ದೇವರಿಗೆ ಕೇಜಿಗಟ್ಟಲೆ ಚಿನ್ನ ಕೊಡುವ ನ್ಯೂ ಇಂಡಿಯಾದಲ್ಲಿ ಪಾಪಚ್ಚಿಗೆ ಜಾಗವಿಲ್ಲ
►ಇಲ್ಲಿ 'ಜನಸೇವಕ' ಜನಪ್ರತಿನಿಧಿಗಳು ಶ್ರೀಮಂತರಾಗುತ್ತಲೇ ಹೋಗೋದು ಹೇಗೆ ? ► "ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗುತ್ತಾರೆ" ಎಂದು ಹೇಳುವ ಕೊಳಕರು !

ಸಾಂದರ್ಭಿಕ ಚಿತ್ರ
ಮಂಗಳವಾರ ಬಂದಿರುವ ಒಂದು ಸುದ್ದಿ ಓದಿದರೆ ಮನಸ್ಸಲ್ಲಿ ಸಾಸಿವೆಯಷ್ಟಾದರೂ ಮನುಷ್ಯತ್ವ ಇರುವ ಪ್ರತಿಯೊಬ್ಬ ಭಾರತೀಯ ಬೆಚ್ಚಿ ಬೀಳಬೇಕು, ನಾಚಿಕೆಯಿಂದ ತಲೆ ತಗ್ಗಿಸಬೇಕು. ಪಕ್ಷ ಅದ್ಯಾವುದೇ ಇರಲಿ, ನಮ್ಮನ್ನು ಆಳುತ್ತಿರುವವರು ಆ ಸುದ್ದಿ ಓದಿದರೆ ಅವರಿಗೆ ಒಂದು ಕಾಳಿನಷ್ಟಾದರೂ ಉತ್ತರದಾಯಿತ್ವ, ಮಾನವೀಯತೆ ಇದೆ ಎಂದಾದರೆ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇಂತಹದೊಂದು ಘಟನೆ ತಾವು ಅಧಿಕಾರದಲ್ಲಿರುವಾಗಲೇ ಆಗಿದ್ದಕ್ಕೆ ಅವರು ಸಂಪೂರ್ಣ ನೈತಿಕ ಹೊಣೆ ಹೊತ್ತುಕೊಳ್ಳಬೇಕು.
ಆ ಸುದ್ದಿ ಬಂದಿರುವುದು ಪಕ್ಕದ ರಾಜ್ಯ ತಮಿಳುನಾಡಿನಿಂದ. ಕಳೆದ ತಿಂಗಳ 28ರಂದು ತಮಿಳುನಾಡಿನ ಸೇಲಂನಲ್ಲಿ ಬಸ್ ಗುದ್ದಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುದ್ದಿಯಾಗಿತ್ತು. ಆದರೆ, ಅದು ಆತ್ಮಹತ್ಯೆಯಾಗಿದ್ದು, ಮಗನ ಕಾಲೇಜು ಫೀ ಹೊಂದಿಸಲಾಗದ ಆ ತಾಯಿ ತಾನು ಸಾಯುವುದರಿಂದಲಾದರೂ ಮಗನಿಗೆ ಹಣ ಸಿಗಲಿ ಎಂದು ಬಯಸಿ ಹಾಗೆ ಮಾಡಿಕೊಂಡಿದ್ದರು ಅನ್ನೋದು ಈಗ ಬಹಿರಂಗವಾಗಿದೆ.
ಮಗನ 45 ಸಾವಿರ ರೂ. ಫೀ ಕಟ್ಟಲು ಆಕೆ ಸಾಲಕ್ಕಾಗಿ ಬ್ಯಾಂಕ್ ಒಂದರಲ್ಲಿ ಅರ್ಜಿ ಸಲ್ಲಿಸಿದ್ದರೂ, ಸೇಲಂ ಡಿ.ಸಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಯಾಗಿ ದುಡಿಯುತ್ತಿದ್ದ ಆಕೆಗೆ ಸಾಲ ಕೊಡಲು ಬ್ಯಾಂಕ್ ನಿರಾಕರಿಸಿತ್ತು. ತಾನು ಸತ್ತರೆ ತನ್ನ ಮಗನ ಕಾಲೇಜು ಫೀ ಕಟ್ಟಲು ಪರಿಹಾರ ಹಣ ಸಿಗುತ್ತದೆ ಎಂದು ಯಾರೋ ಹೇಳಿದ್ದನ್ನು ನಂಬಿದ್ದ ಆ ತಾಯಿ ಚಲಿಸುತ್ತಿದ್ದ ಬಸ್ಗೆ ಅಡ್ಡಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಈ ದೇಶದಲ್ಲಿ ಇದು ಒಬ್ಬ ತಾಯಿಯ ಬದುಕಿನ ದುರಂತವೇನೂ ಅಲ್ಲ ಎಂಬುದನ್ನು ನಾವು ಬಹಳ ವಿಷಾದದಿಂದಲೇ ಒಪ್ಪಿಕೊಳ್ಳಬೇಕಿದೆ. ಒಂದೆಡೆ ಮಗನ ಕಾಲೇಜು ಫೀ ಕಟ್ಟಲು ಹಣವಿಲ್ಲದೆ. ತನ್ನ ಸಾವಿನಿಂದಾದರೂ ಹಣ ಸಿಗಲಿ ಎಂದು ತಾಯಿ ತನ್ನ ಬದುಕು ಮುಗಿಸಿಕೊಂಡರು ಎಂಬ ಸುದ್ದಿ ಬಂದ ಮಂಗಳವಾರವೇ , ಇನ್ನೊಂದೆಡೆ ಸಿರಿವಂತ ದೇವರು ತಿರುಪತಿ ವೆಂಕಟೇಶ್ವರನಿಗೆ ಇನ್ಫೋಸಿಸ್ನ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿ ಚಿನ್ನದ ಶಂಖ ಮತ್ತು ಆಮೆಯ ವಿಗ್ರಹವನ್ನು ತಿರುಪತಿ ದೇವಸ್ಥಾನಕ್ಕೆ ಸಮರ್ಪಿಸಿರುವ ಸುದ್ದಿ ಬಂದಿದೆ.
ಈ ಸುದ್ದಿ ಬಂದ ಹೊತ್ತಲ್ಲಿಯೇ ತಮಿಳುನಾಡಿನ ಆ ತಾಯಿಯ ದುರಂತದ ವರದಿಯೂ ಬಂದಿದ್ದು ಕಾಕತಾಳೀಯವೇ ಆದರೂ, ಈ ದೇಶದಲ್ಲಿ ಬಡತನ ಮತ್ತು ಶ್ರೀಮಂತಿಕೆಯ ನಡುವಿನ ಅಂತರ ಹೆಚ್ಚುತ್ತಲೇ ಇರುವುದು ಕಟು ಸತ್ಯ. ಅಚ್ಚೇ ದಿನ್ ಎನ್ನುತ್ತ ಜನರಿಗೆಲ್ಲ ಮಂಕುಬೂದಿ ಎರಚಿ ಅಧಿಕಾರಕ್ಕೇರಿದವರು ಕಳೆದೊಂಬತ್ತು ವರ್ಷಗಳಲ್ಲಿ ಯಾರಿಗೆ ಅಚ್ಚೇ ದಿನಗಳನ್ನು ತಂದುಕೊಟ್ಟರು ಅನ್ನೋದು ಹಲವು ಅಧ್ಯಯನಗಳು ತೆರೆ ತೆರೆದು ಇಟ್ಟಿರೋ ವಾಸ್ತವವನ್ನು ನೋಡಿದರೆ ಗೊತ್ತಾಗುತ್ತದೆ.
ದೇಶದ ಸಂಪತ್ತೆಲ್ಲ ಕೆಲವೇ ಮಂದಿ ಕೋಟ್ಯಧಿಪತಿಗಳ ಕೈಯಲ್ಲಿಯೇ ಇದೆಯೆಂಬ ಭಯಾನಕ ಸತ್ಯವನ್ನೇ ಎಲ್ಲ ಅಧ್ಯಯನಗಳೂ ಹೇಳುತ್ತಿವೆ. ಈ ವರ್ಷದ ಏಪ್ರಿಲ್ನಲ್ಲಿ ಬಿಡುಗಡೆಯಾದ Oxfam ವರದಿ, ಭಾರತದಲ್ಲಿ ಅಸಮಾನತೆ ಯಾವ ಮಟ್ಟದಲ್ಲಿದೆ ಬೆಳೆಯುತ್ತಲೇ ಇದೆ ಅನ್ನೋದರ ಸ್ಪಷ್ಟ ಚಿತ್ರವನ್ನು ಕೊಟ್ಟಿದೆ.
ಕೇವಲ ಶೇ.5ರಷ್ಟು ಮಂದಿಯ ಕೈಯಲ್ಲೇ ದೇಶದ ಒಟ್ಟು ಸಂಪತ್ತಿನ ಶೇ.60ಕ್ಕಿಂತ ಹೆಚ್ಚು ಪಾಲು ಸೇರಿಕೊಂಡಿದೆ. ಇನ್ನೂ ದೊಡ್ಡ ವಿಪರ್ಯಾಸವೆಂದರೆ, ತಳಮಟ್ಟದ ಶೇ. 50ರಷ್ಟು ಜನರ ಬಳಿಯಿರುವುದು ಒಟ್ಟು ಸಂಪತ್ತಿನ ಶೇ.3ರಷ್ಟು ಭಾಗ ಮಾತ್ರ. ಇದಕ್ಕೂ ಕೆಲವೇ ಸಮಯದ ಹಿಂದೆ Oxfam ಪ್ರಕಟಿಸಿದ್ದ ‘ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸ್ಟೋರಿ’ ಎಂಬ ವರದಿ 2012ರಿಂದ 2021ರ ನಡುವಿನ ಅವಧಿಯಲ್ಲಿ ಬಡವ-ಶ್ರೀಮಂತರ ನಡುವೆ ಸೃಷ್ಟಿಯಾಗಿರೋ ಕಂದಕ ಎಷ್ಟು ದೊಡ್ಡದು ಎಂಬುದನ್ನು ಹೇಳಿತ್ತು.
ದೇಶದ ಒಟ್ಟು ಸಂಪತ್ತಿನ ಶೇ.40ರಷ್ಟು ಭಾಗ ಜನಸಂಖ್ಯೆಯ ಕೇವಲ ಶೇ.1ರಷ್ಟು ಜನರ ಕೈಯಲ್ಲೇ ಇರುವುದನ್ನೂ, ತಳಮಟ್ಟದ ಶೇ.50ರಷ್ಟು ಜನರ ಕೈಯಲ್ಲಿರುವುದು ಸಂಪತ್ತಿನ ಶೇ.3ರಷ್ಟು ಮಾತ್ರ ಎಂಬುದನ್ನೂ ಆ ವರದಿ ತೋರಿಸಿತ್ತು.
ಬಡವರ ಪಾಲು ಆಗಲೂ ಅಷ್ಟೆ, ಈಗಲೂ ಅಷ್ಟೆ. ಭಾರತದಲ್ಲಿ ಒಟ್ಟು ಶತಕೋಟ್ಯಧಿಪತಿಗಳ ಸಂಖ್ಯೆ 2020ರಲ್ಲಿ 102 ಇದ್ದದ್ದು 2022ರಲ್ಲಿ 166ಕ್ಕೆ ಏರಿರುವುದನ್ನೂ ಅದು ತಿಳಿಸಿತ್ತು. ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 660 ಶತಕೋಟಿ ಡಾಲರ್, ಅಂದರೆ 54.12 ಲಕ್ಷ ಕೋಟಿ ರೂ. ಇದು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಇಡೀ ಕೇಂದ್ರ ಬಜೆಟ್ಗೆ ಒದಗಿಸಬಹುದಾದಷ್ಟು ದೊಡ್ಡ ಮೊತ್ತ ಎಂಬ ಸತ್ಯವನ್ನೂ ಆ ವರದಿ ಹೇಳುತ್ತಿದೆ.
ಹಸಿವು, ನಿರುದ್ಯೋಗ, ಹಣದುಬ್ಬರ ಮತ್ತು ಆರೋಗ್ಯ ವಿಪತ್ತುಗಳು ದೇಶವನ್ನು ಕಾಡುತ್ತಿರೋ ಬಹುದೊಡ್ಡ ಬಿಕ್ಕಟ್ಟುಗಳಾಗಿವೆ. ಒಂದೆಡೆ ಇಂಥ ಕರಾಳ ಸ್ಥಿತಿಯಿರುವಾಗಲೇ, ಭಾರತದ ಕೋಟ್ಯಧಿಪತಿಗಳು ಮಾತ್ರ ಇದರ ಯಾವ ಬಿಸಿಯೂ ಸೋಕದೆ ನಿರಾಳವಾಗಿ ಇನ್ನಷ್ಟು ಮಗದಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ.
ಆದರೆ, ದೇಶದಲ್ಲಿ ಬಡವರು ಜೀವನಾವಶ್ಯಕ ಮೂಲಭೂತ ಸವಲತ್ತುಗಳನ್ನು ಪಡೆಯುವುದಕ್ಕೂ ಆಗುತ್ತಿಲ್ಲ. ಹಸಿವಿನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ 2018ರಲ್ಲಿ 19 ಕೋಟಿ ಇದ್ದದ್ದು 2022ರಲ್ಲಿ 35 ಕೋಟಿಗೆ ಏರಿದೆ. 2022ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.65ರಷ್ಟು ಮಕ್ಕಳು ಹಸಿವಿನಿಂದಾಗಿಯೇ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ ಅನ್ನೋದನ್ನೂ Oxfam ವರದಿ ಉಲ್ಲೇಖಿಸಿದೆ.
2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, 121 ದೇಶಗಳಲ್ಲಿ ಭಾರತ ಶೋಚನೀಯ 107ನೇ ಸ್ಥಾನದಲ್ಲಿದೆ. ಇದು ಪಾಕ್, ಬಾಂಗ್ಲಾಕ್ಕಿಂತಲೂ ಕೆಳಗಿನ ಸ್ಥಾನ. ನೇಪಾಳ, ಶ್ರೀಲಂಕಾ ಕೂಡ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇ.19.3ರಷ್ಟಿದ್ದು, ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಇರುವ ದೇಶವಾಗಿದೆ ಎಂದು ವರದಿ ಹೇಳಿತು. ಒಟ್ಟಾರೆ ಭಾರತದಲ್ಲಿ ಹಸಿವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ ಆ ಜಾಗತಿಕ ಸೂಚ್ಯಂಕ. ಎಂದಿನಂತೆ ಭಾರತ ಸರಕಾರ ಮಾತ್ರ ಸಮೀಕ್ಷೆಯೇ ತಪ್ಪು ಎಂದು ಟೀಕಿಸಿತು.
ಇದು ಈ ದೇಶದ ಬಡವರ ಕಥೆ. ಸರ್ಕಾರದ ಲೆಕ್ಕವನ್ನೂ ಮೀರಿದ ಸತ್ಯವೊಂದು ಬೇರೆಯೇ ಇರುತ್ತದೆ. ಅಂದರೆ ಬಡವರ ಬದುಕಿನ ಕರಾಳತೆಯನ್ನು ಊಹಿಸಿಕೊಳ್ಳಬಹುದು. ಮತ್ತೂ ಒಂದು ದೊಡ್ಡ ದುರಂತವೆಂದರೆ, ಅತಿ ಶ್ರೀಮಂತರು ಕಟ್ಟುವ ತೆರಿಗೆ ಒಂದೆಡೆ ಕಡಿಮೆಯಾಗುತ್ತಿದ್ದರೆ, ಬದುಕುವುದಕ್ಕೇ ಹೈರಾಣಾಗುತ್ತಿರುವ ಜನಸಾಮಾನ್ಯರ ಮೇಲೆಯೇ ಅದಕ್ಕಿಂತ ದೊಡ್ಡ ತೆರಿಗೆ ಭಾರ ಇದೆಯೆಂಬುದು.
ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಬೆಳೆಯುತ್ತಿರುವುದರಲ್ಲಿ ಅತಿ ಶ್ರೀಮಂತರು ಮತ್ತು ಕಾರ್ಪೊರೇಟ್ ವಲಯಗಳಿಗೆ ತೆರಿಗೆ ವಿಧಿಸುವಲ್ಲಿನ ಸರ್ಕಾರದ ವೈಫಲ್ಯದ ಪಾಲೂ ಇದೆ. GST ಯಂತಹ ಗ್ರಾಹಕ ತೆರಿಗೆಗಳ ಕಾರಣದಿಂದಾಗಿ, ಬಡವರು ತಮ್ಮ ಆದಾಯದ ಬಹುಪಾಲನ್ನು ಪರೋಕ್ಷ ತೆರಿಗೆಗೇ ಹಾಕಬೇಕಾಗಿದೆ. ಮೇಲ್ಪಂಕ್ತಿಯ ಶೇ.10ರಷ್ಟು ಜನರಿಗೆ ಹೋಲಿಸಿದರೆ ತಳಮಟ್ಟದ ಶೇ.50ರಷ್ಟು ಜನರು ಆರು ಪಟ್ಟು ಹೆಚ್ಚು ತೆರಿಗೆ ಪಾವತಿಸುತ್ತಾರೆ ಎನ್ನುತ್ತದೆ Oxfam ವರದಿ.
ಆಹಾರ ಮತ್ತು ಆಹಾರೇತರ ವಸ್ತುಗಳಿಂದ ಸಂಗ್ರಹಿಸಲಾಗುವ ಒಟ್ಟು ತೆರಿಗೆಯ ಶೇ.64.3ರಷ್ಟು ಭಾಗ ತಳಮಟ್ಟದ ಶೇ.50ರಷ್ಟು ಬಡವರಿಂದಲೇ ಬರುತ್ತಿದೆ. ಒಟ್ಟಾರೆ ಜಿಎಸ್ಟಿಯ ಹೆಚ್ಚು ಕಡಿಮೆ ಮೂರನೇ ಎರಡರಷ್ಟು ಪಾಲು ಬರೋದು ಇದೇ ಶೇ.50ರಷ್ಟು ಜನರಿಂದಲೇ. ಇದೇ ವೇಳೆ, ಶೇ.40ರಷ್ಟಿರೋ ಮಧ್ಯಮ ವರ್ಗದವರಿಂದ ಮೂರನೇ ಒಂದು ಭಾಗ ಜಿಎಸ್ಟಿ ಬಂದರೆ, ಮೇಲೆ ಕೂತಿರೋ ಶೇ.10ರಷ್ಟು ದೊಡ್ಡ ಮನುಷ್ಯರಿಂದ ಬರುತ್ತಿರೋದು ಕೇವಲ ಮೂರರಿಂದ ನಾಲ್ಕು ಪ್ರತಿಶತ ಮಾತ್ರ ಅನ್ನೋದನ್ನೂ Oxfam ವರದಿ ಹೇಳುತ್ತದೆ.
ವಿಪರ್ಯಾಸ ಏನು ಗೊತ್ತಾ ? ಈ ಅತಿಹೆಚ್ಚು ತೆರಿಗೆ ಕೊಡುಗೆ ನೀಡುತ್ತಿರುವವರೇ ಮತ್ತೆ " ನೀವೇನು ತೆರಿಗೆ ಕಟ್ಟುತ್ತೀರಾ ? " ಅಂತ ಸೋಷಿಯಲ್ ಮೀಡಿಯಾದಲ್ಲಿ, ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಪಾಠ, ಅವಹೇಳನ ಕೂಡ ಕೇಳಬೇಕು.
ಶ್ರೀಮಂತರ ಮೇಲೆ ತೆರಿಗೆ ಹಾಕಬೇಕು, ಅವರು ಗಳಿಸುವ ಅತಿಯಾದ ಲಾಭಕ್ಕೂ ತೆರಿಗೆ ಬೀಳಬೇಕು ಎಂದು Oxfam ವರದಿ ಈ ಹಿಂದೆಯೂ ಶಿಫಾರಸು ಮಾಡಿತ್ತು. ಆದರೆ ಆ ಶಿಫಾರಸನ್ನು ತಿರುಗಿ ನೋಡುವ ಮನಸ್ಸಾದರೂ ಈ ದೇಶವನ್ನು ಆಳುವವರಿಗೆ ಇದೆಯೇ ? 2021ರ ಕೊನೆಯಲ್ಲಿ ಪ್ರಶ್ನಮ್ ಸರ್ವೇ ಕಂಡುಕೊಂಡ ಸತ್ಯವೂ ಇದೇ ರೀತಿಯಲ್ಲಿತ್ತು.
ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಈ 14 ರಾಜ್ಯಗಳ 2,895 ಜನರನ್ನು ಅದು ಮಾತನಾಡಿಸಿತ್ತು. ಬಡವರಿಗೆ ಬದುಕು ಉತ್ತಮಪಡಿಸಿಕೊಳ್ಳಲು ಅವಕಾಶವೇ ಸಿಗದಿರುವುದರ ಬಗ್ಗೆ ಹೆಚ್ಚಿನವರು ಹೇಳಿದ್ದರು.
ಶ್ರೀಮಂತರು ಶ್ರೀಮಂತರಾಗುತ್ತಲೇ ಇರುವ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿರುವ ವಾಸ್ತವವನ್ನು ಜನರು ಕಂಡಿರುವುದು ಆ ಸಮೀಕ್ಷೆಯಲ್ಲಿ ಗೊತ್ತಾಗಿತ್ತು. ಕಾರ್ಪೋರೇಟ್ ವಲಯಗಳಿಗೆ ಕಡಿಮೆ ತೆರಿಗೆ ಅಥವಾ ತೆರಿಗೆ ರಿಯಾಯಿತಿ ಕ್ರಮಕ್ಕೆ ಸರ್ವೇಯಲ್ಲಿ ಪಾಲ್ಗೊಂಡಿದ್ದ ಜನ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ, ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ಹಾಕಬೇಕು ಎಂದೇ ಅಭಿಪ್ರಾಯಪಟ್ಟಿದ್ದರು.
ಕಳೆದ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡು ಭಾರತಗಳಿವೆ, ಒಂದು ಶ್ರೀಮಂತರ ಭಾರತ, ಇನ್ನೊಂದು ಬಡವರ ಭಾರತ ಎಂದಿದ್ದರು. ಅವರು ಹೇಳಿದ್ದಂತೆ, ಶೇ.85ಕ್ಕೂ ಹೆಚ್ಚು ಜನರ ಆದಾಯ ಕುಸಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಶ್ರೀಮಂತರು ಏರುತ್ತಲೇ ಇದ್ದಾರೆ, ಬಡವರು ಇನ್ನಷ್ಟು ಅಂಚಿಗೆ ಜಾರುತ್ತಲೇ ಇದ್ದಾರೆ. ಆದರೆ ದೇಶದ ಈ ಸ್ಥಿತಿಗೆ ಕಾಂಗ್ರೆಸ್ ಕೊಡುಗೆಯೂ ಸಾಕಷ್ಟಿದೆ. ಅದು ಪ್ರಾರಂಭಿಸಿದ ಆರ್ಥಿಕ ನೀತಿಗಳನ್ನೇ ಇಂದು ಇನ್ನಷ್ಟು ಕಠಿಣವಾಗಿ, ಕ್ರೂರವಾಗಿ ಹಾಗು ಅಷ್ಟೇ ಅವೈಜ್ಞಾನಿಕವಾಗಿ ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ.
ದೇಶದ ಕೆಲವೇ ಕೆಲವು ಶ್ರೀಮಂತರು ಹವಾ ನಿಯಂತ್ರಿತ ಹಲವು ಅಂತಸ್ತುಗಳ ಅರಮನೆಯಲ್ಲಿ ಐಷಾರಾಮಿ ಬದುಕನ್ನು ಅನುಭವಿಸುತ್ತಿರುವಾಗ, ತಿರುಪತಿ ವೆಂಕಟೇಶ್ವರನಿಗೆ ಚಿನ್ನದ ಶಂಖದಿಂದ ಅಭಿಷೇಕ ನಡೆಯುವಾಗ, ಈಗಾಗಲೇ ಚೆನ್ನಾಗಿಯೇ ಇರುವ ಮಸೀದಿಗಳಿಗೂ ಕೋಟ್ಯಂತರ ರೂಪಾಯಿ ಸುರಿದು ಅವುಗಳನ್ನು ಆಕರ್ಷಕವಾಗಿ ನವೀಕರಣ ಮಾಡುವ ಜನರಿರುವಾಗ ಬಡವರ ಭಾರತದಲ್ಲಿ ಹಸಿವು ಭೀಕರವಾಗಿದೆ, ಬದುಕು ದುಸ್ತರವಾಗಿದೆ. ಮಕ್ಕಳ ಓದಿನ ಫೀಸು ತಮ್ಮ ಸಾವಿನಿಂದಾದರೂ ಸಿಗಲಿ ಎಂದು ತಾಯಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಈ ನೆಲದ ಅಗಾಧ ಸಂಪನ್ಮೂಲ, ಸರಕಾರದ ನೀತಿ ನಿಯಮಗಳು ಹಾಗು ಇಲ್ಲಿನ ಲಕ್ಷಾಂತರ ಜನರ ಶ್ರಮವನ್ನು ತನಗೆ ಬೇಕಾದಂತೆ ಬಳಸಿಕೊಂಡು, ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಸಂಪಾದಿಸುವ ಉದ್ಯಮಿಗೆ, ಬಿಸಿಸಿಐ ನಂತಹ ಕೋಟ್ಯಧೀಶ ಸಂಸ್ಥೆಗಳಿಗೆ ಸರಕಾರ ಸಂಪೂರ್ಣ ತೆರಿಗೆ ವಿನಾಯಿತಿ ಕೊಡುವಾಗ, ಅವರಿಗೆ ಬೇಕಾದಂತೆ ಎಕರೆಗಟ್ಟಲೆ ಭೂಮಿ, ಹೆಕ್ಟೇರುಗಟ್ಟಲೆ ಅರಣ್ಯ ಕೊಟ್ಟು ಬಿಡುವಾಗ ಯಾರೂ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಪ್ರಶ್ನಿಸುವುದಿಲ್ಲ, ಫೇಸ್ ಬುಕ್ ನಲ್ಲಿ ಅವರ ಮೇಲೆ ಹರಿಹಾಯುವುದಿಲ್ಲ, ಸುಳ್ಳುಕೋರ ಬಾಡಿಗೆ ಭಾಷಣಕಾರರು ಊರೂರು ತಿರುಗಿ ಭಾಷಣ ಮಾಡುವಾಗ ಅದನ್ನು ಟೀಕಿಸುವುದಿಲ್ಲ. ಇಲ್ಲಿನ ಬ್ಯಾಂಕುಗಳಿಗೆ ಕೋಟಿಗಟ್ಟಲೆ ಪಂಗನಾಮ ಹಾಕಿ ವಿದೇಶಕ್ಕೆ ಓಡಿ ಅಲ್ಲಿ ವಿಲಾಸಿ ಜೀವನ ನಡೆಸುವ ವಂಚಕರ ಬಗ್ಗೆಯೂ ಇವರಿಗೆ ತಕರಾರಿಲ್ಲ.
ಆದರೆ ಬಡವರಿಗೆ ಎರಡೊತ್ತಿನ ಊಟ ಕಡಿಮೆ ದರದಲ್ಲಿ ಕೊಟ್ಟರೆ, ಅವರಿಗೆ ಒಂದಿಷ್ಟು ಅಕ್ಕಿ ಉಚಿತವಾಗಿ ಕೊಟ್ಟರೆ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟರೆ ಇವರ ಗೋಳಾಟ, ಚೀರಾಟ ಮುಗಿಲು ಮುಟ್ಟುತ್ತದೆ. ಎಲ್ಲರೂ ಸೋಮಾರಿಗಳಾಗ್ತಾರೆ, ಕೆಲಸಕ್ಕೆ ಯಾರು ಸಿಗ್ತಾರೆ, ದುಡಿದು ತಿನ್ನಬೇಕು ಎಂದು ಈ ಸುಳ್ಲುಕೋರ ದ್ವೇಶಭಕ್ತರು ಊರೆಲ್ಲಾ ಬೊಬ್ಬೆ ಹಾಕಿಕೊಂಡು ತಿರುಗಾಡುತ್ತಾರೆ.
ಈ ದೇಶದಲ್ಲಿ ಜನರನ್ನು ಆಳುವವರು ಅಂದ್ರೆ ಶಾಸಕರು, ಸಂಸದರು, ಮಂತ್ರಿಗಳು - ಯಾರೂ ಬಡವರಲ್ಲ. ಅವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಅಂತ ಬಿಟ್ರೆ ಬಹುತೇಕ ಎಲ್ಲರೂ ಕೋಟ್ಯಧೀಶರೇ. ಅದು ಹೇಗೆ ಮತ್ತು ಯಾಕೆ ? ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ ? ಒಂದು ಬಾರಿ ಶಾಸಕರಾದ ಕೂಡಲೇ ರಾಜಕಾರಣಿಯ ಆರ್ಥಿಕ ಸ್ಥಿತಿಗತಿ ಸಂಪೂರ್ಣ ಬದಲಾಗೋದು ಹೇಗೆ ? ಈ ಬಗ್ಗೆ ಯಾರೂ ಪ್ರಶ್ನಿಸೋದಿಲ್ಲ ಯಾಕೆ ?
ಯಾಕೆ ಅಂದ್ರೆ ಪ್ರಶ್ನಿಸುವ ಜನರಿಗೆ ಇದೇ ಆಳುವವರು ವಾಟ್ಸ್ ಆಪ್ ಕೊಟ್ಟಿದ್ದಾರೆ. ಅದರಲ್ಲಿ ಬೇಕಾದಷ್ಟು ಡೇಟಾ ಕೊಟ್ಟಿದ್ದಾರೆ. ಅದರಲ್ಲಿ ಮುಸ್ಲಿಂ ದ್ವೇಷ, ಮಂದಿರ ಮಸೀದಿ ವಿವಾದ, ಗೋ ರಕ್ಷಣೆ, ಲವ್ ಜಿಹಾದ್ ಇತ್ಯಾದಿ ಕೆಲಸಕ್ಕೆ ಬಾರದ, ಸಮಾಜದಲ್ಲಿ ಇನ್ನಷ್ಟು ಪ್ರಕ್ಷುಬ್ಧತೆ ಹೆಚ್ಚಿಸುವ, ಇನ್ನಷ್ಟು ಅಶಾಂತಿ ಹರಡುವ ಟಾಪಿಕ್ ಗಳನ್ನೂ ಕೊಟ್ಟಿದ್ದಾರೆ. ಆ ಟಾಪಿಕ್ ಗಳು ಎಂದೂ ಹಳತಾಗದಂತೆ ನೋಡಿಕೊಳ್ಳಲು ಟಿವಿ ಚಾನಲ್ ಗಳು ಹಾಗು ಪತ್ರಿಕೆಗಳನ್ನು ಇಟ್ಟುಕೊಂಡಿದ್ದಾರೆ.
ಹಾಗಾಗಿ ರಾಜಕಾರಣಿಗಳನ್ನು ಪ್ರಶ್ನಿಸುವ ಜನರೆಲ್ಲಾ ಅವುಗಳಲ್ಲೇ ಬಿಝಿಯಾಗಿದ್ದಾರೆ. ಹಾಗಾಗಿ ಪಕ್ಕದ ರಸ್ತೆಯಲ್ಲಿ ಮಹಿಳೆ ಬೇಕೆಂದೇ ಬಸ್ಸಿನೆದುರು ಹೋಗಿ ಪ್ರಾಣ ಬಿಟ್ಟಿದ್ದನ್ನೂ ಇವರು ಇನ್ನೊಂದು ಸುಳ್ಳು ಶೀರ್ಷಿಕೆ ಹಾಗು ಸುಳ್ಳು ಸುದ್ದಿ ಜೊತೆ ವಾಟ್ಸ್ ಆಪ್ ನಲ್ಲೇ ನೋಡ್ತಾರೆ. ಇದು ನಮ್ಮ ದೇಶದ ಇವತ್ತಿನ ದುರಂತ.
ಹಸಿವಿನಿಂದ ಸಾಯುವ, ಇವರೇ ಹಚ್ಚಿದ ದ್ವೇಷದಿಂದ ಸಾಯುವ ಜನರ ದಾರುಣತೆಯ ಬಗ್ಗೆ ಕಿಂಚಿತ್ ಕಳಕಳಿಯೂ ಇಲ್ಲದ ಈ ಆಳುವ ಮಂದಿ ಮತ್ತಷ್ಟು ಅಚ್ಚೇ ದಿನಗಳ ಮಂಕುಬೂದಿ ಎರಚುತ್ತ, ಹೊಲಸು ಭಾಷಣ ಮಾಡುತ್ತ, ಮತ್ತೆ ಅಧಿಕಾರ ಹಿಡಿಯುವ ತಯಾರಿಯಲ್ಲಿದ್ದಾರೆ. ಬಡವರ ಸಮಾಧಿಯ ಮೇಲೆ ಇವರ ಅಚ್ಚೇ ದಿನಗಳು ಮಾತ್ರ ನಿರಾತಂಕವಾಗಿ ಬರುತ್ತಲೇ ಇವೆ.







