ್ರಂಪ್ ಕಾರ್ಡ್. ಹೇಳುವುದನ್ನು ತಮಾಷೆಯಾಗಿ, ವ್ಯಂಗ್ಯವಾಗಿ ಹೇಳುತ್ತಲೇ ಪ್ರಚಲಿತ ವಿದ್ಯಮಾನಗಳಿಗೂ ಕನ್ನಡಿ ಆಗುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಪಾತ್ರಧಾರಿ ಇಡೀ ನಾಟಕದುದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಮುಖ್ಯವಾಗಿ ನಾಟಕ ಆರಂಭವಾಗುವುದೇ ತೇಜಸ್ವಿ ಪಾತ್ರಧಾರಿ ಕುಳಿತ ಕಡೆಗೇ ಆನೆ ಪಾತ್ರ ಪ್ರವೇಶವಾಗಿ ಸಲಾಂ ಹೊಡೆಯುವುದರಿಂದ. ಇದು ನಾಟಕದ ಓಘಕ್ಕೆ ಚಾಲನೆ ನೀಡಿದಂತಾಗುತ್ತದೆ.
ಪಾತ್ರಧಾರಿಗಳು: ದಿಲೀಪ್ ಸಿಂಗ್, ಎಚ್. ಸುಮುಖ, ವಿಕಾಸ್, ಶ್ರೇಯಸ್ ಗಾಂಧಿ, ಪ್ರದೀಪ್ ಮೂಡುಬಿದಿರೆ, ಅಭಿರಂಜನ್, ಯಶ್ವಂತ್ ಸರ್ವರಾಜ್, ರಮೇಶ್ ಬಾಬು, ಮನೋಜ್ಕುಮಾರ್, ರವಿಕುಮಾರ್, ಶ್ರೀಜಿತ್ ಎಸ್.ಕುಮಾರ್, ಚಂದನ್ ಪಿ., ಅರ್ಜುನ್ ಎಂ.ಎ. ಶಾಮನೂರು, ಮನೋಹರ ಎನ್., ಮುಕುಲ್ ನಂಜಪ್ಪ, ಬೆನಕ್ ಗೌಡ, ಶ್ವೇತಾ ಸಿ. ಎಲೆಕೆರೆ, ದೀಕ್ಷಿತ್ ಎಚ್.ಸಿ. ಮಡಿಕೇರಿ, ಸಂತೋಷ್ ಡಿ.ಜಿ. ಹಾಸನ, ಪೂಜಾ ಭಾರದ್ವಾಜ್, ಸಂಜನಾ ಆರ್. ಕದಂ ಇವರೆಲ್ಲ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತ, ರಂಗ ಪರಿಕರಗಳನ್ನು ಬದಲಾಯಿಸುತ್ತ ನಾಟಕಕ್ಕೆ ಕಳೆ ಕಟ್ಟಿದರು. ಹಾಗೆಯೇ ಇವರೆಲ್ಲ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ಕೊಡಗು ಭಾಷೆಗಳನ್ನು ಮಾತನಾಡುವುದರಿಂದ ಇಡೀ ನಾಟಕದಲ್ಲಿ ಬೇರೆ ಬೇರೆ ಭಾಷೆಗಳು ಮೇಳೈಸಿವೆ.







