ಈ ಡಿ ನಿರ್ದೇಶಕ ಹುದ್ದೆಗೆ ಬೇರೆ ಯಾರೂ ಇಲ್ವಾ ಎಂದು ಕೇಳಿದ ಸುಪ್ರೀಂ ಕೋರ್ಟ್
ಈ ಡಿ ದುರ್ಬಳಕೆಗೆ ಇನ್ನಾದರೂ ಬಿದ್ದೀತೇ ಕಡಿವಾಣ ?

- ಆರ್. ಜೀವಿ
ಜಾರಿ ನಿರ್ದೇಶನಾಲಯ ಅಂದ್ರೆ ಈ ಡಿ ಗೆ ನಿರ್ದೇಶಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಅಧಿಕಾರಿ ಇಡೀ ದೇಶದಲ್ಲಿ ಇಲ್ವಾ ?
ಅಥವಾ ಈಗ ಇರೋರೊಬ್ಬರೇ ಅದಕ್ಕೆ ಅರ್ಹರೇ ? ಸುಪ್ರೀಂ ಕೋರ್ಟ್ ನ ನಿನ್ನೆಯ ತೀರ್ಪು ಇಂತಹದೊಂದು ಪ್ರಶ್ನೆಯನ್ನು ಎತ್ತಿದೆ.
ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನು ತಲಾ ಒಂದು ವರ್ಷದ ಅವಧಿಗೆ ಎರಡು ಬಾರಿ ವಿಸ್ತರಿಸಿರುವುದು ಕಾನೂನು ಬಾಹಿರ ಹಾಗು ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಜೊತೆಗೆ, ವಿಸ್ತರಣೆಗೊಂಡಿದ್ದ ಅವರ ಅಧಿಕಾರಾವಧಿಯನ್ನು ಜುಲೈ 31ಕ್ಕೆ ಮೊಟಕುಗೊಳಿಸಿದೆ. 1984ರ ಐಆರ್‌ಎಸ್ ಬ್ಯಾಚ್‌ನ ಅಧಿಕಾರಿ ಮಿಶ್ರಾ, ಸರ್ಕಾರದ ಅಧಿಕಾರಾವಧಿ ವಿಸ್ತರಣೆ ಅಧಿಸೂಚನೆ ಅನ್ವಯ ನವೆಂಬರ್ 18, 2023ರವರೆಗೆ ಅಧಿಕಾರದಲ್ಲಿ ಮುಂದುವರಿಯಬೇಕಿತ್ತು.
ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ, ಜಯಾ ಠಾಕೂರ್ ಮತ್ತು ಟಿಎಂಸಿಯ ಮಹುವಾ ಮೊಯಿತ್ರಾ ಹಾಗು ಸಾಕೇತ್ ಗೋಖಲೆ ಅವರು ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಂ ನಾಥ್ ಹಾಗೂ ಸಂಜಯ್ ಕರೋಲ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ತೀರ್ಪು ನೀಡಿದೆ.
ತನ್ನ ಸೂಚನೆಯ ಹೊರತಾಗಿಯೂ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿ ವಿಸ್ತರಿಸಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ‘ಸಂಸ್ಥೆಗೆ ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವೇ’ ಎಂದು ಈ ಹಿಂದಿನ ವಿಚಾರಣೆಯಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು.
‘ಈ ಹುದ್ದೆಯನ್ನು ನಿಭಾಯಿಸಬಲ್ಲ ಸಮರ್ಥ ಅಧಿಕಾರಿ ಬೇರೆ ಯಾರೂ ಇಲ್ಲವೇ? ಸಂಸ್ಥೆಗೆ ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವೇ’ ಎಂದು ನ್ಯಾಯಪೀಠವು ಈ ಹಿಂದಿನ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತ್ತು.
‘ಈ ಹುದ್ದೆ ನಿಭಾಯಿಸಬಲ್ಲ ಸಮರ್ಥ ಅಧಿಕಾರಿ ಸಂಸ್ಥೆಯಲ್ಲಿ ಇಲ್ಲ ಎಂದು ನೀವು ಹೇಳುತ್ತಿದ್ದೀರಿ. 2023ರ ಬಳಿಕ ಮಿಶ್ರಾ ನಿವೃತ್ತರಾಗಲಿದ್ದಾರೆ. ಆಗ ಸಂಸ್ಥೆಯ ಗತಿಯೇನು’ ಎಂದೂ ಸುಪ್ರೀಂ ಕೋರ್ಟ್ ಕೇಳಿತ್ತು.
‘ಆಡಳಿತಾತ್ಮಕ ಕಾರಣಗಳಿಂದಾಗಿ ಮಿಶ್ರಾ ಅವರ ಸೇವಾವಧಿ ವಿಸ್ತರಣೆ ಮಾಡುವುದು ಅನಿವಾರ್ಯವಾಗಿತ್ತು. ಹಣ ಅಕ್ರಮ ವರ್ಗಾವಣೆ ತಡೆಗೆ ಭಾರತವು ಯಾವೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಹಣಕಾಸು ಕಾರ್ಯಪಡೆಯು ಅಂದ್ರೆ ಎಫ್ ಎ ಟಿ ಎಫ್ ಈ ವರ್ಷ ವಿಮರ್ಶೆ ನಡೆಸಲಿದೆ. ಇಂತಹ ಸಮಯದಲ್ಲಿ ಇ.ಡಿ ನಿರ್ದೇಶಕರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ. ಮಿಶ್ರಾ ಅವರು ಎಫ್ ಎ ಟಿ ಎಫ್ ಜೊತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಪಡೆ ಜೊತೆ ವ್ಯವಹರಿಸಲು ಅವರೇ ಸೂಕ್ತ’ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದ್ದರು.
‘ಸಂಸ್ಥೆಗೆ ಯಾರೊಬ್ಬರೂ ಅನಿವಾರ್ಯವಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಮುಂದುವರಿಕೆ ಅಗತ್ಯ. ರಾಜಕೀಯ ಪಕ್ಷವೊಂದರ ನಾಯಕರು ಪಿಐಎಲ್ ಸಲ್ಲಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಆ ಪಕ್ಷದ ಹಿರಿಯ ಮುಖಂಡರೊಬ್ಬರ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ’ ಎಂದು ಹೇಳಿದ್ದರು.
ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ವ್ಯಕ್ತಿಯೊಬ್ಬರು ರಾಜಕೀಯ ಪಕ್ಷವೊಂದರ ಸದಸ್ಯ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಬೇಕೆ? ಅವರು ನ್ಯಾಯಾಲಯದ ಮೊರೆ ಹೋಗುವುದನ್ನು ತಡೆಯಬಹುದೇ’ ಎಂದು ಪ್ರಶ್ನಿಸಿತು.
ಈ ಡಿ ಬಳಿ ಎಲ್ಲರ ಸಿ ಡಿ ಇದೆ ಎಂಬುದು ಈಗ ದೇಶದ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿರುವ ಜೋಕು. ಮೋದಿ, ಅಮಿತ್ ಶಾ ವಿರುದ್ಧ ಮಾತಾಡಿದರೆ ಸಾಕು ಆ ರಾಜಕಾರಣಿಗಳು ಅಥವಾ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ಡಿ ಕೆಂಗಣ್ಣು ಬೀಳುತ್ತದೆ ಎಂಬ ಆರೋಪವೂ ಬಹಳ ವ್ಯಾಪಕವಾಗಿದೆ. ದೇಶಾದ್ಯಂತ ವಿಪಕ್ಷ ನಾಯಕರು, ಸಾಮಾಜಿಕ ಹಾಗು ಮಾನವ ಹಕ್ಕು ಕಾರ್ಯಕರ್ತರು ಈ ಆರೋಪವನ್ನೂ ಮಾಡುತ್ತಲೇ ಬಂದಿದ್ದಾರೆ. ಆ ಆರೋಪಗಳಿಗೆ ತಕ್ಕಂತೆಯೇ ಹತ್ತು ಹಲವು ಬೆಳವಣಿಗೆಗಳೂ ನಡೆದಿವೆ.
ಅದಕ್ಕೆ ಇತ್ತೀಚಿನ ಉದಾಹರಣೆ ಮಹಾರಾಷ್ಟ್ರದ್ದು. ಅಲ್ಲಿ ಮೊನ್ನೆ ಮೊನ್ನೆವರೆಗೆ ಯಾರ ವಿರುದ್ಧ ಈ ಡಿ ತನಿಖೆ ನಡೆಸುತ್ತಿತ್ತೋ, ಅದೇ ನಾಯಕರು ಇವತ್ತು ಬಿಜೆಪಿ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಹಾಗು ಮಂತ್ರಿಗಳಾಗಿದ್ದಾರೆ. ಯಾರ ವಿರುದ್ಧ ಸ್ವತಃ ಪ್ರಧಾನಿ ಮೋದಿಯವರೇ 70 ಸಾವಿರ ಕೋಟಿ ಯಷ್ಟು ದೊಡ್ಡ ಹಗರಣದ ಆರೋಪ ಹೊರಿಸಿದ್ದರೋ ಅದೇ ಪಕ್ಷ ಈಗ ಪ್ರಧಾನಿ ಪಕ್ಷದ ಜೊತೆ ಸೇರಿಕೊಂಡು ಆ ಪಕ್ಷದ ನಾಯಕ ಈಗ ಪ್ರಧಾನಿ ಪಕ್ಷವಿರೋ ಸರಕಾರದಲ್ಲಿ ಡಿಸಿಎಂ ಆಗಿದ್ದಾರೆ. ಅಂದ್ರೆ ವಿಪಕ್ಷದಲ್ಲಿದ್ದರೆ ಈ ಡಿ ನಿಮ್ಮ ಬೆನ್ನು ಬೀಳುತ್ತದೆ, ಬಿಜೆಪಿ ಜೊತೆ ಕೈಜೋಡಿಸಿದರೆ ಅಧಿಕಾರವೂ ಸಿಗುತ್ತದೆ, ಈ ಡಿ ಕೂಡ ನಿಮ್ಮ ತಂಟೆಗೆ ಬರೋದಿಲ್ಲ ಎಂಬುದು ಈಗ ಎಲ್ಲರ ಬಾಯಲ್ಲಿ ಕೇಳಿ ಬರ್ತಾ ಇರೋ ಜೋಕು.
ಈಗ ಸುಪ್ರೀಂ ಕೋರ್ಟ್ ತೀರ್ಪು ಕೂಡ ಈ ಡಿ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಯಾಕೆ ಮೋದಿ ಸರಕಾರಕ್ಕೆ ಮತ್ತೆ ಮತ್ತೆ ಅದೇ ಅಧಿಕಾರಿ ನಿರ್ದೇಶಕರಾಗಿ ಮುಂದುವರಿಯುವ ಅಗತ್ಯವಿದೆ ? ಈ ದೇಶದಲ್ಲಿ ಹಿರಿಯ ಅನುಭವೀ ಅಧಿಕಾರಿಗಳ ಕೊರತೆ ಇದೆಯೇ ? ಈ ಡಿ ನಿರ್ದೇಶಕರಾಗುವ ಅರ್ಹತೆ ಇರುವ ಅಧಿಕಾರಿಗಳು ಯಾರೂ ಇಲ್ಲವೇ ?
ಈಗ ಈ ಡಿ ನಿರ್ದೇಶಕರ ಅವಧಿ ವಿಸ್ತರಣೆಯೇ ಅಸಿಂಧು ಎಂದು ಹೇಳಿರೋದು ಮೋದಿ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದೆ. ಆದರೆ ಉತ್ತರದಾಯಿತ್ವ ಇರೋರಿಗೆ ಇದೆಲ್ಲ ತಲೆಬಿಸಿ ತರುತ್ತೆ. ಈ ಸರಕಾರಕ್ಕೆ ಅಂತಹ ಭಾವನೆ ಇದೆಯೇ ?







