ಉಳ್ಳಾಲ ರೈಲು ನಿಲ್ದಾಣದ ಸದುಪಯೋಗವಾಗಲಿ

- ಕೆ. ಎಸ್. ಮಂಗಳೂರು
ಮಂಗಳೂರಿನಿಂದ ದಕ್ಷಿಣಕ್ಕಿರುವ ಉಳ್ಳಾಲ ರೈಲು ನಿಲ್ದಾಣದಲ್ಲಿ ಯಾವುದೋ ಕೆಲವು ಕಾಮಗಾರಿಗಳು ನಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗುವ ಭರವಸೆ ಕಾಣುತ್ತಿಲ್ಲ. ಕಾರಣ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಂದ ವಾರ್ತೆಯಂತೆ ಮಂಗಳೂರಿನ ಬಂದರಿನಲ್ಲಿರುವ ಗೂಡ್ಸ್ ಶೆಡ್ಡನ್ನು ಉಳ್ಳಾಲಕ್ಕೆ ಸ್ಥಳಾಂತರಿಸಲಾಗುವುದಂತೆ. ಇದಕ್ಕೆ ಕೊಡಲಾದ ಕಾರಣವೇನೆಂದರೆ, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ಹಾಗಾಗಿ ರೈಲುಗಳನ್ನು ಗೂಡ್ಸ್ ಶೆಡ್ ಇರುವ ಬಂದರು ಸಮೀಪ ನಿಲ್ಲಿಸಲು ಬಳಸಲಾಗುವುದು, ಎಂದು. ಆದರೆ ಈ ನಿರ್ಧಾರದಿಂದ ಪ್ರಯೋಜನಕ್ಕಿಂತ ಹೆಚ್ಚು ಹೊಸ ಸಮಸ್ಯೆಗಳುಂಟಾಗುವ ಸಾಧ್ಯತೆ ಇರುವುದು ಮಾತ್ರವಲ್ಲ, ಭವಿಷ್ಯದಲ್ಲಿ ಒಂದು ಒಳ್ಳೆಯ ನಿಲ್ದಾಣವಾಗಿ ಬೆಳೆಯಬಹುದಾದ ಉಳ್ಳಾಲ ರೈಲು ನಿಲ್ದಾಣವನ್ನು ದುರುಪಯೋಗಪಡಿಸಿದಂತಾಗುವ ಸಾಧ್ಯತೆಯೂ ಇದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲು ಸ್ಥಳಾವಕಾಶ ಸಾಲದಾದ ಸಮಸ್ಯೆಯೊಂದನ್ನು ಮಾತ್ರ ಮುಖ್ಯವಾಗಿ ನೋಡುವುದನ್ನು ಬಿಟ್ಟು ಮಂಗಳೂರಿನ ಒಟ್ಟು ರೈಲ್ವೆ ವ್ಯವಸ್ಥೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಯೋಚಿಸಬೇಕಲ್ಲವೇ? ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನೂರಾರು ವರ್ಷಗಳ ಚರಿತ್ರೆಯಿದ್ದರೂ, ಈಗ ಮಂಗಳೂರು ನಗರ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ನಿಲ್ದಾಣಕ್ಕೆ ವಿಶೇಷ ಮಹತ್ವ ನೀಡಬೇಕಾಗಿಲ್ಲ. ಕಾರಣ ಇಲ್ಲಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡಕೊಂಡಿದೆ. ಉತ್ತರ, ದಕ್ಷಿಣ, ಪೂರ್ವ ದಿಕ್ಕುಗಳಿಗೆ ಸಂಚರಿಸುವ ರೈಲುಗಳೆಲ್ಲ ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ರೈಲು ಬಳಕೆದಾರರಿಗೆ ಸೆಂಟ್ರಲ್ ನಿಲ್ದಾಣಕ್ಕಿಂತ ಜಂಕ್ಷನ್ ನಿಲ್ದಾಣವನ್ನು ಉಪಯೋಗಿಸುವ ಅಭ್ಯಾಸವಾದಾಗ ಸೆಂಟ್ರಲ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಸರಿಯಾಗಿ ವಿವೇಚನೆ ಮಾಡಿ ನೋಡಿದರೆ ಸೆಂಟ್ರಲ್ ನಿಲ್ದಾಣವು ಅದರ ಸುತ್ತಲಿನ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿರುವ ಜನರಿಗೆ ಉಪಯುಕ್ತವೇ ಹೊರತು, ಅದಕ್ಕಿಂತ ಆಚೆಗೆ ಇರುವವರಿಗೆ ಜಂಕ್ಷನ್ ನಿಲ್ದಾಣ ದೂರವಿದೆ ಎಂದು ಹೇಳುವಂತಿಲ್ಲ. ಉದಾಹರಣೆಗಾಗಿ, ಉರ್ವ, ದೇರೆಬೈಲು, ಕದ್ರಿ, ಬಿಕರ್ನಕಟ್ಟೆ, ಮರೋಳಿ ಭಾಗದವರಿಗೆ ಸಮೀಪದಲ್ಲೇ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಬಳಕೆಮಾಡಿ ಜಂಕ್ಷನ್ ನಿಲ್ದಾಣಕ್ಕೆ ಹೋಗುವುದು ಸುಲಭ. ಸೆಂಟ್ರಲ್ ನಿಲ್ದಾಣಕ್ಕೆ ಹೋಗಲು ಒಂದಿಷ್ಟು ದೂರ ಕಡಿಮೆಯಾಗುವುದಾದರೂ ನಗರದೊಳಗಿನ ಮತ್ತು ನಿಲ್ದಾಣ ಸಮೀಪದ ಸಂಚಾರಿ ಅಡಚಣೆಗಳನ್ನು ಗಮನಿಸಿದರೆ, ಜಂಕ್ಷನ್ ನಿಲ್ದಾಣವೇ ವಾಸಿ.
ಅಲ್ಲದೆ ಮಂಗಳೂರಿನ ಆಚೆ ಪೂರ್ವಭಾಗದಲ್ಲಿರುವ ಬಂಟ್ವಾಳ, ಮೂಡುಬಿದಿರೆ ಭಾಗದ ಪ್ರಯಾಣಿಕರಿಗೂ ಸೆಂಟ್ರಲ್ಗಿಂತ ಜಂಕ್ಷನ್ ನಿಲ್ದಾಣವೇ ಅನುಕೂಲಕರ. ಜಂಕ್ಷನ್ ನಿಲ್ದಾಣವೇ ಮಂಗಳೂರಿನ ಮುಖ್ಯ ನಿಲ್ದಾಣವೆಂದು ಪರಿಗಣಿಸಿ ಅದರ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟರೆ ಸೆಂಟ್ರಲ್ ನಿಲ್ದಾಣದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆಗ ಅಲ್ಲಿ ರೈಲುಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಾಗುವುದಿಲ್ಲ. ಗೂಡ್ಸ್ ಶೆಡ್ಡನ್ನು ಸ್ಥಳಾಂತರಿಸುವ ಅಗತ್ಯವೂ ಇಲ್ಲ.
ಇನ್ನೊಂದು ಸಾಧ್ಯತೆ ಏನೆಂದರೆ, ಉಳ್ಳಾಲ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಅದನ್ನು ಮಂಗಳೂರು ಟರ್ಮಿನಲ್ ಎಂದು ಹೆಸರಿಸುವುದರೊಂದಿಗೆ ಹಲವು ರೈಲುಗಳನ್ನು ಉಳ್ಳಾಲದಿಂದಲೇ ಹೊರಡಿಸಬಹುದು. ಉಳ್ಳಾಲ ರೈಲು ನಿಲ್ದಾಣದಲ್ಲಿ ಪುಣ್ಯವಶಾತ್ ಸಾಕಷ್ಟು ಸ್ಥಳಾವಕಾಶ ಲಭ್ಯವಿದೆ. ಬೇಕಿದ್ದರೆ ಸ್ವಾಧೀನ ಪಡಿಸಿಕೊಳ್ಳಲು ಸಮೀಪದಲ್ಲಿ ಖಾಲಿ ಸ್ಥಳಗಳೂ ಇವೆ. ಈ ವರೆಗೆ ಉಳ್ಳಾಲ ರೈಲು ನಿಲ್ದಾಣದ ಸ್ಥಳವನ್ನು ಜಲ್ಲಿ, ಸ್ಲೀಪರ್ ಮುಂತಾದ ನಿರ್ಮಾಣ ಸಾಮಗ್ರಿಗಳನ್ನು ದಾಸ್ತಾನಿಡಲು ಉಪಯೋಗಿಸುತ್ತಿದ್ದರು. ಉತ್ತರ ಹಾಗೂ ಪೂರ್ವದ ಕಡೆಗೆ ಹೋಗುವ ಹಲವು ರೈಲುಗಳನ್ನು ಇಲ್ಲಿಂದಲೇ ಹೊರಡಿಸಿ ಜಂಕ್ಷನ್ ಮೂಲಕ ದಾಟಿಸಿದರೆ, ಸೆಂಟ್ರಲ್ನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಜನರು ತಮ್ಮ ಅಗತ್ಯಕ್ಕೆ ಅನಿವಾರ್ಯವೆಂದಾದಲ್ಲಿ ಯಾವ ರೈಲು ನಿಲ್ದಾಣವೆಂದು ವಿಮರ್ಶೆ ಮಾಡುವುದಿಲ್ಲ. ಇಷ್ಟಕ್ಕೂ ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣಗಳ ನಡುವಿನ ಅಂತರ ಕೇವಲ ನಾಲ್ಕು ಕಿ.ಮೀ. ಸಂಚಾರದಟ್ಟಣೆಯ, ಇಕ್ಕಟ್ಟಾದ ದಾರಿ ಬಳಸಿಕೊಂಡು ಸೆಂಟ್ರಲ್ ನಿಲ್ದಾಣಕ್ಕೆ ಹೋಗುವುದಕ್ಕಿಂತ ಹೆಚ್ಚು ಕಷ್ಟ, ಜಂಕ್ಷನ್ ನಿಲ್ದಾಣ ಬಳಕೆಯಿಂದ ಆಗುವುದಿಲ್ಲ.
ಆದರೆ ಇದಕ್ಕಾಗಿ ಜಂಕ್ಷನ್ ರೈಲು ನಿಲ್ದಾಣವನ್ನು ಸಾಕಷ್ಟು ವಿಸ್ತರಿಸಬೇಕಾದ ಅಗತ್ಯವಿದೆ. ಸೆಂಟ್ರಲ್ ನಿಲ್ದಾಣಕ್ಕೆ ಹೆಚ್ಚಿನ ಹಣ ಸುರಿಯುವ ಬದಲು ಅದೇ ಹಣವನ್ನು ಜಂಕ್ಷನ್ ನಿಲ್ದಾಣಕ್ಕೆ ಬಳಸಿಕೊಂಡರೆ, ಭವಿಷ್ಯದ ದೃಷ್ಟಿಯಲ್ಲಿ ಹೆಚ್ಚು ಉಪಯುಕ್ತ. ಮಂಗಳೂರು ಒಂದು ಪ್ರಮುಖ ರೈಲುನಿಲ್ದಾಣವಾದುದರಿಂದ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಭಾಗದ ಜನರಿಗೂ ಜಂಕ್ಷನ್ ನಿಲ್ದಾಣವೇ ಹೆಚ್ಚು ಸೂಕ್ತ. ಜಂಕ್ಷನ್ ನಿಲ್ದಾಣ ನಿರ್ಮಾಣವಾಗುವ ದಿನಗಳಲ್ಲಿ ಇದರ ಭವಿಷ್ಯದ ಪ್ರಾಮುಖ್ಯದ ಬಗ್ಗೆ ಅಂದಿನ ನಾಯಕರು ಹೆಚ್ಚು ಯೋಚಿಸದ ಕಾರಣ, ಇಲ್ಲಿಗೆ ಬೇಕಾಗುವಷ್ಟು ಭೂಸ್ವಾಧೀನವನ್ನು ಅಂದೇ ಮಾಡಿಟ್ಟಿದ್ದಲ್ಲಿ ಸಮಸ್ಯೆ ಇರುತ್ತಿರಲಿಲ್ಲ. ಎಂತಿದ್ದರೂ ಜಂಕ್ಷನ್ ನಿಲ್ದಾಣವು ವಿಶಾಲ ಮಂಗಳೂರಿನ ಮತ್ತು ಮಂಗಳೂರಿನ ಪೂರ್ವ ಭಾಗದಲ್ಲಿರುವ ನಾಗರಿಕರೆಲ್ಲರಿಗೆ ಪ್ರಮುಖ ನಿಲ್ದಾಣವೇ.
ಜಂಕ್ಷನ್ ನಿಲ್ದಾಣವನ್ನು ಸೇರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಕೂಡ ಮುಖ್ಯ. ನಾಗುರಿ ಮೂಲಕ ಹೋಗುವ ರಸ್ತೆ ಬಹಳ ಮುಖ್ಯವಾದುದು. ಇದರ ಈಗಿನ ವಿಸ್ತರಣೆ ಸಾಲದು. ಈ ರಸ್ತೆಯನ್ನು ಇನ್ನೂ ಅಗಲಗೊಳಿಸಿ ದರೆ, ಪ್ರಯಾಣಿಕರು ಇಲ್ಲಿಗೆ ಸರಾಗವಾಗಿ ಬರಲು ಸಾಧ್ಯವಾಗಿ ಸೆಂಟ್ರಲ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಉಳ್ಳಾಲ ರೈಲು ನಿಲ್ದಾಣದಿಂದಲೇ ರೈಲು ಹೊರಡುವಂತಾದಾಗ ಅದರ ಮಹತ್ವವೂ ಹೆಚ್ಚುತ್ತದೆ. ಉಳ್ಳಾಲ ನಿಲ್ದಾಣಕ್ಕಿರುವ ಮತ್ತೊಂದು ಸೌಲಭ್ಯವೇನೆಂದರೆ, ಇದು ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ಇದೆ. ಬಂಟ್ವಾಳ, ಪುತ್ತೂರು ಕಡೆಯ ಜನರಿಗೆ ಮಂಗಳೂರಿಗೆ ಹೋಗುವ ಬದಲು. ಮೆಲ್ಕಾರು ಮೂಲಕ ಉಳ್ಳಾಲಕ್ಕೇ ಬರಬಹುದು. ಈಗಾಗಲೇ ಕೇರಳ ಕಡೆಯ ದೊಡ್ಡ ಸಂಖ್ಯೆಯ ಪ್ರಯಾಣಿಕರು ಈ ನಿಲ್ದಾಣವನ್ನು ಉಪಯೋಗಿಸುತ್ತಿದ್ದಾರೆ. ಅಂದರೆ ದೇರಲಕಟ್ಟೆಯಲ್ಲಿರುವ ಆಸ್ಪತ್ರೆ, ಕಾಲೇಜುಗಳಿಗೆ ಬಹಳ ಮಂದಿ ರೈಲುಗಳಲ್ಲಿ ಕೇರಳದಿಂದ ಬರುತ್ತಿದ್ದಾರೆ. ಉತ್ತರ ಕರ್ನಾಟಕದಿಂದ ದೊಡ್ಡ ಸಂಖ್ಯೆಯಲ್ಲಿ ದೇರಲಕಟ್ಟೆಗೆ ಬರುವ ಮಂದಿಗೂ ಉಳ್ಳಾಲಕ್ಕೆ ನೇರ ರೈಲು ಮೂಲಕ ಬರುವ ಹಾಗಾದರೆ, ಅದೂ ಪ್ರಯೋಜನಕರವೇ.
ಗೂಡ್ಸ್ ಶೆಡ್ ಉಳ್ಳಾಲಕ್ಕೆ ವರ್ಗಾವಣೆಯಾದಾಗ ಅದರದ್ದೇ ಆದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ವಸ್ತು ಸಾಗಾಟಕ್ಕಾಗಿ ಮಂಗಳೂರು ಉಳ್ಳಾಲ ನಡುವೆ ಸರಕು ಸಾಗಾಟ ವೆಚ್ಚ ಹೆಚ್ಚುವರಿಯಾಗುತ್ತದೆ. ಸರಕುವಾಹನಗಳು ನಿಲ್ದಾಣ ಸಮೀಪ ರಸ್ತೆಗಳಲ್ಲಿ ಕಾದು ನಿಲ್ಲುವ ಸಾಧ್ಯತೆಗಳಿವೆ. ಈ ರಸ್ತೆಯ ಮೂಲಕವೇ ಸೋಮೇಶ್ವರ, ಉಳ್ಳಾಲ ಮುಂತಾದ ಪ್ರವಾಸಿ ಕೇಂದ್ರಗಳಿಗೆ ಹೋಗುವ ಪ್ರವಾಸಿಗರು ನಿತ್ಯ ಪ್ರಯಾಣಿಸುತ್ತಿರುತ್ತಾರೆ. ಅವರಿಗೆ ಸಮಸ್ಯೆಗಳಾಗಲಿವೆ. ಅಲ್ಲದೆ ಉಳ್ಳಾಲ ನಿಲ್ದಾಣದಿಂದ ರೈಲಿನಲ್ಲಿ ನಿತ್ಯ ಪ್ರಯಾಣಿಸುವವರಿಗೆ ರೈಲು ಹತ್ತಲು ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಉಳ್ಳಾಲ ರೈಲು ನಿಲ್ದಾಣ ಇದೀಗ ಪಶ್ಚಿಮದಲ್ಲಿರುವುದು ಒಂದು ಸಮಸ್ಯೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸಂಪರ್ಕ ರಸ್ತೆಗಳು ಪೂರ್ವದಲ್ಲಿವೆ. ರೈಲು ನಿಲ್ದಾಣವನ್ನು ಪೂರ್ವಕ್ಕೆ ಸ್ಥಳಾಂತರಿಸಬೇಕಾದ ಅಗತ್ಯವೂ ಇದೆ.
ಇಂತಹ ಹಲವು ಅಂಶಗಳನ್ನು ಗಮನಿಸಿ ಗೂಡ್ಸ್ ಶೆಡ್ಡನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸಬೇಕಲ್ಲದೆ, ಮುಂದೆ ಅದರಿಂದುಂಟಾಗಬಹುದಾದ ಅಡಚಣೆಗಳು, ರೈಲು ಸೌಲಭ್ಯ ಅಭಿವೃದ್ಧಿಗೆ ತೊಡಕಾಗುವಿಕೆ, ಇತ್ಯಾದಿಗಳನ್ನೆಲ್ಲ ಗಮನಿಸಬೇಕಾಗುತ್ತದೆ. ಈ ಬಗ್ಗೆ ಮತ್ತೊಮ್ಮೆ ಎಲ್ಲಾ ಆಯಾಮಗಳಲ್ಲಿ ಆಲೋಚಿಸಿ, ಒಂದು ವೇಳೆ ಯೋಜನೆ ಆರಂಭಗೊಂಡಿದ್ದರೆ ಅಷ್ಟರಲ್ಲೇ ಅದನ್ನು ಸ್ಥಗಿತಗೊಳಿಸಬಹುದು. ಮುಂದೆ ತಡವಾಗಿ ಜ್ಞಾನೋದಯವಾಗಿ ಮರು ಕಾಮಗಾರಿ ಮಾಡುವ ಮೂಲಕ ಕೋಟಿಗಟ್ಟಲೆ ಸಾರ್ವಜನಿಕರ ಹಣ ಪೋಲಾಗುವುದನ್ನು ಈಗಲೇ ತಡೆ ಹಿಡಿಯಬಹುದು. ಈ ಭಾಗದ ಜನರು, ರೈಲು ಬಳಕೆದಾರರ ಪ್ರತಿನಿಧಿಗಳು, ಸ್ಥಳೀಯ ನಾಯಕರು, ಜನಪ್ರತಿನಿಧಿಗಳು ಈ ದಿಕ್ಕಿನಲ್ಲಿ ಸ್ವಲ್ಪಯೋಚಿಸಿದರೆ ಒಳ್ಳೆಯದು. ಸೆಂಟ್ರಲ್ ನಿಲ್ದಾಣದ ಸಮೀಪದಲ್ಲಿರುವವರಿಗೆ ಮಾತ್ರ ಮುಖ್ಯವಾಗುವ, ಗೂಡ್ಸ್ ಶೆಡ್ ಸ್ಥಳಾಂತರ ಎಂಬ ಈ ಯೋಜನೆಯ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡುವ ಅಗತ್ಯವಿದೆ.







