9ನೇ ವಯಸ್ಸಿನಲ್ಲಿ ಶಾಲೆ ಪ್ರಾರಂಭಿಸಿ, ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕು ಬೆಳಗಿದ ಬಾಬರ್ ಅಲಿ
‘ವಿಶ್ವದ ಅತ್ಯಂತ ಕಿರಿಯ ಹೆಡ್‌ಮಾಸ್ಟರ್’

- ನೀವು 9ನೇ ವಯಸ್ಸಿನಲ್ಲೇ ಶಾಲೆ ಆರಂಭಿಸಿದ್ದೀರಿ, ಇದಕ್ಕೆ ಕಾರಣವೇನು?
ಬಾಬರ್ ಅಲಿ: ನಾನು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯವನು. ನಮ್ಮದು ಆರು ಜನರ ಕುಟುಂಬ. ತಂದೆ-ತಾಯಿ, ವಿವಾಹವಾದ ತಂಗಿ, ಇಬ್ಬರು ಚಿಕ್ಕ ತಮ್ಮಂದಿರು ಮತ್ತು ನಾನು. ನಮ್ಮದು ಸರಳ ಕುಟುಂಬ. ನನ್ನ ತಂದೆ ಮುಹಮ್ಮದ್ ನಾಸಿರುದ್ದೀನ್ ಹೆಚ್ಚು ಶಿಕ್ಷಣ ಪಡೆದವರಲ್ಲ. ಆದರೆ, ಅವರಿಗೆ ಶಿಕ್ಷಣದಲ್ಲಿ ಅಪಾರ ಆಸಕ್ತಿ ಇತ್ತು. ಅವರು ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ಹಾಗಾಗಿ ಅವರು ನನ್ನನ್ನು ನಮ್ಮ ಹಳ್ಳಿಯಿಂದ 10 ಕಿಲೋಮೀಟರ್ ದೂರದ ಶಾಲೆಗೆ ಸೇರಿಸಿದ್ದರು. ನಮ್ಮ ಹಳ್ಳಿಯಲ್ಲಿ ನನ್ನ ವಯಸ್ಸಿನ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನವರು ಕೆಲಸ ಮಾಡುತ್ತಿದ್ದರು, ಅವರ ಪೋಷಕರು ಕುಟುಂಬಕ್ಕೆ ಹಣ ಗಳಿಸುವ ಉದ್ದೇಶದಿಂದ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದರು. ನಾನು ಐದನೇ ತರಗತಿಯಲ್ಲಿದ್ದಾಗ ಅಂದರೆ ಒಂಭತ್ತು ವರ್ಷದವನಾಗಿದ್ದಾಗ ನನ್ನ ಮನಸ್ಸಿನಲ್ಲಿ ಎರಡು ಭಾವನೆಗಳು ಮೂಡಿದವು. ಅದು ‘ಪ್ರೀತಿ ಮತ್ತು ಅರಿವು’. ನಾನು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಪ್ರೀತಿ ಹಾಗೂ ನಾನು ಕೂಡ ಸಾಮಾನ್ಯ ಕುಟುಂಬದಿಂದ ಬಂದಿದ್ದರೂ, ನನಗೆ ಅವಕಾಶ ಸಿಕ್ಕಿದೆ ಎಂಬ ಅರಿವು. ಈ ಎರಡು ಭಾವನೆಗಳು ನನ್ನನ್ನು ಪೇರಲೆ ಮರದ ಕೆಳಗೆ ಸಣ್ಣ ಶಾಲೆ ಪ್ರಾರಂಭಿಸಲು ಪ್ರೇರಣೆಯಾದವು. ಅದಕ್ಕೆ ನಾನು ‘ಆನಂದ ಶಿಕ್ಷಾ ನಿಕೇತನ’ ಎಂದು ಹೆಸರಿಟ್ಟೆ. ಇದರರ್ಥ: ಆನಂದದ ಶಿಕ್ಷಣ ಮನೆ. ಪ್ರೀತಿ ಮತ್ತು ಅರಿವು ಎಂಬ ಎರಡು ಭಾವನೆಗಳು ಈ ಕಾರ್ಯಕ್ಕೆ ಪ್ರೇರಣೆ ನೀಡಿದವು.
- 9 ವರ್ಷದ ಮಕ್ಕಳು ಆಟವಾಡಲು ಇಷ್ಟಪಡುತ್ತಾರೆ. ಆದರೆ ನಿಮಗೆ ಆಗ ಶಾಲೆ ಆರಂಭಿಸುವ ಕುರಿತ ಆಲೋಚನೆ ಹೇಗೆ ಬಂತು?
ಬಾಬರ್ ಅಲಿ: ಯಾವುದೇ ಬಾಹ್ಯ ಪ್ರೇರಣೆ ಇರಲಿಲ್ಲ. ಯಾರೂ ನನಗೆ ಶಾಲೆ ತೆರೆಯಲು ಹೇಳಿರಲಿಲ್ಲ. ಆ ವಯಸ್ಸಿನಲ್ಲಿ ಮಕ್ಕಳು ಆಟವಾಡುವುದರಲ್ಲಿ ತೊಡಗಿರುತ್ತಾರೆ, ಆದರೆ ನನಗೆ ನಾನು ಕಲಿತಿದ್ದನ್ನು ಕಲಿಸುವುದೇ ಆಟವಾಗಿತ್ತು. ಪ್ರತಿದಿನ ನಾನು ಶಾಲೆಯಿಂದ ಮನೆಗೆ ಬಂದು, ನಾನು ಕಲಿತಿರುವುದನ್ನು ಇತರ ಮಕ್ಕಳಿಗೆ ಹೇಳಿಕೊಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನಲ್ಲಿ ಸರಿಯಾದ ಪುಸ್ತಕಗಳು, ಹಣವೂ ಇರಲಿಲ್ಲ. ನನ್ನ ಪೋಷಕರು ನನಗೆ ಬೆಂಬಲ ನೀಡಿದರು, ಅವರು ಸ್ವತಃ ಓದಲು ಬರೆಯಲು ಬಲ್ಲವರಲ್ಲ. ಆದರೆ ಅವರು ನನಗೆ ಸಹಕಾರ ನೀಡಿದರು. ನನಗೆ ಕಲಿಯುವ ಆನಂದ ಮತ್ತು ಕಲಿಸುವ ಪ್ರೀತಿ ಮುಖ್ಯವಾಗಿತ್ತು. ಯಾರೂ ಇದನ್ನು ಮಾಡಲು ಹೇಳಿರಲಿಲ್ಲ. ಎಲ್ಲವೂ ನನ್ನೊಳಗಿನಿಂದ ಬಂದವು.
- ನಿಮ್ಮ ಶಾಲೆಯ ಕುರಿತಾಗಿ ಮಕ್ಕಳು ಮತ್ತು ಪೋಷಕರ ಮೊದಲ ಪ್ರತಿಕ್ರಿಯೆ ಹೇಗಿತ್ತು?
ಬಾಬರ್ ಅಲಿ: ಪ್ರತಿಕ್ರಿಯೆ ಮಿಶ್ರವಾಗಿತ್ತು. ಕೆಲವು ಮಕ್ಕಳು ಮತ್ತು ಪೋಷಕರು ಸಂತೋಷಗೊಂಡರು, ಮಕ್ಕಳಿಗೆ ಹೊಸದಾಗಿ ಕಲಿಯಲು ಅವಕಾಶ ಸಿಕ್ಕಿತು. ಆದರೆ ಪೋಷಕರನ್ನು ಒಪ್ಪಿಸುವುದು ಸುಲಭವಿರಲಿಲ್ಲ. ‘‘ಶಿಕ್ಷಣದಿಂದ ಏನು ಪ್ರಯೋಜನ? ನಾವು ಎರಡು ಹೊತ್ತು ಊಟಕ್ಕೂ ಪರದಾಡುತ್ತಿದ್ದೇವೆ. ನಮ್ಮ ಮಕ್ಕಳು ಕಲಿತರೆ ಏನು ಸಿಗುತ್ತದೆ?’’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಸಂದರ್ಭದಲ್ಲಿ ನಾನು ನಿರಾಸೆ ಮತ್ತು ನಕಾರಾತ್ಮಕತೆಯನ್ನು ಎದುರಿಸಿದ್ದೆ. ಆದರೆ ಪ್ರೀತಿ ಮತ್ತು ಸಹನೆ ನನ್ನನ್ನು ಯಶಸ್ವಿಯಾಗಿಸಿತು. ಕ್ರಮೇಣ ಮಕ್ಕಳು ಮತ್ತು ಪೋಷಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆ.
ನಾನು 8 ಮಕ್ಕಳೊಂದಿಗೆ ಶಾಲೆ ಆರಂಭಿಸಿದೆ. ಅವರಲ್ಲಿ ಒಬ್ಬಳು ನನ್ನ ತಂಗಿ ಅಮೀನಾ ಖಾತೂನ್. ಅವಳು ನಮ್ಮ ಶಾಲೆಯ ಮೊದಲ ವಿದ್ಯಾರ್ಥಿನಿ.
- ಶಾಲೆ ಆರಂಭಿಸಿದಾಗ ನಿಮಗೆ ಎದುರಾದ ಸಮಸ್ಯೆಗಳು ಯಾವುವು?
ಬಾಬರ್ ಅಲಿ: ಮೊದಲಿಗೆ ನನ್ನ ತಾಯಿ ನನ್ನನ್ನು ಬೆಂಬಲಿಸಿದರು. ಆದರೆ ನಾನು ಇತರರಿಗೆ ಪಾಠ ಹೇಳುವುದರಿಂದ ನನ್ನ ಓದಿಗೆ ತೊಂದರೆಯಾಗಬಹುದು ಎಂದು ಅವರು ಚಿಂತಿಸಿದ್ದರು. ಆದ್ದರಿಂದ ಅವರು ನನಗೆ ಇದನ್ನು ನಿಲ್ಲಿಸಿ ಓದಿನ ಮೇಲೆ ಗಮನಹರಿಸು ಎಂದು ಹೇಳಿದ್ದರು. ಆದರೆ ನಾನು ನನ್ನ ಕೆಲಸವನ್ನು ಮುಂದುವರಿಸಿದ್ದೆ.
ಒಂದು ದಿನ, ನನ್ನ ತಂದೆ ನಮ್ಮ ಕುಟುಂಬ ಸ್ನೇಹಿತರಾದ ನಿವೃತ್ತ ಕಾಲೇಜು ಪ್ರಾಂಶುಪಾಲರೊಂದಿಗೆ ನನ್ನ ವಿಷಯದ ಬಗ್ಗೆ ಚರ್ಚಿಸಿದರು. ಅವರು ನನ್ನ ತಂದೆಯ ಬಳಿ, ನಿಮ್ಮ ಮಗ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದರೆ ದೇವರು ಸಹಾಯ ಮಾಡುತ್ತಾನೆ, ಜ್ಞಾನ ಹಂಚಿಕೊಳ್ಳುವುದರಿಂದ ಇನ್ನಷ್ಟು ಕಲಿಯುತ್ತಾನೆ ಎಂದರು, ಈ ಮಾತುಗಳು ನನ್ನ ತಂದೆಯ ಮನಸ್ಸನ್ನು ಬದಲಿಸಿತು.
ನನಗೆ ಕುಟುಂಬದ ಬೆಂಬಲ ಯಾವಾಗಲೂ ಇತ್ತು, ಆದರೆ ಇತರರನ್ನು, ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಸಮಾಜವನ್ನು ಒಪ್ಪಿಸುವುದು ಸುಲಭದ ಮಾತಾಗಿರಲಿಲ್ಲ. ನಮ್ಮ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆ ತಿಳಿಸುವುದು ಕಷ್ಟ. ಪುಸ್ತಕಗಳು, ಅಗತ್ಯ ಸಾಮಗ್ರಿಗಳನ್ನು ಕೊಡಲು ಸಾಕಷ್ಟು ಸಂಪನ್ಮೂಲ ಇರಲಿಲ್ಲ. ನಾನು ಕೂಡ ಒಂದು ಮಗುವೇ ಆಗಿದ್ದೆ. ಅನೇಕ ಜನರು ನನ್ನನ್ನು ನಿರುತ್ಸಾಹಗೊಳಿಸಿದ್ದರು. ನಾನು ದೊಡ್ಡವನಾದಂತೆ ನಕಾರಾತ್ಮಕತೆ ಎದುರಿಸಬೇಕಾಯಿತು. ಆದರೆ ಸಹಾನುಭೂತಿಯುಳ್ಳ ಜನರು ನನ್ನನ್ನು ಬೆಂಬಲಿಸಿದರು.
- ಶಾಲೆ ನಡೆಸಲು ಯಾರಿಂದ ಯಾವ ರೀತಿಯ ಸಹಾಯ ದೊರಕಿತು?
ಬಾಬರ್ ಅಲಿ: ಮೊದಲಿಗೆ ನನ್ನ ಪೋಷಕರಿಂದ ಬೆಂಬಲ ಸಿಕ್ಕಿತು. ನನ್ನ ಶಿಕ್ಷಕಿ ಬೈಜಯಂತಿ ತಿವಾರಿ ಅವರು ನಾನು ಮುರಿದ ಬಳಪಗಳನ್ನು ಬಳಸುತ್ತಿರುವುದನ್ನು ಗಮನಿಸಿದರು. ನಾನು ಆ ಸಮಯದಲ್ಲಿ 6ನೇ ತರಗತಿಯಲ್ಲಿ ಇದ್ದೆ. ನನ್ನ ಸಾಹಸದ ಬಗ್ಗೆ ತಿಳಿದುಕೊಂಡ ಅವರು ಪೂರ್ತಿ ಬಳಪದ ಡಬ್ಬಿ ಕೊಟ್ಟರು. ಅವರ ಆ ಸಹಾಯ ಹಂತ ನನಗೆ ದೊಡ್ಡ ಪ್ರೇರಣೆಯಾಯಿತು. ನಂತರ ಅವರು ಮತ್ತು ಮತ್ತೊಬ್ಬ ಶಿಕ್ಷಕಿ ಸ್ಥಳೀಯ ಪ್ರಮುಖ ದಿನ ಪತ್ರಿಕೆಗೆ ನನ್ನ ಬಗ್ಗೆ ಮಾಹಿತಿ ನೀಡಿದರು. ನಾನು 8ನೇ ತರಗತಿಯಲ್ಲಿ ಇದ್ದಾಗ, ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ನನ್ನನ್ನು ಆಹ್ವಾನಿಸಿ ಪ್ರೋತ್ಸಾಹಿಸಿದ್ದರು.
ಒಂದು ದಿನ ನಾನು ಮಕ್ಕಳ ಪುಸ್ತಕಗಳಿಗಾಗಿ ಅರ್ಜಿ ನೀಡಲು ಜಿಲ್ಲಾಧಿಕಾರಿಯವರ ಕಚೇರಿಗೆ ಹೋಗಿದ್ದೆ ಅಲ್ಲಿ ನಾನು ‘ನನ್ನ ಹೆಸರು ಬಾಬರ್ ಅಲಿ, ಆನಂದ ಶಿಕ್ಷಣ ನಿಕೇತನದ ಮುಖ್ಯೋಪಾಧ್ಯಾಯ’ ಎಂದು ಒಂದು ಚೀಟಿ ಸಲ್ಲಿಸಿದೆ, ಜೊತೆಗೆ ಶಾಲೆಯ ಬಗ್ಗೆ ಪ್ರಕಟವಾದ ಕೆಲವು ಪತ್ರಿಕಾ ಪುಟಗಳನ್ನು ನೀಡಿದೆ. ಜಿಲ್ಲಾಧಿಕಾರಿ ನಾನು ಹಿರಿಯ ನಾಗರಿಕ ಎಂದು ಭಾವಿಸಿ ತಮ್ಮ ಸಹಾಯಕನಿಗೆ ಮೊದಲು ಮುಖ್ಯೋಪಾಧ್ಯಾಯರನ್ನು ಒಳಗೆ ಕಳಿಸಲು ಹೇಳಿದರು. ನಾನು ಅವರ ಕೊಠಡಿಗೆ ಪ್ರವೇಶಿಸಿದಾಗ, ಅವರು ಆಶ್ಚರ್ಯಚಕಿತರಾಗಿ,‘‘ ನಾನು ಮುಖ್ಯೋಪಾಧ್ಯಾಯರನ್ನು ಕರೆಸಿದ್ದೆ, ಈ ಹುಡುಗ ಯಾರು?’’ ಎಂದು ಕೇಳಿದರು. ನಾನು ಕೈ ಮುಗಿದು, ‘‘ಸರ್, ಆ ವ್ಯಕ್ತಿ ನಾನೇ’’ ಎಂದೆ. ಬೆಳಗ್ಗೆ ವಿದ್ಯಾರ್ಥಿ, ಸಂಜೆ ಈ ಕೆಲಸ ಮಾಡುತ್ತೇನೆ ಎಂದೆ. ಅವರಿಗೆ ಬಹಳ ಆಶ್ಚರ್ಯವಾಯಿತು. ಮರುದಿನ ಅವರು ಉಪವಿಭಾಗಾಧಿಕಾರಿ ಶೋಭುಜ್ ವರುಣ್ ಸರಕಾರ್‌ರನ್ನು ದಿಢೀರನೇ ಕಳಿಸಿ ನಾನು ನಿಜವಾಗಿಯೂ ಶಾಲೆ ನಡೆಸುತ್ತಿದ್ದೇನೆಯೇ ಎಂದು ಖಚಿತಪಡಿಸಿಕೊಂಡರು. ಅಲ್ಲಿಂದ ತನ್ನ ಕೊನೆಯುಸಿರಿರುವವರೆಗೂ ಜಿಲ್ಲಾಧಿಕಾರಿ ಜೀವನ್ ಕೃಷ್ಣ ಸಾಧುಖಾನ್ ಅವರು ನನ್ನ ಬೆನ್ನೆಲುಬಾಗಿ ಸಹಕರಿಸಿದರು. ಶೋಭುಜ್ ವರುಣ್ ಸರಕಾರ್ ಅವರೇ ನಮ್ಮ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರಾದರು. ಹಾಗೆಯೇ ಕಾರ್ಯಕ್ರಮವೊಂದರಲ್ಲಿ ಪರಿಚಿತರಾದ ಶಿಕ್ಷಕಿ ಫಿರೋಝಾ ಬೇಗಮ್ ಅವರು ತಾಯಿಯಂತೆ ನನ್ನನ್ನು ಬೆಳೆಸಿದ್ದಾರೆ. ಕಳೆದ 18 ವರ್ಷಗಳಿಂದ, ಅವರು ನಮ್ಮ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರೂ ನನ್ನನ್ನು ಕರೆದು ಅಭಿನಂದಿಸಿ ಪ್ರೋತ್ಸಾಹಿಸಿದ್ದರು. ಮಾಧ್ಯಮವೂ ನನ್ನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ನನ್ನ ಕೆಲಸದ ಬಗ್ಗೆ ಬರೆದು ಜನಾಭಿಪ್ರಾಯ ಮೂಡಿಸಿದವು. ನಮ್ಮೂರಿನ ರಾಮಕೃಷ್ಣ ಆಶ್ರಮದಿಂದ ನನಗೆ ಆರಂಭಿಕ ಹಂತದಲ್ಲಿ ಬಹಳ ಸಹಕಾರ ಸಿಕ್ಕಿತು. ಸ್ವಾಮಿ ವಿವೇಕಾನಂದರು ‘ಜನ ಸೇವೆಯೇ ಜನಾರ್ದನ ಸೇವೆ’ ಎಂದು ಹೇಳಿದ್ದು ನನ್ನ ಮೇಲೆ ಗಾಢ ಪ್ರಭಾವ ಬೀರಿತು. ಪ್ರವಾದಿ ಮುಹಮ್ಮದರೂ ಬಹಳ ಹಿಂದೆಯೇ ಜ್ಞಾನಾರ್ಜನೆಗೆ ಬಹಳ ಮಹತ್ವ ನೀಡಿದ್ದಾರೆ.
- ನಿಮ್ಮ ಶಾಲೆ ಇಂದು ಯಾವ ಹಂತಕ್ಕೆ ತಲುಪಿದೆ?
ಬಾಬರ್ ಅಲಿ: ನಾನು ಈ ಪ್ರಯಾಣದಲ್ಲಿ 22 ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. 2024 ಅಕ್ಟೋಬರ್ 19ರಂದು ನಮ್ಮ ಶಾಲೆಯ 22ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಇಂದಿನವರೆಗೆ ಸುಮಾರು 8,000 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣ ಪಡೆದಿದ್ದಾರೆ. ನಮ್ಮ ಶಾಲೆಯಲ್ಲಿ ಅರ್ಜಿ ಫಾರಂಗೂ ಶುಲ್ಕವಿಲ್ಲ. ಪೇರಲೆ ಮರದ ಕೆಳಗೆ ಆರಂಭವಾದ ಶಾಲೆ ಇಂದು ಉತ್ತಮ ಕಟ್ಟಡ, ಆಧುನಿಕ ತಂತ್ರಜ್ಞಾನ, ಗ್ರಂಥಾಲಯ, ಕಂಪ್ಯೂಟರ್ ಕಲಿಕೆ ಸೌಲಭ್ಯಗಳೊಂದಿಗೆ ಉನ್ನತ ಸಂಸ್ಥೆಯಾಗಿ ರೂಪುಗೊಂಡಿದೆ. ನನ್ನ ಶಾಲೆಯನ್ನು ಅದ್ಭುತವಾಗಿ ನಿರ್ಮಾಣ ಮಾಡುವಲ್ಲಿ ನನಗೆ ಕರ್ನಾಟಕದ ಇಂಜಿನಿಯರ್ ಶ್ರೀರಾಮ್ ಅವರು ಬಹಳ ಸಹಕಾರ ನೀಡಿದ್ದಾರೆ. ನನ್ನ ಮಾರ್ಗದರ್ಶಕಿ ಅಲ್ಮಿತ್ರಾ ಪಟೇಲ್ ಅವರೂ ಬೆಂಗಳೂರಿನವರು.
- ಸ್ವತಃ ನೀವು ಏನು ಶಿಕ್ಷಣ ಪಡೆದಿದ್ದೀರಿ?
ಬಾಬರ್ ಅಲಿ: ನಾನು 2013ರಲ್ಲಿ ಇಂಗ್ಲಿಷ್ ಆನರ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿದೆ. 2015ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, 2017ರಲ್ಲಿ ಇತಿಹಾಸದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಮತ್ತು ಶಿಕ್ಷಕರ ತರಬೇತಿ ಪಡೆದಿದ್ದೇನೆ.
- ನಿಮ್ಮ ಶಾಲೆಯಲ್ಲಿ ಎಷ್ಟು ಶಿಕ್ಷಕರಿದ್ದಾರೆ?
ಬಾಬರ್ ಅಲಿ: ಪ್ರಸ್ತುತ 10 ಶಿಕ್ಷಕರು, 10 ಅತಿಥಿ ಶಿಕ್ಷಕರು ಇದ್ದಾರೆ. ನಮ್ಮ ಶಾಲೆಯನ್ನು ಎಲ್ಲರಿಗಾಗಿ ತೆರೆಯಲಾಗಿದೆ. ಸರ್ವಧರ್ಮೀಯ ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಅಲ್ಲಿ ಹತ್ತನೇ ತರಗತಿವರೆಗೆ ಕಲಿಯುತ್ತಿರುವ ಐನೂರು ಮಕ್ಕಳಿದ್ದಾರೆ.
- ಭವಿಷ್ಯದಲ್ಲಿ ನಿಮ್ಮ ಶಾಲೆಯ ಕುರಿತು ನಿಮ್ಮ ದೃಷ್ಟಿಕೋನವೇನು?
ಬಾಬರ್ ಅಲಿ: ನನ್ನ ಕನಸು ಆನಂದ ಶಿಕ್ಷಾ ನಿಕೇತನವನ್ನು ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವುದು. ಎಲ್ಲೆಡೆ ಶಾಲೆಗಳು, ಕಾಲೇಜುಗಳಿವೆ. ಆದರೆ ಮೌಲ್ಯಾಧಾರಿತ ಶಿಕ್ಷಣ ಮತ್ತು ಮಾನವೀಯತೆಯ ಕೊರತೆಯಿದೆ. ನಮ್ಮ ಪ್ರದೇಶದ ಅನೇಕ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ವಲಸೆ ಕಾರ್ಮಿಕರಾಗುತ್ತಿದ್ದಾರೆ. ಹೀಗಾಗಿ, ಕೌಶಲ್ಯಾಧಾರಿತ ಕಲಿಕೆ ಕೇಂದ್ರ ಆರಂಭಿಸುವ ಯೋಜನೆ ಇದೆ. ಎಲ್ಲರಿಗೂ ಸಮಾನ ಅವಕಾಶಗಳೊಂದಿಗೆ ಶಿಕ್ಷಣ ಒದಗಿಸುವುದು, ಕೇವಲ ಪುಸ್ತಕದ ಜ್ಞಾನವಲ್ಲ ಬದಲಿಗೆ ಗುಣಮಟ್ಟದ ಕಲಿಕೆ, ಕೌಶಲ್ಯಾಭಿವೃದ್ಧಿ ಮತ್ತು ಮಾನವೀಯತೆಯ ಶಿಕ್ಷಣ ನೀಡುವುದು ನನ್ನ ದೊಡ್ಡ ಕನಸಾಗಿದೆ. ಮುರ್ಶಿದಾಬಾದ್ ಮಾತ್ರವಲ್ಲ ಪಶ್ಚಿಮ ಬಂಗಾಳದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ದೇಶಾದ್ಯಂತ ಇದೇ ಮಾದರಿಯ ಶಾಲೆ ನಿರ್ಮಿಸುವುದು ನನ್ನ ಗುರಿ.







