ಕೇರಳ ಸ್ಪೋಟದ ಬೆನ್ನಿಗೇ ಬಯಲಾಯ್ತು ಬಿಜೆಪಿ ಅಜೆಂಡಾ
ಇಲ್ಲದ 'ಮುಸ್ಲಿಂ' ನಂಟನ್ನು ಸೃಷ್ಟಿಸಲು ಮುಗಿಬಿದ್ದ ಚಾನಲ್ ಗಳು, ಬಿಜೆಪಿ ನಾಯಕರು ► ಸ್ಫೋಟ ಆರೋಪಿ ಡೊಮಿನಿಕ್ ಮಾರ್ಟಿನ್ ಬಂಧನದ ಬೆನ್ನಿಗೇ ಎಲ್ಲರೂ ಗಪ್ ಚುಪ್

ಭಾಸ್ಕರ್ ರಾವ್. ಐಪಿಎಸ್ ಅಧಿಕಾರಿಯಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದವರು. ಬೆಂಗಳೂರು ಪೊಲೀಸ್ ಕಮಿಷನರ್ ರಂತಹ ಮಹತ್ವದ ಹುದ್ದೆಯಲ್ಲಿದ್ದವರು. ಐಪಿಎಸ್ ಗೆ ರಾಜೀನಾಮೆ ಕೊಟ್ಟು ಮೊದಲು ಆಮ್ ಆದ್ಮಿ ಪಾರ್ಟಿ ಸೇರಿದ್ರು. ಅಲ್ಲಿಂದ ಬಂದು ಈಗ ಬಿಜೆಪಿ ನಾಯಕ. ಮೊನ್ನೆ ಚುನಾವಣೆಗೂ ಸ್ಪರ್ಧಿಸಿದ್ರು. ಮೊನ್ನೆ ಮೊನ್ನೆ ಬಿಜೆಪಿಯ ಚುನಾವಣಾ ಸೋಲಿನ ಪರಾಮರ್ಶೆ ಸಭೆಯಲ್ಲಿ ಪಕ್ಷ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದವರು ಇದೇ ಭಾಸ್ಕರ್ ರಾವ್. ಆಮೇಲೆ ಇವರು ದಿಲ್ಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ , ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅಂತವರಿಗೆಲ್ಲ ಬಿಜೆಪಿಯಲ್ಲಿ ಸಿಗುತ್ತಿರುವ ಮನ್ನಣೆ ನೋಡಿ ಅದೇನು ಅಂದು ಕೊಂಡರೋ ಗೊತ್ತಿಲ್ಲ.
ನಿನ್ನೆ ಕೇರಳದಲ್ಲಿ ಬಾಂಬ್ ಸ್ಫೋಟ ಆದ ಬೆನ್ನಿಗೇ ಒಂದು ಟ್ವೀಟ್ ಮಾಡಿದ್ರು ಈ ಮಾಜಿ ಐಪಿಎಸ್ ಸಾಹೇಬ್ರು. ಅದೇನು ಗೊತ್ತಾ ? . " ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ದೀರ್ಘ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ದಶಕಗಳ ಕಾಲದ ಒಲೈಕೆಯ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ... ಪರಿಣಾಮವಾಗಿ ಭಯೋತ್ಪಾದನೆಯನ್ನು ಈಗ ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ....? "
ಇದು ಭಾಸ್ಕರ್ ರಾವ್ ಅವರ ಟ್ವೀಟ್.
ಬಾಂಬ್ ಸ್ಪೋಟವಾಗಿ ಜೀವ ಹೋಗಿತ್ತು. ಆದರೆ ಅದರ ಹಿನ್ನೆಲೆ, ಮುನ್ನೆಲೆ ಯಾವುದೂ ಬಯಲಾಗಿರಲಿಲ್ಲ. ಇನ್ನೂ ಸ್ಪೋಟದಿಂದ ಆಗಿರುವ ನಾಶ ನಷ್ಟಗಳ ಸುದ್ದಿಯೇ ಬರ್ತಾ ಇರುವಾಗ ಭಾಸ್ಕರ್ ರಾವ್ ನೇರವಾಗಿ ಬಾಂಬ್ ಸ್ಫೋಟ ಮಾಡಿದ್ದು ಮುಸ್ಲಿಮರೇ ಎಂಬಂತೆ ಫರ್ಮಾನು ಕೊಟ್ಟು ಬಿಟ್ಟರು.
ಬಾಂಬ್ ಸ್ಪೋಟದ ಸುದ್ದಿಯಾಗಿದ್ದು ನಿನ್ನೆ ಪೂರ್ವಾಹ್ನ 11.20ಕ್ಕೆ. ಭಾಸ್ಕರ್ ರಾವ್ ಈ ಟ್ವೀಟ್ ಮಾಡಿದ್ದು ಮಧ್ಯಾಹ್ನ 2.21ಕ್ಕೆ. ಸಂಜೆ 4.20ಕ್ಕೆ ಸ್ಪೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ಎಂಬಾತ ಶರಣಾಗಿದ್ದಾನೆ ಎಂದು ಕೇರಳ ಪೊಲೀಸರು ಖಚಿತಪಡಿಸಿದರು. ಆದರೆ ಆ ಬಳಿಕವೂ ತಮ್ಮ ಈ ಪೂರ್ವಗ್ರಹ ಪೀಡಿತ, ಸುಳ್ಳು ಹರಡುವ ಟ್ವೀಟ್ ಅನ್ನು ಭಾಸ್ಕರ್ ರಾವ್ ಡಿಲೀಟ್ ಮಾಡಲೇ ಇಲ್ಲ, ಸ್ಪಷ್ಟೀಕರಣ ನೀಡಲಿಲ್ಲ, ತನ್ನ ತಪ್ಪಿಗೆ ಕ್ಷಮೆ ಯಾಚಿಸಲಿಲ್ಲ. ಈವರೆಗೂ ಅವರು ಅಪಪ್ರಚಾರ ಮಾಡಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಯಾವ ಸುದ್ದಿಯೂ ಬಂದಿಲ್ಲ.
ಇವರು ರಾಜೀವ್ ಚಂದ್ರಶೇಖರ್. ಬಿಜೆಪಿ ನಾಯಕ. ಕೇಂದ್ರ ಸಚಿವ. ಬಾಂಬ್ ಬ್ಲಾಸ್ಟ್ ಆದ ಬೆನ್ನಿಗೇ ಮಧ್ಯಾಹ್ನ 3 ಗಂಟೆಗೆ ಭಟ್ಟಂಗಿ ಚಾನಲ್ ನ್ಯೂಸ್ 18 ನ ಭಟ್ಟಂಗಿ ಆಂಕರ್ ಅಮಿಶ್ ದೇವ್ಗನ್ ನ ಒಂದು ಟ್ವೀಟ್ ಅನ್ನು ರೀ ಟ್ವೀಟ್ ಮಾಡುತ್ತಾ ಇವರು ಬರೆದಿದ್ದು ಹೀಗೆ :
ಜನರಿಂದ ತಿರಸ್ಕೃತ, ಭ್ರಷ್ಟಾಚಾರ ಆರೋಪಗಳಲ್ಲಿ ಮುಳುಗಿರುವ ಸಿಎಂ ಪಿಣರಾಯಿ ವಿಜಯನ್ ಅವರಿಂದ ನಾಚಿಕೆಗೇಡು ತುಷ್ಟೀಕರಣದ ರಾಜಕೀಯ. ಇವರು ದಿಲ್ಲಿಯಲ್ಲಿ ಕೂತು ಇಸ್ರೇಲ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿ ಕೇರಳದಲ್ಲಿ ಭಯೋತ್ಪಾದಕ ಹಮಾಸ್ ಬಹಿರಂಗ ಕರೆ ಕೊಟ್ಟ ಬೆನ್ನಿಗೇ ಬಾಂಬ್ ದಾಳಿ ಹಾಗು ಸ್ಪೋಟಗಳಾಗಿ ಅಮಾಯಕ ಕ್ರೈಸ್ತರು ಬಲಿಯಾಗುತ್ತಿದ್ದಾರೆ.
ಅಂದ್ರೆ ಸ್ಪೋಟದ ಯಾವುದೇ ತನಿಖೆ ಇನ್ನೂ ಆರಂಭವೂ ಆಗುವ ಮೊದಲೇ ಕೇಂದ್ರ ಸಚಿವ ಸ್ಫೋಟವನ್ನು ಮುಸ್ಲಿಮರು ಹಾಗು ಫೆಲೆಸ್ತೀನ್ ನಲ್ಲಿರುವ ಹಮಾಸ್ ತಲೆಗೆ ಕಟ್ಟಿಬಿಟ್ಟರು.
ಚಿಕ್ಕಮಗಳೂರಿನಲ್ಲಿ ಲೂಟಿ ರವಿ ಅಂತಾನೆ ಬಹಳ ಕುಖ್ಯಾತರಾಗಿ ಮೊನ್ನೆ ಹೀನಾಯವಾಗಿ ಸೋತ ಬಿಜೆಪಿ ನಾಯಕ ಸಿ ಟಿ ರವಿ ನಿನ್ನೆ ಮಧ್ಯಾಹ್ನ ಮೂರು ಕಾಲಕ್ಕೆ ಟ್ವೀಟ್ ಮಾಡಿ ಹೇಳ್ತಾರೆ. "ಈ ಕಮ್ಯುನಿಸ್ಟ್ ಗೂಂಡಾಗಳು ಕೇರಳದಲ್ಲಿ ಭಯೋತ್ಪಾದನೆಯನ್ನು ಸಾಮಾನ್ಯವಾಗಿಸಿಬಿಟ್ಟಿದ್ದಾರೆ ಮತ್ತು ರಾಜ್ಯವನ್ನು ಇಸ್ಲಾಮಿಕ್ ಮೂಲಭೂತವಾದಿಗಳ ತಾಣವಾಗಿಸಿದ್ದಾರೆ.
ಇನ್ನು ಕೇರಳದಲ್ಲಿ ನ್ಯೂಸ್ 18 ಕೇರಳ ಹಾಗು ಕರ್ನಾಟಕದಲ್ಲಿ ಪವರ್ ಟಿವಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದ ಸುದ್ದಿಗೆ ಅದಕ್ಕೆ ಸಂಬಂಧವೇ ಇಲ್ಲದ ಟೋಪಿ ಧರಿಸಿದ ಗಡ್ಡಧಾರಿ ವ್ಯಕ್ತಿಯ ಫೋಟೋ ಬಳಸಿ ಸ್ಫೋಟವನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದ್ದವು. ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪವರ್ ಟಿವಿ ಫೋಟೋವನ್ನು ಬದಲಾಯಿಸಿದೆ.
ಇವು ಕೇರಳದಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟ ಪ್ರಕರಣದ ಬೆನ್ನಿಗೇ ಬಯಲಾದ ವಿಕೃತಿ ಹಾಗು ದ್ವೇಷದ ಕೆಲವೇ ಕೆಲವು ಸ್ಯಾಂಪಲ್ ಗಳು ಮಾತ್ರ. ಇಂತಹ ನೂರಾರು ಸುಳ್ಳು ಸುದ್ದಿಗಳು, ಪೂರ್ವಗ್ರಹ ಪೀಡಿತ ಟ್ವೀಟ್ ಗಳು, ಪೋಸ್ಟರ್ ಗಳು, ವೀಡಿಯೋಗಳು ನಿನ್ನೆಯಿಡೀ ದಿನ ಸೋಷಿಯಲ್ ಮೀಡಿಯಾಗಳಲ್ಲಿ, ಮೆಸೇಜಿಂಗ್ ಆಪ್ ಗಳಲ್ಲಿ ಓಡಾಡಿವೆ. ಲಕ್ಷಾಂತರ ಜನರನ್ನು ತಲುಪಿವೆ. ಬಿಜೆಪಿ, ಸಂಘಪರಿವಾರದ ಈ ಸುಳ್ಳು ಸುದ್ದಿಗಳ, ದ್ವೇಷ ಪ್ರಸಾರದ ಪ್ರಮಾಣ ಹಾಗು ವೇಗ ನಿಜವಾದ ಸ್ಪೋಟದಷ್ಟೇ ಭಯಾನಕವಾಗಿದೆ.
ಕೇರಳದ ಕೊಚ್ಚಿಯ ಕಳಮಶ್ಶೇರಿಯಲ್ಲಿ ಭಾನುವಾರ ಸರಣಿ ಸ್ಫೋಟ ನಡೆದಿದೆ. ಸ್ಫೋಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಗಳಿವೆ. ಕ್ರಿಶ್ಚಿಯನ್ ಧಾರ್ಮಿಕ ಗುಂಪೊಂದರ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಈ ಸ್ಫೋಟಕ್ಕೆ ಅದೇ ಧಾರ್ಮಿಕ ಗುಂಪಿನ ವ್ಯಕ್ತಿ ಹೊಣೆ ಹೊತ್ತಿದ್ದಾನೆ.
ಸ್ಫೋಟ ನಡೆಯುವುದು, ಸಾವು ನೋವಿಗೆ ಕಾರಣವಾಗುವುದು ನಿಜಕ್ಕೂ ಕಳವಳದ ವಿಚಾರ. ಆದರೆ ಮತ್ತೊಂದು ದುರಂತವೇನೆಂದರೆ, ಎಲ್ಲಿ ಏನೇ ನಡೆದರೂ, ಮುಸ್ಲಿಂ ದ್ವೇಷಿ ಮನಃಸ್ಥಿತಿಗಳು ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ತೊಡಗಿಬಿಡುವುದು. ಸ್ಫೋಟವನ್ನು ಫೆಲೆಸ್ತೀನ್ ಪರ ಪ್ರದರ್ಶನಕ್ಕೆ ತಳುಕು ಹಾಕುವುದಕ್ಕೆ ಬಿಜೆಪಿ, ಸಂಘ ಪರಿವಾರ ಹಾಗೂ ಮಡಿಲ ಮೀಡಿಯಾಗಳು ಸಮರೋಪಾದಿಯಲ್ಲಿ ಪ್ರಯತ್ನಿಸಿದ್ದವು.
ಸ್ಫೋಟಕ್ಕೆ ಹಮಾಸ್ ನಾಯಕರ ಪ್ರಚೋದನೆಯೇ ಕಾರಣವಾಗಿರಬಹುದು ಎಂದೆಲ್ಲ ಮೀಡಿಯಾಗಳು ವಿಶ್ಲೇಷಿಸಿದ್ದೂ ಆಯಿತು. ಯಹೂದಿಗಳ ವಿರುದ್ಧದ ದಾಳಿಯ ಭಾಗವಾಗಿ ಕ್ರಿಶ್ಚಿಯನ್ ಸಮಾವೇಶದ ವೇಳೆ ಸ್ಫೋಟ ನಡೆಸಲಾಗಿದೆ ಎಂಬ ಥಿಯರಿಯನ್ನು ಪ್ರಸಾರ ಮಾಡುವುದೂ ನಡೆಯಿತು. ಭಯೋತ್ಪಾದಕ ಕೃತ್ಯಗಳ ಆರೋಪ ಎದುರಿಸುತ್ತಿರುವ ಅಬ್ದುಲ್ ನಾಸಿರ್ ಮಅದನಿ ಕೂಡ ಇದೇ ಪ್ರದೇಶದವರು ಎನ್ನುವಲ್ಲಿಯವರೆಗೆ ಉಲ್ಲೇಖಿಸುವುದು ನಡೆಯಿತು.
ಆದರೆ, ಬಳಿಕ ಯಾವ ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಸಮಾವೇಶದಲ್ಲಿ ಸ್ಫೋಟ ನಡೆದಿತ್ತೊ ಅದೇ ಗುಂಪಿನ ಡೊಮಿನಿಕ್ ಮಾರ್ಟಿನ್ ಎಂಬಾತ " ತಾನೇ ಸ್ಫೋಟ ನಡೆಸಿದ್ದು" ಎಂದು ಹೇಳಿದಾಗ, ಸುಳ್ಳು ಸುದ್ದಿ ಹಬ್ಬಿಸುವ, ಆ ಮೂಲಕ ದ್ವೇಷವನ್ನು ಅತಿ ವೇಗವಾಗಿ ಹರಡುವ ಇವರ ನೀಚ ಹುನ್ನಾರ ವಿಫಲವಾಗಿತ್ತು. ಸ್ಫೋಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಲುವಿನ ಪರಿಣಾಮ ಭಯೋತ್ಪಾದಕ ಹಮಾಸ್ ಬಹಿರಂಗ ಕರೆ ಕೊಟ್ಟ ಬೆನ್ನಿಗೇ ಬಾಂಬ್ ದಾಳಿ ಹಾಗು ಸ್ಪೋಟಗಳಾಗಿ ಅಮಾಯಕ ಕ್ರೈಸ್ತರು ಬಲಿಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟ ಪಿಣರಾಯಿ ವಿಜಯನ್, ಇಂಥ ಟೀಕೆಗಳನ್ನು ಯಾವ ಆಧಾರದ ಮೇಲೆ ಮಾಡಿದ್ದಾರೆಂದು ತಿಳಿಯಬಯಸುವುದಾಗಿ ಚಂದ್ರಶೇಖರ್ ಹೆಸರು ಪ್ರಸ್ತಾಪಿಸದೆ ಹೇಳಿದರು. ಘಟನೆ ಕುರಿತು ತನಿಖೆ ನಡೆಯುತ್ತಿರುವಾಗ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹೇಗೆ ಇಂಥ ಹೇಳಿಕೆ ಕೊಡುತ್ತಾರೆ ಎಂದು ವಿಜಯನ್ ಪ್ರಶ್ನಿಸಿದರು.
ಸರಣಿ ಸ್ಫೋಟದ ಮುಖ್ಯ ವಿವರಗಳನ್ನು ಒಮ್ಮೆ ನೋಡಬೇಕು.
ಕೇರಳದ ಎರ್ನಾಕುಲಂ ಬಳಿಯ ಕಳಮಶ್ಶೇರಿ ಎಂಬ ಪ್ರದೇಶದ ಕನ್ವೆನ್ಷನ್ ಸೆಂಟರ್ನಲ್ಲಿ ಭಾನುವಾರ ಬೆಳಗ್ಗೆ ಕ್ರಿಶ್ಚಿಯನ್ ಧಾರ್ಮಿಕ ಗುಂಪು ಯೆಹೋವನ ಸಾಕ್ಷಿಗಳ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೊದಲ ಸ್ಫೋಟ.
ಅದಾದ ಬೆನ್ನಲ್ಲೆ ಮತ್ತೆರಡು ಸ್ಫೋಟಗಳು ನಡೆದವು. ಮೊದಲು ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂಬ ವರದಿಗಳಿದ್ದವು.
ಅನಂತರ ಸಾವಿನ ಸಂಖ್ಯೆ 2ಕ್ಕೆ ಏರಿದೆ. ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅವರಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ವರ್ಷದ ಬಾಲಕಿ ಸೇರಿದಂತೆ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳುತ್ತಿವೆ. ಮೂವರಿಗೆ ಶೇ.30ರಷ್ಟು ಸುಟ್ಟ ಗಾಯಗಳಾಗಿವೆ. ಸ್ಫೋಟ ನಡೆಯುತ್ತಿದ್ದಂತೆ ಹೊರಗೆ ಓಡಿ ಪಾರಾಗುವ ಧಾವಂತದಲ್ಲಿ ಕಾಲ್ತುಳಿತಕ್ಕೆ ಒಳಗಾಗಿಯೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಘಟನೆ ನಡೆದ ವೇಳೆ 2000ಕ್ಕೂ ಹೆಚ್ಚು ಮಂದಿ ಕನ್ವೆನ್ಷನ್ ಸೆಂಟರ್ನಲ್ಲಿದ್ದರು ಎನ್ನಲಾಗಿದೆ.
ಸ್ಫೋಟಕ್ಕೆ ಕಾರಣವೇನೆಂಬುದು ಮೊದಲು ತಿಳಿಯಲಿಲ್ಲ. ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ ತಂಡ, ಪೊಲೀಸರು ಧಾವಿಸಿ ಪರಿಶೀಲನೆಯಲ್ಲಿ ತೊಡಗಿದವರು. ಸ್ಫೋಟ ನಡೆಯುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದರು. ಶಾ ನಿರ್ದೇಶನದ ಮೇರೆಗೆ ಭಯೋತ್ಪಾದನಾ ನಿಗ್ರಹ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ ಜಿ ), ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತಂಡಗಳನ್ನು ಕೇರಳಕ್ಕೆ ಕಳಿಸಲಾಗುತ್ತಿರುವ ವರದಿಗಳು ಬಂದವು.
ಇದಾದ ಬಳಿಕ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ (ಐಇಡಿ) ಬಳಸಲಾಗಿದೆ ಎಂದು ರಾಜ್ಯ ಡಿಜಿಪಿ ಬಹಿರಂಗಪಡಿಸಿದರು. ಸ್ಫೋಟಕ್ಕೆ ಐಇಡಿ ಬಳಕೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು. ಇದು ಭಯೋತ್ಪಾದನಾ ಕೃತ್ಯವೇ ಎಂಬುದರ ಬಗ್ಗೆ ಏನನ್ನೂ ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ತನಿಖೆಯ ನಂತರವೇ ವಿವರಗಳನ್ನು ದೃಢೀಕರಿಸಲು ಸಾಧ್ಯ ಎಂದು ಸ್ವತಃ ಡಿಜಿಪಿಯವರೇ ಹೇಳುತ್ತಿದ್ದ ಹಂತದಲ್ಲಿಯೇ ಮಡಿಲ ಮಾಧ್ಯಮಗಳು ಅದನ್ನು ಭಯೋತ್ಪಾದಕ ಕೃತ್ಯವೆಂದು ಬಿಂಬಿಸಲು ಶುರು ಮಾಡಿಬಿಟ್ಟಿದ್ದವು.
ಪ್ರಚೋದನಾಕಾರಿ ಅಥವಾ ದ್ವೇಷದ ಸಂದೇಶ ಹರಡದಂತೆ ಅವರು ಮನವಿ ಮಾಡಿಕೊಳ್ಳುತ್ತಿದ್ದಾಗಲೇ ಸ್ಫೋಟವನ್ನು ಎಲ್ಲೆಲ್ಲಿಗೋ ತಳುಕು ಹಾಕುವ ಯತ್ನ ಬಿಜೆಪಿ ಮುಖಂಡರು ಹಾಗು ಅದರ ಐಟಿ ಸೆಲ್ ನಿಂದ ನಡೆಯತೊಡಗಿತ್ತು. ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಮಾಸ್ ನಾಯಕ ವರ್ಚುವಲ್ ಆಗಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಈ ಸ್ಫೋಟ ಸಂಭವಿಸಿರುವುದನ್ನು ವಿಶೇಷವಾಗಿ ಒತ್ತಿ ಹೇಳಲಾಯಿತು.
ಇಸ್ರೇಲ್ ದಾಳಿಯ ವಿರುದ್ಧ ಕೇರಳದಲ್ಲಿ ಶನಿವಾರ ನಡೆದ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಹಮಾಸ್ ನಾಯಕ ಖಲೀದ್ ಮಶಾಲ್ ವರ್ಚುವಲ್ ಆಗಿ ಮಾತನಾಡಿದ ಬೆನ್ನಲ್ಲೇ ದಾಳಿ ನಡೆದಿದೆ ಎಂದು ವ್ಯಾಖ್ಯಾನಿಸಲಾಯಿತು. ಸ್ಫೋಟ ನಡೆಯುತ್ತಿದ್ದಂತೆ ಕೇರಳ ರಾಜ್ಯಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡರು. ದೆಹಲಿಯಲ್ಲಿಯೂ ಕಟ್ಟೆಚ್ಚರ ವಹಿಸಲಾಯಿತು. ದೆಹಲಿಯ ಪ್ರಮುಖ ಮಾರುಕಟ್ಟೆಗಳು, ಚರ್ಚ್ಗಳು, ಮೆಟ್ರೊ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳು ಸೇರಿದಂತೆ ಎಲ್ಲ ಶಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ ಬಗ್ಗೆ ವರದಿಗಳಿದ್ದವು.
ಹೀಗೆಲ್ಲಾ ನಡೆದಿರುವಾಗಲೇ ಫೇಸ್ಬುಕ್ ಲೈವ್ ಮೂಲಕ ವ್ಯಕ್ತಿಯೊಬ್ಬ ಸ್ಫೋಟಕ್ಕೆ ತಾನೇ ಕಾರಣ ಎಂದು ಹೇಳಿಕೊಂಡ. ಅನಂತರ ಆತ ಪೊಲೀಸರಿಗೂ ಶರಣಾದ. ತ್ರಿಶೂರ್ ಜಿಲ್ಲೆಯಲ್ಲಿ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾದ ಆತನ ಹೆಸರು ಡೊಮಿನಿಕ್ ಮಾರ್ಟಿನ್.
ಆತ ಎರ್ನಾಕುಲಂ ಮೂಲದವನು ಎನ್ನಲಾಗಿದೆ.
ಪೊಲೀಸರಿಗೆ ಶರಣಾಗುವುದಕ್ಕೂ ಮೊದಲು ಆತ ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದೇನು? ಸ್ಪೋಟವನ್ನು ತಾನು ನಡೆಸಿದ್ದಕ್ಕೆ ಆತ ಕೊಟ್ಟ ಕಾರಣಗಳೇನು?
1.ನಾನು ಕೂಡ ಯಹೋವನ ಸಾಕ್ಷಿಗಳು ಎಂಬ ಕ್ರಿಶ್ಚಿಯನ್ ಪಂಗಡದಲ್ಲಿ ಸಕ್ರಿಯ ಸದಸ್ಯನಾಗಿದ್ದೆ. ಆ ಪಂಗಡದ ರಾಷ್ಟ್ರ ವಿರೋಧಿ ನಿಲುವಿನಿಂದ ಬೇಸತ್ತು ಸಮಾವೇಶದಲ್ಲಿ ಸ್ಫೋಟ ನಡೆಸಿದೆ.
2. ಕಳೆದ 16 ವರ್ಷಗಳಿಂದ ಆ ಸಂಘಟನೆಯಲ್ಲಿದ್ದ ನನಗೆ 6 ವರ್ಷಗಳ ಹಿಂದೆ ಅದರ ಆಶಯಗಳು ತಪ್ಪು ಎಂಬುದು ಮನವರಿಕೆಯಾಯಿತು.
3.ಅದು ರಾಷ್ಟ್ರದ್ರೋಹಿಯಾಗಿದ್ದು, ಅದನ್ನು ಪರಿವರ್ತಿಸಲು ಹಲವು ಬಾರಿ ಚರ್ಚಿಸಿದರೂ, ಅವರು ತಯಾರಿರಲಿಲ್ಲ.
4.ತಾವು ಮಾತ್ರ ಶ್ರೇಷ್ಠ, ಉಳಿದವರೊಂದಿಗೆ ಸೇರಬಾರದು, ಅವರು ಕೊಡುವ ಆಹಾರ ಸೇವಿಸಬಾರದು ಎಂದು ಮಕ್ಕಳಿಗೆ ಹೇಳುತ್ತಾರೆ. ಪುಟ್ಟ ಮಕ್ಕಳ ಮೆದುಳಿಗೆ ವಿಷ ಉಣಿಸುತ್ತಿದ್ದಾರೆ.
5. ರಾಷ್ಟ್ರಗೀತೆ ಹಾಡಬಾರದು, ಸರ್ಕಾರಿ ಕೆಲಸ ಮಾಡಬಾರದು. ಅದೆಲ್ಲಾ ನಶಿಸಲ್ಪಟ್ಟ ಜನಾಂಗದ ಕೆಲಸ, ನಾವು ಮಾಡಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ.
6.ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ನಾಶವಾಗುತ್ತಾರೆ ಎಂದು ಮಕ್ಕಳಿಗೆ ಹೇಳುವ, ಕೋಟ್ಯಂತರ ಜನರ ನಾಶ ಬಯಸುವ ಇವರನ್ನು ಏನು ಮಾಡಬೇಕು? ಈ ಸಂಘಟನೆ ರಾಷ್ಟ್ರಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ಈ ಸ್ಫೋಟ ನಡೆಸಬೇಕಾಯಿತು.
7. ಧರ್ಮದ ಬಗ್ಗೆ ಭಯ ಇರುವುದರಿಂದ ಇವರ ಬಗ್ಗೆ ಗೊತ್ತಿದ್ದೂ ರಾಜಕಾರಣಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಅವರ ಆಶಯಗಳು ತಪ್ಪೆಂದು ಅರ್ಥ ಮಾಡಿಸಲು ಹೀಗೆ ಮಾಡಬೇಕಾಯಿತು.
8. ನಮಗೆ ಅನ್ನ ಕೊಡುವ ಈ ದೇಶದ ಜನರನ್ನು ವೇಶ್ಯಾ ಸಮೂಹ ಎಂದೂ, ನಾಶವಾಗಲಿ ಎಂದೂ ಬಯಸುವುದು ಹಾಗೂ ನಾವು ಮಾತ್ರ ಉತ್ತಮರು ಎನ್ನುವುದನ್ನು ನಾನು ವಿರೋಧಿಸುತ್ತೇನೆ. ಈ ಸಂಘಟನೆ ಇಲ್ಲಿ ಬೇಕಿಲ್ಲ. ಆತ ಕೃತ್ಯಕ್ಕೆ ನೀಡಿದ ಕಾರಣಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದ ಪೊಲೀಸರು, ಸ್ಫೋಟದ ಹಿಂದೆ ಇರುವುದು ಡೊಮಿನಿಕ್ ಮಾರ್ಟಿನ್ ಎಂಬುದನ್ನು ಖಚಿತಪಡಿಸಿದ್ದಾರೆ.
ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ ಬಳಿಕ ಆತನನ್ನು ತ್ರಿಶೂರ್ನಲ್ಲಿನ ಕೇರಳ ಪೊಲೀಸ್ ಆಕಾಡೆಮಿಗೆ, ಬಳಿಕ ಎರ್ನಾಕುಲಂನಲ್ಲಿನ ಡಿಐಜಿ ಕಚೇರಿಗೆ ಕರೆದೊಯ್ಯಲಾಯಿತು. ಮೂಲಗಳು ದೃಢಪಡಿಸಿರುವ ಪ್ರಕಾರ, ಆತ ಕಳೆದ ಆರು ತಿಂಗಳಿಂದ ಬಾಂಬ್ಗಳನ್ನು ತಯಾರಿಸುವುದು ಹೇಗೆಂದು ಆನ್ಲೈನ್ ವೀಡಿಯೊಗಳನ್ನು ನೋಡಿ ಕಲಿಯುವುದರಲ್ಲಿ ತೊಡಗಿದ್ದ. ರಿಮೋಟ್ ಕಂಟ್ರೋಲ್ ಮೂಲಕ ಆತ ಈ ಸ್ಫೋಟ ನಡೆಸಿದ್ದಾನೆ. ಬಾಂಬ್ ತಯಾರಿಸುವುದಕ್ಕೆ ಬೇಕಿದ್ದ ವಸ್ತುಗಳನ್ನೆಲ್ಲ ಆತ ಹೆಚ್ಚಾಗಿ ಆನ್ಲೈನ್ ಮೂಲಕವೇ ಖರೀದಿಸಿದ್ದ.
ಯಹೋವನ ಸಾಕ್ಷಿಗಳು ಪಂಗಡದವರನ್ನು ದೇಶದ್ರೋಹಿಗಳು ಎಂದು ಕರೆದು, ಆ ಕಾರಣಕ್ಕಾಗಿಯೇ ತಾನು ಸ್ಫೋಟ ನಡೆಸಿದೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಡೊಮಿನಿಕ್ ಮಾರ್ಟಿನ್ ಮಾಡಿರುವುದು ಕೂಡ ದೊಡ್ಡ ಕ್ರಿಮಿನಲ್ ಕೃತ್ಯವೇ ಆಗಿದೆ. ಸ್ಫೋಟ ನಡೆಸುವುದಕ್ಕೆ ತಯಾರಾಗುವ ಆತನ ಮನಃಸ್ಥಿತಿ, ಸ್ಫೋಟವನ್ನು ನಡೆಸಿಯೇ ಬಿಡುವ ಆತನ ದುಷ್ಟತನ, ಮತ್ತದನ್ನು ಸಮರ್ಥಿಸಿಕೊಳ್ಳಲು ಆತ ಮಾಡುವ ಆರೋಪಗಳಿಗೂ, ಇಂಥದೇ ಮನಃಸ್ಥಿತಿಯ ಮತ್ತೊಂದು ವರ್ಗದವರಿಗೂ ವ್ಯತ್ಯಾಸವೇನೂ ಇಲ್ಲ.
ತನ್ನದೇ ದೇಶದ ಜನರಾಗಿರುವ ಒಂದು ಗುಂಪಿನ ವಿರುದ್ಧ ಆತ ಸ್ಫೋಟದಂಥ ಅತಿರೇಕದ ಕೃತ್ಯ ನಡೆಸಲು ಹೋಗುತ್ತಾನೆಂದರೆ, ಅವನು ತನ್ನನ್ನು ತಾನು ಏನೆಂದು ಕರೆದುಕೊಳ್ಳುತ್ತಾನೆ?. ಯಾರನ್ನೇ ಆಗಲಿ ದೇಶದ್ರೋಹಿಗಳು ಎಂದು ತಾನೇ ತೀರ್ಮಾನಿಸುವ ಡೊಮಿನಿಕ್ ಮಾರ್ಟಿನ್, ಈಗಾಗಲೇ ಅದನ್ನೇ ಮಾಡುತ್ತಿರುವವರ ಸಮರ್ಥಕನೂ ಆಗಿದ್ದಾನೆಯೆ?.







